ಕನ್ನಡ ರಾಜ್ಯೋತ್ಸವ ಮತ್ತು ಕನ್ನಡಿಗರ ಏಳಿಗೆ!


(ಕೃಪೆ: ಯೂಟ್ಯೂಬಿನಲ್ಲಿ ಶ್ರೀ ದಿನೇಶ್ ಕುಮಾರ್)

ಇಡೀ ಕನ್ನಡಿಗರಲ್ಲಿ ಒಗ್ಗಟ್ಟಿನ ಭಾವನೆಯೊಂದನ್ನು ಪುಟಿದೆಬ್ಬಿಸುವ ನವೆಂಬರ್ ಒಂದರ ನಾಡಹಬ್ಬ ನಾಳೆ. ಭಾರತದಲ್ಲಿ ಭಾಷಾವಾರು ರಾಜ್ಯ ರಚನೆಯು ಆರಂಭವಾದ ನಂತರ ಅದುವರೆಗೆ ಹತ್ತು ಹಲವು ಆಡಳಿತದಲ್ಲಿ ಹಂಚಿಹೋಗಿದ್ದ ಕನ್ನಡನಾಡು ೧೯೫೬ರ ನವೆಂಬರ್ ಒಂದರಂದು ಒಂದು ರಾಜ್ಯವಾಗಿ ರೂಪುಗೊಂಡಿತು. ಈ ದಿನವನ್ನೇ ಪ್ರತಿವರ್ಷ ಕನ್ನಡ ರಾಜ್ಯೋತ್ಸವ ಎಂದು ಆಚರಿಸುತ್ತಾ ಬಂದಿದ್ದೇವೆ. ಈ ದಿನದಂದು ನಮ್ಮ ಹೆಚ್ಚಿನ ಗಮನ ನಿನ್ನೆಗಳ ಬಗ್ಗೆ ಮಾತ್ರಾ ಇರುತ್ತದೆ. ಅಂದರೆ ಏಕೀಕರಣಕ್ಕಾಗಿ ಇಂತಿಂತವರು ಹೋರಾಡಿದರು, ಏಕೀಕರಣಕ್ಕೆ ಮೊದಲು ಕನ್ನಡ ಜನಾಂಗ ಒಂದೇ ಆಳ್ವಿಕೆಯಲ್ಲಿರಬೇಕೆಂದು ಕನ್ನಡ ಕುಲಪುರೋಹಿತ ಆಲೂರು ವೆಂಕಟರಾಯರು ಕನಸು ಕಂಡರು, ರಂಜಾನ್ ಸಾಬ್ ಜೀವ ಕೊಟ್ಟರು, ಜಯದೇವಿ ತಾಯಿ ಲಿಗಾಡೆ  ನೆತ್ತರಲ್ಲಿ ಓಲೆ ಬರೆದರು, ಅದರಗುಂಚಿ ಶಂಕರಪಾಟೀಲರು ೨೩ ದಿವಸ ಉಪವಾಸ ಮಾಡಿದರು... ಹೀಗೆ ನೆನಪು ಮಾಡಿಕೊಳ್ಳುವುದು ಒಂದು ಕಡೆಯಾದರೆ, ಕದಂಬ ಚಾಲುಕ್ಯ ಹೊಯ್ಸಳ ರಾಷ್ಟ್ರಕೂಟ ಗಂಗ ವಿಜಯನಗರ ಮೊದಲಾದ ಮಹಾ ಸಾಮ್ರಾಜ್ಯಗಳ ವೈಭವ, ಕನ್ನಡನಾಡಿನ ಕಲೆ ಸಾಹಿತ್ಯಗಳ ಹಿರಿಮೆಗಳನ್ನು ನೆನೆದು ಕೊಂಡಾಡುತ್ತೇವೆ. ಇವೆಲ್ಲಾ ಸರಿಯೇ! ಇವೆಲ್ಲವನ್ನೂ ಮಾಡಬೇಕಾದ್ದೇ!! ಆದರೆ ನಿಜಕ್ಕೂ ಭಾಷಾವಾರು ರಾಜ್ಯರಚನೆಯಾಗಿದ್ದು ಏಕೆ? ಇದರ ಉದ್ದೇಶ ಈಡೇರಿಕೆ ಆಗುತ್ತಿದೆಯೇ? ಆಗಿಸಲು ನಾವೇನು ಮಾಡಬೇಕು? ಆಗಿಸಬೇಕಾದ ಅಗತ್ಯವೇನು? ಇವನ್ನೆಲ್ಲಾ ಯೋಚಿಸಬೇಕಿದೆ.

ಭಾಷಾವಾರು ಪ್ರಾಂತ್ಯ ರಚನೆಯ ಉದ್ದೇಶ!

ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲೋದ್ದೇಶವೇ ಅಧಿಕಾರ ವಿಕೇಂದ್ರೀಕರಣ. ಜನರಿಂದ ಜನರಿಗಾಗಿ ಆಡಳಿತ ವ್ಯವಸ್ಥೆ ಇರುತ್ತದೆ ಎನ್ನುವುದು ಮೊದಲ ಗುಣಲಕ್ಷಣ. ಹೀಗಿದ್ದಾಗ ಒಂದು ನಾಡಿನ ಜನಜೀವನದ ಬದುಕಿನ ಅತ್ಯಗತ್ಯ ಅಂಗಗಳಾದ ಕಲಿಕೆ, ದುಡಿಮೆ, ಸಾರ್ವಜನಿಕ ಆಡಳಿತದ ಕೆಲಸ ಕಾರ್ಯಗಳ ಏರ್ಪಾಡುಗಳೆಲ್ಲವೂ ಜನರಿಗೆ ಹತ್ತಿರವಾಗಬೇಕು. ಅವರ ಕೈಗೆಟುಕಬೇಕು. ಅವರನ್ನು ಒಳಗೊಳ್ಳಬೇಕು. ಇವಲ್ಲವೂ ಪರಿಣಾಮಕಾರಿಯಾಗಿ ಆಗಬೇಕಾದರೆ ಈ ಏರ್ಪಾಟುಗಳೆಲ್ಲಾ ಜನರಿಗೆ ಅರ್ಥವಾಗಬೇಕು, ಬಳಸಲು ಸುಲಭವಾಗಿರಬೇಕಾಗುತ್ತದೆ. ಇದು ಸಾಧ್ಯವಾಗಲು ಇರುವ ಒಂದೇ ಒಂದು ದಾರಿ ಆ ಜನರಾಡುವ ನುಡಿಯಲ್ಲಿ ನಾಡಿನ ವ್ಯವಸ್ಥೆಗಳನ್ನು ಕಟ್ಟುವುದು. ಹೀಗೆ ಎಲ್ಲಾ ವ್ಯವಸ್ಥೆಗಳೂ ಜನರನ್ನು ಒಳಗೊಂಡಾಗ ಜನರ ಮಾಡುಗತನ ಹೆಚ್ಚಬಲ್ಲದು, ನಾಡಿನ ಏಳಿಗೆಯ ಹೆಬ್ಬಾಗಿಲು ತೆರೆದುಕೊಳ್ಳುವುದು. ಒಂದು ನುಡಿಯಾಡುವ ಜನರಲ್ಲಿ ಆ ಕಾರಣದಿಂದಾಗಿ ಸಹಜವಾಗೇ  ಇರುವ ಒಗ್ಗಟ್ಟು ಮತ್ತಷ್ಟು ಬಲಗೊಂಡು ಸಾಧನೆಯ ಹಾದಿಯತ್ತ ಇಡೀ ಜನಾಂಗ ಸಾಗುವುದು. ಹೀಗೆ ಕನ್ನಡದ ಮೂಲಕ ಕನ್ನಡಿಗರೂ, ತಮಿಳಿನ ಮೂಲಕ ತಮಿಳರೂ, ಹಿಂದಿಯ ಮೂಲಕ ಹಿಂದಿಯವರೂ ಏಳಿಗೆ ಸಾಧಿಸುವುದಾದರೆ ಭಾರತವೂ ಏಳಿಗೆ ಹೊಂದುತ್ತದೆ ಎನ್ನುವ ಉದ್ದೇಶವೇ ಭಾಷಾವಾರು ಪ್ರಾಂತ್ಯ ರಚನೆಯ ಹಿಂದಿರುವುದು. ಇದರಿಂದಾಗಿ ಭಾಷೆಯ ಜೊತೆಜೊತೆಗೇ ಮೈಗೂಡಿಕೊಂಡಿರುವ ಸಂಸ್ಕೃತಿ, ಪರಂಪರೆ, ತನ್ನತನದ ಅನನ್ಯತೆಗಳೂ ಪೊರೆಯಲ್ಪಡುತ್ತವೆ ಎನ್ನುವುದೂ ಕೂಡಾ ದಿಟ. ಇದು ಭಾಷಾವಾರು ಪ್ರಾಂತ್ಯ ರಚನೆಯ ಪ್ರಮುಖ ಉದ್ದೇಶ.

ವಾಸ್ತವ - ಆಶಯಕ್ಕಿಂತಾ ಬೇರೆ!

ಆದರೆ ಇಂದು ಈ ಆಶಯಗಳು ಈಡೇರಿವೆಯೇ? ಈಡೆರುವತ್ತಾ ನಾವು ಸಾಗುತ್ತಿದ್ದೇವೆಯೇ? ಎಂದೆಲ್ಲಾ ನೋಡಿದರೆ ನಿರಾಸೆಯಾಗುತ್ತದೆ. ಆರಂಭದಲ್ಲಿ ಸಂವಿಧಾನದಲ್ಲೂ ಬರೆದಿದ್ದ "ರಾಜ್ಯಗಳ ಆಡಳಿತ ಭಾಷೆಯ ಆಯ್ಕೆಯ ಹಕ್ಕು" ಕೇವಲ ತೋರಿಕೆಯದ್ದು ಎನ್ನಿಸುವಂತೆ ಇಂದಿನ ಏರ್ಪಾಟುಗಳಿರುವುದು ಕಾಣುತ್ತಿದೆ. ಕರ್ನಾಟಕದ ಆಡಳಿತ ಭಾಷೆ ಕನ್ನಡ ಎನ್ನುವುದನ್ನೇ  ನೋಡೋಣ. ಸಂವಿಧಾನ ರಾಜ್ಯಕ್ಕೆ ಈ ಆಯ್ಕೆಯ ಸ್ವಾತಂತ್ರ ಕೊಟ್ಟಿದ್ದು ಕರ್ನಾಟಕಕ್ಕೆ ಕನ್ನಡವನ್ನು ಆಡಳಿತ ಭಾಷೆ ಮಾಡಿಕೊಳ್ಳುವ ಸಂಪೂರ್ಣ ಸಂವಿಧಾನಿಕ ಹಕ್ಕು ಇದೆ. ಸರಿ, ಇದನ್ನು ಚಲಾಯಿಸಿ ನಾವು ಕನ್ನಡವನ್ನು ರಾಜ್ಯದ ಆಡಳಿತ ಭಾಷೆಯಾಗಿಸಿಯೂ ಆಯ್ತು. ಇದು ಎಷ್ಟು ಪರಿಣಾಮಕಾರಿಯಾಗಿ ಜಾರಿಯಾಗುತ್ತಿದೆ? ಸರ್ಕಾರಿ ಕಚೇರಿಗಳೂ ಸೇರಿದಂತೆ ಎಲ್ಲಾ ಸಾರ್ವಜನಿಕ ಏರ್ಪಾಟುಗಳಲ್ಲಿ ಕನ್ನಡದ ಜಾರಿಯನ್ನು ರಾಜ್ಯಸರ್ಕಾರ ಮಾಡುವುದರಲ್ಲೇ ಸಾಕಷ್ಟು ಕುಂದುಕೊರತೆ ಎದುರಿಸಿದೆ. ಇಂದು ಅವೆಲ್ಲವನ್ನೂ ಮಾಡಿದರೂ ಜನರೇ ಬಳಸಲು ಹಿಂದೇಟು ಹಾಕುತ್ತಿದ್ದೇವೆಯೇ? ಉದಾಹರಣೆಗೆ ಒಂದು ಆಸ್ತಿ ಕೊಂಡಾಗ ಅದರ ನೋಂದಣಿ ಪತ್ರ ಈಗೆಲ್ಲಾ ಇಂಗ್ಲೀಶಿನಲ್ಲೇ ಇರುತ್ತದೆಯೇ ಹೊರತು ಕನ್ನಡ ಮರೆಯಾಗುತ್ತಿದೆ. ಎಷ್ಟೋ ಕನ್ನಡಿಗರಿಗೆ ಸರ್ಕಾರಿ ಆದೇಶ ಇಂಗ್ಲೀಶಿನಲ್ಲಿರುವುದೇ ಹಿತ ಎನ್ನಿಸುತ್ತದೆ. ಅದೆಷ್ಟೋ ಕನ್ನಡಿಗರಿಗೆ ಕನ್ನಡವಲ್ಲದ ಹೆರನುಡಿ ಅನ್ನ ಗಳಿಸಿಕೊಡುವ ಸಾಧನವಾಗಿರುವುದು ಕಾಣುತ್ತಿದೆ. ಇಂತಹ ಪರಿಸ್ಥಿತಿಗೆ ಕಾರಣವೇನೆಂದು ನೋಡಿದರೆ ಕನ್ನಡಿಗರು ಕನ್ನಡದ ಬಳಕೆಯಿಂದ ದೂರಾಗುತ್ತಿರುವುದು ಕಾಣುತ್ತದೆ. ಇದು ಸಹಜವಾಗಿ ಆಗುತ್ತಿರುವುದಲ್ಲದೆ ನಾಡಿನ ವ್ಯವಸ್ಥೆಗಳು ದೂರಮಾಡುತ್ತಿರುವುದಾಗಿದೆ. ದುರಂತವೆಂದರೆ ಈ ಮೃಷ್ಟಾನ್ನದ ಸಾಧನವು ಕನ್ನಡದಲ್ಲೇ ದೊರೆಯುವಂತಾದರೆ, ಎಲ್ಲಾ ಕನ್ನಡಿಗರಿಗೂ ಕೈಗೆಟುಕಬಲ್ಲದು ಎನ್ನುವ ದಿಟವನ್ನು ನಾವು ಕಾಣದೆ ಹೋಗುತ್ತಿದ್ದೇವೆ. ಒಟ್ಟಾರೆ, ಕನ್ನಡಿಗರು ಕನ್ನಡದಿಂದ ದೂರಾಗುವ, ಆ ಮೂಲಕ ಕನ್ನಡದ ಬಳಕೆಯ ಸಾಧ್ಯತೆಯನ್ನು ಕುಗ್ಗಿಸುವ, ಆ ಮೂಲಕ ಸಾಧನೆಯ ಶಿಖರವನ್ನು ಏರಲಾಗದ ಮಿತಿಗೆ ಒಳಪಡುವ ಪರಿಸ್ಥಿತಿ ಇಂದಿನ ಕನ್ನಡನಾಡಿನ ವಾಸ್ತವತೆಯಾಗಿದೆ.

ಇದಕ್ಕೇನು ಕಾರಣ?

ಇದಕ್ಕೆ ಕಾರಣ ಕನ್ನಡದಿಂದ ಕನ್ನಡಿಗರು ದೂರ ಹೋಗುತ್ತಿರುವುದು!  ಭಾರತದ ಕೇಂದ್ರಸರ್ಕಾರದ ಕಚೇರಿಗಳಲ್ಲಿ ಆಡಳಿತ ಭಾಷೆ ಹಿಂದೀ/ ಇಂಗ್ಲೀಶ್ ಎನ್ನುವ ಕಾರಣದಿಂದ ಅಲ್ಲೆಲ್ಲಾ ಕನ್ನಡ ನಡೆಯದು ಎನ್ನುವ ಪರಿಸ್ಥಿತಿಯನ್ನು ಕಾಣುತ್ತಿದ್ದೇವೆ. ಅಂದರೆ ಕಲಿಕೆಯಲ್ಲಿ, ದುಡಿಮೆಯಲ್ಲಿ, ಆಡಳಿತದಲ್ಲಿ ನಿಧಾನವಾಗಿ ಕನ್ನಡದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲಾಗುತ್ತಿರುವುದನ್ನು ನಾವು ಗಮನಿಸಬೇಕಾಗಿದೆ. ಹೌದು! ಕಡಿಮೆ ಆಗುತ್ತಿದೆ ಎನ್ನುವುದಕ್ಕಿಂತಾ ಕಡಿಮೆ ಮಾಡಲಾಗುತ್ತಿದೆನ್ನುವುದು ವಾಸ್ತವ. ಇದಕ್ಕೆ ನೆರವಾಗಿ ಭಾರತೀಯ ಸಂವಿಧಾನವೇ ಟೊಂಕಕಟ್ಟಿ ನಿಂತಿದೆ. ಶಿಕ್ಷಣದಲ್ಲಿ ಕನ್ನಡ ಹೈಸ್ಕೂಲಿಗೆ ಮಿತಿಗೊಂಡಿರುವುದು, ಮೃಷ್ಟಾನ್ನ ಕೊಡಬಲ್ಲ ಅರಿಮೆಯ ವಿದ್ಯೆಗಳು ಕನ್ನಡದಲ್ಲಿಲ್ಲದಿರುವುದು ಇದಕ್ಕೆ ಕಾರಣ. ಕನ್ನಡಿಗರಲ್ಲೇ ನಮ್ಮ ನುಡಿ ಕಥೆ, ಹಾಡು, ಮಾತು, ಸಾಹಿತ್ಯಗಳಿಗೆ ಮಾತ್ರಾ ಲಾಯಕ್ಕು ಎನ್ನುವ ಭಾವವಿರುವುದು ಕಾರಣ. ಈ ನಾಡಿನ ವ್ಯವಸ್ಥೆಗಳು ಈ ನೆಲದ ಜನರಿಗಾಗಿ ರೂಪುಗೊಳ್ಳದೆ ಬೆರಳೆಣಿಕೆಯ ವಲಸಿಗರಿಗಾಗಿ ರೂಪುಗೊಂಡು ರಾಷ್ಟ್ರದ ಏಕತೆಯ ಹೆಸರಲ್ಲಿ ಎಲ್ಲೆಡೆ ಚಲಾವಣೆಯಾಗುತ್ತಿರುವುದು ಕಾರಣವಾಗಿದೆ.

ರಾಜ್ಯೋತ್ಸವ ಒಂದು ದಿನ ಬಾವುಟ ಹಾರಿಸುವುದಕ್ಕಲ್ಲಾ!

ಇಂತಹ ಪರಿಸ್ಥಿತಿಯಲ್ಲಿ ಕನ್ನಡನಾಡಿನ ಕೋಟ್ಯಂತರ ಮಂದಿ ನವೆಂಬರ್ ಒಂದರಂದು ಹಳದಿ ಕೆಂಪು ಬಾವುಟವನ್ನು ಹಾರಿಸಿ, ದೂರದರ್ಶನ ವಾಹಿನಿಗಳಲ್ಲಿ ಕನ್ನಡಪ್ರೇಮದ ಚಲನಚಿತ್ರಗಳನ್ನು, ಕಾರ್ಯಕ್ರಮಗಳನ್ನು ನೋಡಿ ಸಾರ್ಥಕತೆಯ ಭಾವನೆ ಅನುಭವಿಸುವುದರಲ್ಲೇ ಕಳೆದುಹೋಗುತ್ತಿದ್ದೇವೆ ಅನ್ನಿಸುತ್ತದೆ. ಏಕೀಕರಣವಾಗಿದ್ದರ ಉದ್ದೇಶವೇ ನಿಧಾನವಾಗಿ ಶಿಥಿಲವಾಗುತ್ತಿರುವುದನ್ನು ಗುರುತಿಸಲಾಗದಷ್ಟು ಮೈಮರೆವೆ ನಮ್ಮಲ್ಲಿದೆ. ಇದು ಬಹುದಿನಗಳಿಂದ ಮೈಮರೆವೆಯಿಂದ ಕೂಡಿರುವ ಕೊಳೆ. ಕಿತ್ತೊಗೆಯದೆ ಏಳಿಗೆ ಅಸಾಧ್ಯ! ಹಾಗಾದರೆ ಏನು ಮಾಡಬೇಕು ನಾವು? ಏನು ಮಾಡಬೇಕು ಕನ್ನಡ ಜನಾಂಗ?

ಕೊಚ್ಚೇವು ಕೊಳೆಯ! ಹಚ್ಚೇವು ದೀಪ

ಕನ್ನಡದ ಜನರು ಏಳಿಗೆಯ ಗೀಳು ಹಿಡಿಸಿಕೊಳ್ಳಬೇಕಾಗಿದೆ. ಇದಕ್ಕೆ ಅಡಿಪಾಯವಾಗಿ ನಮ್ಮ ಶಿಕ್ಷಣ ವ್ಯವಸ್ಥೆ ಬುಡದಿಂದಲೇ ಬದಲಾಗಬೇಕು. ಕನ್ನಡದ ಜನರಿಗೆ ಹತ್ತಿರವಾಗಿರುವ ಕನ್ನಡದಲ್ಲಿ ಎಲ್ಲಾ ಹಂತದ ಕಲಿಕೆಯನ್ನು ಕನ್ನಡದ ಸಮಾಜ ಕಟ್ಟಿಕೊಳ್ಳಬೇಕು. ಉನ್ನತ ಕಲಿಕೆಯೂ ಸೇರಿದಂತೆ ಸಂಶೋಧನೆಗಳೂ ಕೂಡಾ ಪ್ರತಿಯೊಂದೂ ಕನ್ನಡದಲ್ಲೇ ಆಗುವಂತಾಗಬೇಕು. ಹೊರಜಗತ್ತಿನ ಜೊತೆ ಸಂಪರ್ಕಕ್ಕೆ ಹೆರನುಡಿಗಳು ಬೇಕು ಎನ್ನುವುದನ್ನು ಇದೇನೂ ಕಡೆಗಣಿಸದು ಎನ್ನುವುದನ್ನು ನಾವು ಅರಿಯಬೇಕಾಗಿದೆ. ಕನ್ನಡನಾಡಿನ ಆಡಳಿತ ವ್ಯವಸ್ಥೆ ಕನ್ನಡದ್ದಾಗಬೇಕಾಗಿದೆ. ಇಲ್ಲಿನ ಸರ್ಕಾರಿ ಕಚೇರಿಗಳು ರಾಜ್ಯದ್ದಾದರೂ, ಕೇಂದ್ರದ್ದಾದರೂ, ಅಂತರಾಷ್ಟ್ರೀಯವಾದದ್ದಾದರೂ ಅದು ಕನ್ನಡದಲ್ಲಿ ವ್ಯವಹರಿಸಬೇಕು. ಸರ್ಕಾರಿ, ಖಾಸಗಿ ಯಾವುದಾದರೂ ಕೂಡಾ ಕನ್ನಡದಲ್ಲಿ ವ್ಯವಹರಿಸುವ, ಸೇವೆ ಕೊಡಬೇಕಾದ್ದು ಕಡ್ಡಾಯವಾಗಬೇಕು. ಈ ನಾಡಿನ ರಾಜಕೀಯ ಕನ್ನಡ ಕನ್ನಡಿಗ ಕೇಂದ್ರಿತವಾಗಬೇಕು. ಭಾರತ ಸರಿಯಾದ ಸಮಾನ ಗೌರವದ, ಸಮಾನ ಅವಕಾಶದ, ಅಧಿಕಾರಗಳ ವಿಕೇಂದ್ರೀಕರಣಕ್ಕೆ ಒತ್ತುಕೊಡುವ ಒಕ್ಕೂಟವಾಗುವತ್ತ ಕನ್ನಡಿಗ ಶ್ರಮಿಸಬೇಕು. ಜೊತೆಗೆ ನಾಡಿನ ಜನಲಕ್ಷಣವನ್ನು ತೀವ್ರವಾಗಿ ಬುಡಮೇಲು ಮಾಡುತ್ತಿರುವ ಅನಿಯಂತ್ರಿತ ವಲಸೆಗೆ ಕಡಿವಾಣವಿಡುವ ನೀತಿ ಬೇಕು. ಜಗತ್ತಿನ ಅತ್ಯುತ್ತಮ ಉತ್ಪನ್ನಗಳನ್ನು ತಯಾರಿಸುವ, ಜಗತ್ತಿಗೆಲ್ಲಾ ಮಾರಬಲ್ಲ ಯೋಗ್ಯತೆಯನ್ನು ಕನ್ನಡಿಗ ಗಳಿಸಿಕೊಳ್ಳಬೇಕು. ಪ್ರತಿಯೊಂದು ಕ್ಷೇತ್ರದಲ್ಲೂ ಕನ್ನಡಿಗ ಪರಿಣಿತಿ ಸಾಧಿಸಬೇಕು. ಈ ಎಲ್ಲಾ ಸಾಧನೆಗೆ ಕನ್ನಡನಾಡು ನೆಲೆಯಾಗಬೇಕು. ಇವೆಲ್ಲಾ ಸಾಧಿಸಲು ನಾವು ಮಾಡಲು ಬೇಕಾದ್ದನ್ನೆಲ್ಲಾ ಮಾಡುವ ಕಡೆ ಯೋಚಿಸದಿದ್ದಲ್ಲಿ, ಯೋಜಿಸದಿದ್ದಲ್ಲಿ ಕನ್ನಡ ಜನತೆ ನವೆಂಬರ್ ತಿಂಗಳಲ್ಲಿ ಬಾವುಟ ಹಾರಿಸುತ್ತಾ ಹಾರಿಸುತ್ತಲೇ ಹೊತ್ತು ಕಳೆದು ಏಳಿಗೆಯನ್ನು ಮರೆಯಬೇಕಾಗುತ್ತದೆ!

0 ಅನಿಸಿಕೆಗಳು:

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails