ಮರುಳಾಗದಿರಲಿ ಮಂದಿ!

ಅಲ್ರೀಪಾ... ಕನ್ನಡ ನಾಡಾಗ ಬ್ಯಾರೀ ಭಾಷೀ ಪಿಚ್ಚರ್ ಗಳಿಗ ಭಾಳ ದೊಡ್ಡ ಮಾರುಕಟ್ಟಿ ಐತಿ, ಅದಕ್ಕಾ ಅವ್ರು ಚಿತ್ರಗಳು ಇಲ್ಲಿ ಛಲೋ ಓಡ್ತವಾ ಅಂತಾ ಮಂದೀ ಮಾತಾಡೂದ್ ಆಗಾಗ್ ಕೇಳ್ ಬರ್ತೈತಿ... ನಮ್ ಕನ್ನಡ್ ಸಿನಿಮಾ ಅದ್ಯಾಕ್ ಅಕಡೀಕ್ ಹೋಗಾವಲ್ದು. ಬರೀ ತೆಲುಗು, ತಮಿಳು, ಹಿಂದಿ ಪಿಚ್ಚರ್ರ್ ಇಲ್ಲಿಗ್ ಅದ್ಯಾಕ್ ಬರ್ತಾವಾ ಅಂತ ಭಾಳ ಅಚ್ಚರಿ ಆಗ್ತಿತ್ರೀ ಗುರುಗಳಾ!

ಪರಭಾಷಾ ಚಿತ್ರಗಳು ಮತ್ತು ಗುಣಮಟ್ಟ!

ಅದಕ್ಕ ಏನಾರ ಕಾರಣ ಇರಾಬೇಕಂತ ಚಿಂತೀ ಮಾಡಕ್ ಹೊಂಟ್ರಾ... ಕೆಲ ಮಂದಿ ಅಂತಾರಾ... ಬ್ಯಾರೀ ಭಾಷಿ ಚಿತ್ರ ಕನ್ನಡಕ್ಕಿಂತ ಗುಣಮಟ್ಟದಾಗ ಭಾಳ ಮ್ಯಾಲ್ ಇರ್ತವಾ ಅಂತ. ನಾ ಹೌದನಪ್ಪಾ ಅನ್ಕೋತಾ ತಮಿಳಿನ ಚಂದ್ರಮುಖಿ ನೋಡ್ದೆರೀಪಾ. ಲಕಲಕಲಕಲಕಾ... ನಮ್ಮ ಆಪ್ತಮಿತ್ರದ ಮುಂದ ಅದ್ನ ನಿವಾಳಿಸಿ ಒಗಿಬೇಕ್ರೀಪಾ. ಇದ್ರಾಗಿಲ್ಲದ್ದ, ಅದ್ರಾಗ್ ಏನೈತಿ ಅಂದ್ರ... ಒಂದೂ ಕಾಣವಲ್ಲದ್ರೀ. ಮತ್ ಹ್ಯಾಂಗ್ ಈ ಹೊರಭಾಷಾ ಚಿತ್ರಗಳಿಗ ಈ ಪರಿ ಮಾರುಕಟ್ಟಿ ಐತಿ ಅನ್ನೋ ಭ್ರಮಿ, ಪ್ರಚಾರ ಹುಟ್ಟದಾ?

ಪರಭಾಷಾ ಚಿತ್ರಗಳು ಮತ್ತು ಕನ್ನಡ ಮಾಧ್ಯಮದೋರು!

ಹೌದ್ರೀಪಾ... ಖರೀ ಅಂದ್ರಾ ನಮ್ಮ ಮಾಧ್ಯಮದೋರಾ ಹಿಂಗ್ ಹೊರಗಿನ ಭಾಷಾ ಸಿನಿಮಾಗಳಿಗ ನಮ್ ನಾಡಾಗೆ ಭರ್ಜರಿ ಮಾರುಕಟ್ಟಿ ಕಟ್ಟಿಕೊಡಾಕ್ ಹತ್ಯಾರ... ನಮ್ಮ ಮಾಧ್ಯಮದಾಗಾ ಒಂದು ಹೊರಗಿನ ಚಿತ್ರ ಅಂದ್ರ ಅದರ ಬಿಡುಗಡಿಗ ಮೊದಲಾ ಅದ್ರಾಗ್ ಅಮಿತಾಬ್, ಮಮ್ಮುಟ್ಟಿ, ಚಿರಂಜೀವಿ ಅದಾರ ಅಂತ ಗಾಸಿಪ್ ಸುದ್ದಿ ಕೊಡ್ತಾರಾ, ಅಂಥಾ ಚಿತ್ರದ ನಾಯಕಂಗ ಒತ್ತಡ ಆಗ್ತಾ ಐತಿ ಅಂತಾ ಸುದ್ದಿ ಮಾಡ್ತಾರಾ, ಚಿತ್ರ ಬಿಡುಗಡಿಗೆ ವಿರೋಧಾ ಮಾಡುದ್ರಾ ಬರೀತಾರಾ, ಮಾಡ್ಲಿಲ್ಲ ಅಂದ್ರ ಗಪ್ ಕುಂತಾರಾ ಅಂತ ಬರೀತಾರಾ, ಬಿಡುಗಡಿ ಆದಮ್ಯಾಲಾ ಭರ್ಜರಿ ರಶ್ಶು ಅಂತ ಬರೀತಾರಾ, ರೇಡಿಯೋದಾಗ ಸಿನಿಮಾ ನೋಡಿ ಬರೂ ಮಂದೀನಾ ಇಂಟರ್ ವ್ಯೂ ಮಾಡ್ತಾರಾ, ತಪ್ಪದೆ ಸಿನಿಮಾ ರಿವ್ಯೂ ಬರೀತಾರಾ... ಹೀಂಗ ಮಾಡೂದ್ರಿಂದ ಕನ್ನಡ ಮಂದಿ ಎದಿಯಾಗ ಕುತೂಹಲ ಹುಟ್ ಹಾಕಿ ಅವ್ರೂ ಈ ಸಿನಿಮಾ ನೋಡೂ ಹಾಗ್ ಮಾಡ್ತಾರ್ರೀಪಾ...

ಕನ್ನಡ ಟಿವಿ ಚಾನಲ್ಲದಾಗ!

ಇಕಾ... ಬರ್ರೀ... ಕನ್ನಡದ ಈ ಒಂದು ಟಿವಿ ಚಾನಲ್ ಐತಿ ನೋಡ್ರಲಾ... ಅದ್ರಾಗ ಕನ್ನಡ ಚಿತ್ರಗಳ ಬಗ್ಗಿ ಮಾತಾಡೂಕಿಂತ ಹೆಚ್ಚು ಹಿಂದಿ, ತೆಲುಗು ಸಿನಿಮಾಗಳ ಬಗ್ಗೀ ಮಾತಾಡ್ತಾರಾ. ಮೂರು ದಿನಾ ಇರಲಿ, ಮೂರು ಶೋ ಕೂಡಾ ನಡ್ಯಂಗಿಲ್ಲಾ ಅಂಥಾ ಸಾವರಿಯಾ, ಓಂ ಶಾಂತಿ ಓಂ ಅನ್ನೂ ಸಿನಿಮಾಗಳ ಬಗ್ಗಿ ಭರ್ಜರಿ ಹವಾ ಇದ್ದಂಗ್ ತೋರುಸ್ತಾರಾ. ಕಡಿಗಾ ಚಂದನ ಚಾನಲ್ಲದಾಗ ’ಥಟ್ ಅಂತ ಹೇಳಿ’ ಅನ್ನೋ ಅಚ್ಚ ಕನ್ನಡದ್ ಕಾರ್ಯಕ್ರಮದ ನಡೂಕ ಹಿಂದಿ ಸಿನಿಮಾದೋರ ಬಗ್ಗಿ, ಹಿಂದಿ ಹಾಡುಗಾರರ ಬಗ್ಗಿ ಸ್ವಚ್ಚ ಕನ್ನಡದಾಗಾ ಪ್ರಶ್ನಿ ಕೇಳ್ತಾರಾ.

ಕನ್ನಡದ ಎಫ್ಎಂದಾಗ!

ನಮ್ ಟಿವಿ ಮಂದಿ ಹಿಂಗಾದ್ರಾ ಇನ್ನು ಬೆಂಗಳೂರಾಗಿನ ಎಫ್ ಎಂ ವಾಹಿನಿಗಳ ಕಥಿ ಹೇಳೂಣೇ ಬ್ಯಾಡ್ರೀಪಾ. ಈ ಮಂದಿ ಅನಿಲ್ ಕಪೂರ್ ಹುಟ್ಟುದ್ ಹಬ್ಬ, ಕರೀನಾ ಕಪೂರ್ ಲವ್ವು, ಬಾಲಿವುಡ್ ಗಾಸಿಪ್ಪು ಅಂತ ಹೊರಡ್ತಾರಾ. ಮೊನ್ನಿ ಮೊನ್ನಿ ಮಿರ್ಚಿ ಮಂದಿ 98,300ರೂಪಾಯಿ ಗೆಲ್ರಲಾ ಅಂತ ಕೇಳಿದ್ ಪ್ರಶ್ನಿ ’ಕೌನ್ ಬನೇಗಾ ಕರೋಡ್ ಪತಿ’ ನ್ ಅಡ್ಸಿದ್ ಯಾರು? ಅಮ್ಜದ್ ಖಾನ್ ಕಟ್ಟಿದ್ ಹೊಟೆಲ್ ಯಾವುದು? ಇಂಥವೇ ಕಣ್ರೀಪಾ.

ನಮ್ಮವೇ ಪತ್ರಿಕಿಗಳೊಳಗಾ!

ಥೂ.. ಹಾಳ್ ಬಿದ್ ಹೋಗ್ಲಿ ಅಂತ ಕನ್ನಡ ದಿನಪತ್ರಿಕಿ ಕಡಿ ಕಣ್ ಹಾಯ್ಸುದ್ರಾ ಕಣೂದ್ ಏನಂತೀರೀ? ಸಮಸ್ತ ಕನ್ನಡಿಗರ ಹೆಮ್ಮಿ ಅನ್ಕೊತಾ ಅನ್ಕೋತಾನೆ ರಜನಿಕಾಂತನ ಜೀವನ ಕಥಿ ಬರೀತಾರ, ರೇಖಾ ಅನ್ನಾಕಿ ಯಾರ್ ಯಾರ್ ಕೂಡಾ ಹ್ಯಾಂಗ್ ಹ್ಯಾಂಗ್ ಆಟ ಆಡುದ್ಲು ಅಂತ ಉಮ್ರಾವ್ ಜಾನ್ ಅಂತ ಬರೀತಾರ. ಗಾಳಿಪಟ ಧೂಳಿಪಟ ಅಂತ ಮೊದಲ ಪುಟದಾಗ್ ಬರಿಯೋ ಮಂದೀನ ಶಿವಾಜಿ ಅನ್ನೂ ಸಾಧಾರಣ ಪಿಚ್ಚರ್ ಬಗ್ಗಿ ಬಹುಪರಾಕ್ ಬಹುಪರಾಕ್ ಅಂತ ಬರೀತಾರ. ಇನ್ನು ಸಿನಿಮಾ ಸುದ್ದಿಗೆ ಅಂತಾನ ಇರೂ ಪತ್ರಿಕೆಗಳೊಳಗಡಿ ಬಾಲಿವುಡ್ ಪುಟ, ಟಾಲಿವುಡ್, ಕಾಲಿವುಡ್ ಪುಟ ಅಂತೆಲ್ಲಾ ಇರ್ತಾವಾ. ಈ ಸಾಲಾಗ ಈ ಪತ್ರಿಕೆಗಳೋರು ಅದಾರ ಮತ್ತಾ...

ಅಲ್ರೀಪಾ, ಬ್ಯಾರೀ ನಾಡಾಗ ಎಲ್ಲರಾ ಸ್ಯಾಂಡಲ್ ವುಡ್ ಬಗ್ಗಿ ಪುಟಗಟ್ಲೆ ಬರ್ದಿದ್ ಕಂಡೀರೇನ್ರೀಪಾ? ನಮ್ ಮಾಧ್ಯಮದೋರು ಎದುಕ್ ಹೀಂಗಾ ಪುಟಗಟ್ಲಿ ಪರಭಾಷಾ ಚಿತ್ರಗಳ ಬಗ್ಗಿ ಬರೀತಾರಾ? ಕನ್ನಡ ಸಿನೆಮಾ ರಿವ್ಯೂ ಬರಿಯಾಕ ಭಾನುವಾರದ ಮಟಾ ಕಾಯೂ ಮಂದಿ ಎದುಕ್ ಕುಸೇಲನ್ ರಿವ್ಯೂ ಶನಿವಾರಾನಾ ಬರೀತಾರಾ? ನಮ್ಮ ಟಿವಿ ಮಂದಿ ಎದುಕ್ ಹಾಂಗಾ ತೆಲುಗು, ಹಿಂದಿ ಸಿನಿಮಾ ಬಗ್ಗಿ ಪ್ರಚಾರ ಮಾಡ್ಯಾರಾ? ಈಗರಾ ಹೇಳ್ರಲಾ... ಕನ್ನಡ ನಾಡಾಗ ಪರಭಾಷಾ ಚಿತ್ರಗಳಿಗ ಮಾರುಕಟ್ಟಿ ಕಟ್ಟಿಕೊಡ್ತಿರೂ ಮಂದಿ ಯಾರಾ? ಈ ಮಂದಿ ಎದುಕ್ ಹಿಂಗ ಮಾಡಾಕ್ ಹತ್ಯಾರ? ಹೀಂಗ್ ಮಾಡೂದ್ರಿಂದ ಕನ್ನಡನಾಡಾಗ ಪರಭಾಶಿ ಚಿತ್ರಗಳಿಗ ಮಾರುಕಟ್ಟಿ ಕಟ್ಟಿಕೊಟ್ಟಂಗ್ ಆಗಂಗಿಲ್ಲೇನ? ಅನ್ನೂದು ಈ ಮಂದಿಗೆ ಖಬರೈತೋ ಇಲ್ಲೋ... ಅನ್ನೋ ಮಾತು ಬಾಜೂಕಿಟ್ಟು ನಾವ್ ಕನ್ನಡ ಮಂದಿ ಇಂಥ ಮಾಧ್ಯಮದೋರಿಗ ನೇರವಾಗಿ ನಮ್ಮ ಮನರಂಜನಿ ನಮಗ ಕನ್ನಡದಾಗಿರಬೇಕದ, ನೀವ್ ಹೀಂಗ ನಡ್ಕೊಳೋದು ಚೂರು ಪಸಂದ್ ಇಲ್ಲ ಅನ್ನಬೇಕ್ರಿಪಾ. ಮಾಧ್ಯಮದಾಗ ಎಷ್ಟಾರ ವದರ್ಲಿ, ನಾವ್ ಅದಕ್ ಮರಳಾಗದಿದ್ರಾತು... ಏನಂತೀರ್ರೀ ಗುರುಗಳಾ?

9 ಅನಿಸಿಕೆಗಳು:

Kishore ಅಂತಾರೆ...

ಗುರುಗಳೇ ನಿಮ್ಮ ಬರವಣಿಗೆಯ ಶೈಲಿ ಬೋ ಪಸಂದಾಗೈತೆ.
ನಾವು ನಿಶ್ಪಕ್ಶಪಾತ ವರದಿಗಾರರು, ನಾವು ಬರೀ ಕನ್ನಡ ಅಲ್ಲ.. ಎಲ್ಲ ಭಾಷೆಗಳ ಚಲನ ಚಿತ್ರಗಳನ್ನು ಪ್ರೋತ್ಸಾಹ ಮಾಡ್ತಿವಿ. ಕನ್ನಡ ಚಿತ್ರಗಳು ಸುಡುಗಾಡಿಗೆ ಹೋಗ್ಲಿ, ಚಿಂತೆ ಇಲ್ಲ ಆದ್ರೆ ನಾವು ನಿಷ್ಪಕ್ಷಪಾತ ಬಿಡೋ ಹಾಗಿಲ್ಲ. ವರದಿಗಾರರ ಸ್ವಾತಂತ್ರ ಕಸಿಯಕ್ಕಿ ಹೋಗ್ಬೇಡಿ, ಹಾಗೆ ಮಾಡಿದರೆ ಪ್ರಜಾಪ್ರಭುತ್ವದ ಹಕ್ಕನು ಕಿತ್ತುಕೊಂಡ ಹಾಗೆ. ಕನ್ನಡಿಗರಿಗೆ ಎಲ್ಲಾ ಚಿತ್ರ ರಂಗಗಳ, ಮತ್ತು ಅವರ ಚಿತ್ರಗಳ ಸುದ್ದಿ ಮುಟ್ಟಿಸುವುದು ನಮ್ಮ ಆದ್ಯ ಕರ್ತವ್ಯ. ಪರಭಾಷಿಕನಿಗಾಗಿಯೇ ಬದುಕುವೆ, ಪರಭಾಷಿಕನ ಸೇವೆಯಲ್ಲೇ ಸಾಯುವೆ.. ಇದೇ ಪರಮ ಧರ್ಮ, ಇದೇ ಕನ್ನಡಿಗನು ವಿಶ್ವ ಮಾನವ ಎಂದು ನಿರೂಪಿಸುವ ಬಗೆ. ಹೀಗೆ ಮಾಡೋದ್ರಿಂದಲೇ ನಾವು ಮುಂದಿನ ಸಮಾಜವನ್ನು ಕನ್ನಡ ಪ್ರೇಮದಿಂದ ರಕ್ಷಿಸುತ್ತೇವೆ. ಎಲ್ಲಾ ಮಕ್ಳು ಕನ್ನಡದ ಬಗ್ಗೆ ತಾತ್ಸಾರ ಬೆಳುಸ್ಕೊಳಕ್ಕೆ ನಮ್ಮ ಪ್ರಾಣ ಕೊಟ್ಟು ದುಡಿಯುತ್ತೇವೆ.

ಇದೇ ಈಗಿನ ನಾಡ ಪತ್ರಿಕೆಗಳ ಧೋರಣೆ.

ವಿ.ರಾ.ಹೆ. ಅಂತಾರೆ...

ಸರ್ಯಾಗ್ ಹೇಳಿದಿಯಾ ಗುರು. ಕರ್ನಾಟಕದಲ್ಲಿ ಇಂಗ್ಲೀಷ್ ಪತ್ರಿಕೆಗಳಂತೂ ವಾರಕ್ಕೆ ನಾಲ್ಕು ದಿನ ಬೇರೆ ಭಾಷೆಯ ನಟ ನಟಿಯರನ್ನ ಮೆರೆಸೋದ್ರಲ್ಲೇ ಇರ್ತವೆ. ಹೋಗ್ಲಿ, ನಮ್ ಕನ್ನಡ ಪತ್ರಿಕೆಗಳಿಗಾದ್ರೂ ಬುದ್ಧಿ ಇದೆಯಾ ನೋಡಿದ್ರೆ ಅವೂ ಬೇರೆಯವರಿಗೆ ಬೋಪರಾಕ್ ಹೇಳೋದ್ರಲ್ಲೇ ಮಗ್ನ ! ಯಾಕಪ್ಪಾ ಹಿಂಗೆ ಅಂತ ಕೇಳಕ್ಕೆ ಹೋದ್ರೆ ನಮ್ಮನ್ನೇ ಸಂಕುಚಿತ ಮನಸಿನವರು ಅಂತಾರೆ. ತಾವು ದೊಡ್ಡ ವಿಶ್ವಮಾನವರ ತರ ಫೋಸ್ ಕೊಡ್ತಾರೆ. ದೇವರಾಣೆ ಈ ಕನ್ನಡ ಮಾಧ್ಯಮಗಳಿಂದಲೇ ಬೇರೆ ಭಾಷೆಯ ’ಕಸ’ಕ್ಕೂ ಕೂಡ ಕರ್ನಾಟಕದಲ್ಲಿ ಒಳ್ಲೆಯ ಮಾರುಕಟ್ಟೆ ಸಿಗ್ತಾ ಇರೋದು. ನಮ್ ಮಾಧ್ಯಮಗಳು ಸರಿ ಇದ್ದಿದ್ರೆ ಈ ಸಿವಾಜಿ, ಬಾಲಾಜಿಗಳೆಲ್ಲ ಗೊತ್ತೇ ಆಗ್ತಿರ್ಲಿಲ್ಲ. ಉತ್ತಮ ಸಮಾಜಕ್ಕಾಗಿ ಎಂದು ಬರುವ ವಾಹಿನಿಯೊಂದು ಹಿಂದಿ ನಟನಟಿಯರು ಚಿತ್ರಗಳನ್ನ ಮೆರೆಸೋದನ್ನ ನೋಡಿದ್ರೆ ಮೈ ಉರಿತದೆ.

Anonymous ಅಂತಾರೆ...

ಮೂಲಭೂತವಾಗಿ ಇವೆಲ್ಲ ಕನ್ನಡದ ಚಾನೆಲ್‌ಗಳೇ ಅಲ್ಲ. ಟಿವಿ೯ ಲೋಗೋ ಇಂಗ್ಲಿಷ್‌ನಲ್ಲಿದೆ. ಈಟಿವಿ ಲೋಗೋ ತೆಲುಗು ಅಕ್ಷರ ಹೊಂದಿದೆ. ಈ ಎರಡೂ ಚಾನೆಲ್‌ಗಳ ಒಡೆಯರು ತೆಲುಗರು. ಜೀ ಟೀವಿ ಹಿಂದಿವಾಲಾಗಳದ್ದು. ಸುವರ್ಣ ಮಳೆಯಾಳಿಗಳದ್ದು. ಸುವರ್ಣದ ಸಕಲವೂ ಇಂಗ್ಲಿಷ್‌ಮಯ. ಅವರು ಕನ್ನಡ ಅಕ್ಷರಗಳನ್ನು ಬಳಸಿದ ಉದಾಹರಣೆಯೇ ಇಲ್ಲ. ಉದಯ ಟಿವಿ ತಮಿಳುನಾಡು ಮೂಲದ್ದು. ಇರುವ ಒಂದು ಚಾನೆಲ್ ಕಸ್ತೂರಿ ಕನ್ನಡದ್ದು. ಅದನ್ನೂ ಅನಿತಾ ಕುಮಾರಸ್ವಾಮಿ ಯಾವಾಗ ಪರಭಾಷಿಗರಿಗೆ ಮಾರುತ್ತಾರೋ ಎಂಬ ಭೀತಿ ಕನ್ನಡಿಗರದ್ದು.
ಹೊರ ರಾಜ್ಯಗಳಿಂದ ಬಂದ ಚಾನೆಲ್‌ಗಳ ಆದ್ಯತೆಯ ವಿಷಯ ಸಹಜವಾಗಿಯೇ ಅವರ ಹಿತಾಸಕ್ತಿಗೆ ಅನುಗುಣವಾಗಿ ಇರುತ್ತವೆ ಅಲ್ಲವೇ? ಈ ಚಾನೆಲ್‌ಗಳ ವರದಿಗಾರರು ಕನ್ನಡಿಗರು. ಹೀಗಾಗಿ ಸುದ್ದಿಯಲ್ಲಿ ಅಷ್ಟಿಟ್ಟು ಕನ್ನಡಪರ ವರದಿಗಳು ಪ್ರಸಾರವಾಗುತ್ತವೆ. ಆದರೆ ಯಾವುದು ಸುದ್ದಿಯಾಗಬೇಕು ಎಂದು ನಿರ್ಧರಿಸುವವರು ಚಾನೆಲ್ ಮಾಲೀಕರು ಮತ್ತು ಅವರು ನೇಮಿಸಿದ ಪರಭಾಷಿಗ ಸಿಇಓಗಳು ಅಲ್ಲವೇ?
ಹೀಗಾಗಿ ರಜನಿ, ಚಿರಂಜೀವಿ, ಅಮಿತಾಬ್‌ರಂಥವರೇ ಇವರಿಗೆ ದೇವರು. ಇದಿಷ್ಟೂ ಅಲ್ಲದೆ ಇವರಿಗೆ ಹಿಂದಿ, ಇಂಗ್ಲಿಷ್ ಚಾನೆಲ್‌ಗಳನ್ನು ಅನುಕರಿಸುವ ಹುಚ್ಚು ವ್ಯಾಮೋಹ. ಈ ಹುಚ್ಚಾಟಗಳನ್ನು ಕನ್ನಡಿಗರು ಸಹಿಸಿಕೊಳ್ಳಬೇಕಾಗಿರುವುದು ಮಾತ್ರ ದುರಂತ-ಜ್ಞಾನೇಂದ್ರ ಕುಮಾರ್

daya ಅಂತಾರೆ...

Hi Kishore,

Well said, We are sarva dharma sahishnu's we sacrifice ourselves for the sake of others. we are in a over accepting mode. We need an introspection of ourselves and need to chart out an action plan.

Unknown ಅಂತಾರೆ...

I totally agree with the comments made. TV9 is a f***ing channel with full of hindi and telugu shit.

Anonymous ಅಂತಾರೆ...

ಮೊನ್ನೆ ನನ್ನ ಒಬ್ಬ ಕಿರಿಯ ಸ್ನೇಹಿತನ ಜೊತೆ ಮಾತಾಡ್ತಾ ಇದ್ದೆ. ಅವನು ಕುಸೇಲನ್ ಕುಸೇಲನ ಅಂತಾ ಒಳ್ಳೆ ದೆವ್ವ ಮೆಟ್ಟಿದವರ ತರಹ ಆಡ್ತಾ ಇದ್ದ. ಅಲ್ಲಪ್ಪಾ, ರಜನಿ ನಮ್ಮ ಭಾಷೆಗೆ, ನಮ್ಮ ಜನಕ್ಕೆ ಅವಮಾನ ಆಗೋ ಹಾಗೆ ನಡಕೊಂಡಿದ್ದಾನೆ, ಅಂತವನ ಚಿತ್ರ ಯಾಕಪ್ಪ ನೋಡ್ತಿಯಾ ಅಂದ್ರೆ, ಅವನು ಹೇಳಿದ್ದು,, ಸುಮ್ನಿರಣ್ಣ, ನಮ್ಮ ವಿ.ಕ, ಕನ್ನಡಪ್ರಭ, ಟಿ.ವಿ. 9 ನಲ್ಲೆ ನಮ್ಮ ರಜನಿ ಚಿತ್ರ ಚೆನ್ನಾಗಿದೆ ಅಂತಾ ಬರ್ತಾ ಇದೆ, ನೀನೊಳ್ಳೆ ತಲೆ ತಿಂತಿಯಾ ಅನ್ನೋ ತರಹ ನನ್ನ ನೋಡಿದ.

ಆಗ ಕಲ್ಯಾಣ ರಾಮನ್ ಅವರು ಬರ್ದಿರೊ ಬರಹ ಓದೋಕೆ ಕೊಟ್ಟೆ, ಅದನ್ನ ನೋಡಿದವನು,, ಮತ್ತೆ ಹಾಗಿದ್ರೆ ನಮ್ಮ ಕನ್ನಡ ಮಾಧ್ಯಮಗಳು ಯಾಕೆ ಅಷ್ಟು ಸಪೋರ್ಟ್ ಮಾಡಿ ಬರಿತಾರೆ ಅಂತ ಉಲ್ಟಾ ಪ್ರಶ್ನೆ ಮಾಡಿದ. ಏನಂತ ಹೇಳೋದು ಗುರು? ಈ ಹಲ್ಕಾ ನನ್ನ ಮಕ್ಕಳಿಂದಾನೆ, ಇವತ್ತು ಪರಭಾಷಾ ಚಿತ್ರಗಳಿಗೆ ಅಷ್ಟು ಮಾರುಕಟ್ಟೆ ಸಿಗ್ತಾ ಇರೋದು.

- ಅರುಣಾದ್ರಿ

ಪುಟ್ಟ PUTTA ಅಂತಾರೆ...

ದುರಂತ ಎಂದರೆ ಎಲ್ಲ್ಲ ಕನ್ನಡ ಪತ್ರಿಕೆಗಳ ಮುಖ ಪುಟದಲ್ಲೇ ಈ ನಾಮರ್ಧನ ಚಿತ್ರ ರಾರಾಜಿಸುತ್ತಿರುವುದು.

Anonymous ಅಂತಾರೆ...

http://bellitere.com/ Kannada movie reviews and donwload songs.

Anonymous ಅಂತಾರೆ...

chalo bariddira .. kannadigara hemmeyaagi "enguru" patrike nadesi gurugale .. ondu dina .. nijavaada kannadigaru nimma hinde irtivi ..

Nidhi

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails