"ಮೆಟ್ರೋಲಿ ಕನ್ನಡ ಇಲ್ವಾ? ಹಿಂದೀ ಯಾಕೆ ಬೇಡಾ?" ಅಂದ್ರೇ...


(ಮೆಟ್ರೋ ರೈಲು ನಿಲ್ದಾಣ - ಮಹಾತ್ಮಾಗಾಂಧಿ ರಸ್ತೆ)


(ರೈಲು ಹಳಿಯ ಮೇಲಿನ ಹಿಂದೀ ಸುರಕ್ಷತಾ ಸೂಚನೆ)

ಬೆಂಗಳೂರಿನ ಮಾಯಾಲೋಕಕ್ಕೆ ಮೊನ್ನೆ ಹೊಸದಾಗಿ ಸೇರ್ಪಡೆಯಾದ ಮೆಟ್ರೋ ರೈಲು "ನಮ್ಮ ಮೆಟ್ರೋ", ಕನ್ನಡಿಗರೆಲ್ಲಾ ಹೆಮ್ಮೆ ಪಟ್ಟುಕೊಳ್ಳಲು ಕಾರಣವಾಗಿದೆ. ಮೊನ್ನೆ ಈ ರೈಲಿನಲ್ಲಿ ಪಯಣಿಸಿದವರ ಅನುಭವ ಕಂಡು ಕೇಳಿದಾಗ, ಮೆಟ್ರೋ ಆರಂಭ ಒಂದೆಡೆ ಸಂತಸಕ್ಕೆ ಕಾರಣವಾದರೂ ಮತ್ತೊಂದೆಡೆ ಅತಿ ಆತಂಕಕ್ಕೆ ಕಾರಣವಾಗಿದೆ ಎನ್ನಿಸಿತು. ಏನೀ ಆತಂಕ? ಯಾಕೀ ಆತಂಕ? ಬನ್ನಿ... ನೋಡ್ಮಾ...


ನಮ್ಮ ಆತಂಕಕ್ಕೆ  ಕಾರಣವಾಗಿರೋದು ಬೆಂಗಳೂರಿನ ಮೆಟ್ರೋದಲ್ಲಿ ಪ್ರತಿಯೊಂದೂ ಮೂರು ಭಾಷೆಯಲ್ಲಿದೆ ಅನ್ನೋದು. ಇಲ್ಲಿನ ಸ್ಟೇಶನ್ ಹೆಸರುಗಳಿಂದ ಹಿಡಿದು ಮುಂದೆ ಬರುವ ನಿಲ್ದಾಣದ ಬಗ್ಗೆ ರೈಲಿನಲ್ಲಿ ಘೋಷಿಸುತ್ತಿರುವ ಘೋಷಣೆಯವರೆಗೆ ಎಲ್ಲವೂ ಕನ್ನಡ, ಹಿಂದೀ ಮತ್ತು ಇಂಗ್ಲಿಷ್ ಭಾಷೆಗಳಲ್ಲಿವೆ. ಕನ್ನಡದಲ್ಲಿಲ್ಲಾ ಅಂದ್ರೆ ಆತಂಕ ಆಗೋದು ಸರಿ, ಈಗ್ಯಾಕೆ ಆತಂಕ ಅಂತೀರಾ? ಆತಂಕ ಇದು ಹಿಂದೀಯಲ್ಲೂ ಇದೆ ಅನ್ನೋದಕ್ಕೆ ಗುರೂ!


ಕನ್ನಡ ಇಲ್ವಾ? ಇದ್ರೂ ಯಾಕೆ ಆಕ್ಷೇಪ?

ಹೌದಲ್ವಾ? ಇಂಥಾ ಪ್ರಶ್ನೆ ಸಾಮಾನ್ಯವಾಗಿ ಈ ಆತಂಕಕ್ಕೆ ಒಳಗಾದವರನ್ನು ಎದುರಾಗ್ತಾನೆ ಇರುತ್ತೆ. ಇಲ್ಲಿ ಆತಂಕ ಇರೋದು  ಕನ್ನಡದವರಿಗೆ ಅನುಕೂಲ ಆಗ್ತಾ ಇದೆಯೋ ಇಲ್ಲವೋ ಅನ್ನೋಕಿಂತ, ಕನ್ನಡನಾಡಿನ ಒಂದೂರಿನ ಬಡಾವಣೆಗಳನ್ನು ಬೆಸೆಯಲು ಇರುವ ಸ್ಥಳೀಯ ಸಾರಿಗೆಯಲ್ಲಿ ಕನ್ನಡವಲ್ಲದ ಇನ್ನೊಂದು ಭಾಷೆ ಇದೆ ಅನ್ನೋದು. ಅರೆರೆ, ಇಲ್ಲಿ ಕನ್ನಡಿಗರು ಮಾತ್ರಾ ಬರ್ತಾರಾ? ನಾವು ಸಂಕುಚಿತ ಮನಸ್ಸಿನವರಾಗಬಾರದು. ಹೊರಗಿಂದ ಬಂದವರಿಗೆ ಕೂಡಾ ಅನುಕೂಲವಾಗಬೇಕು ಅನ್ನೋ ಮಾತು ಕೇಳಿ ಬರುತ್ತೆ. ಸಹಜವೇ ಬಿಡಿ. ಹಾಗಾದಾಗ ನಾವು ಇಡೀ ಪ್ರಪಂಚದಲ್ಲಿ ಹೆಚ್ಚಿನ ಜನರು ಇವತ್ತು ಓದಲು ಕಲಿತಿರುವ ರೋಮನ್ ಲಿಪಿಯನ್ನು ಬಳಸಿದರಾಯ್ತು. ಇಂಗ್ಲಿಷ್ ಭಾಷೆ ಕನ್ನಡದ ಜೊತೆಯಲ್ಲಿ ಇರೋದನ್ನು ಹೇಗೋ ಒಪ್ಪಬಹುದು. ಆದರೆ ಹಿಂದೀಯನ್ನು? ಊಹೂಂ... ಒಪ್ಪಕ್ಕಾಗಲ್ಲಾ ಗುರೂ! ಒಪ್ಪಿದರೆ ನಾಳೆ ಕನ್ನಡಿಗರಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಅದೆಂಗೆ?

ಹಿಂದೀ ಭಾಷೆ ಕರ್ನಾಟಕಕ್ಕೇ ವಲಸಿಗರನ್ನು ತರುತ್ತೆ!

ಮೆಟ್ರೋಲಿ ಹಿಂದೀಲಿ ಹಾಕಬೇಕು ಅಂತನ್ನೋದು ಮೆಟ್ರೋ ಆಡಳಿತದವರ ನಿರ್ಧಾರವೇ ಆಗಿರಬಹುದು.. ಆದರೆ ಇದರ ಪರಿಣಾಮವೇನಾಗುತ್ತದೆ ಎಂಬುದು ಅವರ ಅರಿವಿನಲ್ಲಿ ಇಲ್ಲದಿದ್ದರೂ ನಮ್ಮ ಅರಿವಿಗೆ ತಂದುಕೊಳ್ಳುವುದು ಒಳಿತು. ದೆಹಲಿಯ ಮೆಟ್ರೋದಲ್ಲಿ ಇದ್ದಿಕ್ಕಿದ್ದಂತೆ ಎಲ್ಲಾ ಫಲಕಗಳೂ, ಸೇವೆಗಳೂ ಕನ್ನಡದಲ್ಲೂ ದೊರೆತರೆ.... ಅಲ್ಲಿನ ಎಫ್.ಎಂ ವಾಹಿನಿಗಳಲ್ಲಿ ಕನ್ನಡ ಹಾಡುಗಳು ಕೇಳಿಬರಲು ಶುರುವಾದರೆ ಏನಾಗುತ್ತದೆ ಎಂದು ಯೋಚಿಸಿ ನೋಡಿ. ಇಲ್ಲಿಂದ ಅಲ್ಲಿಗೆ ಹೋದ ಕನ್ನಡಿಗ "ದೆಹಲೀಲಿ ಕನ್ನಡ ನಡ್ಯುತ್ತೆ, ಬಾಳಕ್ಕೆ ಏನೇನೂ ತೊಡಕಿಲ್ಲಾ ಬನ್ರಪ್ಪಾ" ಅಂತಾ ತನ್ನ ಬಂಧು, ಬಳಗ, ನೆಂಟರು ಪಂಟರು, ಬೆಕ್ಕು, ನಾಯಿ, ಅಂಗಿ, ಚಡ್ಡಿ  ಎಲ್ಲಾನು ಹೊತ್ಕೊಂಡು ದೆಹಲಿಗೆ ವಲಸೆ ಹೋಗಲ್ವಾ? ಇದೇ ಗುರೂ,  ಇಲ್ಲಿ ಹಿಂದೀಲಿ ವ್ಯವಸ್ಥೆಗಳು ಬಂದರೂ ಆಗೋದು... ಅಲ್ವಾ ಗುರೂ! ಮೊದಲೇ ಜನಸಂಖ್ಯಾ ಸ್ಫೋಟದಿಂದ ನರುಳ್ತಾ ಇರೋ ಹಿಂದೀ ಭಾಷಿಕ ಪ್ರದೇಶಗಳ ಜನರು ಕಡಿಮೆ ಜನದಟ್ಟಣೆಯ ಕರ್ನಾಟಕದಂತಹ ಚಿನ್ನದ ನಾಡಿಗೆ ಸುನಾಮಿ ಹಾಗೆ ನುಗ್ಗೋದು ಖಂಡಿತಾ! ಇದರಿಂದಾಗಿ ನಮ್ಮೂರಲ್ಲೇ ನಾಳೆ, ಹಿಂದೀಯಿಲ್ಲದೆ ನಮ್ಮ ಮಕ್ಕಳು ಮರಿ ಬದುಕಲಿಕ್ಕಾಗದ ಪರಿಸ್ಥಿತಿ ಹುಟ್ಟುವುದಿಲ್ಲವೇ? ಈ ಕಾರಣಕ್ಕಾಗಿ ಬೆಂಗಳೂರಿನ ಮೆಟ್ರೋಲಿ ಹಿಂದೀ ಬೇಡ. 

ಇದು ಬರೀ ವಲಸೆ ಪ್ರಶ್ನೆಯಲ್ಲ!

ಅಷ್ಟಕ್ಕೂ ಇದು ಬರೀ ವಲಸೆಯ ಪ್ರಶ್ನೆಯೂ ಅಲ್ಲ. ಭಾರತ ಒಂದು ಒಕ್ಕೂಟ, ಇಲ್ಲಿ ಪ್ರತಿಯೊಂದು ಭಾಷೆಯೂ, ಜನಾಂಗವೂ ಸಮಾನ. ಪ್ರತಿಯೊಬ್ಬ ನಾಗರೀಕನಿಗೂ ಸಮಾನ ಹಕ್ಕುಗಳಿವೆ ಎನ್ನುವ ಕೇಂದ್ರಸರ್ಕಾರ ಬೆಂಗಳೂರಿನ ಮೆಟ್ರೋಲಿ ಪಾಲು ಹೊಂದಿದೆ ಎನ್ನುವ ಕಾರಣಕ್ಕೆ ಹಿಂದೀಲಿ ಸೇವೆ ಕೊಡಬೇಕು ಅನ್ನೋದು ಯಾವ ಸೀಮೆಯ ಸಮಾನತೆ? ಕನ್ನಡಿಗರಿಗೆ (ಉಳಿದೆಲ್ಲಾ ಭಾಷಿಕರಿಗೂ) ಇಂಥದೇ ಸೇವೆಯನ್ನು ದೇಶದ ಎಲ್ಲಾ ಮೂಲೆಯಲ್ಲೂ ಒದಗಿಸಿಕೊಡುತ್ತದೆಯೇ? ಇಲ್ಲದಿದ್ದರೆ ಹಿಂದೀ ಭಾಷೆಯವರಿಗೆ ಮಾತ್ರಾ ವಿಶೇಷ ಸವಲತ್ತು ಒದಗಿಸಿಕೊಡುವ ಇಂತಹ ನೀತಿ ಏನನ್ನು ಸಾರುತ್ತದೆ? ವೈವಿಧ್ಯತೆಯಲ್ಲಿ ಏಕತೆಯನ್ನೆ? ಹಿಂದೀ ಸಾಮ್ರಾಜ್ಯಶಾಹಿಯನ್ನೇ? ಸರಿಯಾದ ವ್ಯವಸ್ಥೆಯನ್ನು ಕಟ್ಟುವ ಯೋಗ್ಯತೆ ಸರ್ಕಾರಕ್ಕಿಲ್ಲದಿದ್ದಲ್ಲಿ ಬೇರೆ ಬೇರೆ ದೇಶಗಳಲ್ಲಿನ ವ್ಯವಸ್ಥೆ ನೋಡಿ ಕಲಿಯಲಿ... ಅಲ್ವಾ ಗುರೂ!

ಕೊನೆಹನಿ: ಗುಲಾಮಗಿರಿಯ ಸಂಕೇತವಾದ ಇಂಗ್ಲೀಶ್ ಒಪ್ಪುವ ನೀವು ನಮ್ಮದೇ ನಾಡಿನ ಹಿಂದೀ ಒಪ್ಪಲಾರಿರಾ? ಎನ್ನುವ ಪ್ರಶ್ನೆ ಕೇಳುವವರಿದ್ದಾರೆ. ಅವರು ತಿಳಿಯಬೇಕಾದ್ದು ಒಂದಿದೆ, ಇವತ್ತು ಇಂಗ್ಲೀಶ್ ಒಪ್ಪಿದರೆ, ಇಂಗ್ಲೀಷರು ಇಲ್ಲಿ ಬಂದು ಸಾಮ್ರಾಜ್ಯ ಕಟ್ಟಿ ಕನ್ನಡಿಗರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿಸಲಾರರು. ಆದರೆ ಹಿಂದೀ ಒಪ್ಪಿದರೆ ಆಗುವುದು ಅದೇ... ಅನಿಯಂತ್ರಿತ ವಲಸೆಗೆ ವೇಗವಾಹಿಯಾಗಿ ಕೆಲಸಮಾಡುವ ಇದು ಕೆಲವೇ ವರ್ಷಗಳಲ್ಲಿ ಕನ್ನಡಿಗರನ್ನು ಭಾರತದಿಂದೇಕೆ, ಇಡೀ  ಭೂಪಟದಿಂದಲೇ ಹೊಸಕಿ ಹಾಕುತ್ತದೆ.

13 ಅನಿಸಿಕೆಗಳು:

Santhosh Hugar ಅಂತಾರೆ...

ಒದುವ ಮುನ್ನ ನಿಮ್ಮ ಅನಿಸಿಕೆ ತಪ್ಪು. ಹಿಂದಿ ನಮ್ಮ ರಾಷ್ಟ್ರ ಭಾಷೆ. ಅದು ಸಹ ನಮಗೆ ಬೇಕು ಎಂದು ಹೇಳೋಣ ಅನಿಸುತಿತ್ತು. ಆದರೆ ಓದಿದ ನಂತರ ಕೆಲವು ನಿಮಿಷ ಯೋಚಿಸಿದಾಗ ನೀವು ಹೇಳುವುದರಲ್ಲೂ ಸತ್ಯವಿದೆ ಎಂದು ಮನದಟ್ಟಾಯಿತು. ನಮ್ಮ ಭಾಷೆಯನ್ನು ನಾವು ವಿಸ್ತಾರಿಸಲು ಪ್ರಯತ್ನಿಸಬೇಕು. ಇಂಗ್ಲೆಂಡ್ ನ ಪಕ್ಕದಲ್ಲೆ ಇದ್ದರೂ ಸಹ ಒಂದೆ ಒಂದು ಇಂಗ್ಲೀಷ್ ಪದವನ್ನು ಸಹ ಫ್ರಾನ್ಸ್ ದೇಶ ಬಳಸುವುದಿಲ್ಲ. ಅಲ್ಲಿಗೆ ಹೋದ ಪ್ರವಾಸಿಗರು ಫ್ರೆಂಚ್ ನ ಕೆಲವು ಪದಗಳನ್ನಾದರೂ ಖಂಡಿತ ಕಲಿಯುತ್ತಾರೆ. ನಾವು ಕೂಡ ಕನ್ನಡವನ್ನು ಮತ್ತೊಬ್ಬರಿಗೆ ಕಲಿಸುವ ಕೆಲವು ಅವಕಾಶಗಳನ್ನಾದರೂ ಉಪಯೋಗಿಸಿಕ್ಕೊಳ್ಳಬೇಕು.

manjunibam ಅಂತಾರೆ...

manjunath H.N ತುಂಭ ಅದ್ಬುತವದಂಥ ಲೇಖನ. ಕನ್ನಡಿಗರ ಬಗೆಗಿನ ಕಾಳಜಿ ನಿಜಕ್ಕು ಶ್ಲಾಘನಿಯಾ... ಅದರೆ ನನ್ನ ಪ್ರಶ್ನೆ ಇದನೆಲ್ಲಾ ಸಂಭಂದ ಪಟ್ಟವರಿಗೆ ತಿಳಿಸುವುದಾದರು ಹೇಗೆ ಮತ್ತು ಯಾರು.... ನಮ್ಮ ಆದುನಿಕ ಕನ್ನಡಿಗರು ಎಸ್ಟೊ ಜನ ಇದೆಲ್ಲಾ ನಮಗ್ಯಾಕೆ ಅನ್ನೊ ಮನಸ್ಥಿತಿಯಲ್ಲಿ ಇದ್ದಾರೆ... ಎಲ್ಲಾರನ್ನು ಪ್ರೀತಿಸು ಕನ್ನಡ ಕನ್ನಡ ಅಂಥಾ ವಾದಿಸುವುದು ಯಾಕೆ ಎಮ್ದು ತಿರುಗಿ ಹೇಳುತ್ತಾರೆ... ಇಂಥಾವರಿಗೆಲ್ಲಾ ಕನ್ನಡಕ್ಕೆ ಹಾಗುತ್ತಿರುವ ಹಾನಿಯ ಬಗ್ಗೆ ಪರಿಕಳ್ಪನೆಯು ಇಲ್ಲಾ.... ಇದಕೆಲ್ಲ ಸಾಂಘಿಕ ಹೊರಾತ ಅತ್ಯಗತ್ಯ... ನಮ್ಮನ್ನು ಮುನ್ನಡಿಸುವರು ಯಾರು????

karunadu ಅಂತಾರೆ...

ಗುಲಾಮಗಿರಿಯ ಸಂಕೇತವಾದ ಇಂಗ್ಲೀಶ್ ಒಪ್ಪುವ ನೀವು ನಮ್ಮದೇ ನಾಡಿನ ಹಿಂದೀ ಒಪ್ಪಲಾರಿರಾ? ಎನ್ನುವ ಪ್ರಶ್ನೆ ಕೇಳುವವರಿದ್ದಾರೆ.
============
ಹೌದು ಇದು ಸಾಮಾನ್ಯವಾಗಿ ಹಿಂದಿ ನಾಡಿಗರು ಕೇಳುವ ಪ್ರಶ್ನೆ...ನಿಮ್ಮ ಉತ್ತರ ಸರಿಯಾಗಿ ಇದೇ...
ಆದರೆ ಮತ್ತೊಂದು ತರ್ಕಬದ್ಧವಾದ ಉತ್ತರ ಕೊಡಬಹುದು - 'ನೀವು ಕೂಡ ಅದೇ ಅಲ್ಲವೇ ಮಾಡ್ತಾ ಇರೋದು ' ಅಂತ ...ಯಾಕಂದ್ರೆ ಅವರು ಕೂಡ 'ಹಿಂದಿ+ಇಂಗ್ಲಿಷ್' ಇನ್ನುಡಿ(ದ್ವಿಭಾಷ) ಸೂತ್ರವನ್ನೇ ಪಾಲಿಸುತ್ತಿದ್ದಾರೆ ....ನಾವು ಕೂಡ ಹಾಗೆ ಮಾಡುವಾಗ logical ಆಗಿ ಅವರಿಗೆ ಹಿಂದಿಯನ್ನು ಬೆಂಗಳೂರಿನಲ್ಲಿ ಬಳಸುವ ಪ್ರಶ್ನೆ ಹುಟ್ಟಲೆಬಾರದು!!

Aditya ಅಂತಾರೆ...

Santosh avre,namage rashtrabhashe annode illa..ee gap alli hindi ge yaar aa darje kottro gottilla..adru,namma metroli hindi irodu bahala sit taratte..yen delhi metro li kannada iratta? olle herike swami idu! bahalasht varsha anglara kayalli alaskondvi,eega hindi avra alvike.

Aditya ಅಂತಾರೆ...

yen adru madakke agatta namgalinda? sadhyavadalli tilisi,namma geleyara balagavu idara viruddhave iddare,avarigu tilisthini.

MIB ಅಂತಾರೆ...

ಸಂತೋಷ ಭಾರತದ ಎಲ್ಲ ೧೫ ಭಾಷೆಗಳು ನಮ್ಮ ರಾಷ್ಟ್ರೀಯ ಭಾಷೆಗಳು. ಮೊದಲ ಆಧ್ಯತೆ ನಾಡು ಭಾಷೆಗೆ ಇರಲಿ, ನನ್ನ ಅನಿಸಿಕೆ ಪ್ರಕಾರ ಬರಿ ಬೇರೆ ಭಾಷೆಗಳನ್ನ ಒತ್ತಿ ಹಿಡಿಯೋದ್ರಿಂದ ನಾವು ನಮ್ಮ ಭಾಷೆನ ಬೆಳೆಸೋಕೆ ಆಗೋಲ್ಲ. ಜನಗಳಿಗೆ ಬೇರೆ ಭಾಷೆಗಿಂತ ನಮ್ಮ ಭಾಷೆಯಾ ಮೌಲ್ಯನ ಆರ್ಥ ಮಾಡಿಸಿದ್ರೆ ನಮ್ಮ ಭಾಷೆಯ ಪತನದ ಬಗ್ಗೆ ಹೆದರಿಕೆ ಇರಲ್ಲ ಅನ್ಕೊಂಥಿನಿ. ನಮ್ಮ ನಮ್ಮಲ್ಲೇ ಎಷ್ಟೊಂದು ಕೀಳರಿಮೆ ಇದೆ. ಬೆಂಗಳೂರಲ್ಲಿ ಉತ್ತರ ಕರ್ನಾಟಕದ ಜನರು ಕನ್ನಡದಲ್ಲಿ ಮಾಥನಾಡಿದ್ರೆ ಒಳ್ಳೆ ಮೂರ್ಖನ ತರಹ ನೋಡ್ತಾರೆ ಅವರನ್ನ. ಎಷ್ಟೊಂದು ಕನ್ನಡದ ಫ್ಯಾಮಿಲಿಗಳು ಇಲ್ಲೇ ಹುಟ್ಟಿ ಬೆಳೆದು ಕನ್ನಡನೆ ಮಾತ ಆಡಲ್ಲ. ಮೊದಲು ಇಲ್ಲಿ ಸುಧಾರಣೆ ಮಾಡೋಣ ನಂತರ ಬೇರೆಯವರಿಗೆ ಪಾಠ ಕಲಿಸೋಕೆ ಹೋಗೋದು ಉಚಿತ ಅನ್ನೋದು ನನ್ನ ಅನಿಸಿಕೆ. ಮಹಾತ್ಮಾ ಗಾಂಧಿ ಅವರು ಹೇಳಿರೋ ಹಾಗೆ "If you want to see the change, then be the change" ಮೊದಲು ನಮ್ಮ ಜನರಿಗೆ ಜ್ಞಾನೋದಯ ಮಾಡಿಸೋಣ ಕನ್ನಡದ ಬಗ್ಗೆ ಆಮೇಲೆ ನಿಧಾನವಾಗಿ ಬೇರೆಯವರಿಗೆ ಬರೋಣ. ನನ್ನ ಅನಿಸಿಕೆ ಯಾರಿಗದ್ರು ನೋವು ತಂದಲ್ಲಿ ದಯಮಾಡಿ ಕ್ಷಮಿಸಿ . ನನ್ನ ಉದ್ದೇಶ ಯಾವ ಕನ್ನಡಿಗನಿಗೂ ನೋವನ್ನುಂಟು ಮಾಡೋದಲ್ಲ.

Repudiated Brilliance ಅಂತಾರೆ...

ಗುರು. ನನಗೂ ಇಷ್ಟ ಅಗ್ಲಿಲ್ಲ ಹಿನ್ದಿಲಿ ಫಲಕ ಹಾಕಿರೊದು. ಆದರೆ ಇದನ್ನ ತೆಗ್ಸೊಕ್ಕೆ ನಿಮ್ಮ ಕೈಲಿ ಆಗುತ್ತ? ಆಗೊ ಹಾಗಿದ್ರೆ ದಯವಿಟ್ಟು ಯೆನಾದ್ರು ಮಾಡಿ.

ಸುಧೀರ್ ನಿಂಜೂರು Sudhir Ninjoor ಅಂತಾರೆ...

ಹಿಂದಿ ಹೇರಿಕೆ ವಿರುದ್ಧ ಕನ್ನಡಿಗರು ಎಚ್ಚೆತ್ತುಕೊಳ್ಳಬೇಕಾಗಿದೆ.
ನಾ ಅನುಭವಿಸಿರುವ ಒಂದು ಉದಾಹರಣೆ - ಸುಮಾರು ೨ ವರ್ಷ ಕಾಲ ನಾನು ಚೆನ್ನೈನಲ್ಲಿ ಉದ್ಯೋಗದಲ್ಲಿದ್ದೆ. ಆ ಸಂಸ್ಥೆಯ ಭದ್ರತಾ ಸಿಬ್ಬಂದಿಗಳು ಹೆಚ್ಚಿನವರು ಒರಿಸ್ಸಾ/ಬಿಹಾರ ಕಡೆಯವರು. ಆದರೆ ತಮಿಳು ಕಲಿತು ತಮಿಳಲ್ಲೇ ಮಾತನಾಡುತ್ತಿದ್ದರು. ಆದರೆ ಅದೇ ಬೆಂಗಳೂರಿನ ಸಂಸ್ಥೆಯಲ್ಲಿರುವವರಿಗೆ ಕನ್ನಡದಲ್ಲಿ ಸರಿಯಾಗಿ ೪ ಪದ ಮಾತನಾಡಲಿಕ್ಕೆ ಬರುವುದಿಲ್ಲ !! ಇಷ್ಟೇ ಯಾಕೆ ಬೆಂಗಳೂರಿನಲ್ಲಿ ಇರುವ ಮಲೆಯಾಳಿಗಳ "super market" ಹೋದರೆ ಸಿಗುವುದೆಲ್ಲ ಮಲೆಯಾಳಿ ಕೆಲಸಗಾರರೆ; ಮಾರವಾಡಿಗಳ ಅಂಗಡಿಯಲ್ಲಿ ಬರೀ ರಾಜಸ್ಥಾನಿಗಳೇ; IT-BT ಕಚೇರಿಗಳಲ್ಲಂತೂ ಹೊರಗಿನವರದ್ದೇ ದರ್ಬಾರು!

Anonymous ಅಂತಾರೆ...

ನಮ್ಮ ದೇಶದ ಬಹಳಷ್ಟು ಜನರ ತಪ್ಪು ತಿಳುವಳಿಕೆ - "ಹಿಂದಿ ನಮ್ಮ ರಾಷ್ಟ್ರಭಾಷೆ". ಹಿಂದಿ ನಮ್ಮ ರಾಷ್ಟ್ರಭಾಷೆ ಅಲ್ಲ.....!!!!
ಭಾರತಕ್ಕೆ ಇರುವುದು ಕೇವಲ ಆಡಳಿತ ಭಾಷೆ. ಆಡಳಿತದಲ್ಲಿ ಮೊದಲ ಒತ್ತು ಸ್ಥಳೀಯ ಭಾಷೆಗಾದರೆ, ಎರಡನೆಯದು ಇಂಗ್ಲೀಶ್-ಗೆ.
ಹಿಂದಿ ನಮ್ಮ ರಾಷ್ಟ್ರಭಾಷೆ ಎಂಬ ವಿಚಾರ ಎಲ್ಲಿಂದ ಬಂತು ಅಂತ ಮಾತ್ರ ಗೊತ್ತಿಲ್ಲ.
ಸ್ಕೂಲಲ್ಲೇ ತಪ್ಪ್ ತಪ್ಪ್ ಹೇಳ್ಕೊಟ್ಟಿದಾರೆ ನಮ್ಗೆಲ್ಲಾ....!!!

ವಿ.ಸೂ: "Anonymous" ಆಗಿ, ನಿಮ್ಮ ಸೋಮಾರಿತನವನ್ನು ಹೆಮ್ಮೆಯಿಂದ ತೋರ್ಪಡಿಸಿಕೊಳ್ಳಿ ;)

Anonymous ಅಂತಾರೆ...

padma -

ನಮ್ಮ ಮೆಟ್ರೊನಲ್ಲಿ ಬೇಡದೆ ಇದ್ದರು hindi ಹಾಕಿರುವುದನ್ನು ಈಗ ತೆಗೆಯಲು ಸಾಧ್ಯವೆ?? ಇದ್ದರೆ ಅದು ಹೇಗೆ ಮಾಡುವುದು ಎನ್ನುವುದನ್ನು ಯೋಚಿಸಬೇಕಾಗಿದೆ...ನಾವು ನಮ್ಮಲೇ ಮಾತಾಡಿ ಕುಳಿತರೆ ಸರ್ಕಾರ ಏನು ಮಾಡುವುದಿಲ್ಲ....ಇನ್ನು ಸ್ವಲ್ಪ ದಿನವಾದಮೇಲೆ ಈ ವಿಷಯವನ್ನು ಎಲ್ಲರೂ ಮರೆತು ಹೋಗುತಾರೆ... ಮೆಟ್ರೋ ನಲ್ಲಿ ಎಲ್ಲರೂ ಸೇರಿ hindi ಯನ್ನು ತೆಗೆಸಿ ಹಾಕಿದರೆ...ಆಗ ಎಲ್ಲರಿಗೂ ಅರಿವಾಗುತ್ತದೆ.. ಕರ್ನಾಟಕದಲ್ಲಿ ಕನ್ನಡ ಕಲಿಯುವುದು ಎಷ್ಟು ಮುಖ್ಯ ಅಂತ...
ನಾವು ಕ ರ ವೆ ಅವರಿಂದ ಸಹಾಯ ಪಡೆದು hindi ಅನ್ನು ಮೆಟ್ರೋದಿಂದ ತೆಗೆಸಿ ಹಾಕಬೇಕು...ಆಗಲೇ ಎಲ್ಲರಿಗೂ ಬುದ್ದಿ ಬರುವುದು...ಸುಮ್ಮನೆ ಇಲ್ಲಿ ಕುಳಿತುಕೊಂಡು blog ಬರೆದು, comment ಹಾಕುವುದರಿಂದ ಏನು ಉಪಯೋಗಿಲ್ಲವೆನ್ನುವುದು ನನ್ನ ಅನಿಸಿಕೆ...
ಮುಂದೆ ಏನು ಮಾಡಬೇಕು ಎನ್ನುವುದನ್ನು ಮಾತನಾಡಿದರೆ ಅನುಕೂಲವಾಗುತ್ತದೆ...

Anonymous ಅಂತಾರೆ...

ಗೆಳೆಯರೇ, ನಾವಾಗಲೇ ಈ ಹಿಂದಿ ಎಂಬ ಭಾರಿ ಆಳವಾದ ಪ್ರಪಾತಕ್ಕೆ ಬಿದ್ದಿಯಾಗಿದೆ. ಪಕ್ಕದ ತಮಿಳು ನಾಡಿನಲ್ಲಿ ಹಿಂದಿ ಬೇಡ ಅಂದು ದೊಡ್ಡ ಪ್ರತಿರೋಧ ಆದಾಗಲೇ ಇಲ್ಲೂ ಆಗಬೇಕಿತ್ತು. ಆದರೆ ನಮ್ಮ ಆಗಿನ ನಿರಭಿಮಾನಿ ಕನ್ನಡಿಗರು ಸೊಲ್ಲೆತ್ತದೆ, ಈಗ ಈ ಪರಿಸ್ತಿತಿಗೆ ಬಂದಿದ್ದೀವಿ. ಇದಕ್ಕೆ ಮುಖ್ಯ ಕಾರಣ ನಮ್ಮಲ್ಲಿನ ತ್ರಿಭಾಷಾ ಸೂತ್ರ. ಮೊದಲು ಅದನ್ನು ಕಿತ್ತೊಗೆದು ಕೇವಲ ಕನ್ನಡ ಮತ್ತು ಇಂಗ್ಲಿಷ್ ಮಾತ್ರ ಕಲಿಸಬೇಕು. ಎಲ್ಲ ದೊಡ್ಡ ಅಂಗಡಿಗಳಲ್ಲಿ ಪದಾರ್ಥಗಳ ಹೆಸರು ಕನ್ನಡದಲ್ಲಿರಬೇಕು. ನಮಗೆ 'ತೋರು ದಾಲ್', 'ಅಟ್ಟ' ಬೇಡ. ತೊಗರಿ ಬೇಳೆಮತ್ತು ಗೋಧಿ ಹಿಟ್ಟು ಬೇಕು. ಮುಖ್ಯವಾಗಿ ನಾವು ಆದಸ್ತು ಕನ್ನಡಿಗರನ್ನು ಬೆಂಗಳೂರಿಗೆ ಕರೆ ತರಬೇಕು. ಪ್ರತಿ ದಿನ ಉತ್ತರ ಭಾರತದಿಂದ ರೈಲಿನಲ್ಲಿ ಬಂದು ಬೀಳುತ್ತಿರುವವರ ಸಂಖ್ಯೆ ಗಿಂತ ಹೆಚ್ಚು ನ್ನಡಿಗರು ಬೆಂಗಲೋರ್ರಿಗೆ ಬರಬೇಕು. ಎಲ್ಲ ಬಿ.ಎಂ.ಟಿ.ಸಿ. ಬಸ್ಗಳಲ್ಲಿ ಡ್ರೈವರ್ ಮತ್ತು ಕಂಡಕ್ಟರ್ ಗಳು ಕನ್ನಡದಲ್ಲೇ ವ್ಯವಹಿರಿಸಬೇಕು.

Anonymous ಅಂತಾರೆ...

what to do next to remove Hindi ... ? adu mukhya eega ...

Unknown ಅಂತಾರೆ...

Yellaru vandannu tilidukollabeku. Hindi namma rashtra bhashe alla. Hindi bharatada ondu adhikruta (official) bhashe maatra. Govt transactions between the states should be done in hindi. That is it. We have all rights to condemn usage of hindi, english, tamil, telgu, etc in bangalore.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails