ಅಣ್ಣಾ ತಂಡ ರಾಜಕಾರಣಕ್ಕೆ: ಇದೇ ಸರಿಯಾದ ಹೆಜ್ಜೆ...

(ಫೋಟೋ ಕೃಪೆ: ಕನ್ನಡಪ್ರಭ ದಿನಪತ್ರಿಕೆ)
ಕಳೆದ ಹತ್ತುದಿನಗಳಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಶ್ರೀ ಅಣ್ಣಾ ಹಜಾರೆ ಮತ್ತು ತಂಡದವರು ಉಪವಾಸ ಕೊನೆಗೊಳಿಸಿದ್ದಾರೆ. ಬಹುಮುಖ್ಯವಾದ ಮಾತೆಂದರೆ, ತಮ್ಮ ಹೋರಾಟದ ರೀತಿಯನ್ನು ಬದಲಿಸಿ ಜನಾಂದೋಲನದ ಜೊತೆಗೆ ರಾಜಕಾರಣದ ಪ್ರವೇಶದ ಬಗ್ಗೆಯೂ ಒಲವು ತೋರಿದ್ದಾರೆ. ಈ ಹೇಳಿಕೆ ಭ್ರಷ್ಟಾಚಾರ ವಿರೋಧಿಸಿ ಅಣ್ಣಾ ಹಜಾರೆ ತಂಡಕ್ಕೆ ಬೆಂಬಲ ನೀಡುತ್ತಿದ್ದ ದೇಶದ ಜನರಲ್ಲಿ ಭಿನ್ನ ರೀತಿಯ ಪ್ರತಿಕ್ರಿಯೆಗೆ ಕಾರಣವಾಗಿದೆ. ಅಣ್ಣಾ ಹಜಾರೆ ತಂಡದ ಮೇಲೆ ಭರವಸೆಯೇ ಕಳೆದುಹೋದಂತೆ, ರಾಜಕಾರಣಕ್ಕೆ ಬಂದು ಇವರೂ ಹಾಳಾಗುತ್ತಾರೆ ಎನ್ನುವ ನಂಬಿಕೆಯಿಂದಾಗಿ ಭ್ರಮನಿರಶನಗೊಂಡ ಜನರೂ ಕಾಣುತ್ತಿದ್ದಾರೆ.

ಈಗಿಟ್ಟಿರೋದೇ ಸರಿಯಾದ ಹೆಜ್ಜೆ!

ಹೌದೂ... ಅಣ್ಣಾ ತಂಡ ಈಗಿಟ್ಟಿರುವುದೇ ಸರಿಯಾದ ಹೆಜ್ಜೆ. ಇದಕ್ಕಾಗಿ ಅವರನ್ನು ಅಭಿನಂದಿಸುತ್ತೇವೆ ಮತ್ತು ಒಳಿತನ್ನು ಹಾರೈಸುತ್ತೇವೆ. ಕಳೆದ ವರ್ಷ ನಡೆದ ಉಪವಾಸ ಸತ್ಯಾಗ್ರಹದ ಸಂದರ್ಭದಲ್ಲಿ ನಾವು ಏನ್‌ಗುರುವಿನಲ್ಲಿ ಹೀಗೆ ಬರೆದಿದ್ದೆವು. ಆ ಮಾತು ಇಂದಿಗೂ ಹೊಂದುವ ಮಾತೇ!
ಅಣ್ಣಾ ಹೋರಾಟದ ಬಗ್ಗೆ!
ಮೂಲತಃ ಉಪವಾಸ, ಸತ್ಯಾಗ್ರಹ ಎನ್ನುವುದೆಲ್ಲಾ ಅಸಂವಿಧಾನಿಕ ಅನ್ನುವುದಕ್ಕಿಂತಲೂ, ನಮಗೆ ನೀತಿನಿಯಮ ರೂಪಿಸಿಕೊಳ್ಳಲು ಸಂವಿಧಾನ, ಪ್ರಜಾಪ್ರಭುತ್ವಗಳು ಅವಕಾಶ ಕೊಟ್ಟಿರುವಾಗಲೂ ಆ ಹಾದಿ ಕಠಿಣವೆಂದು ಅದನ್ನು ಬಿಟ್ಟು ಬಳಸುವ ಅಡ್ಡದಾರಿಯಾಗಬಾರದು ಎನ್ನುವ ಕಳಕಳಿ ನಮ್ಮಲ್ಲಿರಬೇಕಾಗಿದೆ. ಕಾನೂನು ಮಾಡುವ ಅಧಿಕಾರ ಶಾಸಕಾಂಗಕ್ಕೆ ಇದ್ದಾಗ ಉಪವಾಸದ ಬೆದರಿಕೆಯ ಮಾರ್ಗದಿಂದ ಕಾನೂನು ಮಾಡುವ ಅಧಿಕಾರ ಗಿಟ್ಟಿಸಿಕೊಳ್ಳುತ್ತೇನೆ ಎನ್ನುವುದು ಎಷ್ಟು ಸರಿ? ಜನಜಾಗೃತಿ ಮೂಡಿಸಲು ಸತ್ಯಾಗ್ರಹ ಮಾಡುತ್ತೇನೆ ಎನ್ನುವುದನ್ನು ಹೇಗಾದರೂ ಬೆಂಬಲಿಸಬಹುದೇನೋ, ಆದರೆ ಕಾನೂನು ಮಾಡಲು ಉಪವಾಸ ಮಾಡುತ್ತೇನೆ ಎನ್ನುವುದು ಅರಗಿಸಿಕೊಳ್ಳಲಾಗದ ಅಡ್ಡ ಪರಿಣಾಮಕ್ಕೆ ಕಾರಣವಾದೀತು. ‘ನಾನು ಹೇಳುವ ಶರತ್ತುಗಳನ್ನು ಒಪ್ಪಿಕೊಳ್ಳಿ, ಇಲ್ಲದಿದ್ದರೆ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇನೆ’ ಎನ್ನುವುದಕ್ಕೂ ‘ನಾ ಹೇಳಿದಂತೆ ನಡೆಯಿರಿ, ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎನ್ನುವುದಕ್ಕೂ ಹೆಚ್ಚಿನ ವ್ಯತ್ಯಾಸ ಕಾಣದು. ಅಣ್ಣಾ ಹಜ಼ಾರೆಯವರ ಪ್ರಾಮಾಣಿಕತೆ, ಬದ್ಧತೆಗಳೇನೆ ಇದ್ದರೂ... ಅವರ ಉಪವಾಸದ ಉದ್ದೇಶವು ಜನಜಾಗೃತಿಯಲ್ಲದೆ, ‘ತನ್ನ ಮಾತಿನಂತೆ ಮಸೂದೆ ಮಂಡಿಸಲೇಬೇಕು’ ಎನ್ನುವುದಾದರೆ ಒಪ್ಪುವುದು ಹೇಗೆ?
ಅವರನ್ನು ಬೆಂಬಲಿಸುವ ರಾಜಕೀಯ ಪಕ್ಷಗಳಾದರೂ ಈಗಲೇ ತಮ್ಮ ಪಕ್ಷಗಳ ಆರು ಸಂಸದರ ರಾಜಿನಾಮೆ ಪಡೆದು, ಆ ಕ್ಷೇತ್ರಗಳಿಂದ ಇವರನ್ನು ಕಣಕ್ಕಿಳಿಸಿ, ಚುನಾವಣೆ ಗೆಲ್ಲಿಸಿ ಸಂಸತ್ತಿಗೆ ಕಳಿಸಲಿ. ಸಂಸದರಾದ ಮೇಲೆ ಜನಲೋಕಪಾಲ ಮಸೂದೆಯ ಕರಡುಪ್ರತಿಯನ್ನು ಜನಕ್ಕೆ ಉಪಯೋಗವಾಗುವ ಹಾಗೆ ತಮ್ಮ ಅನಿಸಿಕೆಯಂತೆ, ಬೇಕಾದ ಹಾಗೆ ರಚಿಸಲಿ. ಅಂತಹ ಕರಡು ಎರಡೂ ಸದನಗಳಲ್ಲಿ ಅಂಗೀಕಾರವಾಗಿ ಕಾಯ್ದೆಯಾಗಲೀ... ಇದೇ ಸರಿಯಾದ ದಾರಿ. ಇಂದು ಜನರಲ್ಲಿ ಭ್ರಷ್ಟಾಚಾರದ ಬಗ್ಗೆ ಅಣ್ಣಾ ಹಜ಼ಾರೆಯವರು ಮೂಡಿಸುತ್ತಿರುವ ಜಾಗೃತಿ ನಾಳೆಯ ಚುನಾವಣೆಗಳ ಮತದಾನದ ಮುಖ್ಯ ವಿಷಯವಾಗಲಿ... ಅದಲ್ಲದೇ ಸತ್ಯಾಗ್ರಹಗಳ ಮೂಲಕ, ಬಂದ್‍ಗಳ ಮೂಲಕ, ನಾವುಗಳೇ ರೂಪಿಸಿಕೊಂಡ ಕಾನೂನುಗಳನ್ನು ಮುರಿಯುವ ಮೂಲಕ ಸಾಧಿಸಲು ಮುಂದಾಗುವುದು ಸರಿಯೇ ಎಂಬುದೇ ನಾವು ಉತ್ತರ ಕಂಡುಕೊಳ್ಳಬೇಕಾದ ಪ್ರಶ್ನೆ! 
ಅಣ್ಣಾ ಹಜಾರೆ ತಂಡಕ್ಕೆ ಭಾರತದ ವ್ಯವಸ್ಥೆಗಳನ್ನು ಸರಿಮಾಡಬೇಕೆಂಬ ಹುಮ್ಮಸ್ಸು/ ಕಾಳಜಿ ಇರುವುದನ್ನೂ ಮತ್ತು ಇಡೀ ತಂಡದ ಸದಸ್ಯರುಗಳು ಪ್ರಾಮಾಣಿಕರಾಗಿದ್ದಾರೆ ಎನ್ನುವುದನ್ನೂ ಒಪ್ಪುವುದಾದಲ್ಲಿ, ಇವರು ಶುರುಮಾಡುವ ರಾಜಕೀಯ ಪಕ್ಷವೂ ವಿಭಿನ್ನವಾಗಿರುತ್ತದೆ ಎನ್ನುವುದನ್ನೂ ಒಪ್ಪಬಹುದು. ಆದರೆ ಈ ರಾಜಕೀಯ ಪಕ್ಷವು ನಿಜಕ್ಕೂ ನಾಡಿಗೆ ಒಳಿತು ಮಾಡುತ್ತದೆಯೋ ಅಥವಾ ಇರುವ ಮೂರು ಮತ್ತೊಂದರಲ್ಲಿ ಒಂದಾಗಿ ಸೇರಿಬಿಡುತ್ತದೆಯೋ ಎನ್ನುವುದು ಗೊತ್ತಾಗಬೇಕೆಂದರೆ ಹಲವಾರು ವಿಷಯಗಳ ಬಗ್ಗೆ ಈ ಪಕ್ಷ ಯಾವ ನಿಲುವು ಹೊಂದಿರುತ್ತದೆ ಎನ್ನುವುದು ಮುಖ್ಯ.

ಉಳಿದವಕ್ಕಿಂತ ಭಿನ್ನ?

ಇವರ ಉದ್ದೇಶಿತ ರಾಜಕೀಯ ಪಕ್ಷವು ಭಾರತದ ಸ್ವರೂಪದ ಬಗ್ಗೆ ಎಂತಹ ನಿಲುವು ಹೊಂದಿದೆ? ಇಲ್ಲಿನ ಅನನ್ಯತೆ, ವೈವಿಧ್ಯತೆಗಳನ್ನು ಗೌರವಿಸಿ ಪೊರೆಯಲು ಮುಂದಾಗುವುದೇ? ಭಾರತವನ್ನು ಒಂದು ಒಕ್ಕೂಟವೆಂದು ಪರಿಗಣಿಸಿ ರಾಜ್ಯಗಳ ಹಕ್ಕುಗಳಿಗೆ ಮಾನ್ಯತೆ ನೀಡುವುದೇ? ಇದು ಅಧಿಕಾರ ವಿಕೇಂದ್ರೀಕರಣದ ಪರವೋ ಅಥವಾ ಇರುವ ಅಧಿಕಾರವೆಲ್ಲಾ ಕೇಂದ್ರದ ಕೈಲಿರುವುದರ ಪರವಾಗಿ ಇರುತ್ತದೋ? ಭಾರತದಲ್ಲಿ ಸರ್ಕಾರವೇ ಮುಂದೆ ನಿಂತು ನಡೆಸುತ್ತಿರುವ ಹಿಂದೀ ಹೇರಿಕೆಯ  ಪರವೋ ಇಲ್ಲಾ ವಿರುದ್ಧವೋ?... ಇವಲ್ಲಾ ವಿಷಯಗಳಲ್ಲಿ ಅಣ್ಣಾ ಹಜ಼ಾರೆ ತಂಡ ಯಾವ ನಿಲುವನ್ನು ತೆಗೆದುಕೊಳ್ಳುತ್ತದೆ ಎನ್ನುವುದು, ಇವರ ಪಕ್ಷ ಉಳಿದವುಗಳಿಗಿಂತಲೂ ಭಿನ್ನವೋ ಇಲ್ಲವೋ ಎನ್ನುವುದನ್ನು ತೀರ್ಮಾನಿಸುತ್ತದೆ. ಅಣ್ಣಾ ಹಜಾರೆಯವರ ಪಕ್ಷ ಭಿನ್ನವಾಗಿರಲಿ ಎಂಬುದೇ ನಮ್ಮ ಆಶಯ. ಇವರಿಗೆ ಒಳ್ಳೆಯದಾಗಲಿ.

1 ಅನಿಸಿಕೆ:

A Mimbari ಅಂತಾರೆ...

Well.

'Jana lok pal' bill is a negative for federal structure of India. It gives too much power to a central authority.

We must not vote for me.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails