ಮುಂಬೈಲಿ ಮರಾಠಿ ಬರೋರಿಗೆ ಮಾತ್ರಾ ಟ್ಯಾಕ್ಸಿ ಪರ್ಮಿಟ್ ಅಂದ್ರೆ ತಪ್ಪಾ?


ಇನ್ ಮೇಲೆ 15 ವರ್ಷದಿಂದ ಮಹಾರಾಷ್ಟ್ರದಲ್ಲಿದ್ದು, ಮರಾಠಿ ಓದೋಕೆ, ಮಾತಾಡೋಕೆ, ಬರೆಯೋಕೆ ಬಂದ್ರೆ ಮಾತ್ರ ಮುಂಬೈ ನಗರದಲ್ಲಿ ಟ್ಯಾಕ್ಸಿ ಓಡಿಸೋ ಪರ್ಮಿಟ್ ಕೊಡ್ತಿವಿ ಅಂತ ಮಹಾರಾಷ್ಟ್ರ ಸಂಪುಟ ಸಭೇಲಿ ತೀರ್ಮಾನ ಆದ ಸುದ್ದಿ ನಿನ್ನೆ ಮಾಧ್ಯಮಗಳಲ್ಲಿ ಬಂತು. ಅದಾಗಿದ್ದೆ ತಡ ವಲಸಿಗರ ಕಾರ್ಖಾನೆ ಥರಾ ಇರೋ ಬಿಹಾರ್, ಯು.ಪಿ ರಾಜ್ಯಗಳ ನಾಯಕರುಗಳು, ದಿಲ್ಲಿಲಿ ಕೂತಿರೋ ಇಂಗ್ಲಿಷ್ ಮಾಧ್ಯಮದವರು ಏನೋ ಅನಾಹುತಾನೇ ಆಗೋಯ್ತು ಅನ್ನೋ ಹಾಗೆ ಬಾಯ್ ಬಡ್ಕೊಂಡು ಆ ನಿರ್ಧಾರ ಬದಲಿಸುವಂತೆ ಒತ್ತಡಾ ಹೇರೋ ಕೆಲ್ಸ ಶುರು ಹಚ್ಕೊಂಡ್ರು. ಇವರ ಒತ್ತಡಕ್ಕೆ ಮಣಿದು ಈಗ, ಮಹಾರಾಷ್ಟ್ರದ ಮುಖ್ಯಮಂತ್ರಿಗಳು, ಮರಾಠಿ ಜೊತೆ ಹಿಂದಿ, ಗುಜರಾತಿನೂ ಸ್ಥಳೀಯ ಭಾಷೆಗಳು-ಅವು ಗೊತ್ತಿದ್ರೆ ಮಾತ್ರ ಟ್ಯಾಕ್ಸಿ ಪರ್ಮಿಟ್ ಕೊಡೋದು ಅಂತ ಮಹಾರಾಷ್ಟ್ರ- ಮರಾಠಿಗಳ ಬಗ್ಗೆ ತಮಗಿರೋ ನಿಯತ್ತು ಎಷ್ಟು ಪೊಳ್ಳು ಅನ್ನೋದನ್ನ ತೋರಸ್ಕೊಂಡಿದಾರೆ ಗುರು.

ಯಾವುದು ಸರಿಯಾದ ನಿರ್ಧಾರ?

ಯಾವುದೇ ಊರಿನ ವ್ಯವಸ್ಥೆ ಯಾರಿಗಾಗಿ ಇರಬೇಕು? ಮುಂಬೈಗೆ ಪ್ರವಾಸಿ ಅಂತಾ ಬರೋರು ಎಷ್ಟಿರ್ತಾರೆ? ಮರಾಠಿಗರು ಎಷ್ಟು ಮಂದಿ ಇರ್ತಾರೆ. ರಾಜಧಾನಿಗೆ ಮಹಾರಾಷ್ಟ್ರದ ಮೂಲೆ ಮೂಲೆಯಿಂದ ಬರುವ ಜನ ಎಲ್ಲಾ ಮರಾಠಿ ಜನವೇ ತಾನೇ? ಹಾಗಿದ್ರೆ ಆ ಊರಲ್ಲಿ ಟ್ಯಾಕ್ಸಿಯಂತಹ ಸಾರ್ವಜನಿಕ ಸೇವೆಗೆ ಮೀಸಲಿರೋ ಉದ್ಯಮದಲ್ಲಿ ಕೆಲಸ ಮಾಡೋಕೆ ಅಲ್ಲಿಯ ಸ್ಥಳೀಯ ಭಾಷೆ ಓದೋಕೆ, ಬರೆಯೋಕೆ ಬಂದ್ರೆ ತಾನೇ ಆಗೋದು? ಒಬ್ಬ ತಾತರಾಯನ ಕಾಲದಿಂದ ಮುಂಬೈನಲ್ಲಿ ನೆಲೆಸಿರೋ ಮರಾಠಿಗ, ಟ್ಯಾಕ್ಸಿ ಹತ್ತಿ ಎಲ್ಲಿಗೋ ಹೋಗಲು ಮರಾಠಿಲಿ ದಾರಿ ಕೇಳಿದ್ರೆ, ಹೇಳಿದ್ರೆ, ಅವನಿಗೆ ಉತ್ರ ಸಿಗಲ್ಲ ಅನ್ನೋ ವಾತಾವರಣ ಸೃಷ್ಟಿಯಾದ್ರೆ ಅದರಿಂದ ಆ ಸ್ಥಳೀಯನಿಗೆ ಅನಾನುಕೂಲ ಆಗಲ್ವಾ ಗುರು? ನನ್ನೂರಲ್ಲಿ ನನ್ನ ಭಾಷೆ ಮಾತಾಡಿ ದಕ್ಕಿಸಿಕೊಳ್ಳಲು ಆಗಲ್ಲ ಅಂದ್ರೆ ಅದು ಸಂವಿಧಾನ ನನಗೆ ಕೊಟ್ಟಿರೋ ಮೂಲಭೂತ ಹಕ್ಕುಗಳ ಉಲ್ಲಂಘನೆ ಅಂತ ಅನ್ಸಲ್ವಾ ಗುರು ? ಅಷ್ಟಕ್ಕೂ ಮಹಾರಾಷ್ಟ್ರದ ಸರ್ಕಾರ ಬೇರಾವುದೇ ಭಾಷೆ ಮಾತಾಡಬಾರದು ಅಂತ ಹೇಳಿಲ್ಲ. ಮರಾಠಿ ಓದೋಕೆ, ಬರೆಯೋಕೆ, ಮಾತಾಡೋಕೆ ಬರಬೇಕು ಅಂತಷ್ಟೇ ಹೇಳಿರೋದು. ಹಾಗಿದ್ದಾಗ ಅದು ಹೇಗೆ ದೇಶದ್ರೋಹಿ ಕೆಲ್ಸ ಅಂತ ಅನ್ಸಕೊಳ್ಳುತ್ತೆ ಗುರು?

ದೇಶ ಒಡೆಯೋ ನಿಲುವು ಯಾರದ್ದು?

ಇನ್ನೂ ಈ ವಿಷ್ಯದಲ್ಲಿ ಇಂಗ್ಲಿಷ್ ಮಾಧ್ಯಮಗಳ ನಿಲುವು ನಿಜಕ್ಕೂ ದೇಶ ಒಡೆಯೋವಂತದ್ದು. ಮಹಾರಾಷ್ಟ್ರ ಸರ್ಕಾರ ಮರಾಠಿಗರಿಂದ ಆಯ್ಕೆ ಆಗಿರೋದಾದ್ರೂ ಯಾಕೆ? ಮರಾಠಿಗರ ಭಾಷೆ, ಸಂಸ್ಕೃತಿ, ಕಲಿಕೆ, ಉದ್ಯೋಗಗಳ ಹಕ್ಕು ಉಳಿಸಿ, ಬೆಳೆಸೋಕೆ ತಾನೇ? ಆ ಸರ್ಕಾರ ಇರೋದು ಯು.ಪಿ, ಬಿಹಾರದ ವಲಸಿಗರಿಗೆ ಕೆಲಸ ಸೃಷ್ಟಿಸಿ ಕೊಡೋಕಾ? ಸರಿಯಾದ ವ್ಯವಸ್ಥೆಯಲ್ಲಿ ಆ ಕೆಲಸ ಕ್ರಮವಾಗಿ ಯು.ಪಿ, ಬಿಹಾರ್ ಸರ್ಕಾರಗಳು ಮಾಡಬೇಕಾದದ್ದು ತಾನೇ? ಒಂದು ರಾಜ್ಯ ಸರ್ಕಾರ ತನ್ನ ಜನರ ಅನುಕೂಲಕ್ಕಾಗಿ ತಗೊಳ್ಳೋ ನಿರ್ಧಾರವನ್ನ ದಿಲ್ಲಿಯ ಸ್ಟುಡಿಯೋಗಳಲ್ಲಿ ಕೂತು ಇದೆಲ್ಲಾ ತಪ್ಪು ಅನ್ನೋ ತೀರ್ಮಾನ ಕೊಡೊ ಅಧಿಕಾರ ಇವರಿಗೆ ಯಾರ್ ಕೊಟ್ಟಿದ್ದು? ವಿವಿಧತೆಯಲ್ಲಿ ಏಕತೆ ಅನ್ನೋ ಸಂವಿಧಾನದ ಮೂಲ ಆಶಯವನ್ನೇ ಮರೆತು, ಸಹಜವಾಗಿ ಎಲ್ಲೆಲ್ಲಿ ಯಾವ ಭಾಷೆಯ ಸಾರ್ವಭೌಮತ್ವ ಇರಬೇಕಿತ್ತೋ ಅದನ್ನು ವಿರೋಧಿಸಿ, ಎಲ್ಲೆಡೆ ಹಿಂದಿಯನ್ನು, ಹಿಂದಿ ಭಾಷಿಕರನ್ನು ತುಂಬೋ ಪ್ರಯತ್ನಗಳಿಗೆ ಇಂಬು ಕೊಡೊ ಇವರ ಕೆಲಸ ದೇಶದ ಒಗ್ಗಟ್ಟಿಗೆ ಸಕತ್ ಮಾರಕ ಆಲ್ವಾ? ನಿಜಕ್ಕೂ ದೇಶ ಒಡೆಯೋ ನಿಲುವು ಯಾರದ್ದು? ನೀನೆ ಹೇಳು ಗುರು.

4 ಅನಿಸಿಕೆಗಳು:

sangE ಅಂತಾರೆ...

awru madirodu tappu nija. sthaliyarige modala adhyate kodabeku annodu kuda nija. aadare maharashtradalli ittichegashte marathi manu thara horata aguttiruvudu.
ade namma karnatakadalli eshto varshagalinda ka ra ve kannadigara paravaagi horata nadesutta bandide. adanna yake rashtriya madyamadavaru sensational madi torisuttilla? ade raj thakre eno ondu matu bitre etti etti torisuttiddare? edu innondu thara taaratamya alwa?
ella kade ee thara horata naditide anta torisidare idara bagge eenaadaru krama tagotare. bari maharashtradalli aadare awra bayi muchisthare ashte.
also raj thakre vidhana sari illa. janarige hodesodu badisodu tappu. jeeva modalu idre taane bhaashe prashne barodu.

umesh desai ಅಂತಾರೆ...

ಹಾಯ್ ಗುರು ಬಹಳ ಬಿಸಿ ಚರ್ಚೆ ಈಗಷ್ಟೇ ಫೇಸ್ ಬುಕ್ ಲ್ಲೂ ಓದ್ದೆ . ನಾನೂ ಕನ್ನಡಬ್ಲಾಗ್ ನಿಂಗ್ ನಲ್ಲೂ ಇದರ ಬಗ್ಗೆ ಬರೆದು ಬೈಸಿಕೊಂಡೆ ಇರಲಿ ಬೈಗುಳ ಬೇಕು ಆದ್ರೆ ನನ್ನ ನಿಲುವಿಗೆ ನಾನು ಇನ್ನು ಬದ್ಧ ಭಾಷೆಪ್ರೀತಿ ಬೇಕು ಆದ್ರೆ ಅದು ದೇಶ ಒಡೆದರೆ
ಹೇಗೆ ಈಗ ಆ ಸರ್ಕಾರ ನಿರ್ಧಾರ ಬದಲಾಯಿಸಿದೆ ನಾನೇ ಬರೆದ "ಪಂಚಕ"-----
ಮಹಾರಾಷ್ಟ್ರ ಸರ್ಕಾರ ಅಂತು
ಮರಾಠಿ ಬಂದ್ರೆ ಮಾತ್ರ
ಹೊಡೀಬೇಕು ಟ್ಯಾಕ್ಸಿ..
ದೇಶ ಒಡೆಯುವ ಹೊಸತಂತ್ರ ಇದು
ನನ್ನ ಧಿಕ್ಕಾರಕ್ಕೆ ನೀವೂ ದನಿ ಗೂಡ್ಸಿ...!

Anonymous ಅಂತಾರೆ...

ಉಮೇಶ್ ದೇಸಾಯಿಯವರಿಗೆ,

ದೇಶದ ಒಗ್ಗಟ್ಟಿನ ಬಗೆಗಿನ ನಿಮ್ಮ ಕಾಳಜಿ ಮೆಚ್ಚಬೇಕಾದ್ದೆ. ಟ್ಯಾಕ್ಸಿ ಓಡಿಸೋರಿಗೆ ಪರ್ಮಿಟ್ ಬೇಕಾದ್ರೆ ಆ ಊರಿನ ಭಾಷೆ ಗೊತ್ತಿರಬೇಕು ಅನ್ನೋದು ದೇಶ ಒಡೆಯುವ ತಂತ್ರ ಹೇಗಾದೀತು? ವಿವರಿಸ್ತೀರಾ... ನಿಮ್ಮ ನಿಲುವಿಗೆ ನೀವು ಬದ್ಧರಾಗಿರಲು ನೀವು ಸರ್ವತಂತ್ರ ಸ್ವತಂತ್ರರು. ಆದರೆ ನಿಮ್ಮ ನಿಲುವು ದೇಶ ಒಡೆಯೋ ನಿಲುವು ಅನ್ನೋದು ನನ್ನ ಆರೋಪ. ಹೇಗೆ ಅಂತೀರಾ? ಒಂದು ನಾಡಿನ ವ್ಯವಸ್ಥೆ ಇರಬೇಕಾದ್ದು ಅಲ್ಲಿನ ಜನರ ಹಿತ ಕಾಪಾಡಲೆಂದೇ ಅಲ್ಲವೇನು? ಸ್ಥಳೀಯರ ಹಿತ ಕಡೆಗಣಿಸಿ ವಲಸಿಗರಿಗೆ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡಿ ಅನ್ನೋದು ದೇಶ ಒಡೆಯೋ ನಿಲುವು ಅಲ್ವಾ?

ನಮಸ್ಕಾರಗಳು
ಸುಂದರ

ಪುಟ್ಟ ಅಂತಾರೆ...

ಉಮೇಶ ಅವರೇ,

ದೇಶ ಯಾವಾಗ ಒಡೆಯುತ್ತೆ ?ನಮ್ಮಲ್ಲೇ ಬಿಕ್ಕಟ್ಟು ಶುರುವಾಗಿ ನಮ್ಮಲ್ಲಿ ಒಗ್ಗಟ್ಟು ಮುರಿದಾಗ ಅಲ್ವಾ? ಬಿಕ್ಕಟ್ಟು ಯಾವಾಗ ಶುರು ಆಗುತ್ತೆ?

ಕೆಲ್ಸದ ವಿಷಯದಿನ್ದನೆ ಚರ್ಚೆ ಶುರು ಮಾಡುವ.ಮೊದಲು ನಮ್ಮ ಹೊಟ್ಟೆಗೆ ಹಿಟ್ಟು ಬಿದ್ದು ನಾವು ಗಟ್ಟಿ ಆದ ನಂತರ ಮುಂದಿನದು.ಆಯಾ ಪ್ರದೇಶದ/ರಾಜ್ಯಗಳ ಭಾಷೆ ಇಂದಾನೆ ಅಲ್ಲಿಯ ಜನರ ಹೊಟ್ಟೆಗೆ ಹಿಟ್ಟು ಸಿಗುತ್ತದೆ.ಆದ್ರೆ ಸ್ಥಳೀಯರೇ ಎಲ್ಲಾ ಕ್ಷೇತ್ರಗಳಲ್ಲಿ ನಿರ್ಲಕ್ಷ್ಯಕ್ಕೊಳಗಾಗಿ ನಿರುದ್ಯೋಗಿಗಳಾದಾಗ ಏನಾಗುತ್ತೆ? ಅನಿವಾರ್ಯವಾಗಿ ಅನ್ನ ಸಿಗುವ ಕಡೆ ವಲಸೆ ಹೋಗಬೇಕಾಗುತ್ತದೆ ಅಂದರೆ ವಲಸೆ ಸಮಸ್ಯೆ ಶುರುವಾಗುತ್ತದೆ.ಸ್ಥಳೀಯರಿಗೆ ಎಲ್ಲಾ ಅರ್ಹತೆ ಇದ್ರೂ, ಅನ್ನ ಅಂದ್ರೆ ಕೆಲಸ ಸಿಗದೇ, ಅನ್ಯರ ಗುಂಪುಗಾರಿಕೆ ಇಂದ ಅದು ವಲಸಿಗರ ಪಾಲಾದಾಗ ಬಿಕ್ಕಟ್ಟು ಉಧ್ಬವಿಸಿ ಒಗ್ಗಟ್ಟು ಮುರಿಯುತ್ತದೆ! ಆದರಿಂದ ಯಾವುದೇ ರಾಜ್ಯ ಸರ್ಕಾರವು ಯಾವುದೇ ಕ್ಷೇತ್ರದಲ್ಲಿ (ಸರ್ಕಾರಿ/ಖಾಸಗಿ) ಸ್ಥಳೀಯರ ಹಿತ ಕಾಯುವ ಯಾವುದೇ ಕ್ರಮ ತೊಗೊಂಡ್ರು, ಅದು ಮೆಚ್ಚಲೇಬೇಕಾದ ಸಂಗತಿ. ಆದ್ರೆ ದುರಂತ ಅಂದ್ರೆ, "ನಮ್ಮ ರಾಜ್ಯವೇ ನಮ್ಮವರನ್ನು ಸಾಕಲು ಶಕ್ತವಾಗಿರುವಾಗ ನಮ್ಮವರು ಹೊಟ್ಟೆಪಾಡಿಗೆ ಹೊರಗಡೆ ಯಾಕೆ ಹೋಗಬೇಕು?'' ಅಂತ ಯೋಚನೆ ಮಾಡಿ ಸ್ಥಳೀಯರ ಬದುಕನ್ನು ಆಯಾ ರಾಜ್ಯದಲ್ಲೇ ಕಟ್ಟಿಕೊಡುವ ನಿರ್ಧಾರವನ್ನು ಆಯಾ ರಾಜ್ಯಸರ್ಕಾರಗಳು ತೊಗೊಂಡ್ರೆ ಅದು ದೇಶ ಒಡೆಯುವ ಪ್ರಯತ್ನ ಅಂತ ಮಾಧ್ಯಮಗಳಿಂದ ಬಿಂಬಿಸಲ್ಪಡುತ್ತದೆ! ವಿಪರ್ಯಾಸ ಅಂದ್ರೆ, ತಿಳಿದವರೂ ವಿದ್ಯಾವಂತರೂ ಕೂಡ ಮಾಧ್ಯಮಗಳ ಹಾಗೆಯೇ ಯೋಚನೆ ಮಾಡ್ತಾರೆ! ಹೊರಗಿನವರು ನನ್ನ ರಾಜ್ಯಕ್ಕೆ ಹೊಟ್ಟೆಪಾಡಿಗೋ ಅಥವಾ ಇನ್ಯಾವುದೋ ಕಾರಣಕ್ಕೆ ವಲಸೆ ಬಂದು ನನ್ನ ರಾಜ್ಯದ ಮುಖ್ಯವಾಹಿನಿಯಲ್ಲಿ ಒಂದಾಗದೇ ಅವರದೇ ಒಂದು ದೊಡ್ಡ ಗುಂಪು ಕಟ್ಟಿ 'ಎಲ್ಲಾ ನಮ್ಮದೇ, ನಾವೇ ಎಲ್ಲಾ' ಅಂತ ಸ್ಥಳೀಯರ ಮೇಲೆ ದಬ್ಬಾಳಿಕೆ ಮಾಡ್ತಾರಲ್ಲ, ಆಗ ಮುರಿಯುವುದು ಒಗ್ಗಟ್ಟೇ ತಾನೇ! ಒಗ್ಗಟ್ಟಿನ ಬಗ್ಗೆ ಮಾತಾಡುವರೂ ಕೂಡ ವಿವಿಧ ಭಾಷೆ, ಆಚರಣೆ,ಸಂಸ್ಕೃತಿಗಳ ಗೂಡಾಗಿರುವ ಭಾರತದಲ್ಲಿ ಏಕತೆಯನ್ನು ಕಾಪಾಡಿಕೊಳ್ಳುವ ಸರಿಯಾದ ದಾರಿಯ ಬಗ್ಗೆ ಯೋಚಿಸಿಯೇ ಇರುವುದಿಲ್ಲ. ಭಾರತದ ಆ ಏಕತೆ ಉಳಿಯೋದು "ಭಾಷೆಗಳಿಂದನೆ" ಅನ್ನೋ ಸತ್ಯ ಯಾಕೆ ಎಷ್ಟೋ ಜನರಿಗೆ ಹೊಳೆಯಲ್ವಲ್ಲ ಅಂತ ನನಗೆ ಅಚ್ಚರಿ!

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails