ರಾಜ್ಯ ಬಿಜೇಪೀಲಿ ರಾಜ್ಯಸಭಾ ಸಂಸದರಾಗೋ ಯೋಗ್ಯರಿಲ್ವಾ?

ಕರ್ನಾಟಕದಿಂದ ರಾಜ್ಯಸಭೆಗೆ ಕನಸಿನ ಕನ್ಯೆ, ಶ್ರೀಮತಿ ಹೇಮಮಾಲಿನಿಯವರನ್ನು ಸ್ಪರ್ಧೆಗೆ ಇಳಿಸೋಕೆ ರಾಜ್ಯಸರ್ಕಾರ ನಡುಸ್ತಿರೋ ಭಾರತೀಯ ಜನತಾ ಪಕ್ಷ ತೀರ್ಮಾನ ಮಾಡಿದೆಯಂತೆ. ಇದರಿಂದಾಗಿ ನಮ್ಮ ಕರ್ನಾಟಕದ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ. ಈಶ್ವರಪ್ಪನೋರಿಗೆ ತಡ್ಯಕ್ ಆಗದಷ್ಟು ಖುಷಿ ಆಗಿದೆಯಂತೆ. ಇಂಥಾ ಸುದ್ದಿ ಟೀವಿಯಲ್ಲಿ ಸರಿದಾಡ್ತಿದೆ.

ರಾಷ್ಟ್ರೀಯ ಪಕ್ಷವಾದ ಭಾರತೀಯ ಜನತಾ ಪಕ್ಷವು ಕರ್ನಾಟಕದಲ್ಲಿ ನೂರಾರು ಶಾಸಕರನ್ನೂ, ಹತ್ತಾರು ಸಂಸದರನ್ನೂ, ಲಕ್ಷಾಂತರ ಕಾರ್ಯಕರ್ತರನ್ನೂ ಹೊಂದಿದ್ದೂ ... ಪಾಪಾ, ರಾಜ್ಯಸಭೆಗೆ ಕಳಿಸೋಕೆ ಒಬ್ಬ ಯೋಗ್ಯ ಅಭ್ಯರ್ಥೀನಾ ಹೊಂದಿಲ್ಲಾ ಅಂತಾ ಇವತ್ತಿನ ಸುದ್ದಿ ನೋಡುದ್ರೆ ಗೊತ್ತಾಗುತ್ತೆ.

ರಾಜ್ಯಸಭೆಗೆ ಹೊರಗಿನವರನ್ನು ಆರಿಸೋ ಕೆಟ್ಟಚಾಳಿ

ಯಾಕ್ರೀ ಹೀಗ್ಮಾಡ್ತಾ ಇದೀರಾ ಅಂತಾ ಯಾರಾದ್ರೂ ಬಿಜೆಪಿಯೋರುನ್ನಾ ಕೇಳುದ್ರೆ.... ಕಾಂಗ್ರೆಸ್ ಅವ್ರು ಮಾಡಿಲ್ವಾ? ದಳದೋರು ಮಾಡಿಲ್ವಾ? ಅನ್ನೋದ್ರಲ್ಲಿ ಅನುಮಾನಾನೇ ಇಲ್ಲಾ ಬಿಡಿ. ಈ ವ್ಯಾಧಿ ನಮ್ಮ ನಾಡಲ್ಲಿರೋ ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಇರೋದೆ. ಕರ್ನಾಟಕದಿಂದ ರಾಜ್ಯಸಭೆಗೆ ಆರಿಸಿ ಕಳಿಸೋವಾಗ ನಮ್ಮ ರಾಜಕೀಯ ಪಕ್ಷಗಳು ಇಲ್ಲಿ ಚುನಾವಣೆ ಎದುರಿಸಿ ಗೆಲ್ಲೋಕೆ ಆಗದೇ ಇರೋ ಹೊರ ರಾಜ್ಯದವರನ್ನೇ ಕಳಿಸೋ ಪರಿಪಾಠಾನ ಇಟ್ಕೊಂಡಿದೆ. ಕರ್ನಾಟಕದ ಹಿತ ಕಾಪಾಡೋಕ್ಕೆ ಅಂತಾನೆ ಸಂಸದರನ್ನು ರಾಜ್ಯಸಭೆಗೆ ಆರಿಸಿಕಳಿಸೋದಲ್ವಾ? ಅದುನ್ನೇ ಮರೆತು ಕನ್ನಡ ಕನ್ನಡಿಗ ಕರ್ನಾಟಕ ಅಂದ್ರೇನು ಅಂತಾನೇ ಅರಿಯದೋರುನ್ನಾ, ಅರಿತರೂ ನಮಗಾಗಿ ಮಿಡಿಯದೋರುನ್ನ ಕಣಕ್ಕಿಳಿಸಿ, ಗೆಲ್ಲಿಸೋ ಈ ಘನಂದಾರಿ ಕೆಲಸಾನಾ ಕಾಂಗ್ರೆಸ್ಸು, ಜನತಾದಳ ಮತ್ತು ಭಾರತೀಯ ಜನತಾಪಕ್ಷಗಳೆಲ್ಲಾ ಮಾಡ್ತಾನೆ ಬಂದಿವೆ.

ಕರ್ನಾಟಕದಿಂದ ಸರಿಯಾದ ಪ್ರಾತಿನಿಧ್ಯ ಹೋಗಬೇಕು!

ಕರ್ನಾಟಕದಿಂದ ರಾಜ್ಯಸಭೆಗೆ ನಿಜವಾಗಿ ಕರ್ನಾಟಕವನ್ನು ಪ್ರತಿನಿಧಿಸಬಲ್ಲವರನ್ನು ಕಳಿಸೋಕೆ ನಮ್ಮ ರಾಜಕೀಯ ಪಕ್ಷಗಳು ಮುಂದಾಗಬೇಕು. ಅಲ್ಲೀ ತನಕ ನಮ್ಮ ರಾಜಕೀಯ ಪಕ್ಷಗಳು ರಾಷ್ಟ್ರೀಯ ನಾಯಕರನ್ನು ರಾಜ್ಯಸಭೆಗೆ ಕಳಿಸೋದು, ಆ ಮಹಾನ್ ನಾಯಕರುಗಳು ಎರಡೂ ಮೂರೂ ಸಾರಿ ಇಲ್ಲಿಂದ ರಾಜ್ಯಸಭೆಗೆ ಆಯ್ಕೆಯಾಗಿ ಹೋದಮೇಲೂ ಕನ್ನಡದ ಅ, ಆ, ಇ, ಈ ಕಲೀದೆ ಇರೋದು, ಕರ್ನಾಟಕಕ್ಕೆ ಸಂಬಂಧಿಸಿದ ಸಮಸ್ಯೆಗಳೆಲ್ಲಕ್ಕೂ ಕಮಕ್ ಕಿಮಕ್ ಅನ್ನದೇ ಇರೋದು, ಸಂಸತ್ತಿನಲ್ಲಿ ಚಿಲ್ಲರೆ ರಾಜ್ಯಗಳ ವಿಷಯ ಮಾತಾಡಕ್ಕೆ ನಾವು ಬಂದಿಲ್ಲಾ, ನಮ್ದೇನಿದ್ರೂ ನ್ಯಾಸನಲ್ಲು, ಇಂಟರ್ ನ್ಯಾಸನಲ್ಲು ಲೆವೆಲ್ಲಿನ ಸಮಸ್ಯೆಗಳ ಬಗ್ಗೆ ದನಿ ಎತ್ತೋ ಕೆಲಸಾ ಅನ್ನೋದೂ... ಇವನ್ನೆಲ್ಲಾ ಕನ್ನಡಿಗರು ನೋಡಿ, ಅನುಭವಿಸಿ, ಆನಂದಿಸೋದೂ... ತಪ್ಪೋ ಹಂಗಿಲ್ಲಾ ಗುರೂ!

4 ಅನಿಸಿಕೆಗಳು:

Priyank ಅಂತಾರೆ...

ಇಲ್ಲಿನ ಪಕ್ಷಗಳ ಈ ಚಾಳಿ ತಪ್ಪಿದರೆ ಕನ್ನಡಿಗರಿಗೆ ಸ್ವಲ್ಪನಾದರೂ ಒಳಿತಾಗುತ್ತೆ.
ಇಲ್ಲಾಂದ್ರೆ, ರೈಲು ಬಜೆಟ್ಟು, ನ್ಯಾಷನಲ್ ಹೈವೇ, ಎಲ್ಲಾದರಲ್ಲೂ ಕನ್ನಡಿಗರಿಗೆ ಸಿಗದಿರೋ ನ್ಯಾಯ ಮುಂದೇನೂ ಸಿಗೋದಿಲ್ಲ.

vijayashankar metikurke ಅಂತಾರೆ...

ವಿಜಯಶಂಕರ್ ಮೇಟಿಕುರ್ಕೆ
ರಾಷ್ಟ್ರೀಯತೆ ಅಂದರೆ ಕನ್ನಡಿಗರಿಗೆ ಬೇರೆಯವರೆನ್ನೆಲ್ಲ ಒಲೈಸೊ ಕೆಲಸ ಅಂತ ಯಾವ ಬೃಹಸ್ಪತಿ ಹೇಳಿದನೊ ಗೊತ್ತಿಲ್ಲ. ಅನ್ಯರಿಗೆ ರಾಷ್ಟ್ರೀಯತೆ ಬೇಕಿಲ್ವ.ಕನ್ನಡಿಗರನ್ನು ಯಾವುದಾದರು ರಾಜ್ಯದಿಂದ ರಾಜ್ಯ ಸಭೆಗೆ ಮತ್ತೆ ಮತ್ತೆ ಕಳಿಸಿದ ಉದಾಹರಣೆ ಇದೆಯಾ?ಉದಾರಿಗಳೆಂದು ಯಾರು ಬೇಕಾದರು ಸವಾರಿ ಮಾಡುವ ಚಾಳಿ ಜಾಸ್ತಿ ಆಗಿದೆ. ಒಬ್ಬರನ್ನೊಬ್ಬರನ್ನು ಕಾಲೆಳೆಯಲು ಕೋತಿ ಬೆಕ್ಕಿಗೆ ಕಜ್ಜಾಯ ಹಂಚಿದ ಕಥೆ ನಡೆಯುತ್ತಿದೆ. ಇದು ನಿಲ್ಲದಿದ್ದರೆ ಇನ್ನು ಕೆಲವೆ ವರ್ಷಗಳಲ್ಲಿ ಕನ್ನಡದ ಸದಸ್ಯರೊಬ್ಬರೂ ರಾಜ್ಯಸಭೆಯಲ್ಲಿ ಇರೋದಿಲ್ಲ.

Anonymous ಅಂತಾರೆ...

ಸರ್ಯಾಗಿ ಹೇಳ್ದೆ ನೋಡು ಗುರೂ, ಈ ಮಾಲಿನಿಯನ್ನು ಕನ್ನಡದ ಘನಂದಾರಿ ನಿರ್ದೇಶಕರೊಬ್ಬರು ತಮ್ಮ ಕನ್ನಡ ಸಿನೆಮಾದಲ್ಲಿ ಅಭಿನಯಿಸಲು ಕೇಳಿಕೊಂಡರಂತೆ, ಅದಕ್ಕೆ ಆಕೆ ''Are u joking Mr....!" ಅಂತಂದಳಂತೆ. ಈಗ ಗೊತ್ತಾಗಬೇಕು ಗುರೂ ಯಾರು ಜೋಕಿಂಗು ಅಂತ.. ನಮ್ಮ ಮುದ್ದಿನ ರಾಜ್ಯ ಭಾ.ಜ.ಪ.ದವರಿಗೆ ಕನ್ನಡ/ಕರ್ನಾಟಕವನ್ನ ಕೀಳಾಗಿ ನೋಡೋ ಇಂಥವರನ್ನ ಆರಿಸಿ ಕಳಿಸೋ ಪುಣ್ಯ ಕಾರ್ಯ ಪ್ರಸಾದ ಸಿಕ್ಕಿದೆ ನೋಡಿ.. ಇನ್ನೊಬ್ಬನಿದ್ದ ಯಂಕಯ್ಯ ನಾಯಿಡೂ ಅಂತ.. ಅವನೂ ಅಯೋಗ್ಯನೆ..

ಅರವಿಂದ ಬ ನ ಅಂತಾರೆ...

ಸಿನಿಕ ಕನ್ನಡಿಗರ ಪಾಲಿಗೆ ಹೇಮಾ ಮಾಲಿನಿಯಾದರೂ ಅಷ್ಟೇ ಇನ್ನು ಯಾರಾದರೂ ಅಷ್ಟೇ, ಏಕೆಂದರೆ ಬೇರೆ ಯಾರಾದರೂ ಆ ಸ್ಥಾನಕ್ಕೆ ಹೋದರೂ ಅವರು ಕನ್ನಡ ಹಾಗೂ ಕರ್ನಾಟಕವನ್ನು ಪ್ರತಿನಿಧಿಸುವುದು ಅಷ್ಟರಲ್ಲೇ ಇದೆ. ಇದರಿಂದ ಯಾವ ವ್ಯತ್ಯಾಸವೂ ಆಗಲಾರದು.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails