ಇಂದಿನ ಮೈಸೂರು ದಸರಾ ನಿಜಕ್ಕೂ ನಮ್ಮ ನಾಡಹಬ್ಬಾನಾ?
ನಾಲ್ಕುನೂರನೇ ಮೈಸೂರು ದಸರಾ ಶುರುವಾಗಿದೆ. ಈ ಸಂದರ್ಭದಲ್ಲಿ ನೆನಪಾದದ್ದು ಈ ಹಾಡು. ಕರುಳಿನ ಕರೆ ಚಿತ್ರದ ಡಾ. ರಾಜ್ ಅಭಿನಯದ ಈ ಹಾಡನ್ನು ಕೇಳ್ತಾ ಇದ್ದಾಗ ಇದರ ಕೆಲಸಾಲುಗಳು ಗಮನ ಸೆಳೆದವು. ಮೈಸೂರಿನಲ್ಲಿ ನಡೆಯೋ ದಸರಾ ಉತ್ಸವವು ಯಾವ ಕಾರಣಕ್ಕೆ ನಡೀತಾಯಿದೆ ಅನ್ನೋದನ್ನು ಇಡೀ ಕನ್ನಡ ಕುಲಕ್ಕೆ ಈ ಸಾಲುಗಳು ಸಾರಿ ಹೇಳ್ತಿವೆ.
ಮೈಸೂರು ದಸರಾ, ಎಷ್ಟೊಂದು ಸುಂದರಾ!
ಚೆಲ್ಲಿದೆ ನಗೆಯಾ ಪನ್ನೀರಾ, ಎಲ್ಲೆಲ್ಲೂ ನಗೆಯಾ ಪನ್ನೀರಾ!!
ಚಾಮುಂಡಿ ಮಹಿಷನ ಕೊಂದ ಮಹಾರಾತ್ರಿ
ಧರ್ಮ ಅಧರ್ಮವ ಸೋಲಿಸಿದ ರಾತ್ರಿ
ಕನ್ನಡ ಜನತೆಗೆ ಮಂಗಳ ರಾತ್ರಿ
ಮನೆ ಮನೆ ನಲಿಸುವ ಶುಭ ನವರಾತ್ರಿ!!
ಮಾರ್ ನವಮಿ ಆಯುಧ ಪೂಜೆಯ ಮಾಡಿ
ಮಾತಾಯ ಚರಣದೆ ವರವನು ಬೇಡಿ
ಮಕ್ಕಳು ನಾವೆಲ್ಲಾ ಒಂದಾಗಿ ಕೂಡಿ
ಕೊಂಡಾಡುವಾ ಬನ್ನಿ, ಶುಭ ನವರಾತ್ರಿ!!
ಶತ್ರುವ ಅಳಿಸಲು ಶಸ್ತ್ರವ ಹೂಡಿ
ಬಡತನ ಅಳಿಸಲು ಪಂಥವಾ ಮಾಡಿ
ಹೆಗಲಿಗೆ ಹೆಗಲನು ನಾವ್ ಜೊತೆ ನೀಡಿ
ದುಡಿಯೋಣ ತಾಯಿಯ ಹೆಸರನು ಹಾಡಿ!!
ಈ ಹಾಡು ಕೇಳಿದಾಗ ಮೈಸೂರು ದಸರಾ ನಮ್ಮದು ಅನ್ನಿಸೋದು ಸಹಜವಾಗಿದೆ.

ಅಂದಿನ ನಮ್ಮ ದಸರಾ!

ಇಂಥಾ ಕನ್ನಡಿಗರ ನಾಡಹಬ್ಬ ನಾನ್ನೂರು ವರ್ಷಗಳ ಹಿಂದೆ ಮೈಸೂರು ಆಳರಸರಾದ ಯದುವಂಶದ ಒಡೆಯರ್ ರಾಜಮನೆತನದವರು ಆರಂಭಿಸಿದ್ದಂತೆ. ಕರ್ನಾಟಕ ರತ್ನ ಸಿಂಹಾಸನಾಧೀಶರಾದ ವಿಜಯನಗರದವರ ವಾರಸುದಾರಿಕೆಯ ಪ್ರತೀಕದಂತೆ ಆರಂಭವಾದ ಈ ವೈಭವದ ಹಬ್ಬ ಮೂಲತಃ ಒಂದು ಧಾರ್ಮಿಕ ಆಚರಣೆಯೇ ಆಗಿತ್ತು. ಸ್ವಾತಂತ್ರಕ್ಕೂ ಮೊದಲು ಇದ್ದ ಉತ್ಸವದ ಆಚರಣೆಯು ಭಾರತದೊಂದಿಗೆ ಮೈಸೂರು ವಿಲೀನವಾಗಿ, ಜನಾಡಳಿತ ಆರಂಭವಾಗಿ ರಾಜ ಮನೆತನ ಆಡಳಿತದಿಂದ ಹಿಂದೆ ಸರಿಯುವುದರೊಂದಿಗೆ ಜನರ ಹಬ್ಬವಾಯಿತು. ಯಾವ ಅಂಬಾರಿಯಲ್ಲಿ ರಾಜಕುಟುಂಬದವರು ಕುಳಿತು ಬನ್ನಿ ಪೂಜೆಗೆಂದು ಬನ್ನಿಮಂಟಪಕ್ಕೆ ಮೆರವಣಿಗೆಯಲ್ಲಿ ತೆರಳುತ್ತಿದ್ದರೋ ಆ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿಯನ್ನು ಮೆರವಣಿಗೆ ಮಾಡುವುದು ಆರಂಭವಾಯಿತು. ಇಡೀ ಮೈಸೂರು ನಗರವು, ದಸರಾ ಬಂದೊಡನೆಯೇ ಸಿಂಗರಿಸಿಕೊಂಡು ಕಂಗೊಳಿಸುತ್ತಾ ದಿನಗಳೆದಂತೆ ಸ್ಪರ್ಧೆ, ಮನರಂಜನೆ ಮತ್ತು ಸಂಭ್ರಮಗಳಿಗೆ ಸಾಕ್ಷಿಯಾಯಿತು. ಗಮನಿಸಿ, ಎಂದಿಗೂ ದಸರಾ ಕನ್ನಡಿಗರ ನಾಡಹಬ್ಬವಾಗೇ ಆಚರಣೆಯಾಗುತ್ತಿತ್ತು. ಇಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಿರಿಯ ಕಲಾವಿದರುಗಳಾದ ಗೌರವಾನ್ವಿತರುಗಳಾದ ಭೀಮಸೇನ್ ಜೋಶಿ, ಏಸುದಾಸ್, ಬಾಲಮುರಳಿಕೃಷ್ನ, ಹರಿಪ್ರಸಾದ್ ಚುರಾಸಿಯಾ ಮೊದಲಾದವರ ಕಾರ್ಯಕ್ರಮಗಳು ಆಗಲೂ ನಡೆಯುತ್ತಿದ್ದವು.

ಇಂದಿನ ದಸರಾ...

ಮೈಸೂರಿನ ಕುಸ್ತಿ ಕಾಳಗ, ವಸ್ತು ಪ್ರದರ್ಶನ, ತಿಂಗಳುಗಟ್ಟಲೆ ಅಲ್ಲಿ ನಡೆಯುತ್ತಿದ್ದ ನಾಟಕ ಸಂಗೀತ ಕಾರ್ಯಕ್ರಮಗಳು, ನಗರದ ಬೀದಿಗಳ ದೀಪಾಲಂಕಾರ, ಜಗನ್ಮೋಹನ ಅರಮನೆಯ ಸಂಗೀತ ಕಾರ್ಯಕ್ರಮಗಳು ಇಂದು ಮತ್ತಷ್ಟು ಹರವನ್ನು ಪಡೆದುಕೊಂಡು ಯುವದಸರಾ, ಸಾಹಸ ಕ್ರೀಡಾ ದಸರಾ, ಆಹಾರ ದಸರಾ ಮೊದಲಾಗಿ ಬೆಳೆದುಕೊಂಡಿದ್ದರೂ... ಕನ್ನಡತನ ದಿನೇದಿನೇ ದೂರಾಗುತ್ತಿರುವುದು ಕಾಣುತ್ತಿದೆ. ದಸರಾ ಕಾರ್ಯಕ್ರಮಗಳಲ್ಲಿ ಕನ್ನಡದ ಕಾರ್ಯಕ್ರಮಗಳಿಗಿಂತಾ ಪರಭಾಷಿಕರ ಕಾರ್ಯಕ್ರಮಗಳು ಮಹತ್ವ ಪಡೆದುಕೊಳ್ಳುತ್ತಿದೆ. ದಸರಾ ಅಂತರ್ಜಾಲ ತಾಣವೂ ತೆರೆದುಕೊಳ್ಳುವುದೇ ಇಂಗ್ಲೀಷಿನಲ್ಲಿ ಎನ್ನುವ ಸ್ಥಿತಿ ಮುಟ್ಟಿದೆ. ಇವತ್ತು ಖಾಸಗಿ ದೂರದರ್ಶನ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿದ್ದ ಯುವದಸರಾ ಕಾರ್ಯಕ್ರಮದ ನೇರಪ್ರಸಾರವನ್ನು ನೋಡಿದಾಗ ಅಚ್ಚರಿಯಾಯಿತು. ಕನ್ನಡನಾಡಿನ ಕಾಲೇಜುಗಳ ನಮ್ಮ ಯುವಕರುಗಳು ನಡೆಸಿಕೊಡುತ್ತಿದ್ದ ಆ ಕಾರ್ಯಕ್ರಮಗಳಲ್ಲಿ ಕನ್ನಡದ ಗಾಳಿಗಂಧವೂ ಇರಲಿಲ್ಲ ಎನ್ನುವುದನ್ನು ಕಂಡ ಯಾರಿಗಾದರೂ, ಮೈಸೂರು ದಸರಾ ಆಯೋಜಕರು "ದಸರಾ ಹಬ್ಬವನ್ನು ರಾಷ್ಟೀಯ ಅಂತರರಾಷ್ಟ್ರೀಯಗೊಳಿಸುವುದು ಎಂದರೆ ಕನ್ನಡವನ್ನು ಮರೆಮಾಡುವುದೇ" ಎಂದು ಭ್ರಮಿಸಿರುವಂತೆ ಅನ್ನಿಸೀತು.

ವೈಭವ ಕಳೆದುಕೊಳ್ಳೋ ದಸರಾ!

ಹೌದೂ ಗುರೂ! ದಸರಾನಾ ರಾಷ್ಟ್ರಮಟ್ಟಕ್ಕೇರಿಸೋದು ಅಂದರೆ ಆಫ್ರಿಕಾದಿಂದಾ ಆನೆ ತರಿಸೋದಾಗಲೀ, ಬಾಲಿವುಡ್ ಹಾಲಿವುಡ್ ಕಲಾವಿದರನ್ನು ಕರೆಸೋದಾಗಲೀ ಅಲ್ಲಾ. ನಮ್ಮ ದಸರಾಗೆ ದೇಶವಿದೇಶದಿಂದ ಜನಾ ಬರೋದು ಇವೆಲ್ಲಾ ನೋಡಕ್ಕೂ ಅಲ್ಲಾ.. ನಮ್ಮ ನಾಡಿನ ಸಂಸ್ಕೃತಿಯನ್ನು, ನಮ್ಮತನವನ್ನು, ನಮ್ಮ ಸೊಗಡನ್ನು ನೋಡಕ್ಕೆ. ಇಲ್ಲಿ ನಮ್ಮದು ಅಂದರೆ ಕನ್ನಡನಾಡಿನದ್ದು ಮಾತ್ರವೇ ಆಗಿದೆ. ಅದು ಬಿಟ್ಟು "ಪ್ರವಾಸಿಗರು ಭಾಂಗ್ಡಾ ಕುಣಿತ ನೋಡಕ್ಕೆ ಪಂಜಾಬಿಗೆ ಹೋಗದೆ ಮೈಸೂರಿಗೆ ಬರ್ತಾರೆ, ಒಡಿಸ್ಸಿ ಕುಣಿತ ನೋಡಲು ಭುವನೇಶ್ವರಕ್ಕೆ ಹೋಗದೆ ಮೈಸೂರಿಗೆ ಬರ್ತಾರೆ, ರುವಾಂಡ-ನೇಪಾಳಿ- ಶ್ರೀಲಂಕಾ ಕಲಾವಿದರನ್ನು ನೋಡಲಿಕ್ಕೆ ಮೈಸೂರಿಗೆ ಬರ್ತಾರೆ" ಅನ್ನೋ ಭ್ರಮೆ ಬಿಡದಿದ್ದರೆ ಮುಂದಿನ ದಿನಗಳಲ್ಲಿ ತನ್ನ ವೈಭವವನ್ನು ಮೈಸೂರು ದಸರಾ ಕಳೆದುಕೊಳ್ಳೋದು ಖಂಡಿತಾ! ಇರುವ ನಮ್ಮ ಹಿರಿಮೆಯನ್ನು ಕಡೆಗಣಿಸುವಂತೆ ಪರಭಾಷಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ, ಕನ್ನಡತನವನ್ನು ತೊರೆದ ದಸರೆ ನಮ್ಮದು ಹೇಗಾದೀತು ಗುರೂ? ಈಗ ಮತ್ತೊಮ್ಮೆ ಕರುಳಿನಕರೆಯ ಹಾಡು ಕೇಳಿ... ಮೈಸೂರು ದಸರಾ ಕನ್ನಡಿಗರ ನಾಡಹಬ್ಬವಾಗಿ ಉಳಿದಿದೆಯೇ? ಅಥವಾ... ಕನ್ನಡವೆಂಬ ಶಿವನಿಲ್ಲದ ಸೌಂದರ್ಯವಾಗಿದೆಯೇ?

3 ಅನಿಸಿಕೆಗಳು:

Priyank ಅಂತಾರೆ...

ಸರಿಯಾಗಿ ಹೇಳಿದೀರಿ ಗುರು.
ಮೈಸೂರಿನ ಹೋಟೆಲ್ಲುಗಳಲ್ಲಿ, ದಸರಾ ಹಬ್ಬಕ್ಕೆ ಅಂತ 'ದಸರಾ ತಾಲಿ' ಬಡಿಸಲಾಗುತ್ತಿದೆ.
'ದಸರಾ ಹಬ್ಬದೂಟ' ಎಂದು ಕರೆಯಲಾರದಷ್ಟು ಕೀಳರಿಮೆ ತುಂಬಿರೋದು ಬೇಸರದ ಸಂಗತಿ.

Badarinath Palavalli ಅಂತಾರೆ...

ಸಕಾಲೀನ ಬರಹ.

ನನ್ನ ಬ್ಲಾಗುಗಳಿಗೆ ಬನ್ನಿರಿ:
www.badari-poems.blogspot.com
www.badari-notes.blogspot.com

ಸಕಾಲೀನ ಬರಹ.

ನನ್ನ ಬ್ಲಾಗುಗಳಿಗೆ ಬನ್ನಿರಿ:
www.badari-poems.blogspot.com
www.badari-notes.blogspot.com

neerakallu ಅಂತಾರೆ...

super sir

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails