ಡಬ್ಬಿಂಗ್ ಕನ್ನಡಕ್ಕೆ ಬರಬೇಕು ಎನ್ನುವ ದನಿಗಳು ಇದೀಗ ಬಲ ಪಡೆದುಕೊಳ್ಳುತ್ತಿದ್ದು ಜನಪರ ಸಂಘಟನೆಗಳು ಈ ನಿಲುವಿಗೆ ಸಹಮತ ತೋರುತ್ತಿರುವುದನ್ನು ನಾವು ಕಾಣಬಹುದು. ಡಬ್ಬಿಂಗ್ ಬರುವುದರಿಂದ ಕೆಲಸ ಕಳೆದುಕೊಳ್ಳುತ್ತೇವೆಂಬ ದಿಗಿಲಿನಿಂದ ನಲುಗುತ್ತಿರುವ ಚಿತ್ರರಂಗದ ಒಂದು ವರ್ಗ ಒಂದೆಡೆಯಾದರೆ ಕನ್ನಡ ಸಂಸ್ಕೃತಿಯ ಅಳಿವು ಡಬ್ಬಿಂಗ್‌ನಿಂದಾಗುತ್ತದೆ ಎನ್ನುವ ನಿಲುವಿನ ಕೆಲವು ಹಿರಿಯರು ಇನ್ನೊಂದೆಡೆ... ಇದು "ಡಬ್ಬಿಂಗ್ ಬೇಡ" ಎನ್ನುವ ಪಕ್ಷದೊಳಗಿನ ಪ್ರಮುಖ ಪಂಗಡಗಳು. ಡಬ್ಬಿಂಗ್ ಕೇವಲ ಫೇಸ್‌ಬುಕ್ಕಿಗರಿಗೆ ಬೇಕೆನ್ನೋ ಹಾದಿ ತಪ್ಪಿಸೋ ಮಾತಾಡ್ತಿರೋ ಚಿತ್ರರಂಗದವರು, ಯಾವ ಆಧಾರದ ಮೇಲೆ ಡಬ್ಬಿಂಗ್ ಆರು ಕೋಟಿ ಜನರಿಗೆಲ್ಲಾ ಬೇಡಾ ಎಂದು ಹೇಳುತ್ತಿದ್ದಾರೆ ತಿಳಿಯುತ್ತಿಲ್ಲ. ಫೇಸ್‌ಬುಕ್ಕಿನಲ್ಲಿ ಚರ್ಚೆ ಮಾಡುವವರು ನೂರಾರು ಜನರಿರಬಹುದು... ಪಿಟಿಷನ್‌ಗೆ ಸಾವಿರಾರು ಜನರು ಸಹಿ ಹಾಕಿರಬಹುದು, ಅಂತರ್ಜಾಲದಲ್ಲಿ ಡಬ್ ಆದ ಸತ್ಯಮೇವ ಜಯತೇ ನೋಡಿದ ಮೂವತ್ತು ಸಾವಿರ ಜನರಿರಬಹುದು ಅಥವಾ ಪತ್ರಿಕೆಗಳಿಗೆ ಪತ್ರ ಬರೆಯುತ್ತಿರುವ, ಕೆಲವೆಡೆಗಿನ ಮತದಾನಗಳಲ್ಲಿ ಡಬ್ಬಿಂಗ್ ಬೇಕೆಂದು ಮತನೀಡುತ್ತಿರುವ ಮತ್ತಷ್ಟು ಜನರಿರಬಹುದು, ಚಿತ್ರರಂಗದ ಒಳಗಿದ್ದೇ ಬಹಿರಂಗವಾಗಿ ದನಿಯೆತ್ತಿರುವ ಬೆರಳೆಣಿಕೆಯವರಿರಬಹುದು... ಈ ಎಲ್ಲಾ ಒಟ್ಟಾಗಿ ಪ್ರತಿನಿಧಿಸುತ್ತಿರುವುದು ಕನ್ನಡ ಜನತೆಯನ್ನೇ ಅಲ್ಲವೇ? ಸಮತಾ ಸೈನಿಕ ದಳವಾಗಲೀ, ಕರ್ನಾಟಕ ರಾಜ್ಯ ರೈತ ಸಂಘವಾಗಲೀ ಜನರನ್ನು ಪ್ರತಿನಿಧಿಸುತ್ತಿಲ್ಲವೇ? ಇವೆಲ್ಲಾ ಕಾಣುತ್ತಿದ್ದರೂ ಇವರಿಗೆ ಬಹುಷಃ ಕನ್ನಡಿಗರೆಲ್ಲಾ "ನಮಗೆ ಡಬ್ಬಿಂಗ್ ಬೇಕು" ಎಂದು ಬರೆದು ಕೇಳಿಕೊಳ್ಳಬೇಕೇನೋ...?! ಇಷ್ಟಕ್ಕೂ ಮಾರುಕಟ್ಟೆಯಲ್ಲಿ ಸಿನಿಮಾಗಳನ್ನು ಗೆಲ್ಲಿಸುವ ಅಥವಾ ಸೋಲಿಸುವ ಮೂಲಕ ನೀಡುವ ಉತ್ತರ ಸಾಲದೇ? ಡಬ್ ಆದವೂ ಕೂಡಾ ಇದೇ ಪ್ರಕ್ರಿಯೆಗೆ ಒಳಗಾಗುವ ಅವಕಾಶ ಇರಬೇಕಲ್ಲವೇ?
ವಾಸ್ತವವಾಗಿ ‘ಡಬ್ಬಿಂಗ್ ಎನ್ನುವುದು ಭಾಷೆಯನ್ನು ಉಳಿಸುವ ಸಾಧನ’ವೆನ್ನುವ ವಿಶ್ವಸಂಸ್ಥೆಯ ನಿಲುವಿನ ಹಿನ್ನೆಲೆಯಲ್ಲಿ ನಾವು ಇಡೀ ಪ್ರಕರಣವನ್ನು ನೋಡಬೇಕಾಗಿದೆ. ನಾಳೆ ಡಬ್ಬಿಂಗ್ ಬರುವುದರಿಂದ ಕನ್ನಡ ನಾಡಿಗೆ ಕೆಟ್ಟಾ-ಕೊಳಕಾ ಕಾರ್ಯಕ್ರಮಗಳು ದಾಳಿಯಿಡುತ್ತವೆ ಎನ್ನುವ ಆತಂಕ ನಿಜವಾಗಲೂಬಹುದು! ಆದರೆ ಇದು ವರ್ಷಗಳಿಂದ ಮುಚ್ಚಲಾಗಿದ್ದ ಅಣೆಕಟ್ಟೆಯ ತೂಬು ತೆರೆದಾಗ ಮೊದಲು ನುಗ್ಗುವ ಕಸದಂತೆಯೇ ಇರುತ್ತದೆ. ಕನ್ನಡ ಜನರು ಇಂಥಾ ಕಸ ಕಡ್ಡಿಗಳನ್ನು ಮಾರುಕಟ್ಟೆಯಲ್ಲಿ ಸೋಲಿಸುವ ಮೂಲಕ ಮುಂದೊಮ್ಮೆ ಒಳ್ಳೆಯವಕ್ಕೆ ಮಾತ್ರಾ ಗೆಲುವು ತಂದುಕೊಟ್ಟಲ್ಲಿ ಈ ಬಾಧೆ ನಿವಾರಣೆಯಾಗುತ್ತದೆ. ಈ ಮಾತಿಗೆ ಇಂದು ನೆರೆಯ ತಮಿಳು ತೆಲುಗು ಚಿತ್ರರಂಗಗಳಲ್ಲಿ ಡಬ್ ಆಗುತ್ತಿರುವ ಚಿತ್ರಗಳ ಪ್ರಮಾಣವೇ ಸಾಕ್ಷಿಯಾಗಿದೆ. ಅಲ್ಲಿ ವರ್ಷಕ್ಕೆ ಇಪ್ಪತ್ತಕ್ಕಿಂತಾ ಕಡಿಮೆ ಸಿನಿಮಾಗಳು ಡಬ್ ಆಗೋದನ್ನು ನಾವು ನೋಡಬಹುದು! ಡಬ್ಬಿಂಗ್ ಅಧಿಕೃತವಾದಾಗ ಅಲ್ಲೂ ಗುಣಮಟ್ಟದ ಸಂಭಾಷಣೆ, ದನಿಲೇಪನಗಳು ನಡೆಯಬಹುದು!!
ಆದರೆ ಡಬ್ಬಿಂಗ್ ಬರುವುದರಿಂದ ನೇರವಾಗಿ ಆಗುವ ಬದಲಾವಣೆಗಳು ಅತ್ಯಂತ ಉಪಕಾರಿಯಾದುವಾಗುವ ಸಾಧ್ಯತೆಗಳೇ ಹೆಚ್ಚು! ಕನ್ನಡದಲ್ಲಿ ಪೋಗೋ, ಕಾರ್ಟೂನ್ ನೆಟ್‌ವರ್ಕ್ ಮೊದಲಾದ ಮೂಲತಃ ಮಕ್ಕಳನ್ನು ಸೆಳೆಯುವ ವಾಹಿನಿಗಳು ಕನ್ನಡದಲ್ಲಿ ಬರಬೇಕಾಗಿದೆ. ಜ್ಞಾನ ಹೆಚ್ಚಿಸುವ ಹಿಸ್ಟರಿ, ಡಿಸ್ಕವರಿ, ನ್ಯಾಶನಲ್ ಜಿಯಾಗ್ರಫಿ ಮೊದಲಾದ ವಾಹಿನಿಗಳು ಕೂಡಾ ಕನ್ನಡದಲ್ಲಿರುವುದು ಕನ್ನಡಿಗರ ಅರಿಮೆಯ ಮಟ್ಟ ಹೆಚ್ಚಿಸಲು ಸಹಕಾರಿ. ಅಂತೆಯೇ ಹಲವಾರು ಜನಪ್ರಿಯ/ ಗುಣಮಟ್ಟದ ಪರಭಾಷಾ ಚಿತ್ರಗಳು ಕನ್ನಡಕ್ಕೆ ಬರುವುದು ಕೂಡಾ ಸಹಕಾರಿ. ಇವೆಲ್ಲಾ ಬೆಳವಣಿಗೆಗಳು ನೇರವಾಗಿ ಕನ್ನಡಿಗರನ್ನು ಕನ್ನಡಕ್ಕೆ ಅಂಟಿಕೊಳ್ಳುವಂತೆ ಮಾಡುವುದರಲ್ಲಿ ಸಂದೇಹವಿಲ್ಲ! ಜೊತೆಗೇ ಕನ್ನಡದಲ್ಲೇ ಸುಲಭವಾಗಿ ಅರಿವು ಸಿಗಲು ಇವು ಸಹಕಾರಿಯಾಗಲಿವೆ!!
ಕನ್ನಡ ಕಲಾವಿದರು ಕೆಲಸ ಕಳೆದುಕೊಳ್ಳಲಿದ್ದಾರೆ ಎನ್ನುವ ಮಾತು ನಿಜವೋ ಸುಳ್ಳೋ ತೀರ್ಮಾನವಾಗುವುದು ಕನ್ನಡ ಚಿತ್ರರಂಗ ಸ್ಪರ್ಧೆಯನ್ನು ಹೇಗೆ ಎದುರಿಸಲಿದೆ ಎನ್ನುವುದರ ಮೇಲೆ. ಡಬ್ಬಿಂಗ್‌ಗೆ ಅವಕಾಶವಾಯಿತೆಂದು ಕನ್ನಡ ಚಿತ್ರ ತೆಗೆಯುವುದನ್ನು ನಿರ್ಮಾಪಕರು ನಿಲ್ಲಿಸಿಯೇ ಬಿಡುತ್ತಾರೆ ಎನ್ನುವುದಾಗಲೀ... ಈಗಿನಷ್ಟೇ ಸಂಖ್ಯೆಯ ಚಿತ್ರಗಳು ಬರುತ್ತವೆ ಎನ್ನುವುದಾಗಲೀ ಕೇವಲ ಊಹೆಯ ಮಾತಾಗುತ್ತದೆ. ವಾಸ್ತವವಾಗಿ ಈ ಎರಡೂ ಸ್ವಲ್ಪ ಸ್ವಲ್ಪ ಆಗುವ ಸಾಧ್ಯತೆಗಳಿದ್ದು ಸ್ಪರ್ಧೆಯ ಕಾರಣದಿಂದ ಗುಣಮಟ್ಟದ ಚಿತ್ರಗಳು ಖಂಡಿತಾ ಬರುತ್ತವೆ ಎನ್ನಬಹುದು. ರಿಮೇಕು ಚಿತ್ರಗಳು ಕಡಿಮೆಯಾಗಬಹುದು! ಇವತ್ತೂ ಕೂಡಾ ತಯಾರಾಗುವ ೧೨೦+ ಚಿತ್ರಗಳಲ್ಲಿ ಗೆಲ್ಲುವುದು/ ಬಂಡವಾಳ ವಾಪಸ್ಸು ತರುವುದು ಕೆಲವೇ ಚಿತ್ರಗಳು ಎನ್ನುವಾಗ ಹಣ ಕಳೆದುಕೊಳ್ಳುವ ನಿರ್ಮಾಪಕರ ಸಂಖ್ಯೆ ಕಮ್ಮಿಯಾಗಬಹುದು ಅಷ್ಟೇ! ಆದರೆ ನೋಡುಗನಿಗೆ ಇದರಿಂದ ಲಾಭವೇ ಹೆಚ್ಚು. ಕನ್ನಡದ ಜನರು ತಮಗೆ ಬೇಕಾದ ಯಾವುದೇ ಭಾಷೆಯ ಚಿತ್ರವನ್ನು ತಮ್ಮದೇ ಭಾಷೆಯಲ್ಲಿ ನೋಡುವ ಸೌಲಭ್ಯವನ್ನು ಪಡೆದುಕೊಳ್ಳುತ್ತಾರೆನ್ನುವುದು ಮಾತ್ರಾ ಹದಿನಾರಾಣೆ ಸತ್ಯಾ!! ಇನ್ನು ಕನ್ನಡ ಕಿರುತೆರೆಯಲ್ಲಿ ಮೂಲ ಧಾರವಾಹಿಗಳು ನಿಲ್ಲುತ್ತವೆಯೋ, ಪರಭಾಷೆಯಿಂದ ರಿಮೇಕ್ ಆಗುವ ಧಾರಾವಾಹಿಗಳು ನಿಂತು ಮೂಲ ಕನ್ನಡದ ಸೊಗಡಿನ ಈ ನೆಲದ ಕಥೆಯ ಧಾರಾವಾಹಿಗಳು ಮಾತ್ರಾ ಉಳಿಯುತ್ತವೆಯೋ ಎನ್ನುವುದೂ ಕೂಡಾ ಬಲ್ಲವರಿಲ್ಲ! ಸ್ಪರ್ಧೆಯನ್ನು ಹೇಗೆ ಎದುರಿಸುತ್ತೇವೆ ಎನ್ನುವುದರ ಮೇಲೆ ಇದು ತೀರ್ಮಾನವಾಗಲಿದೆ. ಏನೆಂದರೂ ಕನ್ನಡದ್ದೇ ಮೂಲದ ಮೂಡಲಮನೆ, ಮುಕ್ತಾಮುಕ್ತಾ, ಗುರುರಾಘವೇಂದ್ರ ವೈಭವ ರೀತಿಯ ಧಾರಾವಾಹಿಗಳೆಲ್ಲಾ ನಿಂತುಬಿಡುತ್ತವೆ ಎನ್ನುವುದು ನಂಬಲಾಗದ ಮಾತು! ಇಲ್ಲೂ ಕೂಡಾ ನೋಡುಗನಿಗೆ ಗುಣಮಟ್ಟದ ಹೊಸತನದ ಕಾರ್ಯಕ್ರಮಗಳು ಸಿಗುವ ಸಾಧ್ಯತೆಯೇ ಹೆಚ್ಚು!
ಇವೆಲ್ಲವೂ ಕೂಡಾ ಕನ್ನಡಿಗನನ್ನು ಕನ್ನಡದಿಂದ ದೂರ ಹೋಗದ ಹಾಗೆ ನೋಡಿಕೊಳ್ಳೋ ಸಾಧ್ಯತೆಗಳು ಹೆಚ್ಚು. ಜೊತೆಗೆ ಪ್ರಪಂಚದಲ್ಲಿ ಡಬ್ಬಿಂಗ್‌ನಿಂದಾಗಿ ಯಾವೊಂದು ನುಡಿಗೂ ಆಗಿರದ ತೊಂದರೆ, ಯಾವ ಸಂಸ್ಕೃತಿಗೂ ಆಗಿರದ ತೊಂದರೆ ಕನ್ನಡಕ್ಕಾಗುತ್ತದೆ ಎನ್ನುವುದನ್ನು ನಂಬುವುದಕ್ಕಿಂತಲೂ... ಸಂವಿಧಾನ ಕೊಡಮಾಡಿರುವ, ವಿಶ್ವಸಂಸ್ಥೆಯೇ ಎತ್ತಿಹಿಡಿದಿರುವ ನಿಲುವನ್ನು ಬೆಂಬಲಿಸುವುದು ಸೂಕ್ತ! ಗೆಳೆಯರೊಬ್ಬರು ಬರೆದಂತೆ "ಗುಮ್ಮನಿಗೆ ಹೆದರಿ ಅಮ್ಮನಿಗೂ ಕದ ತೆರೆಯಲಿಲ್ಲ" ಎನ್ನುವ ಮಾತು ಡಬ್ಬಿಂಗಿಗೆ ಸಂಬಂಧಿಸಿದಂತೆ ಕನ್ನಡ ಚಿತ್ರರಂಗಕ್ಕೆ ಸಕ್ಕತ್ತಾಗೇ ಅನ್ವಯಿಸುತ್ತದೆ!! ಚಿತ್ರರಂಗದೋರು ಅಮ್ಮನನ್ನಾದರೂ ಒಳಗೆ ಬಿಟ್ಟುಕೊಳ್ಳಬೇಕು... ಅಲ್ವಾ ಗುರೂ? ಇಲ್ಲಾಂದ್ರೆ ಮುಂದೆ ಇವತ್ತಿನ ೧೫೦ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗೋ ರಚ್ಚಾ ಪಚ್ಚಾಗಳು ಇರೋ ಆರುನೂರನ್ನೂ ಆಕ್ರಮಿಸಿಕೊಳ್ಳೋ ಕಾಲ ಬಂದೀತು!