ಬೇಸಿಗೆ ರಜಾ ಶಿಬಿರಗಳು ಸಾವಿರಾರು. ಇಂಥದ್ರಲ್ಲಿ ಇವತ್ತಿನ ದಿವ್ಸ ಮಕ್ಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಹುಟ್ಟುಸ್ಬೇಕು, ಹೆಚ್ಚುಸ್ಬೇಕು ಅಂತಲೇ ಬೆಂಗಳೂರಲ್ಲಿ ಒಂದು ಶಿಬಿರ ನಡುಸ್ತಿದಾರೆ. ಇವತ್ತು ಈ ಶಿಬಿರದ ಬಗ್ಗೆ ಮಾತಾಡಕ್ಕೆ ಇರೋದಕ್ಕೆ ಕಾರಣ ಇಷ್ಟೇ ಅಲ್ಲಾ ಗುರು!
ಎಲ್ಲದರಂಥದಲ್ಲ ಈ ಶಿಬಿರ!ಏಳನೇ ತರಗತಿ ಬರೆದಿರೋ ಮಕ್ಕಳಿಗೆ ಅಂತಾ ಈ ಶಿಬಿರಾನಾ ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಶಾಲೆ ಮತ್ತು ದಿ ಬೆಂಗಳೂರು ಸೈನ್ಸ್ ಫೋರಂನೋರು ಜಂಟಿಯಾಗಿ ನಡುಸ್ತಿದಾರೆ. 2009ರ ಸಾಲಿನ ಶಿಬಿರ ಏಪ್ರಿಲ್ 4ರಂದು ಶುರುವಾಗಿದೆ. ಪ್ರತಿದಿನ ಬೆಳಗ್ಗೆ 9.30ರಿಂದ 11.30ರವರೆಗೆ 19.04.2009ರ ತನಕ ನಡ್ಯೋ ಈ ಕಾರ್ಯಕ್ರಮಾನ ಇಂಗ್ಲಿಷು ಮತ್ತು ಕನ್ನಡದಲ್ಲಿ ನಡುಸ್ತೀವಿ ಅಂತ ಹೇಳ್ಕೊಂಡ್ರೂ ಹೆಚ್ಚಾಗಿ ತರಗತಿಗಳು ನಡ್ಯದು ಕನ್ನಡದಲ್ಲೇ ಗುರು! ವಿಜ್ಞಾನದ ನಾನಾ ಕ್ಷೇತ್ರಗಳಿಗೆ ಸೇರಿದ ನಾಡಿನ ಅನೇಕ ಪರಿಣಿತರುಗಳು ಈ ಶಿಬಿರದಲ್ಲಿ ಭಾಗವಹಿಸ್ತಾರೆ. ಒಟ್ಟು ಹದಿನೈದು ದಿನ ನಡ್ಯೋ ಶಿಬಿರದ ಶುಲ್ಕ ಬರೀ 180 ರೂಪಾಯಿ.
ಶಿಬಿರದ ಭಾಷಣಕಾರರು!ಈ ಶಿಬಿರದಲ್ಲಿ ಒಂದೊಂಡು ದಿನ ಒಬ್ಬೊಬ್ಬ ಪರಿಣಿತರು ಬಂದು ಮಕ್ಕಳಲ್ಲಿ ಆಸಕ್ತಿ ಹುಟ್ಟುಹಾಕೋ ರೀತೀಲಿ ತಮ್ಮ ಕ್ಷೇತ್ರದ ಬಗ್ಗೆ ಪರಿಚಯ ಮಾಡ್ಕೊಡ್ತಾರೆ. ಈ ಪರಿಣಿತರ ಪಟ್ಟೀನಾ ಒಸಿ ನೀವೂ ನೋಡಿ:
ಪ್ರೊ. ಎಚ್.ಆರ್.ರಾಮಕೃಷ್ಣರಾವ್ - ಇವರು ಕ್ರೈಸ್ತ್ ಕಾಲೇಜಿನಲ್ಲಿ ಪ್ರಾಣಿಶಾಸ್ತ್ರದ ಅಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ.
ಪ್ರೊ. ವಿ.ಕೆ. ದೊರಸ್ವಾಮಿ - ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್ ಆಗಿದ್ದಾರೆ.
ಡಾ. ತಿರುಮಲಾಚಾರ್ - ಕರ್ನಾಟಕ ಸರ್ಕಾರದ ವೈದ್ಯಕೀಯ ಕಲಿಕೆ ಇಲಾಖೆಯ ನಿರ್ದೇಶಕರಾಗಿದ್ದವರು.
ಎಂ. ಶಿವಶಂಕರ್ (ಅಪರಂಜಿ) - ಇವ್ರು ಇಂಜಿನಿಯರಿಂಗ್ ವಿಜ್ಞಾನದವ್ರು.
ಡಾ. ಸಿ.ಆರ್. ಚಂದ್ರಶೇಖರ್ - ಇವರು ನಿಮ್ ಹ್ಯಾನ್ಸ್ ಸಂಸ್ಥೆಯ ಮನಶಾಸ್ತ್ರಜ್ಞರು ಮತ್ತು ವೈದ್ಯಕೀಯ ಬರಹಗಾರರು.
ಡಾ. ನಾ.ಸೋಮೇಶ್ವರ - ’ಥಟ್ ಅಂತ ಹೇಳಿ’ ಕಾರ್ಯಕ್ರಮ ಖ್ಯಾತಿಯ ಇವರು ವೈದ್ಯರು ಮತ್ತು ವೈದ್ಯಕೀಯ ಬರಹಗಾರರು.
ಡಾ. ಕೆ.ಎಸ್. ನಾಗೇಶ್ - ಆರ್.ವಿ ದಂತ ವಿದ್ಯಾಲಯದ ಪ್ರಾಂಶುಪಾಲರು.
ಪ್ರೊ. ಎಂ.ಆರ್. ನಾಗರಾಜ್ - ಇವರು ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ರಸಾಯನ ಶಾಸ್ತ್ರದ ಪ್ರೊಫೆಸರ್ ಆಗಿರೋರು.
ಡಾ. ವೈ. ತುಳಜಪ್ಪ - ಬಸವನಗುಡಿ ನ್ಯಾಷನಲ್ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕರು.
ಡಾ. ಬಿ.ಎಸ್.ಶೈಲಜ - ಇವರು ಬೆಂಗಳೂರಿನ ಜವಹರಲಾಲ್ ನೆಹರೂ ತಾರಾಲಯದಲ್ಲಿ ವಿಜ್ಞಾನಿಯಾಗಿದ್ದಾರೆ.
ಶ್ರೀ. ಬಿ.ಕೆ ವಿಶ್ವನಾಥರಾವ್ - ಇವರು ನಿವೃತ್ತ ಪ್ರಾಧ್ಯಾಪಕರು.
ಶ್ರೀ. ಟಿ.ಕೆ.ಅನಂತರಾಮು - ಭಾರತೀಯ ಭೂ ಸರ್ವೇಕ್ಷಣಾ ಇಲಾಖೆಯವರು.
ಶ್ರೀ. ಬಿ.ಆರ್ ಗುರುಪ್ರಸಾದ್ - ಇವ್ರು ಬೆಂಗಳೂರಿನ ಇಸ್ರೋದಲ್ಲಿ ವಿಜ್ಞಾನಿ.
ಇವರಲ್ಲದೆ ಪ್ರಿಸ್ಮ್ ಪ್ರಕಾಶನ ಸಂಸ್ಥೆಯೋರಾದ ಶ್ರೀಮತಿ ವೀಣಾ ರಂಗನಾಥ್, ವಿಜ್ಞಾನ ಕಾರ್ಯಕರ್ತರಾದ ಶ್ರೀ. ಹುಲಿಕಲ್ ನಾಗರಾಜ್, ವಿಜ್ಞಾನ ಬರಹಗಾರರಾದ ಶ್ರೀಮತಿ ಇಂದಿರಾ ಮೂರ್ತಿ, ಬಸವನಗುಡಿಯ ನ್ಯಾಷನಲ್ ಕಾಲೇಜಿನ ಸಂಸ್ಕೃತ ವಿಭಾಗದ ಡಾ. ಎಂ.ಕೆ ಶ್ರೀಧರ್, ಆಕಾಶವಾಣಿಯ ಡಾ. ಎಚ್.ಆರ್. ಕೃಷ್ಣಮೂರ್ತಿಯವ್ರೂ ಈ ಶಿಬಿರದ ಬೋಧಕವರ್ಗದಲ್ಲಿದಾರೆ.
ಬೋಧನೆಯ ಜೊತೆಗೆ ತಾರಾಲಯ, ಭೂ ವಿಜ್ಞಾನ ವಸ್ತುಪ್ರದರ್ಶನಾಲಯಗಳಿಗೆ ಭೇಟಿ - ವೈಜ್ಞಾನಿಕ ಮಾದರಿಗಳನ್ನು ಮಾಡೋ ತರಬೇತಿಗಳೂ ಇದರಲ್ಲಿವೆ.
ಕಲಿಕೆ ಕನ್ನಡದಲ್ಲೇ ಬೆಸ್ಟು ಅಂದ ಎಚ್ಚೆನ್!ಬೆಂಗಳೂರು ವಿಜ್ಞಾನ ವೇದಿಕೆ "The Bangalore Science Forum" ಸಂಸ್ಥೆಯನ್ನು ಹುಟ್ಟು ಹಾಕಿದೋರು ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲರಾಗಿದ್ದ ಗಾಂಧೀವಾದಿಗಳೂ, ಸ್ವತಂತ್ರ ಹೋರಾಟಗಾರರೂ, ಖ್ಯಾತ ಶಿಕ್ಷಣತಜ್ಞರೂ ಆಗಿದ್ದ ಡಾ. ಎಚ್. ನರಸಿಂಹಯ್ಯನೋರು. ಇವ್ರು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳುಸ್ಬೇಕು ಅನ್ನೋದ್ರು ಜೊತೆ ಮಕ್ಕಳ ಕಲಿಕೆ ಕನ್ನಡದಲ್ಲೇ ಇರಬೇಕು ಅಂತಾ ಪ್ರತಿಪಾದುಸ್ತಿದ್ದೋರು. "ಅಯ್ಯಂದಿರಾ, ನಿಮಗೆ ದುಡ್ಡು ಬೇಕೂ ಅಂತಾ ನೀವೂ ಇಂಗ್ಲಿಷ್ ಮಾಧ್ಯಮ ಶಾಲೆ ನಡ್ಸಕ್ ಮುಂದಾಗಿರ್ಬೋದು, ಅದು ಹಾಳಾಗ್ ಹೋಗ್ಲಿ... ಬೋರ್ಡಲ್ ಏನಾದ್ರೂ ಬರ್ಕೊಳ್ಳಿ... ಆದ್ರೆ ಪಾಠ ಮಾಡೋವಾಗ ಮಕ್ಳಿಗೆ ಅರ್ಥ ಮಾಡ್ಸೋದೆ ನಿಮ್ ಉದ್ದೇಶ ಆಗಿದ್ರೆ ಕನ್ನಡದಲ್ಲಿ ಹೇಳ್ಕೊಡ್ರಯ್ಯಾ" ಅಂತಿದ್ರು ಎಚ್ಚೆನ್ ಅವ್ರು ಅಂತ ಬಲ್ಲವರು ನೆನಪು ಮಾಡ್ಕೋತಾರೆ. ಎಚ್ಚೆನ್ ಅವರು ಹೇಳಿದ್ನ ಅರ್ಥ ಮಾಡ್ಕೊಂಡು ಇವತ್ತು ಇಂಥಾ ಅರ್ಥಪೂರ್ಣ ಶಿಬಿರಗಳನ್ನು ನಡುಸ್ತಿರೋ ಬೆಂಗಳೂರು ಸೈನ್ಸ್ ಫೋರಂನೋರಿಗೆ ಒಂದು ಅಭಿನಂದನೆ ಸಲ್ಸೋಣಾ ಗುರು!