ಕರ್ನಾಟಕದಲ್ಲಿ ಸದ್ಯಕ್ಕೆ ಸಕ್ಕತ್ ಧೂಳೆಬ್ಬಿಸಿರೋ ರಾಜಕೀಯದ ಸುದ್ದಿ ಅಂದ್ರೆ ಗಣಿ. ಅದ್ರಲ್ಲೂ ಬಳ್ಳಾರಿ ಗಣಿ. ಇದೇ ವಿಷಯವಾಗಿ ಕಾಂಗ್ರೆಸ್ಸಿನೋರು ಒಂದು ಪಾದಯಾತ್ರೇನಾ ಹಮ್ಮಿಕೊಂಡ್ರು ಅಂತಾ ಸುದ್ದಿ ಬಂತು. ಕಾಂಗ್ರೆಸ್ ಪಕ್ಷದ ವತಿಯಿಂದ ಈ ಪಾದಯಾತ್ರೆ ಬಗ್ಗೆ ಒಂದು ಪತ್ರಿಕಾ ಜಾಹೀರಾತು ಕೂಡಾ ಮೇಲಿನ ಚಿತ್ರದಂತೆ ಪತ್ರಿಕೆಗಳಲ್ಲಿ ಪ್ರಕಟವಾಯ್ತು.
ಎಲ್ಲಾ ಓಕೆ! ಇದೊಂದು ಸಾಲು ಯಾಕೆ?
ನೋಡ್ರಪ್ಪಾ ಗುರುಗೋಳೇ, ಈ ಗಣಿಗಾರಿಕೆ ಅಕ್ರಮದ ಬಗ್ಗೆ ಆಗಲೀ, ಇದುನ್ನ ಯಾರು ಮಾಡ್ತಿದಾರೆ ಅನ್ನೋದಾಗ್ಲೀ, ಕಾಂಗ್ರೆಸ್ಸು ಪಾದಯಾತ್ರೆ ಮಾಡ್ತಿರೋದು ಸರೀನಾ? ತಪ್ಪಾ? ಇದರ ಹಿಂದೆ ಇನ್ನೇನಾದ್ರೂ ಉದ್ದೇಶ ಇದ್ಯಾ? ಅನ್ನೋದಾಗ್ಲೀ ಈ ನಮ್ಮ ಬರಹದ ವ್ಯಾಪ್ತಿಯಲ್ಲಿ ಇಲ್ಲಾ. ನಮ್ಮ ನಾಡನ್ನು ದಶಕಗಳ ಕಾಲ ಆಳಿದ ರಾಜಕೀಯ ಪಕ್ಷವೊಂದರ ಗುಲಾಮಗಿರಿ ಮನಸ್ಥಿತಿ ಬಗ್ಗೆ ಮಾತ್ರಾ ನಿಮ್ಮ ಗಮನ ಸೆಳೆಯೋದು ನಮ್ಮ ಉದ್ದೇಶ. ಅಲ್ಲಾ ಅಂಥಾ ಬಂಗಾರದಂಗೆ ನಾಡರಕ್ಷಣಾ ನಡಿಗೆ ಅಂತಾ ಹೆಸರಿಟ್ಟುಕೊಂಡು, ದೊಡ್ಡ ಬ್ಯಾನರ್ರು, ಪುಟದಗಲದ ಅಡ್ವಟೈಸ್‍ಮೆಂಟು ಹಾಕಿಸಿರೋ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯೋರು ಅದ್ಯಾಕೆ ಅಷ್ಟು ಅವಲಕ್ಷಣವಾಗಿ "ಬಳ್ಳಾರಿ ಚಲೋ, ಕರ್ನಾಟಕ ಬಚಾವೋ" ಅಂತಾ ಬರೆದಿದ್ದಾರೆ ಅನ್ಸಲ್ವಾ ಗುರೂ? ಹೋಗ್ಲಿ, ದಿಲ್ಲಿಯಲ್ಲಿ ಕೂತಿರೋ ತಮ್ಮ ಹೈಕಮಾಂಡ್ ದಣಿಗಳನ್ನು ಮೆಚ್ಚಿಸೋ ಉದ್ದೇಶ ಇದೆ ಅಂತಾಗಿದ್ರೆ ಇದುನ್ನ ಕನ್ನಡ ಲಿಪಿಯಲ್ಲಿ ಯಾಕೆ ಬರೆಸಿದ್ದಾರೆ? ಕನ್ನಡದೋರಿಗೆ ಹಿಂದೀ ಕಲಿಸೋಕೆ ಇದುನ್ನೂ ಒಂದು ಅವಕಾಶ ಅಂದ್ಕೊಂಬುಟ್ರಾ ಅಂತಾ ಅನ್ಸಲ್ವಾ? ನಾಡು ನುಡಿ ಬಗ್ಗೆ ಕಾಳಜಿ ಜೊತೆಗೆ ಚೂರು ಸ್ವಾಭಿಮಾನಾನೂ ಕರ್ನಾಟಕ ಕಾಂಗ್ರೆಸ್ಸೂ ಸೇರಿದಂತೆ ರಾಜ್ಯದಲ್ಲಿರೋ ರಾಷ್ಟ್ರೀಯ ಪಕ್ಷಗಳಿಗೆ ಇರಬೇಕಲ್ವಾ? ಇದುನ್ನೆಲ್ಲಾ ನೋಡುದ್ರೆ ಕರ್ನಾಟಕದ ರಾಜಕಾರಣ ಕನ್ನಡ ಕೇಂದ್ರಿತ ಆಗಬೇಕಾಗಿದೆ ಅನ್ಸುತ್ತಲ್ವಾ? ಗುರೂ!