ಅಂದು ಕ್ರಾಂತಿಯ ಹೋರಾಟದ ಪಂಜುಗಳು ಒಂದೆಡೆಯಿಂದ ಆಂಗ್ಲರನ್ನು ಸುಡುತ್ತಿದ್ದರೆ, ಅಹಿಂಸೆಯ ಹೋರಾಟದ ಹಣತೆಗಳು ದೇಶದ ಜನಕ್ಕೆ ಏಳಿಗೆಯ ಹಾದಿಯ ಭರವಸೆಯ ಬೆಳಕಿನ ದಾರಿದೀವಿಗೆಯಂತೆ ಕಾಣತೊಡಗಿದ್ದವು. ನಾನಾ ಭಾಷೆಗಳ, ನಾನಾ ಆಡಳಿತಕ್ಕೆ ಸೇರಿದ, ನಾನಾ ಸಂಸ್ಥಾನಗಳಿಗೆ ಸೇರಿದ
೫೬೫ ಪ್ರದೇಶಗಳಿಗೆಲ್ಲ ಒಟ್ಟಿಗೆ 1947ರ ಆಗಸ್ಟ್ 15ರಂದು ಸ್ವತಂತ್ರ ಬಂತು. ಆಗ ಬ್ರಿಟೀಷರು ಈ ಪ್ರದೇಶಗಳಿಗೆ ಭಾರತದಲ್ಲಿ ವಿಲೀನವಾಗುವ ಆಯ್ಕೆಯನ್ನು ನೀಡಿದ್ದರು. ಒಂದು ದೇಶವನ್ನಾಗಿ ಭಾರತವನ್ನು ಕಟ್ಟಲು ಪ್ರತಿ ಪ್ರಾಂತ್ಯಕ್ಕೆ ನೀಡಬೇಕಾದ ಒಳ ಸ್ವಾತಂತ್ರ, ಆಯಾ ಭಾಷೆ, ಸಂಸ್ಕೃತಿಗಳನ್ನು ಕಾಪಾಡಿಕೊಳ್ಳುವುದನ್ನು ಸಂವಿಧಾನದ ಆಶಯವನ್ನಾಗಿಸುವ ಭರವಸೆಯೊಂದಿಗೆ ಭಾರತ ದೇಶ ಒಗ್ಗೂಡಿ 'ಇಂಡಿಯನ್ ಯೂನಿಯನ್' ಉದಯವಾಯಿತು. ಇದೀಗ 62ನೆಯ ಸ್ವತಂತ್ರ ದಿನಾಚರಣೆ ಮುಗಿದಿದೆ.
ಸ್ವತಂತ್ರ ಮತ್ತು ಹಿಂದಿ!ನಮಗೆ ಪರಕೀಯರ ಆಳ್ವಿಕೆಯಿಂದ ಬಿಡುಗಡೆ ಸಿಕ್ಕಿದೆ. ಇನ್ನು ನಮ್ಮನ್ನು ನಾವೇ ಆಳಿಕೊಳ್ಳುತ್ತೇವೆ, ನಮ್ಮ ಏಳಿಗೆಯ ದಿನಗಳು ಹತ್ತಿರವಾದವು ಎಂದು ಕನ್ನಡಿಗರು ಎಲ್ಲ ಭಾರತೀಯರಂತೆಯೇ ಭರವಸೆಯ ಅಲೆಯಲ್ಲಿ ತೇಲತೊಡಗಿದರು. ನಮ್ಮ ಮನೆ ಮಕ್ಕಳಿಗೆ ಇನ್ನು ಮುಂದೆ ಹೊಸ ಹೊಸ ಕೆಲಸಗಳು ದೊರೆಯುತ್ತವೆ. ಬಿಳಿಯರ ಸರ್ಕಾರದ ಕರುಣೆಯಿರದ ಶೋಷಣೆ ಮುಗಿದುಹೋಗುತ್ತದೆ ಎನ್ನುವ ಹೊಸ ಭರವಸೆಗಳು ತುಂಬಿದ್ದವು. ಆದರೆ ಆದದ್ದೇನು? ಭಾರತ ಒಂದು ದೇಶವಾಗಿರೋ ಕಾರಣದಿಂದ ಇದಕ್ಕೊಂದು ದೇಶಭಾಷೆ ಬೇಕು, ಅದನ್ನು ಪ್ರತಿಯೊಬ್ಬ ಭಾರತೀಯ ಕಲಿಯಲೇ ಬೇಕು ಅನ್ನೊ ತಪ್ಪು ಕಲ್ಪನೆಯಿಂದ ಮೊದಲ ದಿನದಿಂದಲೇ ಹಿಂದಿಯೆನ್ನುವ ಒಂದು ಭಾಷೆಯನ್ನು ಕನ್ನಡಿಗರ ಮೇಲೆ ಹೇರಲು ಆರಂಭವಾಯಿತು. ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿಸುವ
ಪ್ರಯತ್ನಗಳು ನಡೆದವು. ಅದನ್ನು ಕೇರಳ, ಕರ್ನಾಟಕ, ಪಶ್ಚಿಮ ಬಂಗಾಳ, ತಮಿಳುನಾಡಿನಂತಹ ಪ್ರದೇಶಗಳು ವಿರೋಧಿಸಿದಾಗ ಹಿಂಬಾಗಿಲ ಮೂಲಕ ಹಿಂದಿಯನ್ನು ಹೇರಲು ಆರಂಭಿಸಿದರು. ಹಿಂದಿಗೆ ರಾಜ್ ಭಾಷಾ ಎನ್ನುವ (ಅಧಿಕೃತ ಆಡಳಿತ ಸಂಪರ್ಕ ಭಾಷೆ) ಪಟ್ಟ ಕಟ್ಟಲಾಯಿತು. ಮೊದಲಿಗೆ ಹದಿನೈದು ವರ್ಷ ಎಂದಿದ್ದವರು ದಕ್ಷಿಣ ಭಾರತದ 1965ರ ಹಿಂದಿ ವಿರೋಧಿ ಚಳವಳಿಗೆ ತುಸು ಬಗ್ಗಿ ಕಣ್ಣೊರೆಸುವ ತಂತ್ರವಾಗಿ ಎಲ್ಲ ಪ್ರದೇಶಗಳು ಹಿಂದಿಯನ್ನು ಒಪ್ಪುವ ತನಕ ಇಂಗ್ಲಿಷ್ ಗೆ ಪೂರಕ ರಾಜ್ ಭಾಷೆ ಎನ್ನಲಾಯಿತು. ಈ ವಿಷ್ಯದಲ್ಲಿ ನಮ್ಮ ಭಾರತ ಸರ್ಕಾರದ ಘೋಷಿತ
ನಿಲುವು ನೋಡಿ . . .
It has been the policy of the Government of India that progressive use of Hindi
in the official work may be ensured through persuasion, incentive and
goodwill.
ಇದು ಅಧಿಕೃತವಾಗಿ ನಡೆಯುತ್ತಿರುವ ದಬ್ಬಾಳಿಕೆಯಾದರೆ... ಇನ್ನು
ಬ್ಯಾಂಕು ರೈಲ್ವೇ ಉದ್ಯೋಗಗಳಲ್ಲಿ ಹಿಂದಿ ಬಾರದೆನ್ನುವವರಿಗೆ ಕೆಲಸ ಇಲ್ಲವೆನ್ನುವ ಮೂಲಕ ಕನ್ನಡಿಗರಿಗೆ ವಂಚನೆ ಮಾಡಲಾಗುತ್ತಿದೆ. ಬೆಂಗಳೂರಿನಂತಹ ಕನ್ನಡ ನಾಡಿನ ಪ್ರದೇಶದಲ್ಲೇ ಹಿಂದಿ ಕಲಿಯದೆ ಉದ್ಯೋಗವಿಲ್ಲ ಎನ್ನುವ ಪರಿಸ್ಥಿತಿ ಹುಟ್ಟುಹಾಕಲಾಗುತ್ತಿದೆ. ಇನ್ನು ಶಾಲಾ ಮಕ್ಕಳನ್ನೂ ಬಿಡದೆ ಎಳೆವೆಯಿಂದಲೇ ಕಡ್ಡಾಯವಾಗಿ ಹಿಂದಿಯನ್ನು ಬೋಧಿಸಲಾಗುತ್ತಿದೆ.
ಸ್ವತಂತ್ರವೆಂದರೆ ಬಿಡುಗಡೆ ಮಾತ್ರವಲ್ಲ!
ಪರತಂತ್ರ ಅಂದರೆ ಬೇರೆಯವರ ಅಧೀನವಾಗಿರೋದು ಅಂತ ಅರ್ಥ. ಅಂದರೆ ಹೊರದೇಶದವರ ಅಡಿಯಾಳಾಗಿರುವುದು. ನಮ್ಮ ಬದುಕು ಮತ್ತು ಬದುಕಿನ ಪ್ರತಿ ನಡೆಯನ್ನು, ನಮ್ಮ ವ್ಯವಸ್ಥೆಗಳನ್ನು ರೂಪಿಸಿ, ನಿರ್ದೇಶಿಸಿ, ಪರಾಮರ್ಶಿಸುವವರು ಹೊರದೇಶದವರು. ಅಂದರೆ ಆಗ ಬ್ರಿಟೀಷರು. ಬ್ರಿಟೀಷರು ನಮ್ಮ ಮೇಲೆ ಸ್ಥಾಪಿಸಿದ್ದ ಎಲ್ಲ ಹಕ್ಕುಗಳನ್ನು ಬಿಟ್ಟುಕೊಟ್ಟು ಹೋದಕೂಡಲೆ ನಮಗೆ ಸಿಕ್ಕಿದ್ದುದು ಸ್ವತಂತ್ರ ಆಗಲಿಲ್ಲ. ಅದು ಬಿಡುಗಡೆ ಮಾತ್ರ. ಅವರು ಬಿಟ್ಟುಕೊಟ್ಟದ್ದು ಇದೀಗ ದಿಲ್ಲಿ ದೊರೆಗಳ ಪಾಲಾಗಿರುವಾಗ ಅದು ಮತ್ತೆ ಪರತಂತ್ರವೇ ಅಲ್ವಾ ಗುರು?
ನಮ್ಮ ಆಡಳಿತವೆಲ್ಲಾ ದಿಲ್ಲಿಯ ಹಿಡಿತದಲ್ಲಿ!ಭಾರತ ಸಂವಿಧಾನದ ಆಧಾರದ ಮೇಲೆ ಆಡಳಿತದ ಅನುಕೂಲಕ್ಕಾಗಿ
ಮೂರು ಪಟ್ಟಿಗಳನ್ನು ಮಾಡಲಾಗಿದೆ. ಮೊದಲ ಪಟ್ಟಿ Union list ಅಂದರೆ ಕೇಂದ್ರದ ಹಿಡಿತದ ಪಟ್ಟಿ. ಇದರಲ್ಲಿ 97 ವಿಷಯಗಳಿದ್ದರೆ, state list ಅಂದ್ರೆ ರಾಜ್ಯ ಪಟ್ಟಿಯಲ್ಲಿ 66 ವಿಷಯಗಳು ಇವೆ. ಇನ್ನೊಂದು ಕನ್ ಕರೆಂಟ್ ಪಟ್ಟಿ ಅಂತ ಇದೆ. ಅದರಡಿಯಲ್ಲಿ ರಾಜ್ಯ ಕಾನೂನು ಮಾಡಬಹುದಾದರೂ ಕೇಂದ್ರಕ್ಕೆ ಪರಮಾಧಿಕಾರವಿದೆ. ಈ ಪಟ್ಟಿಯಲ್ಲಿ 47 ವಿಷಯಗಳಿವೆ. ಅಂದರೆ ಒಟ್ಟು ಇರುವ 210 ವಿಷಯಗಳಲ್ಲಿ 66 ಮಾತ್ರ ನಮ್ಮ ಕೈಯ್ಯಲ್ಲಿ. ಉಳಿದ 144 ಕೇಂದ್ರದ ಕೈಯ್ಯಲ್ಲಿ. ಇದು ಅಂಕಿಗಳ ಲೆಕ್ಕಾಚಾರ ಅಷ್ಟೇ ಅಲ್ಲ. ಕೇಂದ್ರದ ಹಿಡಿತದಲ್ಲಿ ರಕ್ಷಣೆ, ವಿದೇಶಿ ಸಂಬಂಧಗಳ ತರಹದ ವಿಷಯ ಇರೋದೇನೋ ಸರಿ. ಈಗಿನ ವ್ಯವಸ್ಥೆಯಲ್ಲಿ ಪ್ರಮುಖವೂ ಪ್ರಮುಖವಲ್ಲದವೂ ಕೂಡಾ ಕೇಂದ್ರದ ಅಧೀನವೇ. ಒಂದು ತಮಾಶೆ ಅಂದ್ರೆ ಇರೋ 210ರಲ್ಲಿ 66 ಆದ್ರೂ ನಮ್ಮ ಕೈಯ್ಯಲ್ಲಿ ಇದೆ ಅಂತ ಖುಷಿ ಪಡೋಣ ಅನ್ನಕ್ಕೂ ಆಗಲ್ಲ. ಯಾಕಂದ್ರೆ ಆ ಅಧಿಕಾರ ಇರೋ ನಮ್ಮ ವಿಧಾನ ಸಭೆ, ವಿಧಾನ ಪರಿಷತ್ ಗಳು ಇರೋದು ರಾಷ್ಟ್ರೀಯ ಪಕ್ಷಗಳ ಹಿಡಿತದಲ್ಲಿ. ಪ್ರತಿ ನಿರ್ಧಾರಕ್ಕೂ ಹೈಕಮಾಂಡ್ ಅಂತ ಡೆಲ್ಲಿ ಕಡೆ ಇವು ನೋಡ್ತಿವೆ. ಇದರ ಅರ್ಥ ಏನು? ನಮ್ಮನ್ನು ಪೂರ್ತಿಯಾಗಿ ಆಳ್ತಿರೋದು ದೆಹಲಿ ಮಂದಿ. ಹ್ಯಾಗೇ ಅಂತೀರಾ?
ಕೇಂದ್ರ ಸರ್ಕಾರವೆಂಬ ಸೂತ್ರ-ದಾರ!
ಇಂದಿನ ಭಾರತದ ವ್ಯವಸ್ಥೆಯಲ್ಲಿ ಕನ್ನಡಿಗರು ನಮ್ಮ ನೆಲದಲ್ಲಿ ಬೇರೆ ಭಾಷಾ ಸಿನಿಮಾಗಳು, ಎಫ್.ಎಂಗಳು ಬೇಡ ಅಂತ ಹೇಳೋ ಹಾಗಿಲ್ಲ. ಬೇರೆ ಭಾಷೆ ಚಿತ್ರಗಳಿಗೆ ಹೆಚ್ಚು ತೆರಿಗೆ ಹಾಕಿ ನಮ್ಮದನ್ನು ಕಾಪಾಡ್ಕೋತೀವಿ ಅನ್ನೋ ಹಾಗಿಲ್ಲ. ಕೇಂದ್ರದ ಅಪ್ಪಣೆಯಿಲ್ಲದೆ ನಮ್ಮ ಊರಿನ ಕೆರೆಗಳ ಹೂಳು ಎತ್ತೋ ಹಾಗಿಲ್ಲ. ನಮ್ಮ ಜನಪ್ರತಿನಿಧಿಗಳು ನಮ್ಮವರೇ ಆಗಿರಬೇಕು ಅನ್ನೋ ಹಾಗಿಲ್ಲ. ವೆಂಕಯ್ಯ ನಾಯ್ಡು, ರಾಜೀವ್ ಚಂದ್ರಶೇಖರ್ ಥರದ ಕನ್ನಡಿಗರ ಹಿತದ ಬಗ್ಗೆ ಕಾಳಜಿಯನ್ನೇ ತೋರದ ಪರಭಾಷಿಕರು ಇಲ್ಲಿ ಚುನಾವಣೆಗೆ ನಿಂತರೂ, ಗೆದ್ದರೂ ಅದನ್ನು ನಾವು ತಡೆಯಲಾರೆವು. ನಮ್ಮ ವಿಮಾನ ನಿಲ್ದಾಣಕ್ಕೆ ಬೇಕಾದ ಹೆಸರು ಇಡೋ ಹಕ್ಕಿಲ್ಲ. ನಮ್ಮ ಬೆಂಗಳೂರನ್ನು ಬ್ಯಾಂಗಲೂರ್ ಅಲ್ಲ ಬೆಂಗಳೂರು ಅಂತ ಕರೀಬೇಕು ಅನ್ನೋಕ್ಕೂ ನಮಗೆ ಸ್ವತಂತ್ರ ಇಲ್ಲ. ನಮ್ಮೂರಲ್ಲಿ ಸಂಚಾರಿ ನಿಯಮ ಮುರಿಯೋರಿಗೆ ಎಷ್ಟು ದಂಡ ವಿಧಿಸಬೇಕು ಅನ್ನೋದಕ್ಕೂ ದಿಲ್ಲಿ ಅಪ್ಪಣೆ ಬೇಕು ಗುರು! ಹೀಗೆ ಪ್ರಮುಖವಾದ ಮತ್ತು ಪ್ರಮುಖವಲ್ಲದ ಎಲ್ಲ ವಿಷಯಗಳಲ್ಲೂ ನಾವು ಕೇಂದ್ರ ಸರ್ಕಾರದ ಅಪ್ಪಣೆಗೆ ಕಾಯಬೇಕು. ಅಂದರೆ ನಾವೀಗಲೂ ಪರಾಧೀನ!
ದೊಡ್ಡ ರಾಜ್ಯದೋರಿಗೆ ದೊಡ್ಡಪಾಲು
ಕೇಂದ್ರದಲ್ಲೂ ಇಲ್ಲಿನ ಪ್ರತಿನಿಧಿಗಳಿರ್ತಾರಲ್ಲಾ ಅಂದರೆ, ಇಂದಿನ ಭಾರತದ ವ್ಯವಸ್ಥೆಯಲ್ಲಿ ಅತಿಹೆಚ್ಚು ಸಂಸದರನ್ನು ದೆಹಲಿಗೆ ಕಳಿಸೋ ಉತ್ತರದ ದೇಶವೇ ಬಲಿಷ್ಟ. ಸಂಸತ್ತಿನಲ್ಲಿ ಒಂದೆರಡು ಸ್ಥಾನವಿರೋ ರಾಜ್ಯಗಳ ಹಿತರಕ್ಷಣೆ ಗೋವಿಂದ. ೩೯ ಸಂಸದರ ತಮಿಳುನಾಡಿನ ಮುಂದೆ ೨೮ ಸಂಸದರ ಕರ್ನಾಟಕ ಸದಾ ಬಲಹೀನ. ಪ್ರತಿ ವಿಷಯದಲ್ಲೂ ಸೋಲು. ೪೮ ಸಂಸದರ ಮಹಾರಾಷ್ಟ್ರದ ಬಾಯ್ಬಲ, ತೋಳ್ಬಲ, ಲಾಬಿಗಳ ಬಲದ ಮುಂದೆ ೨೮ ಸಂಸದರ ಕರ್ನಾಟಕ ಸದಾ ಮೂಲೆಗುಂಪು. ೨೮ ಸದಸ್ಯರ ಕರ್ನಾಟಕದ ಪಾಡೇ ಹೀಗಾದರೆ ಒಬ್ಬಿಬ್ಬ ಸಂಸದರನ್ನು ಹೊಂದಿರೋ ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ಅರುಣಾಚಲ ಪ್ರದೇಶಗಳ ಥರದ ರಾಜ್ಯಗಳ ಪಾಡೇನು ಗುರು! ಸಂಸತ್ತಿನಲ್ಲಿ ಇವರ ಸಮಸ್ಯೆಗಳಿಗೆ ಸ್ಪಂದಿಸೋರು ಯಾರು?
ನಿಜವಾದ ಸ್ವತಂತ್ರ... ಅಧಿಕಾರ ವಿಕೇಂದ್ರಿಕರಣದಿಂದ ಸಾಧ್ಯ!
ನಮ್ಮ ದೇಶ ನಿಜವಾದ ಒಕ್ಕೂಟವಾಗಬೇಕಾದರೆ, ನಮಗೆ ನಿಜವಾದ ಸ್ವತಂತ್ರ ಸಿಗಬೇಕಾದರೆ ನಮ್ಮನ್ನು ನಮ್ಮನ್ನು ಆಳಿಕೊಳ್ಳುವ ಅಧಿಕಾರ ವಿಕೇಂದ್ರಿಕರಣ ಆಗಬೇಕು. ನಮ್ಮ ಅನುಕೂಲದ, ಏಳಿಗೆಗೆ ಬೇಕಾದ ವ್ಯವಸ್ಥೆಯ ನಿರ್ಮಾಣ ಮತ್ತು ನಿರ್ವಹಣೆ ನಮ್ಮ ಕೈಯಲ್ಲಿರಬೇಕು. ನಮ್ಮ ನಾಡಿನ ವೈವಿಧ್ಯತೆಯನ್ನು ಹಾಳುಗೆಡವುವ ಎಲ್ಲ ನೀತಿಗಳನ್ನು ಕೈಬಿಡಬೇಕು. ಹಿಂದಿ ಹೇರಿಕೆಯನ್ನು ಕೈ ಬಿಡಬೇಕು. ಅನಿಯಂತ್ರಿತ ವಲಸೆ ನಿಯಂತ್ರಣ ಕಾಯ್ದೆ ಜಾರಿಯಾಗಬೇಕು. ನಮ್ಮ ಕಲಿಕೆ, ಉದ್ಯೋಗ, ಮನೋರಂಜನೆ, ಬದುಕು... ಎಲ್ಲವೂ ನಮ್ಮ ನಮ್ಮ ತಾಯ್ನುಡಿಯಲ್ಲಿ ದೊರಕುವಂತೆ ಆಗಬೇಕು. ಭಾರತ ದೇಶದ ಅಧಿಕೃತ ಸಂಪರ್ಕ ಭಾಷೆಯಾಗಿ ಎಲ್ಲ ಭಾರತೀಯ ಭಾಷೆಗಳಿಗೂ ಸಮಾನ ಸ್ಥಾನಮಾನ ಕೊಡಬೇಕು ಗುರು! ತಂತ್ರಜ್ಞಾನ ಮುಂದುವರೆದಿರೋ ಈ ದಿನಗಳಲ್ಲಿ ಇದು ಸುಲಭ ಸಾಧ್ಯ. ಆಯಾ ಪ್ರದೇಶಗಳಲ್ಲಿ ಆಡಳಿತ ಭಾಷೆ ಆಯಾ ಪ್ರದೇಶದ ಭಾಷೇನೆ ಆಗಬೇಕು. ಹಿಂದಿ ಪ್ರಚಾರಕ್ಕೆ ಪ್ರತಿವರ್ಷ ಸರ್ಕಾರ ಖರ್ಚು ಮಾಡುತ್ತಿರುವ ಸಾವಿರಾರು ಕೋಟಿ ರೂಪಾಯಿಗಳಷ್ಟು ಹಣವನ್ನು ಎಲ್ಲ ಭಾಷೆಗಳ ಏಳಿಗೆಗಾಗಿ ಸಮಾನವಾಗಿ ಹಂಚಬೇಕು. ಆಗ ಭಾರತಕ್ಕೆ ಬಂದಿರುವ ಸ್ವಾತಂತ್ರ್ಯಕ್ಕೂ ಸಾರ್ಥಕತೆ ಸಿಗುತ್ತೆ ಗುರು! ಇಲ್ದಿದ್ರೆ ಹೊರದೇಶದ ಆಂಗ್ಲರ ಆಳ್ವಿಕೆಯಿಂದ ಹಿಂದಿ ಭಾಷಿಕರ ಆಳ್ವಿಕೆಗೆ ಬಿದ್ದ ಹಾಗಾಗುತ್ತದೆ ಅಷ್ಟೆ.