ಸತ್ಯಮೇವ ಜಯತೇ ಅಂದ್ರೆ ದಿಟವೊಂದೇ ಗೆಲ್ಲೋದು ಅಂತಾ...



ಸ್ಟಾರ್ ಸಮೂಹದ ಅಂಗವಾಗಿರುವ ಸುವರ್ಣ ಕನ್ನಡ ವಾಹಿನಿಯವರು ಶ್ರೀ ಅಮೀರ್‌‍ಖಾನ್‌ರವರ ಅಮೀರ್‌ಖಾನ್ ಪ್ರೊಡಕ್ಷನ್ ಸಂಸ್ಥೆಯ "ಸತ್ಯಮೇವ ಜಯತೆ" ಕಾರ್ಯಕ್ರಮವನ್ನು, ಕನ್ನಡದಲ್ಲಿಯೂ ಡಬ್ ಮಾಡಿ ಪ್ರಸಾರ ಮಾಡುತ್ತಿದ್ದಾರೆ ಅನ್ನೋ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಯಿತು. ಈ ಕಾರ್ಯಕ್ರಮ ಪ್ರಸಾರವಾಗುತ್ತದೆ ಎನ್ನುವ ಸುದ್ದಿ ಬಂದ ಕೂಡಲೇ ಪ್ರಜಾಸತ್ತಾತ್ಮಕವಾಗಿ ಒಂದಷ್ಟು ಸಿನಿಮಾ/ಟಿವಿ ಮಂದಿ ಸುವರ್ಣ/ ಸ್ಟಾರ್ ಮುಖ್ಯಸ್ಥರನ್ನು ಭೇಟಿ ಮಾಡಿ ಅತ್ಯಂತ "ಪ್ರಜಾಸತ್ತಾತ್ಮಕ"ವಾದ ರೀತಿಯಲ್ಲಿ ಅವರನ್ನು ಡಬ್ಬಿಂಗ್ ಧಾರಾವಾಹಿ ಪ್ರಸಾರ ಮಾಡದಿರಲು ಒಪ್ಪಿಸಿ ಬಂದರಂತೆ. ಹೀಗೆ ಹೋದವರ ಕಣ್ಣಲ್ಲಿ "ಪ್ರಜಾಪ್ರಭುತ್ವ" ಅಂದ್ರೇ ಏನರ್ಥ ಅಂತಾ ತಿಳ್ಕೊಳ್ಳೋ ಕುತೂಹಲ! ಇರಲಿ.. ಈಗ ವಿಷಯದ ಬಗ್ಗೆ ಮಾತಾಡೋಣ ಗುರೂ!

ಜನರ ಅನಿಸಿಕೆ ಮತ್ತು ಚಿತ್ರರಂಗದ ನಿಲುವು! 

ನಮ್ಮ ನಾಡಲ್ಲಿ ಚಿತ್ರರಂಗದವರು (ಚಿತ್ರರಂಗದವರೆಂದರೆ ಚಲನಚಿತ್ರ ಮತ್ತು ದೂರದರ್ಶನಗಳ ಮಂದಿ) ಹೇಗೆ ಸಂಘ-ಸಂಸ್ಥೆಗಳನ್ನು ಕಟ್ಟಿಕೊಂಡಿರುವರೋ ಹಾಗೆ ಜನಸಾಮಾನ್ಯರಿಗೆ ಅಂಥಾ ವೇದಿಕೆಯಿಲ್ಲ ಎನ್ನುವುದು ವಾಸ್ತವ. ಹಾಗಾಗಿ ಜನರು ತಮಗೆ ಸಿಗುವ ಫ಼ೇಸ್‍ಬುಕ್ಕು, ಟ್ವಿಟ್ಟರ್, ಪತ್ರಿಕೆಗಳ ವಾಚಕರ ಪತ್ರಗಳ ಮೂಲಕ, ಅಲ್ಲಿ ಇಲ್ಲಿ ಮಿಂಬಲೆತಾಣಗಳಲ್ಲಿ ಚರ್ಚೆಗಳಲ್ಲಿ, ಅದರ ಮತದಾನದಲ್ಲಿ ತಮ್ಮ ಅಭಿಪ್ರಾಯ ಹೇಳಬಲ್ಲರು ಅಷ್ಟೆ. ಇನ್ನು ಚಿತ್ರರಂಗದ ಒಳಗಿನ ಅದೆಷ್ಟೊ ಜನರು, ಖಾಸಗಿಯಾಗಿ ಡಬ್ಬಿಂಗ್ ಪರವಾಗಿ ಮಾತನ್ನಾಡಿದರೂ ಬಹಿಷ್ಕಾರ/ ಪ್ರತಿಭಟನೆಗಳ ಭಯದಿಂದ ಸಾರ್ವಜನಿಕವಾಗಿ ಈ ಬಗ್ಗೆ ದನಿಯೆತ್ತಲಾರರು! ಇಂಥಾ ಸನ್ನಿವೇಶ ನಮ್ಮ ನಾಡಲ್ಲಿದ್ದು ಕನ್ನಡ ಚಿತ್ರರಂಗದೋರು ತಮ್ಮ ಸಂಘಟನೆಗಳನ್ನೇ ಬಂಡವಾಳ ಮಾಡಿಕೊಂಡು ಕಾನೂನುಬಾಹಿರವಾಗಿ ನಿಶೇಧವನ್ನು ಸಮರ್ಥಿಸುತ್ತಾ ಹೇಳೋ ಮಾತುಗಳು ಮಜವಾಗಿದೆ.  ನಮ್ಮ ನಾಯಕರೊಬ್ಬರು ಜನರೆನ್ನುವ ನಿಜವಾದ "ಅಭಿಮಾನಿ ದೇವರು"ಗಳನ್ನು "ಫೂಲುಗಳು" ಎನ್ನುತ್ತಿದ್ದರೆ, ಗಣ್ಯ ನಿರ್ದೇಶಕರೊಬ್ಬರು "ಡಬ್ಬಿಂಗ್ ಬೇಕೆನ್ನೋರು ಲಾಭಬಡುಕ ಕನ್ನಡ ದ್ರೋಹಿಗಳು" ಅಂತಾರೆ. "ಡಬ್ಬಿಂಗ್ ಮಾಡ್ಲಿ, ಅದೆಂಗೆ ಪ್ರಸಾರ ಮಾಡ್ತಾರೋ ನೋಡೇ ಬುಡ್ತೀವಿ" ಅಂದವರು ಮತ್ತೊಬ್ಬ ನಟಿಮಣಿ. ಒಟ್ನಲ್ಲಿ ಡಬ್ಬಿಂಗ್ ಎನ್ನುವ ‘ನುಡಿ ಉಳಿಸೋ ಅಸ್ತ್ರ’ವನ್ನು, ಸ್ಪರ್ಧೆ ಎದುರಿಸಲಾಗದ ಕೆಲಮಂದಿ ಹಿಂದೆಂದೋ ಆಗಿದ್ದ ನಿಶೇಧವನ್ನು ಮುಂದುವರೆಸಲು ಮಾಡಿರೋ ತಂತ್ರಗಳ ಸಾಲಿಗೆ ಈಗ ಇದಕ್ಕೆ "ಪ್ರಜಾಪ್ರಭುತ್ವ" ಎನ್ನುವ ನುಣುಪುಲೇಪ ಹಚ್ಚಲು ತೊಡಗಿದ್ದಾರೆ. ಇರಲಿ... ಇವರು ಯಾರಿಗೂ ಕೂಡಾ ತಾವು "ಜನಸಾಮಾನ್ಯರ ತಮ್ಮ ತಾಯ್ನುಡಿಯಲ್ಲಿ ಮನರಂಜನೆ ಪಡೆದುಕೊಳ್ಳುವ ಹಕ್ಕನ್ನು ಕಿತ್ತುಕೊಳ್ಳುತ್ತಿದ್ದೇವೆ" ಮತ್ತು ಅದು ಪಾಪ ಎನ್ನುವ ಪ್ರಜ್ಞೆಯೂ ಇಲ್ಲಾ. ಎಷ್ಟೆಂದರೂ ತಾವು ಉಳಿದರೆ ಸಾಕು... ನಾಡು ಹಾಳಾದರೇನು? ನಾಡಿನ ಜನಕ್ಕೆ ಅನ್ಯಾಯವಾದರೇನು? ಅಲ್ವಾ ಅನ್ನೋ ಮನಸ್ಥಿತಿ ಇವರದ್ದಿರುವಂತಿದೆ. ವಿಶ್ವಸಂಸ್ಥೆಯೂ ಕೂಡಾ ಡಬ್ಬಿಂಗ್ ಎನ್ನುವುದನ್ನು ಒಂದು ಭಾಷಿಕರಿಗೆ ತಮ್ಮ ಭಾಷೆಯನ್ನುಳಿಸಿಕೊಳ್ಳಲು ಇರುವ ಅಸ್ತ್ರವೆಂದೇ ಪರಿಗಣಿಸಿರುವ ಹಿನ್ನೆಲೆಯಲ್ಲಿ ನೋಡಿದರೆ ಚಿತ್ರರಂಗದ ಕೆಲಮಂದಿ ತಮ್ಮ ಸ್ವಹಿತಾಸಕ್ತಿಯ ಕಾರಣದಿಂದ, ಕಾನೂನುಬಾಹಿರವಾಗಿರುವ ಒಂದು ನಿಶೇಧವನ್ನು ಉಳಿಸಿಕೊಳ್ಳಲು ಶ್ರಮಿಸುವುದಕ್ಕೆ "ಪ್ರಜಾಪ್ರಭುತ್ವ"ದ ಮುಸುಕು ಹಾಕೋದು, "ಕನ್ನಡಪ್ರೇಮ"ದ ನೆಪ ಹೇಳೋದೂ ಹಾಸ್ಯಾಸ್ಪದವೇ ಆಗಿದೆ!

ಯಾರು ತೀರ್ಮಾನಿಸಬೇಕು? ಏನು ತೀರ್ಮಾನವಾಗಬೇಕು?

ಹಾಗೆ ನೋಡಿದರೆ ಡಬ್ಬಿಂಗ್ ಬೇಕಾ? ಬೇಡ್ವಾ? ಅನ್ನೋದು ಮತದಾನದಿಂದ ತೀರ್ಮಾನವಾಗೋ ಮಾತಲ್ಲವೇ ಅಲ್ಲ. ಹೀಗೆ ಮಾಡಬೇಕೂ ಅನ್ನೋದೇ... ಜೋಗಿ ಪುಸ್ತಕ ಬರೀಬೇಕೋ ಬೇಡ್ವೋ, ವಿಜಯಕರ್ನಾಟಕ ಪತ್ರಿಕೆ ಪ್ರಕಟವಾಗಬೇಕೋ ಬೇಡವೋ? ಪುನೀತ್ ಸಿನಿಮಾದಲ್ಲಿ ನಟಿಸಬೇಕೋ ಬೇಡವೋ?  ಸುರೇಶ್ ಸಿನಿಮಾ ನಿರ್ದೇಶನ ಮಾಡಬೇಕೋ ಬೇಡವೋ? ಅಂತಾ ಮತದಾನ ಮಾಡಿ ತೀರ್ಮಾನಿಸಬೇಕು ಎನ್ನುವಷ್ಟೇ ಮೂರ್ಖತನವಾಗುತ್ತದೆ. ಇವೆಲ್ಲವೂ ಮಾರುಕಟ್ಟೆಯಲ್ಲಿ ಹೇಗೆ ತಮ್ಮನ್ನು ತಾವು ಜನರ ಮುಂದೆ ನಿಂತು ಪರೀಕ್ಷೆಗೆ ಒಡ್ಡಿಕೊಂಡು ಜನರ ಮೆಚ್ಚುಗೆಗೆ ಅಥವಾ ತಿರಸ್ಕಾರಕ್ಕೆ ಎದೆಯೊಡ್ಡುತ್ತಾವೋ ಅಂಥದ್ದೇ ಅವಕಾಶ ಡಬ್ ಆಗಿರೋ ಸಿನಿಮಾಗಳಿಗೂ ಇರಬೇಕು... ಇದೇ ಸರಿಯಾದ ಮಾರ್ಗ! ಹಾಗಾದ್ರೆ ಬ್ಲೂಫಿಲಂ ತೆಗೀಬೋದಾ ಅನ್ನೋ ಮೊಂಡುವಾದವೂ ಬರುತ್ತೆ! ಸ್ವಾಮೀ... ‘ಅದು ಕಾನೂನು ಬಾಹಿರವಾಗಿದ್ದರೆ ತೆಗೆಯುವಂತಿಲ್ಲ! ಕಾನೂನು ಬಾಹಿರವಾಗಿಲ್ಲದಿದ್ದರೆ ತೆಗೆಯಬಹುದು’ ಎನ್ನುವುದು ಕಾನೂನಿನ ಪ್ರಾಥಮಿಕ ಜ್ಞಾನವಿರುವವರಿಗೆ ಅರ್ಥವಾಗೋ ವಿಷಯವಾಗಿದೆ. ಗ್ರಾಹಕನೇ ಬೇಕು ಬೇಡಾ ನಿರ್ಧಾರ ಮಾಡೋ ಅತಿದೊಡ್ಡ ವ್ಯಕ್ತಿ, ಶಕ್ತಿ. ಇದನ್ನು ಕೃತಕವಾಗಿ ನಿಶೇಧಗಳ ಮೂಲಕ ಕಟ್ಟಿ ಹಾಕೋದನ್ನು ಪ್ರಜಾಪ್ರಭುತ್ವವಾದಿಗಳು ಎಂದು ಹೇಳಿಕೊಳ್ಳುವವರೇ ಒಪ್ಪುವುದಾದರೆ ಸಾಮಾನ್ಯ ಜನರೂ ಸುಮ್ಮನಿರಲಾದೀತೇ?

ಈ ಪಿಟಿಶನ್ ಮೂಲಕ ದನಿ ಎತ್ತೋಣ!

ಮತದಾನವಲ್ಲದ ದಾರಿಯ ಮೂಲಕ ನಾವು ಎಚ್ಚೆತ್ತ ಗ್ರಾಹಕರು ಎನ್ನುವ ಸಂದೇಶವನ್ನು ನೀಡಲು... ನಮ್ಮ ಹಕ್ಕುಗಳನ್ನು ಇನ್ನು ದಮನಿಸಲಾಗದು ಎನ್ನುವುದನ್ನು ಸಾರಲು... ಎಲ್ಲಕ್ಕಿಂತಾ ಮುಖ್ಯವಾಗಿ ಸುವರ್ಣ/ ಸ್ಟಾರ್ ಸಮೂಹದವರಿಗೆ ಪ್ರೇಕ್ಷಕರಾದ ನಮ್ಮ ನಿಲುವು ತಿಳಿಸಲು, ‘ಪಟ್ಟಭದ್ರರ ಬೆದರಿಕೆಗೆ ಬಾಗಬೇಡಿರೆಂದೂ ನಿಮ್ಮೊಂದಿಗೆ ನಾವಿದ್ದೇವೆಂದೂ’ ಸಾರಲು ಈ ಒಂದು ಮಿಂಬಲೆ ಮನವಿ("ಆನ್‍ಲೈನ್ ಪಿಟಿಶನ್")ಯನ್ನು ಸಮಾನ ಮನಸ್ಕರು ಆರಂಭಿಸಿದ್ದೇವೆ. ಜಾಗೃತ ಗ್ರಾಹಕರು ಎನ್ನುವ ಹೆಸರಿನಲ್ಲಿ ನಾವು ಇದನ್ನು https://www.change.org/petitions/suvarna-tv-telecast-satyameva-jayate-in-kannada ಮಿಂಬಲೆ ತಾಣದಲ್ಲಿ ಹಾಕಿದ್ದೇವೆ. ದೂರದರ್ಶನ/ ಚಿತ್ರರಂಗದ ಕೆಲಸಂಘಟನೆಗಳ ಜನವಿರೋಧಿ ಹಾಗೂ ಸರ್ವಾಧಿಕಾರಿ ಧೋರಣೆಯನ್ನೂ ಖಂಡಿಸುತ್ತಾ, ನಮ್ಮ ‘ತಾಯ್ನುಡಿಯಲ್ಲಿನ ಮನರಂಜನೆಯ ಹಕ್ಕಿ’ಗಾಗಿ ದನಿ ಎತ್ತೋಣ. ಈ ಮನವಿಗೆ ನೀವೂ ಸಹಿ ಹಾಕಿ, ನಿಮ್ಮ ಗೆಳೆಯರಿಗೂ ಸಹಿ ಹಾಕಲು ಹೇಳಿ. ಇದನ್ನು ಸಂಬಂಧಪಟ್ಟವರಿಗೆ ತಲುಪಿಸುವ ಕೆಲಸವನ್ನು ನಾವು ಮಾಡುತ್ತೇವೆ. ಕನ್ನಡ ಕನ್ನಡಿಗ ಕರ್ನಾಟಕಗಳ ಒಳಿತಿಗೆ ಡಬ್ಬಿಂಗ್ ಚಿತ್ರಗಳು ಪೂರಕವಲ್ಲವಾಗಬಲ್ಲುವೇ ಹೊರತು ಮಾರಕವಲ್ಲಾ ಎನ್ನುವ ದಿಟವೇ ಗೆಲ್ಲಲಿ!!

12 ಅನಿಸಿಕೆಗಳು:

ಗಿರೀಶ್ ಕಾರ್ಗದ್ದೆ ಅಂತಾರೆ...

ಸರಿಯಾಗಿ ಹೇಳಿದೀಯ ಗುರು...ಪ್ರಜಾಪ್ರಭುತ್ವ ಅಂತೆ! ಪ್ರಜಾಸತ್ತಾತ್ಮಕವಾಗಿ ನಿಷೇದ ಮಾಡ್ತಾರಂತೆ. ಇವರ ಚಿತ್ರಗಳನ್ನು ಬೇರೆ ಭಾಷೆಗೆ ಡಬ್ ಮಾಡಿ ಕಾಸು ಮಾಡ್ಕೊತಾರಂತೆ, ಇಲ್ಲಿ ಮಾಡಿದ್ರೆ ಕಾರ್ಮಿಕರ ಅನ್ನಕ್ಕೆ ಕಲ್ಲು ಬೀಳುತ್ತಂತೆ. ರಿಮೇಕ್ ಮಾಡೋ ಇವರ ಸೃಜನಶೀಲತೆ(!) ನಶಿಸಿ ಹೋಗುತ್ತಂತೆ. ಇವರು ಮಾಡೋ ಘನಂದಾರಿ ಕೆಲಸಕ್ಕೆ 'ಕನ್ನಡಾಭಿಮಾನ' ಅನ್ನೋ ಸೋಗು ಬೇರೆ!

generalsagar ಅಂತಾರೆ...

ಡಬ್ಬಿಂಗ್ ನಿಷೇಧವನ್ನ ನಾನು ವಿರೋಧಿಸುತ್ತೇನೆ. ಹಾಗೇ ಈ ಕಾರ್ಯಕ್ರಮದ ಪ್ರಚಾರವನ್ನೂ ಸಹ ವಿರೋಧಿಸುತ್ತೇನೆ.

ಈಶ್ವರ ಅಂತಾರೆ...

ನಮ್ಮ ಸೃಜನಾತ್ಮಕತೆಯನ್ನ ತೋರುವುದೇ ಈ ವಿರೋಧದ ಉದ್ದೇಶ ಆದರೆ, ಡಬ್ಬಿಂಗಿಗೆ ಅವಕಾಶವಿರುವ ಬೇರೆ ಚಿತ್ರ ಉದ್ಯಮಗಳನ್ನ ನೋಡಬೇಕು. ಮಲಯಾಳಂ ತಮಿಳು ತೆಲುಗು ಭಾಷೆಗಳನ್ನು ಅನಿವಾರ್ಯ ಮಾಡಿಸುವ ಈ ನಿರ್ಣಯಕ್ಕೆ ನನ್ನ ಸಹಮತ ಅಂತೂ ಇಲ್ಲ.

Suvarna Times of Karanataka ಅಂತಾರೆ...

ಸರ್ ನಿಶೇಧ ಎಂಬ ಪದವನ್ನು (ನಿಷೇಧ)ಈ ರೀತಿಯಾಗಿ ಬರೆಯಬೇಕು ಅಲ್ವಾ ಸರ್

Vijay Kumar ಅಂತಾರೆ...

ಸಿನೆಮಾ/ಟಿವಿಯಲ್ಲಿ ಡಬ್ಬಿಂಗ್ ಬೇಡ ಅನ್ನೋದೇ ಆದ್ರೆ, ಕನ್ನಡದಲ್ಲಿ ಅನುವಾದ ಸಾಹಿತ್ಯವನ್ನೂ ನಿಶೇಧಿಸಬೇಕು. ಸಿನೆಮಾ/ಟಿ.ವಿಯಲ್ಲಿ ಬಳಕೆಯಿಂದ ಕನ್ನಡ ಹಾಳಾಗೋದಾಗಲೀ, ಉಳಿಯೋದಾಗಲಿ ಆಗಲಿಕ್ಕೆ, ಕನ್ನಡ ಅಷ್ಟು ಚಿಲ್ಲರೆ ವಿಷಯವೇನು? ಕೊಡು-ಕೊಳ್ಳುಗೆಯಿಲ್ಲದ ಭಾಷೆ, ಹೊಸ ಪ್ರಯೋಗಗಳಿಂದ ಜಾಗತಿಕವಾಗದ ಭಾಷೆಗೆ ಸಾವು ಕಟ್ಟಿಟ್ಟದ್ದು. ಕನ್ನಡ ಉಳಿಸುವ ಸೋಗಿನಲ್ಲಿ ತಮ್ಮ ವ್ಯಾಪಾರೀ ಹಿತದೃಷ್ಟಿ ನೋಡುತ್ತಿರುವವರ ಕಪಿಮುಷ್ಟಿಯಿಂದ ಮಾಧ್ಯಮವನ್ನು ಬಿಡಿಸುವುದು ಅಗತ್ಯ.

harsha ಅಂತಾರೆ...

dubbing beda antha heloru, bere desha mathu rajya da artists galu inna mele kannada dalli dubbing artists na use mada baradu.. hange yella content na karnataka dalli kannadigaru mathra develop mada beku antha rule mada beku..
illa andre, muktha marukatte.. consumer is king.. namage content na kannada dalli kodabeku , adu bittu nammana bere bashe kaliri annodu tappu..

karunadu ಅಂತಾರೆ...

dubbing ban inda makkaLu bere baashe kalita idaare...hora raajyadinda baro janara jothe avara bhaasheyalle maataDtaare....heegadaaga nam bhaashe baLake kaDme aagatte...idakkintha hecchaagi discovery,national geogrphc,history channel,animal planet,pogo,cartoon network antaha vaahini gaLalli baruva oLLe karyakramagalu makkaLu nodi artha madkobahudu.......

Admin ಅಂತಾರೆ...

ಯಾಕೆ ಇದನ್ನು ಕಾನೂನಿ ಮುಕಾಂತರ್ ಬಗೆಹರಿಸಬಾರದು. ಯಾಕೇ ಕನ್ನಡ ರಕ್ಷಣಾ ವೇದಿಕೆಯವರು ಮತ್ತು ಉಳಿದ ಕನ್ನಡ ಸಂಗಸ೦ಸ್ಥೆಗಳು ದೊಡ್ಡ ಹೋರಾಟ ಮಾಡಬಾರದು.?

Admin ಅಂತಾರೆ...

ಇದಕ್ಕೆ ಒಂದು ಪರಿಹಾರವಿದೆ. ಯಾರು ಡಬ್ಬಿಂಗ್ ಬೇಡ ಎಂದು ಬೊಬ್ಬೆ ಹೊಡಿತಾ ಇದ್ದಾರೆ ಅಂತವರ ಫಿಲ್ಮ್ಸ್ ನೋಡದು ನಿಷೇಧ ಮಾಡಿ.

maaysa ಅಂತಾರೆ...

ಡಬ್ ಮಾಡಕ್ಕೆ ಎಲ್ಲ ಪ್ರೊಗ್ರಾಮ್-ಗಳನ್ನೂ ಆಗಲ್ಲ 

ಆದರೆ, ಇಟಲಿ, ಆಸ್ಟ್ರಿಯ ದೇಶದಲ್ಲಿ ಇರೋ ಹಾಗೆ ಬರೀ ಡಬ್ ಮಾಡಿದ ವರ್ಶನ್ ಮಾತ್ರ ಟೀವಿ ಹಾಗು ಥಿಯೇಟರ್ ಅಲ್ಲಿ ತೋರಿಸಬೇಕು ಅಂತ, ಒತ್ತಾಯ ಮಾಡೋದನ್ನು ವಿರೋಧಿಸ್ತೀನಿ.

ENDHENDHIGU KANNADA ಅಂತಾರೆ...

ಡಬ್ಬಿಂಗ್ ಬೇಡ ಅನ್ನುವವರಿಗೆ ಬಹಿರಂಗ ಪತ್ರ !!
ಕನ್ನಡಿಗ ಮತ್ತು ಕನ್ನಡ ಇರುವುದರಿಂದನೇ ಕನ್ನಡ ಚಿತ್ರ ರಂಗ ನೆನಪಿಟ್ಟುಕೊಳ್ಳಿ !ಅದಕ್ಕೆ ಅಣ್ಣಾವ್ರು ಅಭಿಮಾನಿಗಳನ್ನೂ ದೇವರುಗಳು ಅಂತ ಕರೆಯೋದು.

೧.ಡಿಸ್ಕವರಿ,ಪೋಗೋ,ಕಾರ್ಟೂನ್ ನೆಟ್ವರ್ಕ್,ಹಿಸ್ಟರಿ,ಅನಿಮಲ್ ಪ್ಲಾನೆಟ್,.ಎಚ್ ಬೀ ಓ .ಇನ್ನಿತರ ಜ್ಞಾನವನ್ನು ಬಿತ್ತರಿಸುವ ಚಾನೆಲ್ಗಳು,ಕಾರ್ಯಕ್ರಮಗಳು ಕನ್ನಡದಲ್ಲಿ ನೋಡಿದರೆ ತಪ್ಪಾ?ಈಗಾಗಲೇ ತಮಿಳು ತೆಲುಗು ,ಹಲವು ಭಾಷೆಗಳಲ್ಲಿ ಹಲವು ಮನೋರಂಜನಾ ಕಾರ್ಯಕ್ರಮಗಳು ಮತ್ತು ಚಾನೆಲ್ಗಳು ಬಿತ್ತರ ಗೊಂಡಿದೆ ಹಾಗಾದರೆ ಆ ತೆಲುಗು ತಮಿಳು ಚಿತ್ರರಂಗ ಸಾಯೋಲ್ವಾ?!

೨.ಕನ್ನಡದಲ್ಲಿ ಸ್ವಮೇಕ್ ಮತ್ತು ಅವಿಷ್ಕಾರಯುತ ಕನ್ನಡ ಸಿನೆಮಾ ಮಾಡಿದ್ರೆ ಯಾರು ನೋಡೋಲ್ಲ ಹೇಳಿ ?ಬರೀ ರಿಮೇಕ್ ಮಾಡೋದೇ ಆಗೋಯ್ತು ?

೩.ಈ ತರಹ ಜ್ಞಾನ ಬಿತ್ತರಿಸುವ ಕಾರ್ಯಕ್ರಮಗಳು ,ಚಾನೆಲ್ಗಳು ಡಬ್ ಆದ್ರೆ ಕನ್ನಡದ ಭಾಷೆ ಬೆಳೆಯುತ್ತೆ ಇದು ೧೦೦೦೦೦೦%%%% ಸತ್ಯ ಮತ್ತು ತಮ್ಮದೇ ಭಾಷೆಯಲ್ಲಿ ಜ್ಞಾನ ಪಡಕೊಬಹುದು....ಅದನ್ನ ವಿರೋಧಿಸುವುದಕ್ಕೆ ಈ ಡಬ್ಬ ನನ್ಮಕ್ಳು ಯಾರು ???

೪.ಕನ್ನಡ ಚಿತ್ರ ರಂಗದಿಂದ ಏನು ಕನ್ನಡ ,ಕನ್ನಡಿಗರು ಹುಟ್ಟಿಲ್ಲ !.ಡಬ್ಬಿಂಗ್ ಬೇಡ ಅನ್ನುವವರಿಗೆ ಎಷ್ಟು ಕನ್ನಡ,ಕನ್ನಡಿಗರ ಕಾಳಜಿ ಇದೆ ಹೇಳಿ ?ಎಲ್ಲಾ ಹಣಕ್ಕೋಸ್ಕರ !!ಬರೀ ಸ್ವಾರ್ಥಿಗಳು !!

೫.ಇಂತಹ ಮಹಾ ಕುರುಡು ಜನರಿಂದಲೇ ಈ ಕನ್ನಡ ಭಾಷೆ ಸೊರಗಿ ಸಾಯುತ್ತಿದೆ.

೬.ಇಂತಹ ಕುರುಡು ಮೂರ್ಖ ಜನರಿಂದಲೇ ಕನ್ನಡ ಮನೋರಂಜನಾ ಕ್ಷೇತ್ರಾ ಅಸ್ಥಿಪಂಜರವಾಗುತ್ತಿದೆ ...

೭.ಒಳ್ಳೊಳ್ಳೆ ಕಾರ್ಯಕ್ರಮಗಳನ್ನ,ಸಿನೆಮಾಗಳನ್ನ ಸ್ವಂತವಾಗಿ ಕನ್ನಡದಲ್ಲಿ ,ಕ್ರೀಯಾತ್ಮಕವಾಗಿ ಮಾಡಿದ್ರೆ ಎಲ್ಲರು ನೋಡ್ತಾರೆ.ಅವಾಗ ಯಾವ ಕಲಾವಿದನು ಬೀದಿಗೆ ಬೀಳೋಲ್ಲ !.

೮.ನಿಮ್ಮ ನಿಮ್ಮ ಸ್ವಾರ್ಥಗಲಿಗೊಸ್ಕರ ಕನ್ನಡ ಮತ್ತು ಕನ್ನಡ ಮನೋರಂಜನ ಕ್ಷೇತ್ರವನ್ನು ಕೊಲ್ಲಬೇಡಿ,,

S Prashanth ಅಂತಾರೆ...

ಸ್ವಾಮಿ, ಲೇಖನ ಬರೆದವರು ಸರಿಯಾಗಿಯೇ ಬರೆದಿದ್ದಾರೆ. ಕೆಲವು ಸ್ವಾರ್ಥ ಮನೋಭಾವ ಹೊಂದಿರುವ ವ್ಯಕ್ತಿಗಳಿಂದ ಈ ಕನ್ನಡ ನಾಡು ಉಳಿಸುವ ಹೋರಾಟದ ಮುಕವಾಡ ಕಿತ್ಹೊಗೆಯಲು ಈ ಹೋರಾಟಕ್ಕೆ ನಮ್ಮ ಬಹುಮತ. ನಿಜ ಹೇಳಬೇಕೆಂದರೆ ನಾನು ಅವರಿಗೆ ತುಂಬ ಧನ್ಯ... ಏಕೆಂದರೆ ನಾನು ಇಗ ಬಹುಭಾಷಾ ಪ್ರವೀಣ ಮತ್ತು ಕನ್ನಡದಲ್ಲಿ ನೋಡಲಿಕ್ಕೆ ಆಗದ ಚಲನಚಿತ್ರಗಳನ್ನೂ ಬೇರೆ ಭಾಷೆಯಲ್ಲಿ ನೋಡಿ ಇಂದು ಕನ್ನಡ ಬಿಟ್ಟು ಬೇರೆ ಬಾಷೆಯ ಚಲನಚಿತ್ರಗಳನ್ನೂ ಮಾತ್ರ ನೋಡುವ ಪರಿಸ್ತಿತಿ ತಲುಪ್ಪಿದ್ದೇವೆ. ಮುಂದಾದರು ಈ ಪರಿಸ್ತಿತಿ ಬದಲಾಗಲಿ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails