ಮೊನ್ನೆ, ಅಂದ್ರೆ ೧೯ನೇ ಏಪ್ರಿಲ್ ೨೦೧೦ರ ವಿಜಯ ಕರ್ನಾಟಕದ ಆರನೇ ಪುಟದಲ್ಲಿ ಒಂದು ಸುದ್ದಿ ಬಂದಿದೆ. ಸುದ್ದಿ ಏನಪ್ಪಾ ಅಂದ್ರೆ ಒಂದು ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕರ್ನಾಟಕದ ರಾಜ್ಯಪಾಲರಾದ ಶ್ರೀ ಶ್ರೀ ಶ್ರೀ ಹನ್ಸ್ ರಾಜ್ ಭಾರಧ್ವಾಜ್ ಅವ್ರು ನಮ್ಮ ಜನುಕ್ಕೆ ದೇಶದ ಬಗ್ಗೆ ಗೌರವಾ ತೋರಿಸೋದು ಹೆಂಗೆ ಅಂತಾ ಸಕ್ಕತ್ತಾಗಿ ಉಪದೇಶ ಕೊಟ್ಟಿದಾರೆ ಗುರೂ!
ದೇಶದ ಬಗ್ಗೆ ಗೌರವ!
ಕನ್ನಡನಾಡಿನ ಐಕ್ಳುಗಳಿಗೆ ‘ನಿಮಗೆಲ್ಲಾ ದೇಶದ ಬಗ್ಗೆ ಗೌರವಾ ಇರೋದೇ ಆದ್ರೆ ಎಲ್ಲಾ ಭಾಷೆಗಳನ್ನು ಗೌರವಿಸಬೇಕು. ಹಾಗೆ ಗೌರವ ಇಲ್ಲದೇ ಇರೋದ್ರಿಂದಾನೆ ಯುವುಕ್ರು ಪರದೇಶಿ ಸಂಸ್ಕೃತಿಗೆ ಮಾರು ಹೋಗ್ತಿರೋದು’ ಅನ್ನೋ ದನೀಲಿ ಭಾಷಣ ಮಾಡಿದ್ದಾರೆ. ಇಲ್ಲಿ ತಂಕಾ ಇವರು ಹೇಳಿದ್ದನ್ನು ಒಪ್ಪೋದು ಬಿಡೋದು ಅವರವ್ರಿಗೆ ಬಿಟ್ಟಿದ್ದು... ಬಿಡಿ. ಆದ್ರೆ ಇನ್ನೂ ಮುಂದುವರೆದ ಘನ ರಾಜ್ಯಪಾಲರು ಕನ್ನಡಿಗರು ಯಾಕೆ ಹಿಂದೀ ಮತ್ತು ಉರ್ದೂನ ಕಲೀಬಾರ್ದು ಅಂತಾ ಕೇಳಿದಾರೆ. ಮತ್ತೂ ಮುಂದುವರೆದು ಸಂಸ್ಕೃತ ಭಾರತದ ಎಲ್ಲಾ ಭಾಷೆಗಳಿಗೆ ತಾಯಿ ಭಾಷೆ ಅನ್ನೋ ಶತಶತಮಾನಗಳ ಸುಳ್ಳುನ್ನ ಪುಂಗಿದಾರೆ.
ಹಿಂದೀ ಒಪ್ಪಿಸಲು ಮಾಡೋ ತಂತ್ರ!
ಸೂಕ್ಷ್ಮವಾಗಿ ಗಮನಿಸಿ ನೋಡಿ. ಇವರ ಮಾತಿನಲ್ಲಿ ದೇಶದ ಬಗ್ಗೆ ಗೌರವಾ ಇರೋದು ಅಂದ್ರೆ ಬೇರೆ ಭಾಷೆಗಳ ಬಗ್ಗೆ ಗೌರವಾ ಇರೋದು ಅನ್ನೋ ಸಾಧುತನದ ಒಳ್ಳೇ ಮಾತಿದೆ. ಇದರ ಬೆನ್ನಹಿಂದೆ ಆಡಿರೋ ಮಾತಲ್ಲಿ ‘ಜನರೆಲ್ಲಾ ಹಿಂದೀ ಕಲೀಬೇಕು’ ಅನ್ನೋ ಸಲಹೆ ಮೂಲಕ ಹಿಂದೀನಾ ಒಪ್ಪಿಸೋ ಕುತಂತ್ರ ಇದ್ದಂಗಿದೆ ಅಂತಾ ಅನುಮಾನ ಬರಲ್ವಾ? ಇವರು ಯಾಕೆ ಬೆಂಗಳೂರಿಗೆ ವಲಸೆ ಬಂದಿರೋ ಭಾರತೀಯರೆಲ್ಲಾ ಕನ್ನಡ ಕಲೀಬೇಕು, ಕನ್ನಡದಲ್ಲಿರೋ ಅದ್ಭುತ ಸಾಹಿತ್ಯಾನಾ ಓದಿಕೊಳ್ಬೇಕು, ಚಿರಂಜೀವಿ ಸಿಂಗ್ ಅವರಂತೆ ವಲಸಿಗರೆಲ್ಲಾ ಕನ್ನಡ ಕಲೀಬೇಕು... ಅನ್ನಲಿಲ್ಲಾ ಅನ್ನುಸ್ತಿಲ್ವಾ? ನಿಜವಾಗ್ಲೂ ಹೋದಲ್ಲಿ ಬಂದಲ್ಲೆಲ್ಲಾ ದೇಶಪ್ರೇಮದ ಸೋಗಲ್ಲಿ ಹಿಂದೀ ಹೇರಿಕೆ ಮಾಡೋದು ಯಾವ ದೇಶದ್ರೋಹದ ಕೆಲಸಕ್ಕಿಂತಲೂ ಕಮ್ಮಿಯಿಲ್ಲಾ ಅನ್ನೋದೇ ಸತ್ಯಾ ಅಲ್ವಾ ಗುರೂ? ಈ ಹಿಂದೆ ರಾಜ್ಯಪಾಲರಾಗಿದ್ದ ಶ್ರೀ ರಾಮೇಶ್ವರ ಠಾಕೂರ್ ಅವ್ರೂ ಕೂಡಾ ಹಿಂದೀ ಪ್ರಚಾರದ ಪವಿತ್ರ ಕೈಂಕರ್ಯದಲ್ಲಿ ತೊಡಗಿಕೊಂಡಿದ್ದನ್ನು ಜನಾ ಇನ್ನೂ ಮರೆತಿಲ್ಲ. ಇದುನ್ನೆಲ್ಲಾ ನೋಡುದ್ರೆ ಕೇಂದ್ರದೋರು ಕರ್ನಾಟಕಕ್ಕೆ ರಾಜ್ಯಪಾಲರನ್ನು ನೇಮಿಸೋ ಬದಲು ಹಿಂದೀ ಪ್ರಚಾರಕರನ್ನು ನೇಮುಸ್ತಾ ಇದಾರಾ... ಅಂತಾ ಅನ್ನುಸ್ತಿಲ್ವಾ ಗುರೂ?!
0 ಅನಿಸಿಕೆಗಳು:
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!