ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ, ಸ್ಥಾಯಿ ಸಮಿತಿ ಹೆಸರಲ್ಲಿ ಬೆಂಗಳೂರಿನ ಪಾಲಿಕೆ ಶಾಲೆಗಳನ್ನು ಸಿ.ಬಿ.ಎಸ್.ಇ ಶಾಲೆಗಳಾಗಿ ಬದ್ಲಾಯ್ಸೋ ಕೆಲಸ ಹೆಜ್ಜೆ ಹೆಜ್ಜೆಯಾಗಿ ನಡೀತಾ ಇದ್ರೂ, ಕರ್ನಾಟಕ ರಾಜ್ಯದ ಸನ್ಮಾನ್ಯ ಶಿಕ್ಷಣ ಸಚಿವರಾದ ಶ್ರೀ ಶ್ರೀ ಶ್ರೀ 1008 ವಿಶ್ವೇಶ್ವರಹೆಗ್ಡೆ ಕಾಗೇರಿಯೋರು ಸೊಂಪು ನಿದ್ದೇಲಿ ಇದ್ದಂಗವ್ರೆ. ಇವತ್ತಿನ ದಿವಸದ (23.12.2010ರ) ಡೆಕ್ಕನ್ ಹೆರಾಲ್ಡ್ ಪತ್ರಿಕೇಲಿ ಬಂದಿರೋ ಸುದ್ದಿ ನೋಡುದ್ರೆ ಮಾನ್ಯ ಸಚಿವರ/ ಅವರ ಸರ್ಕಾರದ/ ಅವರು ಪ್ರತಿನಿಧಿಸೋ ಪಕ್ಷದ ನಿಲುವುಗಳೇ ಪಾಲಿಕೆ ಸ್ಥಾಯಿ ಸಮಿತಿಯ ನಿಲುವಾಗಿದೆಯೇನೋ ಅನ್ನಿಸುವಂತಿದೆ.
ವಿಷಯಾಂತರ ಅನ್ನೋ ಸಮರ್ಥನೆ!
ಪತ್ರಿಕೆಗಳಲ್ಲಿ ಬಂದಿರೋ ವರದೀನ ಎಷ್ಟು ಜಾಣತನದಿಂದ ವಿಷಯಾಂತರ ಮಾಡ್ತಿದಾರೆ ಅಂತಾ ನೋಡಿ. ಕನ್ನಡವನ್ನು ಒಂದು ಭಾಷೆಯಾಗಿ ಈ ಶಾಲೇಲಿ ಕಲುಸ್ತಾರಂತೆ... ಅದೂ ಕಡ್ಡಾಯವಾಗಿ. ಹಾಗಾಗಿ ಕನ್ನಡವನ್ನು ನಾವಿಲ್ಲಿ ಕಡೆಗಣಿಸೋಲ್ಲಾ ಅಂತಾ ಸಮಿತಿಯ ಸದಸ್ಯರಿಗೆ ಭರವಸೆ ಕೊಟ್ರಂತೆ. ಪಾಪಾ! ಎಂಥಾ ಉಪಕಾರ ಮಾಡ್ತಿದಾರೆ ಅಲ್ವಾ? ಇದುಕ್ಕೆ ಸಮಿತಿಯೋರು "ಹೌದೂ, ಹೌದೂ, ಹಾಗಾದ್ರೆ ನೀವು ತುಂಬಾ ಒಳ್ಳೇವ್ರು" ಅಂತಂದು ಬಂದ್ರಂತೆ. ನಿಜವಾಗ್ಲೂ ಇಲ್ಲಿರೊ ಪ್ರಶ್ನೆ ಸಿ.ಬಿ.ಎಸ್.ಇ ಶಾಲೇಲಿ ಕನ್ನಡ ಕಲಿಸೋದು ಅಥವಾ ಕಲಿಸದೇ ಇರೋದು ಮಾತ್ರಾನಾ? ಅಥವಾ ರಾಜ್ಯಸರ್ಕಾರ ನಾಡಿನ ಶಿಕ್ಷಣ ವ್ಯವಸ್ಥೆ ಕಟ್ಟೊ ತನ್ನ ಹೊಣೆಗಾರಿಕೆಯಿಂದ ನುಣುಚ್ಕೊಂಡು, ತಾನೇ ಒಪ್ಪಿರೋ ಭಾಷಾನೀತಿಗೆ ಎಳ್ಳುನೀರು ಬಿಡ್ತಿರೋ ಅಂಥಾ ಅನೇಕ ವಿಷಯಗಳಾ?
ಕಾಗೇರಿಯವ್ರೇ ಒಸಿ ಎದ್ದೇಳಿ!
ಸನ್ಮಾನ್ಯರೂ ಸಭ್ಯರೂ ಪ್ರಾಮಾಣಿಕರೂ ಆಗಿರೋ ಸಚಿವರೆಂದು ಹೆಸರಾಗಿರೋ ಕಾಗಿಯವರೇ... ಕರ್ನಾಟಕ ರಾಜ್ಯದಲ್ಲಿ ಇರೋ ರಾಜ್ಯ ಪಠ್ಯಕ್ರಮದ ಶಿಕ್ಷಣ ವ್ಯವಸ್ಥೆಗೆ ನಮ್ಮ ಮಕ್ಕಳಿಗೆ ಕಲಿಕೆ ಒದಗಿಸೋ ಸಾಮರ್ಥ್ಯ ಹೊಂದಿಲ್ವಾ? ರಾಜ್ಯ ಪಠ್ಯಕ್ರಮಕ್ಕಿಂತಾ ಕೇಂದ್ರೀಯ ಪಠ್ಯಕ್ರಮಾನೇ ಉತ್ತಮ ಅಂತಾ ನೀವೂ ಒಪ್ತೀರಾ? ಹಾಗೆ ಒಪ್ಪೋದಾದ್ರೆ ನಾಡಿನ ಕಲಿಕೆಯನ್ನು ಉತ್ತಮಪಡಿಸಬೇಕು ಅನ್ನೋ ಕಾಳಜಿ, ಯೋಗ್ಯತೆ ನಿಮ್ಮ ಸರ್ಕಾರಕ್ಕಿಲ್ವಾ? ಇದುವರೆಗೂ ಕರ್ನಾಟಕ ರಾಜ್ಯಸರ್ಕಾರ ಒಪ್ಪಿ ನಡುಸ್ತಿರೋ ಭಾಷಾನೀತಿಗೆ ಮಾರಕವಾಗಿ, ನಿಮ್ಮ ಕಣ್ರೆಪ್ಪೆ ಕೆಳಗಿರೋ ಈ ಪಾಲಿಕೆಯ ಸ್ಥಾಯಿ ಸಮಿತಿಯ ಶಿಫಾರಸ್ಸು, ಪಾಲಿಕೆಯ ನಿಲುವು ಇರೋದು ನಿಮಗೆ ಗೊತ್ತಾಗ್ತಿಲ್ವಾ? ರಾಜ್ಯಸರ್ಕಾರದ ನೀತಿಗೆ ವಿರುದ್ಧವಾಗಿರೋ ಇಂಥಾ ನಿಲುವನ್ನು ಯಾವುದೇ ನಗರ ಪಾಲಿಕೆ ತೊಗೊಂಡ್ರೆ ಅದು ಕಾನೂನು ಬಾಹಿರ ಅಲ್ವಾ? ನಿಮ್ಮ ಕಡೆಯಿಂದಾ ಈ ಬಗ್ಗೆ ಒಂದಾದ್ರೂ ಹೇಳಿಕೆ ಯಾಕೆ ಬರ್ತಿಲ್ಲಾ? ನಿದ್ದೆ ಸಾಕು.... ಒಸಿ ಎದ್ದೇಳ್ತೀರಾ?
2 ಅನಿಸಿಕೆಗಳು:
ಪಾಲಿಕೆ ಶಾಲೆ ನಡೆಸಲು ಕೇಂದ್ರ ಸರ್ಕಾರವೇ ಸರಿಯೆಂದು ಇವರು ಒಪ್ಪುವುದಾದರೆ ಇವರಿಗೆ ಮಂತ್ರಿಗಿರಿ ಯಾತಕ್ಕೆ? ನಮ್ಮ ರಾಜ್ಯಕ್ಕೆ ಶಿಕ್ಷಣ ಮಂತ್ರಿ ಬೇಡವೇ ಬೇಡ. ರಾಜ್ಯದ ಎಲ್ಲಾ ಶಾಲೆಗಳನ್ನೂ ಕೇಂದ್ರ ಸರ್ಕಾರವೇ ನಡೆಸಲಿ, ನೋಡಿಕೊಳ್ಳಲಿ. ನಾಳೆ ಹುಟ್ಟುವ ನಮ್ಮ ಮುಂದಿನ ಪೀಳಿಗೆಗೆ ಬೇಕಾದ ಕಲಿಕೆಯನ್ನೂ ನಾವು ಕೊಡಲಾಗಲಿಲ್ಲ ಎಂಬ ಕೆಟ್ಟ ಹೆಸರನ್ನೂ ನಾವು ಕನ್ನಡಿಗರು ಪಡೆದುಕೊಳ್ಳೋಣ.
ಬನ್ನಿ ಮಂತ್ರಿಗಳೇ, ಬನ್ನಿ.. ನಿಮ್ಮನ್ನು ಆಯ್ಕೆ ಮಾಡಿದ ತಪ್ಪಿಗಾಗಿ ಸಮಸ್ತ ಕನ್ನಡಿಗರ ಹೆಸರು ಕೆಡಿಸುವ ಹೆಜ್ಜೆ ಇಟ್ಟೇ ಬಿಡಿ ಅತ್ಲಾಗೆ.
kgeri sudda somari.adikarigl matu kele Adlit ndesutta iddre.
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!