ಕನ್ನಡದ ಸೊಲ್ಲರಿಮೆ: ಮೂರನೇ ಹೊತ್ತಗೆ ಮಾರುಕಟ್ಟೆಗೆಡಾ. ಡಿ ಎನ್ ಶಂಕರಬಟ್ ಅವರ "ಕನ್ನಡ ಬರಹದ ಸೊಲ್ಲರಿಮೆ - ೩" ಹೊತ್ತಗೆ ಮಾರುಕಟ್ಟೆಗೆ ಬಂದಿದೆ. ಮೊದಲ ಹೊತ್ತಗೆಯಲ್ಲಿ ಸೊಲ್ಲರಿಮೆಯ ಅಗತ್ಯ, ಸ್ವರೂಪಗಳ ಮುನ್ನೋಟ ಮತ್ತು ಹೆಸರು ಪದಗಳ ಬಗ್ಗೆ ವಿವರಿಸಲಾಗಿತ್ತು. ಎರಡನೇ ಹೊತ್ತಗೆಯಲ್ಲಿ ಎಸಕಪದಗಳ ಬಳಕೆ ಮತ್ತು ಹೆಸರುಕಂತೆಗಳ ಇಟ್ಟಳಗಳ ಬಗ್ಗೆ ವಿವರಿಸಿದ್ದರು. ಈ ಹೊತ್ತಗೆಯಲ್ಲಿ "ಎಸಕಪದಗಳ ಪಾಂಗುಗಳು" ಮತ್ತು "ಪಾಂಗಿಟ್ಟಳಗಳಲ್ಲಿ ಮಾರ್ಪಾಡುಗಳ" ಬಗ್ಗೆ ವಿವರಿಸಲಾಗಿದೆ.

ಇದು ಕನ್ನಡದ್ದೇ ವ್ಯಾಕರಣ

ಈ ಹಿಂದೆ ಡಾ. ಡಿ ಎನ್ ಶಂಕರಬಟ್ ಅವರು ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಎನ್ನುವ ಹೊತ್ತಗೆಯಲ್ಲಿ ಇದುವರೆಗೂ ನಮಗೆ ಕಲಿಸಲಾಗುತ್ತಿದ್ದ ವ್ಯಾಕರಣದ ಮೂಲನೆಲೆ ಕನ್ನಡದ್ದೇ ಅಲ್ಲ ಎನ್ನುವುದನ್ನು ಎಳೆಎಳೆಯಾಗಿ ಬಿಡಿಸಿದ್ದರು ಮತ್ತು ಕನ್ನಡಕ್ಕೆ ಅದರದೇ ನೆಲೆಯಲ್ಲಿ ವ್ಯಾಕರಣವನ್ನು ಬರೆಯಬೇಕಾದ ಅಗತ್ಯವನ್ನು ತಿಳಿಸಿಕೊಟ್ಟಿದ್ದರು. ಕನ್ನಡದ್ದೇ ನೆಲೆಯಲ್ಲಿ ನಿಂತು ಕನ್ನಡದ ವ್ಯಾಕರಣವನ್ನು ಬಣ್ಣಿಸುವ ಕೆಲಸದಲ್ಲಿ ತೊಡಗಿ ಅವರು ಹೊರತರುತ್ತಿರುವ "ಕನ್ನಡ ಬರಹದ ಸೊಲ್ಲರಿಮೆ" ಸರಣಿ ಹೊತ್ತಗೆಗಳಲ್ಲಿ ಮೂರನೇ ತುಂಡು ಇದು.

ಈ ಹೊತ್ತಗೆಯ ಮುನ್ನುಡಿಯಲ್ಲಿ ಶಂಕರ ಬಟ್ಟರು ತಮ್ಮ ಹೊತ್ತಗೆಯ ಬಗ್ಗೆ ಬರೆದಿರುವ ಒಂದೆರಡು ಮಾತುಗಳನ್ನು ನೋಡೋಣ:
ಇದರಲ್ಲಿ ನಾನು ಕನ್ನಡ ಬರಹದ ಸೊಲ್ಲರಿಮೆ(ವ್ಯಾಕರಣ)ಯನ್ನು ಬರೆಯುತ್ತಿದ್ದೇನೆ. ನುಡಿಯ ಸೊಲ್ಲರಿಮೆಗಿಂತ ಬರಹದ ಸೊಲ್ಲರಿಮೆ ಹಲವು ವಿಶಯಗಳಲ್ಲಿ ಬೇರಾಗಿರುತ್ತದೆ ಎಂಬುದನ್ನು ಇದರ ಮೊದಲನೇ ಪಸುಗೆಯಾದ ಮುನ್ನೋಟದಲ್ಲಿ ವಿವರಿಸಿದ್ದೆ. ಇವತ್ತು ಕನ್ನಡ ಬರಹದಲ್ಲಿ ಎಂತಹ ಸೊಲ್ಲರಿಮೆಯ ಕಟ್ಟಲೆಗಳು ಬಳಕೆಯಾಗುತ್ತವೆ ಎಂಬುದನ್ನು ವಿವರಿಸುವುದರೊಂದಿಗೆ, ಎಂತಹವನ್ನು ಬಳಸಿದರೆ ಒಳ್ಳೆಯದು ಎಂಬುದನ್ನೂ ಬರಹದ ಸೊಲ್ಲರಿಮೆ ತಿಳಿಸಬಲ್ಲುದು.ಈ ಮೂರನೆಯ ತುಂಡಿನಲ್ಲಿ ಎಸಕಪದಗಳ ಪಾಂಗುಗಳು ಮತ್ತು ಪಾಂಗಿಟ್ಟಳದಲ್ಲಿ ಮಾರ್ಪಾಡುಗಳು ಎಂಬ ಎರಡು ಪಸುಗೆಗಳಿವೆ; ಇವುಗಳಲ್ಲಿ ಮೊದಲನೆಯ ಪಸುಗೆ ಸೊಲ್ಲುಗಳಲ್ಲಿ ಎಸಕಪದಗಳೊಂದಿಗೆ ಬರುವ ಹೆಸರುಪದಗಳು ಇಲ್ಲವೇ ಪದಕಂತೆಗಳು (ಪಾಂಗುಗಳು) ಯಾವ ರೀತಿಯಲ್ಲಿ ಎಸಕಪದಗಳೊಂದಿಗೆ ಸಂಬಂದಿಸಿರುತ್ತವೆ, ಮತ್ತು ಎಸಕಪದಗಳ ಹುರುಳುಗಳು ಅವುಗಳ ಎಣಿಕೆ ಮತ್ತು ಬಗೆಗಳನ್ನು ಹೇಗೆ ತೀರ್ಮಾನಿಸುತ್ತವೆ ಎಂಬುದನ್ನು ವಿವರಿಸುತ್ತದೆ.
ನವಕರ್ನಾಟಕ ಪ್ರಕಾಶನವೂ ಸೇರಿದಂತೆ ಈ ಹೊತ್ತಗೆಯು ಬೆಂಗಳೂರಿನ ಹೆಸರಾಂತ ಹೊತ್ತಗೆ ಮಳಿಗೆಗಳಲ್ಲಿ ದೊರಕುತ್ತಿದೆ. ಕನ್ನಡ ಬರಹದ ಸೊಲ್ಲರಿಮೆಯನ್ನು ಅರಿಯಬೇಕೆಂದವರಿಗೆ ಇದೊಂದು ಒಳ್ಳೆಯ ಹೊತ್ತಗೆ. ನೀವೂ ಕೊಂಡು ಓದಿ, ನಿಮ್ಮವರಿಗೂ ತಿಳಿಸಿ.

1 ಅನಿಸಿಕೆ:

VENKATESH BARKI ಅಂತಾರೆ...

ವೆಂಕಟೇಶ್ ಬಾರ್ಕಿ ಮಾಡುವ ನಮಸ್ಕಾರಗಳು. ನನಗೆ ಕನ್ನಡದ ಬಗ್ಗೆ ತುಂಬಾ ಹೆಮ್ಮೆ. ಕನ್ನಡವನ್ನು ಸರಿಯಾಗಿ ಬರೆಯಲು ಬಾರದು ಹೀಗಾಗಿ ನಿಮ್ಮಲ್ಲಿ ಸಹಾಯ ಬೇಡುತ್ತೆನೆ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails