ಪ್ರಜಾವಾಣಿಯ 12.02.2011ರ ಸಂಚಿಕೆಯ 6ನೇ ಪುಟದಲ್ಲಿ
ಡಬಿಂಗ್ ವಿವಾದ ಎಂಬ ತಲೆಬರಹದಡಿಯಲ್ಲಿ ಎರಡು ಲೇಖನಗಳೂ, ಮೂರು ಅಭಿಪ್ರಾಯಗಳೂ ಪ್ರಕಟವಾಗಿವೆ. ಸಾಮಾನ್ಯವಾಗಿ ಡಬ್ಬಿಂಗ್ ವಿರುದ್ಧವಾಗಿ ನಿಲುವು ಹೊಂದಿರುವವರು ಹೊಂದಿರುವ ಕೆಲವು ಕಳಕಳಿಗಳೇ ಇಲ್ಲೂ ವ್ಯಕ್ತವಾಗಿವೆ. ಮೊದಲನೆಯದು, ಕನ್ನಡ ಸಂಸ್ಕೃತಿ-ಸೃಜನಶೀಲತೆ ನಶಿಸಿಹೋಗುತ್ತವೆ ಎಂಬುದು. ಎರಡನೆಯದು ನಮ್ಮ ಕಲಾವಿದರಿಗೆ ಕೆಲಸವಿಲ್ಲದೆ ಬೀದಿಪಾಲಾಗುತ್ತಾರೆ ಎಂಬುದು. ಉಳಿದಂತೆ ಅದೇ "ಆಗಿನ ಕಾಲದಲ್ಲಿ ಅಂಥವರು ತಡೆದಿದ್ರು, ಇಂಥವರು ತಡೆದಿದ್ರು, ಅದಕ್ಕೆ ನಾವೂ ತಡೀಬೇಕು" ಅನ್ನೋ ಕನವರಿಕೆಗಳು... ಕರ್ನಾಟಕ ಚಲನಚಿತ್ರ ಅಕಾಡಮಿಯ ಅಧ್ಯಕ್ಷರಾಗಿರುವ ಶ್ರೀ ನಾಗಾಭರಣ ಅವರು ಇಡೀ ಚಿತ್ರೋದ್ಯಮದಲ್ಲಿ ಡಬ್ಬಿಂಗ್ ಬೇಡ ಅನ್ನುವವರ ದನಿಯಾಗಿ ಬರೆದಿರೋ ಬರಹ ಈ ಎಲ್ಲಾ ಕಳವಳಗಳಿಗೆ ಕನ್ನಡಿ ಹಿಡಿಯೋ ಪ್ರಯತ್ನ ಮಾಡಿದೆ.
ನಾಡು ನುಡಿಯ ರಕ್ಷಣೆಗಾಗಿ ಎನ್ನುವ ತಲೆಬರಹವನ್ನು ಹೊಂದಿರುವ ಈ ಬರಹ ಡಬ್ಬಿಂಗ್ ವಿರೋಧಿಸುವವರ ಇಡೀ ವಾದದ ತಳಹದಿಯನ್ನೂ ತೆರೆದು ತೋರುತ್ತಿದೆ. ಕನ್ನಡ ಚಿತ್ರರಂಗವು ತಾನೊಂದೇ ನಾಡು ನುಡಿಯ ರಕ್ಷಣೆಯ ಹೊಣೆ ಹೊರುವ/ ಹೊರುತ್ತಿರುವ ಮಾತಾಡುವ ಬದಲು, ಆ ಹೊಣೆಯನ್ನು ನಾಡಪರ ಚಿಂತಕರಿಗೆ, ಸಾಮಾಜಿಕ ಸಂಘಟನೆಗಳಿಗೆ, ರಾಜಕಾರಣಿಗಳಿಗೆ, ಜನತೆಗೆ ಬಿಟ್ಟು - ನಾಡ ರಕ್ಷಣೆಯಲ್ಲಿ ತನ್ನ ಸೀಮಿತ ಪಾತ್ರವನ್ನು ನಿರ್ವಹಿಸುತ್ತಾ ಕನ್ನಡ ಚಿತ್ರರಂಗವನ್ನು ಉದ್ಯಮವಾಗಿ ಹೇಗೆ ಯಶ ಗಳಿಸುವಂತೆ ಮಾಡುವುದು ಎಂದು ಚಿಂತಿಸಿದರೆ ಒಳಿತು.
ಡಬ್ಬಿಂಗ್ ಮತ್ತು ಕನ್ನಡ ಸಂಸ್ಕೃತಿ
ಡಬ್ಬಿಂಗ್ ಚಿತ್ರಗಳಿಂದ ಕನ್ನಡ ಸಂಸ್ಕೃತಿಯ ನಾಶವಾಗುತ್ತದೆ, ನಮ್ಮ ಚರಿತ್ರೆ ನಾಶವಾಗುತ್ತದೆ, ಕ್ರಿಯಾಶೀಲತೆ ಸಾಯುತ್ತದೆ, ಸೃಜನಶೀಲತೆ ಇಲ್ಲವಾಗುತ್ತದೆ ಎನ್ನುವ ಆತಂಕವನ್ನು ನೋಡೋಣ. ಇವತ್ತಿನ ದಿವಸ ‘ಕನ್ನಡ ಚಿತ್ರರಂಗವೇ ಕನ್ನಡ ಸಂಸ್ಕೃತಿಯನ್ನು ಪೊರೆಯುತ್ತಿರುವಂತೆ, ಸಂಸ್ಕೃತಿಯ ಹೊಣೆ ಹೊತ್ತಂತೆ’ ದನಿಯೆತ್ತುವ ಚಿತ್ರರಂಗ ಮೊದಲು ಇಂದಿನ ಕನ್ನಡ ಚಿತ್ರರಂಗ ಎಷ್ಟರಮಟ್ಟಿಗೆ ಕನ್ನಡ ಸಂಸ್ಕೃತಿಯನ್ನು ತೋರಿಸುತ್ತಿದೆ ಎಂಬ ಆತ್ಮವಿಮರ್ಶೆ ಮಾಡಿಕೊಳ್ಳಲಿ. ಮೊದಲಿಗೆ, ಯಾವುದಿದು ಕನ್ನಡ ಸಂಸ್ಕೃತಿ? ಎಂಬುದನ್ನು ತಿಳಿಸಲಿ. ನಾಯಕಿಯ ಹೊಕ್ಕಳಿಗೆ ದ್ರಾಕ್ಷಿ ಇಡುವ, ನೀರಲ್ಲಿ ನಾಯಕಿಯನ್ನು ಮುಳುಗಿಸಿ ಕುಪ್ಪುಸದಿಂದ ಮೀನು ಹೊರತೆಗೆವ, ನಾಯಕಿಯ ಹೆಣವನ್ನು ದರದರನೆ ಎಳೆದಾಡುತ್ತಾ ಹಾಡುವ ದೃಶ್ಯಗಳು, ಡಗಾರು, ಡವ್ವು, ಅಜ್ಜಿ ಲೇಹ್ಯ... ಎಂಬ ಪವಿತ್ರ ಪದಪುಂಜಗಳೆಲ್ಲವೂ ರಿಮೇಕು ಅಲ್ಲದ.. ಡಬ್ಬಿಂಗೂ ಅಲ್ಲದ ಚಿತ್ರಗಳಲ್ಲಿ ಬಂದವು. ಇವೆಲ್ಲಾ ಯಾವ ಸಂಸ್ಕೃತಿಯ ಪ್ರತೀಕ? ಕನ್ನಡ ಸಂಸ್ಕೃತಿಯ ಬಗ್ಗೆ ಮಾತಾಡುವ ನಟೀಮಣಿಯರು ತಾವೇ ಸಿನಿಮಾಗಳಲ್ಲಿ ಹೊಗೆ ಎಳೆದೆಳೆದು ಬಿಟ್ಟಿದ್ದಾರಲ್ಲಾ? ಇವೆಲ್ಲಾ ಯಾವ ಕನ್ನಡ ಸಂಸ್ಕೃತಿ? ಇಂದು ತಯಾರಾಗುವ ಕನ್ನಡ ಚಿತ್ರಗಳಲ್ಲಿ ವರ್ಷಕ್ಕೆ ಎಷ್ಟು ಸಿನಿಮಾಗಳು ಕನ್ನಡ ಸಾಹಿತಿಗಳ ಕಥೆಗಳನ್ನು, ಕಾದಂಬರಿಗಳನ್ನು ಆಧರಿಸಿವೆ? ಹೆಚ್ಚುಕಡಿಮೆ ಎಲ್ಲಾ ಕಮರ್ಷಿಯಲ್ ಸಿನಿಮಾಗಳನ್ನೇ ನೋಡಿದರೆ ಇವುಗಳಲ್ಲಿ ಬರುವ ಮಚ್ಚು ಲಾಂಗುಗಳು, ಲವ್ವು ಕಿಸ್ಸುಗಳು, ರಕ್ತಪಾತಗಳು, ಹೊಡಿ ಬಡಿ ಕಡಿಗಳು ಯಾವ ನಾಡಿನ ಸಂಸ್ಕೃತಿಯೂ ಅಲ್ಲ ಅಲ್ಲವೇ? ಒಳಿತೆಲ್ಲಾ ನಮ್ಮ ಸಂಸ್ಕೃತಿ, ಕೆಟ್ಟದ್ದೆಲ್ಲಾ ಪರರ ಸಂಸ್ಕೃತಿ ಎನ್ನುವ ಪೊಳ್ಳುತನ ಯಾಕೆ? ಕನ್ನಡಕ್ಕೆ ಡಬ್ಬಿಂಗ್ ಬಂದರೆ ಕನ್ನಡದ ಸೃಜನಶೀಲ ನಿರ್ದೇಶಕರ ಕನ್ನಡ ಸಿನಿಮಾಗಳಲ್ಲಿ ಸೃಜನಶೀಲತೆ ನಶಿಸುತ್ತದೆಯೇ? ಇವತ್ತಿನ ಸೃಜನಶೀಲ ನಿರ್ದೇಶಕರೆನ್ನಿಸಿಕೊಂಡಿರುವ ನಾಗಾಭರಣ, ಶೇಷಾದ್ರಿ, ಗಿರೀಶ್ ಕಾಸರವಳ್ಳಿ ಮುಂತಾದವರ ಸೃಜನಶೀಲತೆ ಅಳಿಯುತ್ತದೆಯೇ? ಯಶಸ್ವಿ ನಿರ್ದೇಶಕರಾದ ಉಪೇಂದ್ರ, ಪ್ರೇಮ್, ಚಂದ್ರು, ಯೋಗರಾಜ್ ಭಟ್, ಸೂರಿ, ಶಶಾಂಕ್ ಮೊದಲಾದವರೆಲ್ಲಾ ತಮ್ಮ ಸೃಜನಶೀಲತೆಯನ್ನು ಕಳೆದುಕೊಳ್ಳುತ್ತಾರೆಯೇ? ಒಂದು ನಾಡಿನ ಚಿತ್ರರಂಗ ಆ ನಾಡಿನ ಸಂಸ್ಕೃತಿ ಬದುಕಿನ ಕನ್ನಡಿಯೇ ಹೊರತು ಚಿತ್ರರಂಗದಿಂದಲೇ ನಾಡಿನ ಸಂಸ್ಕೃತಿ ಉಳಿಯುತ್ತೆ ಅಥವಾ ಹಾಳಾಗುತ್ತೆ ಅನ್ನೋದು ಸುಳ್ಳು ಗುರೂ! ಹಾಗಾಗಿದ್ರೆ ಇವತ್ತು ಕನ್ನಡ ನಾಡಲ್ಲಿ ನಡೆಯೋ ಎಲ್ಲಾ ಕ್ರೈಮುಗಳ ಹೊಣೆ ಕನ್ನಡ ಚಿತ್ರರಂಗದ್ದಾಗುತ್ತಿತ್ತು. ಏನಂತೀರಾ ಗುರೂ?
ಡಬ್ಬಿಂಗ್ ಮತ್ತು ಬೀದಿಪಾಲಾಗೋ ಭಯ
ಡಬ್ಬಿಂಗ್ ಬಂದ್ರೆ ಕನ್ನಡದ ಕಲಾವಿದರು ಬೀದಿಪಾಲಾಗುತ್ತಾರೆ ಎನ್ನುವ ಭಯವನ್ನು ಸಾಮಾನ್ಯವಾಗಿ ವ್ಯಕ್ತಪಡಿಸಲಾಗುತ್ತದೆ. ಅದು ಹೇಗೆ? ಎಂದರೆ ಕನ್ನಡ ಚಿತ್ರ ನಿರ್ಮಾಣವೇ ನಿಂತುಹೋಗುತ್ತದೆ ಎನ್ನಲಾಗುತ್ತದೆ. ಡಬ್ಬಿಂಗ್ ಬಂದೊಡನೆ ಈಗಿನ ಎಲ್ಲಾ ಕನ್ನಡ ಚಿತ್ರ ನಿರ್ಮಾಪಕರು ಸಿನಿಮಾ ತೆಗೆಯೋದನ್ನು ನಿಲ್ಲಿಸಿಬಿಡುತ್ತಾರೆ ಎಂಬ ಮಾತು ಸತ್ಯಕ್ಕೆ ಎಷ್ಟು ಹತ್ತಿರ? ಸಾಹಿತಿಗಳು ಬೀದಿಪಾಲಾಗುತ್ತಾರೆ, ಕಲಾವಿದರು ಬೀದಿಪಾಲಾಗುತ್ತಾರೆ, ಕಾರ್ಮಿಕರು ಬೀದಿಪಾಲಾಗುತ್ತಾರೆ ಎಂಬುದೆಲ್ಲಾ ಇಡೀ ವಿದ್ಯಮಾನಕ್ಕೆ ಭಾವನಾತ್ಮಕ ಬಣ್ಣ ಕೊಡುವ ಪ್ರಯತ್ನ ಅಲ್ಲವೇನು? ಈಗ ಬರ್ತಿರೋ ನೂರಾಎಪ್ಪತ್ತೈದು ಚಿತ್ರಗಳ ಜೊತೆಯಲ್ಲಿ ಡಬ್ಬಿಂಗ್ ಕೆಲಸಗಳೂ ಹುಟ್ಟಿಕೊಳ್ಳುವುದಿಲ್ಲವೇ? ಅಷ್ಟಕ್ಕೂ ನಿರ್ಮಾಣಕ್ಕೆ ಹೊಡೆತ ಬೀಳುತ್ತದೆಯೆಂದರೆ, ಯಾವ ನಿರ್ಮಾಪಕರು ರಿಮೇಕುಗಳನ್ನೇ ಮಾಡಿಕೊಂಡಿರುತ್ತಾರೋ, ಯಾವ ನಿರ್ದೇಶಕರು ಸ್ವಂತಿಕೆಯಿಲ್ಲದೆ ರಿಮೇಕಿನಲ್ಲೇ ಮುಳುಗಿ ಅದನ್ನೇ ಸೃಜನಶೀಲತೆಯೆನ್ನುತ್ತಾರೋ ಅಂಥವರು ಕೆಲಸ ಕಳೆದುಕೊಳ್ಳಬಹುದು. ಆದರೆ ಕನ್ನಡದಲ್ಲಿ ತೆಗೆಯಲಾಗುವ ಸಿನಿಮಾಗಳೆಲ್ಲಾ ಉಳಿದವರಿಗಿಂತ ಭಿನ್ನವಾಗಿ ತೆಗೆಯಬೇಕೆಂಬ ಕಾರಣಕ್ಕಾಗಿಯಾದರೂ ನಮ್ಮ ಕಾದಂಬರಿಗಳತ್ತ, ಇತಿಹಾಸದತ್ತ ಕಥೆಗಾಗಿ ಕಣ್ಣುಹಾಯಿಸುತ್ತಾರೆ ಮತ್ತು ನಿಜಕ್ಕೂ ಗುಣಮಟ್ಟದ ಚಿತ್ರಗಳನ್ನು ತೆಗೆಯಲು ಮುಂದಾಗಲೇ ಬೇಕಾಗುತ್ತದೆಯಲ್ಲವೇ? ರಾಕ್‍ಲೈನ್ ವೆಂಕಟೇಶ್, ಪೂರ್ಣಿಮಾ ಪಿಕ್ಚರ್ಸ್, ಕೆಸಿಎನ್, ರಾಮು ಎಂಟರ್‌ಪ್ರೈಸಸ್ ಮೊದಲಾದವರು ಚಿತ್ರ ನಿರ್ಮಾಣ ನಿಲ್ಲಿಸುತ್ತಾರೆಯೇ? ಇಂಥದ್ದೊಂದು ಮಾತು ಪೊಳ್ಳುತನದ್ದಲ್ಲವೇ? ಕನ್ನಡ ಸಂಸ್ಕೃತಿಯನ್ನು ತೋರಿಸುವ ನಾಡಿನ ಮಣ್ಣ ಸೊಗಡಿನ ಚಿತ್ರಗಳು ಚೆನ್ನಾಗಿದ್ದರೆ ಎಂದಿದ್ದರೂ ಗೆಲ್ಲುವಂತವೇ, ನೂರು ಡಬ್ ಆದ ಸಿನಿಮಾ ಬಂದವೆಂದ ಕಾರಣಕ್ಕೆ ಕನ್ನಡ ಚಿತ್ರಗಳು ನಿರ್ಮಾಣವಾಗುವುದೇ ಇಲ್ಲವೆನ್ನುವುದು ಹುಸಿಭಯವಲ್ಲವೇ? ಇನ್ನು ಚಿತ್ರನಟಿ ತಾರಾ ಅವರ ಅನಿಸಿಕೆಯಂತೆ ಕಲಾವಿದರಿಗೆ ಭಾಷೆಯ ಹಂಗಿಲ್ಲವಾದ್ದರಿಂದ ಕಲಾವಿದರ ಉಳಿವಿಗೇನೂ ಸಮಸ್ಯೆ ಇಲ್ಲವಲ್ಲ?!
ಡಬ್ಬಿಂಗ್ ಬೇಕೆನ್ನುವವರ ಮೇಲಿನ ಕೆಸರೆರಚಾಟ!
ಇವತ್ತಿನ ದಿನ ಕನ್ನಡ ಚಿತ್ರರಂಗಕ್ಕೆ ಡಬ್ಬಿಂಗ್ ಬೇಕೆನ್ನುವ ಹೇಳಿಕೆಯನ್ನು ಚಿತ್ರರಂಗದ ಒಳಗಿನ ಯಾರೊಬ್ಬರೂ ಹೇಳುವ ಸ್ಥಿತಿ ಇದ್ದಂತಿಲ್ಲ. ಹಾಗೂ ಯಾರಾದರೂ ಹೇಳಬೇಕೆಂದರೆ ಶ್ರೀಮತಿ ಬಿ.ಸರೋಜಾದೇವಿಯವರಂತೆ ನಿವೃತ್ತರಾದವರು ಹೇಳಬೇಕಾಗಿದೆ. ಕನ್ನಡ ಚಿತ್ರರಂಗದಲ್ಲಿದ್ದೇ ಡಬ್ಬಿಂಗ್ ಬೇಕು ಎಂದವರಿಗೆ ಮುಂದೇನಾದೀತು ಎಂಬುದು ಊಹೆಗೆ ನಿಲುಕುವಂತಹುದೇ ಆಗಿದೆ. ಅವರ ಸಿನಿಮಾ ಚಟುವಟಿಕೆಗಳಿಗೆ ಅಸಹಕಾರ, ಚಿತ್ರರಂಗದಿಂದ ಬಹಿಷ್ಕಾರ ಮುಂತಾದ ತಂತ್ರಗಳಿಗೆ ಬಲಿಯಾಗಬೇಕಾಗುತ್ತದೆ ಎಂಬ ಭಯ ಅನೇಕರ ಬಾಯಿ ಕಟ್ಟಿಹಾಕಿದೆ ಮತ್ತು ಸಾರ್ವಜನಿಕವಾಗಿ ಡಬ್ಬಿಂಗ್ ಬೇಡವೆಂಬ ಹೇಳಿಕೆ ನೀಡುವಂತೆ ಮಾಡುತ್ತಿದೆ ಎಂಬುದು ಉದ್ಯಮದ ಒಳಗಿನ ಮಾತು. ಯಾರೇ ಡಬ್ಬಿಂಗ್ ಬೇಕೂ ಅಂದರೂ ಇವರು ವೈಯುಕ್ತಿಕ ಲಾಭಕ್ಕಾಗಿ ಈ ನಿಲುವು ತಳೆದಿದ್ದಾರೆ ಎನ್ನುವ ಸುಲಭದ ಆರೋಪ ಇಂಥವರ ಮೇಲೆ. ಮೊನ್ನೇನೆ ನೋಡಿ, ಶ್ರೀಮತಿ ಸರೋಜದೇವಿಯವರು ಡಬ್ಬಿಂಗ್ ಬೇಕು ಅಂದ ಕೂಡಲೇ ಕೇಳಿಬಂದ ಪ್ರತಿಕ್ರಿಯೆ ‘ಅವರು ಚತುರ್ಭಾಷಾ ತಾರೆ, ನ್ಯಾಷನಲ್ ಲೆವೆಲ್ಲಲ್ಲೇ ಮಾತಾಡ್ತಾರೆ’ ಅಂತಾ. ಹಾಗೇ ಡಬ್ಬಿಂಗ್ ಪರವಾದವರನ್ನೆಲ್ಲಾ ಚಲನಚಿತ್ರ ಕಾರ್ಮಿಕ ವಿರೋಧಿ ಅಂತಾ ಬ್ರಾಂಡ್ ಮಾಡಿ ಬಾಯಿ ಮುಚ್ಚಿಸೋ, ಜನರ ಕಣ್ಣಲ್ಲಿ ಖಳರಾಗಿಸೋ ಪ್ರಯತ್ನಗಳು ನಡೀತಾನೆ ಇವೆ. ಕನ್ನಡಿಗರು ರಾಮಾಯಣ ಮಹಾಭಾರತ ಕನ್ನಡದಲ್ಲೇ ನೋಡಬಾರದಾ? ಎಂದರೆ ನಮ್ಮ ಹಳ್ಳಿ ಜನಕ್ಕೆ ಈ ಕಥೆಗಳು ಗೊತ್ತು, ಅವರಿಗೆ ಇವೆಲ್ಲಾ ಬೇಕಾಗಿಲ್ಲ ಅನ್ನೋ ಫರ್ಮಾನು ಹೊರಡಿಸುತ್ತಾರೆ. ಹಾಗಾದ್ರೆ ನಿಮ್ಮ ಸಿನಿಮಾ ಕಥೆಗಳೂ ನಮ್ಮ ಜನಕ್ಕೆ ಗೊತ್ತಿರೋದೆ ಅಲ್ವಾ ಅಂತಂದ್ರೆ ಏನುತ್ತರ ಕೊಟ್ಟಾರೋ? ಅವತಾರ್, ಸ್ಯಾಂಕ್ಟಮ್ ಥರದ ಚಿತ್ರಗಳನ್ನು ನಮ್ಮ ಜನ ತಮಗೆ ಅರ್ಥವಾಗುವ ಭಾಷೇಲಿ ನೋಡಬೇಕು ಅಂದ್ರೆ ನಮ್ಮ ಹಳ್ಳಿಜನಕ್ಕೆ ಆ ಸಿನಿಮಾಗಳಿಂದ ಏನಾಗಬೇಕಿಲ್ಲಾ ಅಂತಾರೆ. ಹಾಗಾದ್ರೆ ಇವರ ಹೈವೇಗಳಿಂದ ಜನಕ್ಕೆ ಏನಾಗಬೇಕಿದೆ? ಯಾರಿಗೆ ಏನು ಬೇಕು, ಏನು ಬೇಡ ಅಂತಾ ನಿರ್ಧರಿಸಕ್ಕೆ ಇವರಿಗೆ ಹಕ್ಕು ಕೊಟ್ಟವರು ಯಾರು?
ಡಬ್ಬಿಂಗ್ ಬರಲಿ! ಕನ್ನಡಿಗರ ಮನರಂಜನೆ ಕನ್ನಡದಲ್ಲಿರಲಿ!
ಹೌದು, ಗ್ರಾಹಕರಿಗೆ ತಮಗೆ ಬೇಕಾದ್ದನ್ನು ತಮ್ಮ ನುಡಿಯಲ್ಲಿ ಪಡೆದುಕೊಳ್ಳುವ ಹಕ್ಕು ಇದ್ದೇ ಇದೆ. ಕನ್ನಡಕ್ಕೆ ಡಬ್ಬಿಂಗ್ ಬರಬೇಕಾದ್ದು ಈ ಕಾರಣಕ್ಕಾಗಿಯೇ. ಇನ್ನು ಇದರಿಂದ ಪರಭಾಷಿಕರು ಕನ್ನಡದ ಮುಖ್ಯವಾಹಿನಿಗೆ ಬರ್ತಾರೆ, ಭಾಷೆ ಉಳಿಯುತ್ತೆ ಅನ್ನೋ ನಾಡಪರ ಕಾಳಜಿಯ ಮಾತುಗಳನ್ನೆಲ್ಲಾ ಬದಿಗಿಟ್ಟೇ ನೋಡಿದರೆ ಡಬ್ಬಿಂಗ್ ಸಿನಿಮಾಗಳು ಕನ್ನಡಿಗರಿಗೆ ತಮ್ಮ ಮನರಂಜನೆಯನ್ನು ತಮ್ಮ ತಾಯ್ನುಡಿಯಲ್ಲಿ ಪಡೆದುಕೊಳ್ಳುವ ಮೂಲಭೂತ ಹಕ್ಕನ್ನು ಎತ್ತಿಹಿಡಿಯುತ್ತದೆ. ಹಾಗೆ ಬರೋ ಸಿನಿಮಾಗಳನ್ನು ಚೆನ್ನಾಗಿದ್ದಲ್ಲಿ ಹಿಟ್ ಮಾಡೋದೂ, ಚೆನ್ನಾಗಿಲ್ಲದಿದ್ದರೆ ಹಿಟ್ಟು ಮಾಡೋದೂ ಜನಗಳ ಕೈಲೇ ಇದೆ. ಸಾಹಿತ್ಯದ ತರ್ಜುಮೆಗೆ, ಚಿಪ್ಸ್ ಮಾರಾಟಕ್ಕೆ, ಇಂಗ್ಲೀಷ್ ಮಾಧ್ಯಮ - ಕನ್ನಡ ಮಾಧ್ಯಮ ಶಾಲೆಗಳಿಗೆ ಹೋಲಿಕೆ ಮಾಡೋದೆಲ್ಲಾ ವಿಷಯಾಂತರದ ಪ್ರಯತ್ನಗಳೇ ಅಂತಾ ಹೇಳದೇ ವಿಧಿಯಿಲ್ಲ. ಕನ್ನಡ ಚಿತ್ರರಂಗದ ಮಾರುಕಟ್ಟೆ ಚಿಕ್ಕದು, ಅದಕ್ಕೆ ಡಬ್ಬಿಂಗ್ ಬೇಡ... ಅನ್ನೋರು ಮಲಯಾಳಮ್ ಮಾರುಕಟ್ಟೆಯ ಬಗ್ಗೆಯೂ ಮಾತಾಡುವುದು ಒಳಿತು. `ಆರ್ಥಿಕವಾಗಿ ಲಾಭದಾಯಕವಾಗಲಿ ಅಂತಾ ಸಿನಿಮಾ ತೆಗೆಯೋದು ಪಾಪ' ಅನ್ನುವ ಬೂಟಾಟಿಕೆಯ ಮನಸ್ಥಿತಿ ಆತ್ಮವಂಚನೆ ಎಂಬುದನ್ನು ಅಂತಹ ಮಾತುಗಳನ್ನಾಡುವವರು ಅರಿತುಕೊಳ್ಳಬೇಕು. ಹೇಗೂ ನಿಮಗೆ ಆರ್ಥಿಕ ಲಾಭದ ಚಿಂತೆಯಿಲ್ಲದಿದ್ದ ಮೇಲೆ ಜನ ನೋಡಿದರೆಷ್ಟು, ಬಿಟ್ಟರೆಷ್ಟು? ಸುಮ್ಮನೆ ಸಿನಿಮಾ ತೆಗೆದು ಪುಗಸಟ್ಟೆ ತೋರಿಸಿ ಅಂದ್ರೆ ಒಪ್ಪಲಾಗುತ್ತದೆಯೇ?
ಅಕಾಡಮಿಗೊಂದು ಕಿವಿಮಾತು
ಕರ್ನಾಟಕ ಚಲನಚಿತ್ರ ಅಕಾಡಮಿ ತುರ್ತಾಗಿ ಮಾಡಬೇಕಾಗಿರೋ ಕೆಲಸವೆಂದರೆ ತುಳು, ಕೊಡವ ಮೊದಲಾದ ಈ ನೆಲದ ಮಣ್ಣಿನ ಭಾಷೆಯ ಚಿತ್ರಗಳನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಿಸಿ ಅಂತಹ ಚಿತ್ರಗಳಿಗೆ ಮಾರುಕಟ್ಟೆ ಕಟ್ಟಿಕೊಡಬೇಕಾಗಿದೆ. ಕನ್ನಡದ ಪುನೀತ್, ಉಪೇಂದ್ರ ಸೇರಿದಂತೆ ಕನ್ನಡ ಚಿತ್ರಗಳನ್ನು ನೆರೆಯ ಭಾಷೆಗಳಿಗೆ ಡಬ್ಬಿಂಗ್ ಮಾಡಿಸಿ ಅಲ್ಲೂ ಕನ್ನಡಿಗರ ಚಿತ್ರಗಳಿಗೆ ಮಾರುಕಟ್ಟೆ ಕಟ್ಟಿಕೊಡಲು ಮುಂದಾಗಬೇಕಾಗಿದೆ. ಒಟ್ನಲ್ಲಿ ಬದಲಾದ ಕಾಲಕ್ಕೆ ತಕ್ಕಂತೆ ಕನ್ನಡ ಚಿತ್ರರಂಗ ಹೆಜ್ಜೆ ಹಾಕಲು ಸಹಾಯ ಮಾಡಬೇಕಾಗಿದೆ. ಅಲ್ವಾ ಗುರೂ?