(ಚಿತ್ರಕೃಪೆ: ಉದಯವಾಣಿ ಅಂತರ್ಜಾಲ ಪತ್ರಿಕೆ) |
ನಿನ್ನೆ (೦೩.೦೬.೨೦೧೩) ನಡೆದ ಒಂದು ಸಮಾರಂಭದಲ್ಲಿ ಆರ್ಟ್ ಆಫ್ ಲಿವಿಂಗ್‌ನ ರವಿಶಂಕರ ಗುರೂಜಿಯವರು "ಸಂಸ್ಕೃತ ರಾಷ್ಟ್ರಭಾಷೆಯಾಗಲಿ" ಎನ್ನುವ ಹೇಳಿಕೆಯನ್ನು ನೀಡಿದ್ದಾರೆ. ಇದಕ್ಕೆ ದನಿಯಾಗಿ ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮಿಗಳು ಸಂಸ್ಕೃತವನ್ನು ಇಂಗ್ಲೀಶ್ ಶಿಕ್ಷಣದಲ್ಲೂ ಪ್ರತ್ಯೇಕ ಭಾಗವಾಗಿ ಮೀಸಲು ಮಾಡಬೇಕು ಎಂದಿದ್ದಾರೆ.
ಸಂಸ್ಕೃತ ಕಲಿಕೆಯ ಬಗ್ಗೆ
ಪಾಣಿನಿಯ ಸೂತ್ರಗಳಲ್ಲಿ ಬಂಧಿತವಾಗಿದೆಯೆನ್ನಲಾಗುವ ಸಂಸ್ಕೃತವು "ಸಂಯಕ್ ಕೃತ"ವೆಂದು ಹೆಸರನ್ನು ಗಳಿಸಿದೆ. ಈ ನುಡಿಯಲ್ಲಿ ಅಪಾರವಾದ ಸಾಹಿತ್ಯವಿದೆ. ಕಲಿಯಲು ಇಷ್ಟಪಡುವವರಿಗೆ ಖಂಡಿತವಾಗಿಯೂ ಇದನ್ನು ಕಲಿಯಲು ಅವಕಾಶವಿರಬೇಕಾದ್ದೇ! ಈ ನುಡಿಯನ್ನು ಕಲಿತವರಲ್ಲಿ ಅನೇಕರು ಸಂಸ್ಕೃತ ಸುಂದರವಾದ ಭಾಷೆಯೆಂದಿದ್ದಾರೆ. ಸಂತೋಷ. ಯಾರಿಗೆ ಸಂಸ್ಕೃತ ಕಲಿಯಬೇಕಿದೆಯೋ ಅವರದನ್ನು ಕಲಿಯಲಿ. ಅದಕ್ಕೆ ಯಾರಪ್ಪಣೆಯೂ ಬೇಕಿಲ್ಲಾ!!
ಸಂಸ್ಕೃತ ರಾಷ್ಟ್ರಭಾಷೆಯಾಗುವ ಬಗ್ಗೆ
ಆದರೆ ಸಂಸ್ಕೃತ ರಾಷ್ಟ್ರಭಾಷೆಯಾಗಬೇಕೆನ್ನುವ ಮಾತುಗಳು ಮಾತ್ರಾ ಸರಿಯಲ್ಲ! ಹೀಗೆ ರಾಷ್ಟ್ರಭಾಷೆಯೆಂದು ಘೋಷಿಸಿಕೊಳ್ಳಬೇಕಾದ ಈ ಭಾಷೆ ಇನ್ಮೇಲೆ ಆಡುಭಾಷೆಯಾಗಬೇಕಂತೇ! ಅಂದರೆ ಯಾರೂ ಆಡದ ಭಾಷೆಯನ್ನು ರಾಷ್ಟ್ರಭಾಷೆ ಮಾಡಬೇಕಾದರೂ ಏಕೆ? ಕನ್ನಡದಲ್ಲಿ ಸಂಸ್ಕೃತದ ಪದಗಳು ೮೦% ಎಂದಿರುವುದು ಮಾತ್ರಾ ಯಾಕೋ ಜಾಸ್ತಿಯಾಯಿತು! ಕನ್ನಡ ಸಾಹಿತ್ಯಕ್ಕೋ, ಕನ್ನಡ ಪಠ್ಯಕ್ಕೋ ಇಂಥಾ ಕೊಡುಗೆ ಸಂಸ್ಕೃತದಿಂದ ಸಿಕ್ಕಿದೆಯೆನ್ನಬಹುದು.. ಆದರೆ ಕನ್ನಡ ನುಡಿಯಲ್ಲಿ ಈ ಮಟ್ಟದ ಸಂಸ್ಕೃತ ತುಂಬಿದೆಯೆನ್ನುವುದು ಅತಿಶಯದ ಮಾತಾಯಿತು. ಸಂಸ್ಕೃತದಿಂದ ಅನೇಕ ಭಾಷೆಗಳಿಗೆ ಪದಗಳು ಹೋಗಿವೆ, ಸಂಸ್ಕೃತಕ್ಕೂ ಕೂಡಾ ಬೇರೆ ನುಡಿಗಳಿಂದ ಹೋಗಿವೆ. ಈ ಹಿರಿಯರು ಕನ್ನಡದಲ್ಲಿ ಸಂಸ್ಕೃತದ ಪದಗಳಿವೆ, ಹಾಗಾಗಿ ಇದು ಪ್ರಾಮುಖ್ಯದ ಭಾಷೆ, ಹಾಗಾಗಿ ಇತಿಹಾಸದ ಭಾಷೆ, ಹಾಗಾಗಿ ಇದನ್ನು ರಾಷ್ಟ್ರೀಯ ಭಾಷೆ ಮಾಡಬೇಕೆಂದಿದ್ದಾರೆ. ತಮಾಶೆಯೆಂದರೆ ರಾಷ್ಟ್ರಭಾಷೆಯಾಗುವ ಎಲ್ಲಾ ಅರ್ಹತೆಗಳನ್ನೂ ಇದಕ್ಕೆ ಆರೋಪಿಸುವ ಇವರುಗಳು ಇದನ್ನು ಜನಸಾಮಾನ್ಯರು ಆಡುತ್ತಿಲ್ಲಾ ಎಂದು ಅಳುತ್ತಾರೆ! ಇದನ್ನು ಹಿಂದಿಯ ಜೊತೆ ಬೆರೆಯಲು ಬಿಡಬಾರದು ಎಂಡು ಕಿರುಲುತ್ತಾರೆ! ಮತ್ತು ಇದನ್ನು ಉಳಿಸಿಕೊಳ್ಳುತ್ತಿಲ್ಲಾ ಎಂದು ಹಲುಬುತ್ತಾರೆ!
ರಾಷ್ಟ್ರಭಾಷೆಯೆಂದರೆ...
ಒಂದು ನಾಡಿನಲ್ಲಿ ಜನರು ತಾವು ಬಳಸುವ ನುಡಿಯನ್ನು ರಾಷ್ಟ್ರಭಾಷೆಯೆಂದು ಕರೆದುಕೊಳ್ಳುತ್ತಾರೆ. ಇದು ಘೋಷಿಸಿ ನಂತರ ಪೋಷಿಸುವುದಲ್ಲಾ! ಇರುವುದನ್ನು ಗುರುತಿಸುವುದಕ್ಕಾಗಿ ಬಳಸುವುದು. ಉದಾಹರಣೆಗೆ ಜಪಾನಿನ ರಾಷ್ಟ್ರಭಾಷೆ ಜಪಾನಿಸ್, ರಷ್ಯಾದ ರಾಷ್ಟ್ರಭಾಷೆ ರೂಸಿ ಎನ್ನುವಂತೆ!! ಭಾರತದಂತಹ ಬಹುನುಡಿಗಳ ನಾಡಲ್ಲಿ ಯಾವುದೇ ಒಂದು ನುಡಿಯನ್ನು ರಾಷ್ಟ್ರಭಾಷೆ ಮಾಡಿದರೆ ಅದು ಉಳಿದ ನುಡಿಗಳನ್ನಾಡುವ ಜನರಿಗೆ ಎಸಗುವ ದೊಡ್ಡ ದ್ರೋಹ ಮತ್ತು ಅವರನ್ನು ನೇರವಾಗಿ ಎರಡನೆಯ ದರ್ಜೆಯ ಪ್ರಜೆಗಳೆಂದು ಘೋಷಿಸಿದಂತೆ!! ಹಿಂದಿನವರು ಹಿಂದೀಗೆ ಬಹುಜನರಾಡುವ ಭಾಷೆಯೆಂದು ರಾಷ್ಟ್ರಭಾಷೆಯ ಪಟ್ಟ ಕಟ್ಟಲು ಮುಂದಾಗಿದ್ದರು. ಇದೀಗ ಸಂಸ್ಕೃತಕ್ಕೆ "ಯಾರೂ ಆಡದ ಭಾಷೆ"ಯೆಂದು ಕರೆಯುತ್ತಲೇ ಅದೇ ಪಟ್ಟ ಬೇಕೆನ್ನುತ್ತಿದ್ದಾರೆ! ಇದರ ಹಿಂದಿನ ಮನಸ್ಥಿತಿ ವೈವಿಧ್ಯತೆಗಳ ನಾಡಲ್ಲಿ ಇಲ್ಲದ ಸಮಾನತೆಯ (commonness) ಹುಡುಕಾಟ ಎಂಬುದಷ್ಟೇ ಆಗಿದೆ. ಸಂಸ್ಕೃತ ಭಾಷೆ ಶ್ರೀಮಂತವಾಗಿದೆ ಎನ್ನುವ ಕಾರಣ ನೀಡುವವರು "ಹಾಗಿದ್ದಲ್ಲಿ ಅದೇಕೆ ಜನರ ಬಳಕೆಯಲ್ಲಿಲ್ಲಾ" ಎಂಬುದಕ್ಕೆ ವಿವರಣೆ ಕೊಡುವಲ್ಲಿ ಸೋಲುತ್ತಾರೆ. ಸಾಮಾನ್ಯರ ಬಳಕೆಯಲ್ಲೇ ಇಲ್ಲದ ಸಂಸ್ಕೃತ ಭಾಷೆಯನ್ನು, ಕನ್ನಡಕ್ಕದು ೮೦% ಪದಗಳನ್ನು ಕೊಡುಗೆಯಾಗಿ ನೀಡಿದೆಯೆನ್ನುವ ಕಾರಣದಿಂದ ರಾಷ್ಟ್ರಭಾಷೆಯಾಗಿಸಬೇಕೆನ್ನುವುದನ್ನು ಒಪ್ಪಲಾಗದು!
ಇಷ್ಟಕ್ಕೂ ಕನ್ನಡದ್ದೇ ಮಾಡಲು ನೂರಾರು ಕೆಲಸಗಳಿವೆ. ಅವನ್ನೆಲ್ಲಾ ಬಿಟ್ಟು ಸಂಸ್ಕೃತ ವಿಶ್ವವಿದ್ಯಾಲಯಕ್ಕೆ, ಸಂಸ್ಕೃತ ಸಾರುವ ಸಂಸ್ಥೆಗೆ ಸರ್ಕಾರ ಬೆಂಬಲ ನೀಡುವುದು ಬೇಡದ ಕೆಲಸ ಎನ್ನಿಸುತ್ತದೆ. ಹೀಗೆಂದಾಕ್ಷಣ ಸಂಸ್ಕೃತದ ಹಿರಿಮೆ ಬಗ್ಗೆ ಉಪದೇಶಗಳು ಶುರುವಾಗಬಹುದು. ಹಿರಿಮೆಗಳ ಬಗ್ಗೆ ಅರಿವಿದೆ. ಗೌರವವೂ ಇದೆ. ಬೇಕಾದವರು ಅದನ್ನು ಕಲಿಯಲಿ, ಅದರಲ್ಲೇ ಬೇಕಾದ್ದನ್ನು ಸಾಧಿಸಲಿ. ನಮ್ಮ ತಕರಾರೇನಿಲ್ಲ. ಆದರೆ ಭಾರತದಂತಹ ಬಹುಭಾಷೆಯ ನಾಡಿಗೆ ಸಂಸ್ಕೃತವೇ ಆಗಲೀ, ಮತ್ತೊಂದೇ ಆಗಲಿ ರಾಷ್ಟ್ರಭಾಷೆಯಾಗುವುದನ್ನು ಒಪ್ಪಲಾಗದು. ಭಾರತದ ವಿಷಯಕ್ಕೆ ಬಂದರೆ "ರಾಷ್ಟ್ರಭಾಷೆಗಳು" ಇರಬೇಕಾಗುತ್ತದೆ. ಸಂಸ್ಕೃತದ ವಿಷಯಕ್ಕೆ ಬಂದರೆ ಸಂಸ್ಕೃತ ರಾಷ್ಟ್ರಭಾಷೆಯಾಗಲಿ! ಆದರೆ ಯಾವ ರಾಷ್ಟ್ರದಲ್ಲಿ ಸಂಸ್ಕೃತವು ಜನರ ನುಡಿಯಾಗಿದೆಯೋ ಆ ನಾಡಿನ ರಾಷ್ಟ್ರಭಾಷೆಯಾಗಲಿ! ಹಾಗಾಗಲು ಅದಕ್ಕೆ ಸಂಪೂರ್ಣವಾದ ಹಕ್ಕಿದೆ ಎನ್ನಬಹುದಾಗಿದೆ ಅಷ್ಟೇ!
ಕೊನೆಹನಿ: ಕನ್ನಡನಾಡಲ್ಲಿ ಹಾಗಾದರೆ ಕನ್ನಡವಲ್ಲದೆ ಇನ್ಯಾವ ಭಾಷೆಗೂ ಸಾರ್ವಜನಿಕ ಹಣ ಕೊಡಬಾರದೇ? ವಿಶ್ವವಿದ್ಯಾಲಯದಂತಹ ಸಂಸ್ಥೆಗಳನ್ನು ಕಟ್ಟಬಾರದೇ? ಎನ್ನಿಸಬಹುದು. ಧಾರಾಳವಾಗಿ ಜನರಿಗೆ ಉಪಯೋಗವಾಗುವ ಸಂಸ್ಥಗಳನ್ನು ಕಟ್ಟಬಹುದು. ಜನರ ದುಡ್ಡು ಹಾಕಬಹುದು. ಆದರೆ ಅಂತಹವುಗಳಿಂದ ಈ ನಾಡಿನ ಎಷ್ಟು ಜನರಿಗೆ, ಏನು ಉಪಯೋಗ ಎನ್ನುವುದರ ಸ್ಪಷ್ಟತೆ ಇರಬೇಕಾಗುತ್ತದೆ. ಹೀಬ್ರೂ ಪುನುರುತ್ಥಾನದಿಂದ ಇಸ್ರೇಲಿ ನಾಡಿನಲ್ಲಿ ಯಾವ್ಯಾಯ ನುಡಿಗಳು ಬಲಿಯಾದವೋ ಗೊತ್ತಿಲ್ಲಾ! ನಮ್ಮಲ್ಲಿ ಸಂಸ್ಕೃತವನ್ನು ಜನರಾಡುವ ಭಾಷೆಯಾಗಿಸುವ ಕೃತಕ ಪ್ರಯತ್ನ ಮಾಡಿದರೆ ನಮ್ಮ ನುಡಿಗಳಿಗೆ ಅಷ್ಟರ ಮಟ್ಟಿಗೆ ಘಾಸಿಯಾಗುತ್ತದೆ ಎನ್ನುವುದನ್ನಂತೂ ಅಲ್ಲಗಳೆಯಲಾಗದು.
1 ಅನಿಸಿಕೆ:
Joker swamiji
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!