ಕುಮಾರಣ್ಣಾ... ಕರ್ನಾಟಕದಲ್ಲಿ ಸುಮಾರು ೬೦ ಸಾವಿರ ಶಾಲೆಗಳಿವೆ!


ಜಾತ್ಯಾತೀತ ಜನತಾದಳದವರು ಬರಲಿರುವ ವಿಧಾನಸಭಾ ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳಂತೆಯೇ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಈ ಬಾರಿ ಒಂದಲ್ಲಾ ಎರಡು ಪ್ರಣಾಳಿಕೆಗಳು - ಕರ್ನಾಟಕಕ್ಕೊಂದು! ಬೆಂಗಳೂರಿಗೆ ಮತ್ತೊಂದು!! ಈ ಬೆಂಗಳೂರು ನಗರಕ್ಕಾಗಿ ಬಿಟ್ಟಿರುವ ಪ್ರಣಾಳಿಕೆಯಲ್ಲಿ ಪ್ರಾಥಮಿಕ ಶಿಕ್ಷಣದ ಬಗ್ಗೆ ಒಂದು ಪ್ರಮುಖವಾದ ಭರವಸೆಯನ್ನು ನೀಡಿದ್ದಾರೆ. "ನಗರದ ಪ್ರತಿ ವಾರ್ಡುಗಳಲ್ಲಿ ಇಂಗ್ಲೀಶ್ ಮಾಧ್ಯಮವಿರುವ ಮಾದರಿ ಶಾಲೆಗಳನ್ನು ತೆರೆಯಲಾಗುವುದು" ಎಂಬುದಾಗಿ ಇದರಲ್ಲಿ ಹೇಳಿದರೆ, ರಾಜ್ಯ ಪ್ರಣಾಳಿಕೆಯಲ್ಲಿ "ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಐದನೇ ತರಗತಿಯಿಂದ ಇಂಗ್ಲೀಶ್ ಮಾಧ್ಯಮ ಆರಂಭಿಸಿ ಬಡವರ ಮಕ್ಕಳು ಸರ್ಕಾರಿ  ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಅನುಕೂಲ ಕಲ್ಪಿಸಲಾಗುವುದು" ಎನ್ನಲಾಗಿದೆ. ನಾಡು ನುಡಿ ಬಗ್ಗೆ ಬದ್ಧತೆ, ನಾಳೆಗಳ ಬಗ್ಗೆ ಗುರಿ ಸರಿಯಾಗಿದ್ದವರು ಆಡೋ ಮಾತಾ ಇದು ಅನ್ನೋಕ್ಕಿಂತಲೂ... ನಮ್ಮ ಮಕ್ಕಳ ಭವಿಷ್ಯ ಸರಿಯಾಗಿ ಕಟ್ಟಬೇಕೆಂದು ಬಯಸೋರು ಯೋಚಿಸೋ ರೀತೀನಾ ಇದು ಎಂದು ಜನತೆ ಆಡಿಕೊಳ್ಳಲು ಇದು ಅವಕಾಶ ಮಾಡಿಕೊಟ್ಟಿದೆ ಗುರೂ!

ಪ್ರಾಥಮಿಕ ಶಿಕ್ಷಣ: ವೈಜ್ಞಾನಿಕತೆ ಮತ್ತು ಮರುಳು!

ಜಗತ್ತಲ್ಲಿ ಎಲ್ಲಾ ತಜ್ಞರೂ ತಾಯ್ನುಡಿಯಲ್ಲಿ ಕಲಿಕೆ ಅತ್ಯುತ್ತಮ ಎನ್ನುವುದನ್ನು ಸಾರುತ್ತಲೇ ಬಂದಿದ್ದರೂ ಯಾವ ಆಧಾರದ ಮೇಲೆ ಜನತಾದಳ ಇಂಗ್ಲೀಶ್ ಮಾಧ್ಯಮ ಶಾಲೆಗಳನ್ನು ಆರಂಭಿಸುವ ಬಗ್ಗೆ ಉತ್ಸುಕತೆ ತೋರಿಸುತ್ತಿದೆ ಎನ್ನುವುದು ಸ್ಪಷ್ಟವಾಗಿಲ್ಲ! ಖಾಸಗಿ ಶಾಲೆಗಳ ಮಂದಿ, ಸಾಮಾನ್ಯ ಜನರಲ್ಲಿ... ಅವರ ಮಕ್ಕಳ ಭವಿಷ್ಯದ ಬಗ್ಗೆ ಭೀತಿ ಹುಟ್ಟಿಸಿ, ಇಂಗ್ಲೀಶ್ ಮಾಧ್ಯಮದ ಶಾಲೆಗಳಿಗೆ ಸೆಳೆಯುತ್ತಿರುವ ‘ಜನಮರುಳೋ ಜಾತ್ರೆ ಮರುಳೋ’ ಎನ್ನುವ ಇಂದಿನ ಪರಿಸ್ಥಿತಿಯಲ್ಲಿ... ಜನಪರವೆಂದು ಕರೆದುಕೊಳ್ಳುವ ರಾಜಕೀಯ ಪಕ್ಷವೊಂದು ತಾನು "ಜನರ ಮರುಳು ಕಳೆಯುವ ದಿಟದೆಡೆಗೆ ಸಾಗಬೇಕೋ ಅಥವಾ ಜನರನ್ನು ಕತ್ತಲೆಯಿಂದ ಕಗ್ಗತ್ತಲೆಗೆ ತಳ್ಳಬೇಕೋ?" ಇಷ್ಟಕ್ಕೂ ‘ಪ್ರಾಥಮಿಕ ಶಿಕ್ಷಣ’ ಎನ್ನುವ ತಲೆಬರಹ ಕೊಟ್ಟು ಅದರಲ್ಲಿ ಇವರು ಬರೆದುಕೊಂಡಿರುವ ಭರವಸೆಗಳನ್ನು ಕಂಡಾಗ ಅಷ್ಟೊಂದು ಹಳೆಯದಾದ ಅಷ್ಟೊಂದು ದೊಡ್ಡದಾದ ರಾಜಕೀಯ ಪಕ್ಷವೊಂದು ಇಷ್ಟೊಂದು ಕಳಪೆ ಮುನ್ನೋಟ ಹೊಂದಿರಲು ಸಾಧ್ಯವೇ ಎನ್ನುವ ಅಚ್ಚರಿಯಾಗುತ್ತದೆ. ಮಧ್ಯಾಹ್ನದ ಊಟ, ಶಿಕ್ಷಕರ ಕೆಲಸದ ಖಾಯಂಗೊಳಿಸುವಿಕೆಗಳ ಬಗ್ಗೆ ಮಾತಾಡುವ ಇವರು ಪ್ರಾಥಮಿಕ ಶಿಕ್ಷಣದ ಗುಣಮಟ್ಟದ ಬಗ್ಗೆ, ಶಾಲೆಗಳ ಗುಣಮಟ್ಟ ಮೂಲಸೌಕರ್ಯಗಳ ಬಗ್ಗೆ, ಮುಚ್ಚಲಾಗುತ್ತಿರುವ ಸರ್ಕಾರಿ ಶಾಲೆಗಳ ಬಗ್ಗೆ ಕಮಕ್ ಕಿಮಕ್ ಅಂದಿಲ್ಲ!

ನಂಬಿದಂತೆ ನಡೆಯಲಿ...

ನಿಜಕ್ಕೂ ಜಾತ್ಯಾತೀತ ಜನತಾದಳದ ನಂಬಿಕೆಯು ಕನ್ನಡನಾಡಿನ ಮಕ್ಕಳ ಭವಿಷ್ಯ ಇಂಗ್ಲೀಶ್ ಮಾಧ್ಯಮದಲ್ಲಿದೆ ಎನ್ನುವುದಾದರೆ ಇದ್ಯಾಕೆ ಬರೀ ಬೆಂಗಳೂರಿನ ಶಾಲೆಗಳನ್ನು ಇಂಗ್ಲೀಶ್ ಮಾಧ್ಯಮ ಮಾಡೋ ಯೋಚನೆ ಇವರದ್ದು? ಪಾಪಾ!! ಬೆಂಗಳೂರಿನ ಆಚೆ ಬದುಕುತ್ತಿರುವ ಮಕ್ಕಳು ಏನು ಪಾಪ ಮಾಡಿದ್ದರು? ಅವರಿಗೆ ಮಾತ್ರಾ ಯಾಕೆ ಐದನೇ ತರಗತಿಯಿಂದ ಇಂಗ್ಲೀಶ್ ಮಾಧ್ಯಮ? ನಿಜವಾಗ್ಲೂ ತಾವು ಏನು ಮಾಡಬೇಕೆಂದು ಹೊರಟಿದ್ದಾರೋ ಅದರ ಬಗ್ಗೆ ನಂಬಿಕೆಯಿದ್ದಲ್ಲಿ ಇಡೀ ಕರ್ನಾಟಕದ ಕಲಿಕಾ ಮಾಧ್ಯಮವನ್ನು ಅಂದರೆ ರಾಜ್ಯದಲ್ಲಿರುವ ೫೫~೬೦ ಸಾವಿರ ಶಾಲೆಗಳಲ್ಲಿ ಇಂಗ್ಲೀಶ್ ಮಾಧ್ಯಮ ಮಾಡುತ್ತೇವೆ ಎನ್ನಬೇಕಪ್ಪಾ!! ವಾಸ್ತವ ಏನಂದ್ರೆ ದಿಟವನ್ನು ಜನಕ್ಕೆ ಒಪ್ಪಿಸಿ ಸರಿಯಾದ ನಿಲುವನ್ನು ಎತ್ತಿಹಿಡಿಯಬೇಕಾದ ರಾಜಕೀಯಪಕ್ಷವೊಂದು ಮತಬೇಟೆಗಾಗಿ ಸುಳ್ಳನ್ನೇ ಮೆರೆಸುವ ಭರವಸೆ ನೀಡ್ತಿರೋದು ದುರಂತಾ ಅನ್ಸಲ್ವಾ?!

ಕೊನೆಹನಿ:  ಅಂದಂಗೆ ಜನತಾದಳದ ಮಹನೀಯರಿಗೆ ಇರುವ ಇನ್ನೊಂದು ನಂಬಿಕೆ ಅವರ ಪ್ರಣಾಳಿಕೆಯಲ್ಲಿ ಎದ್ದೆದ್ದು ಕಾಣ್ತಿದೆ... ಅದೆಂದರೆ ಇಂಗ್ಲೀಶ್ ಮಾಧ್ಯಮ ಶಿಕ್ಷಣವೆಂದರೆ ಗುಣಮಟ್ಟದ ಶಿಕ್ಷಣ ಎನ್ನುವುದು!! ಇದು ಬರೀ ಜನತಾದಳಕ್ಕೆ ಸೀಮಿತವಾಗಿಲ್ಲ. ಬೆಂಗಳೂರಿನ ಪಾಲಿಕೆ ಶಾಲೆಗಳನ್ನು ಕೇಂದ್ರೀಯ ಪಟ್ಯಕ್ರಮಕ್ಕೆ ಬದಲಿಸಿದ್ದು ರಾಜ್ಯ ಬಿಜೆಪಿ ಸರ್ಕಾರ ಅನ್ನೋದನ್ನು ಮರೆಯೋ ಹಾಗಿಲ್ಲ! ಇವರೆಲ್ಲಾ ಬಳಸೋದು ಇದೇ ಅಸ್ತ್ರ "ಬಡವರಿಗೆ ಗುಣಮಟ್ಟದ ಶಿಕ್ಷಣ - ಇಂಗ್ಲೀಶ್ ಮಾಧ್ಯಮದ್ದು" ಎನ್ನುವುದನ್ನೇ!

1 ಅನಿಸಿಕೆ:

DS Kore ಅಂತಾರೆ...

ಇವರಿಗೆ ಕನ್ನಡ, ಕರ್ನಾಟಕದ ಬಗ್ಗೆ ಎಳ್ಳಷ್ಟು ಕಾಳಜಿಯಿಲ್ಲ ಅನ್ನೊದು ಗೊತ್ತಾಗುತ್ತೆ . ಎಲ್ಲಾ ರಾಜಕಿಯ ಗಿಮಿಕ್...

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails