ಮೋದಿಯವರು "ಗೆಲ್ಲಿಸಿ" ಎಂದ "ಭಾರತ"ದಲ್ಲಿ ಕಾಣದ ಕರ್ನಾಟಕ!


ಭಾರತೀಯ ಜನತಾ ಪಕ್ಷದ ಘೋಷಿತ ಪ್ರಧಾನಮಂತ್ರಿ ಅಭ್ಯರ್ಥಿಯಾಗಿರುವ ಶ್ರೀ ನರೇಂದ್ರಮೋದಿಯವರು ನಿನ್ನೆ (೧೭.೧೧.೨೦೧೩ರ ಭಾನುವಾರ) ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೇರಿದ್ದ ಲಕ್ಷಾಂತರ ಜನರನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ. "ಭಾರತ ಗೆಲ್ಲಿಸಿ"  ಹೆಸರಿನ ಈ ಕಾರ್ಯಕ್ರಮದ ತಮ್ಮ ಭಾಷಣದಲ್ಲಿ ನರೇಂದ್ರಮೋದಿಯವರು "ಭಾರತದ ಗೆಲುವು ಎಂದರೇನು? ಭಾರತವನ್ನು ಗೆಲ್ಲಿಸುವುದು ಹೇಗೆ? ಭಾರತದ ಗೆಲುವಿನಲ್ಲಿ ಕರ್ನಾಟಕದ ಪಾತ್ರವೇನು? ಕರ್ನಾಟಕ ಈ ಗೆಲುವಿನಲ್ಲಿ ಹೇಗೆ ಪಾಲುದಾರ?" ಎಂಬುದನ್ನೆಲ್ಲಾ ವಿವರಿಸುತ್ತಾರೆ ಎಂದುಕೊಂಡವರಿಗೆ ಭಯಂಕರ ನಿರಾಸೆಯಾಗಿದೆ. ಕನ್ನಡಕ್ಕೆ ತರ್ಜುಮೆಯೂ ಆಗದ ನೇರ ಹಿಂದೀ ಭಾಷಣ ನೆರೆದಿದ್ದ ಎಷ್ಟು ಜನರಿಗೆ ಅರ್ಥವಾಯಿತೋ ದೇವರೇ ಬಲ್ಲಾ!

ಮೋದಿ ಮಾತಿನಲ್ಲಿ ಕಾಣದ ಕರ್ನಾಟಕ...

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ ಎಂಬ ಪ್ರಚಾರವೇ ಮುಖ್ಯವಾಗಿದ್ದು, ಕೇಂದ್ರಸರ್ಕಾರದ ವೈಫಲ್ಯಗಳಲ್ಲಿ ಕೆಲವನ್ನು ಪಟ್ಟಿ ಮಾಡಿ ಮಾತಾಡಿದ ಶ್ರೀ ನರೇಂದ್ರಮೋದಿಯವರ ಮಾತುಗಳಲ್ಲಿ ಕರ್ನಾಟಕದ ಸಮಸ್ಯೆಗಳಿಗೆ ಯಾವ ಜಾಗವೂ ಇರಲಿಲ್ಲ! ಕನ್ನಡನಾಡಿನ ಜನರ ನಾಳೆಗಳ ಬಗ್ಗೆ ಯಾವ ಮಾತೂ ಇರಲಿಲ್ಲಾ! ಕರ್ನಾಟಕದ ಜನರಿಗೆ ಭಾವನಾತ್ಮಕವಾಗಿ ಮಹತ್ವದ್ದಾದ ಬೆಳಗಾವಿಯಾಗಲೀ, ಬದುಕಿನ ಪ್ರಶ್ನೆಯಾದ ಕೃಷ್ಣಾ ಕಾವೇರಿಯಾಗಲೀ, ಒಂದಿಡೀ ನಗರದ ಜನತೆಗೆ ಕುಡಿಯುವ ನೀರಿಗೆ ಬೇಕಿರುವ ಕಳಸಾ-ಭಂಡೂರವಾಗಲೀ, ಕನ್ನಡಿಗರಿಗೆ ಕೆಲಸ ಕೊಡಿಸಬಲ್ಲ ‘ಸ್ಥಳೀಯರಿಗೆ ಉದ್ಯೋಗ ಮೀಸಲಾತಿ’ಯಾಗಲೀ ಇವರ ಮಾತಿನಲ್ಲಿ ಇಣುಕಲೇ ಇಲ್ಲಾ! ಕೇಂದ್ರದ ಯು.ಪಿ.ಎ ಸರ್ಕಾರದ ಕಡುಭ್ರಷ್ಟತೆಯ ಬಗ್ಗೆ ಮಾತಾಡಿದ ಇವರ ವಿಶ್ವಾಸಾರ್ಹತೆಯನ್ನು ಕಳೆದ ಒಂಬತ್ತು ವರ್ಷಗಳ ಅವಧಿಯ ಕರ್ನಾಟಕ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕೇಳಿ ಬಂದ ಗಣಿ ಅಕ್ರಮವೂ ಸೇರಿದಂತೆ ಯಾವ ಹಗರಣದ ಬಗ್ಗೆಯಾಗಲೀ, ಲೋಕಾಯುಕ್ತ ವರದಿಯ ಬಗ್ಗೆಯಾಗಲೀ, ಜೈಲುಪಾಲಾದ ಸಚಿವರುಗಳ ಬಗ್ಗೆಯಾಗಲೀ ಚಕಾರವೆತ್ತದೆ ವಹಿಸಿದ ಮೌನ ನುಂಗಿ ಹಾಕಿತೆಂದರೆ ತಪ್ಪಾಗದು.

ಬಯಲಾದ ರಾಜ್ಯ ಬಿಜೆಪಿಯ ಬಣ್ಣ!

ಕಾರ್ಯಕ್ರಮಗಳಲ್ಲಿ ಬೇರೆ ಭಾಷೆಯಲ್ಲಿ ನಾಯಕರುಗಳು ಮಾತಾಡಿದಾಗ, ಜೊತೆಗಾರರೊಬ್ಬರು ಅದನ್ನು ಕನ್ನಡಕ್ಕೆ ತರ್ಜುಮೆ ಮಾಡುವುದು ವಾಡಿಕೆ. ರಾಷ್ಟ್ರೀಯ ಮುಂದಾಳುಗಳೆನಿಸಿಕೊಂಡಿದ್ದ ಹಲವರು(ಎಷ್ಟೋ ಬಾರಿ ಬಿಜೆಪಿಯವರೇ) ಈ ಹಿಂದೆಲ್ಲಾ ಇದೇ ಕ್ರಮವನ್ನು ಅನುಸರಿಸಿದ್ದಾರೆ. ಆದರೆ ಈ ಬಾರಿ ಇಂತಹ ಯಾವುದೂ ನಡೆಯಲಿಲ್ಲ. ತಮ್ಮ ಭಾಷಣದ ಆರಂಭದಲ್ಲಿ ಕನ್ನಡದಲ್ಲಿ ಮಾತಾಡಿ, ನಂತರ ಹಿಂದೀಯಲ್ಲಿ ಭಾಷಣ ಮಾಡಿದ ನಾಯಕರನ್ನೇನು ಈ ಬಗ್ಗೆ ದೂಷಿಸಲಾಗದು. ಇದಕ್ಕೆ ಪ್ರಮುಖ ಕಾರಣವೇ ಇಲ್ಲಿನ ನಾಯಕರುಗಳ ಅಸಡ್ಡೆ. ರಾಜ್ಯ ಬಿಜೆಪಿಯ ನಾಯಕರಿಗೆ ಕನ್ನಡದ ಬಗ್ಗೆ ಇದೆಂಥಾ ಅಸಡ್ಡೆ ಎಂದುಕೊಳ್ಳುತ್ತಿರುವಷ್ಟರಲ್ಲೇ ಇದು ಬರೀ ಕನ್ನಡದ ಬಗೆಗಿನ ಅಸಡ್ಡೆಯಲ್ಲಾ, ದೆಹಲಿ ದಣಿಗಳನ್ನು ಓಲೈಸುವ ಪರಿ ಎನ್ನಿಸಿದ್ದು... ರಾಜ್ಯಾಧ್ಯಕ್ಷರಾದ ಪ್ರಹ್ಲಾದ್ ಜೋಷಿಯವರೇ ಕನ್ನಡದಿಂದ ಹಿಂದೀ ಭಾಷಣಕ್ಕೆ ಬದಲಾದಾಗ! ಕನ್ನಡ ಬಾರದವರು ಅನಿವಾರ್ಯವಾಗಿ ತಮ್ಮ ನುಡಿಯಲ್ಲಿ ಮಾತಾಡುವುದನ್ನು, ತರ್ಜುಮೆದಾರರಿದ್ದಾಗ ಒಪ್ಪಬಹುದು. ಕನ್ನಡಿಗರೇ ಕನ್ನಡಿಗರನ್ನು ಉದ್ದೇಶಿಸಿ ಹಿಂದೀಯಲ್ಲಿ ಭಾಷಣ ಮಾಡುವುದನ್ನು ಹೇಗೆ ಒಪ್ಪಲಾದೀತು? ಇದು ತೋರಿಸುವುದಾದರೋ ಏನನ್ನು? ಮುಂದೊಮ್ಮೆ ಹಿಂದೀಯನ್ನು ಇವರು ಕರ್ನಾಟಕದ ಆಡಳಿತ ಭಾಷೆಯನ್ನಾಗಿಸೋಲ್ಲಾ ಎನ್ನಲು ಯಾವ ಖಾತ್ರಿ?

ಇನ್ನು ರಾಷ್ಟ್ರೀಯ ನಾಯಕರೆನ್ನಿಸಿಕೊಂಡವರು ಬಂದಾಗ ವೇದಿಕೆಯ ಮೇಲಿದ್ದ ರಾಜ್ಯನಾಯಕರು ಓಡಾಡುತ್ತಿದ್ದ ರೀತಿ, ತಗ್ಗಿ ಬಗ್ಗಿ ನಡೆದುಕೊಂಡು ವಿಧೇಯತೆ ತೋರಿಸುತ್ತಿದ್ದ ರೀತಿಗಳನ್ನು ನೋಡಿದರೆ, ಹೈಕಮಾಂಡಿಗೆ ತಾವು ಸಾಮಂತರು ಎಂಬುದನ್ನು ಎತ್ತೆತ್ತಿ ತೋರಿಸುವಂತಿತ್ತು. ಹತ್ತೊಂಬತ್ತು ಜನ ಸಂಸದರಿದ್ದಾಗಲೇ ಕನ್ನಡಿಗರ ಹಿತಕಾಯಲು ಆಗದವರು ಈಗ ತಮ್ಮ ಅಜೆಂಡಾವನ್ನು ರಾಷ್ಟ್ರೀಯ ಮಟ್ಟಕ್ಕೇರಿಸಿ "ಕನ್ನಡನಾಡಿನ ಸಮಸ್ಯೆಗಳು ಪ್ರಾದೇಶಿಕ - ಅವು ಲೋಕಸಭೆಯಲ್ಲಿ ಚರ್ಚಿಸಲು ಅನರ್ಹ" ಎಂಬಂತೆ "ಭಾರತ ಗೆಲ್ಲಿಸಿ" ಘೋಷವಾಕ್ಯ ಮೊಳಗಿಸುತ್ತಿರುವುದನ್ನು ನೋಡಿದರೆ ಅಚ್ಚರಿಯೆನ್ನಿಸುತ್ತದೆ. ಇದೇ ಕಾರಣಕ್ಕಾಗೇ ನಮ್ಮ ರಾಜ್ಯನಾಯಕರುಗಳೂ ಕೂಡಾ ತಮ್ಮ ಭಾಷಣದಲ್ಲಿ ಪಾಕಿಸ್ತಾನದ ಉಪಟಳ, ಚೈನಾದ ಅಪಾಯಗಳ ಬಗ್ಗೆ ಒತ್ತುಕೊಟ್ಟರೇ ಹೊರತು ಕನ್ನಡನಾಡಿನ ಏಳಿಗೆ ಅಥವಾ ಸಮಸ್ಯೆಗಳ ಬಗ್ಗೆ ಕಮಕ್ ಕಿಮಕ್ ಅನ್ನಲಿಲ್ಲಾ!

ಕೊನೆಹನಿ: ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವ ಮುನ್ನ ಆ ಪಕ್ಷವು ಹೊಂದಿರುವ ನೀತಿನಿಲುವು ಸಿದ್ಧಾಂತಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು. ಯಾವುದು ಭಾಷಾವಾರು ಪ್ರಾಂತ್ಯ ವಿರೋಧಿಯಾಗಿದೆಯೋ, ಯಾವುದು "ದೇಶ ಮೊದಲು" ಎನ್ನುತ್ತಾ ಕರ್ನಾಟಕದ ಹಿತ ನಂತರದ್ದು ಎಂಬ ನಿಲುವನ್ನು ಹೊಂದಿದೆಯೋ, ಯಾವುದು ಚಿಕ್ಕರಾಜ್ಯಗಳು ಆಳಲು ಸಲೀಸು ಎನ್ನುತ್ತಾ ರಾಜ್ಯಗಳನ್ನು ಒಡೆಯಲು ತುದಿಗಾಲಲ್ಲಿ ನಿಂತಿದೆಯೋ, ಯಾವುದು ಕೇಂದ್ರಸರ್ಕಾರ ಬಲಶಾಲಿಯಾಗಲು ರಾಜ್ಯಗಳ ಬಲ ಕುಂದಿಸಬೇಕು ಎಂಬಂತೆ ನಡೆದುಕೊಳ್ಳುತ್ತಿದೆಯೋ... ಅಂಥಾ ಯಾವುದೇ ರಾಜಕೀಯ ಪಕ್ಷದ ಕೈ ಹಿಡಿದರೆ ನಮ್ಮ ಪಾಲಿಗೆ ಸಿಕ್ಕುವುದು ಬರೀ ಚಿಪ್ಪು ಅಷ್ಟೇ!

4 ಅನಿಸಿಕೆಗಳು:

Unknown ಅಂತಾರೆ...

ಬಿಜೆಪಿಯಲ್ಲಿ ಪ್ರಜಾಪ್ರಭುತ್ವ ಇದೆ. ಕಾಂಗ್ರೆಸ್ಸ್ ನಲ್ಲಿ ಇನ್ನೂ ನೆಹರು ರಾಜವಂಶದ ಆಳ್ವಿಕೆ.. ಜೆಡಿಎಸ್, ಸಮಾಜವಾದಿ, ವೈಎಸಾರ್, ಡಿಎಂಕೆ ಇತ್ಯಾದಿ ಸಾಮಂತ ರಾಜರು ಬೇರೆ.. ಬಿಜೆಪಿ ಅಧಿಕಾರವಿರುವ ರಾಜ್ಯಗಳು ಕೇಂದ್ರಕ್ಕೆ ಸಲಾಮು ಹೊಡೆಯದೆ ಅಭಿವೃದ್ಧಿ ಹೊಂದುತ್ತಿವೆ, ಮತ್ತೆ ಮತ್ತೆ ಆರಿಸಿ ಬರುತ್ತಿವೆ.. ಕರ್ನಾಟಕದಲ್ಲಿ ಇದ್ದದ್ದು ಬಿಜೆಪಿ ಸರಕಾರ ಅಲ್ಲ, ಅದು ಆಪರೇಶನ್ ಕಮಲದ ಕಿಚಡಿ ಸರಕಾರ, ಅದಕ್ಕೆ ಬಿದ್ದು ಹೊಯಿತು. ನಿಜದಲ್ಲೂ ಪ್ರಾದೇಶಿಕತೆ ಬೆಂಬಲಿಸಿದ್ದು ಬಿಜೆಪಿಯೇ (ಉತ್ತರಾ ಖಂಡ, ಜಾರ್ಖಂಡ, ಚತ್ತೀಸ್ ಘಡಗಳನ್ನು ಸೃಷ್ಟಿಸಿ). ಕಾಂಗ್ರೆಸ್ಸ್, ಜೆಡಿಎಸ್, ಕೆಜೆಪಿ, ಬಿಎಸ್ಸಾರ್ ಗಳಂಥ ರಾಜ / ಸಾಮಂತ / ಕುಟುಂಬ ಪಕ್ಷಗಳನ್ನು ಕರ್ನಾಟಕ ಪ್ರಾದೇಶಿಕ ಪಕ್ಷಗಳೆಂದು ಒಪ್ಪಿಕೊಳ್ಳಲೂ ಆಗುವುದಿಲ್ಲ, ಬೆಂಬಲಿಸಲೂ ಸಾಧ್ಯವಿಲ್ಲ.

Prashanth ಅಂತಾರೆ...

Stop making non sense articles, do not try to divide the votes with such blogs, as we all know congress has failed completely to give India its Glory only option we have is with Shri Modi, in 45 minutes he cant discuss on bad roads of bangalore and all....please grow up.

ಆನಂದ್ ಅಂತಾರೆ...

ಶ್ರೀ ರವೀಂದ್ರಪ್ರಭು ಅವರೇ,

ರಾಜ್ಯಗಳು ಚಿಕ್ಕವಾದರೆ ಅವುಗಳ ಸಂಸದರ ಸಂಖ್ಯೆ ಕಮ್ಮಿಯಾಗುತ್ತದೆ ಮತ್ತು ಈ ಕಾರನದಿಂದಲೇ ಅವು ಕೇಂದ್ರದ ಜೊತೆ ಚೌಕಾಸಿ ಮಾಡುವ ಶಕ್ತಿ ಕಳೆದುಕೊಳ್ಳುತ್ತವೆ. ಉತ್ತರಪ್ರದೇಶದಲ್ಲಿ ೮೦+ ಸಂಸದರಿರುವುದರಿಂದಲೇ ಕೇಂದ್ರಸರ್ಕಾರ ರಚನೆಯಲ್ಲಿ ಅದು ದೊಡ್ಡ ಪಾತ್ರ ವಹಿಸಿರುವುದು. ರಾಜ್ಯಗಳನ್ನು ಒಡೆಯುವುದು ಪ್ರಾದೇಶಿಕತೆಗೆ ಕೊಡುವ ಬೆಲೆಯಲ್ಲಾ! ತೆಲಂಗಾಣಾ ರಚಿಸಿ ತೆಲುಗರನ್ನು ಒಡೆಯುವುದು ಮನೆಮುರುಕುತನ! ಆ ಮೂಲಕ ಕೇಂದ್ರದಲ್ಲಿ ಆಂಧ್ರದ ಬಲ ಕುಗ್ಗಿಸುವ ಹೂಟ ಅದು!! ಇನ್ನು ಕಾಂಗ್ರೆಸ್ ಮತ್ತಿತರ ಪಕ್ಷಗಳೂ ಕೂಡಾ ಕರ್ನಾಟಕದ ಹಿತ ಕಾಪಾಡುತ್ತಿಲ್ಲಾ ಎನ್ನುವುದು ಸರಿಯಾಗಿಯೇ ಇದೆ. ಅದಕ್ಕೇ ಕನ್ನಡ ಕೇಂದ್ರಿತ ರಾಜಕಾರಣವೇ ಮದ್ದು ಎಂಬುದನ್ನು ಕನ್ನಡಿಗರು ಅರಿತರೆ ಕೊನೇಪಕ್ಷ ನಾಳೆಗಳಾದರೂ ಹಸನಾಗುತ್ತವೆ.

ಪ್ರಶಾಂತ್ ಸಾರ್,

ಸಭ್ಯವಾಗಿ ಬರಿಯೋದನ್ನು ಮೊದಲು ಕಲಿಯಿರಿ. ನಿಮ್ಮ ಕಮೆಂಟ್ ಇಲ್ಲಿ ಹಾಕಿರುವುದೇ ಮೋದಿ ಬೆಂಬಲಿಗರಲ್ಲಿ ಟೀಕೆಗೆ ಎಂತಹ ಅಸಹನೆ ಇದೆ ಎಂಬುದನ್ನು ತೋರಿಸಿಕೊಡಲು... ಆಮೇಲೆ ವಿಷಯದ ಬಗ್ಗೆ ಚರ್ಚೆ ಮಾಡುವಾ!!

ನಮಸ್ಕಾರ

ಸಿದ್ದರಾಜು ವಳಗೆರೆಹಳ್ಳಿ ಬೋರೇಗೌಡ ಅಂತಾರೆ...

ರವೀಂದ್ರ ಅವರೇ,
ಬೀಜೇಪಿಯಲ್ಲಿ ಯಾವುದೇ ಬಗೆಯ ಅಂತರಿಕ ಪ್ರಜಾಪ್ರಬುತ್ವ ಇಲ್ಲ. ಹೇಳಬೇಕೆಂದರೆ ಕಾಂಗ್ರೆಸ್ಸಿನಲ್ಲೆ ಸ್ವಲ್ಪ ವಾಸಿ. ಬ್ಲಾಕ್ ಮಟ್ಟದಲ್ಲಾದರೂ ಕಾಂಗ್ರೆಸ್ಸಿನ ಕಾರ್ಯಕರ್ತರು ಚುನಾವಣೆಯ ಮೂಲಕ ಪಕ್ಶದ ಪಾದಾದಿಕಾರಿಗಳನ್ನು ಆಯ್ಕೆ ಮಾಡುತ್ತಾರೆ. ಬೀಜೇಪಿಯಲ್ಲಾದರೋ, ಶಾಸಕರು ಚುನಾವಣೆಯ ಮೂಲಕ ಸದಾನಂದಗವ್ಡರನ್ನ ಆಯ್ಕೆ ಮಾಡಿದ್ದಾಗ ಸುರೇಶ್ ಕುಮಾರ್ ಅವರು 'ಇದು ನನ್ನ ಜೀವನದ ಕರಾಳ ದಿನ' ಅಂದಿದ್ದರು. ಎಲ್ಲಾ ಪಕ್ಶಗಳಲ್ಲೂ ಪಾಳೇಗಾರಿಕೆ ಇದೆ ಎಂಬುದು ದಿಟ. ಅದು ತೊಲಗಬೇಕು. ಆದರೂ, ದೇವೇಗವ್ಡ, ಕುಮಾರಸ್ವಾಮಿ, ಶ್ರೀರಾಮುಲು, ರೆಡ್ಡಿಗಳು, ಯಡಿಯೂರಪ್ಪ, ಹಾಗೂ ಕರ್ನಾಟಕದ ಹೊರಗಿನ ಗಾಂದಿಗಳು ಪ್ರತಿಯೊಂದು ಚುನಾವಣೆಯಲ್ಲೂ ಸೆಣೆಸಿ ಜನರ ಮುಂದೆ ಹೋಗುತ್ತಾರೆ. ಬೀಜೇಪಿಯ ಜುಟ್ಟು ಹಿಡಿದಿರುವ ಆರೆಸ್ಸೆಸ್ಸಿನವರು ಚುನಾವಣೆಯನ್ನೇ ಸೆಣೆಸುವುದಿಲ್ಲ. ಹಾಗಾಗಿ, ಬೀಜೇಪಿಯೇ ಎಲ್ಲದಕ್ಕಿಂತ ಕಡಿಮೆ ಪ್ರಜಾಪ್ರಬುತ್ವವಾದಿ ಪಕ್ಶ. ಮಿಗಿಲಾಗಿ, ಬೀಜೇಪಿ ಕಾಂಗ್ರೆಸ್ಸುಗಳು ಕನ್ನಡಿಗರ ಪಾಲಿಗೆ ಒಂದೇ. ಬೀಜೇಪಿ ಕೊಂಚ ಹಗೆಯ ಜೊತೆ ಬರುತ್ತದೆ ಅಶ್ಟೆ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails