ರಾಜ್ಯಪಾಲ ಕಥಾಮೃತಸಾರ!


ಕರ್ನಾಟಕದ ಘನ ರಾಜ್ಯಪಾಲರು ರೋಟರಿ ಕ್ಲಬ್‌ನ ಒಂದು ಕಾರ್ಯಕ್ರಮದಲ್ಲಿ ಕೆಂಡಾಮಂಡಲರಾದರು ಎನ್ನುವ ಸುದ್ದಿ ೩೦ನೇ ಜೂನ್ ೨೦೧೩ರ ಉದಯವಾಣಿಯಲ್ಲಿ ಪ್ರಕಟವಾಗಿದೆ. ಅಜೀಂಪ್ರೇಮ್‍ಜಿ ವಿಶ್ವವಿದ್ಯಾಲಯದ ಕಾರ್ಯವೈಖರಿಯ ಬಗ್ಗೆ ಇವರು ಅದೇನೋ ಟೀಕೆ ಮಾಡಿದರಂತೆ. ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲಿ ಇತರೆ ಭಾಷೆಗಳ ಕಲಿಕೆಗೆ ಪ್ರೋತ್ಸಾಹವಿಲ್ಲಾ ಎನ್ನುವ ಹೇಳಿಕೆಯನ್ನೂ ನೀಡಿದ್ದಾರೆ.ಆ ಮೂಲಕ ರಾಜ್ಯಪಾಲರೆಂಬ ಹುದ್ದೆಯಲ್ಲಿ ಕುಳಿತವರಿಗೆ ನಮ್ಮೂರಲ್ಲಿ ಮಾಡಕ್ಕೆ ಕೇಮಿಲ್ಲವೇನೋ ಎನ್ನುವ ಅನಿಸಿಕೆಗೆ ಕಾರಣರಾಗಿದ್ದಾರೆ.

ಇತರೆ ಭಾಷೆ ಕಲಿಕೆಗೆ ಅವಕಾಶ!

ಈ ಸ್ವಾಮಿಗಳಿಗೆ ಕರ್ನಾಟಕದಲ್ಲಿ ಬೇರೆ ಬೇರೆ ಭಾಷೆಗಳ ಕಲಿಕೆಗೆ ವಿರೋಧವಿದೆ ಎಂದು ಅದ್ಯಾವ ಬೃಹಸ್ಪತಿ ಹೇಳಿದ್ದಾನೋ ಗೊತ್ತಿಲ್ಲ. ಕರ್ನಾಟಕದ ಶಾಲೆಗಳಲ್ಲಿ ಇಂಗ್ಲೀಶ್, ಮರಾಟಿ, ಉರ್ದು, ತಮಿಳು, ತೆಲುಗು ಸೇರಿದಂತೆ ಎಲ್ಲಾ ಭಾಷೆಯ ಮಾಧ್ಯಮಗಳ ಕಲಿಕೆಯೂ ಸಾಧ್ಯವಿದೆ. ಇಲ್ಲಿ ಸಂಸ್ಕೃತ ವಿದ್ಯಾಪೀಠಗಳೂ, ಇಂಗ್ಲೀಶ್ ಸ್ಪೀಕಿಂಗ್ ಕೋರ್ಸುಗಳೂ, ಜಪಾನಿ ಫ್ರೆಂಚ್ ಮೊದಲಾದ ವಿದೇಶಿ ಭಾಷಾ ಕಲಿಕಾ ಕೇಂದ್ರಗಳೂ ನಿರ್ಭೀತಿಯಿಂದ ಕೆಲಸ ಮಾಡುತ್ತಿವೆ ಮತ್ತು ಯಾವುದೇ ವ್ಯಕ್ತಿ ತನ್ನಿಷ್ಟದ ಭಾಷೆಯನ್ನು ಕಲಿಯಲು ಯಾರಾದರೂ ಅಡ್ಡಿ ಮಾಡಿದ್ದಾರೆ ಎನ್ನುವ ಪರಿಸ್ಥಿತಿಯೇ ಇಲ್ಲಿಲ್ಲದಿರುವಾಗ... ಈ ಮಹಾನುಭಾವರಿಗೆ ಕರ್ನಾಟಕದಲ್ಲಿ ಬೇರೆ ಭಾಷೆಗಳ ಕಲಿಕೆಗೆ ವಿರೋಧವಿದೆ ಎನ್ನುವ ಭ್ರಮೆ ಎಲ್ಲಿಂದ ಮೆಟ್ಟಿಕೊಂಡಿತೋ ಕಾಣೆ! ಒಟ್ಟಲ್ಲಿ ಕನ್ನಡಿಗರಿಗೆ ‘ಸೌಹಾರ್ದತೆಯ ಬಿಟ್ಟಿ ಉಪದೇಶ’ ಕೊಡುವವರ ಸಾಲಿನಲ್ಲಿ ತಾವೂ ಇದ್ದೇವೆ ಎಂದು ಈ ಮೂಲಕ ರಾಜ್ಯಪಾಲರು ತೋರಿಸಿಕೊಂಡಿದ್ದಾರೆ. ಶ್ರೀ ಹಂಸರಾಜ್ ಭಾರಧ್ವಾಜರದು ಇವತ್ತಿನದೊಂದೇ ಕಥೆಯಲ್ಲಾ. ಈ ಹಿಂದೆಯೂ  ಕೂಡಾ ಕಾರ್ಯಕ್ರಮವೊಂದರಲ್ಲಿ ಕನ್ನಡಿಗರಿಗೆ "ನೀವೆಲ್ಲಾ ಸುಂದರವಾದ ಭಾಷೆಯಾದ ಉರ್ದುವನ್ನು ಕಲಿಯಿರಿ" ಎಂದಿದ್ದರು. ಅದಕ್ಕೂ ಹಿಂದೆ "ದೇಶದ ಬಗ್ಗೆ ಗೌರವಾ ಇದ್ದರೆ ಹಿಂದೀ ಕಲೀರಿ" ಎಂದಿದ್ದರು. ಇದು ಇವರೊಬ್ಬರ ನಡವಳಿಕೆಯಲ್ಲಾ. ಈ ಹಿಂದಿನ ರಾಜ್ಯಪಾಲರಾಗಿದ್ದ ರಾಮೇಶ್ವರ್ ಠಾಕೂರ್ ಎಂಬ ಪುಣ್ಯಾತ್ಮರೂ ಕೂಡಾ ಇಂಥದ್ದೇ ಮಾತನ್ನು ಹೇಳಿದ್ದರು.

ಅಂದಹಾಗೆ ಈ ರಾಜ್ಯಪಾಲರ ಕೆಲಸ ಏನು? ಹೀಗೆ ಬಿಟ್ಟಿ ಉಪದೇಶ ಕೊಡೋದೇನಾ? ಕನ್ನಡಿಗರಿಗೆ ಇಂಥಾ ಪುಗಸಟ್ಟೆ ಉಪದೇಶ ಕೊಡೋ ಈ ಮಂದಿ, ಇಂಥದ್ದೇ ಉಪದೇಶವನ್ನು ಭಾರತದ ಇತರೇ ಭಾಷಿಕರಿಗೂ ಕೊಡ್ತಾರೇನು? ಅಂದರೆ ಉತ್ತರಪ್ರದೇಶಕ್ಕೆ ಹೋಗಿ ಅಲ್ಲಿನವರಿಗೆ ಕನ್ನಡ ಸುಂದರವಾದ ಭಾಷೆ ಅದನ್ನು ಕಲಿಯಿರಿ ಎಂದು ಎಂದಾದರೂ ಯಾರಾದರೂ ರಾಜ್ಯಪಾಲರು ಹೇಳಿದ್ದನ್ನು ಕೇಳಿದ್ದೀರಾ? ಊಹೂಂ... ನಾವೇನಾದರೂ ಅಂಥಾ ಪ್ರಯತ್ನ ಮಾಡಿದಲ್ಲಿ ಭಗೀರಥನನ್ನೇ ಮೀರಿಸಬೇಕಾದೀತು!

ಹಿಂದೀ ಸಾಮ್ರಾಜ್ಯಶಾಹಿ ಮನಸ್ಥಿತಿಯ ಈ ದೊಡ್ಡಜನರಿಗೆ ಇರಲು ನಮ್ಮೂರಿನ ಅತಿದೊಡ್ಡ ಭವ್ಯ ರಾಜಭವನವೇ ಬೇಕು. ಅಲ್ಲಿ  ಜನಪರವಾದ ಅಹವಾಲುಗಳನ್ನು ಒಯ್ಯುವವರಿಗೆ ಪ್ರವೇಶ ಸಿಗುತ್ತೋ ಇಲ್ಲವೋ ಗೊತ್ತಿಲ್ಲಾ... ಆದರೆ ರೋಟರಿ ಕ್ಲಬ್ ಕಾರ್ಯಕ್ರಮಕ್ಕೆ,  ಕಮ್ಯುನಿಕೇಶನ್ ಫಾರ್ ಡೆವೆಲಪ್‌ಮೆಂಟ್ ಅಂಡ್ ಲರ್ನಿಂಗ್ ಸಂಸ್ಥೆಯ ಕಾರ್ಯಕ್ರಮಕ್ಕೆ ಜಾಗ ಸಿಗುತ್ತದೆ.  "ಭಾರತದ ಹುಳುಕಿನ ಭಾಷಾನೀತಿಯನ್ನು ಬದಲಿಸಿ ಎಂದು ಕೇಂದ್ರವನ್ನು ಒತ್ತಾಯಿಸುವ ಸಾವಿರ ಜನರ ಸಹಿಯುಳ್ಳ ಪಿಟಿಷನ್ ಸಲ್ಲಿಸುತ್ತೇವೆ... ಭೇಟಿಯಾಗಿ" ಎಂದವರಿಗೆ ಸಿಗದ ರಾಜ್ಯಪಾಲರ ಅಪಾಯಿಂಟ್‌ಮೆಂಟ್ ಇಂಥಾ ಉಪದೇಶಾಮೃತ ಕೇಳುತ್ತೇವೆ ಎಂದರೆ ಸುಲಭವಾಗಿ ಸಿಗುತ್ತದೆಯೋ ಏನೋ?! ಒಟ್ಟಲ್ಲಿ ಕೇಂದ್ರವೆಂಬ ಸಾರ್ವಭೌಮನ ಪ್ರತಿನಿಧಿಯಾಗಿ ರಾಜ್ಯಗಳ ಮೇಲೆ ನಿಗಾ ಇಡಲೆಂದೇ ಸೃಷ್ಟಿಯಾಗಿದೆಯೇನೋ ಎನ್ನುವಂತಿರುವ ರಾಜ್ಯಪಾಲರೆಂಬ ಹುದ್ದೆ... ಸಕ್ರಿಯ ರಾಜಕೀಯ ನಿವೃತ್ತರ ಕೊನೆನಿಲ್ದಾಣದಂತಿರುವ ರಾಜ್ಯಪಾಲರೆಂಬ ಹುದ್ದೆ... ನಿಜಕ್ಕೂ ಬೇಕಾ ಎಂಬ ಚರ್ಚೆ ಹುಟ್ಟಿಕೊಳ್ಳಲು ಇದು ಸಕಾಲ!

0 ಅನಿಸಿಕೆಗಳು:

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails