"ಫೆಡರಲ್ ಫ್ರಂಟ್" ಎಂಬ ಪುಟ್ಟ ಬೆಳಕು!


"ಇದು ಈ ಹಿಂದೆಯೂ ಆಗಿತ್ತು. ಮೂರನೇ ರಂಗದ ಹೆಸರಲ್ಲಿ ೧೯೮೯, ೧೯೯೬ರಲ್ಲಿ ಸರ್ಕಾರಗಳು ರಚನೆಯಾಗಿ ರಾಜಕೀಯ ಅಸ್ಥಿರತೆ ಕಾಡಿತ್ತು. ಹಾಗಾಗಿ ತೃತೀಯ ರಂಗವೆನ್ನುವುದು ಅಸಾಧ್ಯವಾದ ಕನಸು. ರಾಷ್ಟ್ರೀಯ ಹಿತಾಸಕ್ತಿಗೆ ಮಾರಕ.. ಬ್ಲಾ... ಬ್ಲಾ... ಬ್ಲಾ..." ಎಂದು ರಾಷ್ಟ್ರೀಯ ಆಂಗ್ಲ ಮಾಧ್ಯಮವೊಂದರಲ್ಲಿ ಮಾತು ಕೇಳಿಬರುತ್ತಿತ್ತು! ಹೌದಲ್ವಾ? ಎಷ್ಟು ಸರಿಯಾದ ಮಾತು ಎಂದು ಸಾಮಾನ್ಯರಿಗೆ ಅನ್ನಿಸುವಂತೆ ಈ ಮಾತುಗಳಿದ್ದವು. ಆದರೆ ವಾಸ್ತವವಾಗಿ ಈ ಮೂರನೇ ರಂಗ ಏಕೆ? ಇದರ ಮಹತ್ವವೇನು? ಇದರ ಭವಿಷ್ಯವೇನು? ಎಂಬುದನ್ನು ನೋಡಿದಾಗ ಇದೊಂದು ಭಾರತದ ಕೇಂದ್ರೀಕೃತ ವ್ಯವಸ್ಥೆಯೆಂಬ ಕಗ್ಗತ್ತಲಲ್ಲಿ ಇದೀಗ ತಾನೇ ಹೊತ್ತಿಕೊಂಡಿರುವ ಪುಟ್ಟಬೆಳಕಿನಂತೆ ಕಾಣುತ್ತಿದೆ ಗುರೂ!

ಹಿಂದಾದದ್ದು!

ಸ್ವಾತಂತ್ರ ಬಂದಾಗಿನಿಂದ ಭಾರತದಲ್ಲಿ ಕಾಂಗ್ರೆಸ್ ಪಕ್ಷದ್ದೇ ಕಾರುಬಾರು. ಮೊದಲ ಕಾಂಗ್ರೆಸ್ಸಲ್ಲದ ಸರ್ಕಾರ ಮೊರಾರ್ಜಿ ದೇಸಾಯಿಯವರ ಮುಂದಾಳ್ತನದ ಜನತಾಪಕ್ಷದ್ದು! ಇದೂ ತನ್ನ ಸ್ವರೂಪದಲ್ಲೇ ಭಿನ್ನ ನೆಲೆಯ ಪಕ್ಷಗಳನ್ನೊಳಗೊಂಡಿದ್ದು ಐದು ವರ್ಷ ಆಳಲಾಗಲಿಲ್ಲ! ಮುಂದೆ ಬಂದದ್ದು ನ್ಯಾಶನಲ್ ಫ್ರಂಟ್‌ನ ಸರ್ಕಾರ. ವಿ ಪಿ ಸಿಂಗ್ ಪ್ರಧಾನಿಗಳಾಗಿದ್ದ ಇದರಲ್ಲೂ ಕಾಂಗ್ರೆಸ್ ವಿರೋಧವೊಂದೇ ಬೇರೆ ಬೇರೆ ಪಕ್ಷಗಳನ್ನು ಒಗ್ಗೂಡಿಸಲು ಕಾರಣವಾಗಿದ್ದು ಎನ್ನಬಹುದು. ಅಕಾಲದಲ್ಲಿ ಕೊನೆಗೊಂಡ ಮೈತ್ರಿಯು ಕಾಂಗ್ರೆಸ್ ಬೆಂಬಲದಿಂದ ಸಮಾಜವಾದಿ ಚಂದ್ರಶೇಖರ್‌ರವರು ಅರೆಕಾಲಿಕ ಪ್ರಧಾನಿಯಾಗಲು ಕಾರಣವಾಯಿತು. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ೧೯೯೬ರಲ್ಲಿ ಅದುವರೆಗೂ ಇದ್ದ ಕಾಂಗ್ರೆಸ್ ಮತ್ತು ಕಾಂಗ್ರೆಸ್ಸೇತರ ಅಂತಾ ಇದ್ದುದ್ದು ಕಾಂಗ್ರೆಸ್, ಬಿಜೆಪಿ ಮತ್ತು ಮೂರನೇರಂಗ ಎಂದಾಯಿತು. ಹದಿಮೂರು ದಿನದ ವಾಜಪೇಯಿ ಸರ್ಕಾರ, ದೇವೇಗೌಡರ ಸರ್ಕಾರ, ಐ ಕೆ ಗುಜ್ರಾಲರ ಸರ್ಕಾರಗಳು ಅಧಿಕಾರಕ್ಕೇರಿದವು. ಮತ್ತೆ ೧೯೯೮ರಲ್ಲಿ ವಾಜಪೇಯಿಯವರ ಮುಂದಾಳ್ತನದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂತು. ಮುಂದೆ ೨೦೦೪ರಿಂದ ಕಾಂಗ್ರೆಸ್ಸೇ ಆಡಳಿತ ನಡೆಸುತ್ತಾ ಬಂದಿದೆ. ವಾಜಪೇಯಿಯವರ ಬಿಜೆಪಿ ಸರ್ಕಾರ ಐದುವರ್ಷ ಪೂರೈಸಿದ ಏಕೈಕ ಕಾಂಗ್ರೆಸ್ಸೇತರ ಸರ್ಕಾರ! ಅದುವರೆವಿಗೂ ಕೂಡಾ ನಮ್ಮ ಘನ ಮಾಧ್ಯಮಗಳು ಹೇಳುತ್ತಾ ಬಂದಿದ್ದು "ಕಾಂಗ್ರೆಸ್ ಒಂದಕ್ಕೇ ಐದು ವರ್ಷದ ಸ್ಥಿರಸರ್ಕಾರ ಕೊಡಲು ಸಾಧ್ಯ" ಎಂದು. ಈಗ ಇವೇ ಮಾಧ್ಯಮಗಳು ರಾಷ್ಟ್ರೀಯ ಪಕ್ಷಗಳಿಗೆ ಮಾತ್ರಾ ಐದು ವರ್ಷದ ಸ್ಥಿರಸರ್ಕಾರ ಕೊಡಲು ಸಾಧ್ಯ ಎನ್ನುತ್ತಿವೆ. ಹಾಗಾಗಿ ಈ ಮಾತಿಗೆ ಅಂಥಾ ಮಹತ್ವ ಕೊಡುವ ಅಗತ್ಯವಿಲ್ಲ!

ಇಂದಾಗುತ್ತಿರುವುದು...

(ಕೃಪೆ: http://www.ipatrix.com/2908/indian-elections-color-palette/)
ಇದೀಗ ಭಾರತದ ರಾಜಕಾರಣ ಹೊಸ ಬದಲಾವಣೆಗಳನ್ನು ಕಾಣುತ್ತಿದೆ. ಇಂದು ಭಾರತದ ಅನೇಕ ರಾಜ್ಯಗಳ ರಾಜಕಾರಣದಲ್ಲಿ ಪ್ರಾದೇಶಿಕ ಪಕ್ಷಗಳು ತಮ್ಮ ಅಚ್ಚೊತ್ತುತ್ತಿವೆ. ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ನ್ಯಾಶನಲ್ ಫ್ರಂಟ್, ಪಿಡಿಪಿ, ಬಿಜು ಜನತಾದಳ, ಅಕಾಲಿದಳ,  ಜನತಾದಳ(ಯು), ಜೆಡಿಎಸ್, ಕೆಜೆಪಿ, ದ್ರಾವಿಡ ಕಳಗಗಳು, ಅಸ್ಸಾಂ ಗಣಪರಿಶತ್, ತೆಲುಗುದೇಶಂ, ಶಿವಸೇನೆ, ಎಂಎನ್‌ಎಸ್ ಮೊದಲಾಗಿ ಅನೇಕಾನೇಕ ಶುದ್ಧ ಪ್ರಾದೇಶಿಕ ಪಕ್ಷಗಳಿದ್ದು ಲೋಕಸಭೆಯ ಚುನಾವಣೆಗಳಲ್ಲಿ ಗಣನೀಯ ಪ್ರಮಾಣದಲ್ಲಿ ಮತಗಳನ್ನು ಗಳಿಸಿವೆ. ಕಾಂಗ್ರೆಸ್ ಮತ್ತು ಬಿಜೆಪಿಯೆಂಬ ಎರಡೂ ಧೃವಗಳಿಂದ ಬೇರೆಯಾಗಿ ನಿಂತಿವೆ. ಇವುಗಳಲ್ಲಿ ಕೆಲವು ಒಂದಾಗಿ ಸೇರಿ ಇದೀಗ ಫ಼ೆಡೆರಲ್ ಫ್ರಂಟ್ ಎಂಬ ಹೆಸರಿನಲ್ಲಿ ಒಕ್ಕೂಟ ಪರವಾದ ಗುಂಪನ್ನು ಮಾಡಿಕೊಳ್ಳಲು ಮುಂದಾಗಿವೆ. ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ವಿರೋಧವೆನ್ನುವುದರ ಜೊತೆಯಲ್ಲಿ ಪ್ರಮುಖವಾದ ಮತ್ತೊಂದು ವಿಷಯ ಈ ಒಕ್ಕೂಟದ ರಚನೆಗೆ ಕಾರಣವಾಗುತ್ತಿದೆ. ಅದುವೇ ರಾಜ್ಯಗಳಿಗೆ ಅತಿಹೆಚ್ಚು ಸ್ವಾಯತ್ತತೆಯನ್ನು ತಂದುಕೊಡಬಲ್ಲ ಸರಿಯಾದ ಒಂದು "ಒಕ್ಕೂಟ ಧರ್ಮ"ದ ಪರವಾದ ನಿಲುವು. ಕೇಂದ್ರದ ಅತಿಯಾದ ಮೂಗುತೂರಿಸುವಿಕೆಯನ್ನು ಒಪ್ಪದೆ, ರಾಜ್ಯಗಳಿಗೆ ಹೆಚ್ಚಿನ ಅಧಿಕಾರ ಬೇಕು ಎನ್ನುವುದರ ಬಗೆಗಿರುವ ಒಲವು. ಹೀಗಾಗಿ ಈ ಬಾರಿಯ ಈ ಹೊಂದಾಣಿಕೆ/ ರಾಜಕೀಯ ರಂಗವು ಭಾರತವು ಒಪ್ಪುಕೂಟವಾಗುವೆಡೆಗಿನ ಒಂದು ಪುಟಾಣಿ ಹೆಜ್ಜೆಯಾಗಿದೆ.

ಏನಾದೀತು?

ಈ ಒಕ್ಕೂಟ ಗಣನೀಯ ಪ್ರಮಾಣದಲ್ಲಿ ಸಂಸದರನ್ನು ಗೆಲ್ಲಿಸಿಕೊಳ್ಳಬಲ್ಲುದಾದರೂ ತಾನೇತಾನಾಗಿ ಸರ್ಕಾರ ರಚಿಸಬಲ್ಲಷ್ಟು ಶಕ್ತವಾಗಲಾರದೇನೋ! ಹಾಗಿದ್ದರೂ ಮುಂದೆ ರಚನೆಯಾಗುವ ಸರ್ಕಾರದಲ್ಲಿ ಮಹತ್ವದ ಪಾತ್ರ ವಹಿಸುವ ಸಾಧ್ಯತೆಗಳಂತೂ ಇವೆ. ಇಷ್ಟಕ್ಕೂ ಮೀರಿದ ಪವಾಡವೊಂದು ನಡೆದು ಈ ರಂಗವು ಅಧಿಕಾರಕ್ಕೇ ಬಂತೆಂದರೂ ಸ್ಥಿರಸರ್ಕಾರ ನೀಡುವುದು ಕೂಡಾ  ಅನುಮಾನವೇ ಆಗಿದೆ! ಇದೆಲ್ಲಾ ವಾಸ್ತವವೇ ಆಗಿದ್ದರೂ ಕೂಡಾ ಇಂತಹ ರಂಗದ ರಚನೆಯಾಗುತ್ತಿರುವುದೇ ಒಂದು ಸಕರಾತ್ಮಕ ಬೆಳವಣಿಗೆ. ವಾಸ್ತವವಾಗಿ ನೋಡಿದರೆ ಕಾಂಗ್ರೆಸ್ಸಿನ್ನದ್ದೂ ಬಿಜೆಪಿಯದ್ದೂ ಕೂಡಾ ಬಹುಪಕ್ಷಗಳ ರಾಜಕೀಯ ರಂಗವೇ! ಒಂದು ಪಕ್ಷ ಅಧಿಕಾರಕ್ಕೇರುವ ಕಾಲ ಭಾರತದ ರಾಜಕಾರಣದಲ್ಲಿ ಮತ್ತೊಮ್ಮೆ ಬರುವ ಸಾಧ್ಯತೆಯೇ ಇಲ್ಲವೆಂಬುದು ಪರಿಣಿತರ ಅನಿಸಿಕೆ! ಇರಲಿ.. ಈ ಬಾರಿ "ಫೆಡರಲ್ ಫ್ರಂಟ್" ಯಶಸ್ವಿಯಾದರೂ ಆಗದಿದ್ದರೂ ಪ್ರಾದೇಶಿಕ ಪಕ್ಷಗಳೇ ಸೇರಿ ರಾಜಕೀಯರಂಗ ಮಾಡಿಕೊಂಡು ಚುನಾವಣೆಗಳನ್ನು ಎದುರಿಸಬಹುದು ಎನ್ನುವುದನ್ನು ಸಾಧಿಸಿದಂತಾಗುತ್ತದೆ.

ನಾಳೆ ಏನಾಗಬೇಕು?

ಮುಂದಿನ ದಿನಗಳಲ್ಲಿ ಭಾರತದಲ್ಲಿ ಇಂತಹ ಪ್ರಾದೇಶಿಕ ಪಕ್ಷಗಳ ರಾಜಕೀಯ ರಂಗಗಳೇ ಹೆಚ್ಚಾಗಬೇಕು. ಸೈದ್ಧಾಂತಿಕವಾಗಿ ಎಡವೋ, ಬಲವೋ, ನಡುವೋ ಆದ ಒಂದಕ್ಕಿಂತ ಹೆಚ್ಚು ಪಕ್ಷಗಳು ರಾಜ್ಯಗಳಲ್ಲಿದ್ದರೆ ತಮ್ಮದೇ ಸೈದ್ಧಾಂತಿಕ ನೆಲೆಗಟ್ಟಿಗೆ ಸರಿಹೊಂದುವ ಇತರೆ ರಾಜ್ಯಗಳ ಪ್ರಾದೇಶಿಕ ಪಕ್ಷಗಳನ್ನು ಕೂಡಿಕೊಂಡು ರಾಜಕೀಯರಂಗಗಳನ್ನು ಮಾಡಿಕೊಳ್ಳಬೇಕು. ಇದು ಭಾರತ ನಿಜವಾದ ಒಪ್ಪುಕೂಟವಾಗುವುದಕ್ಕೆ ನೆರವಾಗುತ್ತದೆ. ರಾಜ್ಯಗಳಿಗೆ ದಕ್ಕಬೇಕಾದ ನಿಜವಾದ ಅಧಿಕಾರಗಳು ದಕ್ಕಲು ನೆರವಾಗುತ್ತವೆ. ಭಾರತದಲ್ಲಿನ ವೈವಿಧ್ಯತೆಗಳಿಗೆ ತಕ್ಕ ಗೌರವ, ಸಮಾನತೆಗಳು ಇಂತಹ ರಾಜಕೀಯ ವ್ಯವಸ್ಥೆಯಿಂದಾಗಿ ಸಾಧ್ಯವಾಗಬಹುದಾಗಿದೆ.

ಸಂಸ್ಕೃತ ರಾಷ್ಟ್ರಭಾಷೆಯಾಗಲಿ! ಆದರೆ ನಮ್ಮ ರಾಷ್ಟ್ರಕ್ಕಲ್ಲಾ!

(ಚಿತ್ರಕೃಪೆ: ಉದಯವಾಣಿ ಅಂತರ್ಜಾಲ ಪತ್ರಿಕೆ)
ನಿನ್ನೆ (೦೩.೦೬.೨೦೧೩) ನಡೆದ ಒಂದು ಸಮಾರಂಭದಲ್ಲಿ ಆರ್ಟ್ ಆಫ್ ಲಿವಿಂಗ್‌ನ ರವಿಶಂಕರ ಗುರೂಜಿಯವರು "ಸಂಸ್ಕೃತ ರಾಷ್ಟ್ರಭಾಷೆಯಾಗಲಿ" ಎನ್ನುವ ಹೇಳಿಕೆಯನ್ನು ನೀಡಿದ್ದಾರೆ. ಇದಕ್ಕೆ ದನಿಯಾಗಿ ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮಿಗಳು ಸಂಸ್ಕೃತವನ್ನು ಇಂಗ್ಲೀಶ್  ಶಿಕ್ಷಣದಲ್ಲೂ ಪ್ರತ್ಯೇಕ ಭಾಗವಾಗಿ ಮೀಸಲು ಮಾಡಬೇಕು ಎಂದಿದ್ದಾರೆ.

ಸಂಸ್ಕೃತ ಕಲಿಕೆಯ ಬಗ್ಗೆ

ಪಾಣಿನಿಯ ಸೂತ್ರಗಳಲ್ಲಿ ಬಂಧಿತವಾಗಿದೆಯೆನ್ನಲಾಗುವ ಸಂಸ್ಕೃತವು "ಸಂಯಕ್ ಕೃತ"ವೆಂದು ಹೆಸರನ್ನು ಗಳಿಸಿದೆ. ಈ ನುಡಿಯಲ್ಲಿ ಅಪಾರವಾದ ಸಾಹಿತ್ಯವಿದೆ. ಕಲಿಯಲು ಇಷ್ಟಪಡುವವರಿಗೆ ಖಂಡಿತವಾಗಿಯೂ ಇದನ್ನು ಕಲಿಯಲು ಅವಕಾಶವಿರಬೇಕಾದ್ದೇ! ಈ ನುಡಿಯನ್ನು ಕಲಿತವರಲ್ಲಿ ಅನೇಕರು ಸಂಸ್ಕೃತ ಸುಂದರವಾದ ಭಾಷೆಯೆಂದಿದ್ದಾರೆ. ಸಂತೋಷ. ಯಾರಿಗೆ ಸಂಸ್ಕೃತ ಕಲಿಯಬೇಕಿದೆಯೋ ಅವರದನ್ನು ಕಲಿಯಲಿ. ಅದಕ್ಕೆ ಯಾರಪ್ಪಣೆಯೂ ಬೇಕಿಲ್ಲಾ!!

ಸಂಸ್ಕೃತ ರಾಷ್ಟ್ರಭಾಷೆಯಾಗುವ ಬಗ್ಗೆ

ಆದರೆ ಸಂಸ್ಕೃತ ರಾಷ್ಟ್ರಭಾಷೆಯಾಗಬೇಕೆನ್ನುವ ಮಾತುಗಳು ಮಾತ್ರಾ ಸರಿಯಲ್ಲ! ಹೀಗೆ ರಾಷ್ಟ್ರಭಾಷೆಯೆಂದು ಘೋಷಿಸಿಕೊಳ್ಳಬೇಕಾದ ಈ ಭಾಷೆ ಇನ್ಮೇಲೆ ಆಡುಭಾಷೆಯಾಗಬೇಕಂತೇ! ಅಂದರೆ ಯಾರೂ ಆಡದ ಭಾಷೆಯನ್ನು ರಾಷ್ಟ್ರಭಾಷೆ ಮಾಡಬೇಕಾದರೂ ಏಕೆ? ಕನ್ನಡದಲ್ಲಿ ಸಂಸ್ಕೃತದ ಪದಗಳು ೮೦% ಎಂದಿರುವುದು ಮಾತ್ರಾ ಯಾಕೋ ಜಾಸ್ತಿಯಾಯಿತು!  ಕನ್ನಡ ಸಾಹಿತ್ಯಕ್ಕೋ, ಕನ್ನಡ ಪಠ್ಯಕ್ಕೋ ಇಂಥಾ ಕೊಡುಗೆ ಸಂಸ್ಕೃತದಿಂದ ಸಿಕ್ಕಿದೆಯೆನ್ನಬಹುದು.. ಆದರೆ ಕನ್ನಡ ನುಡಿಯಲ್ಲಿ ಈ ಮಟ್ಟದ ಸಂಸ್ಕೃತ ತುಂಬಿದೆಯೆನ್ನುವುದು ಅತಿಶಯದ ಮಾತಾಯಿತು. ಸಂಸ್ಕೃತದಿಂದ ಅನೇಕ ಭಾಷೆಗಳಿಗೆ ಪದಗಳು ಹೋಗಿವೆ, ಸಂಸ್ಕೃತಕ್ಕೂ ಕೂಡಾ ಬೇರೆ ನುಡಿಗಳಿಂದ ಹೋಗಿವೆ. ಈ ಹಿರಿಯರು ಕನ್ನಡದಲ್ಲಿ ಸಂಸ್ಕೃತದ ಪದಗಳಿವೆ, ಹಾಗಾಗಿ ಇದು ಪ್ರಾಮುಖ್ಯದ ಭಾಷೆ, ಹಾಗಾಗಿ ಇತಿಹಾಸದ ಭಾಷೆ, ಹಾಗಾಗಿ ಇದನ್ನು ರಾಷ್ಟ್ರೀಯ ಭಾಷೆ ಮಾಡಬೇಕೆಂದಿದ್ದಾರೆ. ತಮಾಶೆಯೆಂದರೆ ರಾಷ್ಟ್ರಭಾಷೆಯಾಗುವ ಎಲ್ಲಾ ಅರ್ಹತೆಗಳನ್ನೂ ಇದಕ್ಕೆ ಆರೋಪಿಸುವ ಇವರುಗಳು ಇದನ್ನು ಜನಸಾಮಾನ್ಯರು ಆಡುತ್ತಿಲ್ಲಾ ಎಂದು ಅಳುತ್ತಾರೆ! ಇದನ್ನು ಹಿಂದಿಯ ಜೊತೆ ಬೆರೆಯಲು ಬಿಡಬಾರದು ಎಂಡು ಕಿರುಲುತ್ತಾರೆ! ಮತ್ತು ಇದನ್ನು ಉಳಿಸಿಕೊಳ್ಳುತ್ತಿಲ್ಲಾ ಎಂದು ಹಲುಬುತ್ತಾರೆ!

ರಾಷ್ಟ್ರಭಾಷೆಯೆಂದರೆ...

ಒಂದು ನಾಡಿನಲ್ಲಿ ಜನರು ತಾವು ಬಳಸುವ ನುಡಿಯನ್ನು ರಾಷ್ಟ್ರಭಾಷೆಯೆಂದು ಕರೆದುಕೊಳ್ಳುತ್ತಾರೆ. ಇದು ಘೋಷಿಸಿ ನಂತರ ಪೋಷಿಸುವುದಲ್ಲಾ! ಇರುವುದನ್ನು ಗುರುತಿಸುವುದಕ್ಕಾಗಿ ಬಳಸುವುದು. ಉದಾಹರಣೆಗೆ ಜಪಾನಿನ ರಾಷ್ಟ್ರಭಾಷೆ ಜಪಾನಿಸ್, ರಷ್ಯಾದ ರಾಷ್ಟ್ರಭಾಷೆ ರೂಸಿ ಎನ್ನುವಂತೆ!! ಭಾರತದಂತಹ ಬಹುನುಡಿಗಳ ನಾಡಲ್ಲಿ ಯಾವುದೇ ಒಂದು ನುಡಿಯನ್ನು ರಾಷ್ಟ್ರಭಾಷೆ ಮಾಡಿದರೆ ಅದು ಉಳಿದ ನುಡಿಗಳನ್ನಾಡುವ ಜನರಿಗೆ ಎಸಗುವ ದೊಡ್ಡ ದ್ರೋಹ ಮತ್ತು ಅವರನ್ನು ನೇರವಾಗಿ ಎರಡನೆಯ ದರ್ಜೆಯ ಪ್ರಜೆಗಳೆಂದು ಘೋಷಿಸಿದಂತೆ!! ಹಿಂದಿನವರು ಹಿಂದೀಗೆ ಬಹುಜನರಾಡುವ ಭಾಷೆಯೆಂದು ರಾಷ್ಟ್ರಭಾಷೆಯ ಪಟ್ಟ ಕಟ್ಟಲು ಮುಂದಾಗಿದ್ದರು. ಇದೀಗ ಸಂಸ್ಕೃತಕ್ಕೆ "ಯಾರೂ ಆಡದ ಭಾಷೆ"ಯೆಂದು  ಕರೆಯುತ್ತಲೇ ಅದೇ ಪಟ್ಟ ಬೇಕೆನ್ನುತ್ತಿದ್ದಾರೆ! ಇದರ ಹಿಂದಿನ ಮನಸ್ಥಿತಿ ವೈವಿಧ್ಯತೆಗಳ ನಾಡಲ್ಲಿ ಇಲ್ಲದ ಸಮಾನತೆಯ (commonness) ಹುಡುಕಾಟ ಎಂಬುದಷ್ಟೇ ಆಗಿದೆ. ಸಂಸ್ಕೃತ ಭಾಷೆ ಶ್ರೀಮಂತವಾಗಿದೆ ಎನ್ನುವ ಕಾರಣ ನೀಡುವವರು "ಹಾಗಿದ್ದಲ್ಲಿ ಅದೇಕೆ ಜನರ ಬಳಕೆಯಲ್ಲಿಲ್ಲಾ" ಎಂಬುದಕ್ಕೆ ವಿವರಣೆ ಕೊಡುವಲ್ಲಿ ಸೋಲುತ್ತಾರೆ. ಸಾಮಾನ್ಯರ ಬಳಕೆಯಲ್ಲೇ ಇಲ್ಲದ ಸಂಸ್ಕೃತ ಭಾಷೆಯನ್ನು, ಕನ್ನಡಕ್ಕದು ೮೦% ಪದಗಳನ್ನು ಕೊಡುಗೆಯಾಗಿ ನೀಡಿದೆಯೆನ್ನುವ ಕಾರಣದಿಂದ ರಾಷ್ಟ್ರಭಾಷೆಯಾಗಿಸಬೇಕೆನ್ನುವುದನ್ನು ಒಪ್ಪಲಾಗದು!

ಇಷ್ಟಕ್ಕೂ ಕನ್ನಡದ್ದೇ ಮಾಡಲು ನೂರಾರು ಕೆಲಸಗಳಿವೆ. ಅವನ್ನೆಲ್ಲಾ ಬಿಟ್ಟು ಸಂಸ್ಕೃತ ವಿಶ್ವವಿದ್ಯಾಲಯಕ್ಕೆ, ಸಂಸ್ಕೃತ ಸಾರುವ ಸಂಸ್ಥೆಗೆ ಸರ್ಕಾರ ಬೆಂಬಲ ನೀಡುವುದು ಬೇಡದ ಕೆಲಸ ಎನ್ನಿಸುತ್ತದೆ. ಹೀಗೆಂದಾಕ್ಷಣ ಸಂಸ್ಕೃತದ ಹಿರಿಮೆ ಬಗ್ಗೆ ಉಪದೇಶಗಳು ಶುರುವಾಗಬಹುದು. ಹಿರಿಮೆಗಳ ಬಗ್ಗೆ ಅರಿವಿದೆ. ಗೌರವವೂ ಇದೆ. ಬೇಕಾದವರು ಅದನ್ನು ಕಲಿಯಲಿ, ಅದರಲ್ಲೇ ಬೇಕಾದ್ದನ್ನು ಸಾಧಿಸಲಿ. ನಮ್ಮ ತಕರಾರೇನಿಲ್ಲ. ಆದರೆ ಭಾರತದಂತಹ ಬಹುಭಾಷೆಯ ನಾಡಿಗೆ ಸಂಸ್ಕೃತವೇ ಆಗಲೀ, ಮತ್ತೊಂದೇ ಆಗಲಿ ರಾಷ್ಟ್ರಭಾಷೆಯಾಗುವುದನ್ನು ಒಪ್ಪಲಾಗದು. ಭಾರತದ ವಿಷಯಕ್ಕೆ ಬಂದರೆ "ರಾಷ್ಟ್ರಭಾಷೆಗಳು" ಇರಬೇಕಾಗುತ್ತದೆ. ಸಂಸ್ಕೃತದ ವಿಷಯಕ್ಕೆ ಬಂದರೆ ಸಂಸ್ಕೃತ ರಾಷ್ಟ್ರಭಾಷೆಯಾಗಲಿ! ಆದರೆ ಯಾವ ರಾಷ್ಟ್ರದಲ್ಲಿ ಸಂಸ್ಕೃತವು ಜನರ ನುಡಿಯಾಗಿದೆಯೋ ಆ ನಾಡಿನ ರಾಷ್ಟ್ರಭಾಷೆಯಾಗಲಿ! ಹಾಗಾಗಲು ಅದಕ್ಕೆ ಸಂಪೂರ್ಣವಾದ ಹಕ್ಕಿದೆ ಎನ್ನಬಹುದಾಗಿದೆ ಅಷ್ಟೇ! 

ಕೊನೆಹನಿ: ಕನ್ನಡನಾಡಲ್ಲಿ ಹಾಗಾದರೆ ಕನ್ನಡವಲ್ಲದೆ ಇನ್ಯಾವ ಭಾಷೆಗೂ ಸಾರ್ವಜನಿಕ ಹಣ ಕೊಡಬಾರದೇ? ವಿಶ್ವವಿದ್ಯಾಲಯದಂತಹ ಸಂಸ್ಥೆಗಳನ್ನು ಕಟ್ಟಬಾರದೇ? ಎನ್ನಿಸಬಹುದು. ಧಾರಾಳವಾಗಿ ಜನರಿಗೆ ಉಪಯೋಗವಾಗುವ ಸಂಸ್ಥಗಳನ್ನು ಕಟ್ಟಬಹುದು. ಜನರ ದುಡ್ಡು ಹಾಕಬಹುದು. ಆದರೆ ಅಂತಹವುಗಳಿಂದ ಈ ನಾಡಿನ ಎಷ್ಟು ಜನರಿಗೆ, ಏನು ಉಪಯೋಗ ಎನ್ನುವುದರ ಸ್ಪಷ್ಟತೆ ಇರಬೇಕಾಗುತ್ತದೆ. ಹೀಬ್ರೂ ಪುನುರುತ್ಥಾನದಿಂದ ಇಸ್ರೇಲಿ ನಾಡಿನಲ್ಲಿ ಯಾವ್ಯಾಯ ನುಡಿಗಳು ಬಲಿಯಾದವೋ ಗೊತ್ತಿಲ್ಲಾ! ನಮ್ಮಲ್ಲಿ ಸಂಸ್ಕೃತವನ್ನು ಜನರಾಡುವ ಭಾಷೆಯಾಗಿಸುವ ಕೃತಕ ಪ್ರಯತ್ನ ಮಾಡಿದರೆ ನಮ್ಮ ನುಡಿಗಳಿಗೆ ಅಷ್ಟರ ಮಟ್ಟಿಗೆ ಘಾಸಿಯಾಗುತ್ತದೆ ಎನ್ನುವುದನ್ನಂತೂ ಅಲ್ಲಗಳೆಯಲಾಗದು.
Related Posts with Thumbnails