ಸಣ್ಣರಾಜ್ಯವಾಗೋದೆಂದರೆ ತಲೆ ಮೇಲೆ ಚಪ್ಪಡಿ ಎಳೆದುಕೊಂಡಂತೆ!

(ಫೋಟೋಕೃಪೆ: ಪ್ರಜಾವಾಣಿ)
"ಆಂಧ್ರಪ್ರದೇಶವನ್ನು ಒಡೆದು ತೆಲಂಗಣಾ ರಾಜ್ಯ ರಚನೆಗೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣೀ ಒಪ್ಪಿದೆ. ಈ ತೀರ್ಮಾನವನ್ನು ಪಕ್ಷದ ಹೈಕಮಾಂಡಿಗೆ ಬಿಡಲಾಗಿತ್ತು. ಇನ್ನೇನು ರಾಜ್ಯರಚನೆ ಘೋಷಣೆಯಾಗಲಿದೆ" ಎನ್ನುವ ಸುದ್ದಿ ಇಂದಿನ (೨೭.೦೭.೨೦೧೩)ರ ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಅರೆರೆ... ಈ ಸುದ್ದಿ ಮುದ್ರಣ ಮಾಡಿದವರು ತಪ್ಪಾಗಿ ಮಾಡಿದ್ದಾರೆ, ಕೇಂದ್ರಸರ್ಕಾರ/ ಸಂಸತ್ತು ಒಪ್ಪಿದೆ ಅಂತಾ ಬರೆಯೋಕೆ ಕಾಂಗ್ರೆಸ್ ಪಕ್ಷ ಒಪ್ಪಿದೆ ಅಂತಾ ಬರ್ದಿದಾರೆ ಎಂದುಕೊಂಡು ಬೇರೆ ಬೇರೆ ಪತ್ರಿಕೆ ಓದಿದರೆ ಎಲ್ಲದರಲ್ಲೂ ಇದು ಹೀಗೇ ಇದೆ! ಇದನ್ನು ಓದಿದವರಿಗೆ ರಾಜ್ಯಗಳನ್ನು ಒಡೆಯೋ ಕೆಲಸ ಪಕ್ಕಾ ರಾಜಕೀಯದ್ದು ಎನ್ನಿಸಿದರೆ ತಪ್ಪೇನಿಲ್ಲಾ ಗುರೂ!

ತೆಲಂಗಣಾ ರಾಜಕೀಯ ಲೆಕ್ಕಾಚಾರ!

ತೆಲಂಗಣಾ ರಾಜ್ಯವೂ ಸೇರಿದಂತೆ ಹೊಸ ರಾಜ್ಯಗಳ ಬೇಡಿಕೆ ಇಂದು ನಿನ್ನೆಯದಲ್ಲಾ! ಇತ್ತೀಚಿನ ವರ್ಷಗಳಲ್ಲಿ ತೆಲಂಗಣಾ ಹೋರಾಟ ಮಾಡಿದಷ್ಟು ಸದ್ದು ಇನ್ಯಾವುದೂ ಮಾಡಿಲ್ಲ. ತೆಲಂಗಣಾ ರಾಷ್ಟ್ರಸಮಿತಿಯ ಚಂದ್ರಶೇಖರ್ ಅವರು ಅಮರಣಾಂತ ಉಪವಾಸ ಕುಳಿತದ್ದೂ, ಕೇಂದ್ರ ಗೃಹಮಂತ್ರಿಗಳಾಗಿದ್ದ ಚಿದಂಬರಂರವರು ರಾಜ್ಯ ರಚನೆಯ ಪ್ರಕ್ರಿಯೆಗೆ ಚಾಲನೆ ನೀಡುವ ಭರವಸೆ ನೀಡಿ ಉಪವಾಸ ಕೈಬಿಡುವಂತೆ ಮಾಡಿದ್ದೂ ಹಿಂದಾಗಿದೆ. ಇದೀಗ ೨೦೧೪ರ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಹೊಸ ರಾಜ್ಯವನ್ನು ಕಾಂಗ್ರೆಸ್ ಮುಂದಾಳ್ತನದ ಕೇಂದ್ರಸರ್ಕಾರ ಘೋಷಿಸಿಯೇ ಬಿಡುತ್ತದೆ ಎನ್ನುವ ವಾತಾವರಣ ಇದೆ. ೨೦೧೪ರ ಚುನಾವಣೆಗೆ ಮುನ್ನ ತೆಲಂಗಣಾ ರಾಜ್ಯ ಘೋಷಿಸಿದರೆ ಎಷ್ಟು ಲಾಭ/ ನಷ್ಟವಾದೀತು ಎಂಬ ಲೆಕ್ಕವನ್ನು ಕಾಂಗ್ರೆಸ್ ಮಾಡುತ್ತಿದ್ದರೆ ಈಗ ತೆಲಂಗಣಾ ಪರವಾಗಿರುವಂತೆ ತೋರಿಸಿಕೊಳ್ಳುತ್ತಿರುವ ಬಿಜೆಪಿ, ತೆಲಂಗಣಾ ರಚನೆಯಾಗದಿದ್ದರೆ... ನಾವು ಮಾಡ್ತೀವಿ ಎಂಬ ಭರವಸೆ ಕೊಟ್ಟು ಆ ಪ್ರದೇಶದಲ್ಲಿ ಎಷ್ಟು ಲೋಕಸಭೆಯ ಸೀಟುಗಳನ್ನು ಗಳಿಸಿಗೊಳ್ಳಬಹುದು ಎನ್ನುವ ಲೆಕ್ಕಾಚಾರ ಹಾಕುತ್ತಿದೆ. ಇಲ್ಲಿ ಈ ಎರಡೂ ರಾಜಕೀಯ ಪಕ್ಷಗಳು ತೆಲಂಗಣಾ ಜನರ ಹಿತ ಕಾಪಾಡುವ ಮಾತುಗಳನ್ನೇ ಆಡುತ್ತಿದ್ದರೂ ಆಳದಲ್ಲಿ ಇರುವುದು ಮುಂದಿನ ಲೋಕಸಭೆಯಲ್ಲಿ ಅಧಿಕಾರ ಹಿಡಿಯಬೇಕೆನ್ನುವ ತಂತ್ರವೇ ಆಗಿದೆ!

ಇನ್ನಷ್ಟು ಬೇಡಿಕೆಗಳು

ಇದಕ್ಕೆ ಒತ್ತು ನೀಡುವಂತೆ "ಹೊಸರಾಜ್ಯಗಳಿಗಾಗಿ ಒಕ್ಕೂಟ"ದ (Federation for new states) ಹೆಸರಲ್ಲಿ ಈಗಿರುವ ರಾಜ್ಯದಿಂದ ಬೇರೆಯಾಗಿ ತಮ್ಮದೇ ರಾಜ್ಯ ಕಟ್ಟಿಕೊಳ್ಳಲು ಬೇಡಿಕೆ ಇಟ್ಟಿರುವ ಕೆಲಪ್ರದೇಶಗಳ ನಾಯಕರು ದಿಗ್ವಿಜಯಸಿಂಗ್ ಅವರನ್ನು ಭೇಟಿಯಾಗಿ ಕೊಂಚ ಬೆದರಿಕೆ ಕೊಂಚ ಬೇಡಿಕೆ ಇಟ್ಟುಬಂದಿದ್ದಾರೆ ಎನ್ನುವ ಸುದ್ದಿ ಬಂದಿದೆ. ಗೂರ್ಖಾಲ್ಯಾಂಡ್, ಉತ್ತರಪ್ರದೇಶದ ನಾಲ್ಕು, ವಿದರ್ಭ ಮೊದಲಾದ ಹಳೆಯ ಬೇಡಿಕೆಗಳಿಗೆ ಹೊಸದನಿ ಬಂದಂತಾಗಿದೆ. ಒಂದು ಲೆಕ್ಕದಲ್ಲಿ ಈಗ ಎಲ್ಲೆಡೆಯಿಂದ ಎದ್ದಿರುವ "ತೆಲಂಗಣಾ ರಚಿಸಿದರೆ ನಾವೂ ಕ್ರಾಂತಿಯ ಹೋರಾಟಕ್ಕಿಳಿಯುತ್ತೇವೆ" ಎಂಬ ಕೂಗೂ ಕೂಡಾ ಎದ್ದಿದ್ದು ಇದು ಹೊಸದಾದ ರಾಜ್ಯ ಪುನರ್ವಿಂಗಡನಾ ಆಯೋಗವೊಂದರ ರಚನೆಗೆ ಕಾರಣವಾಗಲೂಬಹುದು! ಇದೇನೆ ಇದ್ದರೂ ಸಣ್ಣರಾಜ್ಯಗಳ ರಚನೆಗೆ ಇರುವ ಉದ್ದೇಶವೇ ಬೇರೆಯಾದುದಾಗಿದೆ. ಅಪಾಯದ ವಿಷಯವೆಂದರೆ ದೆಹಲಿಯ ಸಂಸತ್ತು ಒಂದು ರಾಜ್ಯದ ವಿಧಾನಸಭೆಯ ಮುಂದೆ ಈ ವಿಷಯವೇ ಹೋಗದಂತೆ ಮಾಡಿ, ತಾನೇ ತಾನಾಗಿ ಆ ರಾಜ್ಯವನ್ನು ಒಡೆಯಬಹುದು ಎಂಬುದಾಗಿದೆ.

ಸಣ್ಣ ರಾಜ್ಯ ಬೇಕೆನ್ನುವುದರ ಹಿಂದೆ...


ಕೆಲದಿನಗಳ ಹಿಂದೆ ಕರ್ನಾಟಕದ ರಾಜಕಾರಣಿಯೊಬ್ಬರು ಉತ್ತರ ಕರ್ನಾಟಕವನ್ನು ಬೇರೆ ರಾಜ್ಯ ಮಾಡಿದರೆ, ತಾವೋ ತಮ್ಮ ಮಗನೋ ಮುಖ್ಯಮಂತ್ರಿಯಾಗುತ್ತೇವೆ ಎಂಬರ್ಥದಲ್ಲಿ ಮಾತಾಡಿದ್ದರು. ಭಾಷಾಧಾರಿತ ರಾಜ್ಯಗಳನ್ನು ರಚಿಸಿದ ನಂತರ ಇಂತಹ ರಾಜ್ಯಗಳ ಭಾಗವಾಗಿದ್ದ ಕೆಲಪ್ರದೇಶಗಳಲ್ಲಿ ತಾವು ಬೇರೆಯೇ ರಾಜ್ಯವಾಗಬೇಕೆಂಬ ಬೇಡಿಕೆಯಾಯಿತು. ಮೊದಲಲ್ಲಿ ಇದಕ್ಕಾಗಿ ‘ತಮ್ಮ ಸಂಸ್ಕೃತಿ, ಉಡುಗೆ ತೊಡುಗೆ, ನಡೆನುಡಿಗಳು ಅನನ್ಯವಾಗಿದ್ದು ಇವು ಈಗಿರುವ ರಾಜ್ಯಕ್ಕಿಂತ ಬೇರೆಯೇ ಆಗಿದೆ’ ಎಂಬ ದನಿಯನ್ನು ಎತ್ತಲಾಯಿತು. ಮುಂದೆ ಈ ಕೂಗು ‘ಅಸಮಾನತೆ, ಆರ್ಥಿಕ ಬೆಳವಣಿಗೆ, ತಾರತಮ್ಯ ಮುಂತಾದ ಕಾರಣಗಳಾಗಿ’ ಬದಲಾಯ್ತು. ಇದಕ್ಕೆ ಪೂರಕವಾಗಿ "ಭಾರತೀಯತೆ ಎಂಬ ಗುರುತನ್ನು ಬಿಟ್ಟು ಇನ್ನೆಲ್ಲಾ ಗುರುತುಗಳೂ ಬಲಹೀನವಾಗುವುದು ಭಾರತದ ಒಗ್ಗಟ್ಟಿಗೆ ಸಾಧನ" ಎಂದು ನಂಬಿರುವಂತೆ ತೋರುವ ಬಿಜೆಪಿಯು ಹಿಂದಿನಿಂದಲೂ ಸಣ್ಣರಾಜ್ಯಗಳ ಪರವಾಗಿರುವುದಷ್ಟೇ ಅಲ್ಲದೆ ಭಾಷಾವಾರು ರಾಜ್ಯರಚನೆಯ ವಿರೋಧಿಯೂ ಆಗಿದ್ದು ಈ ಹೋರಾಟಗಳಿಗೆ ಬೆಂಬಲ ನೀಡುತ್ತಾ ಬಂತು. "ಆಡಳಿತದ ದೃಷ್ಟಿಯಿಂದ ಸಣ್ಣರಾಜ್ಯಗಳು ಪರಿಣಾಮಕಾರಿ" ಎಂಬ ನಶೆಯ ಮದ್ದು ಇಂತಹ ಕೂಗಿಗೆ ಬಲತಂದಿತು. ಆದರೆ ಭಾರತದಲ್ಲಿ ಸಣ್ಣ ರಾಜ್ಯಗಳನ್ನು ರಚಿಸುವುದರ ಹಿಂದಿರುವ ಉದ್ದೇಶ ರಾಜ್ಯಗಳ ಉದ್ಧಾರವಂತೂ ಅಲ್ಲಾ! ಇಲ್ಲದಿದ್ದರೆ ಈಗಾಗಲೇ ಚಿಕ್ಕದಾಗಿರುವ ಗೋವಾ, ಜಾರ್ಖಂಡ್, ಚತ್ತೀಸಗಡಗಳಂತಹ ರಾಜ್ಯಗಳು ಉದ್ಧಾರವಾಗಿಬಿಡಬೇಕಾಗಿತ್ತು. ವಾಸ್ತವವಾಗಿ ದೊಡ್ಡರಾಜ್ಯಗಳು ಕೇಂದ್ರಸರ್ಕಾರದ ಮೇಲೆ ಹೊಂದಿರುವ ಹಿಡಿತವನ್ನು ಕಡಿಮೆ ಮಾಡಬೇಕೆನ್ನುವುದೇ ಸಣ್ಣ ರಾಜ್ಯಗಳನ್ನು ರಚಿಸಬೇಕೆಂಬ ಕೇಂದ್ರದ (ವಾಸ್ತವವಾಗಿ ರಾಷ್ಟ್ರೀಯ ಪಕ್ಷಗಳ) ಆಶಯದ ಹಿಂದಿರುವುದು ಎನ್ನಿಸುತ್ತದೆ.

ಸಣ್ಣರಾಜ್ಯ ಪರಿಣಾಮಕಾರಿ ಆಗಬೇಕೆಂದರೆ...

ಡಾ. ಬಿ ಆರ್ ಅಂಬೇಡ್ಕರ್ ಅವರು ಭಾಷಾವಾರು ರಾಜ್ಯರಚನೆಯ ಬಗ್ಗೆ ಮಾತಾಡುತ್ತಾ ಒಂದು ಭಾಷೆಯ ಹಲವು ರಾಜ್ಯಗಳು ಇದ್ದರೂ ಪರವಾಗಿಲ್ಲ, ಒಂದು ರಾಜ್ಯದಲ್ಲಿ ಹಲವು ಭಾಷೆಗಳಿರುವುದು ಸಮಸ್ಯಾತ್ಮಕ ಎಂದಿದ್ದರಂತೆ. ವಾಸ್ತವವಾಗಿ ಕನ್ನಡವಾಡುವ ಮೂರೋ, ಮರಾಟಿಯಾಡುವ ಎರಡೋ, ತೆಲುಗನ್ನಾಡುವ ಮೂರೋ ರಾಜ್ಯಗಳಾಗುವುದು ಅಂಥಾ ಸಮಸ್ಯೆಯೇನಲ್ಲಾ! ಸಮಸ್ಯೆಯಿರುವುದು ಭಾರತ ಮತ್ತು ಅಂತಹ ಪುಟ್ಟರಾಜ್ಯಗಳ ನಡುವಿನ ಸಂಬಂಧದಲ್ಲಿ. ಪುಟ್ಟ ರಾಜ್ಯವೊಂದು ಜನಸಂಖ್ಯೆಯ ಆಧಾರದ ಮೇರೆಗೆ ತನಗೆ ಹಂಚಿಕೆಯಾದ ಸಂಸದರ ಸಂಖ್ಯೆಯನ್ನು ಬಳಸಿಕೊಂಡೇ ಕೇಂದ್ರದಲ್ಲಿ ಲಾಬಿ ಮಾಡಿ ತನ್ನ ಹಿತ ಕಾಪಾಡಿಕೊಳ್ಳಬೇಕೆಂಬ ಪರಿಸ್ಥಿತಿಯಲ್ಲಿ! ಭಾರತವು ರಾಜ್ಯಗಳ ಸಮಾನ ಪ್ರಾತಿನಿಧಿತ್ವ ಮತ್ತು ಸಮಾನ ಗೌರವದ ಒಕ್ಕೂಟ ವ್ಯವಸ್ಥೆಯಾಗುವುದಾದಲ್ಲಿ ಸಣ್ಣ ರಾಜ್ಯಗಳು ಉಪಯೋಗಕರವಾದರೂ ಆಗಬಹುದು. ಇಂದಿನ ಸ್ಥಿತಿಯಲ್ಲಿ ರಾಜ್ಯವೊಂದು ಒಡೆದು ಹೋಗುವುದು ಎಂದರೆ ಕೇಂದ್ರದ ಮೇಲೆ ತನಗಿರುವ ಅಷ್ಟೋ ಇಷ್ಟೋ ಹಿಡಿತವನ್ನು ಕಳೆದುಕೊಳ್ಳುವುದು ಎಂದೇ ಅರ್ಥ. ಹಾಗಾಗೇ ಆಂಧ್ರವನ್ನು ಒಡೆಯಲು ಉತ್ಸಾಹ ತೋರುವ ದೊಡ್ಡರಾಜ್ಯದ ರಾಜಕಾರಣಿಗಳು ಇದೇ ಮಾತನ್ನು ತಮ್ಮ ರಾಜ್ಯದ ಬಗ್ಗೆ ಆಡಲಾರರು. ತೆಲಂಗಣಾ ಪರವಾದ ಬಿಜೆಪಿಯ ನರೇಂದ್ರಮೋದಿಯವರು ಗುಜರಾತನ್ನು ಮೂರು ರಾಜ್ಯ ಮಾಡಲು ಒಪ್ಪುವರೇ ಎಂಬುದು ಕುತೂಹಲಕಾರಿ. ಉತ್ತರ ಪ್ರದೇಶ, ಬಿಹಾರದ ರಾಜಕಾರಣಿಗಳಲ್ಲಿ ಕೆಲವರು ಸಂಸತ್ತಿನಲ್ಲಿ ತೆಲಂಗಣಾ ಪರವಾಗಿ ಮಾತಾಡಲು ಮುಂದಾಗುವಷ್ಟೇ ಉತ್ಸಾಹವನ್ನು ಮಾಯಾವತಿಯವರ ನಾಲ್ಕು ರಾಜ್ಯ ಮಾಡುವ ಪ್ರಸ್ತಾಪ ಕಂಡು ಬೆಚ್ಚಿ ಬೀಳುತ್ತಾರೆ ಎಂಬುದು ವಾಸ್ತವ. ಚಿಕ್ಕರಾಜ್ಯ ಆಡಳಿತಕ್ಕೆ ಒಳ್ಳೆಯದು ಎನ್ನುತ್ತಾ ಆಂಧ್ರವನ್ನು ಒಡೆಯಲು ಮುಂದಾಗುವ ಬಿಜೆಪಿ, ದೊಡ್ಡ ಉತ್ತರಪ್ರದೇಶವನ್ನು ಒಡೆಯುವುದನ್ನು ವಿರೋಧಿಸುವುದು ಯಾಕೆ ಎಂಬುದನ್ನು ಅರಿತರೆ ಇದರ ಹಿಂದಿನ ಹುನ್ನಾರ ತಿಳಿಯುತ್ತದೆ!

ಕೊನೆಹನಿ ೧:ಒಗ್ಗಟ್ಟಿನಲ್ಲಿ ಬಲವಿದೆ ಎಂದು ಅರಿಯದ ತೆಲಂಗಣಾ, ವಿದರ್ಭದಂತಹ ಪ್ರದೇಶಗಳ ಮಂದಿ "ನಾನು ಈಗಿರುವ ರಾಜ್ಯದಲ್ಲಿ ಎದುರಿಸುತ್ತಿರುವ ನನ್ನ ಸಮಸ್ಯೆಗೆ ಪರಿಹಾರ... ಪ್ರತ್ಯೇಕವಾಗುವುದು" ಎಂದುಕೊಂಡಿದ್ದಾರೆ. ಆದರೆ ಇವರನ್ನು ಬೆಂಬಲಿಸುತ್ತಿರುವ ಕೇಂದ್ರದ ಮಂದಿ "ಒಗ್ಗಟ್ಟಿನಲ್ಲಿ ತೊಡಕಿದೆ" ಅಂದರೆ "ಇವರ ಒಗ್ಗಟ್ಟಿನಲ್ಲಿ ಕೇಂದ್ರಸರ್ಕಾರದ ಸಾರ್ವಭೌಮತ್ವಕ್ಕೆ ತೊಡಕಿದೆ" ಎಂಬುದಾಗಿ ಭಾವಿಸಿ ಇದನ್ನು ಮುರಿಯಲು ಸಂಚು ಮಾಡುತ್ತಲೇ ಇರುತ್ತಾರೆ. ಅದೇ ಇಂದಿನ ಸಣ್ಣರಾಜ್ಯಗಳ ರಚನೆಗೆ ಮೂಲಕಾರಣ ಎನ್ನಬಹುದು.

ಕೊನೆಹನಿ ೨: ಇಬ್ಬರ ಜಗಳ ಮೂರನೆಯವರಿಗೆ ಲಾಭ ಎನ್ನುವುದನ್ನು ಬದಲಿಸಿ ತೆಲಂಗಣಾ, ರಾಯಲಸೀಮ ಮತ್ತು ಆಂಧ್ರದವರ ಮನೆಯೊಡಕಿನ ಲಾಭ ಕೇಂದ್ರಕ್ಕೆ ಎನ್ನಬಹುದು! ತೆಲಂಗಣಾ ಮತ್ತು ಆಂಧ್ರದವರಿಗೆ ರಾಜ್ಯ ಪಾಲುಮಾಡಿಕೊಟ್ಟ ಕೇಂದ್ರಕ್ಕೆ ಹೈದರಾಬಾದ್ ಲಾಭ ಎನ್ನಬಹುದು. ಯಾಕೆಂದರೆ ಹೈದರಾಬಾದ್ ಇನ್ಮೇಲೆ ಕೇಂದ್ರಾಡಳಿತ ಪ್ರದೇಶವಾಗುತ್ತದೆಯಂತೆ!

ಹೃದಯದಲಿ ಇದೇನಿದೂ.. ಅಮೆಜಾನ್ ನದಿ ಓಡಿದೆ!

ಅಮೆಜಾನ್ ಎನ್ನುವುದು ಒಂದು ಅಮೇರಿಕ ಮೂಲದ ದೈತ್ಯ "ಮಿಂಬಲೆ ಬೆಸೆದ ವ್ಯಾಪಾರ" ಸಂಸ್ಥೆಯಾಗಿದೆ. ಇದು ಜಗತ್ತಿನ ಅತಿದೊಡ್ಡ ಸಂಸ್ಥೆಗಳಲ್ಲಿ ಒಂದಾಗಿದ್ದು ಪುಸ್ತಕಗಳು, ಸಿನಿಮಾ ಸಿ.ಡಿಗಳೇ ಮೊದಲಾದ ಹತ್ತುಹಲವು ಸಾಮಾಗ್ರಿಗಳನ್ನು ಅಂತರ್ಜಾಲದಿಂದ ಮಾರುವ ಮೂಲಕ ಕೊಳ್ಳುಗರಿಗೆ ಅನುಕೂಲ ಮಾಡುತ್ತಿದೆ. ಇತ್ತೀಚಿಗಷ್ಟೇ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿದ ಈ ಸಂಸ್ಥೆಯು, ಮಾರಾಟಕ್ಕೆ ಇಟ್ಟ ಸರಕಿನಲ್ಲಿ ಕನ್ನಡಕ್ಕೆ ಕಾಲ್ಧೂಳಿನಷ್ಟು ಜಾಗವೂ ಇರಲಿಲ್ಲ! ಇಂಥಾ ಸಂದರ್ಭವು ನಮ್ಮೆಲ್ಲರಿಗೂ ಸಾಮಾನ್ಯ. ಈ ರೀತಿಯ ಸಂಸ್ಥೆಗಳ ಸಾಲಿಗೆ ಇದೊಂದು ಹೊಸ ಹೆಸರು ಸೇರ್ಪಡೆ ಎಂದುಕೊಂಡು ಅವರನ್ನು ಬಯ್ಕೊಳ್ಳೋ ಕೆಲಸ ಮಾಡೋದು ಕೂಡಾ ನಮಗೆ ಮಾಮೂಲಿ. ಈ ಬಾರಿ ಮಾತ್ರಾ ಹಾಗಾಗಿಲ್ಲಾ! ಏನಾಗಿದೆ ಅನ್ನೋದನ್ನು ತಿಳಿಸೋದೇ ಈ ಕಥೆ!

ಗ್ರಾಹಕನ ತಾಕತ್ತು! 

ಇದನ್ನು ಕಂಡ ಶ್ರೀ ವಾಸುಕಿ ರಾಘವನ್ ಎಂಬ ಗ್ರಾಹಕರು, ಹಾಗೆ ಕೊರಗೋದಕ್ಕಿಂತ ಒಂದು ಹೆಜ್ಜೆ ಮುಂದೆಹೋಗಿ ಅಮೆಜಾನ್ ಸಂಸ್ಥೆಯ ಅಧಿಕಾರಿಯನ್ನು ಸಂಪರ್ಕಿಸಿದ್ದಾರೆ. ಅವರಿಗೆ ಕರ್ನಾಟಕದ ಬಗ್ಗೆ ಹೇಳಿ... ಇಲ್ಲಿ ಕನ್ನಡನಾಡಿದೆ, ಕನ್ನಡ ನುಡಿಯಿದೆ, ಕನ್ನಡ ಜನರಿದ್ದಾರೆ, ಇವರದ್ದೊಂದು ಶ್ರೀಮಂತ ಸಂಸ್ಕೃತಿಯಿದೆ, ಇವರದ್ದೇ ಆದ ಸಿನಿಮಾರಂಗವಿದೆ, ಸಾವಿರಕ್ಕೂ ಮಿಗಿಲಾದ ಸಿನಿಮಾಗಳಿವೆ, ಇವುಗಳಿಗೆ ಆರುಕೋಟಿ ಗ್ರಾಹಕರ ದೊಡ್ಡ ಸಮುದಾಯದ ಮಾರುಕಟ್ಟೆಯಿದೆ ಎಂದೆಲ್ಲಾ ಮನವರಿಕೆ ಮಾಡಿಕೊಟ್ಟಿದ್ದಾರೆ. ಅದರೊಟ್ಟಿಗೆ ಸಮಾನ ಮನಸ್ಕ ಕನ್ನಡ ಗ್ರಾಹಕರ ಆಶಾ ತಾಣವಾದ "ಅಂಗಡಿಯಲ್ಲಿ ಕನ್ನಡ ನುಡಿ" ಮಿಂದಾಣದ ಮೂಲಕ ಹಲವಾರು ಕನ್ನಡಿಗ ಗ್ರಾಹಕರನ್ನು ಒಗ್ಗೂಡಿಸಿ, ಅಮೆಜಾನ್ ಸಂಸ್ಥೆಯ ಸಂಬಂಧಿಸಿದ ಅಧಿಕಾರಿಗಳಿಗೆ ಈ ಕುರಿತು ಪತ್ರ ಬರೆಯುವಂತೆ ಪ್ರೇರೇಪಿಸಿದ್ದಾರೆ. ಹೀಗಾಗಿ ಅನೇಕ ಪತ್ರಗಳು ಹೋಗಿವೆ. ಇದರ ಪರಿಣಾಮವಾಗಿ ಅಮೆಜಾನ್ ಬದಲಾಗಿದೆ.

ಹನ್ನೆರಡು ಸಾವಿರಕ್ಕೂ ಹೆಚ್ಚಿನ ಸಿನಿಮಾಗಳು ಅಮೆಜಾನ್‌ನಲ್ಲಿ ಮಾರಾಟಕ್ಕೆ ಸಿಗುತ್ತಿದ್ದು ಅದರಲ್ಲಿ ಹಿಂದೀಯ ೫೭೦೦ ಸಿನಿಮಾಗಳು, ತಲಾ ಐವತ್ತರಷ್ತು ತಮಿಳು ತೆಲುಗು ಸಿನಿಮಾಗಳು ಇದ್ದು ಕನ್ನಡದ್ದು ಒಂದೂ ಇರಲಿಲ್ಲ. ಇದೀಗ ಗ್ರಾಹಕರ ಪತ್ರಗಳ ಪರಿಣಾಮವಾಗಿ ಕನ್ನಡದ ೪೧೧ ಸಿನಿಮಾಗಳ ಸಿ.ಡಿಗಳನ್ನು ಮಾರಾಟಕ್ಕೆ ಇಡಲಾಗಿದೆ. ಈ ಯಶಸ್ಸು ಗ್ರಾಹಕರಾಗಿ ನಾವೇನು ಸಾಧಿಸಬಹುದೆಂಬುದಕ್ಕೆ, ನಮ್ಮ ತಾಕತ್ತಿಗೆ ಸಾಕ್ಷಿಯಾಗಿ ನಿಂತಿದೆ.

ಈ ಬೆಳವಣಿಗೆ ಕನ್ನಡಿಗರ ಕಣ್ಣು ತೆರೆಸಲಿ. ಕನ್ನಡಿಗ, ತನ್ನ ಬತ್ತಳಿಕೆಯಲ್ಲಿರುವ ಗ್ರಾಹಕನ ಹಕ್ಕೆನ್ನುವ ಶಸ್ತ್ರವನ್ನು ಹೊರತೆಗೆಯಲಿ. ಎಲ್ಲಾ ಕ್ಷೇತ್ರಗಳಲ್ಲಿನ ಮಾರಾಟಗಾರರನ್ನು/ ಸೇವೆನೀಡುವವರನ್ನು ಕನ್ನಡದಲ್ಲಿ ಸೇವೆ ನೀಡುವಂತೆ ಒತ್ತಾಯಿಸಲಿ. ಇದು ನಿಜವಾದ ಕನ್ನಡ ಚಳವಳಿ! ಶ್ರೀ ವಾಸುಕಿ ರಾಘವನ್ ಸಹಿತ ಅಂಗಡಿಯಲ್ಲಿ ಕನ್ನಡ ನುಡಿ ತಂಡದ ಎಲ್ಲರಿಗೂ ಅಭಿನಂದನೆಗಳು. 

ಅಂಗಡಿಯಲ್ಲಿ ಕನ್ನಡ ನುಡಿ ಸೇರಲು ಇಲ್ಲಿ ಬನ್ನಿ: https://www.facebook.com/Angadiyalikannadanudi?fref=ts


ಜನಸಂಖ್ಯಾ ದಿನಾಚರಣೆ: ತಲೆ ಸವರೋ ಜಾಹೀರಾತು

(ಫೋಟೋ ಕೃಪೆ: ಪ್ರಜಾವಾಣಿ)
(ಫೋಟೋಕೃಪೆ: ಟೈಮ್ಸ್ ಆಫ಼್ ಇಂಡಿಯಾ)

ವಿಶ್ವ ಜನಸಂಖ್ಯಾ ದಿನಾಚರಣೆಯೆಂದು ಜುಲೈ ೧೧ನ್ನು ಭಾರತದಲ್ಲಿಯೂ ಆಚರಿಸುತ್ತಾರೆ. ಈ ಸಂದರ್ಭದಲ್ಲಿ ಒಂದು ಇಡೀ ಪುಟದ ಜಾಹೀರಾತನ್ನು ದಿನಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಈ ಜಾಹೀರಾತಿನಲ್ಲಿ ಎಷ್ಟು ಚೆನ್ನಾಗಿ ವಿಷಯಗಳನ್ನು ಹೇಳಿದ್ದಾರೆ ಎಂದರೆ ಭಾರತ ಸರ್ಕಾರವು ಜನರ ತಲೆಸವರುವುದರಲ್ಲಿ ಸಂಪೂರ್ಣವಾಗಿ ಪರಿಣಿತಿಯನ್ನು ಗಳಿಸಿರುವಂತೆ ಭಾಸವಾಗುತ್ತದೆ. 

ಸುಳ್ಳು ಪ್ರಚಾರ!

"ಗೊತ್ತಾದ ಆದಾಯವಿರುವಾಗ, ಅದರ ಮೇಲೆ ಅವಲಂಬಿತರಾಗಿರುವವರ ಸಂಖ್ಯೆಯು ಕಡಿಮೆ ಆದಷ್ಟೂ ಒಬ್ಬೊಬ್ಬರ ಪಾಲು ಹೆಚ್ಚುತ್ತಾ ಹೋಗುತ್ತದೆ" ಎನ್ನುವುದು ಒಂದನೇ ತರಗತಿ ಮಗುವಿಗೂ ಗೊತ್ತಿರುವ ದಿಟ. ಇದನ್ನು ದೊಡ್ಡದಾಗಿ ಬಿಂಬಿಸುತ್ತಾ, ಚಿಕ್ಕಕುಟುಂಬವನ್ನು ಪ್ರೋತ್ಸಾಹಿಸುತ್ತಾ, ಕಡಿಮೆ ಮಕ್ಕಳನ್ನು ಮಾಡಿಕೊಳ್ಳಲು ಭಾರತ ಸರ್ಕಾರ ಜನರನ್ನು ಪ್ರೇರೇಪಿಸುತ್ತಿದೆ. ವಿಷಯವನ್ನು ಇಷ್ಟು ಸರಳಗೊಳಿಸಿ ಬಸಿರುತಡೆ ಪ್ರಚಾರಕ್ಕೆ ಮುಂದಾಗಿರೋ ಭಾರತ ಸರ್ಕಾರಕ್ಕೆ ‘ಈ ವಿಷಯವು ಈ ಜಾಹೀರಾತಿನಲ್ಲಿರುವಷ್ಟು ಸರಳವಲ್ಲಾ’ ಎನ್ನುವುದು ಗೊತ್ತಿದ್ದೂ ನಾಟಕವಾಡುತ್ತಿದೆ ಎಂಬ ಅನುಮಾನ ಕಾಡುತ್ತದೆ. ಏಕೆಂದರೆ ಈ ಜಾಹೀರಾತಿನ ಹಿಂದೆ ಮರೆಮಾಚಿರುವ ವಿಷಯಗಳೂ ಸಾಕಷ್ಟಿವೆ.

"ಭಾರತದಲ್ಲಿ ೨೧ ರಾಜ್ಯಗಳಲ್ಲಿ ಜನರು ಎರಡು ಮಕ್ಕಳಿಗಿಂತಾ ಕಡಿಮೆ ಮಕ್ಕಳನ್ನು ಹೊಂದಿರಲು ಸೀಮಾರೇಖೆಯನ್ನು ಹಾಕಿಕೊಂಡಿದ್ದಾರೆ" ಹೀಗೆನ್ನುತ್ತಾ ನೀಡುತ್ತಿರುವ ಸಂದೇಶವಾದರೂ ಏನು? ನೀವೂ ಅವರಲ್ಲೊಂದಾಗಿ ಎನ್ನುವುದೇ ತಾನೇ? ನಮ್ಮ ಸುತ್ತಮುತ್ತಲಲ್ಲೇ ಇರುವ ಜನರ ನಡುವೆಯೇ ಮೂರನೆಯ ಮಗುವನ್ನು ಹಡೆದವರನ್ನು ಕಂಡೊಡನೆ ಇವರು ‘ದೇಶದ್ರೋಹಿ’ ಎನ್ನುವ ಹಾಗೆ ನೋಡುವಂತೆ, ಮೂರನೆಯ ಮಗುವನ್ನು ಹಡೆಯಲು ಅಪರಾಧಿಭಾವದಿಂದ ಹಿಂಜರಿಯುವಂತೆ ತನ್ನ ನಿರಂತರ ಪ್ರಚಾರದಿಂದ ಜನರ ತಲೆ ಸವರಿರುವುದನ್ನು ನಾವು ನೋಡುತ್ತಲೇ ಇದ್ದೇವೆ. ಇಷ್ಟೇ ಅಲ್ಲದೆ ವಿಮಾ ಸೌಲಭ್ಯದಿಂದ, ಬಡ್ತಿಯಿಂದ, ಕಡೆಗೆ ಚುನಾವಣೆಗೆ ಸ್ಪರ್ಧಿಸುವುದರಿಂದಲೂ ಮೂರುಮಕ್ಕಳನ್ನು ಹೆತ್ತವರನ್ನು ದೂರವಿಡುವ ಮೂಲಕ ಸರ್ಕಾರ ಮಾಡುತ್ತಿರುವುದು ಒತ್ತಾಯದ ಕೆಲಸವಲ್ಲದೆ ಮತ್ತೇನು? ಹೀಗೆ ತಲೆ ಸವರಲು ದೇಶಪ್ರೇಮದ ಎಣ್ಣೆಯನ್ನು ಕೂಡಾ ತಿಕ್ಕಲು ಹಿಂದೆ ಮುಂದೆ ನೋಡಿಲ್ಲಾ ಎನ್ನುವುದಕ್ಕೆ ಈ ಜಾಹೀರಾತೇ ಸಾಕ್ಷಿಯಾಗಿದೆ ಎನ್ನಬಹುದು. ಇಲ್ಲದಿದ್ದರೆ "ಸಣ್ಣಕುಟುಂಬ ಕುಟುಂಬಕ್ಕೆ, ಸಮಾಜಕ್ಕೆ ಮತ್ತು ದೇಶದ ಪ್ರಗತಿಗೆ ಒಳ್ಳೆಯದು" ಎಂದೇಕೆ ಹೇಳುತ್ತಿತ್ತು?! 

ಈ ಜಾಹೀರಾತು ಹೇಳುವಂತೆ ಭಾರತದ ಯಾವ ಇಪ್ಪತ್ತೊಂದು ರಾಜ್ಯಗಳು ಇಬ್ಬರು ಮಕ್ಕಳನ್ನು ಹೊಂದಿರುವ ಗುರಿಯನ್ನು ಹಾಕಿಕೊಂಡಿವೆ ಎಂಬುದನ್ನು ಈ ಪಟ್ಟಿಯಲ್ಲಿ ನೋಡೋಣ.
(ಮಾಹಿತಿ ಕೃಪೆ: http://www.censusindia.gov.in/vital_statistics/srs/Chap_3_-_2010.pdf)
ಇಡೀ ಜಾಹೀರಾತಿನಲ್ಲಿ ಮೋಸ ಅಡಗಿರುವುದೇ ಈ ಮಾತಿನಲ್ಲಿ. ‘ಯಾವುದೇ ರಾಜ್ಯವು ೨.೧ರ  ಹೆರುವೆಣಿಕೆ (ಟಿಎಫ್‌ಆರ್) ಮಟ್ಟವನ್ನು ತಲುಪಿದೆಯೆಂದರೆ ಅಲ್ಲಿನ ಜನಸಂಖ್ಯೆಯು ಸ್ಥಿರತೆ ಸಾಧಿಸಿದೆ ಎಂದು ಅರ್ಥ’ ಎನ್ನುವ ಸರ್ಕಾರದ ಜಾಹೀರಾತು, ಈ ಸಂಖ್ಯೆ ೨.೧ಕ್ಕಿಂತ ಕಡಿಮೆಯಾದರೆ ಏನು ಎಂಬ ಬಗ್ಗೆ ಯಾವ ಕಾಳಜಿಯನ್ನೂ ತೋರುತ್ತಿಲ್ಲ. ‘ಇಡೀ ಭಾರತದ ಜನಸಂಖ್ಯೆ ಸ್ಥಿರತೆ ಕಾಯ್ದುಕೊಳ್ಳುವ ಗುರಿ ಸಾಧಿಸೋಣ’ ಎನ್ನುತ್ತಾ, ಈಗಾಗಲೇ ೨.೧ಕ್ಕಿಂತ ಕಡಿಮೆ ಟಿಎಫ಼್‌ಆರ್ ತಲುಪಿರುವ ಕೊಡವ, ತುಳುವ,   ಕನ್ನಡಿಗರಂತಹ ಜನಾಂಗಗಳ ಬಲಿಯನ್ನು ಭಾರತ ಸರ್ಕಾರ ಬೇಡುತ್ತಿದೆ. ಈ ಬಗ್ಗೆ ಭಾರತ ಸರ್ಕಾರದ್ದು ದಿವ್ಯ ನಿರ್ಲಕ್ಷ್ಯ ಎಂದು ಮೇಲ್ನೋಟಕ್ಕೆ ಅನ್ನಿಸಿದರೂ ವಾಸ್ತವವಾಗಿ "ಹೆರುವೆಣಿಕೆ ೨.೧ಕ್ಕಿಂತ ಕಡಿಮೆಯಾದರೆ ಆ ಜನಾಂಗದ ಅಳಿವಿಗೆ ಅದು ದಾರಿ" ಎಂಬುದನ್ನು ಅರಿಯದಷ್ಟು ಮುಗ್ಧತೆ ಭಾರತ ಸರ್ಕಾರದ್ದು ಎಂಬುದನ್ನು ನಂಬಲು ಕಷ್ಟವಾಗುತ್ತದೆ. ಇಂದಿಗೂ ಹಿಂದೀ ಭಾಷಿಕರ ಉತ್ತರಪ್ರದೇಶ, ಬಿಹಾರ, ಮಧ್ಯಪ್ರದೇಶಗಳಿಗೆ ಹೆರುವಣಿಕೆಯ ಗುರಿ ೩ಕ್ಕಿಂತಾ ಹೆಚ್ಚೇ ಇದೆ. ಇಂಥಾದ್ದರಲ್ಲಿ ನಮ್ಮ ರಾಜ್ಯದ ಜನರಲ್ಲಿ "ಚಿಕ್ಕ ಕುಟುಂಬ ಸುಖೀ ಕುಟುಂಬ" ಎನ್ನುವ ಮನೋಭೂಮಿಕೆಯನ್ನು ಹುಟ್ಟುಹಾಕಿ, ಕನ್ನಡನಾಡಿನ ಟಿಎಫ಼್‌ಆರನ್ನು ೨.೧ಕ್ಕಿಂತಾ ಕಡಿಮೆ ಗುರಿಕೊಟ್ಟು ಕೆಳಗಿಳಿಸುತ್ತಿರುವುದು "ಜನಾಂಗೀಯ ನಿರ್ಮೂಲನೆ"ಯ ಕ್ರಮವೇ ಆಗಿಬಿಡುತ್ತದೆ.

ವಿಶ್ವಸಂಸ್ಥೆಯೇ ವಾಸಿ!

ಹಾಗೆ ನೋಡಿದರೆ ವಿಶ್ವಸಂಸ್ಥೆಯವರೇ ವಾಸಿ. ಅವರು ಇದುವರೆವಿಗೆ ವಿಶ್ವಜನಸಂಖ್ಯಾ ದಿನಾಚರಣೆಯ ಸಂದರ್ಭದಲ್ಲಿ ಘೋಷಿಸಿರುವ ನಿಲುವುಗಳನ್ನೊಮ್ಮೆ ನೋಡಿ. ಚಿಕ್ಕಂದಿನಲ್ಲಿ ತಾಯ್ತನ ಬೇಡ, ಬಯಸದ ಬಸಿರು ಬೇಡ, ಆರೋಗ್ಯವಂತ ಬಸುರಿ ಮತ್ತು ಆರೋಗ್ಯಕರ ಮಗು, ಸ್ತ್ರೀ ಸಮಾನತೆ, ಸಂಪನ್ಮೂಲ, ವಿದ್ಯೆ ಮೊದಲಾದ ಬಣ್ಣಗಳನ್ನು ಮೇಲೆಮೇಲೆ ಕಾಣುವಂತಾದರೂ ಹೇಳುತ್ತಿದೆ. ಹೀಗೆ ಹೇಳುತ್ತಲೇ ಬೇರೆ ಬೇರೆ ದೇಶಗಳಲ್ಲಿ ಕುಟುಂಬ ನಿಯಂತ್ರಣವನ್ನು ನಾನಾ ವಿಧಗಳ ಮೂಲಕ ಜಾರಿ ಮಾಡಿಸುತ್ತಿದ್ದರೂ ಅವುಗಳಲ್ಲಿ ಒಂದಕ್ಕೂ ೨.೧ರ ಗುರಿ ಬಿಟ್ಟು ಕೆಳಗಿಳಿಯಲು ಹೇಳುತ್ತಿಲ್ಲ! ನಮ್ಮದೇ ಭಾರತವೇ ಈ ವಿಷಯದಲ್ಲಿ ಕರ್ನಾಟಕದಂಥಾ ರಾಜ್ಯಗಳ ಪಾಲಿಗೆ ನಿರ್ದಯಿ!

ಗುರಿ ಮುಟ್ಟಿ! ಇತಿಹಾಸದ ಪುಟ ಸೇರಿ!

ನಮ್ಮ ಮುಂದೆ ಈಗಿರುವ ಗುರಿ ೧.೮/ ೧.೭. ಇದನ್ನು ನಾವೇನಾದರೂ ಸಾಧಿಸಿದ್ದೇ ಆದರೆ ಇನ್ನೊಂದೆರಡು ನೂರು ವರ್ಷಗಳಲ್ಲಿ ನಮ್ಮದೊಂದು ಕುಲವಿತ್ತು ಎನ್ನುವುದೂ ನೆನಪಿರುವುದಿಲ್ಲಾ! ಇಂಥಾ ಪರಿಸ್ಥಿತಿ ನಿಜಕ್ಕೂ ಬಂದೀತೇ? ಇದು ಉತ್ಪ್ರೇಕ್ಷೆಯೆ? ಎಂದುಕೊಳ್ಳಬೇಡಿ. "ಕೊಡವರ ಜನಸಂಖ್ಯೆ ೨೦೦೧ರಲ್ಲಿ ೧.೫ ಲಕ್ಷವಿದ್ದುದ್ದು ೨೦೧೧ರಲ್ಲಿ ೧.೨೫ ಲಕ್ಷಕ್ಕೆ ಕುಸಿದಿದೆ" ಎನ್ನುವ ಸುದ್ದಿ ಇಲ್ಲಿದೆ ನೋಡಿ. ಕೊಡವರ ಟಿಎಫ಼್‌ಆರ್ ೧.೫ ಇದೆ. ಅಂದರೆ ಈ ಇಳಿಕೆಯ ಪರಿಣಾಮ ಇನ್ನು ನಾಲ್ಕೈದು ದಶಕಗಳಲ್ಲಿ ಕೊಡವ ಜನಾಂಗವೇ ಇಲ್ಲವಾಗುವ ಭೀತಿಯನ್ನು ನಮ್ಮ ಮುಂದೆ ತಂದು ನಿಲ್ಲಿಸಿದೆ. ಟಿಎಫ಼್‌ಆರ್ ಗುರಿಯನ್ನು ೨.೧ಕ್ಕಿಂತಾ ಕಡಿಮೆ ಇಟ್ಟುಕೊಂಡಿರುವ (ವಾಸ್ತವವಾಗಿ ಭಾರತ ಸರ್ಕಾರ ಯೋಜನಾ ಆಯೋಗದ ಮೂಲಕ ನಮಗೆ ಕೊಟ್ಟು ನಾವು ತಲೆ ಮೇಲೆ ಇಟ್ಟುಕೊಂಡು ಸಾಧಿಸುತ್ತಿರುವ) ಕನ್ನಡನಾಡಿನ ಜನರು ಹೇಳಹೆಸರಿಲ್ಲವಾಗುವ ದಿನಗಳು ಕೂಡಾ ಬರಲಿವೆ. ಮುಳುಗುವ ಮುನ್ನ ಎಚ್ಚೆತ್ತು ಕರ್ನಾಟಕ ಸರ್ಕಾರ ಮತ್ತು ಜನತೆ ಭಾರತ ಸರ್ಕಾರದ ಈ ಕುಟುಂಬ ನಿಯಂತ್ರಣ ಅಭಿಯಾನಕ್ಕೆ ದೊಡ್ಡ ಕೈಮುಗಿದು ೨.೧~೨.೩ರ ಆಸುಪಾಸಿನಲ್ಲಿ ನಮ್ಮ ಹೆರುವೆಣಿಕೆಯನ್ನು ಕಾಪಾಡಿಕೊಳ್ಳುವುದು ಸದ್ಯದ ತುರ್ತು!

ತನ್ನತನ ಮರೆತವರಿಗೆ.. ಇದಲ್ಲದೆ ಇನ್ನೇನು ತಾನೇ ಆದೀತು?

(ಫೋಟೋ ಕೃಪೆ: ಉದಯವಾಣಿ ದಿನಪತ್ರಿಕೆ)
(ಫೋಟೋ ಕೃಪೆ: ಕನ್ನಡ ಪ್ರಭ)

ಸುದ್ದಿ ಬಗ್ಗೆ ಹೇಳೋದೇನೂ ಇಲ್ಲಾ! ಹೇಳಬೇಕಾದ್ದು... ನಿನ್ನೆ ಅಂಚೆಇಲಾಖೆಯ ಮುಖ್ಯಸ್ಥರು ಕನ್ನಡ ಅಭಿವೃದ್ಧಿ ಪ್ರಾಧಿಕಾರದವರದವರಿಗೆ ನೀಡಿದ ಉದ್ಧಟತನದ ಉತ್ತರಗಳ ಹಿಂದಿರುವ "ಹಿಂದೀ ಸಾಮ್ರಾಜ್ಯಶಾಹಿ" ಮನಸ್ಥಿತಿಯ ಬಗ್ಗೆ! ಹೇಳಬೇಕಾದ್ದು... ಇಂಥಾ ಮೇಲರಿಮೆಯನ್ನು ಅವರಲ್ಲೂ, ಕೀಳರಿಮೆಯನ್ನು ನಮ್ಮಲ್ಲೂ ಹುಟ್ಟು ಹಾಕಿದ ಭಾರತದ ಹುಳುಕಿನ ಭಾಷಾನೀತಿಯ ಬಗ್ಗೆ! ಹೇಳಬೇಕಾದ್ದು ಕನ್ನಡನಾಡಿನ ಸರ್ಕಾರಿ ಕಛೇರಿಗಳಲ್ಲಿ ಕನ್ನಡ ನುಡಿಯ ಬಳಕೆ ಯಾವ ಪ್ರಮಾಣದಲ್ಲಿ ಆಗುತ್ತಿದೆ ಎಂದು ಪರಿಶೀಲಿಸಲೊಂದು ಪ್ರಾಧಿಕಾರವನ್ನು ಹೊಂದಿರಬೇಕಾದ ದುರಂತ ಪರಿಸ್ಥಿತಿಯ ಬಗ್ಗೆ! ಹೇಳಬೇಕಾದ್ದು... ಸತ್ತ ಹಾಗೆ ಇರೋ ಕನ್ನಡ ಜನರ ‘ಗುಲಾಮಗಿರಿಗೆ ಒಗ್ಗಿಕೊಂಡಂತಿರುವ’ ದುಸ್ಥಿತಿಯ ಬಗ್ಗೆ!

ಹೀಗಾಗಲು ಕಾರಣ ಭಾರತದ ಸಂವಿಧಾನ!

ಬಹುಭಾಷೆಗಳ ನಾಡಲ್ಲಿ ಒಂದೇ ಒಂದು ನುಡಿಯನ್ನು ಈ ದೇಶದ ಕೇಂದ್ರಸರ್ಕಾರದ ಆಡಳಿತ ಭಾಷೆಯನ್ನಾಗಿಸಿದ ಜನರು ಇಡೀ ದೇಶದ ತುಂಬಾ ಹರಡುತ್ತಿರುವ "ಬಹುಜನರ ಹಿತ" "ದೇಶದ ಒಗ್ಗಟ್ಟು" ಎಂಬ ತಲೆಸವರುವ ಮಾತುಗಳು ತೋರಿಕೆಯವು ಮಾತ್ರವೇ ಆಗಿದ್ದು ಇದರ ಹಿಂದೆ ವಾಸ್ತವದಲ್ಲಿ ಇರುವುದು ಉಳಿದೆಲ್ಲಾ ವೈವಿಧ್ಯತೆಗಳನ್ನು ಅಳಿಸಿಬಿಡುವ ಕ್ರೌರ್ಯವೇ ಆಗಿದೆ. ಇದರ ಪರಿಣಾಮವಾಗೇ ಅಚ್ಚಕನ್ನಡ ನಾಡೊಳಗಿರುವ ಅಂಚೆಕಛೇರಿಯಲ್ಲಿ ಕನ್ನಡವಿಲ್ಲದಿರುವುದು ತಪ್ಪಲ್ಲಾ! ಹಿಂದೀಯಲ್ಲಿ ಇಲ್ಲದಿದ್ದರೆ ತಪ್ಪು! ಹೀಗೆ ಭಾರತದ ಆಡಳಿತ ವ್ಯವಸ್ಥೆಯ ನೀತಿ ನಿಯಮಗಳು ಹೇಳುತ್ತವೆ. ಇಷ್ಟೇ ಅಲ್ಲದೆ ಕೋಟ್ಯಾಂತರ ರೂಪಾಯಿಗಳನ್ನು ಪ್ರತಿವರ್ಷ ಹಿಂದೀ ಬಳಕೆಯನ್ನು ಹೆಚ್ಚಿಸಲೆಂದೇ ಕೊಡುತ್ತಾ, ನಿನ್ನೆಗಿಂತಾ ಇಂದು ಎಷ್ಟು ಹೆಚ್ಚು ಹಿಂದೀ ಬಳಕೆಯಾಗಿದೆ ಎಂದು ಎಣಿಸುತ್ತಾ, ಹೆಚ್ಚು ಅನುಷ್ಠಾನ ಮಾಡಿದವರಿಗೆ ಬಡ್ತಿ ಬಹುಮಾನ ನೀಡುತ್ತಾ...  ದಿನೇದಿನೇ ಭಾರತದ ಹಿಂದೀಯೇತರ ಭಾಷೆಗಳನ್ನು ಕೊಲ್ಲಲು ಸ್ಕೆಚ್ಚು ಹಾಕಿಕೊಟ್ಟಿರುವುದೇ ಭಾರತದ ಸಂವಿಧಾನ! ಇದು ಬದಲಾಗಬೇಕೋ ಬೇಡವೋ ಎಂಬುದನ್ನು ಜನರು ತೀರ್ಮಾನಿಸಬೇಕಾಗಿದೆ. 

ದುರಂತ!

ಆದರೆ ಪರಿಸ್ಥಿತಿ, ‘ಸಂವಿಧಾನವೆನ್ನುವುದು ಬದಲಾಗದ ಪರಮ ಪವಿತ್ರಗ್ರಂಥ’ ಎಂದು ಭಾವಿಸಿಯೋ ಏನೋ ಕನ್ನಡದ ಜನ ಇದರ ಬಗ್ಗೆ ಯೋಚಿಸುತ್ತಿಲ್ಲಾ ಎನ್ನಿಸುವಂತಿದೆ. ಹಾಗೆ ಜನರನ್ನು ಎಚ್ಚರ ಮಾಡಿಸುವ ಕೆಲಸವನ್ನು ಈ ನೆಲದ ರಾಜಕೀಯ ಪಕ್ಷಗಳೂ ಮಾಡುತ್ತಿಲ್ಲಾ! ಇಷ್ಟಕ್ಕೂ ಕರ್ನಾಟಕ ಕೇಂದ್ರಿತ ರಾಜಕಾರಣವೇ ಇಲ್ಲದಿದ್ದಾಗ ಇದು ಸಹಜವೇ ಆಗಿದೆಯಲ್ಲವೇ!! ಕನ್ನಡಿಗರ ಮೇಲೆ ನಿತ್ಯ ಇಂಥಾ ಅತ್ಯಾಚಾರವಾಗುತ್ತಿದ್ದರೂ, ಅದು ಭಾರತ ಸರ್ಕಾರವು ಸಂವಿಧಾನದ ಹೆಸರಲ್ಲೇ ಮಾಡುತ್ತಿದ್ದರೂ ನಮಗಿನ್ನೂ ಮೈಮರೆವು... ಇದು ನಿಜಕ್ಕೂ ದುರಂತದ ಸಂಗತಿ!

ಕೊನೆಹನಿ: ಸಂವಿಧಾನ, ಆಡಳಿತ ಭಾಷಾ ಕಾಯ್ದೆಗಳು ಏನೇ ಹೇಳಲಿ, ಕೇಂದ್ರಸರ್ಕಾರಿ ಕಛೇರಿಗಳು ಹೇಗೇ ಕೆಲಸ ಮಾಡಲಿ... ಆ ರಾಜ್ಯದ ಭಾಷೆಯನ್ನು ಬಳಸುವ ವಿಷಯವಾಗಿ ಇಷ್ಟೊಂದು ಅಸಡ್ಡೆಯನ್ನು ತೋರಲು, ಯಾವುದೇ ಅಧಿಕಾರಿಗೆ ನಿರಭಿಮಾನಿ ಕನ್ನಡಿಗರ ಕನ್ನಡನಾಡಲ್ಲಿ ತೋರದೆ ಇನ್ನಾವುದೇ ರಾಜ್ಯದಲ್ಲೂ ತೋರಲು ಬಹುಶಃ ಧೈರ್ಯವಾಗುತ್ತಿರಲಿಲ್ಲ! ಹಾಗೆ ಮಾಡಿದ್ದ ಪಕ್ಷದಲ್ಲಿ ಇಷ್ಟು ಹೊತ್ತಿಗೆ ಆ ನಾಡಿನ ರಾಜಕೀಯ ಪಕ್ಷಗಳೂ, ಮಾಧ್ಯಮಗಳೂ ನಮ್ಮವರ ಹಾಗೆ ತಣ್ಣಗೂ ಇರುತ್ತಿರಲಿಲ್ಲ!

ತಾಯ್ನುಡಿ ಮಾಧ್ಯಮ ಕಲಿಕೆಗಾಗಿ ಹೋರಾಟ: ಮುಂದೇನು?


ಭಾರತದ ಸರ್ವೋಚ್ಚ ನ್ಯಾಯಲಯದಲ್ಲಿ ೦೫.೦೭.೨೦೧೩ರಂದು ಮಹತ್ವದ ತೀರ್ಪೊಂದು ಬರುವ ನಿರೀಕ್ಷೆಯಿತ್ತು. ತಾಯ್ನುಡಿ ಮಾಧ್ಯಮದ ಬಗ್ಗೆ ನ್ಯಾಯಮೂರ್ತಿಗಳಾದ ಪಿ. ಸದಾಶಿವಂ ಮತ್ತು ರಂಜನ್ ಗೋಗಾಯ್ ಅವರ ದ್ವಿಸದಸ್ಯ ಪೀಠವು ಯಾವುದೇ ತೀರ್ಮಾನ ನೀಡದೆ ಸದ್ಯಕ್ಕೆ ಸಾಂವಿಧಾನಿಕ ಪೀಠವೊಂದಕ್ಕೆ ಒಪ್ಪಿಸಿದೆ ಎಂಬ ಸುದ್ದಿ ಬಂದಿದೆ. ಇದರ ಜೊತೆಯಲ್ಲೇ ಕೆಲವಾರು ವಿಷಯಗಳ ಬಗ್ಗೆ ಪ್ರಶ್ನೆ ಎತ್ತಿದೆ. 

ನ್ಯಾಯಾಲಯದ ಪ್ರಶ್ನೆಗಳು

1. ಮಾತೃ ಭಾಷೆ ಎಂದರೆ ಏನು? ಆಯಾ ರಾಜ್ಯದ ಪ್ರಾದೇಶಿಕ ಭಾಷೆಯೇ ಅಥವಾ ಮಕ್ಕಳ ಮಾತೃಬಾಷೆಯೇ? 

2. ಮಾತೃ ಭಾಷೆ ನಿರ್ಧರಿಸುವುದು ಯಾರು? ಸರ್ಕಾರವೇ, ಪಾಲಕರೇ ಅಥವಾ ಮಕ್ಕಳೇ? 

3. ಮಾತೃ ಭಾಷೆ ಹೇರುವುದರಿಂದ ಸಂವಿಧಾನದ ಕಲಂ 19(ಜಿ) ಉಲ್ಲಂಘನೆಯಾಗುತ್ತದೆಯೇ? 

4. ಕಲಂ 350ಎ ಪ್ರಕಾರ, ರಾಜ್ಯ ಸರ್ಕಾರಕ್ಕೆ ಶಿಕ್ಷಣ ಸಂಸ್ಥೆಗಳ ಮೇಲೆ ಭಾಷೆ ಕಡ್ಡಾಯಗೊಳಿಸುವ ಹಕ್ಕು ಇದೆಯೇ? 

5. 1994ರ ಸುಪ್ರೀಂಕೋರ್ಟ್ ತೀರ್ಪನ್ನು ಪುನರ್ವಿಮರ್ಶೆ ಮಾಡಬೇಕೆ ಅಥವಾ ಬೇಡವೇ?
 (http://kannada.oneindia.in/news/2013/07/05/karnataka-sc-refers-kannada-language-matter-to-constitional-bench-075498.html)

ಈ ಪ್ರಶ್ನೆಗಳಲ್ಲಿನ ಕೆಲವು ಒಳಸುಳಿಗಳು 

ಮಗುವಿನ ತಾಯ್ನುಡಿ ತಾಯಿತಂದೆಯರು ಆಡುವ ನುಡಿಯೋ ಅಥವಾ ಭಾಷಾಧಾರಿತ ರಾಜ್ಯಗಳು ಹುಟ್ಟಿಕೊಂಡ ಮೇಲೆ ಗುರುತಿಸಿಕೊಂಡ ರಾಜ್ಯಭಾಷೆಗಳೋ ಎಂಬುದು ಪ್ರಶ್ನೆ. ಕರ್ನಾಟಕದಲ್ಲಿನ ಮಗುವೊಂದರ ಮನೆಮಾತು ತಮಿಳು ತೆಲುಗು ಮರಾಟಿ ಮೊದಲಾದ ಹೊರರಾಜ್ಯಗಳ ನುಡಿಯಾಗಿರಬಲ್ಲಂತೆಯೇ ತುಳು, ಕೊಡವ ನುಡಿಯಾಗಿರಬಹುದು. ಇದು ಇಷ್ಟಕ್ಕೇ ನಿಲ್ಲದೆ ಕನ್ನಡವೂ ಸೇರಿದಂತೆ ಈ ಎಲ್ಲಾ ನುಡಿಗಳ ಯಾವುದಾದರೋ ಒಂದು ಒಳನುಡಿಯೂ ಆಗಿರಬಹುದು. ಹೀಗಿದ್ದಾಗ ತಾಯ್ನುಡಿ ಮಾಧ್ಯಮದಲ್ಲಿ ಕಲಿಕೆ ಎನ್ನುವುದನ್ನು ಸರ್ಕಾರ ಹೇಗೆ ಕೊಡಬಲ್ಲದು? ಎಂಬುದು ಗೊಂದಲ. ತಾಯ್ನುಡಿಯೆಂದರೆ ಪರಿಸರದ ನುಡಿ ಎನ್ನುವುದು ಬಹುಮಟ್ಟಿಗೆ ಈ ಗೊಂದಲವನ್ನು ಕಡಿಮೆ ಮಾಡಿದರೂ ಕೂಡಾ ‘ಗಡಿಪ್ರದೇಶಗಳಲ್ಲಿ ಎರಡೆರಡು ನುಡಿಯಿರುತ್ತದೆ ಅಥವಾ ಒಂದು ಪ್ರದೇಶದ ಇಡೀ ನುಡಿಯೇ ರಾಜ್ಯಭಾಷೆಯಲ್ಲದ ಮತ್ತೊಂದಾಗಿರುತ್ತದೆ’ ಎನ್ನುವುದೂ ಸಾಧ್ಯವಿದೆ. ಇಲ್ಲೆಲ್ಲಾ ಯಾವುದು ಮಾಧ್ಯಮದ ನುಡಿಯಾಗಬೇಕು ಎನ್ನುವ ಪ್ರಶ್ನೆಯಿದೆ. ತಾಯ್ನುಡಿಯೆಂದರೆ ಪರಿಸರದ ನುಡಿ ಎನ್ನುವ ವಾದವನ್ನು ಮಂಡಿಸಿದರೆ ಬೇರೆ ಭಾಷಾ ಮಾಧ್ಯಮದಲ್ಲೂ ಶಾಲೆಗಳನ್ನು ತೆರೆಯಲು ಒಪ್ಪಬೇಕಾಗುತ್ತದೆ. ಆದರೆ ಇಂಥಾ ಹೆರನುಡಿ ಮಾಧ್ಯಮದ ಶಾಲೆಗಳಲ್ಲಿ ಕನ್ನಡವನ್ನೂ ಜೊತೆಯಾಗಿ ಕಲಿಸಬೇಕಾದ ಅಗತ್ಯವನ್ನೂ ಪ್ರತಿಪಾದಿಸಬಹುದು.  ಮನೆಯಿಂದ ಶುರುವಾದ ಪರಿಸರ ಶಾಲೆ, ಬೀದಿ, ಆಟದ ಮೈದಾನವೂ ಸೇರಿದಂತೆ ಹಲವೆಡೆಗೆ ಹಬ್ಬುತ್ತಾ ಬರುವುದರಿಂದಾಗಿ ಇಲ್ಲಿ ಕನ್ನಡವೇ ಪ್ರಾಧಾನ್ಯವಾಗಿರುವ ಪ್ರದೇಶಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳಿರಬೇಕು ಎನ್ನಬಹುದು. ಹೀಗಾದಲ್ಲಿ ತಾಯ್ನುಡಿ ಕಲಿಕೆಯೆನ್ನುವುದು ಕನ್ನಡಿಗರಿಗೆ ದಕ್ಕಲು ಸಾಧ್ಯವಾಗಬಹುದು.

ಮಾತೃಭಾಷೆ ಯಾವುದು ಎನ್ನುವುದನ್ನು ನಿರ್ಧಾರ ಮಾಡಬೇಕಾದ್ದು ಪೋಶಕರೂ ಅಲ್ಲಾ, ಸರ್ಕಾರವೂ ಅಲ್ಲಾ! ಅದು ವಿಜ್ಞಾನ... ಮಗುವೊಂದು ತನ್ನ ಮನೆ, ಬೀದಿ, ಬಡಾವಣೆಯಲ್ಲಿ ಯಾವ ನುಡಿಯ ಸಂಪರ್ಕಕ್ಕೇ ಬರುತ್ತದೋ ಅದೇ ಅದರ ತಾಯ್ನುಡಿಯಾಗುತ್ತದೆ. ಹೆಚ್ಚಿನ ಬಾರಿ ಇದು ಯಾವುದೋ ಒಂದೇ ನುಡಿಯಾಗಿದ್ದರೂ ಕೂಡಾ ಇದು ಅನೇಕ ನುಡಿಗಳ ಮಿಶ್ರಣವೂ ಆಗಿರುವ ಸಾಧ್ಯತೆಯಿದೆ. ಹಾಗಾಗಿ, ಈ ತಾಯ್ನುಡಿಗೆ ಹೆಚ್ಚು ಸಮೀಪದ ಕಲಿಕೆಯ ನುಡಿಯಲ್ಲಿ ನಡೆಯಬೇಕಾಗುತ್ತದೆ.

ತಾಯ್ನುಡಿ ಕಲಿಕೆಯ ಮಾಧ್ಯಮವನ್ನು ಕಡ್ಡಾಯ ಮಾಡುವುದರ ಮೂಲಕ ಸಂವಿಧಾನದ ೧೯(ಜಿ) ವಿಧಿಯ ಉಲ್ಲಂಘನೆಯಾಗುತ್ತದೆಯೇ ಎನ್ನುತ್ತದೆ ನ್ಯಾಯಾಲಯ. ೧೯ನೇ ವಿಧಿಯು ಭಾರತದ ನಾಗರೀಕರಿಗೆ ಇರುವ ಮೂಲಭೂತಹಕ್ಕುಗಳ ಬಗ್ಗೆ ಮಾತಾಡುತ್ತಿದ್ದು, ೧೯(ಜಿ) ಯಾವುದೇ ವ್ಯಾಪಾರ, ವಹಿವಾಟು, ಉದ್ಯೋಗ, ಉದ್ದಿಮೆ ಮಾಡಲು ಸ್ವತಂತ್ರ ಎಂದು ಹೇಳಿದೆ.


ಶಿಕ್ಷಣ ಸಂಸ್ಥೆಗಳನ್ನು ತೆರೆಯುವುದು ಮತ್ತು ನಡೆಸುವುದನ್ನು ಒಂದು ಉದ್ದಿಮೆಯೆಂದು ಕರೆಯಬಹುದೇ ಎನ್ನುವುದನ್ನು ಇಲ್ಲಿ ಚರ್ಚಿಸಬೇಕಾಗಿದೆ. ಒಂದು ನಾಡಿನ ಮುಂದಿನ ಪ್ರಜೆಗಳ ಕಲಿಕೆ, ಇರುವ ಜನರ ಆರೋಗ್ಯ ಮುಂತಾದವು ಆಯಾ ಸರ್ಕಾರಗಳ ಹೊಣೆಗಾರಿಕೆಯಾಗಿರುತ್ತದೆ. ಇಲ್ಲಿ ಸರ್ಕಾರದ ಈ ಹೊಣೆಗಾರಿಕೆಯನ್ನು ಹಂಚಿಕೊಳ್ಳಲು ಖಾಸಗಿ ಸಂಸ್ಥೆಗಳು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿವೆಯೇ ಹೊರತು ಉದ್ದಿಮೆಯಾಗಲ್ಲ. ಹಾಗಿದ್ದಲ್ಲಿ ಉದ್ದಿಮೆಗಳಿಗೆ ಅನ್ವಯವಾಗುವ ತೆರಿಗೆಗಳೂ ಸೇರಿದಂತೆ ಎಲ್ಲಾ ನಿಯಮಗಳೂ ನಾಡಿನ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗಬೇಕಿತ್ತು! ಹಾಗಲ್ಲದಿದ್ದಲ್ಲಿ, ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಉದ್ಯಮವಾಗುವುದಾದರೂ ಹೇಗೆ? ಈ ನೆಲೆಯಲ್ಲಿ ನೋಡಿದರೆ ಸರ್ಕಾರ ರೂಪಿಸುವ ಎಲ್ಲಾ ನಿಯಮಗಳನ್ನು ಒಪ್ಪಿ ಜಾರಿಗೊಳಿಸಬೇಕಾದ ಬದ್ಧತೆ ಈ ಶಾಲೆಗಳಿಗೆ ಇದೆಯಲ್ಲದೆ ನಿಯಮವನ್ನು ಪ್ರಶ್ನಿಸುವ/ ತಿರಸ್ಕರಿಸುವ ಹಕ್ಕಿರುವುದಿಲ್ಲ. ಈ ನಿಟ್ಟಿನಲ್ಲಿ ೧೯(ಜಿ) ವಿಧಿಯು ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗದು ಎಂಬ ವಾದವನ್ನು ಸರ್ಕಾರ ಎತ್ತಿಹಿಡಿಯಬೇಕಾಗಿದೆ.

೩೫೦(ಎ)ನೇ ವಿಧಿಯ ಅನ್ವಯ ಸರ್ಕಾರ/ ಸ್ಥಳೀಯ ಆಡಳಿತ ಭಾಷಾ ಅಲ್ಪಸಂಖ್ಯಾತರಿಗೆ ಅವರ ತಾಯ್ನುಡಿಯಲ್ಲಿ ಕಲಿಕೆಗೆ ಅನುಕೂಲ ಮಾಡಿಕೊಡತಕ್ಕದ್ದು.


ಇದು ಅವಕಾಶ ನಿರಾಕರಣೆ ಮಾಡಬಾರದು ಎನ್ನುವ ಅರ್ಥದಲ್ಲಿದೆಯೇ ಹೊರತು ಎಲ್ಲೋ ನಡು ತಮಿಳುನಾಡಿಗೆ ವಲಸೆ ಹೋದ ಕನ್ನಡಿಗರ ಕುಟುಂಬದ ಕೂಸಿಗಾಗಿ ಅಲ್ಲೊಂದು ಕನ್ನಡ ಶಾಲೆಯನ್ನು ತೆಗೆಯಬೇಕು ಎಂದು ಹೇಳುತ್ತಿಲ್ಲ. ಹಾಗಾಗಿ ಕನ್ನಡನಾಡಿನಲ್ಲಿ ಕನ್ನಡ ಮಾಧ್ಯಮವನ್ನು ಕಡ್ಡಾಯ ಮಾಡುವಾಗ ಸ್ಪಷ್ಟವಾದ ನಿಯಮವಿದ್ದರೆ ಸಾಕು. ಬೆಳಗಾವಿಯ ಯಾವುದಾದರೋ ಹಳ್ಳಿಯಲ್ಲಿ ಮರಾಟಿಗರು ಹೆಚ್ಚಿದ್ದರೆ ಅಲ್ಲಿ ಮರಾಟಿ ಮಾಧ್ಯಮ ಶಾಲೆ ತೆರೆಯುವುದಕ್ಕೆ ನಮ್ಮ ಸಹಕಾರ ಇರಬೇಕು ಮತ್ತು ಅಡಚಣೆ ಮಾಡಬಾರದು ಎನ್ನುವಂತೆ ಈ ನಿಯಮವನ್ನು ಅರ್ಥೈಸಬೇಕಾಗಿದೆ. ಹಾಗಾಗಿ "ಕನ್ನಡ ಮಾಧ್ಯಮ ಶಾಲೆಗಳು ಕಡ್ಡಾಯ, ಬೇರೆ ತಾಯ್ನುಡಿಯ ಶಾಲೆ ತೆರೆಯಲು ನಮ್ಮ ಅಡ್ಡಿಯಿಲ್ಲಾ" ಎನ್ನುವ ನಿಲುವನ್ನು ನಾವು ಹೊಂದಬೇಕಾಗುತ್ತದೆ.

ಇವೆಲ್ಲಾ ಉತ್ತರಗಳನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವ ಹೊಣೆ ನಮ್ಮ ಸರ್ಕಾರದ್ದಾಗಿದೆ. ಇಷ್ಟೆಲ್ಲಾ ಇದ್ದೂ ಕೂಡಾ ನಾಳೆ ಸುಪ್ರಿಂಕೋರ್ಟ್ ತಾಯ್ನುಡಿ ಮಾಧ್ಯಮದ ಪರವಾಗೇ ತೀರ್ಪುಕೊಟ್ಟಲ್ಲಿ ನಮ್ಮ ಜನರೇ ಅದರ ವಿರುದ್ಧ ಬೀದಿಗಿಳಿಯುವ ಸಾಧ್ಯತೆ ಹೆಚ್ಚು. ಏಕೆಂದರೆ ಇಂಗ್ಲೀಶಿನಲ್ಲಿ ಕಲಿತರೆ ಮಕ್ಕಳ ಬಾಳು ಬೆಳಗುತ್ತದೆ ಎನ್ನುವ ಅರೆದಿಟದ ಮಾರಾಟ ತಂತ್ರಕ್ಕೆ ಈಗಾಗಲೇ ಜನರು ಮರುಳಾಗಿದ್ದಾಗಿದೆ. ಕನ್ನಡ ಮಾಧ್ಯಮದಲ್ಲಿ ಕಲಿತರೆ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎನ್ನುವುದನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕಾದ ಮೊದಲ ಕರ್ತವ್ಯ ಸರ್ಕಾರಕ್ಕಿದೆ. ಹೀಗೆ ಮಾಡಿಕೊಡಲು ಕನ್ನಡ ಮಾಧ್ಯಮದ ಕಲಿಕೆಯನ್ನು ಅತ್ಯುತ್ತಮ ಗುಣಮಟ್ಟದ್ದಾಗಿಸುವ, ಕನ್ನಡದಲ್ಲೇ ಎಲ್ಲಾ ಕಲಿಕೆಗಳನ್ನು ಸಾಧ್ಯವಾಗಿಸುವ, ತಾಯ್ನುಡಿ ಕಲಿಕೆಯ ಜೊತೆಯಲ್ಲೇ ಜಗತ್ತಿನ ಬೇರೆ ಬೇರೆ ಭಾಷೆಗಳಲ್ಲಿ ಪ್ರಭುತ್ವ ಸಾಧಿಸಬಲ್ಲಂತಹ ತರಬೇತಿ ನೀಡಬಲ್ಲ, ಆ ಮೂಲಕ ನಿಮ್ಮ ಮಗು ಇಂದಿಗಿಂತಲೂ ಭವ್ಯವಾದ ನಾಳೆಗಳನ್ನು ಹೊಂದಬಲ್ಲ ಎಂಬ ಭರವಸೆಯನ್ನು ತಾಯ್ತಂದೆಯರ ಮನದಲ್ಲಿ ಮೂಡಿಸಬಲ್ಲಂಥಾ ವ್ಯವಸ್ಥೆ ಕಟ್ಟಬೇಕಾಗಿದೆ. ಇಲ್ಲದಿದ್ದರೆ ಈ ಮೊಕದ್ದಮೆ, ಸಾಂವಿಧಾನಿಕ ಪೀಠ, ವಾದ ವಿವಾದ, ಕಾನೂನು ಹೋರಾಟಗಳೆಲ್ಲಾ ವ್ಯರ್ಥ!

ರಾಜ್ಯಪಾಲ ಕಥಾಮೃತಸಾರ!


ಕರ್ನಾಟಕದ ಘನ ರಾಜ್ಯಪಾಲರು ರೋಟರಿ ಕ್ಲಬ್‌ನ ಒಂದು ಕಾರ್ಯಕ್ರಮದಲ್ಲಿ ಕೆಂಡಾಮಂಡಲರಾದರು ಎನ್ನುವ ಸುದ್ದಿ ೩೦ನೇ ಜೂನ್ ೨೦೧೩ರ ಉದಯವಾಣಿಯಲ್ಲಿ ಪ್ರಕಟವಾಗಿದೆ. ಅಜೀಂಪ್ರೇಮ್‍ಜಿ ವಿಶ್ವವಿದ್ಯಾಲಯದ ಕಾರ್ಯವೈಖರಿಯ ಬಗ್ಗೆ ಇವರು ಅದೇನೋ ಟೀಕೆ ಮಾಡಿದರಂತೆ. ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲಿ ಇತರೆ ಭಾಷೆಗಳ ಕಲಿಕೆಗೆ ಪ್ರೋತ್ಸಾಹವಿಲ್ಲಾ ಎನ್ನುವ ಹೇಳಿಕೆಯನ್ನೂ ನೀಡಿದ್ದಾರೆ.ಆ ಮೂಲಕ ರಾಜ್ಯಪಾಲರೆಂಬ ಹುದ್ದೆಯಲ್ಲಿ ಕುಳಿತವರಿಗೆ ನಮ್ಮೂರಲ್ಲಿ ಮಾಡಕ್ಕೆ ಕೇಮಿಲ್ಲವೇನೋ ಎನ್ನುವ ಅನಿಸಿಕೆಗೆ ಕಾರಣರಾಗಿದ್ದಾರೆ.

ಇತರೆ ಭಾಷೆ ಕಲಿಕೆಗೆ ಅವಕಾಶ!

ಈ ಸ್ವಾಮಿಗಳಿಗೆ ಕರ್ನಾಟಕದಲ್ಲಿ ಬೇರೆ ಬೇರೆ ಭಾಷೆಗಳ ಕಲಿಕೆಗೆ ವಿರೋಧವಿದೆ ಎಂದು ಅದ್ಯಾವ ಬೃಹಸ್ಪತಿ ಹೇಳಿದ್ದಾನೋ ಗೊತ್ತಿಲ್ಲ. ಕರ್ನಾಟಕದ ಶಾಲೆಗಳಲ್ಲಿ ಇಂಗ್ಲೀಶ್, ಮರಾಟಿ, ಉರ್ದು, ತಮಿಳು, ತೆಲುಗು ಸೇರಿದಂತೆ ಎಲ್ಲಾ ಭಾಷೆಯ ಮಾಧ್ಯಮಗಳ ಕಲಿಕೆಯೂ ಸಾಧ್ಯವಿದೆ. ಇಲ್ಲಿ ಸಂಸ್ಕೃತ ವಿದ್ಯಾಪೀಠಗಳೂ, ಇಂಗ್ಲೀಶ್ ಸ್ಪೀಕಿಂಗ್ ಕೋರ್ಸುಗಳೂ, ಜಪಾನಿ ಫ್ರೆಂಚ್ ಮೊದಲಾದ ವಿದೇಶಿ ಭಾಷಾ ಕಲಿಕಾ ಕೇಂದ್ರಗಳೂ ನಿರ್ಭೀತಿಯಿಂದ ಕೆಲಸ ಮಾಡುತ್ತಿವೆ ಮತ್ತು ಯಾವುದೇ ವ್ಯಕ್ತಿ ತನ್ನಿಷ್ಟದ ಭಾಷೆಯನ್ನು ಕಲಿಯಲು ಯಾರಾದರೂ ಅಡ್ಡಿ ಮಾಡಿದ್ದಾರೆ ಎನ್ನುವ ಪರಿಸ್ಥಿತಿಯೇ ಇಲ್ಲಿಲ್ಲದಿರುವಾಗ... ಈ ಮಹಾನುಭಾವರಿಗೆ ಕರ್ನಾಟಕದಲ್ಲಿ ಬೇರೆ ಭಾಷೆಗಳ ಕಲಿಕೆಗೆ ವಿರೋಧವಿದೆ ಎನ್ನುವ ಭ್ರಮೆ ಎಲ್ಲಿಂದ ಮೆಟ್ಟಿಕೊಂಡಿತೋ ಕಾಣೆ! ಒಟ್ಟಲ್ಲಿ ಕನ್ನಡಿಗರಿಗೆ ‘ಸೌಹಾರ್ದತೆಯ ಬಿಟ್ಟಿ ಉಪದೇಶ’ ಕೊಡುವವರ ಸಾಲಿನಲ್ಲಿ ತಾವೂ ಇದ್ದೇವೆ ಎಂದು ಈ ಮೂಲಕ ರಾಜ್ಯಪಾಲರು ತೋರಿಸಿಕೊಂಡಿದ್ದಾರೆ. ಶ್ರೀ ಹಂಸರಾಜ್ ಭಾರಧ್ವಾಜರದು ಇವತ್ತಿನದೊಂದೇ ಕಥೆಯಲ್ಲಾ. ಈ ಹಿಂದೆಯೂ  ಕೂಡಾ ಕಾರ್ಯಕ್ರಮವೊಂದರಲ್ಲಿ ಕನ್ನಡಿಗರಿಗೆ "ನೀವೆಲ್ಲಾ ಸುಂದರವಾದ ಭಾಷೆಯಾದ ಉರ್ದುವನ್ನು ಕಲಿಯಿರಿ" ಎಂದಿದ್ದರು. ಅದಕ್ಕೂ ಹಿಂದೆ "ದೇಶದ ಬಗ್ಗೆ ಗೌರವಾ ಇದ್ದರೆ ಹಿಂದೀ ಕಲೀರಿ" ಎಂದಿದ್ದರು. ಇದು ಇವರೊಬ್ಬರ ನಡವಳಿಕೆಯಲ್ಲಾ. ಈ ಹಿಂದಿನ ರಾಜ್ಯಪಾಲರಾಗಿದ್ದ ರಾಮೇಶ್ವರ್ ಠಾಕೂರ್ ಎಂಬ ಪುಣ್ಯಾತ್ಮರೂ ಕೂಡಾ ಇಂಥದ್ದೇ ಮಾತನ್ನು ಹೇಳಿದ್ದರು.

ಅಂದಹಾಗೆ ಈ ರಾಜ್ಯಪಾಲರ ಕೆಲಸ ಏನು? ಹೀಗೆ ಬಿಟ್ಟಿ ಉಪದೇಶ ಕೊಡೋದೇನಾ? ಕನ್ನಡಿಗರಿಗೆ ಇಂಥಾ ಪುಗಸಟ್ಟೆ ಉಪದೇಶ ಕೊಡೋ ಈ ಮಂದಿ, ಇಂಥದ್ದೇ ಉಪದೇಶವನ್ನು ಭಾರತದ ಇತರೇ ಭಾಷಿಕರಿಗೂ ಕೊಡ್ತಾರೇನು? ಅಂದರೆ ಉತ್ತರಪ್ರದೇಶಕ್ಕೆ ಹೋಗಿ ಅಲ್ಲಿನವರಿಗೆ ಕನ್ನಡ ಸುಂದರವಾದ ಭಾಷೆ ಅದನ್ನು ಕಲಿಯಿರಿ ಎಂದು ಎಂದಾದರೂ ಯಾರಾದರೂ ರಾಜ್ಯಪಾಲರು ಹೇಳಿದ್ದನ್ನು ಕೇಳಿದ್ದೀರಾ? ಊಹೂಂ... ನಾವೇನಾದರೂ ಅಂಥಾ ಪ್ರಯತ್ನ ಮಾಡಿದಲ್ಲಿ ಭಗೀರಥನನ್ನೇ ಮೀರಿಸಬೇಕಾದೀತು!

ಹಿಂದೀ ಸಾಮ್ರಾಜ್ಯಶಾಹಿ ಮನಸ್ಥಿತಿಯ ಈ ದೊಡ್ಡಜನರಿಗೆ ಇರಲು ನಮ್ಮೂರಿನ ಅತಿದೊಡ್ಡ ಭವ್ಯ ರಾಜಭವನವೇ ಬೇಕು. ಅಲ್ಲಿ  ಜನಪರವಾದ ಅಹವಾಲುಗಳನ್ನು ಒಯ್ಯುವವರಿಗೆ ಪ್ರವೇಶ ಸಿಗುತ್ತೋ ಇಲ್ಲವೋ ಗೊತ್ತಿಲ್ಲಾ... ಆದರೆ ರೋಟರಿ ಕ್ಲಬ್ ಕಾರ್ಯಕ್ರಮಕ್ಕೆ,  ಕಮ್ಯುನಿಕೇಶನ್ ಫಾರ್ ಡೆವೆಲಪ್‌ಮೆಂಟ್ ಅಂಡ್ ಲರ್ನಿಂಗ್ ಸಂಸ್ಥೆಯ ಕಾರ್ಯಕ್ರಮಕ್ಕೆ ಜಾಗ ಸಿಗುತ್ತದೆ.  "ಭಾರತದ ಹುಳುಕಿನ ಭಾಷಾನೀತಿಯನ್ನು ಬದಲಿಸಿ ಎಂದು ಕೇಂದ್ರವನ್ನು ಒತ್ತಾಯಿಸುವ ಸಾವಿರ ಜನರ ಸಹಿಯುಳ್ಳ ಪಿಟಿಷನ್ ಸಲ್ಲಿಸುತ್ತೇವೆ... ಭೇಟಿಯಾಗಿ" ಎಂದವರಿಗೆ ಸಿಗದ ರಾಜ್ಯಪಾಲರ ಅಪಾಯಿಂಟ್‌ಮೆಂಟ್ ಇಂಥಾ ಉಪದೇಶಾಮೃತ ಕೇಳುತ್ತೇವೆ ಎಂದರೆ ಸುಲಭವಾಗಿ ಸಿಗುತ್ತದೆಯೋ ಏನೋ?! ಒಟ್ಟಲ್ಲಿ ಕೇಂದ್ರವೆಂಬ ಸಾರ್ವಭೌಮನ ಪ್ರತಿನಿಧಿಯಾಗಿ ರಾಜ್ಯಗಳ ಮೇಲೆ ನಿಗಾ ಇಡಲೆಂದೇ ಸೃಷ್ಟಿಯಾಗಿದೆಯೇನೋ ಎನ್ನುವಂತಿರುವ ರಾಜ್ಯಪಾಲರೆಂಬ ಹುದ್ದೆ... ಸಕ್ರಿಯ ರಾಜಕೀಯ ನಿವೃತ್ತರ ಕೊನೆನಿಲ್ದಾಣದಂತಿರುವ ರಾಜ್ಯಪಾಲರೆಂಬ ಹುದ್ದೆ... ನಿಜಕ್ಕೂ ಬೇಕಾ ಎಂಬ ಚರ್ಚೆ ಹುಟ್ಟಿಕೊಳ್ಳಲು ಇದು ಸಕಾಲ!
Related Posts with Thumbnails