ಕನ್ನಡ ಚಿತ್ರರಂಗ ಮಿನುಗುತಿರಲಿ. ನಮ್ಮ ಬದುಕಿನ ಬೇರೆ ಮಾಡಲಾಗದ ಅಂಗವಾಗಿರೋ, ನಮ್ಮನ್ನು ಗಾಢವಾಗಿ ಆವರಿಸಿಕೊಂಡಿರುವ ಚಿತ್ರರಂಗಕ್ಕೀಗ ಎಪ್ಪತ್ತೈದು. ಇದು ಕನ್ನಡ ನಾಡಿಗೇ ಹಿಗ್ಗು ತಂದಿದೆ. ಕನ್ನಡ ಚಿತ್ರರಂಗಕ್ಕೆ ಕನ್ನಡ ಜನತೆಯ ಶುಭ ಹಾರೈಕೆಗಳು.
ಈ ಸಮಯದಲ್ಲೇ ಚಿತ್ರರಂಗದೋರು ಒಂದು ಸೊಗಸಾದ ಅದ್ದೂರಿ ಕಾರ್ಯಕ್ರಮಾನಾ ನಡ್ಸಕ್ ಮುಂದಾಗಿರೋದೂ ಎಪ್ಪತ್ತೈದರ ಹಬ್ಬಕ್ಕೆ ಒಳ್ಳೆ ಖಳೆ ತರುತ್ತೆ. ಎಪ್ಪತ್ತೈದು ಮುಗ್ದಿರೋದು ಸಂಭ್ರಮದ ಆಚರಣೆಗೆ ಮಾತ್ರಾ ಸೀಮಿತವಾಗದೆ ಕನ್ನಡ ಸಿನಿಮಾ ಉದ್ಯಮ ಎದುರುಸ್ತಿರೋ ಸಮಸ್ಯೆಗಳನ್ನು ಪರಿಹರಿಸೋಕೆ ಇರೋ ದಾರಿಗಳ ಬಗ್ಗೆ ಗಂಭೀರವಾದ ಚಿಂತನೆ ಮಾಡಕ್ಕಿರೋ ಒಂದೊಳ್ಳೆ ಅವಕಾಶಾನೂ ಆಗಿದೆ. ಇವತ್ತಿನ ದಿವಸ ಚಿತ್ರರಂಗ ಒಲ್ಲೆ ಅನ್ತಾ ಇರೋ, ಒಂದು ಕಹಿ ಔಷಧಿಯ ಬಗ್ಗೆ ಚಿತ್ರರಂಗದೋರ ಗಮನ ಸೆಳೆಯೋಣ. ಆ ಮೂಲಕ ಒಳ್ಳೇ ಚರ್ಚೆ, ಸರಿಯಾದ ನಿರ್ಧಾರಗಳು ಹೊರಹೊಮ್ಮಲಿ ಅನ್ನೋದು ಏನ್ ಗುರುವಿನ ಆಶಯವಾಗಿದೆ. ಅಂದಹಾಗೇ ಆ ಔಷಧದ ಹೆಸರು ಡಬ್ಬಿಂಗ್.
ಅಂದು ಡಬ್ಬಿಂಗ್ ಬೇಡ ಅಂದಿದ್ದು ಸರಿ!
ಹಿಂದೆ ಅಂದ್ರೆ ಅರವತ್ತರ ದಶಕದಲ್ಲಿ ಕನ್ನಡ ಚಿತ್ರರಂಗ ಅನ್ನೋದು ನೆಲೆಯಾಗಿದ್ದುದ್ದು ಮದ್ರಾಸಿನಲ್ಲಿ. ನಮ್ಮ ಚಿತ್ರಗಳ ನಿರ್ಮಾಪಕರುಗಳಲ್ಲಿ ಹೆಚ್ಚಿನೋರು ಪರಭಾಷೆಯೋರೆ. ಮೊದಲ ಕನ್ನಡ ಚಿತ್ರ ತೆಗ್ಯಕ್ಕೆ ಬಂಡವಾಳ ಕೂಡಿಹಾಕಿದ ಕಥೆ ಓದುದ್ರೇ ಆವತ್ತಿನ ದಿನ ಕನ್ನಡದಲ್ಲಿ ಚಿತ್ರ ತೆಗ್ಯೋದು ಅನ್ನೋದು ಎಷ್ಟು ತ್ರಾಸಿನ ಬಾಬತ್ತಾಗಿತ್ತು ಅಂತ ತಿಳ್ಯುತ್ತೆ. ಮದ್ರಾಸಿನ ಸ್ಟುಡಿಯೋಗಳಲ್ಲಿ ಕನ್ನಡದ ಚಿತ್ರಗಳ ಶೂಟಿಂಗಿಗೆ ರಾತ್ರಿ ಪಾಳಿ ಮಾತ್ರಾ ಮೀಸಲು ಮಾಡಿದ್ರಂತೆ ಅನ್ನೋದು ಕೇಳುದ್ರೆ ನಮ್ಮ ಚಿತ್ರರಂಗದ ಅಂದಿನ ಹೀನಾಯ ಸ್ಥಿತಿ ತಿಳ್ಯುತ್ತೆ. ಕನ್ನಡದ ತಂತ್ರಜ್ಞರಿಲ್ಲ, ಸ್ಟುಡಿಯೋ ಇಲ್ಲ, ರಿಕಾರ್ಡಿಂಗ್ ಇಲ್ಲ, ಸಂಗೀತಗಾರರಿಲ್ಲ...ಇಲ್ಲ ಇಲ್ಲ ಇಲ್ಲ ಅನ್ನೋ ಸ್ಥಿತಿಯಲ್ಲಿ ಕನ್ನಡ ಚಿತ್ರ ತೆಗ್ಯೋದಂದ್ರೆ ದೊಡ್ಡ ಸಾಹಸವೇ ಆಗಿಹೋಗಿತ್ತು... ಆಗ. ನಮ್ಮ ಸ್ವಾವಲಂಬನೆಗೆ ಅಡ್ಡಿಯಾಗಿದ್ದ ಇಂಥ ಸನ್ನಿವೇಶದಲ್ಲಿ ಒಂದು ಚಿತ್ರದ ದನಿ ಬದಲಿಸಿ ಯಾವ ಭಾಷೆಯ ದನಿಯನ್ನಾದ್ರೂ ಕೂಡಿಸಿ ಆಯಾ ಭಾಷಾ ಪ್ರಾಂತ್ಯದಲ್ಲಿ ಬಿಡುಗಡೆ ಮಾಡುದ್ರೆ ಕಡಿಮೆ ಖರ್ಚು ಅನ್ನೋದನ್ನು ಕಂಡುಕೊಂಡ ಭಾರತೀಯ ಚಿತ್ರರಂಗ, ಈ ಪಾಟಿ ಕಷ್ಟ ಪಟ್ಕೊಂಡು ಕನ್ನಡ ಸಿನಿಮಾ ತೆಗೆಯೋ ಬದಲು ತೆಗೆದಿರೋ ತೆಲುಗು, ಹಿಂದಿ, ತಮಿಳು ಚಿತ್ರಗಳಿಗೆ ಕನ್ನಡದ ದನಿ ಜೋಡಿಸಿದ್ರೆ ಸಾಕೆಂದುಕೊಳ್ತು. ಆ ಕಾರಣದಿಂದಲೇ ಕನ್ನಡ ಸಿನಿಮಾ ಇಂಡಸ್ಟ್ರಿ ಸಾಯೋದೊಂದೇ ದಾರಿ ಅನ್ನೋ ಪರಿಸ್ಥಿತಿ ಹುಟ್ಕೊಳ್ತು. ಆಗ ಈ ಡಬ್ಬಿಂಗು ಒಂದು ಪಿಡುಗು, ಇದರಿಂದ ಕನ್ನಡ ಚಿತ್ರೋದ್ಯಮಕ್ಕೆ ಹಾನಿ ಅಂತಾ ಡಬ್ಬಿಂಗ್ ವಿರೋಧಿ ಚಳವಳಿ ಹುಟ್ಕೊಳ್ತು. ಡಾ. ರಾಜ್ ಕುಮಾರ್ ಅವ್ರೂ ಮುಂಚೂಣಿಯಲ್ಲಿದ್ದ ಈ ಚಳವಳಿ ಯಶಸ್ವಿಯಾಗಿದ್ದು ಡಬ್ಬಿಂಗ್ ನಿಷೇಧವಾದಾಗ. ಇದರ ಪರಿಣಾಮವಾಗಿ ಕನ್ನಡ ಚಿತ್ರರಂಗ ಬೆಂಗಳೂರಿಗೆ ಬಂತು, ಹತ್ತಾರು ಸ್ಟುಡಿಯೋಗಳು ಬಂದವು, ಸಾವಿರಾರು ಜನ ಕಲಾವಿದರು ಬೆಳಕಿಗೆ ಬಂದರು, ನಾಡಿನ ಅನೇಕ ಸುಂದರ ತಾಣಗಳು ತೆರೆಗೆ ಬಂದವು, ಇಂದು ಈ ಮಟ್ಟಕ್ಕೆ ಸ್ವಾಭಿಮಾನಿಯಾಗಿ ಕನ್ನಡ ಚಿತ್ರರಂಗ ಬೆಳೆಯಲು ಕಾರಣವಾಯ್ತು.
ಇಂದು ಡಬ್ಬಿಂಗ್ ಬೇಕಾಗಿದೆ!
ಇವತ್ತಿನ ದಿನ ಕನ್ನಡ ಚಿತ್ರರಂಗ ತನ್ನ ಕಾಲ ಮೇಲೆ ತಾನು ನಿಂತಿದೆ. ಇವತ್ತು ಡಬ್ಬಿಂಗ್ ಬಗೆಗಿನ ನಮ್ಮ ನಿಲುವನ್ನು ಪರಾಮರ್ಶೆ ಮಾಡೋ ಕಾಲ ಬಂದಿದೆ. ಎಲ್ಲಾನೂ ನಾವೇ ಮಾಡ್ತೀವಿ ಅನ್ನಕ್ ಆಗ್ದಿರೋ ಸತ್ಯಾ ಅರಗಿಸಿಕೊಂಡು ಪ್ರಪಂಚದ ಅತ್ಯುತ್ತಮವಾದ ಚಿತ್ರಗಳನ್ನೆಲ್ಲಾ ನಮ್ಮ ನುಡಿಯಲ್ಲೇ ನೋಡೋಂಥಾ ಅವಕಾಶದತ್ತ ನೋಡಬೇಕಾಗಿದೆ. ಈಗ ಡಬ್ಬಿಂಗ್ ಸಿನಿಮಾಗಳಿಗೆ ಅವಕಾಶ ಕೊಡೋದ್ರೂ ಮೂಲಕ ಕರ್ನಾಟಕದಲ್ಲಿ ಪ್ರದರ್ಶನವಾಗೋ/ ಬಿಡುಗಡೆಯಾಗೋ ಎಲ್ಲಾ ಪರಭಾಷಾ ಚಿತ್ರಗಳನ್ನು ನಿಯಂತ್ರಿಸೋಕ್ಕೆ ಒಳ್ಳೆ ಅವಕಾಶಾನೂ ಇದೆ ಗುರು! ಪರಭಾಷಾ ನಿರ್ಮಾಪಕರಿಗೇನಂತೆ? ಅವರ ಸಿನಿಮಾ ದುಡ್ಡು ತಂದುಕೊಟ್ರೆ ಸಾಕಲ್ವಾ? ಡಬ್ಬಿಂಗ್ ಒಪ್ಪೋ ಮೂಲಕ ಇನ್ನಷ್ಟು ಹೆಚ್ಚು ಗಳಿಸಬಹುದು ಅಂತನ್ನೋದು ಮನವರಿಕೆ ಆದರೆ ಅವರೂ ಕೂಡಾ ನಮ್ಮ ನೆಲದಲ್ಲಿ ಕನ್ನಡದಲ್ಲೇ ಚಿತ್ರ ಬಿಡುಗಡೆ ಮಾಡಲು ಮುಂದಾಗ್ತಾರೆ. ಕನ್ನಡಿಗರ ಮನರಂಜನೆ ಕನ್ನಡದಲ್ಲಿರಬೇಕು ಅನ್ನೋದು ನಮ್ಮ ಹಕ್ಕಾಗಿದೆ. ನಾವು ಸೂಪರ್ ಮ್ಯಾನ್ ಆಗ್ಲೀ, ಸ್ಪೈಡರ್ ಮ್ಯಾನ್ ಆಗ್ಲೀ, ಜುರಾಸಿಕ್ ಪಾರ್ಕ್ ಆಗ್ಲೀ... ನಮ್ಮ ನುಡಿಯಲ್ಲೇ ಸವಿಯೋದ್ರಲ್ಲೇನು ತಪ್ಪಿದೆ? ಡಬ್ಬಿಂಗ್ ಮೂಲಕ ಶಿವಾಜಿ, ಕುಸೇಲನ್, ತಾರೆ ಜಮೀನ್ ಪರ್, ಘಜನಿ... ಮೊದಲಾದವು ನೂರಾರು ಕೇಂದ್ರದಲ್ಲಿ ಆಯಾ ಭಾಷೇಲೇ ಬಿಡುಗಡೆಯಾಗಿ, ಕನ್ನಡದೋರೆಲ್ಲಾ ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲೇ ಮನರಂಜನೆ ಪಡ್ಕೊಳ್ಳೋಕೆ ಮುಂದಾಗೋದನ್ನು ತಪ್ಪಿಸಬಹುದಲ್ವಾ ಗುರು?
ಡಬ್ಬಿಂಗ್ ಬೇಡ ಅನ್ನೋದು ಕಾನೂನಲ್ಲ!
ಡಬ್ಬಿಂಗ್ ನಿಷೇಧ ಅನ್ನೋದಕ್ಕೆ ಯಾವ ಕಾನೂನು ಮಾನ್ಯತೇನೂ ಇಲ್ಲ. ಅಷ್ಟೇ ಯಾಕೆ? ಏಳು ವಾರಗಳ ಗಡುವಿಗೂ ಯಾವ ಮಾನ್ಯತೆ ಇಲ್ಲ. ಯಾರಾದ್ರೂ ಸರಿಯಾಗಿ ಕೋರ್ಟಿಗೆ ಹೋದ್ರೆ ತೆಪ್ಪಗೆ ಎರಡಕ್ಕೂ ಅವಕಾಶ ಕೊಡಬೇಕಾಗುತ್ತೆ. ಅಂಥದ್ರಲ್ಲಿ ಕೆಲಸಾವಿರ ಜನಕ್ಕೆ ಉದ್ಯೋಗ ಹೊರಟು ಹೋಗುತ್ತೆ ಅನ್ನೋ ಹುರುಳಿಲ್ಲದ ಕಾರಣಕ್ಕೆ ಈ ಪರಿಸ್ಥಿತಿ ಹೀಗೆ ಮುಂದುವರೀಬೇಕಾ? ಚಿತ್ರರಂಗದೋರು ಭಯ ಪಡೋದಕ್ಕೆ ಅರವತ್ತರ ದಶಕದಲ್ಲಿದ್ದ ಸ್ಥಿತಿ ಈಗೇನೂ ಇಲ್ಲವಲ್ಲಾ? ಈಗಿರೋ ಕೆಲಸದ ಜೊತೆ ಡಬ್ಬಿಂಗ್ ಕಲಾವಿದರಿಗೆ, ಸಾಹಿತಿಗಳಿಗೆ ಹೆಚ್ಚು ಅವಕಾಶ ಸಿಗುತ್ತೆ ಅನ್ನೋದು ಸರಿಯಲ್ವಾ? ಡಬ್ಬಿಂಗ್ ಬೇಡ ಅನ್ನುತ್ತಿರೋ ಜನ್ರಲ್ಲೇ ಎಷ್ಟೋ ಜನ್ರು ಪರಭಾಷಾ ಚಿತ್ರಗಳ ವಿತರಕರೇ ಆಗಿದಾರೆ ಅನ್ನೋ ಗುಮಾನಿ ಇದೆ. ಡಬ್ಬಿಂಗ್ ಬಂದ್ರೆ ತಮ್ಮ ವಿತರಣಾ ಉದ್ದಿಮೆಗೆ ಹೊಡ್ತಾ ಬೀಳುತ್ತೆ, ರಿಮೇಕ್ ಮಾಡಕ್ಕೆ ಅಡ್ಡಿಯಾಗುತ್ತೆ ಅನ್ನೋ ಕಾರಣಕ್ಕೆ ಹೀಗಾಡ್ತಾರೆ ಅನ್ನೋ ಆರೋಪದಿಂದ ಈಗಿನ ಚಿತ್ರೋದ್ಯಮಿಗಳನ್ನು ಪಾರು ಮಾಡೋಕಾದ್ರೂ ಡಬ್ಬಿಂಗ್ ಬಗ್ಗೆ ಒಂದು ಒಳ್ಳೇ ಚರ್ಚೆಗೆ ಚಲಚಿತ್ರ ಮಂಡಲಿ ಮುಂದಾಗ್ಬೇಕು. ನೀವೇನಂತೀರಾ ಗುರು?