ಆರಂಕುಸವಿಟ್ಟೊಡಂ ನೆನೆಯಲೆಮ್ಮ ಮನಂ ಬನವಾಸಿ ದೇಶಮಂ !

ಕನ್ನಡಿಗರ ಕುಲದೈವ ಮಧುಕೇಶ್ವರನ ಮೇಲಾಣೆ ಅನ್ನೋ ಒಂದು ಸಂಭಾಷಣೆ ಮಯೂರ ಚಿತ್ರದಲ್ಲಿ ಬರುತ್ತೆ. ಯಾವುದಿದು ಮಧುಕೇಶ್ವರನ ಗುಡಿ ಅಂತಾ ನೋಡುದ್ರೆ ನಮಗೆ ಕಾಣೋದು ಅದೇ ಕದಂಬರ ರಾಜಧಾನಿ ಬನವಾಸಿ. ಈ ಮಧುಕೇಶ್ವರನೇ ಆ ಕದಂಬರ ಕುಲದೈವ. ಕನ್ನಡಿಗರ ಸ್ವಾಭಿಮಾನದ ಮೊದಲ ರಾಜ್ಯದ ರಾಜಧಾನಿಯೇ ಬನವಾಸಿ. ಕನ್ನಡದ ಆದಿಕವಿ ಪಂಪ. ಅವನ ಪ್ರಖ್ಯಾತ ಬರಹ "ಆರಂಕುಸವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ". ಅಂಥದ್ದೇನಿದೆ ಈ ಬನವಾಸಿಯಲ್ಲಿ? ಕ್ರಿ.ಶ. 3ನೇ ಶತಮಾನದಿಂದ 9ನೇ ಶತಮಾನದವರೆಗೂ ರಾಜಕೀಯ ಕೇಂದ್ರಗಳಲ್ಲೊಂದಾಗಿದ್ದ ಈ ಬನವಾಸಿ ಎಲ್ಲಿದೆ? ಈಗ ಇದು ಹೇಗಿದೆ? ಅಲ್ಲಿ ಏನಿದೆ? ಹೇಗೆ ಹೋಗೋದು?

ಬನವಾಸಿಯೆಂಬ ಹಸಿರ ಗುಡಿ...
ಉತ್ತರಕನ್ನಡ ಜಿಲ್ಲೆಯ ಶಿರಸಿಯಿಂದ 22 ಕಿಮೀ ದೂರದಲ್ಲಿದೆ ಬನವಾಸಿ. ಇಲ್ಲಿಗೆ ಶಿವಮೊಗ್ಗೆಯ ಸೊರಬದಿಂದಲೂ ಹೋಗಬಹುದಾಗಿದೆ. ಬನವಾಸಿ ಬಹಳ ಪುಟ್ಟದಾದ ಊರು. ಇಲ್ಲಿಗೆ ಹೋಗೋ ರಸ್ತೆಯೂ ಪುಟ್ಟದು. ಏರಿಳಿತಗಳ, ತಿರುವುಗಳ, ಹಳ್ಳಕೊಳ್ಳಗಳ ರಸ್ತೆ ಇದು. ಆದಿಕವಿ ಪಂಪ ಜೈನ ಮತಾವಲಂಬಿ ಎಂಬುದನ್ನು ನೆನಪಿಸುವಂತೆ ಜೈನರ ಕಟ್ಟಡಗಳು, ಜೈನರ ಹೆಸರಿನ ಬೀದಿಗಳು ಅನೇಕವು. ಚಾಲುಕ್ಯರ ದೊರೆ ಅರಿಕೇಸರಿಯ ಕಾಲದಲ್ಲೇ ಇಲ್ಲಿ ಜೈನಮತ ಪ್ರಾಬಲ್ಯ ಹೊಂದಿತ್ತಂತೆ. ಇಂಥಾ ಬನವಾಸಿ ಪ್ರಕೃತಿಯ ರಮ್ಯ ಸೊಬಗಿನ ನಡುವೆ ಹಸಿರನುಟ್ಟು ಕಂಗೊಳಿಸುತ್ತಿದೆ. ಮಲೆನಾಡಿನ ಸೊಗಡಿನ ಈ ಊರಿನಲ್ಲಿ ನೋಡಲು ಇರುವ ಪ್ರಮುಖ ಸ್ಥಳಗಳ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಇಲ್ಲಿರುವುದು ಒಂದು ಗುಡಿ. ಮಧುಕೇಶ್ವರನ ಗುಡಿ. ಬಲು ಸುಂದರವಾದ ಕೆತ್ತನೆಯ ಪೀಠವನ್ನು ಈ ಲಿಂಗ ಹೊಂದಿದೆ.

ಗರ್ಭಗುಡಿಯ ಎದುರಿನ ಬಸವಣ್ಣ ಮೋಹಕವಾಗಿದ್ದಾನೆ. ಶಿಥಿಲವಾಗಿರುವ ಗುಡಿಯ ಕಂಭಗಳ ವಿನ್ಯಾಸ ಮನಸೂರೆ ಮಾಡುತ್ತದೆ. ಗರ್ಗುಡಿಯ ಹೊರಾಂಗಣದಲ್ಲಿ ಶಿವಗಣದ ಹತ್ತಾರು ದೇವ ದೇವಿಯರ ಪುಟ್ಟ ಪುಟ್ಟ ಗುಡಿಗಳಿವೆ. ಮಧಕೇಶ್ವರನ ಗುಡಿಯಲ್ಲಿ ನಿತ್ಯಪೂಜೆ ನಡೆಯುತ್ತದೆ. ಗುಡಿಯ ಒಂದು ಭಾಗದಲ್ಲೊಂದು ಸುಂದರ ಕೆತ್ತನೆಯ ಕಲ್ಲಿನ ಮಂಚವಿದೆ.

ಪ್ರವಾಸೋದ್ಯಮ ಇಲಾಖೆ ಇತ್ತ ಗಮನ ಹರಿಸಲಿ!
ಈ ಮಂಚವನ್ನು ಕಡೆದ ಕಾಲ ಕಾಲ ಯಾವುದೋ? ಈ ಗುಡಿಯನ್ನು ಕಟ್ಟಿದ ಕಾಲ ಯಾವುದೋ? ಈ ಜಾಗದ ಐತಿಹಾಸಿಕ ಮಹತ್ವವೇನು? ಇತ್ಯಾದಿ ಮಾಹಿತಿಗಳನ್ನು ಸಂದರ್ಶಕರಿಗೆ ಒದಗಿಸಬೇಕಾದ ಅಗತ್ಯವಿದೆ. ಕನ್ನಡಿಗರ ಸ್ಪೂರ್ತಿಕೇಂದ್ರವನ್ನಾಗಿ ಬನವಾಸಿಯನ್ನು ರೂಪಿಸಬೇಕಾಗಿದೆ. ಈಗೆಲ್ಲಾ ಕದಂಬೋತ್ಸವ ಎನ್ನುವ ಕಾರ್ಯಕ್ರಮ ವರ್ಷಕ್ಕೊಮ್ಮೆ ನಡೆಯುತ್ತಿದೆ. ಆದರೂ ಇಷ್ಟು ಸಾಲದು. ಈ ಜಾಗವನ್ನು ಮತ್ತಷ್ಟು ಆಕರ್ಷಣೀಯಗೊಳಿಸಬೇಕಾಗಿದೆ. ಉತ್ತಮ ಹೋಟೆಲ್ ಸೌಲಭ್ಯ, ಒಳ್ಳೇ ರಸ್ತೆಗಳು, ಇತಿಹಾಸಕ್ಕೆ ಸಂಬಂಧಿಸಿದ ಮಾಹಿತಿ ಸಿಗುವಂತೆ ಮಾಡುವುದು ಮುಂತಾದ ಅನೇಕ ಕೆಲಸಗಳನ್ನು ಪ್ರವಾಸೋದ್ಯಮ ಇಲಾಖೆಯು ಕೂಡಲೇ ಕೈಗೆತ್ತಿಕೊಳ್ಳುವುದು ತುರ್ತು ಅಗತ್ಯವಾಗಿದೆ. ಬನವಾಸಿಗೆ ಹೋಗಿಬಂದರೊಮ್ಮೆ ಕನ್ನಡಿಗರ ಮೈ ಮಯೂರನ ಪರಾಕ್ರಮ, ಪಂಪನ ಕಾವ್ಯವನ್ನು ನೆನೆದು ಪುಳಕಗೊಳ್ಳುವುದು ಖಚಿತ. ನೀವು ನೋಡಿದ್ದೀರಾ? ಇಲ್ಲದಿದ್ದರೆ ಒಮ್ಮೆ ಹೋಗಿ ಬನ್ನಿ ಗುರುಗಳೇ.

7 ಅನಿಸಿಕೆಗಳು:

Anonymous ಅಂತಾರೆ...

ಹೌದು. ಬನವಾಸಿಯ ಮಧುಕೇಶ್ವರ ದೇವಸ್ಥಾನವು ಅತಿ ಸುಂದರವಾಗಿದೆ. ನಾವು ಹೋದ ಅಕ್ಟೋಬರ್ನಲ್ಲಿ ಹೋಗಿದ್ದೆವು. ತುಂಬಾ ಜೋರಾಗಿ ಮಳೆ ಸುರಿಯುತ್ತಿತ್ತು. ನಾವೆಲ್ಲರೂ ಕಾರಿನಿಂದ ಇಳಿದು ದೇವಸ್ಥಾನದ ಬಳಿ ಹೋಗಲು ಕಷ್ಟವಾಯಿತು. ಅಷ್ಟು ಮಳೆ ಬರುತ್ತಿತ್ತು. ಅಲ್ಲಿದ್ದ ತ್ರಿಲೋಕ ಮಂಟಪವು ಹಾಗು ಕಲ್ಲಿನ ಮಂಚ ಚೆನ್ನಾಗಿದೆ.

ಅಲ್ಲಿ ತೆಗೆದ ಕೆಲವು ಚಿತ್ರಗಳು: http://picasaweb.google.co.in/prasannakannadiga/RydYRG#

http://prasca.blogspot.com/search?updated-max=2009-11-26T05%3A52%3A00-08%3A00&max-results=7

Anonymous ಅಂತಾರೆ...

ಮೈ ಜುಮ್ ಎನಿಸಿತಿದೆ ಗುರು! ಆ ಜಾಗದಲ್ಲಿ ಇತಿಹಾಸದಲ್ಲಿ ಅಂದಿನ ದಿನ, ಯಾವುದೋ ರಾಜನ ದರಬಾರಲ್ಲೇ ನಿಂತಂತೆ ರೋಮಾಂಚನ ಆಗ್ತಿದೆ ನನಗೆ! ನಮ್ಮ ಇತಿಹಾಸದ ಹಿರಿಮೆ ಸಂಪೂರ್ಣ ಇವತ್ತು ಕೂತು ತಿಳಿದುಕೊಳ್ಳೋ ಮಹದಾಸೆ ಹುಟ್ಟುತ್ತಿದೆ ಗುರು.. ಬರ್ತೀನಿ..

Sushanth ಅಂತಾರೆ...

inta jaga gala bagge jana adyake publicity kodalvo a MadhukeshwaranE balla.

ಪ್ರಗತಿ ಹೆಗಡೆ ಅಂತಾರೆ...

ದಕ್ಷಿಣ ಕಾಶಿ ,ಜಯಂತಿ ಪುರ ಅನ್ನಿಸಿದ ಬನವಾಸಿ ಬಗ್ಗೆ ಚೆನ್ನಾಗಿ ಬರೆದಿದ್ದೀರಿ..

ಪ್ರಗತಿ ಹೆಗಡೆ ಅಂತಾರೆ...

ದಕ್ಷಿಣ ಕಾಶಿ ,ಜಯಂತಿ ಪುರ ಅನ್ನಿಸಿದ ಬನವಾಸಿ ಬಗ್ಗೆ ಚೆನ್ನಾಗಿ ಬರೆದಿದ್ದೀರಿ..

ಪುಟ್ಟ ಅಂತಾರೆ...

ದಸರೆಯ ರಜದಲ್ಲಿ ಬೈಕ್ ಪ್ರವಾಸ ಹೋಗಿದ್ದೆವು
ಸಿರಸಿ ಇಂದ ಬನವಾಸಿಗೆ ಹೋಗುವಾಗ, ಅಲ್ಲಿನ ರಮಣೀಯ ಪರಿಸರ ಕಂಡು ಪಂಪನ ಈ ವಾಕ್ಯಗಳು ಜ್ಞಾಪಕ ಬಂದವು
"ಚಾಗದ ಭೋಗದ ಗೇಯದ ಗೊಟ್ಟಿಯಲಂಪಿನಿಂಪುಗ
ಳ್ಗಾಗರಮಾದ ಮಾನಿಸರೆ ಮಾನಿಸರಂತವರಾಗಿ ಪುಟ್ಟಲೇ
ನಾಗಿಯುಮೇನೊ ತೀರ್ದಪುದೆ ತೀರದೊಡಂ ಮರಿದುಂಬಿಯಾಗಿ ಮೇಣ್
ಕೋಗಿಲೆಯಾಗಿ ಪುಟ್ಟುವದು ನಂದನವನದೊಳ್ ಬನವಾಸಿದೇಶದೊಳ್||"

ಅಂದಿನ ಬನವಾಸಿ ದೇಶ(ಈಗಿನ ಕನ್ನಡ ದೇಶ ) ದಲ್ಲಿ ಹುಟ್ಟಿದ ನಾವೇ ದನ್ಯರು .....

Deepak hegde Tyagli ಅಂತಾರೆ...

ಬನವಾಸಿಯ ದೆವಸ್ತಾನದ ಕೆತ್ತನೆ ಬಹಳ ವಿಬಿನ್ನವಾಗಿದೆ...

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails