ಭಾರತದ ಸರ್ವೋಚ್ಚ ನ್ಯಾಯಲಯದಲ್ಲಿ ೦೫.೦೭.೨೦೧೩ರಂದು ಮಹತ್ವದ ತೀರ್ಪೊಂದು ಬರುವ ನಿರೀಕ್ಷೆಯಿತ್ತು. ತಾಯ್ನುಡಿ ಮಾಧ್ಯಮದ ಬಗ್ಗೆ ನ್ಯಾಯಮೂರ್ತಿಗಳಾದ ಪಿ. ಸದಾಶಿವಂ ಮತ್ತು ರಂಜನ್ ಗೋಗಾಯ್ ಅವರ ದ್ವಿಸದಸ್ಯ ಪೀಠವು ಯಾವುದೇ ತೀರ್ಮಾನ ನೀಡದೆ ಸದ್ಯಕ್ಕೆ ಸಾಂವಿಧಾನಿಕ ಪೀಠವೊಂದಕ್ಕೆ ಒಪ್ಪಿಸಿದೆ ಎಂಬ ಸುದ್ದಿ ಬಂದಿದೆ. ಇದರ ಜೊತೆಯಲ್ಲೇ ಕೆಲವಾರು ವಿಷಯಗಳ ಬಗ್ಗೆ ಪ್ರಶ್ನೆ ಎತ್ತಿದೆ.
ನ್ಯಾಯಾಲಯದ ಪ್ರಶ್ನೆಗಳು
1. ಮಾತೃ ಭಾಷೆ ಎಂದರೆ ಏನು? ಆಯಾ ರಾಜ್ಯದ ಪ್ರಾದೇಶಿಕ ಭಾಷೆಯೇ ಅಥವಾ ಮಕ್ಕಳ ಮಾತೃಬಾಷೆಯೇ?
2. ಮಾತೃ ಭಾಷೆ ನಿರ್ಧರಿಸುವುದು ಯಾರು? ಸರ್ಕಾರವೇ, ಪಾಲಕರೇ ಅಥವಾ ಮಕ್ಕಳೇ?
3. ಮಾತೃ ಭಾಷೆ ಹೇರುವುದರಿಂದ ಸಂವಿಧಾನದ ಕಲಂ 19(ಜಿ) ಉಲ್ಲಂಘನೆಯಾಗುತ್ತದೆಯೇ?
4. ಕಲಂ 350ಎ ಪ್ರಕಾರ, ರಾಜ್ಯ ಸರ್ಕಾರಕ್ಕೆ ಶಿಕ್ಷಣ ಸಂಸ್ಥೆಗಳ ಮೇಲೆ ಭಾಷೆ ಕಡ್ಡಾಯಗೊಳಿಸುವ ಹಕ್ಕು ಇದೆಯೇ?
5. 1994ರ ಸುಪ್ರೀಂಕೋರ್ಟ್ ತೀರ್ಪನ್ನು ಪುನರ್ವಿಮರ್ಶೆ ಮಾಡಬೇಕೆ ಅಥವಾ ಬೇಡವೇ?
(http://kannada.oneindia.in/news/2013/07/05/karnataka-sc-refers-kannada-language-matter-to-constitional-bench-075498.html)
(http://kannada.oneindia.in/news/2013/07/05/karnataka-sc-refers-kannada-language-matter-to-constitional-bench-075498.html)
ಈ ಪ್ರಶ್ನೆಗಳಲ್ಲಿನ ಕೆಲವು ಒಳಸುಳಿಗಳು
ಮಗುವಿನ ತಾಯ್ನುಡಿ ತಾಯಿತಂದೆಯರು ಆಡುವ ನುಡಿಯೋ ಅಥವಾ ಭಾಷಾಧಾರಿತ ರಾಜ್ಯಗಳು ಹುಟ್ಟಿಕೊಂಡ ಮೇಲೆ ಗುರುತಿಸಿಕೊಂಡ ರಾಜ್ಯಭಾಷೆಗಳೋ ಎಂಬುದು ಪ್ರಶ್ನೆ. ಕರ್ನಾಟಕದಲ್ಲಿನ ಮಗುವೊಂದರ ಮನೆಮಾತು ತಮಿಳು ತೆಲುಗು ಮರಾಟಿ ಮೊದಲಾದ ಹೊರರಾಜ್ಯಗಳ ನುಡಿಯಾಗಿರಬಲ್ಲಂತೆಯೇ ತುಳು, ಕೊಡವ ನುಡಿಯಾಗಿರಬಹುದು. ಇದು ಇಷ್ಟಕ್ಕೇ ನಿಲ್ಲದೆ ಕನ್ನಡವೂ ಸೇರಿದಂತೆ ಈ ಎಲ್ಲಾ ನುಡಿಗಳ ಯಾವುದಾದರೋ ಒಂದು ಒಳನುಡಿಯೂ ಆಗಿರಬಹುದು. ಹೀಗಿದ್ದಾಗ ತಾಯ್ನುಡಿ ಮಾಧ್ಯಮದಲ್ಲಿ ಕಲಿಕೆ ಎನ್ನುವುದನ್ನು ಸರ್ಕಾರ ಹೇಗೆ ಕೊಡಬಲ್ಲದು? ಎಂಬುದು ಗೊಂದಲ. ತಾಯ್ನುಡಿಯೆಂದರೆ ಪರಿಸರದ ನುಡಿ ಎನ್ನುವುದು ಬಹುಮಟ್ಟಿಗೆ ಈ ಗೊಂದಲವನ್ನು ಕಡಿಮೆ ಮಾಡಿದರೂ ಕೂಡಾ ‘ಗಡಿಪ್ರದೇಶಗಳಲ್ಲಿ ಎರಡೆರಡು ನುಡಿಯಿರುತ್ತದೆ ಅಥವಾ ಒಂದು ಪ್ರದೇಶದ ಇಡೀ ನುಡಿಯೇ ರಾಜ್ಯಭಾಷೆಯಲ್ಲದ ಮತ್ತೊಂದಾಗಿರುತ್ತದೆ’ ಎನ್ನುವುದೂ ಸಾಧ್ಯವಿದೆ. ಇಲ್ಲೆಲ್ಲಾ ಯಾವುದು ಮಾಧ್ಯಮದ ನುಡಿಯಾಗಬೇಕು ಎನ್ನುವ ಪ್ರಶ್ನೆಯಿದೆ. ತಾಯ್ನುಡಿಯೆಂದರೆ ಪರಿಸರದ ನುಡಿ ಎನ್ನುವ ವಾದವನ್ನು ಮಂಡಿಸಿದರೆ ಬೇರೆ ಭಾಷಾ ಮಾಧ್ಯಮದಲ್ಲೂ ಶಾಲೆಗಳನ್ನು ತೆರೆಯಲು ಒಪ್ಪಬೇಕಾಗುತ್ತದೆ. ಆದರೆ ಇಂಥಾ ಹೆರನುಡಿ ಮಾಧ್ಯಮದ ಶಾಲೆಗಳಲ್ಲಿ ಕನ್ನಡವನ್ನೂ ಜೊತೆಯಾಗಿ ಕಲಿಸಬೇಕಾದ ಅಗತ್ಯವನ್ನೂ ಪ್ರತಿಪಾದಿಸಬಹುದು. ಮನೆಯಿಂದ ಶುರುವಾದ ಪರಿಸರ ಶಾಲೆ, ಬೀದಿ, ಆಟದ ಮೈದಾನವೂ ಸೇರಿದಂತೆ ಹಲವೆಡೆಗೆ ಹಬ್ಬುತ್ತಾ ಬರುವುದರಿಂದಾಗಿ ಇಲ್ಲಿ ಕನ್ನಡವೇ ಪ್ರಾಧಾನ್ಯವಾಗಿರುವ ಪ್ರದೇಶಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳಿರಬೇಕು ಎನ್ನಬಹುದು. ಹೀಗಾದಲ್ಲಿ ತಾಯ್ನುಡಿ ಕಲಿಕೆಯೆನ್ನುವುದು ಕನ್ನಡಿಗರಿಗೆ ದಕ್ಕಲು ಸಾಧ್ಯವಾಗಬಹುದು.
ಮಾತೃಭಾಷೆ ಯಾವುದು ಎನ್ನುವುದನ್ನು ನಿರ್ಧಾರ ಮಾಡಬೇಕಾದ್ದು ಪೋಶಕರೂ ಅಲ್ಲಾ, ಸರ್ಕಾರವೂ ಅಲ್ಲಾ! ಅದು ವಿಜ್ಞಾನ... ಮಗುವೊಂದು ತನ್ನ ಮನೆ, ಬೀದಿ, ಬಡಾವಣೆಯಲ್ಲಿ ಯಾವ ನುಡಿಯ ಸಂಪರ್ಕಕ್ಕೇ ಬರುತ್ತದೋ ಅದೇ ಅದರ ತಾಯ್ನುಡಿಯಾಗುತ್ತದೆ. ಹೆಚ್ಚಿನ ಬಾರಿ ಇದು ಯಾವುದೋ ಒಂದೇ ನುಡಿಯಾಗಿದ್ದರೂ ಕೂಡಾ ಇದು ಅನೇಕ ನುಡಿಗಳ ಮಿಶ್ರಣವೂ ಆಗಿರುವ ಸಾಧ್ಯತೆಯಿದೆ. ಹಾಗಾಗಿ, ಈ ತಾಯ್ನುಡಿಗೆ ಹೆಚ್ಚು ಸಮೀಪದ ಕಲಿಕೆಯ ನುಡಿಯಲ್ಲಿ ನಡೆಯಬೇಕಾಗುತ್ತದೆ.
ತಾಯ್ನುಡಿ ಕಲಿಕೆಯ ಮಾಧ್ಯಮವನ್ನು ಕಡ್ಡಾಯ ಮಾಡುವುದರ ಮೂಲಕ ಸಂವಿಧಾನದ ೧೯(ಜಿ) ವಿಧಿಯ ಉಲ್ಲಂಘನೆಯಾಗುತ್ತದೆಯೇ ಎನ್ನುತ್ತದೆ ನ್ಯಾಯಾಲಯ. ೧೯ನೇ ವಿಧಿಯು ಭಾರತದ ನಾಗರೀಕರಿಗೆ ಇರುವ ಮೂಲಭೂತಹಕ್ಕುಗಳ ಬಗ್ಗೆ ಮಾತಾಡುತ್ತಿದ್ದು, ೧೯(ಜಿ) ಯಾವುದೇ ವ್ಯಾಪಾರ, ವಹಿವಾಟು, ಉದ್ಯೋಗ, ಉದ್ದಿಮೆ ಮಾಡಲು ಸ್ವತಂತ್ರ ಎಂದು ಹೇಳಿದೆ.
ಶಿಕ್ಷಣ ಸಂಸ್ಥೆಗಳನ್ನು ತೆರೆಯುವುದು ಮತ್ತು ನಡೆಸುವುದನ್ನು ಒಂದು ಉದ್ದಿಮೆಯೆಂದು ಕರೆಯಬಹುದೇ ಎನ್ನುವುದನ್ನು ಇಲ್ಲಿ ಚರ್ಚಿಸಬೇಕಾಗಿದೆ. ಒಂದು ನಾಡಿನ ಮುಂದಿನ ಪ್ರಜೆಗಳ ಕಲಿಕೆ, ಇರುವ ಜನರ ಆರೋಗ್ಯ ಮುಂತಾದವು ಆಯಾ ಸರ್ಕಾರಗಳ ಹೊಣೆಗಾರಿಕೆಯಾಗಿರುತ್ತದೆ. ಇಲ್ಲಿ ಸರ್ಕಾರದ ಈ ಹೊಣೆಗಾರಿಕೆಯನ್ನು ಹಂಚಿಕೊಳ್ಳಲು ಖಾಸಗಿ ಸಂಸ್ಥೆಗಳು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿವೆಯೇ ಹೊರತು ಉದ್ದಿಮೆಯಾಗಲ್ಲ. ಹಾಗಿದ್ದಲ್ಲಿ ಉದ್ದಿಮೆಗಳಿಗೆ ಅನ್ವಯವಾಗುವ ತೆರಿಗೆಗಳೂ ಸೇರಿದಂತೆ ಎಲ್ಲಾ ನಿಯಮಗಳೂ ನಾಡಿನ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗಬೇಕಿತ್ತು! ಹಾಗಲ್ಲದಿದ್ದಲ್ಲಿ, ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಉದ್ಯಮವಾಗುವುದಾದರೂ ಹೇಗೆ? ಈ ನೆಲೆಯಲ್ಲಿ ನೋಡಿದರೆ ಸರ್ಕಾರ ರೂಪಿಸುವ ಎಲ್ಲಾ ನಿಯಮಗಳನ್ನು ಒಪ್ಪಿ ಜಾರಿಗೊಳಿಸಬೇಕಾದ ಬದ್ಧತೆ ಈ ಶಾಲೆಗಳಿಗೆ ಇದೆಯಲ್ಲದೆ ನಿಯಮವನ್ನು ಪ್ರಶ್ನಿಸುವ/ ತಿರಸ್ಕರಿಸುವ ಹಕ್ಕಿರುವುದಿಲ್ಲ. ಈ ನಿಟ್ಟಿನಲ್ಲಿ ೧೯(ಜಿ) ವಿಧಿಯು ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗದು ಎಂಬ ವಾದವನ್ನು ಸರ್ಕಾರ ಎತ್ತಿಹಿಡಿಯಬೇಕಾಗಿದೆ.
೩೫೦(ಎ)ನೇ ವಿಧಿಯ ಅನ್ವಯ ಸರ್ಕಾರ/ ಸ್ಥಳೀಯ ಆಡಳಿತ ಭಾಷಾ ಅಲ್ಪಸಂಖ್ಯಾತರಿಗೆ ಅವರ ತಾಯ್ನುಡಿಯಲ್ಲಿ ಕಲಿಕೆಗೆ ಅನುಕೂಲ ಮಾಡಿಕೊಡತಕ್ಕದ್ದು.
ಇವೆಲ್ಲಾ ಉತ್ತರಗಳನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವ ಹೊಣೆ ನಮ್ಮ ಸರ್ಕಾರದ್ದಾಗಿದೆ. ಇಷ್ಟೆಲ್ಲಾ ಇದ್ದೂ ಕೂಡಾ ನಾಳೆ ಸುಪ್ರಿಂಕೋರ್ಟ್ ತಾಯ್ನುಡಿ ಮಾಧ್ಯಮದ ಪರವಾಗೇ ತೀರ್ಪುಕೊಟ್ಟಲ್ಲಿ ನಮ್ಮ ಜನರೇ ಅದರ ವಿರುದ್ಧ ಬೀದಿಗಿಳಿಯುವ ಸಾಧ್ಯತೆ ಹೆಚ್ಚು. ಏಕೆಂದರೆ ಇಂಗ್ಲೀಶಿನಲ್ಲಿ ಕಲಿತರೆ ಮಕ್ಕಳ ಬಾಳು ಬೆಳಗುತ್ತದೆ ಎನ್ನುವ ಅರೆದಿಟದ ಮಾರಾಟ ತಂತ್ರಕ್ಕೆ ಈಗಾಗಲೇ ಜನರು ಮರುಳಾಗಿದ್ದಾಗಿದೆ. ಕನ್ನಡ ಮಾಧ್ಯಮದಲ್ಲಿ ಕಲಿತರೆ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎನ್ನುವುದನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕಾದ ಮೊದಲ ಕರ್ತವ್ಯ ಸರ್ಕಾರಕ್ಕಿದೆ. ಹೀಗೆ ಮಾಡಿಕೊಡಲು ಕನ್ನಡ ಮಾಧ್ಯಮದ ಕಲಿಕೆಯನ್ನು ಅತ್ಯುತ್ತಮ ಗುಣಮಟ್ಟದ್ದಾಗಿಸುವ, ಕನ್ನಡದಲ್ಲೇ ಎಲ್ಲಾ ಕಲಿಕೆಗಳನ್ನು ಸಾಧ್ಯವಾಗಿಸುವ, ತಾಯ್ನುಡಿ ಕಲಿಕೆಯ ಜೊತೆಯಲ್ಲೇ ಜಗತ್ತಿನ ಬೇರೆ ಬೇರೆ ಭಾಷೆಗಳಲ್ಲಿ ಪ್ರಭುತ್ವ ಸಾಧಿಸಬಲ್ಲಂತಹ ತರಬೇತಿ ನೀಡಬಲ್ಲ, ಆ ಮೂಲಕ ನಿಮ್ಮ ಮಗು ಇಂದಿಗಿಂತಲೂ ಭವ್ಯವಾದ ನಾಳೆಗಳನ್ನು ಹೊಂದಬಲ್ಲ ಎಂಬ ಭರವಸೆಯನ್ನು ತಾಯ್ತಂದೆಯರ ಮನದಲ್ಲಿ ಮೂಡಿಸಬಲ್ಲಂಥಾ ವ್ಯವಸ್ಥೆ ಕಟ್ಟಬೇಕಾಗಿದೆ. ಇಲ್ಲದಿದ್ದರೆ ಈ ಮೊಕದ್ದಮೆ, ಸಾಂವಿಧಾನಿಕ ಪೀಠ, ವಾದ ವಿವಾದ, ಕಾನೂನು ಹೋರಾಟಗಳೆಲ್ಲಾ ವ್ಯರ್ಥ!
ತಾಯ್ನುಡಿ ಕಲಿಕೆಯ ಮಾಧ್ಯಮವನ್ನು ಕಡ್ಡಾಯ ಮಾಡುವುದರ ಮೂಲಕ ಸಂವಿಧಾನದ ೧೯(ಜಿ) ವಿಧಿಯ ಉಲ್ಲಂಘನೆಯಾಗುತ್ತದೆಯೇ ಎನ್ನುತ್ತದೆ ನ್ಯಾಯಾಲಯ. ೧೯ನೇ ವಿಧಿಯು ಭಾರತದ ನಾಗರೀಕರಿಗೆ ಇರುವ ಮೂಲಭೂತಹಕ್ಕುಗಳ ಬಗ್ಗೆ ಮಾತಾಡುತ್ತಿದ್ದು, ೧೯(ಜಿ) ಯಾವುದೇ ವ್ಯಾಪಾರ, ವಹಿವಾಟು, ಉದ್ಯೋಗ, ಉದ್ದಿಮೆ ಮಾಡಲು ಸ್ವತಂತ್ರ ಎಂದು ಹೇಳಿದೆ.
ಶಿಕ್ಷಣ ಸಂಸ್ಥೆಗಳನ್ನು ತೆರೆಯುವುದು ಮತ್ತು ನಡೆಸುವುದನ್ನು ಒಂದು ಉದ್ದಿಮೆಯೆಂದು ಕರೆಯಬಹುದೇ ಎನ್ನುವುದನ್ನು ಇಲ್ಲಿ ಚರ್ಚಿಸಬೇಕಾಗಿದೆ. ಒಂದು ನಾಡಿನ ಮುಂದಿನ ಪ್ರಜೆಗಳ ಕಲಿಕೆ, ಇರುವ ಜನರ ಆರೋಗ್ಯ ಮುಂತಾದವು ಆಯಾ ಸರ್ಕಾರಗಳ ಹೊಣೆಗಾರಿಕೆಯಾಗಿರುತ್ತದೆ. ಇಲ್ಲಿ ಸರ್ಕಾರದ ಈ ಹೊಣೆಗಾರಿಕೆಯನ್ನು ಹಂಚಿಕೊಳ್ಳಲು ಖಾಸಗಿ ಸಂಸ್ಥೆಗಳು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿವೆಯೇ ಹೊರತು ಉದ್ದಿಮೆಯಾಗಲ್ಲ. ಹಾಗಿದ್ದಲ್ಲಿ ಉದ್ದಿಮೆಗಳಿಗೆ ಅನ್ವಯವಾಗುವ ತೆರಿಗೆಗಳೂ ಸೇರಿದಂತೆ ಎಲ್ಲಾ ನಿಯಮಗಳೂ ನಾಡಿನ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗಬೇಕಿತ್ತು! ಹಾಗಲ್ಲದಿದ್ದಲ್ಲಿ, ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಉದ್ಯಮವಾಗುವುದಾದರೂ ಹೇಗೆ? ಈ ನೆಲೆಯಲ್ಲಿ ನೋಡಿದರೆ ಸರ್ಕಾರ ರೂಪಿಸುವ ಎಲ್ಲಾ ನಿಯಮಗಳನ್ನು ಒಪ್ಪಿ ಜಾರಿಗೊಳಿಸಬೇಕಾದ ಬದ್ಧತೆ ಈ ಶಾಲೆಗಳಿಗೆ ಇದೆಯಲ್ಲದೆ ನಿಯಮವನ್ನು ಪ್ರಶ್ನಿಸುವ/ ತಿರಸ್ಕರಿಸುವ ಹಕ್ಕಿರುವುದಿಲ್ಲ. ಈ ನಿಟ್ಟಿನಲ್ಲಿ ೧೯(ಜಿ) ವಿಧಿಯು ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗದು ಎಂಬ ವಾದವನ್ನು ಸರ್ಕಾರ ಎತ್ತಿಹಿಡಿಯಬೇಕಾಗಿದೆ.
೩೫೦(ಎ)ನೇ ವಿಧಿಯ ಅನ್ವಯ ಸರ್ಕಾರ/ ಸ್ಥಳೀಯ ಆಡಳಿತ ಭಾಷಾ ಅಲ್ಪಸಂಖ್ಯಾತರಿಗೆ ಅವರ ತಾಯ್ನುಡಿಯಲ್ಲಿ ಕಲಿಕೆಗೆ ಅನುಕೂಲ ಮಾಡಿಕೊಡತಕ್ಕದ್ದು.
ಇದು ಅವಕಾಶ ನಿರಾಕರಣೆ ಮಾಡಬಾರದು ಎನ್ನುವ ಅರ್ಥದಲ್ಲಿದೆಯೇ ಹೊರತು ಎಲ್ಲೋ ನಡು ತಮಿಳುನಾಡಿಗೆ ವಲಸೆ ಹೋದ ಕನ್ನಡಿಗರ ಕುಟುಂಬದ ಕೂಸಿಗಾಗಿ ಅಲ್ಲೊಂದು ಕನ್ನಡ ಶಾಲೆಯನ್ನು ತೆಗೆಯಬೇಕು ಎಂದು ಹೇಳುತ್ತಿಲ್ಲ. ಹಾಗಾಗಿ ಕನ್ನಡನಾಡಿನಲ್ಲಿ ಕನ್ನಡ ಮಾಧ್ಯಮವನ್ನು ಕಡ್ಡಾಯ ಮಾಡುವಾಗ ಸ್ಪಷ್ಟವಾದ ನಿಯಮವಿದ್ದರೆ ಸಾಕು. ಬೆಳಗಾವಿಯ ಯಾವುದಾದರೋ ಹಳ್ಳಿಯಲ್ಲಿ ಮರಾಟಿಗರು ಹೆಚ್ಚಿದ್ದರೆ ಅಲ್ಲಿ ಮರಾಟಿ ಮಾಧ್ಯಮ ಶಾಲೆ ತೆರೆಯುವುದಕ್ಕೆ ನಮ್ಮ ಸಹಕಾರ ಇರಬೇಕು ಮತ್ತು ಅಡಚಣೆ ಮಾಡಬಾರದು ಎನ್ನುವಂತೆ ಈ ನಿಯಮವನ್ನು ಅರ್ಥೈಸಬೇಕಾಗಿದೆ. ಹಾಗಾಗಿ "ಕನ್ನಡ ಮಾಧ್ಯಮ ಶಾಲೆಗಳು ಕಡ್ಡಾಯ, ಬೇರೆ ತಾಯ್ನುಡಿಯ ಶಾಲೆ ತೆರೆಯಲು ನಮ್ಮ ಅಡ್ಡಿಯಿಲ್ಲಾ" ಎನ್ನುವ ನಿಲುವನ್ನು ನಾವು ಹೊಂದಬೇಕಾಗುತ್ತದೆ.
0 ಅನಿಸಿಕೆಗಳು:
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!