ಅಧ್ಯಾತ್ಮವೂ ಕನ್ನಡದಲ್ಲಿದ್ದರೇ ಸಾರ್ಥಕವಾಗೋದು!


ಭಾರತ ಅಧ್ಯಾತ್ಮದ ತವರು ಎಂದು ಹೆಸರು ಪಡೆದಿದೆ. ಸಾವಿರಾರು ವರ್ಷಗಳಿಂದ ಈ ಅಧ್ಯಾತ್ಮದ ಅರಿವು ನಮ್ಮ ನಾಡಲ್ಲಿದೆ. ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳು, ಭಗವದ್ಗೀತೆ, ವೇದ, ಉಪನಿಷತ್ತುಗಳು ಅವುಗಳಲ್ಲಿ ಪ್ರಮುಖವಾದವು. ಅಂದಿನ ಸಾಮಾಜಿಕ ಸ್ಥಿತಿಗೆ ಅನುಗುಣವಾಗಿ ಈ ಎಲ್ಲಾ ಅರಿಮೆಗಳು ಸಂಸ್ಕೃತದಲ್ಲಿವೆ. ಹಿಂದೆ ಈ ಅರಿವು ಬೇಕಾದವರು ಸಂಸ್ಕೃತ ಕಲಿತಿರಬೇಕಿತ್ತು, ಅಥವಾ ಕಲಿತವರು ತಿಳಿಸಿ ಹೇಳಬೇಕಿತ್ತು. ಈಗ ಜನಸಾಮಾನ್ಯರಿಗೆ ಇವುಗಳು ಬೇಕೆಂದರೆ ಹಿಂದಿದ್ದಂತೆ, ಸಂಸ್ಕೃತವನ್ನು ಕಲಿತಿರಲೇಬೇಕಾಗಿಲ್ಲ. ನಮ್ಮ ಹಿರಿಯರು ಇವುಗಳನ್ನು, ಇವುಗಳ ತಿರುಳುಗಳನ್ನು, ಇವುಗಳಿಗೆ ಅರ್ಥ-ಭಾಷ್ಯಗಳನ್ನು ಕನ್ನಡದಲ್ಲೇ ಬರೆದು ಕನ್ನಡಿಗರಿಗೆ ಉಪಕರಿಸಿದ್ದಾರೆ. ಇಂತಹ ಭಾಷಾಂತರಗೊಂಡ ಒಂದು ಹೊತ್ತಗೆ “ಭಗವಂತನ ನಲ್ನುಡಿ”. ಬರಹಗಾರರು ಶ್ರೀ ಬನ್ನಂಜೆ ಗೋವಿಂದಾಚಾರ್ಯರು. ಅದ್ಸರಿ, ಈ ಹೊತ್ತಗೆಯ ಬಗ್ಗೆ ನಮಗೆ ಯಾಕಪ್ಪಾ ಆಸಕ್ತಿ, ಮೆಚ್ಚುಗೆ ಅಂದರೆ ಇದರಲ್ಲಿ ಬಳಸಲಾಗಿರುವ ಭಾಷೆ.

ಮುರಿಯಲ್ಪಟ್ಟ ಸಾಮಾನ್ಯ ಹವ್ಯಾಸಗಳು!

ಸಾಮಾನ್ಯವಾಗಿ ಇಂತಹ ಕಾವ್ಯಗಳನ್ನು ಕನ್ನಡಕ್ಕೆ ತರುವಾಗ ಅವುಗಳಲ್ಲಿನ ಹೆಚ್ಚಿನ ಪದಗಳನ್ನು ಅವಿರುವಂತೆಯೇ ಬಳಸಿ ಎಸಗುಪದ (ಕ್ರಿಯಾಪದ)ವನ್ನು ಕನ್ನಡದಲ್ಲಿ ಬರೆಯುವುದು ವಾಡಿಕೆ. ಆದರೆ ಈ ಹೊತ್ತಗೆಯಲ್ಲಿ ಬಳಸಲಾಗಿರುವ ಪದಗಳ ಸೊಗಡನ್ನು ಓದಿಯೇ ಅನುಭವಿಸಬೇಕು. ಮಹಾರಥಿ = ತೇರಾಳು. ಹೃಷಿಕೇಷ = ಪೊದೆಗೂದಲಿನವ, ದ್ವಿಜೋತ್ತಮ = ಹೆಬ್ಬಾರ್ವ ಹೀಗೆ ಸಾಗುತ್ತದೆ. ಈ ಅನುವಾದವನ್ನು ನೋಡಿ:

ಭಗವಾನುವಾಚ

ಭೂಯ ಏವ ಮಹಾಬಾಹೋ ಶೃಣು ಮೇ ಪರಮಂ ವಚಃ I
ಯತ್ ಯೇಹಂ ಪ್ರೀಯಮಾಣಾಯ ವಕ್ಷ್ಯಾಮಿ ಹಿತಕಾಮ್ಯಯಾ II
ಭಗವಂತ ಹೇಳಿದನು: ಓ ಮಹಾವೀರ, ಇನ್ನೂ ಕೇಳು ನನ್ನ ಹಿರಿನುಡಿಯನ್ನು. ಏಕೆಂದರೆ ಕೇಳಿ ಖುಷಿಪಡುತ್ತಿರುವ ನಿನಗೆ ಒಳಿತನ್ನು ಬಯಸಿಯೇ ನಾನು ಹೇಳುತ್ತಿದ್ದೇನೆ.
ನ ಮೇ ವಿದುಃ ಸುರಗಣಾಃ ಪ್ರಭವಂ ನ ಮಹರ್ಷಯಃ I
ಅಹಮಾದಿರ್ಹಿ ದೇವಾನಾಂ ಮಹರ್ಷೀಣಾಂ ಚ ಸರ್ವಶಃ II
ನನ್ನ ಆಳವನ್ನು [ನಾನು ಜಗವನ್ನು ನಿರ್ಮಿಸುವ ಬಗೆಯನ್ನು], ದೇವತೆಗಳ ಗಡಣಗಳೂ ಅರಿತಿಲ್ಲ; ಹಿರಿಯ ಋಷಿಗಳೂ ಕೂಡ. [ ನನಗೂ ಒಂದು ಹುಟ್ಟು ಇದೆಯೆಂದು ದೇವತೆಗಳ ಗಡಣಗಳಾಗಲಿ, ಮಹರ್ಷಿಗಳಾಗಲಿ ತಿಳಿದವರಿಲ್ಲ] ದೇವತೆಗಳಿಗೆ ಹಿರಿಯ ಋಷಿಗಳಿಗೆ, ಎಲ್ಲರಿಗೂ ಮೂಲ ನಾನೇ ಅಲ್ಲವೇ?
ಯೋ ಮಾಮಜಮನಾದಿಂ ಚ ವೇತ್ತಿ ಲೋಕಮಹೇಶ್ವರಮ್ I
ಅಸಮ್ಮೂಢಃ ಸ ಮರ್ತ್ಯೇಷು ಸರ್ವಪಾಪೈಃ ಪ್ರಮುಚ್ಯತೇ II
ನಾನು ಹುಟ್ಟಿರದವನು, ಎಲ್ಲವನ್ನು ನಡೆಸುತ್ತ ಎಲ್ಲದರ ಮೊದಲಿದ್ದವನು [ಪ್ರಾಣತತ್ವಕ್ಕೂ ಮೂಲಕಾರಣ]. ಎಲ್ಲಲೋಕಗಳ ಒಡೆಯರಿಗು ಹಿರಿಯೊಡೆಯ. ಮನುಜರಲ್ಲಿ ಹೀಗೆ ನನ್ನನ್ನು ತಿಳಿದವನು ಮೋಹವಳಿದವನು.ಅವನು ಪಾಪಗಳಿಂದ ಪಾರಾಗುತ್ತಾನೆ.

ಇಡೀ ಹೊತ್ತಗೆಯಲ್ಲಿ ಸೊಗಸಾದ ನೂರಾರು ಕನ್ನಡ ಪದಗಳನ್ನು ಬನ್ನಂಜೆಯವರು ಬಳಸಿದಿದ್ದಾರೆ. ಭಗವದ್ ಗೀತೆಯ ಅನುವಾದ ಈ ಹೊತ್ತಗೆಯಲ್ಲಿ ಸರಳವಾಗಿದ್ದು, ಓದುಗರಿಗೆ ಅರ್ಥವಾಗುವಂತಿದ್ದು ಹತ್ತಿರವೆನ್ನಿಸುತ್ತದೆ. ಈ ಕಾರಣಕ್ಕಾಗಿಯೇ ಮೆಚ್ಚುಗೆಯಾಗುತ್ತದೆ. ಹೌದೂ ಗುರೂ, ಪ್ರಪಂಚದ ಯಾವ ಅರಿಮೆಯೇ ಆಗಿದ್ದರೂ ಅದು ಕನ್ನಡಿಗರಿಗೆ ಹೆಚ್ಚು ಅರ್ಥವಾಗೋದು ಅವು ಕನ್ನಡದಲ್ಲಿದ್ದಾಗ ಮಾತ್ರವೇ.

5 ಅನಿಸಿಕೆಗಳು:

Goan kannadiga ಅಂತಾರೆ...

ee anuvadavannu artha madikolluvudakke kanishta kannadadalli BA aadaru madirabeku anisuttide. ekendare nanagantu khandita arthavaguttilla.
aadu bhashe kannada dalli anuvada madiddare chennagiruttittu

Anonymous ಅಂತಾರೆ...

Goan kannadigarE,

kannada, karnatakakke mattaShTu hattira banniri.:)

gunda

Priyank ಅಂತಾರೆ...

@Goan Kannadiga,

idu aaDugannaDakke hattiravide. nimage haage annistilwa?

ಸಂದೀಪ್ ಅಂತಾರೆ...

ಹೃಷಿಕೇಶ ಅನ್ನೋ ಪದವನ್ನ 'ಪೊದೆಕೂದಲಿನವನು' ಅಂತ ಇಶ್ಟು ಸರಳವಾಗಿ ಹೇಳಿರೋ ಅನುವಾದ ನಾನೆಂದೂ ನೋಡಿಲ್ಲ. ಇದನ್ನ ಅರ್ಥ ಮಾಡ್ಕೊಳ್ಳೋದಕ್ಕೆ ಬಿ.ಏ ಬೇಕು ಅಂತೀರಲ್ಲಾ?

ಸವಿತೃ ಅಂತಾರೆ...

ಇದು ನಿಜಕ್ಕೋ ಒಂದು ಅತ್ಯತ್ತಮ ಪ್ರಯತ್ನ.

ಮಹಾರಥಿ = ತೇರಾಳು ಅಂದಾಗ ಅತಿರಥವನ್ನ ಹೇಗೆ ಕನ್ನಡಕೆ ತರಬಹುದು ? ಮತ್ತು ಕನ್ನಡದ ಈ ಎರಡು ಪದಗಳ ವ್ಯತ್ತ್ಯಾಸವನ್ನು ಹೇಗೆ ಗುರ್ತಿಸಬಹುದು ಅನ್ನೋ ಅನುಮಾನ ಬರುತ್ತಾದರೂ ...

ಹೆಚ್ಚೆಚು ಬರೆದಂತೆ ಸ್ಪಷ್ಟತೆ ಸಿಕುವುದು ನಿಜ. ಇಂತ ಪ್ರಯತ್ನಗಳು ಹೆಚ್ಚಾಗಲಿ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails