ಇಲ್ಲಿ ಬೀಮಾ ಅಂದ್ರೆ ಯಾರ್ರಣ್ಣಾ?


ಕನ್ನಡನಾಡಿನ ಕನ್ನಡಿಗರ ಸರ್ಕಾರವೇ ಹಿಂದಿ ಹೇರಿಕೇನ ಹ್ಯಾಗೆ ಅನುಮೋದಿಸ್ತಾ ಇದೆ ಅಂತಾ ಈ ಫೋಟೋ ನೋಡುದ್ರೆ ಗೊತಾಗುತ್ತೇ ಗುರು! ಕೇಂದ್ರಸರ್ಕಾರದ ಒಂದು ಯೋಜನೇನಾ ನಮ್ಮ ಜನತೆಗೆ ತಲುಪ್ಸೋದ್ರಲ್ಲಿ ಇವರು ಎಂಥಾ ಕಾಳಜಿ ತೋರುಸ್ತಿದಾರೆ ಅಂತ ತಿಳ್ಯುತ್ತೆ. ಛೇ... ಬಡ್ಕೋಬೇಕು ಇವ್ರ್ ನಡವಳಿಕೇಗೆ!! ಈ ಜಾಹೀರಾತನ್ನೇ ನೋಡಿ. ಮೇಲ್ಗಡೆ ಪೊಗದಸ್ತಾಗಿ ಕರ್ನಾಟಕ ರಾಜ್ಯ ಲಾಂಚನಾನ್ನ ಹಾಕಿದಾರೆ, ಆದ್ರೆ ಅದರ ಕೆಳಗೆ ಬರ್ದಿರೋದೆಲ್ಲಾ ಕನ್ನಡ ಲಿಪಿಯ ಹಿಂದಿ! ಆಮ್ ಅಂದ್ರೆ ಮಾವಿನಹಣ್ಣು! ಬೀಮಾ ಅಂದ್ರೆ ಬಲಭೀಮಾ ಅನ್ಸಲ್ವಾ? ಜನರಿಗೆ ತಲುಪಬೇಕಾದ ಸಂದೇಶಾನ ಈ ಜಾಹೀರಾತು ಪರಿಣಾಮಕಾರಿಯಾಗಿ ತಲುಪುಸ್ತಿಲ್ಲ ಅನ್ನೋದ್ನ ಕಂಡಾಗ ಒಂದು ಒಳ್ಳೇ ಯೋಜನೆ ಪರಿಣಾಮಕಾರಿಯಾಗಿ ಜಾರಿಗೆ ಬರುತ್ತಾ ಅಂತ ಅನುಮಾನ ಆಗಲ್ವಾ ಗುರು!

ಕೇಂದ್ರಸರ್ಕಾರದ ಯೋಜನೆ ಅಂದಕೂಡ್ಲೇ ಅಲ್ಲಿದ್ದ ಹಿಂದೀ ಹಾಗೇ ಇರಬೇಕಾ?

ಕೇಂದ್ರದ ಅಧಿಕೃತ ಸಂಪರ್ಕ ಭಾಷೆ ಹಿಂದಿ ಮತ್ತು ಇಂಗ್ಲಿಷ್ ಅನ್ನೋ ನೆಪ ಇಟ್ಕೊಂಡು ಸೋಮಾರಿತನಾ ತೋರುಸ್ತಿರೋ ಕರ್ನಾಟಕ ರಾಜ್ಯ ಸರ್ಕಾರದ ಈ ನಿಲುವು ಎಂಥಾ ಅಪಮಾನಕಾರಿಯಾಗಿದೆ ನೋಡಿ. ಅವರು ಒಂದು ಯೋಜನೇನಾ ಪ್ರಕಟ ಮಾಡುದ್ರು ಅಂದ ಕೂಡಲೇ ಅದನ್ನು ರಾಜ್ಯ ತನ್ನ ಜನತೆಗೆ ಮುಟ್ಸೋ ರೀತಿ ನೋಡಿ. ಆಮ್ ಆದ್ಮಿ ಬೀಮಾ ಯೋಜನೆ ಅಂತ ಹಾಕಿದಾರಲ್ಲಾ? ಇದನ್ನು ಓದಿ, ಯಾವನಾದ್ರೂ ಒಬ್ಬ ಕನ್ನಡಿಗನಿಗೆ ಇದೇನು ಅಂತ ಪ್ರಯಾಸವಿಲ್ಲದೇ ಅರ್ಥವಾದೀತಾ? ಇದೇನು ಭೀಮಾ ನೀರಾವರಿ ಯೋಜನೇನಾ? ಬೀಮಾ ಯೋಜನೆ ಅಂದಕೂಡಲೇ ಯಾವ ಬೀಮಾ? ಮಹಾಭಾರತದೋನಾ ಅಂತ ತಲೆ ಕೆಡುಸ್ಕೊಂಡುಬುಡ್ತಾರೆ ನಮ್ ಜನ...

ಜನರನ್ನು ತಲುಪುವಲ್ಲಿ ಎಡವುತ್ತೆ!

ಕರ್ನಾಟಕ ರಾಜ್ಯಸರ್ಕಾರದ ಸಂಬಂಧಿಸಿದ ಇಲಾಖೇಲಿ ಕೂತಿರೋ ಜಾಣಾತಿಜಾಣರಿಗೆ ಈ ಯೋಜನೆ ಕನ್ನಡದ ಜನರಿಗಾಗಿ ಇರೋದು, ಅಂದಮೇಲೆ ಅವರಿಗೆ ಅರ್ಥವಾಗೋ ಭಾಷೇಲೇ ಹಾಕಬೇಕು ಅನ್ನೋ ಸಾಮಾನ್ಯ ಜ್ಞಾನವೂ ಇಲ್ಲಾ ಅನ್ನೋದು ಕಂಡಾಗ ಮೈ ಉರಿದುಹೋಗುತ್ತೆ ಗುರು! ಎಂಥಾ ಒಳ್ಳೇ ಯೋಜನೇನೇ ಆಗಲಿ ಅದು ಪರಿಣಾಮಕಾರಿಯಾಗಿ ಜನ್ರುನ್ ತಲ್ಪಕ್ಕೆ ಕನ್ನಡದಲ್ಲಿ, ಸರಿಯಾದ ರೀತೀಲಿ ಅದರ ಪ್ರಚಾರ ಮಾಡಕ್ಕೆ ಏನು ಧಾಡಿ ಇವ್ರುಗೆ ಅಂತ ಅನ್ಸಲ್ವಾ! ಇಷ್ಟಕ್ಕೂ ಇರೋ ಮಾಹಿತಿ ಕನ್ನಡ ಲಿಪಿಯಲ್ಲಿದ್ರೆ ಸಾಕು ಅಂತಾ ತಿಳ್ಕೊಂಡಿದಾರಾ ಇವ್ರುಗಳೂ ಅಂತನ್ಸಲ್ವಾ ಗುರು!

ಕೇಂದ್ರಸರ್ಕಾರ ಕರ್ನಾಟಕದಲ್ಲಿ ಕನ್ನಡದಲ್ಲಿರಬೇಕು!

ಇಷ್ಟು ಅಸಡ್ಡೆ ತೋರುಸ್ತಿರೋ ಇವ್ರುದ್ದು ಒಂದು ತೂಕವಾದ್ರೆ ನಿಮ್ಮ ಜನಕ್ಕೆ ಅನುಕೂಲ ಮಾಡಿ ಕೊಡ್ತೀವಿ ಅಂತ ಹೇಳ್ಕೊಂಡು ಹಿಂಬಾಗಿಲಿಂದ ಹಿಂದಿ ಕಲಿಸಕ್ಕೆ ಹೊರ್ಟಿರೋ ಕೇಂದ್ರಸರ್ಕಾರದ ಧೋರಣೆ, ಪ್ರಜಾಪ್ರಭುತ್ವ ಅನ್ನೋದು ಇವತ್ತು ತಲುಪಿರೋ ಪಾತಾಳಕ್ಕೆ ಕನ್ನಡಿ ಹಿಡೀತಿದೆ. ಕರ್ನಾಟಕದಲ್ಲಿರೋ ಕೇಂದ್ರ ಸರ್ಕಾರಿ ಕಛೇರಿಗಳು ಕನ್ನಡದಲ್ಲಿ ಕಾರ್ಯನಿರ್ವಹಿಸಬೇಕು ಅನ್ನೋದೇ ಸರಿ ಅಂತ ಈ ಸರ್ಕಾರಗಳಿಗೆ ತಿಳಿಸಿಕೊಡಬೇಕಾಗಿದೆ! ನಮ್ಮೂರಲ್ಲಿರೋ ಆದಾಯ ತೆರಿಗೆ ಇಲಾಖೆ, ಸಂಶೋಧನಾ ಸಂಸ್ಥೆ, ಪಾಸ್ ಪೋರ್ಟ್ ಕಛೇರಿ... ಇವೆಲ್ಲಾ ನಮ್ಮೂರ ಜನಕ್ಕೆ ತಾನೇ ಇರೋದು? ಹಾಗಿದ್ದ ಮೇಲೆ ಇವುಗಳಲ್ಲಿ ಆಡಳಿತ ಆಗಬೇಕಾದ್ದು ಕನ್ನಡದಲ್ಲಿ ತಾನೇ? ಒಟ್ನಲ್ಲಿ ಕನ್ನಡಿಗರ ಹೆಗಲೇರಿರುವ ಈ ಹಿಂದಿ ಹೇರಿಕೆಯ ಬೇತಾಳಾನ ಕೆಳಗಿಳ್ಸೋ ಪುಣ್ಯದ ಕೆಲಸಾನ ಈ ನಾಡಿನ ಅಧಿಕಾರಿಗಳೂ, ಇಲಾಖೆಗಳೂ, ಸರ್ಕಾರಗಳೂ ಮಾಡಬೇಕಾಗಿದೆ ಗುರು!

ಕಿಂಚಿತ್ತಾದ್ರೂ ಸ್ವಾಭಿಮಾನ ಇರಲಿ!

ಕರ್ನಾಟಕ ರಾಜ್ಯಸರ್ಕಾರ ಈ ವರ್ಷಾನ ಕನ್ನಡ ಅನುಷ್ಠಾನ ವರ್ಷ ಮಾಡ್ತೀವಿ ಅಂತಿದಾರಲ್ಲಾ, ಅವ್ರುಗೆ ಈ ಕುಂದು ಕಾಣ್ತಿಲ್ವಾ? ನಮ್ಮ ನಾಡು, ನಮ್ಮ ನುಡಿ ಅನ್ನೋ ಸ್ವಾಭಿಮಾನದ ತುಣುಕು ಕೂಡಾ ಇಲ್ಲವಾ ಈ ನಾಡಿನ ಸರ್ಕಾರಗಳಲ್ಲಿ? ಇವರ ಅಧಿಕಾರಿಗಳಲ್ಲಿ? ಜವಾಹರ್ ರೋಜ್ಗಾರ್ ಯೋಜನೆ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ... ಹೀಗೆ ಕೇಂದ್ರದೋರು ಪ್ರಕಟಿಸೋ ಯೋಜನೆಗಳನ್ನೆಲ್ಲಾ ಅದೇ ಹೆಸರಲ್ಲಿ ಯಾಕೆ ಇವರು ಜಾರಿಗೆ ತರಲು ಮುಂದಾಗಬೇಕು? ಕೇಂದ್ರವೇನಾದ್ರೂ ಈ ಹೆಸರು ಬದಲಿಸೋಹಾಗಿಲ್ಲ ಅನ್ತಾ ಇದೆಯಾ? ಅಷ್ಟಕ್ಕೂ ಅವರು ಕೊಡ್ತಿರೋದು ಧರ್ಮಕ್ಕಲ್ಲಾ, ಭಿಕ್ಷೆ ಅಲ್ಲ... ಅದು ನಮ್ಮದೇ ತೆರಿಗೆ ಹಣ ಅಂತ ಗೊತ್ತಾಗಲ್ವಾ!! ಇವರಿಗೆಲ್ಲಾ ಸ್ವಾಭಿಮಾನದ ಪಾಠಾನ ಮತದ ಪೆಟ್ಟಿಗೆಯ ಮೂಲಕವೂ ಕೊಡಬೇಕಾಗಿದೆ ಗುರು!

34 ಅನಿಸಿಕೆಗಳು:

Anonymous ಅಂತಾರೆ...

ಹೀಗೆ ಈ ಜಾಹೀರಾತನ್ನು ಬರೀಬೌದಾ ಗುರುಗಳೇ?

ಹಳ್ಳಿಗಾಡಿನ ಸ್ವಂತ ಜಮೀನಿಲ್ಲದ ಬಡಕುಟುಂಬಗಳ ಭದ್ರತೆಗಾಗಿ ಭಾರತ ಸರ್ಕಾರ ಮತ್ತು ಭಾರತೀಯ ಜೀವವಿಮಾ ನಿಗಮಗಳು ಒಟ್ಟಾಗಿ ಒಂದು ರಾಷ್ಟ್ರೀಯ ವಿಮಾ ಯೋಜನೆಯನ್ನು "ಜನಸಾಮಾನ್ಯರ ಜೀವವಿಮಾ ಯೋಜನೆ" ಹೆಸರಲ್ಲಿ ಶುರು ಮಾಡಿದ್ದು, ಕರ್ನಾಟಕ ಸರ್ಕಾರವು ಅದನ್ನು ಜಾರಿಗೊಳಿಸುತ್ತಿದೆ.

ಸುಂದರ್

ಅಜೇಯ ಅಂತಾರೆ...

ಗುರುಗಳೆ, ನಿಮ್ಮ ಸಂದೇಶ ಸರ್ಕಾರಕ್ಕೆ ತಲ್ಪೋದ್ ಹೇಗೆ?

Kishore ಅಂತಾರೆ...

ಅಜೇಯ,
ಸರ್ಕಾರಕ್ಕೆ ಎಲ್ಲಾ ಗೊತ್ತಿದೆ... ಆದರೆ ಸರ್ಕಾರಕ್ಕೆ ಇದು ಸವಾಲ್ ಅಲ್ಲ. ಇದು ಬರೀ ಒ೦ದು ಸುದ್ದಿ ಅಷ್ಟೆ.

Anonymous ಅಂತಾರೆ...

ಜೀವನ್ ಆಸ್ಥಾ, ಜೀವನ್ ಆನ೦ದ್.. ಇನ್ನೂ ಬೇಕಾದಷ್ಟು ಪಾಲಿಸಿಗಳಿಗೆ ಹಿ೦ದಿ ಹೆಸರುಗಳೇ ಇವೆ. ಇದಕ್ಕೆಲ್ಲ ಸಾಮಾನ್ಯ ಜನರು ಮು೦ದೆ ಬ೦ದು ಸರ್ಕಾರದ ಮೇಲೆ ಸಕ್ಕತ್ ಒತ್ತಡ ತರಬೇಕು.

ನೆನ್ನೆ ಚೆಕ್ಕನ್ನು ಪೂರ್ತಿಯಾಗಿ ಕನ್ನಡದಲ್ಲಿ ಬರೆದು ಎಲ್.ಐ.ಸಿ ಪಾಲಿಸಿ ಕಟ್ಟಲು ಹೋದಾಗ, ಮೊದಲು ನಿರಾಕರಿಸಿದರು, ದಬಾಯಿಸಿದ ಮೇಲೆ ಬಾಯಿ ಮುಚ್ಕೊ೦ಡು ತೊಗೊ೦ಡ್ರು. (ಕನ್ನಡ ಸೇನೆ ಬ೦ದುಬಿಡ್ತಾರೆ ಅ೦ತ ಮಾತಾಡ್ಕೊತಿದ್ದದ್ದನ್ನು ಕೇಳಿಸಿಕೊ೦ಡೆ) :)

NDTV ನಲ್ಲಿ ಹಿ೦ದಿ ಮಧ್ಯ ಗುಜರಾತಿ ಜಾಹೀರಾತುಗಳು ಬರಕ್ಕೆ ಶುರುವಾಗಿವೆ. India Infoline ಜಾಹೀರಾತು ಗುಜರಾತಿಯಲ್ಲಿ ಬರ್ತಿವೆ. ರಾಷ್ಟ್ರೀಯ ಇ೦ಗ್ಲೀಷ್ ನ್ಯೂಸ್ ಚಾನೆಲ್ ಗಳಲ್ಲಿ ಇ೦ಗ್ಲೀಷ್ನಲ್ಲೇ ಜಾಹೀರಾತು ಬರೋಹಾಗೆ ಒತ್ತಡ ತರಬೇಕು.

Anonymous ಅಂತಾರೆ...

"ಜನಸಾಮಾನ್ಯರ ಜೀವವಿಮಾ ಯೋಜನೆ"
ಇದನ್ನು ತೊಗೊ೦ಡು ಹೋಗಿ ಹಿ೦ದಿ ಜನರ ಗ೦ಟಲಲ್ಲಿ ತುರುಕಿದರೆ ಹೇಗಿರುತ್ತದೆ?

"जनसामान्यरा जीवविमा यीजने"
हळ्ळिगाडिन स्व०त जमीनिल्लद बडकुटु०बगळा भद्रतेगागि भारता सर्कारा मत्तु भारतीय जीबा विमा.....

hamsanandi ಅಂತಾರೆ...

ಸರ್ಕಾರದ ಜಾಹೀರಾತೊಂದೇ ಅಲ್ಲಾ ರೀ :(

ಟೀವೀಲಿ ಬರೋ ಪ್ರತೀ ಜಾಹೀರಾತೂ ಹೀಗೆ - ಕನ್ನಡ ಪದ ಹಿಂದಿ ಗ್ರಾಮರ್ - ಕೇಳಿ ಕೇಳಿ ಸಾಕಾಗಿ ಹೋಗಿದೆ.

ಅಲ್ವಾ ಒಳ್ಳೇ ವಿಚಾರಾ? ಹೈನಾ ಅಚ್ಛೀ ಬಾತ್?

Anonymous ಅಂತಾರೆ...

ಇಸ್ಟೇ ಅಲ್ಲ ಗುರು.. ಗಣ ರಾಜ್ಯೋಸ್ತ್ಸವದ ದಿನ, ಟಿ. ವಿ. ೯ ನಲ್ಲಿ ಹಿಂದಿಯ ಕಾಮೆಂಟರಿನ ಅನುವಾದ ಕೂಡ ಸರ್ಯಾಗಿ ಮಾಡಲಿಲ್ಲ... ಹಿಂದಿ ಎಲ್ಲರಿಗೂ ಬರುತ್ತೆ ಅನ್ನೋ ಮೂಢ ನಂಬಿಕೆ... ಅದಿರಲಿ ಎಲ್ಲಾ ಇಂಗ್ಲಿಷ್ ಚಾನೆಲ್ಗಳು ಕೂಡ ಇಂಗ್ಲಿಷ್ ಅನುವಾದ ಮಾಡದೇ ಬಹುತೇಕ ಹಿಂದಿಯಲ್ಲೇ ಇತ್ತು... ಇವರ ಪ್ರಕಾರ ಭಾರತೀಯನಾದರೆ ಹಿಂದಿ ಬರಲೇ ಬೇಕು... ಇಲ್ಲವ ಹಿಂದಿ ಕಲಿ ಬೇಕು ಅನ್ನೋ ಹುನ್ನಾರ.. ಹಿಂದಿ ಬಾರದವರು ತಮ್ಮ ದೇಶದ ಬಗ್ಗೆ ತಿಳ್ಕೊಲ್ಲೋದು ಹೇಗೆ ಅಂತ ಈ ಚಾನೆಲ್ಗಳನ್ನು ಖಂಡಿಸಿದಕ್ಕೆ...ನನ್ನ ಅಕ್ಕ ಪಕ್ಕದಲ್ಲಿದ್ದವರು...ತಿಳ್ಕೋ ಬೇಕಾದ್ರೆ ಹಿಂದಿ ಕಲೀಲಿ.... ಹಳ್ಳಿ ಜನ ಇವನೆಲ್ಲಾ ತಿಳ್ಕೊಂಡು ಏನ್ ಮಾಡಬೇಕಾಗಿದೆ ಅನ್ನೋ ಪ್ರತಿಕ್ರಿಯೆ ಸಿಕ್ತು ಗುರು... ಕನ್ನಡಿಗರು ಎಷ್ಟರ ಮಟ್ಟಿಗೆ ಬ್ರೈನ್ ವಾಶ್ ಆಗಿದ್ದಾರೆ ಅನ್ನೋದಕ್ಕೆ ಇದಕ್ಕಿಂತ ಒಳ್ಳೆ ಉದಾಹರಣೆ ಬೇಕಾ ಗುರು...

ನೀವು ಹಾಕಿರೋ ಜಾಹೀರಾತು ಒಂದೇ ಅಲ್ಲ ಗುರು... ರಾಜಕಾರಣಿಗಳನ್ನ 'ರಾಹುಲ್ ಜಿ' , 'ಅಡ್ವಾಣಿ ಜಿ' ಅನ್ನೋ ಕೆಟ್ಟ ಅಭ್ಯಾಸ ಬೇರೆ ಇದೆ ಈ ಹಿಂದಿ ಅಡಿ ಆಳುಗಳಿಗೆ.... ಇನ್ನು ಕೆಲವು ರಾಜಕಾರಣಿಗಳು ( ರೋಶನ್ ಬೈಗ್, ಜಾಫರ್ ಶರೀಫ್ ) ಸಂಕ್ರಾಂತಿ ಶುಭಾಶಯನ ತಮಿಳಲ್ಲಿ ಹಾಕ್ಸಿದ್ರು ... ಜಯ ಕರ್ನಾಟಕ ಅನ್ನೋ ಕನ್ನಡ ಸಂಘ ದೊಮ್ಲುರ್ ನಲ್ಲಿ 'Happy Pongal' ಅಂತ ಹಾಕ್ಸಿದ್ರು... ಮೊನ್ನೆ 'West of Chord Road' ನಲ್ಲಿ ತೆಲುಗು ಬ್ಯಾನರ್ ನೋಡ್ದೆ .... ಇವೆಲ್ಲಾ ನೋಡ್ತಾ ಇದ್ರೆ ಕರ್ನಾಟಕದಲ್ಲೇ ತಮ್ಮ ಮನೆ ಮಗಳಾದ ಕನ್ನಡವನ್ನು ಮೂಲೆಗೆ ಕೂಡಿಸಿ ... ಬೇರೆ ಭಾಷೆಗಳಿಗೆ ಮಣೆ ಹಾಕೋ ಜನರೇ ಹೆಚ್ಚಾಗ್ತಾ ಇದ್ದಾರೆ ಗುರು...

ಈ ರಾಷ್ಟ್ರೀಯ ಪಕ್ಷಗಳು ಹಿಂದಿ ಅನ್ನೋ 'High Command' ಮುಂದೆ ಹಲ್ ಗಿನ್ಜ್ಕೊಂಡು ತಮ್ಮ ತಾಯಿ ನುಡಿಯ ಮಾರಣ ಹೋಮ ನಡಸ್ತಾ ಇದ್ದಾರೆ... ಇವರು ಅಧಿಕಾರಕ್ಕೊಸ್ಕರ ಹೆತ್ತಮ್ಮನನ್ನೇ ಮಾರೊಕ್ಕು ಹೇಸಲ್ಲ ಗುರು... ಕನ್ನಡದ ಪ್ರಾಂತೀಯ ಪಕ್ಷ ಒಂದೇ ಇದಕ್ಕೆಲ್ಲಾ ಪರಿಹಾರ...

ಕ್ಲಾನ್ಗೊರೌಸ್

Anonymous ಅಂತಾರೆ...

idella enu, monne vijaya karnatakadalli ondu advertisement bandittu. adu RASHTRIYA POLIO LASIKA KARYAKRAMA.. maja enappa andre.. kannada barahadali, Poli "HANI" anno badalu "HAANI" endu baredide.. entaha vibhinna artha kodutte ondu spelling mistake!!! idu front page nalli print agide...

Akshaya ಅಂತಾರೆ...

ayyo nammorige kannadabhimaana barbeku ree. tumba nanna snehitara mane nalli nodidini, english nalli matadtare, appa amma kuda english nalle maklanna matadistare eno england nalli hutti belada hange
hingadre henge.
henge tili helodu ee murkharanna.
germany france nalli enu andkolalla, avrige avra bhashe andre estu hemme andre english nalli matadora kandre avrige ista agalla
nammorige yake hinge.
kolarakke hodre keluru kannada bandrunu telugu nalli matadtirtare
thu

Anonymous ಅಂತಾರೆ...

ನಾವೆಲ್ಲ ಕಂಪ್ಯೂಟರ್ನಲ್ಲಿ ಎಷ್ಟು ಬಾಯಿ ಬಡಿದುಕೊಂಡರೂ ಪ್ರಯೋಜನ ಏನೂ ಆಗಲ್ಲ. ನಮಗೆಲ್ಲ ಬಹಳ ಮುಖ್ಯವಾದ ಈ ಬಗೆಯ ವಿಷಯಗಳನ್ನು ಬಗೆಹರಿಸುವ ವ್ಯಕ್ತಿ ಅಥವಾ ಪದವಿಯಲ್ಲಿರುವವರಿಗೆ ತಲುಪಿಸಬೇಕು. ನಂತರ ಒತ್ತಡ ಹಾಕಿ ಬಗೆಹರಿಸಿಕೊಳ್ಳಬೇಕು ಅಲ್ವೇ?

ಅನಂತ ಕೃಷ್ಣ

Anonymous ಅಂತಾರೆ...

ಗ್ರಾಮ ಸಡಕ್ ಯೋಚಜೆ, ಸರ್ವ ಶಿಕ್ಷಣ ಅಭಿಯಾನ, ರೋಜ್‌ಗಾರ್‍, ಇದು, ಮುಂತಾದ ಎಲ್ಲವೂ ಕೇಂದ್ರ ಸರಕಾರದ ಹಿಂದಿ ಹೆಸರಿನ ಬಳಕೆಗಳು.

ಇದಕ್ಕೆ ಮೂಲಕಾರಣ, ಕನ್ನಡದಲ್ಲೇ ಪದಗಳನ್ನು ಹುಟ್ಟಿಸಲು, ರಚಿಸಿಲು ಬೇಕಾದ ತಕ್ಕಮಟ್ಟಿನ ಆರಯ್ಯುವಾಗಲಿ, ಕಟ್ಟಳೆಗಳಾಗಲಿ, ದಾರಿ ತೋರುವ/ಮಾರ್ಗಸೂಚಿ ಹೊತ್ತಗೆಗಳಾಗಲಿ, ತಕ್ಕ ನಿಘಂಟುಗಳಾಗಲಿ ಇಲ್ಲದಿರುವುದು.

ಕನ್ನಡ ನುಡಿಯ ಒಳಹುಗಳ ಬಗ್ಗೆ ಸರಿಯಾದ ಆರಯ್ಯು/ಸಂಶೋಧನೆ ಇಂದಿಗೂ ನಡೆಯುತ್ತಿಲ್ಲ. ನಮ್ಮ ಪಾರಿಭಾಷಿಕ ಪದಗಳೆಲ್ಲ ಸಂಸ್ಕೃತ, ಹಿಂದಿ, ಪಾರಸಿ ಮತ್ತು ಇಂಗ್ಲಿಶ್ ಪದಗಳಿಂದ ತುಂಬಿಕೊಂಡಿದೆ.

’ಆಮ್ ಆದ್ಮಿ ಬೀಮಾ ಯೋಚನೆ’ಎಂಬ ಸಾಲನ್ನು ’ಸಾಮಾನ್ಯ ಮನುಶ್ಯನ ವಿಮೆ ಯೋಜನೆ’ ಎಂದು ಸಂಸ್ಕೃತದಲ್ಲಿ ಹೇಳಿದರೂ ಅದು ಕನ್ನಡವಲ್ಲ.

ಕನ್ನಡದಲ್ಲಿ insurance/ವಿಮೆ, common/ಸಾಮಾನ್ಯ, man/ಮನುಶ್ಯ, plan/ಯೋಚನೆ ಈ ನಾಲ್ಕು ಪದಗಳಿಗೂ ಪದಗಳನ್ನು ಹುಟ್ಟುಹಾಕಿಲ್ಲ, ರಚಿಸಿಲ್ಲ. ನಾಲ್ಕನ್ನು ಇಲ್ಲ ಸಂಸ್ಕೃತದಿಂದ, ಇಲ್ಲವೇ ಮತ್ತೊಂದರಿಂದ ಎರವಲು ಪಡೆಯಲೇ ಬೇಕು.

ಆದುದರಿಂದ ನನಗೆ ’ಆಮ್ ಆದ್ಮಿ ಬೀಮಾ ಯೋಚನೆ’ಎಂದು ಹಾಗೇ ಬಳಸಿದ ಸರಕಾರದ ಕಷ್ಟ ಅರ್ಥವಾಗುತ್ತದೆ.

ಕನ್ನಡಕ್ಕೆ ಬೇಕಾದ ಕನ್ನಡದ್ದೆ ಪದಗಳು ಎಲ್ಲಿವೆ? ಎಲ್ಲದಕ್ಕೂ ಸಂಸ್ಕೃತದ ಕಡೆ ನೋಡೋದು ತಾನೆ. ಈಗ ಹಿಂದಿ ಕಡೆ ನೋಡಿದ್ದಾರೆ ಸರಕಾರವಷ್ಟೆ!

Anonymous ಅಂತಾರೆ...

ಅಲ್ಲಾ ಗುರು ಒಂದು "product"ಆಗಿ "market" ಮಾಡುವಾಗ ಹೆಸರು ಮೇಲೆ ಅರ್ಥ ಆಮೇಲೆ ಆಗುತ್ತೆ ....

ಹಾಗಾದ್ರೆ, ನಮ್ ನಿತ್ಯದ ಭಾಷೆಲಿ ಎಷ್ಟು ಹಿಂದಿ ಪದಗಳನ್ನ ಬಳೆಸುತ್ತೇವೆ, ಅವುನ್ನೆಲ್ಲಾ ಕನ್ನಡಕ್ಕೆ ಅನುವಾದಿಸೋಣವಂತೆ ... ಪಾನಿ-ಪೊರಿಯನ್ನ ನೀರಿನ-ಚಪಾತಿ ಅನ್ನೋಣವೇ? ಚನ್ನ-ಮಸಾಲಾನ ಕಾಳಿನ-ಕಾರ ಅನ್ನೋಣವೇ? ಗೋಬಿ-ಮಂಚೂರಿಯನ್ - ಹೂಕೋಸಿನ ವಗ್ಗರ್ಣೆ ಅನ್ನೋಣವೇ?? ಭೇಲ್-ಪುರಿಯನ್ನ ಕಾರಸೇವೆ-ಕಡ್ಲೆಪುರಿ ಅನ್ನೋಣಾ? ಪಾವ್-ಭಾಜಿಯನ್ನ ಏನ್ ಅನ್ನಬೇಕು? ಇವೆಲ್ಲಾ ಹಿಂದಿ ಹೇರಿಕೆ ಅಲ್ವಾ ಗುರು? ಇವುಗಳಿಗೂ ಕನ್ನಡದ ಪರ್ಯಾಯ ಪದಗಳಿವೆ ಆದ್ರೆ ಯಾಕೆ ಬದಲಾಯಿಸದೆ ಬಳೆಸುತ್ತೇವೆ? ಹಾಗಾದ್ರೆ, ನಮ್ಗೆ ಯಾವುದು ಅನುಕೂಲವೋ ಅದು ಇರ್ಲಿ ಬೇರೆದು ಬೇಡ ಅನ್ನೋ ರೀತಿ ಸರೀನಾ ಗುರು? ಯಾಕೀ ಹಿಪೊಕ್ರೆಟಿಕ್ ಸ್ವಭಾವ ನಮ್ಮಲ್ಲಿ?

"ಯಹಿ ಹೈ ರೈಟ್ ಚಾಸ್ ಬೇಬಿ" ನೆನಪಿದೆಯ ಗುರು "ಇದುವೆ ಸರಿಯಾದ ಆಯಕೆ ಮಗು" ಅನ್ನಬೇಕಿತ್ತೇನು? "washing power ನಿರ್ಮ" "ಬಟ್ಟೆ ವಗೆಯುವ ಪುಡಿ ನಿರ್ಮ" ಆಗ್ಬೇಕಿತ್ತೇನು? ದಿನ-ನಿತ್ಯದ ಬಳಿಕೆಗೂ ಒಂದು ಸರ್ಕಾರದ ಯೋಜನೆಗೂ ಈ ತಾರತಮ್ಯ ಯಾಕೆ ಗುರು? ಅತ್ತೆಗೊಂದು ನ್ಯಾಯ, ಸೊಸೆಗೊಂದು ನ್ಯಾಯ ಯಾಕೆ ಗುರು?

ಅಲ್ಲ, ವಿಚಿತ್ರ ಅನ್ಸೋದು ಅಂದ್ರೆ ಇದು Englishನಲ್ಲಿ ("common man's life insurance" or whatever) ಇದ್ದಿದ್ರೆ ಯಾರೂ ಕೈ ತೋರುಸ್ತಾ ಇರ್ಲಿಲ್ವೇನೋ ಗುರು!!! ಹಿಂದಿ ಅಂದ ತತ್-ಕ್ಷಣ ಮೈ ಚುರ್ ಅನ್ನುತ್ತೆ!! ನಮ್ಮ ಚಿಕ್ಕಮನಿಗಿಂತ(ಹಿಂದಿ)ಪರದೇಶದ ಬಿಳಿಯಮ್ಮ(ಆಂಗ್ಲ) ಮೇಲಾಯ್ತೆ? ಎಲ್ಲಿ ನೋಡಿದರೂ (ಶಾಲೆಗಳಲ್ಲಿ, ಉಧ್ಯಮಗಳಲ್ಲಿ, ಜನ ಸಾಮಾನ್ಯರಲ್ಲಿ) ಬರೀ ಆಂಗ್ಲ ಪ್ರಭಾವ ಆಗ್ತಾ ಇರೂದನ್ನ ಖಂಡಿಸೋಣ ... ಆಂಗ್ಲ ಹೇರಿಕೆ ಬಗ್ಗೆ ಸ್ವಲ್ಪ ಪ್ರತಿಭಟಿಸೋಣವಂತೆ, ಬರೀ ಹಿಂದಿ ಬಗ್ಗೆ ಯಾಕೆ??

ಪ್ರೀತಿಯ,
ಕನ್ನಡದವ

Anonymous ಅಂತಾರೆ...

ಶ್ರೀಯುತ ಕನ್ನಡಿಗ ಹೆಸರಿಟ್ಟುಕೊಂಡು ಬರೆದವರೇ,

ಕನ್ನಡದಲ್ಲಿ ಇರೋ ಹಿಂದಿ ಪದಗಳನ್ನೆಲ್ಲಾ ಕನ್ನಡಿಸಬೇಕು ಅನ್ನುವ ನಿಮ್ಮ ನೋಟ ಸರಿಯಿಲ್ಲ. ಯಾವ ಪದಗಳು ಕನ್ನಡಿಗರ ಬದುಕಿನಲ್ಲಿ ಹಾಸುಹೊಕ್ಕಾಗಿ ಬಳಕೆಯಲ್ಲಿದೆಯೋ ಅದು ಯಾವ ಮೂಲದಿಂದ ಬಂದಿದ್ದರೂ ಕನ್ನಡ ಪದಗಳೇ ಆಗಿಬಿಡುತ್ತವೆ. ಹಾಗಾಗಿ ಕನ್ನಡದಲ್ಲಿ ಪರಭಾಷಾ ಪದಗಳು ಇರಬಾರದು ಅನ್ನೋದು ಸಿನಿಕತನ ಆಗುತ್ತೆ. ನೀವು ಹ್ಯಾಗೆ ಹೇಳ್ತಿದೀರಾ ಅಂದ್ರೆ, ಕನ್ನಡದಲ್ಲಿ ಒಂದೇ ಒಂದು ಹಿಂದಿ ಪದ ಇದ್ದರೂ ಸಾಕು, ಹಿಂದಿಯ ಎಲ್ಲಾ ಪದಗಳನ್ನೂ ಒಪ್ಪಬೇಕು ಅನ್ನೋಥರಾ. ಇದರರ್ಥ ನಿಮಗೆ ಭಾಷೆಗಳ ಸ್ವರೂಪದ ಬಗ್ಗೆ ಬಿಡಿಗಾಸಿನ ಅರಿವೂ ಇಲ್ಲ ಅಂತ.
ಇಂಥದೇ ವಾದ ಯಹೀ ಹೈ ರೈಟ್ ಚಾಯ್ಸ್ ಬೇಬಿ ಅನ್ನೋ ಥರದ ಜಾಹೀರಾತುಗಳ ಬಗ್ಗೆ ಮಾಡಿದೀರ. ಕನ್ನಡಕ್ಕೆ ಅವು ಬದಲಾಗಿ ಬರೋದೆ ಸರಿಯಾದ್ದು ಗುರು! ಹಾಗೇ ಪಾನೀಪುರಿ, ಬೇಲ್ ಪುರಿ ಥರದ ಪರಭಾಷಾ ಪದಗಳ ಬಗ್ಗೆ... ಆ ವಸ್ತುಗಳು ನಮ್ಮ ನಾಡಿನ ಮೂಲದ್ದಲ್ಲದೆ ಹೊರನಾಡಿನಿಂದ ನಮಗೆ ಬಂದದ್ದಾದ್ದರಿಂದ ಆಯಾ ಹೆಸರಿಂದಲೇ ಕನ್ನಡಿಗರಿಗೆ ಪರಿಚಿತವಾಗಿರುತ್ತವೆ. ಉದಾಹರಣೆಗೆ ಬಸ್, ಕಾರ್, ವ್ಯಾನ್, ಕಾಫಿ... ಇತ್ಯಾದಿ. ಇವು ಕನ್ನಡಕ್ಕೆ ಬರುವಾಗ ಬಸ್ಸು, ಕಾರು, ವ್ಯಾನು, ಕಾಪಿ(ಫಿ)ಯಾಗಿ ಬದಲಾಗುತ್ತವೆ. ಇದು ಭಾಷೆಗಳು ಬೆಳೆಯೋ ಪರಿ. ಹಾಗೆ ಹೊರನಾಡಿನ ಮೂಲದ ವಸ್ತುಗಳು ನಮಗೆ ಪರಿಚಯವಾಗುವ ಹಂತದಲ್ಲೇ ಕನ್ನಡದ ಹೆಸರು ಪಡೆದುಕೊಂಡು ಬಂದುಬಿಟ್ಟರೆ ಅದೇ ಬಳಕೆಗೆ ಬರುತ್ತದೆ. ಇಲ್ಲದಿದ್ದರೆ ಮೂಲದಂತೆಯೋ, ಮೂಲದಿಂದ ಭಿನ್ನವಾಗಿ ಕನ್ನಡದ ನಾಲಗೆಗೆ ಹೊಂದುವಂತೆಯೋ ಬದಲಾಗಿ ಬರುತ್ತದೆ. ಇದರಲ್ಲಿ ಯಾವ ಹಿಪೊಕ್ರಸಿಯೂ ಇಲ್ಲ. ಇರೋದು ವಾಸ್ತವವಾದ.
ಕನ್ನಡದಲ್ಲಿ ಹಿಂದಿ ಪದಗಳಿವೆ ಎಂಬ ಕಾರಣದಿಂದ ಹಿಂದಿಯ ಎಲ್ಲಾ ಪ್ರಮಾಣದ ಹೇರಿಕೆಯನ್ನೂ ಒಪ್ಪಬೇಕು ಅನ್ನುವುದು ವಿತಂಡವಾದ ಅನ್ನದೆ ವಿಧಿಯಿಲ್ಲ. ಇನ್ನು ಹಿಂದಿ ಚಿಕ್ಕಮ್ಮ, ಇಂಗ್ಲಿಷ್ ಬಿಳಿಯಮ್ಮ ಅನ್ನೋ ಮೂರ್ಖತನಾ ಕೈಬಿಡಿ. ಕನ್ನಡಿಗರಿಗೆ ಹಿಂದಿ, ಇಂಗ್ಲಿಷ್ ಎಲ್ಲವೂ ನಮ್ಮದಲ್ಲದ ನುಡಿಗಳೇ. ಯಾವುದರಿಂದ ನಮ್ಮ ಏಳಿಗೆಗೆ ಅನುಕೂಲವೋ ಅದನ್ನು ಅಗತ್ಯವಿರೋ ಪ್ರಮಾಣದಲ್ಲಿ ಬಳಸೋದು ಜಾಣತನ ಮತ್ತು ಇಂದಿನ ಅಗತ್ಯ. ಜ್ಞಾನ ವಿಜ್ಞಾನ ತಂತ್ರಜ್ಞಾನಗಳ ಕಲಿಕೆ, ದುಡಿಮೆಗೆ ಇಂಗ್ಲಿಷ್ ಅನುಕೂಲಕರವಾಗಿರೋದ್ರಿಂದಲೇ ಅದಕ್ಕೆ ಅಷ್ಟು ಮಾನ್ಯತೆ. ಹಿಂದಿ ಯಾಕೆ ಕಲೀಬೇಕು ಅಂತಾ ಒಂದು ಕಾರಣ ಕೊಡಿ ನೋಡೋಣ. ಚಿಕ್ಕಮ್ಮ ಅಂತೆ ಬದನೇಕಾಯಿ. ಹಾಗಾರೆ ಕಲೀರಿ ತಮಿಳನ್ನು, ತೆಲುಗನ್ನು, ಮರಾಠಿನ, ಬೆಂಗಾಲಿನಾ. ಇವೆಲ್ಲಾ ಏನು ಶತ್ರುಗಳ ಭಾಷೇನಾ? ಹಿಂದಿ ಒಪ್ಪುವುದರಿಂದ ಕನ್ನಡಿಗರಿಗೆ ಆಗೋ ಹಾನಿಗಳ ಬಗ್ಗೆ ಇದೇ ಏನ್ ಗುರುವಿನಲ್ಲೇ ನೂರಾರು ಬರಹಗಳು ಬಂದಿವೆ. ಮೊದಲು ಅದನ್ನು ಓದಿಕೊಳ್ಳಿ... ಹೇರಿಕೆ ಯಾರು ಮಾಡುದ್ರೂ ಹೇರಿಕೇನೆ. ಅದನ್ನು ಏನ್ ಗುರುವಿನಲ್ಲಿ ಕಾಲದಿಂದ ಕಾಲಕ್ಕೆ ಬರೀತಾನೆ ಬಂದಿದಾರೆ.
ಅತ್ತೆ ಸೊಸೆ ಅಂತೆ, ಸುಮ್ನೆ ಸೆಂಟಿಮೆಂಟಲ್ ಡೈಲಾಗ್ ಹೊಡೀಬೇಡಿ. ಇಂಗ್ಲಿಷ್ ವಿರೋಧಿಸ್ತೀರಾ? ನಿಮ್ಮದೇ ಶೈಲಿಯಲ್ಲಿ ಹೇಳ್ತೀನಿ, ಹಾಗಾದ್ರೆ ಒಂದೂ ಇಂಗ್ಲಿಷ್ ಪದ ಬಳಸದೆ ಒಂದೇ ಒಂದು ದಿನಾ ಬದುಕಿ ನೋಡೋಣ. ನಿಮ್ಮ ಮಕ್ಕಳಿಗೆ ಇಂಗ್ಲಿಷ್ ಕಲಿಸದೇ ಇರಕ್ ಆಗುತ್ತಾ ನಿಮ್ ಕೈಲಿ?
ಹಿಂದಿಯಿಂದ ನಮ್ಮ ಅಸ್ತಿತ್ವಕ್ಕೆ ತೊಂದರೆ ಆಗ್ತಿದ್ಯೋ ಇಂಗ್ಲಿಷಿಂದಲೋ ಅಂತ ಯೋಚಿಸಿನೋಡಿ. ನಮಗೇನು, ಎಲ್ಲಾ ಒಂದೆ, ನಮ್ಮ ಜನಾಂಗಕ್ಕೆ ಅನುಕೂಲ ಯಾವುದರಿಂದ ಎಷ್ಟಾಗುತ್ತೋ ಅಷ್ಟು ಬಳಕೆ ಮಾಡ್ಕೊಂಡು ಮುಂದುವರೀಬೇಕು ಅನ್ನೋದು ಸರಿಯಾದ್ದು.

ನಮಸ್ಕಾರ

ತಿಮ್ಮಯ್ಯ

Anonymous ಅಂತಾರೆ...

ಪ್ರೀತಿಯ ತಿಮ್ಮಯ್ಯ,

ನೀವ್ ಹೇಳಿರೂದು ಸರ್ಯಾಗಿದೆ, ಚಿಂದಿ! ಇದನ್ನೆ ನಾನೂ ಹೇಳಿದ್ದು! subjective acceptance ಅಥ್ವಾ crudeಆಗಿ opportunism ಅನ್ಬಹುದು ಅನ್ನಿ! ನಮಗೆ ಅನುಕೂಲವಾದದನ್ನ ಇದ್ದ ಹಾಗೆ ಸ್ವೀಕರಿಸೋದು ಅಂತ ಒಪ್ಪುದ್ರಲ್ಲ! ನಾವು ಯಾವುದನ್ನ ಸ್ವೀಕರಿಸುತ್ತೀವೋ ಅದು ವಾಸ್ತವವಾಗುತ್ತೆ! ಸ್ವೀಕರಿಸಿದರೆ "ಆಮ್ ಆದ್ಮಿ" ಕೂಡ ವಾಸ್ತವವಾಗುತ್ತೆ! ಸಮಯ ಕೊಟ್ರೆ ಸಾಕು! ಈ ಸೌತೆಕಾಯಿ, ಬದನೆಕಾಯಿ, ಬೆಂಡೆಕಾಯಿ ವಿಷಯಗಳು ಆಮೇಲೆ!

ಇದು ಒಂದು ರಾಜ್ಯ ಸರ್ಕಾರದ ಯೋಜನೇ ಆಗಿದ್ರೆ ನಾನು ಈ "ವಿತ್ತಂಡ"(ನಿಮಗನಿಸೋ)ವಾದ ಮಾಡ್ತಾನೇ ಇರ್ಲಿಲ್ಲ ಬಿಡಿ! ಇದನ್ನೇ ಹೇರಿಕೆ ಅಂತ ಹೇಳೋದೆ ನನ್ನ ಪ್ರಕಾರ ಸೌತೆಕಾಯಿ/ ಬದನೆಕಾಯಿ / "ಟೊಮೇಟೋ" / "ಗೋಬಿ", ನಿಮಗೆ ಯಾವ್ ತರ್ಕಾರಿ ಬೇಕೊ ನೀವೇ ಆಯ್ಕೊಳಿ!!!

ನನಗೆ ಕನ್ನಡ (ನನ್ನ ತಾಯಿ) ಸಕ್ಕತ್ತಾಗಿ ಬರುತ್ತೆ! ಜೊತೆಗೆ ತಮಿಳು, ಹಿಂದಿ ಕೂಡ ಬೊಂಬಾಟಾಗಿ ಬರುತ್ತೆ (ಬರ್ಯಕ್ಕೆ, ಓದಕ್ಕೆ)! ತೆಲಗು, ಗುಜ್ಜು, ಪಂಜಾಬಿ ಚೆನ್ನಾಗೇ ನಿಬಾಯಿಸುತ್ತೇನೆ! ಕೊನೆಪಕ್ಷ, ಹಿಂದಿ "ಹೇರಿಕೆ" ಇಲ್ದೆ ಇದ್ರೆ ಕಲಿತಾಇರ್ಲಿಲ್ವೇನೋ! ಇರ್ಲೀ! ಹಿಂದಿ ಇಂದಾಗಿ ನನಗೆ ಹಲವಾರು ಉತ್ತರ ಭಾರತದ ಭಾಷೇಗಳು ಅರ್ಥ ಮಾಡ್ಕೊಳ್ಳೊದು ನಿಮಗೂ ಸುಲಭ ಆಗಿದೆ, ಅಲ್ವಾ?

ತಮಾಷೇ ಅಂದ್ರೆ "ಹೇರಿಕೆ" ಇಲ್ದೆ ಇದ್ರೆ ಕೆಲವರಿಗೆ ಕನ್ನಡವೂ ಬೇಡ ಬಿಡಿ! ಅಮೇರಿಕಾದಲ್ಲಿ (ಉದಾಹರಣೆಗೆ) "ಕನ್ನಡಿಗ" ಅಪ್ಪ ಅಮ್ಮಂದಿರು ಮಕ್ಕಳಿಗೆ ಕನ್ನಡವನ್ನ "ಹೇರಿಸದೆ" ಮಕ್ಕಳಿಗೆ ಪಾಪ ಕನ್ನಡವೇ ಬರೋಲ್ಲ! ಪಾಪ!

ಇನ್ನು, ಹಿಂದಿ ಯಾಕೆ ಕಲೀಬೇಕು? ಕಲ್ತ್ರೆ ಏನ್ ತಪ್ಪು ಅಂತ ನಾನ್ ಕೇಳೋದು! ಮೇಲೆ ಕೆಲವು hints ಸಿಕ್ಕಿರಬೇಕು! ಮೊದಲು, ಕಲೀಲೇ ಬೇಕು ಅಂತ ನಾನು ಯಾವುದನ್ನೂ ಹೇಳಲ್ಲ, ಆದರೂ ನನ್ನ ಮಕ್ಕಳಿಗೆ ಕನ್ನಡ ಮಾತ್ರ "ಹೇರಿಸುತ್ತೇನೆ"! ಮಿಕ್ಕಿದ್ದೆಲ್ಲಾ ನಿಮಗೆ ಇಷ್ಟವಿದ್ದಲ್ಲಿ (ಅನುಕೂಲದ/ಪ್ರಯೋಜನದ ವಿಷಯ ಆಮೇಲೆ)ಕಲೀರಿ! ಆದರೂ ಪರದೇಶಕ್ಕೆ ಬಂದಾಗ ನಾವೆಲ್ಲಾ ಭಾರತಿಯರು ಒಂದು "ನಮ್ಮ" ಭಾಷೆಯಲ್ಲಿ ಮಾತಾಡೊ ಅನುಭವ, ಮಜ, ಗಮ್ಮತ್ತು ಈ ಆಂಗ್ಲ ಭಾಷೆಯಲ್ಲಿ ದೂರದೂರಕ್ಕೊ ಇಲ್ಲ, ಅಲ್ಲವೆ? ಬೇರೆಲ್ಲಾ ಭಾರತೀಯರ ಜೊತೆ ನಮ್ಮದೇ ಆದ ಭಾರತೀಯ ಭಾಷೆ ಸಕ್ಕತ್ ಮಜ ಇರುತ್ತೆ ಅಲ್ವಾ ಗುರು! ನನ್ನ ಪ್ರಕಾರ ಆಂಗ್ಲ ಎಷ್ಟೇ ಆದ್ರೂ ಪರಭಾಷೆ, ಪರದೇಶಿಗಳ ಜೊತೆ ಪರ ಭಾಷೇ, ಬರೀ ವ್ಯವಹಾರಿಕೆಗೆ ಸೀಮಿತ! ಕನ್ನಡಿಗರೇ ಇದ್ದಾಗ ಕನ್ನಡ ಬಿಟ್ಟು ಬೇರಿಲ್ಲ (ಮಸಾಲ ಆಂಗ್ಲಾ ನಮ್ಮ second nature ಆಗೋಗಿದೆ ಬಿಡಿ)!

ಬಿಡಿ ಗುರು! ನಾನು ವಾದ ಮಾಡ್ತಾ ಇಲ್ಲ, ನನಗೆ ಸರಿ ಅನ್ಸಿದ್ದನ್ನ ಹೇಳ್ತೇನೆ, ನಿಮಗೆ ಅದು "ಬದನೇಕಾಯಿ" ಆದ್ರೆ ನನಗೆ ಅದು "ಬದನೇಕಾಯಿ", ಇಬ್ಬರೂ ಸೇರಿ ಬದನೆಕಾಯಿ ವ್ಯಾಪಾರ ಮಾಡೋಣ ಬನ್ನಿ, ಕನ್ನಡದಲ್ಲೆ :)

ಪ್ರೀತಿಯ,
ಕನ್ನಡದವ

Anonymous ಅಂತಾರೆ...

ಕನ್ನಡದವ...ರೆ ಮುನುಸ್ಕೊಬೇಡಿ,

ಬದನೆಕಾಯಿ ವ್ಯಾಪಾರ ಮಾಡೋಕೆ ಕೊಟ್ಟಿರೋ ಆಹ್ವಾನಕ್ಕೆ ಧನ್ಯವಾದಗಳು.

ಆದ್ರೆ ಇದರಿಂದ ಹಿಂದಿಯಲ್ಲಿ ಆಮ್ ಆದ್ಮಿ ಅಂತ ಬಳ್ಸೋದನ್ನು ಸಮರ್ಥಿಸಿಕೊಳ್ಳಕ್ ಆಗಲ್ಲ. ನೀವಂದಂತೆ ಬಳುಸ್ತಾ ಬಳಸ್ತಾ ಇದೂ ಅಭ್ಯಾಸ ಆಗುತ್ತೆ ಅಂದಂತೆ ಈ ಜಾಹೀರಾತನ್ನು ಹಾಕಿರೋದು ಭಾಷೆ ಕಲ್ಸಕ್ಕೋ? ಜನಕ್ಕೆ ಮಾಹಿತಿ ತಲುಪ್ಸಕ್ಕೋ? ಭಾಷೆ ಕಲ್ಸಕ್ಕೆ ಇಂಥಾ ರಾಷ್ಟ್ರೀಯ ಯೋಜನೆಗಳನ್ನು ಯಾಕೆ ಬಳಸಬೇಕು? ಹೇರಿಕೆ ಅನ್ನೋದು ಯಾವುದಕ್ಕೆ ಅಂದ್ರೆ ಹಿಂದಿಯಲ್ಲಿರೋ ಈ ಜಾಹಿರಾತಿನ ಅರ್ಥ ತಿಳಿಯದೆ ನಿಮಗೆ ಈ ಯೋಜನೆಯ ಲಾಭ ಸಿಗಲಾರದು ಅನ್ನುವ ವ್ಯವಸ್ಥೆಗೆ. ಉದಾಹರಣೆಗೆ ರೇಲ್ವೇಯಲ್ಲಿ ಹಿಂದಿಯಲ್ಲಿ ಅರ್ಜಿ ತುಂಬಿಸದಿದ್ದರೆ ಕರ್ನಾಟಕದಲ್ಲಿ ಹರಡಿರೋ ರೈಲುನಿಲ್ದಾಣಗಳಲ್ಲಿ ಡಿ ದರ್ಜೆ ಕೆಲಸಗಳಿಗೆ ನಿಮ್ಮನ್ನು ಪರಿಗಣಿಸಲಾಗುವುದಿಲ್ಲ ಎನ್ನುತ್ತಾ ಹಿಂದಿಯನ್ನು ಬಲವಂತವಾಗಿ ಹೇರುತ್ತಿರುವ ಬಗ್ಗೆ.
ತಾಯಿನುಡಿ ಅನ್ನೋದು ಯಾವುದಕ್ಕೆ? ಯಾವುದನ್ನು ಹೇಗೆ ಕಲಿಸಲಾಗುತ್ತದೆ? ಯಾವ ಭಾಷೆಯನ್ನು ಯಾವಹಂತದಲ್ಲಿ ಕಲಿಯುವುದು ಹೇರಿಕೆಯಾಗುತ್ತದೆ? ಅನ್ನುವುದನ್ನೆಲ್ಲಾ ಸಾಧ್ಯವಾದರೆ ಯೋಚಿಸಿನೋಡಿ.
ಇನ್ನು ಬೇರೆ ಬೇರೆ ಭಾಷೆ ಕಲಿಯುವುದರ ಬಗ್ಗೆ, ಸ್ವಾಮಿ... ಹಿಂದಿಯನ್ನು ಕಲೀಬೇಡಿ ಅಂತ ಯಾರಂದ್ರು? ಹಿಂದಿ, ಫ್ರೆಂಚು, ಜಪಾನೀಸು, ಸಂಸ್ಕೃತ, ಇಂಗ್ಲಿಷು... ಎಲ್ಲಾ ಭಾಷೆಗಳೂ ನಮಗೆ ಬೇಕು, ಅದು ಕೇವಲ ಅದರಲ್ಲಿನ ಒಳಿತನ್ನು ನಮ್ಮ ಜನರಿಗೆ ತಲುಪಿಸಲು. ಹಿಂದಿ ಕಲಿಯಿರಿ - ಇಲ್ಲವೇ ಸಾಯಿರಿ ಅನ್ನೋ ನೀತಿಯನ್ನು ಸರ್ಕಾರಗಳು ಅನುಸರಿಸೋದನ್ನು ವಿರೋಧಿಸಲೇ ಬೇಕಾಗುತ್ತೆ ಅಲ್ವಾ? ನಿಮಗೆ ಗೊತ್ತಾ ಸಮಾನತೆಯೇ ಜೀವಾಳ ಅಂತ ಬೊಗಳೇ ಹೊಡ್ಯೋ ಭಾರತದಲ್ಲಿ ಇಡೀ ಭಾರತದ ಯಾವುದೇ ಮೂಲೆಯ ಹಳ್ಳಿಯ ಕೇಂದ್ರಸರ್ಕಾರಿ ಕಛೇರಿಯಲ್ಲಿ, ಹಿಂದಿಯಲ್ಲಿ ಸಲ್ಲಿಸೋ ಅರ್ಜಿಗೆ ಹಿಂದಿಯಲ್ಲೇ ಉತ್ತರಕೊಡಬೇಕು ಅನ್ನೋ ಕಾನೂನು ಇದೆ ಅಂತಾ. ಯಾಕೆ ಹೀಗೆ? ಕನ್ನಡ ಮಾತ್ರಾ ಬಲ್ಲವನಿಗೆ ಭಾರತೀಯನಾಗಿರೋ ಹಕ್ಕಿಲ್ಲ ಅಂದ ಹಾಗಲ್ವೇನ್ರೀ ಇದು?

ಹೊರದೇಶದಲ್ಲಿ ಭಾರತೀಯರೊಂದಿಗೆ ವ್ಯವಹರಿಸಲು ಒಂದು ’ನಮ್ಮ’ ಭಾಷೆ ಬೇಕು ಅನ್ನೋದಾದ್ರೆ ಅದು ನೀವು ಮಾತಾಡಿಸೋ ಇನ್ನೊಬ್ಬ ಭಾರತೀಯನ ಭಾಷೆ ಅಥವಾ ನಿಮ್ಮ ಭಾಷೆಯಾಗಿರೋದು ಸರಿ. ನಾವೇನು ಅಲ್ಲೆಲ್ಲಾ ಹಿಂದಿ ಭಾಶಿಕರನ್ನಷ್ಟೇ ಎದುರಾಗ್ತೀವಾ? ಇಲ್ಲಾ ಅಂದ್ರೆ ನಮ್ಮಿಬ್ಬರದೂ ಅಲ್ಲದ ಇನ್ನೊಂದು ಭಾಷೆ ಅನ್ನೋದಾದ್ರೆ ಅದು ಈಗಾಗಲೇ ಕಲಿತಿರೋ ಇಂಗ್ಲಿಷೇ ಆಗೋದು ಸೂಕ್ತ. ಇಷ್ಟಕ್ಕೂ ನಿಮಗೆ ಹಿಂದಿ ಬರುತ್ತಿದ್ದು ಎದುರಿನವನಿಗೂ ಬರುತ್ತಿದ್ದರೆ ಸರಿ. ಆದರೆ ಹೊರದೇಶದಲ್ಲಿ ಭಾರತೀಯರನು ಮಾತಾಡಿಸೋಕೆ ಕಾಮನ್ ಭಾಷೆಯಾಗಿ ಹಿಂದಿ ಬೇಕು ಅನ್ನೋದು ಸರಿಯಲ್ಲ. ಒಬ್ಬ ಕನ್ನಡಿಗ ಒಬ್ಬ ತಮಿಳನನ್ನು ಮಾತಾಡಿಸಬೇಕು ಅನ್ನೋದು ಸರೀನಾ? ಇದನ್ನು ನನ್ನ ಅನಿಸಿಕೆಯಾಗಿ ಹೇಳ್ತಿಲ್ಲ. ಸರಿ ತಪ್ಪು ಅರಿತು ಹೇಳ್ತಿದೀನಿ.

ನಮಸ್ಕಾರ

ತಿಮ್ಮಯ್ಯ

Anonymous ಅಂತಾರೆ...

ಕನ್ನಡದವ,

ಒಬ್ಬ ಕನ್ನಡದವ ಒಬ್ಬ ತಮಿಳಿನವನನ್ನು ಹೊರದೇಶದಲ್ಲಿ ಭೇಟಿಯಾದರೆ ಹಿಂದಿಯಲ್ಲಿ ಮಾತಾಡಬೇಕು ಅನ್ನುವುದು ಸರಿಯಲ್ಲ ಅಂದೆ.

ತಿಮ್ಮಯ್ಯ

Anonymous ಅಂತಾರೆ...

kannadiga avrE,

I think what Mr.timmayya is telling has some logic. unity can be achieved only by honouring diversity and not by 'ironing' the creases of diversity. India should do its administration in all languages of India. Let all 22 languages be the national official languages of India. Equality to every linguistic group is the need of the hour.

Regards

chandru

Anonymous ಅಂತಾರೆ...

but chandu avre is it possible practically? Waht i feel is there has to be unique language which every Indian shud knw :)

Regards,
Kamala

Anonymous ಅಂತಾರೆ...

ಮಾಯ್ಸ ಅವರೇ,
ಕನ್ನಡದಲ್ಲಿ ಒರೆಗಳಿಗೆ ಕೊರತೆ ಏನು ಇಲ್ಲ... ಬಹುತೇಕ ಒರೆಗಳು ಬಳಕೆಯಲ್ಲಿ ಇಲ್ಲ... ಕನ್ನಡದ ಸೊಲ್ಲರಿಮೆ (grammar) ರಚಿಸುವವರು ಕನ್ನಡದ ಒರೆಗಳನ್ನು ಕಡೆಗಣಸಿ, ಸಂಸ್ಕೃತಕ್ಕೆ ಹೆಚ್ಚು ಒತ್ತು ಕೊಟ್ಟಿರೋದೇ ಇವತ್ತು ಕನ್ನಡ ಒರೆಗಳು ಜನಪ್ರಿಯತೆಗಳಿಸಲಿಲ್ಲ.....

ಸರ್ಯಾಗಿ ಹೇಳುದ್ರಿ ತಿಮ್ಮಯ್ಯನವರೆ.....

ಸ್ವಾಮಿ ಕನ್ನಡದವ,
ನೀವು ಕೊಟ್ಟಿರುವ ಉದಾಹರಣೆಗಳು ಮೂಲತಹ ಕನ್ನಡನಾಡಿನ ಪದಾರ್ಥಗಳೇ ಅಲ್ಲ... ಆದ್ದರಿಂದ ಅವುಗಳ ಮೂಲ ಹೆಸರು ಇರುವುದೇ ಉತ್ತಮ.. ನಿಮಗೆ ಗೊತ್ತಿರಲಿ ಹಿಂದಿ ಯಲ್ಲಿ ಇರುವ ಬಹುತೇಕ ಪದಗಳೂ ಕೂಡ ಸಂಸ್ಕೃತ , ಉರ್ದು ಇಂದ ಬಂದವು ... ಇತ್ತೀಚಿನ ಹಿಂದಿ ಹಾಡುಗಳು ಗಮನಿಸದರೆ... ಬಹುತೇಕ ಪಂಜಾಬಿ, ಉರ್ದು ಪದಗಳೇ ...

ತಿಮ್ಮಯ್ಯರವರು ಹೇಳಿದ ಹಾಗೆ ಹಿಂದಿಗೆ ಮಾತ್ರ ಯಾಕೆ ಪ್ರಾಮುಖ್ಯತೆ.. ಬೇರೆ ಭಾಷೆಗಳನ್ನೂ ಕಲಿಯಿರಿ...
ಕರ್ನಾಟಕದಲ್ಲಿ ಹಿಂದಿಯವರಿಗಿಂತ ತೆಲುಗು. ತಮಿಳು... ಭಾಷಿಕರೇ ಹೆಚ್ಚು... ಕನ್ನಡಕ್ಕೆ ನಿಜವಾದ ಸೋದರಿ ತೆಲುಗು.. ಅಂದರೆ ನಮಗೆ ಚಿಕ್ಕಮ್ಮ ಅಂಥ ಯಾಕೆ ತಿಳಿಯೋಲ್ಲ ನೀವು ?...

ಇವತ್ತಿನ ದಿನ ಇಂಗ್ಲಿಷ್ನಿಂದಾಗಿ ನಾವು ನಮ್ಮ ಜೀವನೋಪಾಯ ನಡಿಸ್ತಾ ಇದ್ದೀವಿ... ಆದರೆ ಹಿಂದಿ ಇಂದ ಏನು ಸಿಕ್ಕಿದೆ .. ? ಬರಿ ಹಿಂದಿ ಭಾಷಿಕರಿಗೆ ದೇಶದಲ್ಲಿ ಎಲ್ಲಿ ಹೋದರೂ ಬದುಕುವ ಸೌಕರ್ಯ ಕೊಟ್ಟಿದೆ ಅಷ್ಟೆ... . ಕನ್ನಡಿಗರು ಕನ್ನಡವನ್ನ ಜೀವನೋಪಾಯಕ್ಕೆ ಸೂಕ್ತವಾಗುವಂತೆ ಬೆಳೆಸುವ ಕಡೆಗೆ ಯೋಚಿಸಬೇಕು ಹೊರೆತು ಚಿಕ್ಕಮ್ಮ... ದೊಡ್ಡಮ್ಮ... ಅನ್ಕೊಂಡು ಮನೆ ಮಗಳಾದ ಕನ್ನಡವನ್ನೇ ಮೂಲೆಗುಂಪಾಗಿಸಬಾರ್ದು... ಹಿಂದಿಯರು ರಾಷ್ಟ್ರ ಭಾಷೆ ಅನ್ನೋ ತಪ್ಪು ಬೀಜ ಬಿತ್ತುತ್ತಾ ನಿಮ್ಮಂತ ಕನ್ನಡಿಗನನ್ನೇ ಹಿಂದಿಯ ಪರವಾಗಿ ದನಿ ಎತ್ತಲು ಎಷ್ಟರ ಮಟ್ಟಿಗೆ ಬ್ರೈನ್ವಾಶ್ ಮಾಡಿದ್ದಾರೆ ಒಮ್ಮೆ ಯೋಚಿಸಿ ನೋಡಿ..

ಈ ಲೇಖನದ ಉದ್ದೇಶ ಸಾಮಾನ್ಯ ರೈತ/ಗ್ರಾಮಸ್ತರಿಗೆ ಇರುವ ಯೋಜನೆಗಳು ಅವರಿಗೆ ಅರ್ಥವಾಗುವಂತೆ ಇರಬೇಕು ಅನ್ನೋ ಸಾಮನ್ಯ ತಿಳುವಳಿಕೆ ಅಷ್ಟೆ.


ಕ್ಲಾನ್ಗೊರೌಸ್

Anonymous ಅಂತಾರೆ...

Dear Ms.Kamala,

There is no need to have a common language. If you still feel there is a need for one,It is ENGLISH...

In every school English has been taught all over India and has been accepted without any resistance. Ofcourse, today it is the language of knowledge, livelywood and communication all over India.
Once a politician rightly mentioned in Indian parliament that there is no need for big hole for a big mice and a small one for the small. Big one is enough. there is no need for two alien languages for us to communicate to outside world...(hindi for India and English for the whole world!)

Regards
Chandru

Anonymous ಅಂತಾರೆ...

ಪ್ರೀತಿಯ ತಿಮ್ಮಯ್ಯ,

ನನ್ನದು ಮುನಿಸಿಕೊಳ್ಳೊ ವಾಣಿ ಇತ್ತೇನು? :)

೧) ಈ ಜಾಹಿರಾತು ಕೇಂದ್ರ ಸರ್ಕಾರದ್ದೋ ರಾಜ್ಯ ಸರ್ಕಾರದ್ದೋ ಅಂತ ನೋಡೋಣ! ಆಮೇಲೆ ಇದು ಒಂದು productಓ messageಓ ನೋಡಿ!! ಆಮೇಲೆ ಹೇರಿಕೆಯೋ ಏನೋ ಯೋಚಿಸಿ, ಸರಿ ತಪ್ಪಿನ ಅರಿವಿಕೆಗೆ ಇದೂ ಅನುಕೂಲವಾಗ ಬಹುದ!

೨) ರೇಲ್ವೇಯಲ್ಲಿ ಹಿಂದಿಯ ವಿಷಯ ಹೇರಿಕೆ ಬಗ್ಗೆ ನಾನೂ ಯಾವಾಗಲೂ ವಿರೋಧ ವ್ಯಕ್ತ ಪಡಿಸಿದ್ದೇನೆ! ಅದು case of discrimination ನಾನೂ ಅದನ್ನ ಒಪ್ಪಲ್ಲ! ಆದರೆ ಇಲ್ಲಿಯ ವಿಷಯ ಹೇರಿಕೆಯಲ್ಲ ಅಂತ ನಾನು ಹೇಳ್ತಾ ಇದ್ದಿದ್ದು!

೩) ತಾಯಿನುಡಿ ಅನ್ನೋದು ಯಾವುದಕ್ಕೆ? ಯಾವುದನ್ನು ಹೇಗೆ ಕಲಿಸಲಾಗುತ್ತದೆ? ಯಾವ ಭಾಷೆಯನ್ನು ಯಾವಹಂತದಲ್ಲಿ ಕಲಿಯುವುದು ಹೇರಿಕೆಯಾಗುತ್ತದೆ? ಅನ್ನುವುದನ್ನೆಲ್ಲಾ ಸಾಧ್ಯವಾದರೆ ಯೋಚಿಸಿನೋಡಿ
---- ಯೋಚಿಸಿಯೇ ಹೇಳಿದ್ದು, ನೀವೂ ಸ್ವಲ್ಪ ಯೋಚಿಸಿ ನೋಡಿ!!

೩) ಹಿಂದಿ ಕಲಿಯಿರಿ - ಇಲ್ಲವೇ ಸಾಯಿರಿ ಅನ್ನೋ ನೀತಿಯನ್ನು ಸರ್ಕಾರಗಳು ಅನುಸರಿಸೋದನ್ನು ವಿರೋಧಿಸಲೇ ಬೇಕಾಗುತ್ತೆ ಅಲ್ವಾ?
--- ಇದನ್ನ ಪ್ರತಿಭಟಿಸೋದು ಸರಿಯೇ ಅಂತ ನಾನು ಮುಂಚೆನೂ ಹೇಳಿದ್ದೇನೆ (ಕನ್ನಡದವ), ಆದರೆ ಎಲ್ಲಾವುದನ್ನೂ ಹಿಂದಿ ಹೇರಿಕೆ ಅನ್ನೋದು ಯಾವ ರೀತಿಲೂ ಸರಿಯಲ್ಲ ಅನ್ನೋದರ ಬಗ್ಗೆ ವಾದ ಅಷ್ಟೆ ...

೪) ಇಡೀ ಭಾರತದ ಯಾವುದೇ ಮೂಲೆಯ ಹಳ್ಳಿಯ ಕೇಂದ್ರಸರ್ಕಾರಿ ಕಛೇರಿಯಲ್ಲಿ, ಹಿಂದಿಯಲ್ಲಿ ಸಲ್ಲಿಸೋ ಅರ್ಜಿಗೆ ಹಿಂದಿಯಲ್ಲೇ ಉತ್ತರಕೊಡಬೇಕು ಅನ್ನೋ ಕಾನೂನು ಇದೆ ಅಂತಾ!!!
--- ನಾನೂ ಹಳ್ಳಿಯವನೇ ಸ್ವಾಮಿ, ಇಂತಾ ಕಾನೂನು ನೋಡಿಲ್ಲ ಸ್ವಾಮಿ! ಕೇಂದ್ರ ಸರ್ಕಾರದಿಂದ ಬರೋ ಕೆಲವು ಯೋಜನೆಗಳ ಅರ್ಜಿಗಳಲ್ಲಿ ಹಿಂದಿ ಮತ್ತು ಕನ್ನಡ ಎರಡರ ಪ್ರಯೋಗವೂ ಇರುತ್ತೆ! ಅದು processingಗೆ ಎಲ್ಲಿಗೆ ಹೋಗುತ್ತೆ ಅನ್ನೋದರ ಮೇಲೆ ಕೆಲವೊಮ್ಮೆ, ಕೆಲವೊಂದನ್ನು ಹಿಂದಿಯಲ್ಲಿ ಮಾಡಬೇಕು ಅನ್ನೋ ವಿಷಯವಿದೆ! ಕೆಲವೊಮ್ಮೆ ನನಗೂ ಉರಿದಿದೆ ಇದು, ಆದರೆ ಆಂಗ್ಲ ಇನ್ನೂ ನೂರು ಮೈಲಿ ಆಚೆ ನಮ್ಮ ಹಳ್ಳಿಗಳಲ್ಲಿ!!!

೫) ಕನ್ನಡ ಮಾತ್ರಾ ಬಲ್ಲವನಿಗೆ ಭಾರತೀಯನಾಗಿರೋ ಹಕ್ಕಿಲ್ಲ ಅಂದ ಹಾಗಲ್ವೇನ್ರೀ ಇದು?
---- ಹಾಗ್ ಅನ್ಕೊಂಡ್ರೆ ಹಾಗ್ ಆಗುತ್ತೆ ಸ್ವಾಮಿ!! ಕರ್ನಾಟಕ ಸರ್ಕಾರದ ಯೋಜನೆಗಳ formಗಳಲ್ಲಿ ಹೀಗಿದ್ದಿದ್ದರೆ ಈ ಚಿಂತೆ ಸರಿಯೇ ಅನ್ನಿ!!

೬) ನಾವೇನು ಅಲ್ಲೆಲ್ಲಾ ಹಿಂದಿ ಭಾಶಿಕರನ್ನಷ್ಟೇ ಎದುರಾಗ್ತೀವಾ?
---- ಗುರು, ಹಿಂದಿ ಭಾಶಿಕನಾಗ ಬೇಕಿಲ್ಲ ಅರಿತ್ವನಾಗಿದ್ರೆ ಸಾಕು!! atleast ಇಲ್ಲಿ, ನಾನಿರೋ ಸ್ಥಳದಲ್ಲಿ, ಎಲ್ಲಾ ಭಾರತೀಯರೂ ಜೊತೆಗೆ ಇದ್ದೇವೆ - ಕರ್ನಾಟಕದಿಂದ, ಆಂದ್ರದಿಂದ, ರಾಜಸ್ತಾನದಿಂದ, ಬೆಂಗಾಳದಿಂದ, ಅಸ್ಸಾಮಿನಿಂದ, ಮುಂಬೈ (ಮಹರಾಷ್ಟ್ರ)ದಿಂದ, ಗುಜ್ಜು, ಹರ್ಯಾಣದಿಂದ, ಕೇರಳದಿಂದ, ತಮಿಳುನಾಡಿನಿಂದ ... ನಾವೆಲ್ಲಾರೂ ಹಿಂದಿಯಲ್ಲೇ ಮಾತಾಡೋದು, ನಂಬುತ್ತೀರೋ ಬಿಡುತ್ತಿರೊ ತಮಿಳಿಗರೂ ಹಿಂದಿಯಲ್ಲೇ ಮಾತಾಡ್ತಾರೆ, ಕೆಲವರು ಜೊತೆ ಇದ್ದು ಕಲೆತಿದ್ದಾರೆ - they always feel that Hindi should have been taught to them during younger days .... ಇರ್ಲಿ!!!

೭) ಈಗಾಗಲೇ ಕಲಿತಿರೋ ಇಂಗ್ಲಿಷೇ ಆಗೋದು ಸೂಕ್ತ!!!
--- ಇಂಗ್ಲೀಷ್ ನಲ್ಲಿ ಆ emotion, sentiment, feel ಮೂರ್ ಕಾಸಿನ ಪುಟುಕೋಸಿಯಷ್ಟೂ ಇರಲ್ಲ ತಂದೆ! ನಮ್ಮದು ನಮ್ಮದೇ!!! ಬರೀ ಅನುಕೂಲ/ವ್ಯವಹಾರಕ್ಕೆ ಮಸಾಲಾ (buttler) ಯಾಗಿ ಬಳಿಸಲು ಸರಿ ಆಂಗ್ಲಾ ಅಷ್ಟೆ! ನಮ್ಮಲ್ಲಿ ಎಲ್ಲರಿಗೂ (3 kannadigas, 3 tamilians, 2 mumbaiites, 2 gujju, 1 andhra, 1 assami, 1 haryanvi, 1 rajastaani, 1 kerala) ಹಿಂದಿ ಬೊಂಬಾಟಾಗಿ ಬರುತ್ತೆ! ಇಷ್ಟರಲ್ಲಿ ಯಾರೂ ಪಕ್ಕಾ ಹಿಂದಿಗರಿಲ್ಲ! i am making things up!! ಇದೇ ಅನುಭವ ಸಾವಿರಾರು ಭಾರತೀಯರಿಗೆ ಇರುತ್ತೆ!

೮) ಆದರೆ ಹೊರದೇಶದಲ್ಲಿ ಭಾರತೀಯರನು ಮಾತಾಡಿಸೋಕೆ ಕಾಮನ್ ಭಾಷೆಯಾಗಿ ಹಿಂದಿ ಬೇಕು ಅನ್ನೋದು ಸರಿಯಲ್ಲ.
--- ನಿಮಗೆ ಸರಿಯಲ್ಲ ಅನ್ಸಿದ್ದು ನಿಮಗೆ ಸರಿಯಲ್ಲವಷ್ಟೆ! ನಾನೂ ಬೇಕು ಅಂತ ಹೇಳಲ್ಲ, ಇರೋದ್ರಿಂದ ನಮಗೆ connectedness to India ಎಷ್ಟರ ಮಟ್ಟಿಗೆ ಸಂತಸ ಕೊಡುತ್ತೆ ಅಂದಾಗ ತಿಳಿಯುತ್ತೆ!! ಭಾರತದಲ್ಲೇ ಇದ್ದರೆ ಈ ಅನುಭವ ಬೇಕಿಲ್ಲವೇನೋ ಬಿಡಿ! So, ನಿಮ್ಗೆ ಅನ್ಸೋದು ನಿಮ್ಮ ಅನುಭವವಷ್ಟೆ! ನಮ್ಮ ಅನುಭವದ ಮಾತು ನಾವು ಹೇಳಬಹುದು, ಅಲ್ವೇ?

9) ಒಬ್ಬ ಕನ್ನಡಿಗ ಒಬ್ಬ ತಮಿಳನನ್ನು ಮಾತಾಡಿಸಬೇಕು ಅನ್ನೋದು ಸರೀನಾ?
--- ತಮಿಳನಿಗೆ ಹಿಂದಿ ಬಾರದಿದ್ದರೆ ಇಂಗ್ಲೀಷ್ ಇದ್ದೇ ಇದೆ, ಆದರೆ ತಮಿಳರೂ ಈಗ ಹಿಂದಿ ಕಲೆಯುತ್ತಿದ್ದರೆ ಅಂತ ನಿಮಗೆ ಕೇಳಿ ಖುಷಿಯಾಗ ಬಹುದು!! ಕಲೀಲೇ ಬೇಕು ಅಂತ ನಾನು ಯಾವತ್ತೊ ಹೇಳಲ್ಲ, ಕಲೆತ್ತಿದ್ದರಿಂದ ಯಾವ ಮಟ್ಟಿನ ಉಪ್ಯೋಗ ಇದೆ ಅಂತ ಹೇಳ್ದೆ ಅಷ್ಟೆ.

೧೦) ಇದನ್ನು ನನ್ನ ಅನಿಸಿಕೆಯಾಗಿ ಹೇಳ್ತಿಲ್ಲ. ಸರಿ ತಪ್ಪು ಅರಿತು ಹೇಳ್ತಿದೀನಿ.
---- ಸರಿ ತಪ್ಪಿನ ಅರಿವು ಅನುಭವದಿಂದ ತಿಳಿಯುವುದು ತಿಮ್ಮಯ್ಯ!! its no absolute truth, only relative truth, ನಿಮಗಿರೋ ಅನುಭವದ ಪ್ರತಿಬಿಂಬ! "ಅನಿಸಿಕೆ"ಯಲ್ಲೇ ಸರಿ ತಪ್ಪಿನ ಅರಿವಿಕೆಯನ್ನ ತುಂಬಬಹುದು ಆಲ್ಲವೆ? ಇದನ್ನ ಅರ್ಥ ಮಾಡೊಂಡ್ರೆ ಸರಿ ತಪ್ಪುಗಳ ಅರಿವು ಸರಿಯಾಗಿ ಅರಿವಾಗುತ್ತೆ!! :)

ನಿಮ್ಮ ಕನ್ನಡದ ಮೇಲಿನ ಪ್ರೀತಿ, ವಿಶ್ವಾಸ, loyalty, commitment, ನಂಗೆ ತುಂಬಾ ಇಷ್ಟವಾಯ್ತು! ಎಲ್ಲರೂ ಹೀಗೆ ಬೆಳೆಸಿಕೊಂಡ್ರೆ ಸಕ್ಕತ್! ಆದರೆ, ನಾನೂ ನಿಮ್ಮಷ್ಟೆ (ಕಮ್ಮಿ ಇರ ಬಹುದು) ಕನ್ನಡ ಪ್ರೇಮಿ! ನನ್ಗೂ ನನ್ನ ಭಾಷೇಯ ಮೇಲೆ ಅತ್ಯಂತ ಹೆಮ್ಮೆ, ಪ್ರೀತಿ ಇದೆ! ನನ್ನ ಕನ್ನಡ ಸ್ವಾಭಿಮಾನವನ್ನ ಬದನೇಕಾಯಿ ವ್ಯಾಪಾರಕ್ಕೆ ಇಡಬೇಡಿ :)

ಪ್ರೀತಿಯ,
ಕನ್ನಡದವ

Anonymous ಅಂತಾರೆ...

Office nalliddEne so illi Kannada font illa, kshamisabEku!

I found that I had this comment in my earlier post:

"ಇಂಗ್ಲೀಷ್ ನಲ್ಲಿ ಆ emotion, sentiment, feel ಮೂರ್ ಕಾಸಿನ ಪುಟುಕೋಸಿಯಷ್ಟೂ ಇರಲ್ಲ ತಂದೆ! ನಮ್ಮದು ನಮ್ಮದೇ!!! ಬರೀ ಅನುಕೂಲ/ವ್ಯವಹಾರಕ್ಕೆ ಮಸಾಲಾ (buttler) ಯಾಗಿ ಬಳಿಸಲು ಸರಿ ಆಂಗ್ಲಾ ಅಷ್ಟೆ! ನಮ್ಮಲ್ಲಿ ಎಲ್ಲರಿಗೂ (3 kannadigas, 3 tamilians, 2 mumbaiites, 2 gujju, 1 andhra, 1 assami, 1 haryanvi, 1 rajastaani, 1 kerala) ಹಿಂದಿ ಬೊಂಬಾಟಾಗಿ ಬರುತ್ತೆ! ಇಷ್ಟರಲ್ಲಿ ಯಾರೂ ಪಕ್ಕಾ ಹಿಂದಿಗರಿಲ್ಲ! i am making things up!! ಇದೇ ಅನುಭವ ಸಾವಿರಾರು ಭಾರತೀಯರಿಗೆ ಇರುತ್ತೆ!" ....

Typo corrected: I am NOT making things up! :) we do not have even a single guy who's mother tongue is Hindi :)

Preetiya,
Kannadadava

Anonymous ಅಂತಾರೆ...

@ಕ್ಲಾನ್ಗೊರೌಸ್,

ಇರುವ ಒರೆಗಳು ಬಳಕೆಗೆ ಬರಲಿ. ಹಾಗೆ ಹೊಸ ಒರೆವುಟ್ಟು ಕನ್ನಡದ ಒರೆಗಳಿಂದಲೇ ನಡೆಯಲಿ. ಇದಕ್ಕೆ ಇತ್ತೀಚಿಗೆ ಹೊರಬಂದ 'ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು' ಹೊತ್ತಗೆ ಮಾದರಿ.

ಆದರೆ.. ಅದು ದಿಟವಾಗಿ ಆಳ್ವಿಕೆಯ 'ಒತ್ತು' ಪಡೆಯುವ ನಲ್ ನಾಳು ಹತ್ತಿರದಲ್ಲಿ ಇಲ್ಲವಲ್ಲ ಎಂಬ ಬೇಸರ!

ನನ್ನಿ

Anonymous ಅಂತಾರೆ...

@ಕ್ಲಾನ್ಗೊರೌಸ್

"ಕನ್ನಡಕ್ಕೆ ನಿಜವಾದ ಸೋದರಿ ತೆಲುಗು.. ಅಂದರೆ ನಮಗೆ ಚಿಕ್ಕಮ್ಮ ಅಂಥ ಯಾಕೆ ತಿಳಿಯೋಲ್ಲ ನೀವು ?..."

ಇದು ಸರಿಯಲ್ಲ.

ದ್ರಾವಿಡಿಯನ್ ನುಡಿಕೂಟದಲ್ಲಿ ಕನ್ನಡ ಮತ್ತು ತಮಿಳು ತೆಂಕಣ ದ್ರಾವಿಡಿಯನ್ ಗುಂಪಿಗೆ ಬರುವುವು. ತೆಲುಗು ನಡುವಣ ದ್ರಾವಿಡಿಯನ್ ಗುಂಪಿಗೆ ಬರುವುದು .

ಕನ್ನಡಕ್ಕೆ ತುಂಬ ಹತ್ತಿರವಾದುದು ಅಂದರೆ ಅದು ತಮಿಳೇ. 'ಸೊಲ್ಲರಿಮೆ'ಯ ಒಳಹುಗಳಲ್ಲಿ ಈ ಎರಡು ನುಡಿಗಳು ತುಂಬ ಹೋಲುವುವು.

ತೆಲುಗಲ್ಲಿ 'Human ಹೆಣ್ಣು' ಲಿಂಗವಿಲ್ಲ. ಅದಿ = ಅವಳು/ಅದು. ಹೀಗೆ...

ಒಮ್ಮೆ ಇಲ್ಲಿ ನೋಡಿ

Anonymous ಅಂತಾರೆ...

ಮಾಯ್ಸ ಅವರೇ..,
ನೀವು ಹೇಳೋದು ನಿಜ... ಸಂಸ್ಕೃತ , ಇಂಗ್ಲಿಷ್ ಒರೆಗಳ ಬದಲು ಕನ್ನಡದ ಒರೆಗಳಿಗೆ ಒತ್ತು ನೀಡೋಕ್ಕೆ ಬಹುತೇಕ ನಮ್ಮ 'ಬುದ್ದಿ ಜೀವಿ' ಕನ್ನಡಿಗರೇ ಒಪ್ಪೋದು ಕಷ್ಟ... ನಮ್ಮಲ್ಲೇ ಮೇಲು ಕನ್ನಡ, ಕೀಳು ಕನ್ನಡ ಅನ್ನೋ ಜಿಜ್ಞಾಸೆ ಬಹಳಷ್ಟಿದೆ...

ನಾನು ತೆಲುಗುವನ್ನು ಕನ್ನಡದ ಸೋದರಿ ಅಂದದ್ದಕ್ಕೆ ಕಾರಣ... ತೆಲುಗುವಿನ ಲಿಪಿ ಬಹುತೇಕ ಕನ್ನಡದ ಅಕ್ಷರಗಳಿಂದ ಎರವಲು ಪಡೆದಿದೆ... ಹಾಗು ಸಾಕಷ್ಟು ಒರೆಗಳು ಕೂಡ ಕನ್ನಡ ಮೂಲ ಇರುವ ಒರೆಗಳು...ಆಚಾರಗಳಲ್ಲೂ ಕನ್ನಡಿಗರ ಹಾಗು ತೆಲುಗರ ಹೋಲಿಕೆಗಳಿವೆ... . ಇನ್ನು ಕನ್ನಡಕ್ಕೆ ಹತ್ತಿರವಾದ ಭಾಷೆ ತಮಿಳು ಅಂದರೆಲ್ಲ .... ತಮಿಳಿನಲ್ಲಿ ಎಸ್ಟೋ ಅಕ್ಷರಗಳೇ ಇಲ್ಲ... ಉಚ್ಚಾರಣೆಗಳು ಸಂದರ್ಬಕ್ಕೆ ಅನುಗುಣವಾಗಿಯೇ ಇರುತ್ತ್ತೆ... ಇನ್ನು ಆಚಾರಗಳಿಗೆ ಬಂದರೆ ತಮಿಳರ ಆಚರಣೆಗಳು ಕನ್ನಡ/ತೆಲುಗು ಆಚರಣೆಗಳಿಗಿಂತ ಬಲು ಭಿನ್ನ... . ನಾನು ಕನ್ನಡದವ ಹಿಂದಿಯನ್ನು ನಮ್ಮ ಚಿಕ್ಕಮ್ಮ ಅಂದರೆಲ್ಲ.. ಅದಕ್ಕೆ ಹಿಂದಿಗಿಂತ ತೆಲುಗು ಕನ್ನಡಕ್ಕೆ ಹತ್ತಿರವಾದದ್ದು ಅಂತ ಹೇಳಿದೆ ಅಸ್ಟೆ... . ಆದರೆ ಅದೇ ಲೇಖನದಲ್ಲಿ ಕೊನೆಗೆ ಚಿಕ್ಕಮ್ಮ ದೊಡ್ಡಮ್ಮ ಅನ್ಕೊಂಡು ಕನ್ನಡ ಅನ್ನೋ ತಮ್ಮ ತಾಯಿ/ಮನೆ ಮಗಳನ್ನೇ ಮೂಲೆಗುಂಪು ಮಾಡೋದು ಸರಿ ಅಲ್ಲ ಅಂತನೂ ಹೇಳಿದ್ದೇನೆ... . ನನ್ನ ವಾದ ಇಸ್ಟೇ ಹಿಂದಿಗೆ ಅಸ್ಟೊಂದು ಪ್ರಾಮುಖ್ಯತೆ ಕೊಡುವ ಕನ್ನಡಿಗರು ತಮ್ಮ ಅಕ್ಕ ಪಕ್ಕ ಇರುವ ದ್ರಾವಿಡ ಭಾಷೆಗಳನ್ನ ಯಾಕೆ ಎರಡನೆ ದರ್ಜೆಗೆ ಸೇರಸ್ತಾರೆ .. ? .

ಕನ್ನಡದವರೇ...

ಇಂಗ್ಲಿಷ್ನಲ್ಲಿ ಎಮೋಶನ್/ಸೆಂಟಿಮೆಂಟ್ ಇರೋಲ್ಲ ಅಂತ ಹೇಗೆ ಹೇಳ್ತಿರ... ನೋಡಿ ಸ್ವಾಮಿ ...ಬಹುತೇಕ ನಮ್ಮ ವಿದ್ಯಾಬ್ಯಾಸ ಇಂಗ್ಲಿಷ್ನಲ್ಲೇ ಮಾಡೋದು ... ಅದೇ ಇಂಗ್ಲಿಷ್ನಲ್ಲಿ ಎಮೋಶನ್/ಸೆಂಟಿಮೆಂಟ್ ಎಕ್ಸ್ಪ್ರೆಸ್ ಮಾಡೋಕ್ಕೆ ಆಗೋಲ್ಲ ಅನ್ನೋದು ಒಬ್ಬ ವ್ಯಕ್ತಿಯ ಕೊರೆತೆ ಹೊರತು ಭಾಷೆಯ ಕೊರೆತೆ ಅಲ್ಲ... . ಹಿಂದಿ ಗೆ ತೋರೋ ಉತ್ಸಾಹ ಮೊದಲೇ ಕಲಿತ ಇಂಗ್ಲಿಷ್ಗೆ ತೋರುಸ್ದ್ರೆ ಹಿಂದಿಗಿಂತಲು ಪರಿಣಾಮಕಾರಿ... . ಒಂದು ಸಣ್ಣ ಉದಾಹರಣೆ ಅರವಿಂದ ಅಡಿಗ ರವರ ಬುಕ್ಕರ್ ವಿಜೇತ ವೈಟ್ ಟೈಗರ್ ಹೊತ್ತಿಗೆ.. ಅವರು ಹಿಂದಿಯಲ್ಲಿ ಬರೆದಿದ್ದರೆ ಅದು ಭಾರತಾದಚೆಗೆ ಹೋಗುತ್ತಿರಲಿಲ್ಲ...

ಅಲ್ಲಾ ಸ್ವಾಮೀ ವಂದೇ ಮಾತರಂ ನ ಕೂಡ ಬಿಟ್ಟಿಲ್ಲ ಹಿಂದಿ ಹೇರಿಕೆ... ಸಂಸ್ಕೃತದ ವಂದೇ ಮಾತರಂ ಬೀರುವ ಪ್ರಭಾವ.. ಇರುವ ಸಾತ್ವಿಕತೆ ಆ ಎ. ಅರ್. ರೆಹಮಾನ್ ಕಿರ್ಚಾಡುವ ಹಿಂದಿ ವಂದೇ ಮಾತರಂ ನಲ್ಲಿ ಇದ್ಯಾ... ?.

ಕೇಂದ್ರ ಸರ್ಕಾರದ ಯೋಜನೆಗಳಾದರೆ ಹಿಂದಿಯಲ್ಲೇ ಇರ್ಬೇಕು ಅನ್ನೋದು ಹೇರಿಕೆ ಅಲ್ಲದೆ ಇನ್ನೇನು.. ಒಬ್ಬ ಸಾಮಾನ್ಯ ಗ್ರಾಮಸ್ತನಿಗೆ ಅರ್ಥವಾಗುವಂತೆ ತಾನೆ ಇರ್ಬೇಕು... ಅದಕ್ಕೋಸ್ಕರ ಅವನು ಹಿಂದಿ ಕಲಿಯ ಬೇಕು ಅನ್ನೋದು ಯಾವ ನ್ಯಾಯ ?...

ಕ್ಲಾನ್ಗೊರೌಸ್

Anonymous ಅಂತಾರೆ...

ಕ್ಲಾನ್ಗೊರೌಸ್ .....

ನೀವ್ ಹೇಳ್ತೀರಾ: ಇಂಗ್ಲಿಷ್ನಲ್ಲಿ ಎಮೋಶನ್/ಸೆಂಟಿಮೆಂಟ್ ಎಕ್ಸ್ಪ್ರೆಸ್ ಮಾಡೋಕ್ಕೆ ಆಗೋಲ್ಲ ಅನ್ನೋದು ಒಬ್ಬ ವ್ಯಕ್ತಿಯ ಕೊರೆತೆ ಹೊರತು ಭಾಷೆಯ ಕೊರೆತೆ ಅಲ್ಲ...

ನಾನು ಹೇಳೋದು: ಕನ್ನಡ ಯಾಕೆ ಮುಖ್ಯ ನಮಗೆ? ನಮ್ಮ ಆಂತರಿಕ ಸೆಂಟಿಮೆಂಟ್ಗೆ ಹತ್ರ ಅದು, ನಮ್ಮ ಭಾಷೆ ಅದು, ನಮ್ಮ ಜೀವವದು, ಅದಕ್ಕೇ ನಮಗೆ ಅತ್ಯಂತ ಹತ್ರವದು! ಹೃದಯಕ್ಕೆ ಸಮೀಪ!! ಇಂಗ್ಲೀಷ್ ಅಲ್ಲಿ ಕೊರತೆ ಇಲ್ಲದಿದ್ದರೆ ಬರೀ ಅದನ್ನೇ ಬಳಿಸಬಹುದಿತ್ತಲ್ಲಾ? ಕನ್ನಡವೂ ಯಾಕೆ ಬೇಕು! ಇದು, ನಿಮಗೆ ಅಸಂಬದ್ಧ ಅನ್ನಿಸಬಹುದು! ಆದ್ರೆ, ನಮ್ಮ ಭಾಷೆ, ನಮ್ಮ ನಾಡು, ನಮ್ಮ ನಾಡಿನ ಭಾಷೇ, ಹೊರನಾಡಿನ ಭಾಷೆ ಅನ್ನೋ ಸೆಂಟಿಮೆಂಟ್ ಬಗ್ಗೆ ಹೇಳಿದ್ದು ಅಷ್ಟೆ!!! ಹಿಂದಿ ಬಾರದೆ ಇದ್ದಾಗ ಇಂಗ್ಲೀಷ್ ಅಷ್ಟೆ! ಇರ್ಲಿ!

ಹಿಂದಿಯಲ್ಲಿ ಯಾವ ಕೊರತೆ ಇದೆ ಗುರು? ವ್ಯವಹಾರಕ್ಕೆ ಬಿಟ್ಟು ಇಂಗ್ಲೀಷ್ ಯಾಕೆ ಬೇಕು ಗುರು, ಬೊಂಬಾಟಾಗಿ ನಮ್ಮ ನಾಡಿನ (ಭಾರತದ) ಭಾಷೆ ಗೊತ್ತಿರುವಾಗ ಪರಭಾಷೆ ಯಾಕೆ ಬೇಕು ಗುರು? ಹೊಟ್ಟೆ ಪಾಡಿಗೆ ಮಾತ್ರ ಇಂಗ್ಲೀಷ್, ಮಿಕ್ಕಿದಕ್ಕೆಲ್ಲಾ ನಮ್ಮ ನಾಡಿನ ಭಾಷೆಯೇ ಸರಿ - ಕನ್ನಡಿಗರ ಜೊತೆ ಕನ್ನಡ, ಕನ್ನಡ ಕಲಿಯುವವರ ಜೊತೆ ಕನ್ನಡ, ತಿಳಿಯದವರ ಜೊತೆ ಹಿಂದಿ, ಇಂಗ್ಲೀಷ್ಗೆ ಗೋಲಿ ಮಾರ್ (ಇದೂ ಹಿಂದಿಯೆ, ಕ್ಷಮಿಸಿ)!

---
ನೀವು ಹೇಳ್ತೀರಾ: ಹಿಂದಿ ಗೆ ತೋರೋ ಉತ್ಸಾಹ ಮೊದಲೇ ಕಲಿತ ಇಂಗ್ಲಿಷ್ಗೆ ತೋರುಸ್ದ್ರೆ ಹಿಂದಿಗಿಂತಲು ಪರಿಣಾಮಕಾರಿ ....
ನಾನ್ ಹೇಳೋದು: ಇಂಗ್ಲೀಷ್ಗೆ ತೋರೋ ಉತ್ಸಾಹ ಹಿಂದಿಗೆ ನೀವು ತೋರಬಹುದಲ್ವಾ? ಹೊಸದೊಂದು ಭಾಷೆಯ ಕಲ್ತ್ರೆ ತಪ್ಪಾ? ನಿಮಗೆ ಹಿಂದಿ ಬರಲ್ಲವೇನು? ಬರ್ದೇ ಇದ್ರೆ ನಮ್ಮ ತಿಮ್ಮಯಾ ಹೇಳೋ ಹಾಗೆ "ಬದನೇಕಾಯಿ"!!! ಇರ್ಲಿ! ಮೊದಲು ಯಾವುದು ಕಲೆತರಿ ಅನ್ನೋದು ಮುಖ್ಯಾನಾ ಗುರು? ನನ್ನ ಹತ್ರ ಮೊದಲು ತಗಡು ಇದ್ರೆ ಆಮೇಲೆ ಸಿಕ್ಕ ಚಿನ್ನವನ್ನ ಎಸಿಬೇಕಾ? ನಮ್ಮದೇ ಚಿನ್ನ ಇರುವಾಗ ಪರದೇಶಿಗಳ ರೋಲ್ಡ್-ಗೋಲ್ಡ್ ಯಾಕೆ ಗುರು? ಕನ್ನಡ ರತ್ನ, ಡೈಮಂಡ್!

----
ನೀವ್ ಹೇಳ್ತೀರಾ: ಒಂದು ಸಣ್ಣ ಉದಾಹರಣೆ ಅರವಿಂದ ಅಡಿಗ ರವರ ಬುಕ್ಕರ್ ವಿಜೇತ ವೈಟ್ ಟೈಗರ್ ಹೊತ್ತಿಗೆ.. ಅವರು ಹಿಂದಿಯಲ್ಲಿ ಬರೆದಿದ್ದರೆ ಅದು ಭಾರತಾದಚೆಗೆ ಹೋಗುತ್ತಿರಲಿಲ್ಲ...

ನಾನ್ ಹೇಳೋದು: ಎಂತಾ ಉಧಾಹರಣೆ ಕೊಟ್ಟಿದ್ದೀರಾ ಗುರು? ಸರಿ ಇಲ್ಲ!! ಹಾಗಾದ್ರೆ ರಬೀಂದ್ರನಾಥ್ ಟಾಗೋರ್ ಬೆಂಗಾಲಿಯಲ್ಲಿ ಬರ್ದಿದ್ದು ತಪ್ಪಾ? ನಮ್ಮ ಡಿವಿಜಿ, ಕುವೆಂಪು, ಬೇಂದ್ರೆ, ನಿಸ್ಸಾರ್ ಅಹ್ಮೆದ್ ಅವರೆಲ್ಲಾ ಕನ್ನಡದಲ್ಲಿ ಬರ್ದಿದ್ದು ತಪ್ಪಾ? ಬರ್ದಿದ್ದು ತಪ್ಪಾ? ಇವೆಲ್ಲಾ ಭಾರತದಾಚೆ ಬಂದಿಲ್ವಾ ಗುರು??!!!

----

ನೀವ್ ಹೇಳ್ತೀರಾ: ಅಲ್ಲಾ ಸ್ವಾಮೀ ವಂದೇ ಮಾತರಂ ನ ಕೂಡ ಬಿಟ್ಟಿಲ್ಲ ಹಿಂದಿ ಹೇರಿಕೆ... ಸಂಸ್ಕೃತದ ವಂದೇ ಮಾತರಂ ಬೀರುವ ಪ್ರಭಾವ.. ಇರುವ ಸಾತ್ವಿಕತೆ ಆ ಎ. ಅರ್. ರೆಹಮಾನ್ ಕಿರ್ಚಾಡುವ ಹಿಂದಿ ವಂದೇ ಮಾತರಂ ನಲ್ಲಿ ಇದ್ಯಾ... ?

ನಾನ್ ಹೇಳೋದು: ಮತ್ತೊಮ್ಮೆ, ಇದು ಎಂತಾ ಹೋಲಿಕೆ ಗುರು? ಇರ್ಲಿ!! "ಸಾರೆ ಜಹಾನ್ಸೆ ಅಚ್ಚ, ಹಿಂದುಸುತಾ ಹಮಾರ ಹಮಾರ", "ಯೆಹ್ ಮೇರೆ ವತನ್ಕೀ ಲೋಗೊ..." ಯಾವ್ ನುಡಿ ಗುರು?

ನನಗೆ ಹಿಂದಿಯ ಮೇಲೆ ವ್ಯಾಮೋಹ ಇಲ್ಲಾ, ಆದ್ರೆ ನಿಮ್ಮ hatredness ನೋಡಿ ಬೇಸರವಾಗುತ್ತೆ? ಈ ಮನೋಭಾವ ವ್ಯಕ್ತಿಯ ಕೊರತೆಯೇ ಹೊರತು ಭಾಷೆಯ ಕೊರತೆಯಲ್ಲ ಅಂತ ನೀವೇ ಹೇಳಿದ್ದೀರಾ? ನಿಮ್ಮ ಕೊರತೆಯನ್ನ ಗಮನಿಸಿ .... ನಿಮಗೆ ಇಂಗ್ಲೀಷಿನ (ಪರಭಾಷೆಯ)ಮೇಲಿರೋ "ವ್ಯಾಮೋಹ" ನನಗೆ ಹಿಂದಿಯ (ನಮ್ಮ ನಾಡಿನ ಭಾಷೆ) ಮೇಲೆ ಇರೋದು ತಪ್ಪಲ್ಲ ಅಲ್ವಾ? :) ನನಗೆ ಹಿಂದಿಯೂ ಗೊತ್ತು, ಇಂಗ್ಲೀಷೂ ಗೊತ್ತು, ಯಾವಗ ಯಾವುದು ಬೇಕೋ ಅದನ್ನ ಆವಾಗ ಬಳೆಸುವುದು ಅಷ್ಟೆ!! :)

---

ನೀವ್ ಹೇಳ್ತೀರಾ: ಕೇಂದ್ರ ಸರ್ಕಾರದ ಯೋಜನೆಗಳಾದರೆ ಹಿಂದಿಯಲ್ಲೇ ಇರ್ಬೇಕು ಅನ್ನೋದು ಹೇರಿಕೆ ಅಲ್ಲದೆ ಇನ್ನೇನು ... ಒಬ್ಬ ಸಾಮಾನ್ಯ ಗ್ರಾಮಸ್ತನಿಗೆ ಅರ್ಥವಾಗುವಂತೆ ತಾನೆ ಇರ್ಬೇಕು... ಅದಕ್ಕೋಸ್ಕರ ಅವನು ಹಿಂದಿ ಕಲಿಯ ಬೇಕು ಅನ್ನೋದು ಯಾವ ನ್ಯಾಯ?

ನಾನು ಹೇಳೋದು: ಇದು ನ್ಯಾಯವಲ್ಲ ಅಂತ ನಾನೇ ಹೇಳೀದ್ದೇನೆ, ಮತ್ತೊಮ್ಮೆ ನನ್ನ ಬರಹವನ್ನ ಓದಿ! ಉದಾಹರಣೆಗೆ ನಾನು ಹೇಳೀದ್ದೇನೆ ನನಗೂ ಇದು ಉರಿದಿದೆ ಅಂತ! ಇರ್ಲಿ!
====

ನಮ್ಮ ಬಿನ್ನಾಭಿಪ್ರಾಯವಿರಲಿ, ಡಿವಿಜಿಯವರ ಸುಂದರವಾದ ಪದ ನೆನಪಿಗೆ ಬರುತ್ತೆ:
ಒಂದೇ ಗಗನವ ಕಾಣುತೊಂದೆ ನೆಲವನು ತುಳಿಯು
ತೊಂದೆ ಧಾನ್ಯವನುಣ್ಣುತೊಂದೆ ನೀರ್ಗುಡಿದು
ಒಂದೇ ಗಾಳಿಯುನುಸಿರ್ವ ನರಜಾತಿಯೊಳಗಿಂತು
ಬಂದದೀ ವೈಷಮ್ಯ ಮಂಕುತಿಮ್ಮ

ಪ್ರೀತಿಯ,
ಕನ್ನಡದವ

Anonymous ಅಂತಾರೆ...

ಕನ್ನಡದವರೇ,

ನಿಮ್ಮ ಕನ್ನಡ ಅಭಿಮಾನ ಪ್ರಶ್ನಿಸೋ ಉದ್ದೇಶ ನನಗಿಲ್ಲ.ಆದ್ರೆ ಏನ್ ಗುರು ಬರ್ದಿರೋ ಈ ಬರಹದ ಬಗ್ಗೆ ನನ್ನ ಸಹಮತ ಏಕಿದೆ ಎಂದು ಹೇಳುತ್ತಿದ್ದೆ ನಾನು.
೧. ಈ ಜಾಹೀರಾತು ಕರ್ನಾಟಕ ರಾಜ್ಯ ಸರ್ಕಾರದ್ದು! ಇದು productಓ ಮತ್ತೊಂದೋ ಅನ್ನೋದು ಅಪ್ರಸ್ತುತ. ಸರ್ಕಾರಗಳ ಯೋಜನೆಗಳಿರುವುದು ಜನರನ್ನು ಮುಟ್ಟಲಿ ಎಂದು. ಇದರ ಪೂರ್ತಿ ಲಾಭ ನಮ್ಮ ಜನಕ್ಕೆ ಸಿಗಬೇಕೆಂದರೆ ನಮ್ಮ ಭಾಷೆಯಲ್ಲಿರಬೇಕು. ಇದನ್ನು ಪಾಲಿಸದಿರುವುದು ನಮ್ಮ ಮೇಲೆ ಆಗುವ ಹೇರಿಕೆ. ಯಾಕೆ ಹೇರಿಕೆ ಅಂದ್ರೆ ನಮ್ಮದಲ್ಲದ ಹಿಂದಿಯನ್ನು ಕಲಿಯದಿದ್ದರೆ ಈ ಯೋಜನೆಯ ಅನುಕೂಲ ಲಾಭ ಪಡೆಯಲಾಗುವುದಿಲ್ಲ. ಯಾಕಂದ್ರೆ ಇದು ಅರ್ಥವಾಗಿಲ್ಲ.
೨.http://rajbhasha.nic.in/dolruleseng.htm - ನಲ್ಲಿ ಹೀಗೆ ಬರೆದಿದೆ ನೋಡಿ:
5. Replies to communications received in Hindi - Notwithstanding anything contained rules 3 and 4, communications from a Central Government office in reply to communications in Hindi shall be in Hindi.

೩. ತಾಯಿನುಡಿಯ ಹೇರಿಕೆ ಬಗ್ಗೆ ತಮ್ಮ ಮಾತುಗಳನ್ನು ಗಮನಿಸಿ ನಾನು ಹಾಗೆ ಬರೆದೆ. ತಾಯಿನುಡಿ ಅನ್ನೋದು ಕೂಸು ಹುಟ್ಟಿದಾಗಿನಿಂದ ಪ್ರಪಂಚದ ಮೊದಲ ಪರಿಚಯವನ್ನು ಮಗು ಪಡೆಯಲು ಬಳಕೆಯಾಗುವ ಪರಿಸರದ ಭಾಷೆ. ಇದನ್ನು ಹೇರಿಕೆ ಮಾಡುವುದು ಅನ್ನುವ ಪರಿಕಲ್ಪನೆ ಸರಿಯೇ? ಎಂದು ಯೋಚಿಸಿ ಎಂದೆ.
೪. ಯಾವ ಭಾಷೆಯನ್ನೂ ಅಪೂರ್ಣ ಅಂತಲೂ, ಪರಿಪೂರ್ಣ ಅಂತಲೂ ಅನ್ನಲಾಗದು. ಇಂಗ್ಲಿಷಿನಲ್ಲಿ ಭಾವನೆ ವ್ಯಕ್ತಪಡಿಸಲಾಗುವುದಿಲ್ಲ ಎನ್ನುವ ಜನರಲೈಸ್ಡ್ ಹೇಳಿಕೆ ಸರೀನಾ? ಇಂಗ್ಲಿಷಿನವರು ಏನು ಮಾಡ್ತಾರೆ? ಅವರಿಗೆ ಭಾವನೆಗಳಿಲ್ಲ ಅಂತೀರಾ?
೫. ಹಿಂದಿಯ ಬಗ್ಗೆ ದ್ವೇಶವಿಲ್ಲ ಗೆಳೆಯರೇ, ಹಿಂದಿಯನ್ನು ನಾವು ಭಾರತದ ಇತರೆ ರಾಜ್ಯಗಳವರ ಜೊತೆ ವ್ಯವಹರಿಸಲು ಕಲಿಯಬೇಕು ಅನ್ನುವುದನ್ನು ನೋಡೋಣ. ನಮ್ಮ ನಾಡಿಗೆ ಬರುವ ಹೊರನಾಡಿಗರ ಜೊತೆ
ಹಿಂದಿಯಲ್ಲಿ ವ್ಯವಹರಿಸುವುದು ಸರಿಯೇ? ತಮಿಳುನಾಡಿನಲ್ಲಿ ಬೆರೆಯುವ ಇತರೆ ಭಾರತೀಯರು ಹಿಂದಿಯಲ್ಲಿ ವ್ಯವಹರಿಸುವುದು ಸರಿಯೇ? ಕಲಿತರೆ ತಪ್ಪಿಲ್ಲ ಅನ್ನೋ ಮಾತು ಬಿಡಿ. ಯಾವ ಭಾಷೆ ಕಲಿತರೂ ತಪ್ಪಿಲ್ಲ. ಆದರೆ ಹೀಗೆ ಒತ್ತಾಯದಿಂದ ಹೇರುವುದು ಸರಿಯಲ್ಲ. ಯಾವ ಕನ್ನಡಿಗನಿಗೂ ಆಮ್ ಆದ್ಮಿ ಅನ್ನೋದ್ರ ಅರ್ಥ ಕಲಿಯಬೇಕು ಅನ್ನೋ ಉದ್ದೇಶ ಈ ಜಾಹೀರಾತು ನೋಡುವಾಗಲಾಗಲೀ, ನೋಡಿದ ನಂತರವಾಗಲೀ ಅನಿಸುವುದಿಲ್ಲ. ಅದರ ಬದಲಾಗಿ ಈ ಯೋಜನೆ ನಮಗೆ ಹೇಗೆ ಅನುಕೂಲ ಅನ್ನೋದನ್ನು ತಿಳಿಯೋದು ಅವನಿಗೆ ಮುಖ್ಯವಾಗುತ್ತದೆ. ಆ ಕಾರಣದಿಂದ ಇದು ಕನ್ನಡದಲ್ಲಿರಬೇಕಾದ್ದೇ ಸರಿಯಾದ್ದು. ಕೇಂದ್ರಸರ್ಕಾರದ ಯೋಜನೆಯನ್ನು ರಾಜ್ಯಸರ್ಕಾರ ಅನುಷ್ಠಾನ ಮಾಡುವಾಗ ರಾಜ್ಯದ ಭಾಷೆಯಲ್ಲಿ ಹಾಕಬೇಕಾದ್ದೇ ಸರಿಯಾದ್ದು. ಇಲ್ಲದಿದ್ದರೆ ದೇವನಾಗರಿ ಲಿಪಿಯಲ್ಲೇ ಹಾಕಬಹುದಿತ್ತಲ್ವಾ?

ತಿಮ್ಮಯ್ಯ

Anonymous ಅಂತಾರೆ...

ಸ್ವಾಮಿ ಕನ್ನಡದವರೇ,

ನೀವು ಹೇಳ್ತಿರ: ಕನ್ನಡ ಯಾಕೆ ಮುಖ್ಯ ನಮಗೆ? ನಮ್ಮ ಆಂತರಿಕ ಸೆಂಟಿಮೆಂಟ್ಗೆ ಹತ್ರ ಅದು, ನಮ್ಮ ಭಾಷೆ ಅದು, ನಮ್ಮ ಜೀವವದು, ಅದಕ್ಕೇ ನಮಗೆ ಅತ್ಯಂತ ಹತ್ರವದು! ಹೃದಯಕ್ಕೆ ಸಮೀಪ!! ಇಂಗ್ಲೀಷ್ ಅಲ್ಲಿ ಕೊರತೆ ಇಲ್ಲದಿದ್ದರೆ ಬರೀ ಅದನ್ನೇ ಬಳಿಸಬಹುದಿತ್ತಲ್ಲಾ? ಕನ್ನಡವೂ ಯಾಕೆ ಬೇಕು! ಇದು, ನಿಮಗೆ ಅಸಂಬದ್ಧ ಅನ್ನಿಸಬಹುದು! ಆದ್ರೆ, ನಮ್ಮ ಭಾಷೆ, ನಮ್ಮ ನಾಡು, ನಮ್ಮ ನಾಡಿನ ಭಾಷೇ, ಹೊರನಾಡಿನ ಭಾಷೆ ಅನ್ನೋ ಸೆಂಟಿಮೆಂಟ್ ಬಗ್ಗೆ ಹೇಳಿದ್ದು ಅಷ್ಟೆ!!! ಹಿಂದಿ ಬಾರದೆ ಇದ್ದಾಗ ಇಂಗ್ಲೀಷ್ ಅಷ್ಟೆ! ಇರ್ಲಿ!

ನಾನು ಹೇಳೋದು : ನಾನು ಚರ್ಚೆ ಮಾಡಿದ್ದು ಹಿಂದಿ ಹಾಗು ಇಂಗ್ಲಿಷ್ ಮದ್ಯ.. ಕನ್ನಡಿಗರಿಗೆ ಕನ್ನಡವೇ ಹತ್ತಿರದ ಭಾಷೆ ಅನ್ನೋದು ಸಾಮನ್ಯ ಜ್ಞಾನ. ನಾವೇ ನಮ್ಮ ನಾಡಿನ ಭಾಷೆ ನಮ್ಮದು ಅನ್ನದಿದ್ದರೆ ಏನು ಹಿಂದಿಯರು ಬಂದು ಅಂತಾರ ?... ಅನ್ಸ್ಬುಡಿ ನೋಡೋಣ... ಸ್ವಲ್ಪ ಕಣ್ಬಿಟ್ಟು ನೋಡಿ ರಿಡಿಫ್ ಅಂತ ತಾಣಗಳಲ್ಲಿ ಕನ್ನಡಿಗನಿಗೆ ಸಿಗ್ತಾ ಇರೋ ಪ್ರತಿಕ್ರಿಯೆ ಇತರೆ ಭಾಷಿಕರಿಂದ...

ನೀವು ಹೇಳ್ತಿರ: ಹಿಂದಿಯಲ್ಲಿ ಯಾವ ಕೊರತೆ ಇದೆ ಗುರು? ವ್ಯವಹಾರಕ್ಕೆ ಬಿಟ್ಟು ಇಂಗ್ಲೀಷ್ ಯಾಕೆ ಬೇಕು ಗುರು, ಬೊಂಬಾಟಾಗಿ ನಮ್ಮ ನಾಡಿನ (ಭಾರತದ) ಭಾಷೆ ಗೊತ್ತಿರುವಾಗ ಪರಭಾಷೆ ಯಾಕೆ ಬೇಕು ಗುರು? ಹೊಟ್ಟೆ ಪಾಡಿಗೆ ಮಾತ್ರ ಇಂಗ್ಲೀಷ್, ಮಿಕ್ಕಿದಕ್ಕೆಲ್ಲಾ ನಮ್ಮ ನಾಡಿನ ಭಾಷೆಯೇ ಸರಿ - ಕನ್ನಡಿಗರ ಜೊತೆ ಕನ್ನಡ, ಕನ್ನಡ ಕಲಿಯುವವರ ಜೊತೆ ಕನ್ನಡ, ತಿಳಿಯದವರ ಜೊತೆ ಹಿಂದಿ, ಇಂಗ್ಲೀಷ್ಗೆ ಗೋಲಿ ಮಾರ್ (ಇದೂ ಹಿಂದಿಯೆ, ಕ್ಷಮಿಸಿ)!

ನಾನು ಹೇಳೋದು : ಹಾಗಾದ್ರೆ ವಿದ್ಯಾಭ್ಯಾಸ ಯಾಕೆ ಇಂಗ್ಲಿಷ್ ನಲ್ಲಿ ಮಾಡ್ತಿರ... ? . ಹೊಟ್ಟೆ ಪಾಡಿಗೆ ಮಾತ್ರ ಅಂತಿರಲ್ಲ... ಹೊಟ್ಟೆ ತುಂಬದೆ ಬತ್ಕಕ್ಕೆ ಆಗುತ್ತಾ....? ಅನ್ನ ಕೊಟ್ಟ ಭಾಷೆ ಬೇಡ... ಇನ್ನೊಂದು ಜನಾಂಗದ ಭಾಷೆ ಹೇರುಸ್ಕೊಂಡ್ ಆದರು ಬೇಕು ... . ತಮಿಳರ ಜೊತೆ ತಮಿಳು.. ತೆಲುಗರ ಜೊತೆ ತೆಲುಗು.. ಮರಾಠಿಗರ ಜೊತೆ ಮರಾಠಿ ಯಾಕ್ ಆಗಬಾರದು.. ? . ಅವು ಭಾರತದ ಭಾಷೆಗಳೇ ತಾನೆ ?. ಅದ್ಯಾಕೆ ಹಿಂದಿಗೆ ಮಾತ್ರ ಕೊಂಬಿದ್ಯಾ ?... . ನಮಗೆ ಇಂಗ್ಲಿಷ್ ಎಷ್ಟು ಪರ ಭಾಷೇನೋ ಅದುಕ್ಕಿಂತ ಹೆಚ್ಚು ಹಿಂದಿ ಪರ ಭಾಷೆ. ಇಂಗ್ಲಿಷ್ ನಮ್ಮ ಹೊಟ್ಟೆ ಹಾಗು ಜ್ಞಾನದ ಹಸಿವು ತಕ್ಕ ಮಟ್ಟಿಗೆ ತೀರ್ಸಿದೆ... ಹಿಂದಿ ಏನ್ ಮಾಡಿದೆ ಬದನೆಕಾಯಿ...

ಯಾವ ಕೊರತೆ ಅಂದರೆಲ್ಲ ... ನಿನ್ನೆ ನಿನ್ನೆಗೆ ನಾಳೆ ನಾಳೆಗೆ : ಇದನ್ನ ಹಿಂದಿಯಲ್ಲಿ ಅರ್ಥಪೂರ್ಣವಾಗಿ ಬರೆಯಿರಿ ನೋಡೋಣ ?...

ನೀವು ಹೇಳ್ತಿರ : ಇಂಗ್ಲೀಷ್ಗೆ ತೋರೋ ಉತ್ಸಾಹ ಹಿಂದಿಗೆ ನೀವು ತೋರಬಹುದಲ್ವಾ? ಹೊಸದೊಂದು ಭಾಷೆಯ ಕಲ್ತ್ರೆ ತಪ್ಪಾ? ನಿಮಗೆ ಹಿಂದಿ ಬರಲ್ಲವೇನು? ಬರ್ದೇ ಇದ್ರೆ ನಮ್ಮ ತಿಮ್ಮಯಾ ಹೇಳೋ ಹಾಗೆ "ಬದನೇಕಾಯಿ"!!! ಇರ್ಲಿ! ಮೊದಲು ಯಾವುದು ಕಲೆತರಿ ಅನ್ನೋದು ಮುಖ್ಯಾನಾ ಗುರು? ನನ್ನ ಹತ್ರ ಮೊದಲು ತಗಡು ಇದ್ರೆ ಆಮೇಲೆ ಸಿಕ್ಕ ಚಿನ್ನವನ್ನ ಎಸಿಬೇಕಾ? ನಮ್ಮದೇ ಚಿನ್ನ ಇರುವಾಗ ಪರದೇಶಿಗಳ ರೋಲ್ಡ್-ಗೋಲ್ಡ್ ಯಾಕೆ ಗುರು? ಕನ್ನಡ ರತ್ನ, ಡೈಮಂಡ್!

ನಾನ್ ಹೇಳೋದು : ೨೦ ವರ್ಷ ವಿದ್ಯಾಭ್ಯಾಸದಿಂದ ಇಂಗ್ಲಿಷ್ ಕಲಿತ ಮೇಲೆ.. ನಾಡ ನುಡಿ ಬಿಟ್ಟು ಮೂರನೇ ಪರಕೀಯ ಭಾಷೆ ಯಾಕೆ ಕಲಿ ಬೇಕು.. ? . ನೀವು ಅಷ್ಟು ಮೆಚ್ಚಿಕೊಳ್ಳೋ ಹಿಂದಿಯರು ಬೇರೆ ಎಷ್ಟು ಭಾಷೆ ಕಲಿತಾರೆ ?.. ತಮ್ಮ ಪ್ರಾದೇಶಿಕಭಾಷೆ ನ ರಾಷ್ಟ್ರ ಭಾಷೆ ಅಂತ ಸುಳ್ಳನ್ನ ಚಿಕ್ಕ ಮಕ್ಕಳಿಗೆ ಯಾಕೆ ತಲೆಗೆ ತುಂಬ್ತಾರೆ.. ?. ಇದು ಸಂವಿದಾನ ವಿರುದ್ದ ಅಲ್ಲವೋ ?.. ಹೊಸ ಭಾಷೆ ಕಲಿಯೋದು ತಪ್ಪಲ್ಲ .. ಆದರೆ ಬಲವಂತವಾಗಿ ಕಲಿಯೋದು ತಪ್ಪೇ.. ಆ ಹೊಸ ಭಾಷೆ ಹಿಂದಿಯೇ ಆಗಿರಬೇಕು ಅನ್ನೋದು ತಪ್ಪು.. . ನಾನು ಕನ್ನಡಿಗನಾದ ಮೇಲೆ ಅದರಲ್ಲೂ ಬೆಂಗಳೂರಿಗನಾದ ಮೇಲೆ ಹಿಂದಿ ಬರದೆ ಇರಲು ಸಾದ್ಯವೇ ? .. ಬಲವಂತವಾಗಿ ಹೇರಿದ್ರಲ್ಲ ಪ್ರೈಮರಿ ನಲ್ಲಿ... . ನೋಡಿ ಸ್ವಾಮಿ ನಮಗೆ ನಮ್ಮ ಸ್ಟೀಲ್ ತಟ್ಟೆನಲ್ಲಿ ಅನ್ನ ತುಂಬೋ ಇಂಗ್ಲಿಷ್ ಅನ್ನದಾತ... ನಿಮಗೆ ಇಂಗ್ಲಿಷ್ ತಗಡಾದರೆ... ನಮಗೆ ಹಿಂದಿ ತುಕ್ಕು ಹಿಡಿದ ತಗಡು.. ಅನ್ನ ಅನ್ಕೊಂಡು ಚಿನ್ನ ತಿನ್ನೋಕ್ಕೆ ಆಗೋಲ್ವೆಲ್ಲ ..?. ಇಂಗ್ಲಿಷ್ ಎಷ್ಟು ಪರದೇಶಿಯೋ ಹಿಂದಿಯು ಅದಕ್ಕಿಂತ ಆಚಾರ ವಿಚಾರಗಳಲ್ಲಿ ಒಬ್ಬ ಕನ್ನಡಿಗನಿಗೆ ಪರದೇಶಿಯೇ...

ನೀವು ಹೇಳ್ತಿರ: ಎಂತಾ ಉಧಾಹರಣೆ ಕೊಟ್ಟಿದ್ದೀರಾ ಗುರು? ಸರಿ ಇಲ್ಲ!! ಹಾಗಾದ್ರೆ ರಬೀಂದ್ರನಾಥ್ ಟಾಗೋರ್ ಬೆಂಗಾಲಿಯಲ್ಲಿ ಬರ್ದಿದ್ದು ತಪ್ಪಾ? ನಮ್ಮ ಡಿವಿಜಿ, ಕುವೆಂಪು, ಬೇಂದ್ರೆ, ನಿಸ್ಸಾರ್ ಅಹ್ಮೆದ್ ಅವರೆಲ್ಲಾ ಕನ್ನಡದಲ್ಲಿ ಬರ್ದಿದ್ದು ತಪ್ಪಾ? ಬರ್ದಿದ್ದು ತಪ್ಪಾ? ಇವೆಲ್ಲಾ ಭಾರತದಾಚೆ ಬಂದಿಲ್ವಾ ಗುರು??!!!

ನಾನು ಹೇಳೋದು : ಅರವಿಂದ ಅಡಿಗ ಹಿಂದಿಯಲ್ಲಿ ಬರೆದಿದ್ದರೆ ಬುಕ್ಕರ್ ಬರುತ್ತಿತ್ತ ಅನ್ನೋದು ನನ್ನ ಪ್ರಶ್ನೆ ಅಷ್ಟೆ... ರಬೀಂದ್ರನಾಥ್ ಬೆಂಗಾಲಿಯಲ್ಲಿ ಬರೆದಿದ್ದು ಕನ್ನಡಿಗರು ಕನ್ನಡಕ್ಕೆ ಅನುವಾದ ಮಾಡಿದರೆ ಹೆಚ್ಚು ಪರಿಣಾಮಕಾರಿ.. ಹಾಗೆಯೇ ನಮ್ಮ ಡಿವಿಜಿ, ಕುವೆಂಪು, ಬೇಂದ್ರೆ, ನಿಸ್ಸಾರ್ ಅಹ್ಮೆದ್ ಅವರೆಲ್ಲಾ ಕನ್ನಡದಲ್ಲಿ ಬರ್ದಿದ್ದು ಇತರೆ ಭಾಷಿಕರು ಎಲ್ಲಾ ಕನ್ನಡ ಕಲಿಬೇಕು ಅನ್ನೋ ವಾದ ಅಲ್ಲ .. ಅವರ ಭಾಷೆಗೆ ಅನುವಾದ ಮಾಡಿ ಓದಿದರೆ ಹೆಚ್ಚು ಅರ್ಥಪೂರ್ಣ.. ಅದನ್ನ ಬಿಟ್ಟು ಹಿಂದಿ/ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಓದಿ ಅರ್ಥ ಮಾಡಿಕೊಳ್ಳಿರಿ ಅಂದ್ರೆ ಆಗುತ್ತಾ ? ... ಮೇಲಿರೋ ಜಾಹಿರಾತು ಅದೇ ತಪ್ಪು ಮಾಡಿರೋದು ... ಕನ್ನಡ ಲಿಪಿಯಲ್ಲಿ ಹಿಂದಿ ಬರೆದರೆ ಅದು ಕನ್ನಡ ಆಗೋಲ್ಲ...

ಇವೆಲ್ಲಾ ಭಾರತದಾಚೆ ಬಂದಿಲ್ವಾ ಗುರು??!!! : ಬಂದಿವೆ ಆದರೆ ಇಂಗ್ಲಿಷ್/ಅವರವರ ಭಾಷೆ ಗೆ ಅನುವಾದವಾಗಿ ಬಂದಿದೆ..

ನೀವು ಹೇಳ್ತಿರ : ಮತ್ತೊಮ್ಮೆ, ಇದು ಎಂತಾ ಹೋಲಿಕೆ ಗುರು? ಇರ್ಲಿ!! "ಸಾರೆ ಜಹಾನ್ಸೆ ಅಚ್ಚ, ಹಿಂದುಸುತಾ ಹಮಾರ ಹಮಾರ", "ಯೆಹ್ ಮೇರೆ ವತನ್ಕೀ ಲೋಗೊ..." ಯಾವ್ ನುಡಿ ಗುರು? ...

ನಾನ್ ಹೇಳ್ತಿನಿ : ಸಾರೆ ಜಹಾನ್ಸೆ ಅಚ್ಚ ಹಾಡಲ್ಲಿ ಹಿಂದಿ ಹೇಯ್ ಹಂ ಅಂತ ಸಾಲ್ ಬರುತ್ತೆ... ಅದು ಸರಿಯಾ ? .. ನಾನ್ ಹಿಂದಿ ಅಲ್ಲ ... ಯಾಕೆ ದೇಶ ಭಕ್ತಿ ನೆಪದಲ್ಲಿ ಸುಳ್ಳನ್ನ ಒಪ್ಕೋ ಬೇಕು ? ..
ದೇಶ ಭಕ್ತಿ ಅಂದ್ರೆ ನಿಮ್ಮ ಪ್ರಕಾರ ಹಿಂದಿಯಲ್ಲಿ ಮಾತ್ರ ನ ಇರೋದು... ? ಯಾಕ್ ಸ್ವಾಮಿ ನಮ್ಮ ಕನ್ನಡ ಚಿತ್ರಗಳಲ್ಲೇ ಎಷ್ಟಿಲ್ಲ ?... ಅಮೃತ ಗಳಿಗೆ ಹಾಡು ಕೇಳಿದ್ದೀರಾ ... ? . ಅದು ದೇಶ ಭಕ್ತಿ ಆಲ್ವಾ ? ..ಚಿತ್ರ ಗೀತೆಗಳೇ ಯಾಕೆ ಸಾಕಷ್ಟು ಸುಗಮ ಸಂಗೀಥೆಗಳೂ ಇವೆ... ಅವು ದೇಶ ಭಕ್ತಿ ಗೀತೆಗಳಲ್ವಾ .. ? . ಹಿಂದಿ ಹೇಯ್ ಹಂ ಅಂದ್ರೆ ಮಾತ್ರ ದೇಶ ಭಕ್ತಿ ನ ?

ನೀವ್ ಹೇಳ್ತಿರ : ನನಗೆ ಹಿಂದಿಯ ಮೇಲೆ ವ್ಯಾಮೋಹ ಇಲ್ಲಾ, ಆದ್ರೆ ನಿಮ್ಮ hatredness ನೋಡಿ ಬೇಸರವಾಗುತ್ತೆ? ಈ ಮನೋಭಾವ ವ್ಯಕ್ತಿಯ ಕೊರತೆಯೇ ಹೊರತು ಭಾಷೆಯ ಕೊರತೆಯಲ್ಲ ಅಂತ ನೀವೇ ಹೇಳಿದ್ದೀರಾ? ನಿಮ್ಮ ಕೊರತೆಯನ್ನ ಗಮನಿಸಿ .... ನಿಮಗೆ ಇಂಗ್ಲೀಷಿನ (ಪರಭಾಷೆಯ)ಮೇಲಿರೋ "ವ್ಯಾಮೋಹ" ನನಗೆ ಹಿಂದಿಯ (ನಮ್ಮ ನಾಡಿನ ಭಾಷೆ) ಮೇಲೆ ಇರೋದು ತಪ್ಪಲ್ಲ ಅಲ್ವಾ? :) ನನಗೆ ಹಿಂದಿಯೂ ಗೊತ್ತು, ಇಂಗ್ಲೀಷೂ ಗೊತ್ತು, ಯಾವಗ ಯಾವುದು ಬೇಕೋ ಅದನ್ನ ಆವಾಗ ಬಳೆಸುವುದು ಅಷ್ಟೆ!! :)

ನಾನ್ ಹೇಳೋದು : ಹಿಂದಿ ಮೇಲೆ ವ್ಯಾಮೋಹ ಇಲ್ಲ ಅಂತಿರ ಹಿಂದಿ ಹೇಯ್ ಹಂ ಅಂತ ದೇಶ ಭಕ್ತಿ ಮೆರೀತೀರ ... ? ... ನಾನು ಇರುವ ವಾಸ್ತವತೆ ಹೇಳುದ್ರೆ 'hatredness' ಅಂತಿರ ... ನೀವೇ ಅನ್ನ ಕೊಡೊ ಇಂಗ್ಲಿಷ್ ನ ತೆಗಳ್ತಿರ.. . ಕ್ಷಮಿಸಿ ಹಿಂದಿ ನಮ್ಮ ನಾಡಿನ ಭಾಷೆ ಅಲ್ಲ ... ಹಿಂದಿಯರ ನಾಡಿನ ಭಾಷೆ.. ನನಗೆ ಕನ್ನಡವೇ ನಾಡಿನ ಭಾಷೆ . ನನಗೆ ಕನ್ನಡ ಬಿಟ್ಟರೆ ಇಂಗ್ಲಿಷ್ ಸಾಕು.. ಹಿಂದಿಯ ಅವಶ್ಯಕತೆ ಇಲ್ಲ.. ಅದು ತಪ್ಪಲ್ಲ ಆಲ್ವಾ ?... ವಾಕ್ ಸ್ವಾತಂತ್ರ್ಯ ..

ನೀವ್ ಹೇಳ್ತಿರ : ಇದು ನ್ಯಾಯವಲ್ಲ ಅಂತ ನಾನೇ ಹೇಳೀದ್ದೇನೆ, ಮತ್ತೊಮ್ಮೆ ನನ್ನ ಬರಹವನ್ನ ಓದಿ! ಉದಾಹರಣೆಗೆ ನಾನು ಹೇಳೀದ್ದೇನೆ ನನಗೂ ಇದು ಉರಿದಿದೆ ಅಂತ! ಇರ್ಲಿ!

ನಾನ್ ಹೇಳೋದು : ಹಾಗಾದ್ರೆ ನಿಮ್ಮ ಪ್ರತಿಕ್ರಿಯೇನಲ್ಲಿ ಹೀಗೆ ಯಾಕೆ ಕೇಳಿದ್ದೀರಾ :

೧) ಈ ಜಾಹಿರಾತು ಕೇಂದ್ರ ಸರ್ಕಾರದ್ದೋ ರಾಜ್ಯ ಸರ್ಕಾರದ್ದೋ ಅಂತ ನೋಡೋಣ! ಆಮೇಲೆ ಇದು ಒಂದು productಓ messageಓ ನೋಡಿ!! ಆಮೇಲೆ ಹೇರಿಕೆಯೋ ಏನೋ ಯೋಚಿಸಿ, ಸರಿ ತಪ್ಪಿನ ಅರಿವಿಕೆಗೆ ಇದೂ ಅನುಕೂಲವಾಗ ಬಹುದ!

ಕೇಂದ್ರ ಸರ್ಕಾರದ್ದಾದ್ರೆ ಹಿಂದಿ ಸರಿ ಅಂತ ತಾನೆ ? .. ಉಪದೇಶ ಹೇಳೋಕ್ಕೆ ಬದನೆಕಾಯಿ ತಿನ್ನೋಕ್ಕೆ ಅಂತ ತಾನೆ ?

ಇನ್ನು ಕೊನೆಯದಾಗಿ ಡಿ.ವಿ.ಜಿ ಯವರ ಕವನ ನಿಮ್ಮಂತ ಇಂಗ್ಲಿಷ್ ನ 'hate' ಮಾಡೋ ನರಜಾತಿಗು ಹೋಲುತ್ತೆ ... ರಾಷ್ಟ್ರ ಭಾಷೆ ಅಂತ ಸುಳ್ಳು ಹೇಳ್ಕೊಂಡೇ ಇತರ ಭಾಷಿಕರನ್ನ ಎರಡನೆ ದರ್ಜೆಗೆ ಇಳಿಸೋ ಹಿಂದಿಯರಿಗೂ ಅನ್ವಯಿಸುತ್ತೆ...

ನಮ್ಮ ವಾದ ಇಷ್ಟೇ ನಾನಾ ಪ್ರಾದೇಶಿಕ ಭಾಶಿಕರಿರುವ ಭಾರತದಲ್ಲಿ ಒಂದು ಜನಾಂಗದ ಭಾಷೆಗೆ ಮಾತ್ರ ಪ್ರಾಮುಖ್ಯತೆ ಕೊಡೋದು ಎಷ್ಟು ಸಮಂಜಸ ? ... ರಾಷ್ಟ್ರೀಯ ಮಟ್ಟದಲ್ಲಿ ಎಲ್ಲರೂ ಸಮನಾಗಿ ಸ್ಪರ್ದಿಸೋಕ್ಕೆ ಇಂಗ್ಲಿಷ್ ಸೂಕ್ತ. . ಹಿಂದಿ ಅನ್ನೋ ಪ್ರಾದೇಶಿಕ ಭಾಷೆ ನ ಹಿಂದಿಯೇತರರ ಮೇಲೆ ಹೇರುವುದು ಸಂವಿದಾನದ ಉಲ್ಲಂಗನೆ.. ಹಾಗು ಒಂದು ಜನಾಂಗಕ್ಕೆ/ಭಾಷೆಗೆ ಮಾತ್ರ ಮೇಲುಗೈ..

ಕ್ಲಾನ್ಗೊರೌಸ್

Anonymous ಅಂತಾರೆ...

@ಕ್ಲಾನ್ಗೊರೌಸ್

ನನಗೆ ನೀವಿತ್ತು ಉತ್ತರ ತಕ್ಕುದ್ದು ಎನ್ನಿಸಲಿಲ್ಲ. ಬಹುಶಃ ಭಾಷಾವಿಜ್ಞಾನದ ಹೊತ್ತಗೆಗಳನ್ನು ನೀವು ಓದಬೇಕೇನೋ.!

ತೆಲುಗು ಲಿಪಿ ಹಳೆಗನ್ನಡದ ಲಿಪಿಯೇ. ತೆಲುಗನ್ನು ಹಳಗನ್ನಡ ಲಿಪಿಯಲ್ಲಿ ಬರೆಯಲು ಕನ್ನಡದರಸರು ತೆಲುಗುನಾಡನ್ನು ಹಲವು ವರ್ಷ ಆಳಿದ್ದು ಕಾರಣ. ಆದರೂ ತೆಲುಗಿಗೆ ಬೇಕಾದ ರಾzಉ ಮುಂತಾದ ಗುರುತುಗಳೇ ಆ ಲಿಪಿಯಲ್ಲಿ ಇಲ್ಲ. ಏಕೆಂದರೆ ತೆಲುಗಿಗೆ ಹಳಗನ್ನಡ ಲಿಪಿ ಒಂದು ಬಗೆಯ ಹೊರಗಡೆಯ ಲಿಪಿ.

ಇನ್ನು ತಮಿಳು ಲಿಪಿಯ ಬಗ್ಗೆ. ಭಾಷೆಗಳ ಸಾಮ್ಯತೆಯನ್ನು ಲಿಪಿಯ ಮೇಲಲ್ಲ ಎಣಿಸೋದು. ಭಾಷೆಗಳ ಸಾಮ್ಯತೆಯನ್ನು ವ್ಯಾಕರಣ, ಪದಗಳು, ಉಲಿಕೆಯ ಮೇಲೆ ನೋಡಬೇಕು. ಇಂದು ಮಲೆಯ ಭಾಷೆಯನ್ನು, ಇಂಗ್ಲಿಶ್ ಲಿಪಿಯಲ್ಲಿ ಬರೀತಾರೆ ಎಂದು ಮಲೆಯ ಇಂಗ್ಲಿಶ್ಗೆ ಹತ್ತಿರವಲ್ಲ.

ವ್ಯಾಕರಣವಾಗಿ, ಕನ್ನಡ ಭಾಷಾವಿಜ್ಞಾನದ ದೃಷ್ಟಿಯಿಂದ ತಮಿಳನ್ನು ಅಧ್ಯಯನ ಮಾಡುವುದು ಅವಶ್ಯಕ. ಏಕೆಂದರೆ ಉದಾಹರಣೆಯಾಗಿ

ಒನ್ಱು => ಒಂದು
ಕುನ್ಱು => ಕುಂದು

ಇಲ್ಲಿ ಮೊದಲ ಒನ್ಱು, ಕುನ್ಱು ಮುಂತಾದವು ಇನ್ನೂ ತಮಿಳಲ್ಲಿ ಇದ್ದು, ಅವೇ ಮೂಲದ್ರಾವಿಡದ ಬೇರುಗಳಿಗೆ ಹತ್ತಿರವೆಂದು ಪಂಡಿತ ಅಭಿಪ್ರಾಯ. ಅಷ್ಟೇ ಅಲ್ಲ ಕನ್ನಡ ಹಲವು root, ಧಾತುಗಳಿಗೆ ನಮಗೆ ತಮಿಳಿನ ಅಧ್ಯಯನ ಬೇಕಾಗುವುದು.

ಒರ್‍ ಎಂಬ ಧಾತುವಿಂದ ಒಬ್ಬ, ಓರಣ, ಒಗ್ಗು, ಒಪ್ಪು, ಓರಗಿತ್ತಿ ಮುಂತಾದ ಪದಗಳು ಬಂದಿವೆ. ಈ ಒರ್‍ ಧಾತು ಕನ್ನಡದಲ್ಲಿ ಬಳಕೆಯಲ್ಲಿಲ್ಲ ಆದರೆ ತಮಿಳಲ್ಲಿ ಇದೆ.

ಹಾಗೆ ಮೊತ್ತಮೊದಲು (ಇಲ್ಲಿ ಮೊತ್ತ ಹೇಗೆ?), ಕಟ್ಟಕಡೆ( ಇಲ್ಲಿ ಕಟ್ಟ ಹೇಗೆ), ನಟ್ಟನಡುವೆ( ಇಲ್ಲ ನಟ್ಟ ಹೇಗೆ) ಇದಕ್ಕೆ ತಮಿಳು ವ್ಯಾಕರಣದ ಹೋಲಿಕೆ ಸಹಾಯವಾಗುವುದು.

ಆದರೆ ಒಟ್ಟಾರೆ ದ್ರಾವಿಡಿಯನ್ ನುಡಿಗಳಾದ ಕನ್ನಡ ತಮಿಳು ತೆಲುಗು ಮಲಯಾಳಂ ಗಳು ಸ್ವಾಭವಿಕವಾಗೇ ಹೋಲಿಕೆ ತೋರುವುವು. ಒಂದೇ ಪ್ಯಾಮಿಲಿಯಗ ನುಡಿಗಳು ತಾನೆ.

Anonymous ಅಂತಾರೆ...

ಮಾಯ್ಸ ಅವರೇ,

ನೀವು ಹೇಳಿದ ಹಾಗೆ , ನಾಲ್ಕೂ ಭಾಷೆಗಳು ದ್ರಾವಿಡ ಮೂಲ ಸರಿ. ಇನ್ನು ನೀವೇ ಹೇಳಿದ ಹಾಗೆ :
'ಭಾಷೆಗಳ ಸಾಮ್ಯತೆಯನ್ನು ವ್ಯಾಕರಣ, ಪದಗಳು, ಉಲಿಕೆಯ ಮೇಲೆ ನೋಡಬೇಕು'. ಪದಗಳು, ಉಲಿಕೆಯ ಆದರದ ಮೇಲೆ ನೆ ತೆಲುಗು ಹತ್ತಿರ ಅಂದೆ, ತೆಲುಗಿನಲ್ಲಿ ಅನೇಕ ಪದಗಳು ಹಾಗು ಅದರ ಉಲಿಕೆ ಕನ್ನಡದಿಂದನೆ ಎರವಲು ಪಡೆದಿವೆ... . ತಮಿಳಿಂದ ಕನ್ನಡ ಪ್ರಭಾವ ಪಡೆದಿಲ್ಲ ಅನ್ನೋದು ನನ್ನ ವಾದವಲ್ಲ. ಒಮ್ಮೆ ನೀವು ಹಂಪಿಯ ವಸ್ತು ಸಂಗ್ರಹಕ್ಕೆ ಭೇಟಿ ನೀಡಿ.. ಅಲ್ಲಿ ಬಹಳ ಸೊಗಸಾಗಿ ಕನ್ನಡ ಹಾಗು ತೆಲುಗು ನಡೆದು ಬಂದ ದಾರಿ ಒಂದು ಚಾರ್ಟ್ನಲ್ಲಿ ವಿವರಿಸಿದ್ದಾರೆ.. . ಇನ್ನು ಹಬ್ಬಗಳ (ಯುಗಾದಿ, ಸಂಕ್ರಾಂತಿ, ವರಮಹಾಲಕ್ಷ್ಮಿ ದೀಪಾವಳಿ, ನವರಾತ್ರಿ, ) ಆಚರಣೆಯಲ್ಲೂ ಕನ್ನಡಿಗರ ಹಾಗು ತೆಲುಗರ ಆಚರಣೆಗಳು ಬಹುತೇಕ ಒಂದೆ. ನಾನು, ಕನ್ನಡದವ ಹಿಂದಿ ನಮ್ಮ ಚಿಕ್ಕಮ್ಮ ಅಂದರೆಲ್ಲ.. ಅದುಕ್ಕೆ ಹಿಂದಿಗಿಂತ ಇತರೆ ದ್ರಾವಿಡ ಭಾಷೆಗಳು/ಸಂಸ್ಕೃತಿ ಕನ್ನಡಕ್ಕೆ ಹತ್ತಿರ ಅನ್ನೋದಕ್ಕೆ ತೆಲುಗಿನ ಉದಾಹರಣೆ ಕೊಟ್ಟೆ ಅಷ್ಟೆ.

ಕ್ಲಾನ್ಗೊರೌಸ್

Anonymous ಅಂತಾರೆ...

ಮಾಯ್ಸ ಅವರೇ :
ಈ ಕೊಂಡಿ ನೋಡಿ : http://tdil.mit.gov.in/TelugulScriptDetailsApr02.pdf

ಭಾಷೆ ವಿಜ್ಞಾನಿಗಳು ಎಷ್ಟು ಬಾರಿ ತೆಲುಗು ಹಾಗು ಕನ್ನಡ ದ ಹೋಲಿಕೆ ವಿವರಿಸಿದ್ದಾರೆ ಅಂತ.. ಒಂದು ಭಾಷೆಯಾ ವ್ಯಾಕರಣ, ಪದಗಳು, ಲಿಪಿ ಹಾಗು ಉಚ್ಚಾರಣೆಗಳಿಲ್ಲದೆ ಇರಲು ಸಾದ್ಯವೇ ? .
ಇನ್ನು ಈ ಕೊಂಡಿ ನೋಡಿ : http://en.wikipedia.org/wiki/Telugu_script
ಇದರಲ್ಲಿ ಬಲಗಡೆ ... Sister systems: Kannada ಅಂತ ಇದೆ ನೋಡಿ.. ಅದಕ್ಕೆ ನಾನು ಸೋದರಿ ಅಂತ ಹೇಳಿದೆ ಅಷ್ಟೆ.

ಕ್ಲಾನ್ಗೊರೌಸ್

Anonymous ಅಂತಾರೆ...

@ಕ್ಲಾನ್ಗೊರೌಸ್

೧)ತೆಲುಗು ಮತ್ತು ಕನ್ನಡಕ್ಕೆ ಹೋಲಿಕೆ ಇದೆ. ಆದರೆ ತಮಿಳು ಕನ್ನಡಕ್ಕೆ ಹೋಲುವಷ್ಟು ತೆಲುಗು ಹೋಲಲ್ಲ. ಹಾಗೆ ನೋಡಿದರೆ ಹಿಂದಿ ಸಂಸ್ಕೃತಕ್ಕಿಂತ ಕನ್ನಡಕ್ಕೆ ಹೋಲುವುದು. ಒಮ್ಮೆ ಸಂಸ್ಕೃತದ, ಕನ್ನಡದ, ಹಿಂದಿಯ ಕ್ರಿಯಾಪದ ರೂಪಗಳನ್ನು ಗಮನಿಸಿರಿ.

೨)ಲಿಪಿ ಇಲ್ಲದೇ ವ್ಯಾಕರಣ, ಪದಗಳು, ಉಚ್ಚಾರಣೆಗಳು ಇರಲು ಸಾಧ್ಯ. ಸಾಧವೇನು ಹಾಗೇ ಇರುವುದು. ಬಹುಶಃ ನೀವು ಇದನ್ನು ಅರಿತಂತಿಲ್ಲ. ಸಂಸ್ಕೃತದ ಮೊದಲ ವ್ಯಾಕರಣ ದೇವನಾಗರಿಯಲ್ಲಿ ಬರೆಯಲಿಲ್ಲ. ಕನ್ನಡದ ಎ ಒ, ಳ, ಱ,ಮತ್ತು ೞ ಗಳಿಗೆ ದೇವನಾಗರಿಯಲ್ಲಿ ಲಿಪಿಚಿಹ್ನೆಗಳಿಲ್ಲ ಎಂದೂ ಅದನ್ನು ಬಳಸುವ ವ್ಯಾಕರಣ, ಪದ, ಉಲಿಕೆ ಇಲ್ಲ ಎನ್ನಲು ಬರದು.

ಭಾಷೆಗೆ ಉಚ್ಚಾರಣೆ ಮೂಲ. ಉಚ್ಚಾರ ಶಬ್ದಗಳು ಕೂಡಿ ಪದ. ಪದಗಳು ಕೂಡಿ ಸಾಲು/ವಾಕ್ಯ. ವಾಕ್ಯಗಳು ಕೂಡಿ ಮಾತು. ಆ ಮಾತನ್ನು, ಪದವನ್ನು, ಶಬ್ದವನ್ನು ಬರೆಯಲು ಬಳಿಕ ಲಿಪಿ. ಇಂದಿಗೂ ಹಲವು ಭಾಷೆಗಳಿಗೆ ಲಿಪಿಯಿಲ್ಲ. ಹಾಗೆಂದ ಮಾತ್ರಕ್ಕೆ ಅವಕ್ಕೆ ವ್ಯಾಕರಣ, ಪದ, ಉಚ್ಚಾರವಿಲ್ಲ ಎಂದಲ್ಲ.

ಹಲವು ಸರತಿ ಒಂದು ಭಾಷೆಯನ್ನು ಬೇರೆ ಭಾಷೆಯವರು ಬರೆಯಲು ಯತ್ನಿಸಿ ಬೇರೆ ಭಾಷೆಯ ಲಿಪಿಯನ್ನು ಬಳಸುವುದೂ ಉಂಟು. ಇಂಗ್ಲಿಶನ್ನು ರೋಮನ್ ಲಿಪಿಯಲ್ಲಿ ಬರೆದ ಹಾಗೆ.

ಕನ್ನಡಕ್ಕೆ ಬರಹವು ಸಂಸ್ಕೃತ, ಪ್ರಾಕೃತಕ್ಕಿಂತ ತಡವಾಗಿ ಬಂದಿದೆ. ಹಾಗೂ ಮೊದಲು ಕನ್ನಡದ ಬರಹವನ್ನು ಸುರು ಮಾಡಿದವರು ಸಂಸ್ಕೃತ ಮತ್ತು ಪ್ರಾಕೃತದ ಜ್ಞಾನವುಳ್ಳವರು ಎಂದು ಹೇಳಬಹುದು ನಿಶ್ಚಿತವಾಗಿ. ಬಳಿಕವಷ್ಟೆ ಕನ್ನಡದ್ದೇ ಆದ ಕೆಲ ಸದ್ದುಗಳಿಗೆ(ಒ,ಎ,ಱ,ಳ,ೞ) ಲಿಪಿಗುರುತುಗಳನ್ನು ಸೇರಿಸಲಾಗಿದೆ.

ಹಾಗೆಂದ ಮಾತ್ರಕ್ಕೆ ಕನ್ನಡದ ಬರೆವಣಿಗೆಗೆ ಮುನ್ನ ಕನ್ನಡ ಭಾಷೆ ಇರಲಿಲ್ಲವೆಂದು ಹೇಳೋದು ಪೆದ್ದುತನ ಮತ್ತು ಹಾಸ್ಯಾಸ್ಪದ. ಇಂದಿಗೂ ಕನ್ನಡದ ಬರೆವಣಿಗೆ ಮತ್ತು ಆಡುಮಾತಿಗೆ ಬೇರೆ ಬೇರೆ ವ್ಯಾಕರಣ, ಉಚ್ಚಾರ ಇರುವುದಕ್ಕೆ ಬರಹ-ಕನ್ನಡವನ್ನು ದೃಷ್ಟಿಯಲ್ಲಿಟ್ಟುಕೊಂಡು ವ್ಯಾಕರಣವನ್ನು ರಚಿಸಿದ ಅಷ್ಟು ಮಂದಿ ಸಂಸ್ಕೃತದ ವ್ಯಾಕರಣವನ್ನು ಅನುಸರಿಸಿರುವುದು.

ಇನ್ನು ತೆಲುಗು ಲಿಪಿಯ ವಿಚಾರವಾಗಿ ಆ ವೆಬ್ ಸೈಟಲ್ಲಿ ಕೊಟ್ಟಿರುವುದು ತೆಲುಗು ಪಂಡಿತರ ಮಾತುಗಳು. ತೆಲುಗು ಭಾಷಾಪಂಡಿತರೂ ಹಲವು ಸರತಿ ತಮಿಳು ಭಾಷಾಪಂಡಿತರಂತೆ ತಮ್ಮ ನುಡಿಗೆ ಕನ್ನಡದಿಂದ ಪ್ರಭಾವ ಕಡಮೆ ಎಂದೇ ತೋರುವರು. ದಿಟವಾಗಿ ನೋಡಿದರೆ ತೆಲುಗು ಲಿಪಿ, ಹಳಗನ್ನಡ ಲಿಪಿಯೇ. ಶಾತವಾಹನರು, ಚಾಲುಕ್ಯರು, ವಿಜಯನಗರದ ಅರಸರು ಕನ್ನಡದ ಲಿಪಿ ಬಳಸಿಯೇ ತೆಲುಗನ್ನ ಬರೆದಿರುವುದು. ಅದನ್ನು ಆ ವೆಬ್ ಸೈಟಲ್ಲಿ ನೇರವಾಗಿ ಹೇಳದೇ, ಅಶೋಕನ ಬ್ರಾಹ್ಮಿಯಿಂದ ಬಂದಿದೆ ಎಂದು ತಿಪ್ಪೇ ಸಾರಿಸಿದ್ದಾರೆ.

ಆದರೆ ತಮಿಳರು ತಮ್ಮ ನುಡಿಯಲ್ಲಿ ಇರದ ಸದ್ದುಗಳಿಗೆ ಲಿಪಿಗುರುತು ಮಾಡಿಕೊಳ್ಳಲೇ ಇಲ್ಲ. ಅದಕ್ಕೆ ಬದಲಾಗಿ ಗ್ರಂಥ ಎಂಬ ಮತ್ತೊಂದು ಲಿಪಿ ಬಳಸಿ ಸಂಸ್ಕೃತವನ್ನು ಬರೆದರು. ಸಂಸ್ಕೃತ ಭಾಷೆಯು ನಾನಾ ಪ್ರಾಂತ್ಯಗಳಲ್ಲಿ ನಾನಾ ಲಿಪಿಯಲ್ಲಿ ಬರೆಯಲ್ಪಟ್ಟಿತು. ಅಕ್ಬರ್‍ ಅರಬ್ಬಿ ಲಿಪಿ ಬಳಸಿ ಸಂಸ್ಕೃತವನ್ನು ಬರೆಸಿದ್ದಾನಂತೆ. ಹಾಗೆಂದ ಮಾತ್ರಕ್ಕೆ ಸಂಸ್ಕೃತದ ವ್ಯಾಕರಣ ಲಿಪಿ ಬದಲಾದಂತೆ ಬದಲಾಯಿತೇನು?

ತೆಲುಗು ಇತಿಹಾಸ ತಜ್ಞರು ಮತ್ತು ಭಾಷಾವಿಜ್ಞಾನಗಳ ಮಾತುಗಳನ್ನು ಗಮನಿಸಿರಿ. ಹಕ್ಕ ತೆಲುಗನಂತೆ, ಕೃಷ್ಣದೇವರಾಯ ತೆಲುಗನಂತೆ, ಕನ್ನಡವು ತೆಲುಗಿನಿಂದ ಬಂದಿದೆಯಂತೆ. ಕನ್ನಡ ಲಿಪಿ ಕೂಡ ತೆಲುಗು ಲಿಪಿಯಿಂದಂತೆ ಹೀಗೆಲ್ಲ ತಪ್ಪು ತಪ್ಪು ಬರೆದಿರುವ ಬರಹಗಳು ನೆಟ್ ಅಲ್ಲಿ ಸಿಗುವುವು. ತಮಿಳರೂ ಹೀಗೆ ಕನ್ನಡ ತಮಿಳಿಂದ ಎಂದು ಮೊದಲು ಹೇಳಿಕೊಂಡು ತಿರುಗುತ್ತಿದ್ದರು. ಆಮೇಲೆ ಹಲವು ಭಾಷಾ ತಜ್ಞರು ಕನ್ನಡದಲ್ಲಿರುವ, ತಮಿಳಲ್ಲಿ ಇರದ ಮೂಲದ್ರಾವಿಡ ಭಾಷೆಯ ಅಂಶಗಳನ್ನು, ಕನ್ನಡದ ಪ್ರಭಾವವಿರುವ ತಮಿಳು ಶಾಸನಗಳನ್ನು ಉಲ್ಲೇಖಿಸಿ ಅದನ್ನು ಖಂಡಿಸಿದ್ದಾರೆ. ಹಾಗೆ ತೆಲುಗರನ್ನೂ ಕೂಡ.

ಮತ್ತೆ ಮತ್ತೆ ಹೇಳುವ ಬದಲು ತಿಳಿಸಬೇಕಾಷ್ಟನ್ನು ಇಲ್ಲೇ ಹೇಳುವೆನು.

ದ್ರಾವಿಡನುಡಿಗಳಲ್ಲಿ ಮೂರು ಬಗೆಗಳು
೧)ಬಡಗಣ ದ್ರಾವಿಡನುಡಿಗಳು (Brahui ಮುಂತಾದವು )
೨)ನಡುವಣ ದ್ರಾವಿಡನುಡಿಗಳು (ತೆಲುಗು, ಕೊಂಡ ಮುಂತಾದವು. ತುಳವನ್ನು ಇದಕ್ಕೆ ಸೇರಿಸಬಹುದು ಎಂಬ ಮಾತಿದೆ)
೩) ತೆಂಕಣ ದ್ರಾವಿಡನುಡಿಗಳು( ಕನ್ನಡ, ತಮಿಳು, ಮಳಯಾಳಂ, ಕೊಡವ, ಬಡಗ, ಇರುಳ, ತೋದ ಮುಂತಾದವು )

ಈ ಬಗೆಗಳನ್ನು ವ್ಯಾಕರಣದ ಸಾಮ್ಯತೆಯ ಮೇಲೆ ಮಾಡಲಾಗಿದೆ. ನಿಮ್ಮ ಸಂಬಂಧದ ಭಾಷೆಯಲ್ಲಿ ಹೇಳುವುದಾದರೆ...
ಮೂಲ ದ್ರಾವಿಡಕ್ಕೆ ಮೂರು ಮಕ್ಕಳು ತೆಂಕಣ, ನಡುವಣ, ಬಡಗಣ.
ಆ ಮಕ್ಕಳಿಗೆ ಇನ್ನಷ್ಟು ಮಕ್ಕಳು. ಈಗ ಕನ್ನಡ, ತಮಿಳು ಮುಂತಾದ ತೆಂಕಣ ದ್ರಾವಿಡ ನುಡಿಗಳು ಒಂದೇ ತಾಯಿಯ ಕವಲುಗಳು, ಒಡಹುಟ್ಟಿದವು, ಅಕ್ಕತಂಗಿಯರು, ಅವಳಿಜವಳಿಗಳು :), ಸೋದರಿಯರು. ಕನ್ನಡಕ್ಕೆ ತೆಲುಗು ಚಿಕ್ಕಮ್ಮನ ಮಗಳು, Cousin ಸ್ವಂತ ತಂಗಿ/ಅಕ್ಕ ಅಲ್ಲ. ಕನ್ನಡದ ತಾಯಿಯ ಸೋದರಿಯ ಮಗಳು ತೆಲುಗು.

ಮತ್ತೆ ಇನ್ನೂ ವಿವರಿಸಲ್ಲ. ಸಾವಧಾನವಾಗಿ ಮತ್ತೆ ಓದಿಕೊಳ್ಳಿರಿ..

ನನ್ನಿ. ಬೀಳ್ಕೊಡುವೆನು.

Anonymous ಅಂತಾರೆ...

Preetiya Kannadavare,
Konego neevu samanya janaru "Mavina hannige" veme hege madisuvudu antha heLale illa.
Nanna mavina totad iLuvari tumba kadimeyagide.

Bora,
pragatipar raita,sumkandakatte.

Anonymous ಅಂತಾರೆ...

Preetiya Kannadavare,
Konego neevu samanya janaru "Mavina hannige" veme hege madisuvudu antha heLale illa.
Nanna mavina totad iLuvari tumba kadimeyagide.

Bora,
pragatipar raita,sumkandakatte.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails