ಲೋಕಸಭಾ ಚುನಾವಣೆಗಳು ಕರ್ನಾಟಕ ಕೇಂದ್ರಿತವಾಗಲಿ!

(ಫೋಟೋ ಕೃಪೆ: ಪ್ರಜಾವಾಣಿ)
ಬರುವ ಏಪ್ರಿಲ್ ತಿಂಗಳಿನಲ್ಲಿ ಕರ್ನಾಟಕದ ೨೮ ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆಗಳು ನಡೆಯಲಿದ್ದು ಭಾರತದ ಸಂಸತ್ತಿನಲ್ಲಿ ನಮ್ಮ ಪ್ರತಿನಿಧಿಗಳಾಗಿ ದನಿಯೆತ್ತುವವರನ್ನು ಆರಿಸುವ ಸಂದರ್ಭ ನಮ್ಮೆದುರು ಮೂಡಿಬಂದಿದೆ. ಹೌದೇ? ನಿಜಕ್ಕೂ ಲೋಕಸಭಾ ಚುನಾವಣೆಗಳು ಈ ಉದ್ದೇಶಕ್ಕಾಗಿಯೇ ನಡೆಯುತ್ತಿದೆಯೇ? ಈ ಹಿಂದೆ ಇಷ್ಟೂ ವರ್ಷಗಳ ಕಾಲ ನಡೆದ ಅಷ್ಟೂ ಚುನಾವಣೆಗಳಲ್ಲಿ ನಮ್ಮಿಂದ ಆರಿಸಿಹೋದ ಸಂಸದರು ನಮ್ಮ ದನಿಯಾಗಿ ದೆಹಲಿಗೆ ತೆರಳಿದ್ದರೇ? ನಾಡಿನ ಪರವಾಗಿ ಬೇಡ, ಸಂಸದರಾಗಿ ತಮ್ಮ ಕರ್ತವ್ಯ ನಿಭಾಯಿಸಿದ್ದಾರೆಯೇ ಎಂದು ನೋಡಿದರೆ ಪಕ್ಷಾತೀತರಾಗಿ ಎಲ್ಲರೂ ಕಳಪೆಯೇ ಎಂಬ ಭಾವ ಮೂಡುತ್ತದೆ.

ವಾಸ್ತವವಾಗಿ ಭಾರತದ ಬಹುತೇಕ ಕಡೆಗಳಲ್ಲಿರುವಂತೆ ಪ್ರಾದೇಶಿಕ ಪಕ್ಷಗಳು ಕರ್ನಾಟಕದಲ್ಲಿನ್ನೂ ಅಸ್ತಿತ್ವಕ್ಕೆ ಬಾರದಿರುವ ಈವತ್ತಿನ ಸನ್ನಿವೇಶದಲ್ಲಿ ಕರ್ನಾಟಕದ ಮತದಾರರ ಮುಂದೆ ಆಯ್ಕೆಗಳು ವಿರಳವಾಗಿದ್ದು, ಕನ್ನಡ ಕನ್ನಡಿಗ ಕರ್ನಾಟಕದ ಪರವಾಗಿ ದನಿ ಎನ್ನುವುದೇ ಚುನಾವಣೆಯ ವಿಷಯವೇ ಆಗದೆ ಇರುವುದು ನಾಡಿನ ದುರಂತವಲ್ಲದೆ ಮತ್ತೇನು? ಇಡೀ ಚುನಾವಣೆಯಲ್ಲಿ ನಮ್ಮ ನಾಡಿನ ಕುರಿತಾಗಿ ಸ್ಪಷ್ಟವಾದ ಯಾವ ಭರವಸೆಯನ್ನು ನಮ್ಮ ಅಭ್ಯರ್ಥಿಗಳು/ ಪಕ್ಷಗಳು ನೀಡುತ್ತಿವೆ, ಯಾವ ಪಕ್ಷ/ ಅಭ್ಯರ್ಥಿ ಯಾವ ಯೋಜನೆಗಳನ್ನು ನಮ್ಮ ನಾಡಿಗಾಗಿ ಯೋಜಿಸುತ್ತಿವೆ ಎಂಬುದಾಗಿ ಮತದಾರರು ಯೋಚನೆಯನ್ನೂ ಮಾಡಲು ಬಿಡದ ಹಾಗೆ ಇಡೀ ಲೋಕಸಭಾ ಚುನಾವಣೆಯ ವಿಷಯವನ್ನು ಸಾಮಾನ್ಯರಿಂದ ದೂರಕ್ಕೊಯ್ದು ನಿಲ್ಲಿಸಿರುವುದು ಕಣ್ಣಿಗೆ ರಾಚುತ್ತದೆ,

ಕೇಂದ್ರದಲ್ಲಿ ರಾಜ್ಯದ ಕಡೆಗಣನೆ

ಸ್ವತಂತ್ರ ಬಂದಾಗಿನಿಂದ ಇಂದಿನವರೆವಿಗೂ ಕರ್ನಾಟಕಕ್ಕೆ ಆಗಿರುವ ಅನ್ಯಾಯಗಳ ಸರಮಾಲೆಯನ್ನು ಕಂಡಾಗ ಇದಕ್ಕೆ ಮೂಲ ಕಾರಣ ನಮ್ಮ ಸಂಸದರು ಎಂಬುದು ಕಾಣುತ್ತದೆ. ವಿಸ್ತೀರ್ಣದಲ್ಲಿ ಕರ್ನಾಟಕಕ್ಕಿಂತ ಚಿಕ್ಕದಾಗಿರುವ ನೆರೆಯ ತಮಿಳುನಾಡಿನಲ್ಲಿರುವ ರೈಲು ಮಾರ್ಗದ ಉದ್ದ ೫೯೫೨ ಕಿಮೀ ಇದ್ದರೆ ಕರ್ನಾಟಕದ್ದು ೩೦೮೯ ಕಿಮೀ. ಒಟ್ಟು ರಾಷ್ಟ್ರೀಯ ಹೆದ್ದಾರಿಯ ಉದ್ದ ಅಲ್ಲಿ ೫೦೩೬ ಕಿಮೀ ೩೯೭೩ ಇದೆ. ತಮಿಳುನಾಡಿನ ೩೦% ರೈಲು ಮಾರ್ಗ ವಿದ್ಯುತ್ ಮಾರ್ಗವಾಗಿದ್ದರೆ ಇಲ್ಲಿಯದು ಬರೀ ೫%. ಇದು ಇಡೀ ದೇಶದಲ್ಲೇ ಅತಿ ಕಡಿಮೆ. ಕೇಂದ್ರವಿದ್ಯುತ್ ಜಾಲದಿಂದ ತಮಿಳುನಾಡಿಗೆ ೬೧% ವಿದ್ಯುತ್ ಸಿಗುತ್ತಿದ್ದರೆ ನಮ್ಮ ರಾಜ್ಯಕ್ಕೆ ಸಿಗುತ್ತಿರುವುದು ೨೧% ಮಾತ್ರಾ, ಪ್ರತಿಷ್ಟಿತ ನರ್ಮ್ ಯೋಜನೆಯಲ್ಲಿ ಬಿಡುಗಡೆಯಾದ ಹಣ ತಮಿಳುನಾಡಿಗೆ ೨೨೫೦ ಕೋಟಿಯಾದರೆ ಕರ್ನಾಟಕಕ್ಕೆ ೧೫೨೪ ಕೋಟಿ. ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಲು ತಮಿಳುನಾಡಿನಿಂದ ಆಯ್ದದ್ದು ೭೨% ಆದರೆ ಕರ್ನಾಟಕದ್ದು ೩೬%. ಚೆನ್ನೈ ಮೆಟ್ರೋದಲ್ಲಿ ಬರೀ ತಮಿಳು ಇಂಗ್ಲೀಷಿಗೆ ಸ್ಥಾನವಾದರೆ ಬೆಂಗಳೂರಿನಲ್ಲಿ ಕನ್ನಡ ಹಿಂದೀ ಇಂಗ್ಲೀಷಿಗೆ ಸ್ಥಾನ! ಈ ಬರಹದಲ್ಲಿ ಓದುಗರಿಗೆ ಸುಲಭವಾಗಿ ಅರ್ಥವಾಗಲೆಂದು ಬರಿಯ ನೆರೆಯ ತಮಿಳುನಾಡಿನೊಂದಿಗೆ ಹೋಲಿಕೆ ನೀಡಲಾಗಿದೆ. ವಾಸ್ತವವಾಗಿ ದೇಶದ ಸರಾಸರಿಗೆ ಹೋಲಿಸಿದರೂ, ಇನ್ನಾವುದೇ ರಾಜ್ಯಕ್ಕೆ ಹೋಲಿಸಿದರೂ ನಮ್ಮ ನಾಡಿನ ಪರಿಸ್ಥಿತಿ ಇಷ್ಟೇ! ಒಟ್ಟಾರೆ ಸದಾಕಾಲ ಕರ್ನಾಟಕದ ಕಡೆಗಣನೆಯೇ ಆಗುತ್ತಿರುವುದನ್ನು ಸರ್ಕಾರಿ ಅಂಕಿಅಂಶಗಳೇ ತೋರಿಸುತ್ತಿರುವಾಗ ಇದಕ್ಕೆಲ್ಲಾ ಕಾರಣ ಏನು ಎಂದು ಹುಡುಕಬೇಕಾಗಿದೆ. ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷವಿದೆ ಇಲ್ಲಿ ರಾಷ್ಟ್ರೀಯ ಪಕ್ಷಗಳು ಆಳುತ್ತಿವೆ ಎಂಬುದು ಮೇಲ್ನೋಟಕ್ಕೆ ಕಂಡರೂ ಆಳದಲ್ಲಿ ಕಾಣುವುದು ನಮ್ಮ ಸಂಸದರು ಪ್ರತಿನಿಧಿಸುತ್ತಿರುವುದು ಕರ್ನಾಟಕವನ್ನಾಗಲೀ, ಕನ್ನಡಿಗರನ್ನಾಗಲೀ ಅಲ್ಲಾ.. ಬದಲಿಗೆ ತಮ್ಮ ಪಕ್ಷದ ಹೈಕಮಾಂಡ್/ ಸರ್ಕಾರವನ್ನು ಮಾತ್ರಾ ಎನ್ನುವುದು ಎದ್ದು ಕಾಣುತ್ತದೆ.

ನಮ್ಮ ಸಂಸದರು ಮತ್ತು ಸಂಸತ್ತು

ಸಂಸದರಾಗಿದ್ದವರು ಲೋಕಸಭೆಯ ಕಲಾಪಗಳಲ್ಲಿ ಭಾಗವಹಿಸದಿರುವುದು, ಸಂಸದರ ನಿಧಿಯನ್ನು ಸರಿಯಾಗಿ ಬಳಸಿಕೊಳ್ಳದಿರುವುದು, ಪ್ರಶ್ನೆಗಳನ್ನು ಕೇಳದಿರುವುದು ಇವೆಲ್ಲಾ ಒಂದೆಡೆಯಾದರೆ ನಮ್ಮ ನಾಡಿಗೆ ಸಂಬಂಧವೇ ಇರದ ಬುಂದೇಲಖಂಡದ ಯಾವುದೋ ನೀರಾವರಿ ಯೋಜನೆಯ ಸ್ಥಿತಿಗತಿ ತಿಳಿಯಲು ಮೇಲೆ ಬಿದ್ದು ಮೂರ್ಮೂರು ಮಂದಿ ಸಂಸದರು ಪ್ರಶ್ನೆಯನ್ನು ಕೇಳಿರುವುದೂ ಇದೆ. ಮತ್ತೊಂದೆಡೆ ನಾಡಿನ ಸಮಸ್ಯೆಗಳ ವಿಷಯಕ್ಕೆ ಬಂದಾಗ ನಮ್ಮ ಸಂಸದರೆಲ್ಲಾ ಒಂದಾಗಿ ನಿಲ್ಲುವುದೇ ಅಪರೂಪ ಎನ್ನುವ ಪರಿಸ್ಥಿತಿಯಿದೆ. ಹಾಗೆ ನಿಂತರೂ ಕೂಡಾ ಗಾಂಧಿ ಪ್ರತಿಮೆಯೆದುರು ಪ್ರತಿಭಟನೆ ಮಾಡಿಯೋ, ಸಂಸತ್ತಿನ ಹೊರಗೋ, ಜಂತರ್ ಮಂತರ್ ಬಳಿ ಸೇರಿ ಕೂಗುವುದೋ ಮೊದಲಾದ ತೋರಿಕೆಯ ಪ್ರತಿಭಟನೆಗಳಿಗಷ್ಟೇ ಇವರ ದನಿ ಸೀಮಿತವಾಗಿರುವುದನ್ನು ಕಾಣಬಹುದಾಗಿದೆ.

ಸಂಸದರಿಂದ ನಿರೀಕ್ಷೆಗಳು

ಭಾರತವೆನ್ನುವ ರಾಜ್ಯಗಳ ಒಕ್ಕೂಟದಲ್ಲಿ ಕೇಂದ್ರಸರ್ಕಾರವು ಹೇಗೆ ಕೆಲಸ ಮಾಡಬೇಕಾಗಿದೆ, ಸಂಸತ್ತಿನಲ್ಲಿ ರೂಪುಗೊಳ್ಳುವ ಕಾಯ್ದೆ ಕಾನೂನು ನಿಯಮಾವಳಿಗಳು ಹೇಗಿರಬೇಕಾಗಿದೆ ಎಂಬ ಚಿಂತನೆಯೇ ನಮ್ಮ ಸಂಸದರಲ್ಲಿ ಇಲ್ಲವಾಗಿದೆ. ರಾಷ್ಟ್ರೀಯ ಪಕ್ಷಗಳೇ ಈ ಚುನಾವಣೆಯ ಪ್ರಮುಖ ಪಾಲುದಾರರಾಗಿದ್ದು ತಮ್ಮ ಮೂಗಿನ ನೇರದ ವಿಷಯಗಳನ್ನಷ್ಟೇ ಚುನಾವಣೆಗಳ ಕೇಂದ್ರವಾಗಿಸುತ್ತಿರುವುದು ಕಾಣುತ್ತಿದೆ. ಈ ಹಂತದಲ್ಲಿ ನಮ್ಮ ನಾಡಿನ ಸಂಸದರಿಂದ ಜನರಿಗಿರಬೇಕಾದ ನಿರೀಕ್ಷೆಗಳ ಬಗ್ಗೆ ಮತದಾರರು ಯೋಚಿಸಬೇಕಾಗಿದೆ.

ಸಮಾನತೆಯ ಭಾರತ ಒಕ್ಕೂಟ: ಸಂಸತ್ತು ಕಾಯ್ದೆ ಕಾನೂನುಗಳನ್ನು ರೂಪಿಸುವ ಪ್ರಾಥಮಿಕ ಹೊಣೆ ಹೊಂದಿದ್ದು ಭಾರತದ ಸ್ವರೂಪವನ್ನು ಒಕ್ಕೂಟವಾಗಿಸುವತ್ತ ಗಮನಹರಿಸಬೇಕಾಗಿದೆ. ಸಂಸದರು ರಾಜ್ಯಗಳಿಗೆ ಹೆಚ್ಚೆಚ್ಚು ಸ್ವಾಯತ್ತತೆ ಕೊಡಿಸುವ ಬಗ್ಗೆ, ಅಧಿಕಾರ ವಿಕೇಂದ್ರೀಕರಣದ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ದುಡಿಯಬೇಕಾಗಿದೆ, ಕೇಂದ್ರಸರ್ಕಾರದ ಕಪಿಮುಷ್ಟಿಯಲ್ಲಿರುವ ಅಧಿಕಾರಗಳಲ್ಲಿ ಬಹುತೇಕವನ್ನು ರಾಜ್ಯಗಳಿಗೆ ಬಿಟ್ಟುಕೊಡುವಂತೆ ಮಾಡಬೇಕಾಗಿದೆ, ರಾಜ್ಯಗಳ ಅನನ್ಯತೆಯನ್ನು ಎತ್ತಿಹಿಡಿಯುವ ವೈವಿಧ್ಯತೆಯನ್ನು ಪೊರೆಯುವ ಆಡಳಿತ ಭಾಷಾನೀತಿ, ಅನಿಯಂತ್ರಿತ ವಲಸೆ ನಿಯಂತ್ರಣ ನೀತಿ, ರಾಜ್ಯ ರಾಜ್ಯಗಳ ಸಂಬಂಧ ಸುಧಾರಣೆಗೆ ಅಂತರರಾಜ್ಯ ಮಾತುಕತೆಗೆ ಒತ್ತುಕೊಡುತ್ತಲೇ ನದಿ ನೀರು ಹಂಚಿಕೆ ಮಾರ್ಗದರ್ಶಿ ಸೂತ್ರ, ಗಡಿ ನಿರ್ಣಯಿಸುವ ಮಾರ್ಗದರ್ಶಿ ಸೂತ್ರ ಮೊದಲಾದ ನೀತಿಗಳನ್ನು ರೂಪಿಸಲು ಶ್ರಮಿಸಬೇಕಾಗಿದೆ.

ಕಾಪಾಡಬೇಕಾದ ನಾಡಿನ ಹಿತ: ಕರ್ನಾಟಕದ ಸಂಸದರು ಕನ್ನಡನಾಡಿಗೆ ರೈಲ್ವೇ, ರಾಷ್ಟ್ರೀಯ ಹೆದ್ದಾರಿ, ನೀರಾವರಿ, ವಿದ್ಯುತ್ ಸೇರಿದಂತೆ ನಾಡಿನ ಏಳಿಗೆಗೆ ಬೇಕಾದ ಯೋಜನೆಗಳನ್ನು ದಕ್ಕಿಸಿಕೊಳ್ಳುವತ್ತ ದುಡಿಯಬೇಕಾಗಿದೆ. ಕಾವೇರಿ, ಕೃಷ್ಣಾ, ಕಳಸಾ ಭಂಡೂರ ಯೋಜನೆಯಂತಹ ನದಿನೀರು ಹಂಚಿಕೆಯ ವಿಷಯಗಳಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕಾಗಿದೆ. ನೆರೆ ಬರ ಮೊದಲಾದ ಸಂಕಷ್ಟಗಳ ಸಮಯದಲ್ಲಿ ಮಾಡಲಾಗುವ ಕೇಂದ್ರದ ನೆರವು ಹಂಚಿಕೆಯಲ್ಲಿ ತಾರತಮ್ಯವಾಗದಂತೆ ರಾಜ್ಯದ ಹಿತ ಕಾಪಾಡಬೇಕಾಗಿದೆ, ನಮ್ಮ ಸಂಸದರ ನಿಧಿಯನ್ನು ಸೂಕ್ತವಾಗಿ ಬಳಸುವ ಮೂಲಕ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಮೂಲಭೂತ ಹೊಣೆಯೂ ಇವರಿಗಿದೆ. ಮುಂದಿನ ದಿನಗಳಲ್ಲಿ ಕನ್ನಡಿಗರ ಒಗ್ಗಟ್ಟು ಮತ್ತು ಏಳಿಗೆಗೆ ಕಂಟಕಪ್ರಾಯವಾಗುವಂಥಾ ಎರಡನೇ ರಾಜ್ಯ ಪುನರ್ವಿಂಗಡನಾ ಆಯೋಗ ರಚನೆಯಂತಹ ಕ್ರಮಗಳನ್ನು ಆರಂಭದಿಂದಲೇ ವಿರೋಧಿಸುವ, ನಾಡಿನ ಒಗ್ಗಟ್ಟು ಏಳಿಗೆಗಳಿಗಾಗಿ ತಮ್ಮದೇ ಪಕ್ಷದ ಸರ್ಕಾರ/ ಹೈಕಮಾಂಡುಗಳನ್ನು ಎದುರುಹಾಕಿಕೊಳ್ಳಬಲ್ಲಂಥಾ ಗಟ್ಟಿತನವನ್ನು ನಮ್ಮೆಲ್ಲಾ ಸಂಸದರಿಂದ ನಿರೀಕ್ಷಿಸಬೇಕಾಗಿದೆ. ಈ ಚುನಾವಣೆಯಲ್ಲಿ ನಮ್ಮ ಮುಂದೆ ಇಂತಹ ನಿಲುವಿನ ಪಕ್ಷಗಳಾಗಲೀ ಅಭ್ಯರ್ಥಿಗಳಾಗಲೀ ಕಾಣದಿದ್ದರೆ ನಾಳೆಗಳಿಗಾಗಿ ಕನ್ನಡಿಗರು ಇಂತಹ ಬದಲಾವಣೆಯನ್ನು ನಾಡಿನ ರಾಜಕಾರಣದಲ್ಲಿ ತರಲೇಬೇಕಾಗಿದೆ.

(ಪ್ರಜಾವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾದ ಬರಹ)

2 ಅನಿಸಿಕೆಗಳು:

Will OF Village ಅಂತಾರೆ...

ondu olle Pradeshika kannada paksha kattuva nittinalli yaradaru saguttidara?? i need to know if anyone is there so that i can plan the things.

Anonymous ಅಂತಾರೆ...

ok

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails