ಸಾರ್ವಜನಿಕ ಸ್ಥಳಗಳ ಹೆಸರಿಡಲೊಂದು ನಿಯಮ!

ಸಾರ್ವಜನಿಕ ಸ್ಥಳಗಳಿಗೆ ಹೊಸದಾಗಿ ಹೆಸರಿಡಬೇಕಾದ್ರೆ ಅಥವಾ ಇರೋ ಹೆಸರು ಬದಲಾಯಿಸಬೇಕಾದ್ರೆ ಅನುಸರಿಸಬೇಕಾಗಿರೊ ನಿಯಮಾವಳಿಗಳ್ನ ಕರ್ನಾಟಕ ಸರ್ಕಾರ ಪ್ರಕಟಿಸಿದೆ ಅನ್ನೋ ಸುದ್ದಿ ಬಂದಿದೆ ಗುರು! ಇದು ಸರಿಯಾದ ರೀತೀಲಿ ನಾಡಿನ ಸ್ವಂತಿಕೆ ತೋರಿಸಕ್ಕೆ ಇರೋ ಒಳ್ಳೇ ವ್ಯವಸ್ಥೆ ಆಗೋದಾದ್ರೆ ಸಕ್ಕತ್ ಒಳ್ಳೇದು.

ಹೊಸ ಹೆಸರು ಇಡೋವಾಗ...

ಯಾವುದೇ ಒಂದು ರಸ್ತೆ, ಬಡಾವಣೆ, ಬೀದಿ, ಪಾರ್ಕು, ವೃತ್ತಗಳಿಗೆ ಹೊಸದಾಗಿ ಹೆಸರು ಇಡೋವಾಗ ಆಯಾ ಪ್ರದೇಶದ ಗಣ್ಯರ ಹೆಸರಿಡ್ತೀವಿ ಅನ್ನೋ ನಿಲುವು ಸರಿಯಾಗಿದೆ. ಹಾಗೇ ತಾನೆ ಹೆಚ್ಚಿನ ಪ್ರದೇಶಗಳಿಗೆ ಹೆಸರು ಬಂದಿರೋದು... ದೊರೆಸಾನಿ ಪಾಳ್ಯ, ಮಾರೇನಹಳ್ಳಿ, ಮುನಿಯಪ್ಪ ಬ್ಲಾಕ್, ಬೈಯ್ಯಪ್ಪನಹಳ್ಳಿ... ಹೀಗೆ. ನಮ್ಮೂರ ಜಾಗಗಳಿಗೆ ನಮ್ಮ ಹಿರಿಯರ ಹೆಸರುಗಳನ್ನು ಇಡೋದು ಒಂದು ರೀತಿಯಲ್ಲಿ ಅವರಿಗೆ ನಾವು ತೋರಿಸೋ ಗೌರವಾನೆ ಆಗಿದೆ. ಆದರೆ ಈ ಕ್ರಮ ಈಗಾಗ್ಲೆ ಇರೋ ಹೆಸರುಗಳನ್ನು ಬೇಡದೆಯೇ ಬದಲಿಸೋ ಕ್ರಮವಾಗದ ಹಾಗೆ ಈ ವ್ಯವಸ್ಥೆ ಜೋಪಾನವಾಗಿ ಇರಬೇಕು. ಆಲಮಟ್ಟಿ ಜಲಾಶಯಕ್ಕೆ ಆ ಹೆಸರೇ ಸೂಕ್ತವಾಗಿದ್ದು ಲಾಲ್ ಬಹದ್ದೂರ್ ಶಾಸ್ತ್ರಿಯವರ ಹೆಸರಿನ ಅಗತ್ಯವೇನಿತ್ತು? ಮುಂದಿನ ದಿನಗಳಲ್ಲಿ ಅದು ಶಾಸ್ತ್ರಿ ಅಣೆಕಟ್ಟು ಅಂತಲೋ ಎಲ್.ಬಿ.ಎಸ್ ಅಣೆಕಟ್ಟೆ ಅಂತಲೋ ಆಗೋದಕ್ಕಿಂತಲೂ ಆಲಮಟ್ಟಿ ಅಣೆಕಟ್ಟೆ ಅನ್ನೋ ಹೆಸರೇ ಒಳ್ಳೆಯದಲ್ವಾ?

ಇರೋ ಹೆಸರು ಬದಲಾಯಿಸೋ ಬಗ್ಗೆ!

ಈಗಾಗಲೇ ಇರೋ ಹೆಸರುಗಳನ್ನು ಆದಷ್ಟೂ ಹಾಗೇ ಉಳುಸ್ಕೋಬೇಕು. ಈ ವರದಿಯಲ್ಲಿ ಬರ್ದಿರೋ ಹಾಗೆ ಎರಡೆರಡು ಮರಿಯಪ್ಪನ ಪಾಳ್ಯ ಇದೆ, ಅದಕ್ಕಾಗಿ ಒಂದರ ಹೆಸರನ್ನು ಬದಲಾಯಿಸೋಣ ಅನ್ನೋ ನಿಲುವು ಸರಿಯಿಲ್ಲ. ಅದರ ಬದಲು ದಾಸರಹಳ್ಳಿಗೆ ಇದ್ದಹಾಗೆ ಟಿ.(ತುಮಕೂರು) ದಾಸರಹಳ್ಳಿ, ಮಾಗಡಿ ರಸ್ತೆ ದಾಸರಹಳ್ಳಿ ಅನ್ನೋ ಹೆಸರುಗಳು ಉತ್ತಮವಾಗಿದೆ. ಯಾವುದೇ ಪ್ರದೇಶ/ ಸ್ಮಾರಕಕ್ಕೆ ಇರೋ ಹೆಸರನ್ನು ಅದರ ಐತಿಹಾಸಿಕ ಮಹತ್ವವನ್ನು ಕಡೆಗಣಿಸೋ ಹಾಗೆ ಬದಲಾಯಿಸೋದು ಮಾತ್ರಾ ಆಗಬಾರದು. ಅಂದ್ರೆ ಮೇಟಗಳ್ಳಿಯನ್ನು ಮಥುರಾನಗರ ಮಾಡೋದಾಗಲೀ, ಸೂಳೆಕೆರೆಯನ್ನು ಶಾಂತಿಸಾಗರ ಮಾಡೋದಾಗ್ಲಿ, ಆನೆಪಾಳ್ಯವನ್ನು ಗಜೇಂದ್ರನಗರ ಎನ್ನುವುದಾಗಲೀ, ಮಂಡ್ಯವನ್ನು ಮಾಂಡವ್ಯ ನಗರ ಅಂತ ಬದಲಾಯಿಸೋದಾಗ್ಲೀ ಒಳ್ಳೇದಲ್ಲ ಗುರು!

ಯಾವ ಹೆಸರಿಡಬೇಕು?

ನಮ್ಮ ನಾಡಿನ ತುಂಬಾ ಇರೋ ಬಡಾವಣೇಗಳ/ ರಸ್ತೆಗಳ ಹೆಸರುಗಳನ್ನೇ ನೋಡಿ. ಮಹಾತ್ಮಗಾಂಧಿ ರಸ್ತೆ, ಕಸ್ತೂರ್ ಬಾ ರಸ್ತೆ, ದೀನದಯಾಳ ಉಪಾಧ್ಯಾಯ ರಸ್ತೆ, ರವೀಂದ್ರನಾಥ ಟ್ಯಾಗೂರ್ ನಗರ, ಜಯಪ್ರಕಾಶ ನಗರ, ಇಂದಿರಾ ನಗರ, ಸಂಜಯ ನಗರ, ಶಾಸ್ತ್ರಿ ನಗರ, ರಾಜೀವ್ ಗಾಂಧಿ ಆಸ್ಪತ್ರೆ, ಲಾಲ್ ಬಹದ್ದೂರ್ ಶಾಸ್ತ್ರಿ ಅಣೆಕಟ್ಟೆ... ಹೀಗೆ ತುಂಬಿಸಿಬಿಟ್ಟಿದ್ದೀವಿ. ರಾಷ್ಟ್ರನಾಯಕರಿಗೆ ಗೌರವ ತೋರುಸ್ಬೇಕು ಅಂತಾ ಆಯಾ ಜಾಗದ ಹೆಸರು ಬದಲಿಸೋ ಹವ್ಯಾಸ ಒಳ್ಳೇದೇನಲ್ಲಾ ಗುರು. ಜಯಪ್ರಕಾಶ ನಾರಾಯಣರಿಗೆ ಗೌರವ ಕೊಡಬೇಕು ಅಂತಾ ಪುಟ್ಟೇನಳ್ಳಿ ಹೆಸರನ್ನು ಜೆ.ಪಿ ನಗರ 7ನೇ ಹಂತ ಅಂತಾ ಮಾಡೋದು ಎಷ್ಟು ಸರಿ? ಒಟ್ಟಿನಲ್ಲಿ ಕನ್ನಡದ ಹೆಸರುಗಳನ್ನೇ, ಕನ್ನಡಿಗರ ಹೆಸರುಗಳನ್ನೇ ಕನ್ನಡನಾಡಿನ ಎಲ್ಲ ಕಡೆ ಇಡೋದೆ ಈ ಏರ್ಪಾಡಿನ ಗುರಿಯಾಗಿರಬೇಕು.

ಕೊನೆಹನಿ: ಇಂದಿನ ಮಹಾರಾಷ್ಟ್ರದ ಅನೇಕ ಊರುಗಳ ಮೂಲ ಹೆಸರು ಕನ್ನಡದ್ದು, ಆ ಕಾರಣದಿಂದ ಆ ಪ್ರದೇಶಗಳು ಹಿಂದೆ ಕನ್ನಡನಾಡಿನ ಭಾಗವೇ ಆಗಿದ್ದವು ಎಂದು ಸಾಧಿಸಬಹುದು ಎಂಬುದಾಗಿ ಅನೇಕ ಹಿರಿಯ ಸಂಶೋಧಕರುಗಳು ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ ನಮ್ಮೂರಿನ ಹೆಸರುಗಳು ಕನ್ನಡದಲ್ಲಿರಬೇಕಾದ್ದು ಐತಿಹಾಸಿಕವಾಗಿಯೂ ಮಹತ್ವದ್ದೇ ಆಗಿದೆ ಅನ್ಸಲ್ವಾ ಗುರು?

9 ಅನಿಸಿಕೆಗಳು:

Anonymous ಅಂತಾರೆ...

100% right. we have to show our ness to every body. we have somany people to name the place and circle or public place. like sir m vishweshwraiah, allur venkata rayaru, dewan purnaya, sri jayachamarajendra odeyar, ranadheera kanteerava narasimharaja odeyar, ranna, pampa, raghavanka, sarvjna, akkamahadevi, sri basaveshwra, etc...... somany, somany people are there. when we are not honoring to them, there is no meaning to keep the name of blady, rajeev gandhi, indiragandhi, or todays stupid polititians.

Anonymous ಅಂತಾರೆ...

ಸೂಳೆಕೆರೆಯನ್ನು ಶಾಂತಿಸಾಗರ ಅಂತ ಬದಲಾಯಿಸಿದರೆ ಚೆನ್ನಾಗಿರತ್ತೆ. ಏಕೆಂದರೆ, ಚಿಕ್ಕಮಕ್ಕಳು, ಸೂಳೆಕೆರೆಯ ಅರ್ಥ ಕೇಳಿದಾಗ ಹಿರಿಯರು ಇರುಸುಮುರುಸು ಆಗೋದಾದರು ತಪ್ಪತ್ತೆ.

sidda

putta ಅಂತಾರೆ...

ಸೂಳೆ ಕೆರೆ ಬಗ್ಗೆ ಮೊನ್ನೆ ರೇಡಿಯೋದಲ್ಲಿ ಒಬ್ಬ ಹೇಳ್ತಿದ್ದ. ಅದು ಸೂಳೆ ಕೆರೆ ಅಲ್ವಂತೆ. ಶೋಲೆ ಚಿತ್ರ ಅಲ್ಲಿ ಶೂಟ್ ಮಾಡಿದ್ರಂತೆ. ಅದು ಶೋಲೆ ಕೆರೆ ಅಂತೆ. ಪಾಲಿಕೆ ಅವರು ಅದನ್ನ ಸೂಳೆ ಕೆರೆ ಅಂತ ಮಾಡಿದ್ರಂತೆ. ಇದು ಎಷ್ಟರ ಮಟ್ಟಿಗೆ ನಿಜನೋ ಗೊತ್ತಿಲ್ಲ.

ತಿರುಕ ಅಂತಾರೆ...

"ಸೂಳೆಕೆರೆ"ಯೆಂಬೆ ಹೆಸರು ನಿಜವಾಗಲೂ ಬಂದಿದ್ದರೆ ಅದರ ಹಿಂದೆ ಅದರದೇ ಆದ ಕತೆಯಿರುತ್ತದೆ. ಹಿಂದೆ ಆ ಹೆಸರನ್ನು ಇಡುವಾಗ ಜನರಿಗೆ ಮುಜುಗರವಾಗಿರಲಿಲ್ಲದಿದ್ದರೆ ಇವತ್ತು ಮುಜುಗರವಾಗುವ ಅವಶ್ಯಕತೆಯೇನಿದೆ? ಸೂಳೆಯೆಂದರೆ ಅವಳ ಬಗ್ಗೆ ಕೆಟ್ಟ ಅಭಿಪ್ರಾಯಗಳು ಇಂದಿನ ದಿನ ಬರುವುದು ಹೆಚ್ಚಾಗಿದೆ. ಆದರೆ ನಿಜಕ್ಕೂ ನೋಡಿದರೆ ತನ್ನ ಮೈ ಮಾರಿಕೊಂಡು ಜೀವನ ಮಾಡುತ್ತಿದ್ದ ಅವಳಿಗಿಂತ, ಇಂದಿನ ದಿನ ನಾಡಿನ ಜೊತೆಗೆ ತಮ್ಮ ಆತ್ಮಗಳನ್ನೇ ಮಾರಿಕೊಂಡು ಜೀವಿಸುತ್ತಿರುವವರ ಹೆಸರು ಕೇಳಿದಾಗ ಮುಜುಗರವಾಗಬೇಕು! ಇವರುಗಳ ಮುಂದೆ ಆ ಸೂಳೆಯೇ ದೇವರು! ಅವಳೇ ಶ್ರೇಷ್ಠಳು!

ಮೈಮಾರಿಕೊಂಡು ಮನದೊಳಗೇನೇ ಭಗವಂತನನ್ನು ನೆನೆದು ಅವನನ್ನೇ ತಲುಪಿದ ಸೂಳೆಯರೆಷ್ಟೋ! ಅವರ ಕತೆಗಳೆಲ್ಲ ಎಲ್ಲಿ ಹೋದವೋ! ತನ್ನ ಮೈಯನ್ನು ಮನಸ್ಸಿನಿಂದ ಇನ್ನಿಲ್ಲದಂತೆ ಬೇರ್ಪಡಿಸುವ ಯೋಗಿನಿಯವಳು! ಶರಣೆನ್ನಿ ಅವಳಿಗೆ! ನಮಸ್ಕರಿಸಿ ಅವಳಿಗೆ!

Anonymous ಅಂತಾರೆ...

ಚನ್ನಗಿರಿಯಿಂದ ಸಂತೆಬೆನ್ನೂರಿಗೆ ಹೋಗುವ ದಾರಿಯಲ್ಲಿ ಒಂದು ದೊಡ್ಡದಾದ ಕೆರೆಯಿದೆ. ಬಸವಾಪಟ್ಟಣಕ್ಕೂ ಇದು ಹತ್ರ. ಇದರ ವಿಸ್ತೀರ್ಣ ಸುಮಾರು ನಲವತ್ತು ಚದರ ಮೈಲಿಯಷ್ಟಂತೆ. ಇದು ಏಶ್ಯಾದಲ್ಲೆ ಅತಿ ದೊಡ್ಡ ಕೆರೆಯಂತೆ. ಬಹಳ ಸುಂದರವಾಗಿರೋ ಈ ಕೆರೆಯನ್ನು ಕಟ್ಟಿದ್ದು ಒಬ್ಬ ಸೂಳೆಯ ಸಾಮಾಜಿಕ ಕಳಕಳಿಯಿಂದ ಅಂತೆ. ತನ್ನ ಮೈಮಾರಿಕೊಂಡು ದುಡಿದ ಹಣವನ್ನು ಸಮಾಜಕ್ಕಾಗಿ ವಿನಿಯೋಗಿಸಿದ್ದಳಂತೆ. ಈ ಕೆಸರಿನ ಹೆಸರಿನ ಬಗ್ಗೆ ಕೆಟ್ಟದಾಗಿ ಯೋಚಿಸೋ ಅಗತ್ಯವಿಲ್ಲ ಅನ್ಸುತ್ತೆ. ಯಾಕಂದ್ರೆ ಸೂಳೆಗಾರಿಕೆಯನ್ನೂ ಅಂದಿನ ಸಮಾಜ ಒಂದು ಉದ್ಯೋಗವನ್ನಾಗೇ ಪರಿಗಣಿಸಿತ್ತು. ಮತ್ತು ಆ ತಾಯಂದಿರಿಗೂ ಗೌರವವಿತ್ತು. ಸಿದ್ದೇಶ್ವರನ ಗುಡಿ ಹತ್ತಿರದ ಈ ಕೆರೆಯನ್ನು ಬದುಕಲ್ಲೊಮ್ಮೆ ನೋಡಿ ಬರಬೇಕಾಗಿದೆ. ಏನ್ ಗುರು! ದಯಮಾಡಿ ಈ ಸ್ಥಳದ ಬಗ್ಗೇನೂ ಒಂದು ಬರಹ ಹಾಕಿ.

ವಂದನೆಗಳು

ಗಿರೀಶ್

Anonymous ಅಂತಾರೆ...

ನಿಮ್ಮೆಲ್ಲರ ಮಾತಿನಂತೆ ಹೋಗುವುದಾದರೆ ಆಕೆಗೆ ಗೌರವ ಸಲ್ಲಿಸಲು, ಇದನ್ನು ವೈಭವಿಕರಿಸಿ "ಮಾತೆ ಸೋಳೇಶ್ವರಿ ಕೆರೆ" ಎಂದು ಮರುನಾಮಕರಣ ಮಾಡಬಹುದು. ಆಗ ಕಿರಿಯರು ಯಾವುದೊ ದೇವತೆಯ ಹೆಸರಿರಬಹುದೆಂದು ಸುಮ್ಮನಿರುತ್ತಾರೆ. ಮುಜುಗರವಾಗುವ ಪ್ರಶ್ನೆಯೇ ಉಧ್ಭವಿಸುವುದಿಲ್ಲ.

- sidda

Anonymous ಅಂತಾರೆ...

ಹ ಹ್ಹ ಹ್ಹಾ....

ಸಿದ್ದಣ್ಣೋರೇ... ಬಿಡ್ರಿ! ಅಷ್ಟೊಂದು ಸಂಕೋಚ ಆದ್ರೆ "ವೇಶ್ಯಾತಟಾಕ" ಅನ್ನೋಣಂತೆ. ಹೇಗೂ ಆಗ ಮಕ್ಕಳಿರಲಿ ದೊಡ್ಡೋರಿಗೂ ಅರ್ಥ ಆಗಲ್ಲ. ಸೂಳೆಕೆರೆ ಅಂದ್ರೆ ಮುಜುಗರ ಆಗುತ್ತೆ ಅಂದುಕೊಳ್ಳೋ ಅಗತ್ಯವಿಲ್ಲಾರಿ. ಈಗ ಮೆಜೆಸ್ಟಿಕ್ ಅಂದ್ರೆ, ಕಲಾಸಿ ಪಾಳ್ಯ ಅಂದ್ರೆ, ಮಡಿವಾಳ, ಬಿ.ಟಿ.ಎಂ, ಮೈಸೂರು, ಮಂಡ್ಯಾ ಅಂದ್ರೆಲ್ಲಾ ಅರ್ಥಾನ ಯಾವ ಮಕ್ಳು ಕೇಳ್ತಾರ್ರೀ? ಹಾಗೇ ಇದು.

ನಮಸ್ಕಾರ

ಸುಂದರ

Anonymous ಅಂತಾರೆ...

ಚರ್ಚೆಗೆ ಸ್ವಲ್ಪ ಹಾಸ್ಯ ಸೇರಿಸುವುದಕ್ಕಾಗಿ ಮಾತ್ರ ಈ ರೀತಿ ಹೇಳಿದ್ದು. ತಪ್ಪಾಗಿ ತಿಳಿಯಬೇಡಿ. ಮೂಲವಿಷಯದಿಂದ ದಾರಿತಪ್ಪಿಸುವುದು ನನ್ನ ಉದ್ದೇಶವಾಗಿರಲಿಲ್ಲ. ವಿಷಯಕ್ಕೆ ಬರೋಣ, ನಾವು ಹಲವು ಬಗೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ, ಉದಾಹರಣೆಗೆ, "ರಸ್ತೆ ಸುರಕ್ಷತಾ ಸಪ್ತಾಹ" ಇದೇ ರೀತಿ ಕನ್ನಡೇತರ ಹೆಸರುಗಳನ್ನು ಮರಳಿ ಕನ್ನಡಾಯಿಸುವಂತಹ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕು. ಉದಾಹರಣೆಗೆ, "ಕನ್ನಡ ನಾಮಫಲಕ ಸಪ್ತಾಹ", "ಕನ್ನಡೀಕರಣ ಸಂವತ್ಸರ" ಮೊದಲಾದವು.

- sidda

bharathcj ಅಂತಾರೆ...

ಈ ವಿಚಾರ ಹೊಳೆದಿರಲಿಲ್ಲ ... ನೀವು ಹೇಳುವುದು ನಿಜ

ಆಧುನಿಕರಣದ ಹೆಸರಿನಲ್ಲಿ ಬೆಂಗಳೂರಿನಲ್ಲಿ - ಹೊಸಳ್ಳಿ ವಿಜಯನಗರವಾಯಿತು ....... ಕೆಂಚೇನಹಳ್ಳಿ ರಾಜರಾಜೇಶ್ವರಿ ನಗರವಾಯಿತು ....... ಇಂತವು ಎಷ್ಟೋ ..... ನನಗೆ ಈಗಲೂ ಬಸ್ಸು ಹತ್ತಿದರೆ ಹೊಸ ಹೆಸರುಗಳು ಬಾಯಿಗೆ ಬರೋಲ್ಲ ..... ಕಂಡುಕ್ಟೋರು ಮುಕ ಮುಕ ನೋಡ್ತಾರೆ

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails