ನಾಡಹಬ್ಬದ ನಲ್ಮೆಯ ಹಾರೈಕೆಗಳು
31.10.10
ಎಲ್ಲ ಕನ್ನಡ ಬಾಂಧವರಿಗೂ ಕರ್ನಾಟಕ ರಾಜ್ಯೋತ್ಸವದ ನಲ್ಮೆಯ ಹಾರೈಕೆಗಳು. ಈ ಸುದಿನ ನಮ್ಮ ನಿನ್ನೆಗಳನ್ನು ನೆನಪು ಮಾಡುತ್ತಾ ಇಂದು ಪ್ರೇರಣೆ ನೀಡಿ ನಾಳೆಗಳನ್ನು ಕಟ್ಟಲು ನೆರವಾಗಲಿದೆಯೆಂದು ಆಶಿಸುತ್ತೇವೆ. ಈ ನಿಟ್ಟಿನಲ್ಲಿ ಬನವಾಸಿ ಬಳಗವು ನಿಮ್ಮ ಮುಂದೆ ಒಂದು ಧ್ವನಿಮುದ್ರಿಕೆಯನ್ನು ಪ್ರಸ್ತುತಪಡಿಸುತ್ತಿದೆ. ಇದನ್ನು ಕೇಳಿ, ನೋಡಿ. ಇದರಲ್ಲಿ ನಮ್ಮ ನಾಡಿನ ಹೆಮ್ಮೆಯ ಇತಿಹಾಸದ ಪ್ರಮುಖ ಘಟ್ಟಗಳಲ್ಲಿ ಕೆಲವುಗಳ ಬಗ್ಗೆ ಮಾತಾಡಲಾಗಿದೆ. ನೀವೂ ಕೇಳಿ. ನಿಮ್ಮ ಪರಿಚಿತರಿಗೂ ಕೇಳಿಸಿ.
ಇತಿಹಾಸದ ಪ್ರಾಮುಖ್ಯತೆ
ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ, ಲೋಕಮಾನ್ಯ ಬಾಲಗಂಗಾಧರ ತಿಲಕರ ಸಹವರ್ತಿಯಾಗಿ, ಕರ್ನಾಟಕ ಪ್ರಾಂತ್ಯದಲ್ಲಿ ದುಡಿಯಲು ಮುಂದಾಗಿದ್ದ ಶ್ರೀ ಆಲೂರು ವೆಂಕಟರಾಯರನ್ನು ಒಂದು ಪ್ರಶ್ನೆ ಕಾಡುತ್ತಿತ್ತಂತೆ. ನೆರೆಯ ಆಂಧ್ರ, ಮಹಾರಾಷ್ಟ್ರ ಮೊದಲಾದ ಪ್ರದೇಶಗಳ ಹೋರಾಟಗಾರರಿಗೆ ಇರುವ ಪ್ರೇರಣೆ ಕನ್ನಡಿಗರಿಗೆ ಇಲ್ಲವಲ್ಲಾ, ಕನ್ನಡಿಗರಲ್ಲಿ ಕೆಚ್ಚೇ ಇಲ್ಲವಲ್ಲಾ ಅನ್ನಿಸುತ್ತಿತ್ತಂತೆ. ಇದರ ಬೇರು ಹುಡುಕಿದಾಗ ಅವರು ಕಂಡುಕೊಂಡ ಸತ್ಯ... ತೆಲುಗರಿಗೆ ಪ್ರತಾಪರುದ್ರದೇವ, ನನ್ನಯ್ಯಭಟ್ಟರ ಇತಿಹಾಸವೂ, ಮಹಾರಾಷ್ಟ್ರೀಯರಿಗೆ ರಾಮದಾಸ, ಶಿವಾಜಿಯ ಇತಿಹಾಸವೂ ಕೊಡುವ ಸ್ಪೂರ್ತಿ, ಉಕ್ಕೇರಿಸುವ ರಾಷ್ಟ್ರೀಯತೆಯ ಭಾವನೆಗಳು ಕನ್ನಡಗರಲ್ಲೇ ಅದೇ ಪರಿಣಾಮ ಮಾಡಲಾರದು. ಕನ್ನಡದ ಜನರಲ್ಲಿ ರಾಷ್ಟ್ರೀಯತೆಯನ್ನು ಬಡಿದೆಬ್ಬಿಸಲು ಪರಿಣಾಮಕಾರಿಯಾದ ಸಾಧನ... ನಮ್ಮ ಹಿರಿಯರ ಕಥನ ಮತ್ತವರ ಸಾಧನೆಗಳು ಮಾತ್ರಾ. ಅಂತಹ ಹಿರಿಮೆ ಮತ್ತು ಹಿನ್ನೆಲೆಗಳು ಕನ್ನಡಿಗರಿಗೆ ಇಲ್ಲವೇ? ಎಂಬ ಪ್ರಶ್ನೆ ಕಾಡತೊಡಗಿತಂತೆ. ಒಂದೊಮ್ಮೆ ಆನೆಗೊಂದಿಯಿಂದ ಕಂಡ ಪಾಳುಹಂಪೆಯತ್ತ ಆಸಕ್ತರಾಗಿ, ಅಲ್ಲಿಗೆ ಭೇಟಿ ನೀಡಿದಾಗ ನಮ್ಮ ಕನ್ನಡಿಗರ ನಿನ್ನೆಗಳು ಇಂತಹ ಸೊಬಗಿನದ್ದೇ ಎನ್ನಿಸಿತಂತೆ. ನಂತರ ಇತಿಹಾಸ, ಶಾಸನಗಳ ಆಳವಾದ ಅಧ್ಯಯನ ಕೈಗೊಂಡು ಆಲೂರರು ಕರ್ನಾಟಕ ಗತವೈಭವ ಎಂಬ ಹೊತ್ತಗೆಯನ್ನು ಬರೆದರಂತೆ. ಮುಂದೆ ಈ ಹೊತ್ತಗೆ ಕನ್ನಡನಾಡಿನ ಅನೇಕ ಸ್ವಾತಂತ್ರ್ಯ ಹೋರಾಟಗಾರರಿಗೆ ಕೈದೀವಿಗೆಯಾದದ್ದು ನಿಜ.
ಒಟ್ಟಿನಲ್ಲಿ ನಿನ್ನೆಯ ನಮ್ಮವರ ಸಾಧನೆಗಳು, ನಮ್ಮ ನಾಡಿನ ಇತಿಹಾಸ ನಮ್ಮಲ್ಲಿ ಸ್ಪೂರ್ತಿ ತುಂಬಿ ಇಂದು ನಾವೂ ಏನಾದರೂ ಸಾಧಿಸಬೇಕೆಂಬ ಉತ್ಸಾಹ ಮತ್ತು ಛಲಕ್ಕೆ ಕಾರಣವಾಗಲಿ. ಸಾಧನೆಯ ಶಿಖರವೇರಲು ನಮಗೂ ಯೋಗ್ಯತೆಯಿದೆ ಎನ್ನುವ ಮನವರಿಕೆಯು ಆತ್ಮವಿಶ್ವಾಸಕ್ಕೆ ಕಾರಣವಾಗಲಿ ಎಂಬುದೇ ಹೀಗೆ ಇತಿಹಾಸದ ಪುಟಗಳನ್ನು ತಿರುವಿ ಹಾಕುವುದರ ಉದ್ದೇಶವಾಗಿದೆ.
ಮಾಹಿತಿಗಳ ಮೂಲ
ಈ ಬಾರಿ ರಾಜ್ಯೋತ್ಸವದ ಸಂದರ್ಭದಲ್ಲಿ ಇಂತಹ ಒಂದು ಪ್ರಯತ್ನ ಮಾಡಿ ನಿಮ್ಮ ಮುಂದಿಡಲಾಗಿದೆ. ಈ ಮಾತುಗಳಿಗೆ ಅನೇಕ ಗ್ರಂಥಗಳ ಅಧ್ಯಯನವೇ ಆಧಾರವಾಗಿದೆ. ಮುಖ್ಯವಾಗಿ ಆಲೂರು ವೆಂಕಟರಾಯರು ಬರೆದಿರುವ ಕರ್ನಾಟಕ ಗತವೈಭವ, ಅಂದಿನ ಮೈಸೂರು ರಾಜ್ಯಸರ್ಕಾರ ಸಾಹಿತ್ಯ ಸಂಸ್ಕೃತಿ ಅಭಿವೃದ್ಧಿ ಇಲಾಖೆಯ ವತಿಯಿಂದ ಹೊರತಂದಿದ್ದ ಕರ್ನಾಟಕದ ಪರಂಪರೆ - I & II, ಹಂಪಿ ವಿಶ್ವವಿದ್ಯಾಲಯದ ಪ್ರವಾಸಿ ಕಂಡ ವಿಜಯನಗರ, ಡಾ. ಚಿದಾನಂದ ಮೂರ್ತಿಗಳ ಕನ್ನಡ ಸಂಸ್ಕೃತಿ: ನಮ್ಮ ಹೆಮ್ಮೆ ಎನ್ನುವ ಹೊತ್ತಗೆಗಳು ಪ್ರಮುಖವಾದವು.
ಕೊನೆಹನಿ: ಈ ಬಾರಿ ಕೇವಲ ಇತಿಹಾಸದ ವೀರಪರಂಪರೆಯ ಒಂದು ಮಗ್ಗುಲಿನ ಬಗ್ಗೆ ಮಾತ್ರಾ ಮಾತನ್ನಾಡಲಾಗಿದೆ. ಕಲೆ, ಸಾಹಿತ್ಯ, ಸಂಗೀತ, ದಾರ್ಶನಿಕತೆ, ಆಧುನಿಕ ಕರ್ನಾಟಕದ ಹಿರಿಮೆ, ಧಾರ್ಮಿಕತೆ, ಸಾಧಕರು, ತಂತ್ರಜ್ಞಾನ, ನಮ್ಮ ನಾಡಿನ ಸಂಪನ್ಮೂಲಗಳು... ಹೀಗೆ ಅನೇಕ ಮಗ್ಗಲುಗಳಲ್ಲಿಯೂ ಕರ್ನಾಟಕ ಅತ್ಯಂತ ಶ್ರೀಮಂತ. ಈ ಪುಣ್ಯಭೂಮಿ ನಮ್ಮದೆಂಬ ಹಿರಿಮೆ ನಮ್ಮೆಲ್ಲರಲ್ಲಿರಲಿ. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ. ಎಲ್ಲರಿಗೂ ರಾಜ್ಯೋತ್ಸವದ ಶುಭ ಹಾರೈಕೆಗಳು.
2 ಅನಿಸಿಕೆಗಳು:
ಸಖತ್ ಆಗಿದೆ ಆನಂದ್. ನಮ್ಮೆಲ್ಲರ ಶಕ್ತಿಗಳನ್ನ ನಮ್ಮ ನಾಡಿನ ಹಿತಕ್ಕಾಗಿ ಕೇಂದ್ರೀಕರಿಸಬೇಕಾಗಿದೆ.
ನಿಮ್ಮ ಮಾತು ಕೇಳಿ ಖುಷಿಯಾಯಿತು ಆನಂದ್. ಅತ್ಯದ್ಭುತ ಎನ್ನಬಹುದಾದ ಕೆಲಸಗಳು ಕನ್ನಡನಾಡಿನಲ್ಲಿ ಈ ಹಿಂದೆ ಆಗಿಹೋಗಿವೆ. ಇನ್ನಷ್ಟು ಅದ್ಭುತವಾದ ಕೆಲಸ ಮಾಡಲು ಇತಿಹಾಸ ನಮಗೆ ಪ್ರೇರಣೆಯಾಗಲಿ.
-ವಾಸು
ಬರಹ ಸಾಫ್ಟ್ವೇರ್
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!