(ಫೋಟೋ ಕೃಪೆ: ಪ್ರಜಾವಾಣಿ) |
ಇಂದಿನ ದಿನಗಳಲ್ಲಿ ಪ್ರಪಂಚದಾದ್ಯಂತ ನಾನಾರೀತಿಯ ಮನೋರಂಜನೆ,
ಸಿನಿಮಾ,
ಟಿವಿ
ಕಾರ್ಯಕ್ರಮಗಳು ಪ್ರಸಾರವಾಗುತ್ತಿರುತ್ತವೆ. ಇವುಗಳನ್ನು ಯಾರಾದರೂ ನೋಡಬೇಕೆಂದರೆ ಅವನ್ನು ತಮ್ಮ
ಭಾಷೆಗೆ ‘ಮಾತು ಬದಲಿಸಿ’
ಅಂದರೆ
ಡಬ್ ಮಾಡಿ ನೋಡುವ ಏರ್ಪಾಡಿದೆ. ಭಾರತದಲ್ಲೂ ಡಬ್ಬಿಂಗ್ ವ್ಯವಸ್ಥೆ ಹೆಚ್ಚಿನ ಎಲ್ಲಾ ಕಡೆ
ಜಾರಿಯಲ್ಲಿದ್ದರೂ ನಮ್ಮ ಕರ್ನಾಟಕದಲ್ಲಿ ಡಬ್ಬಿಂಗ್ ಮೇಲೆ ನಿಷೇಧವಿದೆ. ಕನ್ನಡದ ಮಕ್ಕಳು
ತಮ್ಮಿಷ್ಟದ ಪೋಗೋ, ಕಾರ್ಟೂನ್ ಮೊದಲಾದ ವಾಹಿನಿಗಳನ್ನೂ ಅವತಾರ್,
ಜುರಾಸಿಕ್
ಪಾರ್ಕ್, ಜಂಗಲ್‌ಬುಕ್ ಮೊದಲಾದ ಚಿತ್ರಗಳನ್ನೂ
ಕನ್ನಡದಲ್ಲಿ ನೋಡಲು ಸಾಧ್ಯವಿಲ್ಲ. ಕನ್ನಡವಲ್ಲದೆ ಬೇರಾವ ಭಾಷೆಯನ್ನೂ ಅರಿಯದ ಕನ್ನಡಿಗರು
ಪರಭಾಷೆಯ ಚಿತ್ರಗಳನ್ನು, ಜ್ಞಾನ ವಿಜ್ಞಾನದ ವಾಹಿನಿಗಳನ್ನು
ನೋಡಬೇಕೆಂದರೆ... ಇಲ್ಲವೇ ಅರ್ಥವಾಗದೆ ನೋಡಬೇಕು ಅಥವಾ ಆಯಾಭಾಷೆಗಳನ್ನು ಕಲಿತು ನೋಡಬೇಕು. ಹೀಗೆ
ಅವಕಾಶ ಇಲ್ಲದಿರಲು ಕಾರಣ ಯಾವುದೋ ಸರ್ಕಾರಿ ಕಾಯ್ದೆಯಾಗಲೀ, ಇಂತಹ
ಕಾರ್ಯಕ್ರಮಗಳನ್ನು ನೀಡುವವರು ಇಲ್ಲದೇ ಆಗಲೀ ಅಲ್ಲಾ. ಬದಲಿಗೆ ಕನ್ನಡ ದೂರದರ್ಶನ ಮತ್ತು
ಚಿತ್ರರಂಗದ ಕಾನೂನುಬಾಹಿರವಾದ “ಡಬ್ಬಿಂಗ್ ನಿಷೇಧ”ದ ಕಾರಣದಿಂದ. ಭಾರತದಲ್ಲಿ
ಸಂವಿಧಾನದ ನೆಲೆಯಲ್ಲಿ ಡಬ್ಬಿಂಗ್ ನಿಷೇಧ ಎನ್ನುವುದು ಕಾನೂನುಬಾಹಿರವಾದ ನಿಲುವು. ಡಬ್ಬಿಂಗ್
ನಿಷೇಧ ಎನ್ನುವ ನಿಲುವು ವಾಸ್ತವವಾಗಿ ಪ್ರಜಾಪ್ರಭುತ್ವ ವಿರೋಧಿಯಾದುದಾಗಿದೆ.
ಪ್ರೇಕ್ಷಕನೆಂಬ ಗ್ರಾಹಕ
ಧ್ವನಿ
ತಾಂತ್ರಿಕವಾಗಿ ಸಾಧ್ಯವಿರುವಾಗ, ದೇಶದಲ್ಲಿ
ಡಬ್ಬಿಂಗ್ ನಿಷೇಧ ಎನ್ನುವುದು ಕಾನೂನಾಗಿಲ್ಲದಿರುವಾಗ ಪ್ರೇಕ್ಷಕನಿಗೆ ಡಬ್ ಆದ ಚಿತ್ರಗಳನ್ನು
ನೋಡುವ ಅವಕಾಶ ಇರಬೇಕಾಗಿದೆ. ಡಬ್ಬಿಂಗ್ ಬೇಡ ಎನ್ನುವವರಿಗೆ ಸಂಘ ಸಂಸ್ಥೆಗಳಂತಹ ವೇದಿಕೆಗಳಿದ್ದು
ಪ್ರತಿಭಟನೆಯನ್ನು ದಾಖಲಿಸುವುದು ಸುಲಭ. ಆದರೆ ಪ್ರೇಕ್ಷಕನಿಗೆ ಇಂತಹ ಯಾವುದೇ ವೇದಿಕೆ/ಅವಕಾಶ
ಇಲ್ಲದಿರುವಾಗ ಆತ ತನ್ನ ನಿಲುವನ್ನು ಪತ್ರಿಕೆಗಳಿಗೆ ಬರೆಯುವ ಮೂಲಕ,
ಮಿಂಬಲೆ
ತಾಣಗಳ ಚರ್ಚೆಗಳಲ್ಲಿ ದನಿಯೆತ್ತುವ ಮೂಲಕ ತೋರಬಲ್ಲನಷ್ಟೆ. ಇದನ್ನುಪಯೋಗಿಸಿಕೊಂಡು ಡಬ್ಬಿಂಗಿಗೆ
ಜನರ ಬೇಡಿಕೆಯಿಲ್ಲಾ, ಇದು ಕೆಲವರ ಅನಿಸಿಕೆ ಅಷ್ಟೇ ಎನ್ನುವುದು
ಅಪ್ರಜಾಸತ್ತಾತ್ಮಕವಾದುದಾಗಿದೆ.
ಪ್ರಜಾಪ್ರಭುತ್ವದಲ್ಲಿ
ಡಬ್ಬಿಂಗ್
ಪ್ರೇಕ್ಷಕನೆಂಬ ಗ್ರಾಹಕನ ಒಲವು ಒಂದು ಉತ್ಪನ್ನವನ್ನು ಮಾರುಕಟ್ಟೆಯಲ್ಲಿ ಗೆಲ್ಲಿಸುವ
ಮೂಲಕ ಅಥವಾ ಸೋಲಿಸುವ ಮೂಲಕ ವ್ಯಕ್ತವಾಗುತ್ತದೆ. ಹೀಗೆ ತೀರ್ಮಾನಿಸುವ ಅವಕಾಶವನ್ನು ಡಬ್ ಆದ
ಚಿತ್ರಗಳಿಗೂ ನೀಡಬೇಕಾದ್ದು ಸಹಜನ್ಯಾಯವಾಗಿದೆ. ಡಬ್ಬಿಂಗ್ ಆದ ಚಿತ್ರಗಳ ಹಣೇಬರಹವನ್ನು
ನಿರ್ಣಯಿಸುವ ಅವಕಾಶ ಪ್ರೇಕ್ಷಕ ಮಹಾಪ್ರಭುವಿಗೆ ಇರಬೇಕಾದ್ದೇ ಸರಿಯಾದುದಾಗಿದೆ. ನಿಜಕ್ಕೂ
ಡಬ್ಬಿಂಗ್ ಎನ್ನುವುದು ಹಾನಿಕರ ಎನ್ನುವುದಾದಲ್ಲಿ ಆ ನಿಲುವನ್ನು ಕರ್ನಾಟಕದ ಜನರಲ್ಲಿ
ಪ್ರಚುರಪಡಿಸಿ ಅವರೇ ಅಂತಹ ಚಿತ್ರಗಳನ್ನು ತಿರಸ್ಕರಿಸುವಂತೆ ಮಾಡುವುದರಲ್ಲಿದೆಯೇ ಹೊರತು
ಡಬ್ಬಿಂಗ್ ಚಿತ್ರಗಳನ್ನು ನಿಷೇಧಿಸುವ ಸಂವಿಧಾನಬಾಹಿರವಾದ ನಡೆಯಲ್ಲಿಲ್ಲ!
ವಿಶ್ವಸಂಸ್ಥೆ ನಿಲುವು
ಮತ್ತು ಭಾಷೆಯ ಉಳಿವು
ವಿಶ್ವಸಂಸ್ಥೆಯು ಬಾರ್ಸಿಲೋನಾ ಭಾಷಾಹಕ್ಕುಗಳ ಘೋಷಣೆಯ ಮೂಲಕ ಪ್ರತಿಯೊಂದು
ಭಾಷಿಕ ಜನರಿಗೂ ತನ್ನ ನುಡಿ, ಸಂಸ್ಕೃತಿಗಳನ್ನು ಕಾಪಾಡಿಕೊಳ್ಳಲು ಹಲವು
ಹಕ್ಕುಗಳಿರುವುದನ್ನು ಗುರುತಿಸಿ ಎತ್ತಿ ಹಿಡಿದಿದೆ. ಅದರಲ್ಲಿ ಡಬ್ಬಿಂಗ್ ಎನ್ನುವುದನ್ನೂ ಕೂಡಾ
ಒಂದು ಅಸ್ತ್ರವೆಂದಾಗಿಯೇ ಪರಿಗಣಿಸಲಾಗಿದೆ. ಯಾವುದೇ ಜನಾಂಗಕ್ಕೆ ತನ್ನ ಭಾಷೆಗೆ ಪರಭಾಷೆಯ ವಿಷಯ/ ಮಾಹಿತಿ
ಮೊದಲಾದವುಗಳನ್ನು ತರ್ಜುಮೆ ಮಾಡುವ/ ಡಬ್ಬಿಂಗ್ ಮಾಡುವ ಹಕ್ಕಿದೆ ಎನ್ನುತ್ತದೆ ಸೆಕ್ಷನ್ ೪೪. ಅಂದರೆ
ಡಬ್ಬಿಂಗ್ ಎನ್ನುವುದು ಸಂವಿಧಾನ ಬಾಹಿರವಾದುದೂ ಅಲ್ಲಾ, ಭಾಷೆಗೆ ಹಾನಿ
ಮಾಡುವುದೂ ಅಲ್ಲ ಎನ್ನುವುದು ಇದರ ಸಾರ. ಕನ್ನಡತನಕ್ಕೆ ಡಬ್ಬಿಂಗ್ ಮಾರಕವಾದುದು ಎನ್ನುವ
ವಾದವನ್ನು ನಾವು ಕೇಳಬಹುದಾಗಿದೆ. ವಾಸ್ತವ ಇದಕ್ಕೆ ವಿರುದ್ಧವಾಗಿದೆ.
ಕನ್ನಡತನ ಮತ್ತು
ಡಬ್ಬಿಂಗ್
ಡಬ್ಬಿಂಗ್ ಇಲ್ಲದೇ ಹೋದರೆ ಪರಭಾಷೆಯ ಚಿತ್ರಗಳನ್ನು/ ಕಾರ್ಯಕ್ರಮಗಳನ್ನು ಅವವೇ
ಭಾಷೆಯಲ್ಲಿ ನೋಡಬೇಕಾಗುತ್ತದೆ. ಅಂದರೆ ತಮಿಳಿನ, ತೆಲುಗಿನ,
ಹಿಂದಿಯ,
ಇಂಗ್ಲೀಷಿನ...
ಇನ್ನಾವುದೇ ಭಾಷೆಯ ಕಾರ್ಯಕ್ರಮವನ್ನು ಅವವೇ ಭಾಷೆಯಲ್ಲಿ ನೋಡಬೇಕಾಗುತ್ತದೆ. ಅಂದರೆ
ಕನ್ನಡವೊಂದಲ್ಲದೇ ಬೇರೆ ನುಡಿ ಅರಿಯದವರಿಗೆ ಇದು ತೊಡಕಿನ ವಿಷಯವಾಗಿದೆ. ಈಗ ನೀವೇ ಹೇಳಿ... ಕನ್ನಡಿಗನೊಬ್ಬ
ತನ್ನೆಲ್ಲಾ ಮನರಂಜನೆಯನ್ನು ಕನ್ನಡದಲ್ಲಿಯೇ ಪಡೆದುಕೊಳ್ಳುವುದು ಕನ್ನಡಪರವೋ?
ತನ್ನದಲ್ಲದ
ನುಡಿಯಲ್ಲಿ ನೋಡುವುದೋ? ಇನ್ನೂ ತಮಾಶೆಯ ವಿಷಯವೆಂದರೆ
ಬೆಂಗಳೂರಿನಲ್ಲಿ ಬಿಡುಗಡೆಯಾಗುವ ಒಂದು ಇಂಗ್ಲೀಷ್ ಚಿತ್ರ ಡಬ್ಬಿಂಗ್ ಆಗಿ ತಮಿಳು,
ತೆಲುಗು,
ಹಿಂದೀ
ಭಾಷೆಗಳಲ್ಲೂ ಬಿಡುಗಡೆಯಾಗುತ್ತದೆ. ಆದರೆ ಕನ್ನಡದಲ್ಲಿ ಮಾತ್ರಾ ಆಗುವುದಿಲ್ಲ. ಅಂದರೇನರ್ಥ?
ನಾವು
ಕನ್ನಡಿಗರಾಗಿ ಹುಟ್ಟಿರುವುದೇ ಪಾಪ ಎಂದು ಜನರಿಗೆ ಅನ್ನಿಸಿದರೆ ಅಚ್ಚರಿಯಿಲ್ಲ! ಭಾರತದಲ್ಲಿ
ಎಲ್ಲಾ ಜನರಿಗೆ ಸಿಗುತ್ತಿರುವ, ಕನ್ನಡಿಗರಿಗೆ ವಂಚಿಸಲಾಗಿರುವ “ತಾಯ್ನುಡಿಯಲ್ಲಿ
,ಮನರಂಜನೆ ಪಡೆದುಕೊಳ್ಳುವ ಹಕ್ಕು”
ಇಲ್ಲವಾಗಿರುವುದು
ಡಬ್ಬಿಂಗ್ ಎನ್ನುವ ಕಾನೂನು ಬಾಹಿರವಾದ ನಿಲುವಿನಿಂದಾಗಿಯೇ ಆಗಿದೆ!
ವಾಸ್ತವವಾಗಿ ಡಬ್ಬಿಂಗ್
ವಿರೋಧಿಗಳು ಮುಂದಿಡುವ ಕನ್ನಡ ಸಂಸ್ಕೃತಿ ನುಡಿ ರಕ್ಷಣೆಗಾಗಿ ಡಬ್ಬಿಂಗ್ ಬೇಡ ಎನ್ನುವ ಮಾತು
ಪೊಳ್ಳಿನದ್ದಾಗಿದೆ ಎಂದು ಇಂದಿನ ಮಚ್ಚು ಲಾಂಗುಗಳ, ರಿಮೇಕ್ ಸಾಗರಗಳ
ಸಿನಿಮಾಗಳನ್ನು ನೋಡಿದರೆ ಅರಿವಾಗುತ್ತದೆ. ಚಿತ್ರರಂಗ ಸಮಾಜದ ಕನ್ನಡಿಯೇ ಹೊರತು ಅದರಿಂದಾಗಿಯೇ
ಸಂಸ್ಕೃತಿ ರೂಪುಗೊಳ್ಳುತ್ತದೆ ಎನ್ನುವುದು ಬರೀ ಪೊಳ್ಳು ಮಾತಾಗಿದೆ. ಹಾಗಿದ್ದಿದ್ದರೆ ಇವತ್ತು
ಕನ್ನಡಿಗರೆಲ್ಲಾ ಮಚ್ಚು ಲಾಂಗುಗಳ ಕ್ರಿಮಿನಲ್ಲುಗಳಾಗುತ್ತಿದ್ದರು! ಅಷ್ಟೇ.
ಇನ್ನು ಸಾವಿರಾರು ಜನರ
ಹೊಟ್ಟೆಪಾಡು ಎನ್ನುವ ಆತಂಕ ಡಬ್ಬಿಂಗ್ ವಿರೋಧಿಗಳದ್ದು. ಹಿಂದೆ ಸಾರಾಯಿ,
ಆನ್‌ಲೈನ್
ಲಾಟರಿಗಳು ನಿಷೇಧವಾದಾಗ ಸುಮಾರು ಮೂರುಲಕ್ಷ ಜನರು ಉದ್ಯೋಗ ಕಳೆದುಕೊಳ್ಳಬೇಕಾಯಿತು. ಅದರಿಂದ ಈಗ
ಏನಾಯಿತು? ಅವರೆಲ್ಲಾ ಪರ್ಯಾಯ ಉದ್ಯೋಗ
ಕಂಡುಕೊಳ್ಳಲಿಲ್ಲವೇ? ಈ ಹಿಂದೆ ಕಾಯಿನ್ ಬೂತುಗಳನ್ನು
ನಡೆಸುತ್ತಿದ್ದವರೆಲ್ಲಾ ಮೊಬೈಲು ಫೋನುಗಳು ಬರಬಾರದು ಎಂದು ಗೂಂಡಾಗಿರಿ ಮಾಡಿದ್ದರೆ
ಒಪ್ಪಲಾಗುತ್ತಿತ್ತೇ? ಹಾಗೇ ಡಬ್ಬಿಂಗ್ ಬೇಡ ಎನ್ನುವವರು ಸ್ಪರ್ಧೆ
ಎದುರಿಸಲಾಗದೆ ಈ ನಿಲುವಿಗೆ ಬಂದಿದ್ದಾರೆನ್ನುವುದೇ ವಾಸ್ತವ ಎನ್ನಿಸುತ್ತದೆ. ಇಲ್ಲದಿದ್ದರೆ
ಡಬ್ಬಿಂಗ್ ತಡೆಯಲು ಕಾನೂನುಬಾಹಿರ ದಾಳಿ, ಬೆದರಿಕೆಗಳಂತಹ
ಕ್ರಮಗಳಿಗೆ ಅವರು ಮುಂದಾಗುತ್ತಿರಲಿಲ್ಲ. ಒಟ್ಟಿನಲ್ಲಿ,
ಯಾವುದೇ
ಉದ್ದಿಮೆಯ ಉದ್ದೇಶವಾಗಿರುವ ಗ್ರಾಹಕನಿಗೆ ಮಾರುಕಟ್ಟೆಯಲ್ಲಿ ತನ್ನಿಷ್ಟದ ಸರಕುಗಳನ್ನು ಕೊಳ್ಳುವ
ಹಕ್ಕು ಇರಬೇಕು. ಪ್ರೇಕ್ಷಕನಿಗೆ ಡಬ್ಬಿಂಗ್ ಸಿನಿಮಾ ನೋಡುವ ಮೆಚ್ಚುವ ತಿರಸ್ಕರಿಸುವ ಹಕ್ಕು
ಇರಬೇಕು. ಕನ್ನಡ ಮನರಂಜನಾ ಕ್ಷೇತ್ರದಲ್ಲಿ ಅದಿಲ್ಲ! ಬರಬೇಕು! ಬರಲೇಬೇಕು!!
(ಪ್ರಜಾವಾಣಿ ದಿನಪತ್ರಿಕೆಯ ೨೮.೦೪.೨೦೧೨ರ ಸಂಚಿಕೆಯ ಅಂತರಾಳ ಪುಟದಲ್ಲಿ ಪ್ರಕಟವಾದ ಬರಹ)
2 ಅನಿಸಿಕೆಗಳು:
Intresting article!
ಈ ಚರ್ಚೆ ಬಹಳ ದಿನಗಳಿಂದ ನಡೆಯಿತ್ತಿದೆ, ಟಿ.ವಿಯಲ್ಲಿ ಕೂಡ ನೋಡಿದೆ. ನಿಮ್ಮ ವಾದಗಳಲ್ಲಿ ತೂಕ ಇದೆ, ಹಾಗೆ ಸಂವಿಧಾನದ ಬಗ್ಗೆ ಮಾತನಾಡಿದರೆ ಖಂಡಿತವಾಗಿಯೂ ನೀವೇ ಗೆಲ್ತೀರಿ. ಆದರೆ ಆತುರ ಪಟ್ಟು ಡಬ್ಬಿಂಗ್ ನಿಂದ ಆಗುವ ಪರಿಣಾಮಗಳ ಬಗ್ಗೆ ಸರಿಯಾಗಿ ಯೋಚನೆ ಮಾಡಿದಂತೆ ಕಾಣುವುದಿಲ್ಲ.
ನಮ್ಮ ಚಿತ್ರರಂಗ ಇನ್ನು ಹೆಚ್ಚು ಮುಂದುವರಿಯಬೇಕು, ಇನ್ನು ಒಳ್ಳೆ ಚಿತ್ರಗಳನ್ನ ಮಾಡಬೇಕು, success ರೇಟ್ ನ improve ಮಾಡಿಕೊಳ್ಳಬೇಕು ಅನ್ನುವುದರಲ್ಲಿ ಸಂದೇಹವಿಲ್ಲ. ಇದು ಮತ್ತೊಂದು ಚರ್ಚೆ.
ಆದರೆ, ಡಬ್ಬಿಂಗ್ ಬಂದ ಕೂಡಲೇ ಕರ್ನಾಟಕದಲ್ಲಿ ಕನ್ನಡಕ್ಕೆ ಒಳ್ಳೆಯದಾಗುತ್ತೆ ಅನ್ನುವ ವಾದ ಕೇಳೋಕೆ ಮಾತ್ರ ಚೆನ್ನ. ಹಳ್ಳಿ ಹಳ್ಳಿ ಗಳಲ್ಲಿ ಪರಭಾಷಾ ಚಿತ್ರಗಳು ನುಗ್ಗುತ್ತಿವೆ ಅನ್ನೋದೇನೋ ನಿಜ, ಬೇಸರವಾಗುತ್ತೆ, ಆದರೆ ಡಬ್ಬಿಂಗ್ ಬಂದರೆ ಪರಭಾಷಾ ಚಿತ್ರಗಳು ಕನ್ನಡಕ್ಕೆ ಡಬ್ ಆಗೇ ಆಗುತ್ತಾ? ಕರ್ನಾಟಕದ ಒಳ ಪ್ರದೇಶಗಳನ್ನು ಹೊರತುಪಡಿಸಿದರೆ ಗಡಿ ಭಾಗದಲ್ಲಿರುವ ಪ್ರದೇಶಗಳಲ್ಲಿ (ಬೆಂಗಳೂರನ್ನು ಸೇರಿಸಿ) ಚಿತ್ರಗಳು ಆಯಾ ಭಾಷೆಗಳಲ್ಲೇ ಬಿಡುಗಡೆ ಆಗುವುದರಲ್ಲಿ ಸಂದೇಹವೇ ಇಲ್ಲ. ಆಗ ಕನ್ನಡ ಉಳಿಸಲು ಮತ್ತಂದು ಕಾಯ್ದೆ ತರಬೇಕಾಗುತ್ತದೆ - ಕರ್ನಾಟಕದಲ್ಲಿ ಎಲ್ಲವೂ ಕನ್ನಡಕ್ಕೆ ಡಬ್ ಆಗಲೇ ಬೇಕು ಅನ್ನುವುದು. ಈ ಕಾಯ್ದೆಯನ್ನು ಪರಭಾಷಿಕರು ಒಪ್ಪುವುದಿಲ್ಲ ಮತ್ತು ಈ ಥರ ಕಾಯ್ದೆ ಸಂವಿಧಾನದ ಪ್ರಕಾರ ಎಷ್ಟು ಸರಿ ಆಗಿರುತ್ತದೆ?
ಈ ಪರಿಸ್ಥಿತಿಯಲ್ಲಿ ಕಂಠದಾನ ಕಲಾವಿದರನ್ನು ಹೊರತುಪಡಿಸಿದರೆ ನಮ್ಮ ಚಿತ್ರರಂಗ ಹಾಗು ಹೆಚ್ಚಾಗಿ ಕಿರುತೆರೆ ಸಂಕಷ್ಟದಲ್ಲಿ ಸಿಲುಕುತ್ತದೆ. ಇದರಿಂದಾಗಿ ಆ ಕಡೆನೂ ಇಲ್ಲ, ಈಕಡೆನೂ ಇಲ್ಲದಂತಾಗ ಬಹುದು ನಮ್ಮ ಪಾಡು.
ನನ್ನ ಪ್ರಕಾರ selective ಡಬ್ಬಿಂಗ್ ಗೆ ಅವಕಾಶ ನೀಡಬಹುದು. ಇದರಿಂದ ಉತ್ತಮ ಕಾರ್ಯಕ್ರಮಗಳು ಹೆಚ್ಚಾಗಿ ವಿದೇಶಿ ಕಾರ್ಯಕ್ರಮಗಳು CBeebies, Discovery Channel ಮತ್ತು ಇತರೆ ಮಕ್ಕಳ ಕಾರ್ಯಕ್ರಮಗಳನ್ನ ಕನ್ನಡಕ್ಕೆ ಡಬ್ ಮಾಡಬಹುದು. ಆದರೆ ಯಾವ criteria ದ ಪ್ರಕಾರ ಈ selective ಡಬ್ಬಿಂಗ್ ಮಾಡಬೇಕು ಅನ್ನುವುದು ನನಗೆ ಹೊಳೆಯುತ್ತಿಲ್ಲ.
ಈ ಚರ್ಚೆಯಿಂದ ಒಂದು ಮುಖ್ಯವಾದ ಅಂಶ ಹೊರಬರಬೇಕು ಎನ್ನುವುದು ನನ್ನ ಆಸೆ. ಡಬ್ಬಿಂಗ್ ಪರ ಮತ್ತು ವಿರೋಧ ಅಂತ ಗುಂಪುಗಾರಿಕೆ ಬೇಡ. ಡಬ್ಬಿಂಗ್ ಬೇಡ ಎನ್ನುವರು ಬರಿ ನಮ್ಮ ಕೆಲಸ ಹೋಗುತ್ತೆ ಅನ್ನುವುದು ಬಿಟ್ಟು, ಡಬ್ಬಿಂಗ್ ಬಂದರೆ ಕನ್ನಡಕ್ಕೆ ಒಳ್ಳೆಯದಾಗುತ್ತೆ ಅನ್ನುವುದು ಬಿಟ್ಟು, ಎರಡರಲ್ಲೊ ಇರುವ pros and cons ಪಟ್ಟಿ ಮಾಡಿ, ಕೊನೆಯದಾಗಿ ಯಾವ ಪದ್ಧತಿ ಯಾಕೆ ಇಟ್ಟುಕೊಳ್ಳಬೇಕು ಎನ್ನುವುದನ್ನ ಸ್ಪಷ್ಟವಾಗಿ ಮತ್ತು ಸಮಗ್ರವಾಗಿ ತಿಳಿಸಬೇಕು. ಇದನ್ನು ಚಿಂತಕರು ಮತ್ತು ತಜ್ಞರಿಗೆ ಒಪ್ಪಿಸಿ ಅವರ ಒಪ್ಪುಗೆ ಪ್ರಕಾರ ಎಲ್ಲರೂ ನಡದುಕೊಬೇಕು. ಸಂವಿಧಾನ, ಕೋರ್ಟು ಅಂತ ಹೋದರೆ ಹಾಳಾಗುವುದು ನಾವೇ, ವೈರತ್ವ, ದ್ವೇಷ ಹೆಚ್ಚಾಗುತ್ತದೆ. ಉಗುರಲ್ಲಿ ಹೋಗೋದಕ್ಕೆ ಕೊಡಲಿ ತಗೊಂದರಂತೆ ಅಂತ ಗಾದೇನೆ ಇಲ್ವೆ?
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!