ಒಬ್ಬ ಕನ್ನಡಿಗ ಉತ್ತರ ಭಾರತದ ಹಿಂದಿ ರಾಜ್ಯಗಳಿಗೆ ವಲಸೆ ಹೋದ್ರೆ ಹಿಂದಿ ಮಾತಾಡ್ತಾನೆ, ಅಲ್ಲೀ ಸಂಸ್ಕೃತಿ ಅರಿತು ಆ ಜನರೊಡನೆ ಬೆರೆತು ಮುಖ್ಯವಾಹಿನಿಯಲ್ಲಿ ಸೇರ್ಕೋತಾನೆ. ಆದರೆ ಉತ್ತರಭಾರತದಿಂದ ಹಿಂದಿಯೋರು ಬಂದ್ರೆ ಮಾತ್ರ ಇಲ್ಲಿ ಅವರು ಕನ್ನಡ ಕಲಿಯೋದಿರ್ಲಿ, ನಮ್ಮ ಕಣ್ಣಿಗೇ ಮಣ್ಣೆರಚಿ ನಮಗೇ ಹಿಂದಿ ಕಲಿಸಕ್ಕೆ ಬರ್ತಾರಲ್ಲ, ಹೀಗೆ ಯಾಕೆ ಗುರು? ಇದಕ್ಕೆ ಪರಿಹಾರ ಏನು ಗುರು?
ಕೇಂದ್ರದ ಆಡಳಿತದಲ್ಲಿರೋ ಇಲಾಖೆಗಳು ಬಿತ್ತ ಬೀಜಕೆಲವೇ ವರ್ಷಗಳ ಹಿಂದೆ ಸರ್ಕಾರಾನೇ ಉದ್ಯೋಗ ಕೊಡೋ ತಾಯಿ-ತಂದೆ ಎಲ್ಲವೂ ಆಗಿತ್ತು. ಸರ್ಕಾರವೇ ಬ್ಯಾಂಕು ನಡೆಸ್ತಾ ಇತ್ತು, ವಾಹನಗಳ್ನ ತಯಾರು ಮಾಡ್ತಿತ್ತು, ಅಡಿಗೆ ಸಾಮಾನು ಮಾರ್ತಾ ಇತ್ತು, ಪೇಪರ್ ತಯಾರಿಸ್ತಾ ಇತ್ತು, ಅಂಚೆ ಸೇವೆ ನಡೆಸ್ತಾ ಇತ್ತು, ಪ್ರತಿಯೊಂದ್ನೂ ಮಾಡ್ತಿತ್ತು. ಇದು ನಮ್ಮ ಹಿಂದಿನ ಪೀಳಿಗೆಯೋರ್ಗೆ ಬಹಳ ಚೆನ್ನಾಗಿ ಗೊತ್ತು. ಒಟ್ನಲ್ಲಿ "ಸರ್ಕಾರ = ಉದ್ಯೋಗ ಕೊಡೋ ದೇವ್ರು" ಆಗಿತ್ತು. ಆದ್ರೆ ಆ ಸರ್ಕಾರಕ್ಕೆ ಹಿಂದಿ ಹಿಡಿದಿತ್ತು.
ಕರ್ನಾಟಕಕ್ಕೆ ಹಿಂದಿಯೋರು ವಲಸೆ ಬರಕ್ಕೆ ಶುರು ಮಾಡಿದ್ದು ಹೆಚ್ಚಾಗಿ ಕೇಂದ್ರಸರ್ಕಾರದ ಬೇರೆಬೇರೆ ಇಲಾಖೆಗಳಿಗೆ ಕೆಲಸಕ್ಕೆ ಬರೋ ನೆಪದಲ್ಲಿ. ಅದ್ಯಾಕೆ? ಕೇಂದ್ರಸರ್ಕಾರದ ಇಲಾಖೆಗಳಿಗೆ ಹಿಂದಿಯೋರೇ ಹೆಚ್ಚು ಯಾಕೆ ಬಂದ್ರು ಅಂತೀರಾ? ಕೆಲವರು ಅಂದ್ಕೊಂಡಿರಬೋದು ಅವರಿಗೆ ಹೆಚ್ಚು ತಲೆ ಇತ್ತು, ಅವರು ಕನ್ನಡಿಗರಿಗಿಂತ ಬುದ್ಧಿವಂತರು, ಉದ್ಯಮಶೀಲರು, ಧೈರ್ಯವಂತರು, ಮುನ್ನುಗ್ಗೋರು, ಮಣ್ಣು ಮಸಿ, ಅದಕ್ಕೋಸ್ಕರಾನೇ ಔರು ಇಲ್ಲೀಗೆ ಬಂದು ಸೇರ್ಕೊಂಡ್ರು ಅಂತ.
ಎಲ್ಲಾ ಬರೀ ಸುಳ್ಳು. ಕಾರಣ ಅದಲ್ಲ. ಕಾರಣ ಇಷ್ಟೇ: ಆಗಲಿಂದಲೇ ಕೇಂದ್ರ ಕಚೇರಿಗಳಲ್ಲಿ ಹೆಚ್ಚು ಹೆಚ್ಚು ಕೆಲಸ ಹಿಂದಿಯಲ್ಲಿ ನಡೀಬೇಕು, ಬರ್ತಾ ಬರ್ತಾ ಇಂಗ್ಲೀಷು ಹೋಗಿ ಬರೀ ಹಿಂದಿ ಉಳೀಬೇಕು ಅನ್ನೋ ಕಾನೂನು ಆಗಲೇ ಇತ್ತು (
ಈಗಲೂ ಇದೆ!). ಅದಕ್ಕೆ ಹಿಂದಿ ಬರೋರೇ ಆಗಬೇಕಲ್ಲ, ಅದಕ್ಕೇ ಹಿಂದಿ ಜನ ಬಂದು ಬಂದು ಇಲ್ಲಿ ತುಂಬ್ಕೊಂಡಿದ್ದು (
ಈಗಲೂ ತುಂಬ್ಕೋತಿದಾರೆ!).
ಇಷ್ಟೆಲ್ಲಾ ನಡೀತಿರುವಾಗ ಕನ್ನಡಿಗ ಏನ್ ಮಾಡ್ದ? ಪಾಪ ಔನಿಗೆಲ್ಲಿ ಬರಬೇಕು ಹಿಂದಿ? ಕೆಲಸ ಸಿಗದೆ ಸುಮ್ಮನೆ ಕೂತಿದ್ದ! ತನಗೆ ಕೆಲಸ ಯಾಕೆ ಸಿಗಲಿಲ್ಲ ಅಂತ ಯೋಚಿಸಿದಾಗ ತನಗೆ ಬುದ್ಧಿಯಿಲ್ಲವೇನೋ, ಅದೃಷ್ಟ ಇಲ್ಲವೇನೋ, ಯೋಗ್ಯತೆ ಇಲ್ಲವೇನೋ ಅಂದುಕೊಂಡು ಸುಮ್ಮನಾದ! ಬರ್ತಾ ಬರ್ತಾ ತನ್ನ ಭಾಷೆ ಯೋಗ್ಯತೇನೇ ಇಷ್ಟು, ಕನ್ನಡದಿಂದ ಅನ್ನ ಇಲ್ಲ ಅನ್ಕೊಂಡು ಹಿಂದಿ ಕಲಿಯಕ್ಕೆ ಶುರು ಮಾಡ್ದ!
ಹಿಂದಿ ಪ್ರಚಾರ ಹಾಕಿದ ನೀರುಇದರ ಜೊತೇಗೇ ಹಿಂದಿ ಅಂದ್ರೆ ರಾಷ್ಟ್ರಭಾಷೆ, ಹಿಂದೀನೇ ದೇಶದ ಪ್ರಾತಿನಿಧಿಕ ಭಾಷೆ,
ಹಿಂದಿ ಬರದೇ ಇರೋನು ಈ ದೇಶದಲ್ಲಿರಕ್ಕೆ ಲಾಯಕ್ಕಿಲ್ಲ ಅಂತೆಲ್ಲಾ ಸಕ್ಕತ್ತು ಸುಳ್ಳುಸುಳ್ಳು ಪ್ರಚಾರಗಳು ನಡುದ್ವು. ಇವತ್ತಿಗೂ
"ದಕ್ಷಿಣ್ ಭಾರತ್ ಹಿಂದಿ ಪ್ರಚಾರ್ ಸಭಾ" ಅನ್ನೋ ಒಂದು ಸಂಸ್ಥೆ ಹಿಂದೀನ ರಾಷ್ಟ್ರಭಾಷೆ ಅಂತ ರಾಜಾರೋಷವಾಗಿ ಕರೀತಿದೆ. ಇವರೊಬ್ರೇ ಅಲ್ಲ, ಹಾಗೆ ನಂಬ್ಕೊಂಡಿರೋರು ಭಾರತದಲ್ಲಿ ಬಹಳ ಜನ ಇದಾರೆ. ಆದರೆ ಇವೆಲ್ಲ ಸುಳ್ಳು. ಹಿಂದಿಗೆ ನಮ್ಮ ಸಂವಿಧಾನ ಕೇಂದ್ರದ "ಅಧಿಕೃತ ಭಾಷೆ" ಅನ್ನೋ ಸ್ಥಾನಮಾನ ಕೊಟ್ಟಿದೆಯೇ ಹೊರತು ಹೆಚ್ಚೇನೂ ಇಲ್ಲ. ಹಾಗೆ ಕೊಟ್ಟಿರೋದು ಸರಿಯಿಲ್ಲ ಅನ್ನೋದನ್ನೂ ನಾವು ಮರೀಬಾರದು ಗುರು! ಯಾಕೆ ಅದಕ್ಕೆ ಈ ವಿಶೇಷ ಸ್ಥಾನ? ಇರಲಿ.
ಒಟ್ನಲ್ಲಿ ಹಿಂದಿಗೆ ಇಲ್ಲದ ಸ್ಥಾನ ಕೊಡ್ತು ಈ ಪ್ರಚಾರ. ಇವತ್ತಿಗೂ ಇಲ್ಲದ ಪ್ರಚಾರ, ಇಲ್ಲದ ಸ್ಥಾನಮಾನಾನ ಹಿಂದಿಗೆ ಕೇಂದ್ರಸರ್ಕಾರ ಕೊಡ್ತಾನೇ ಇದೆ, ನಮ್ಮ ರಾಜ್ಯಸರ್ಕಾರಾನೂ ತೂಗುತಲೆ ತೂಗ್ತಾನೇ ಇದೆ, ಅನೇಕ ಕನ್ನಡಿಗರು ಹಿಂದೀನ ಕಣ್ಗೊತ್ಕೋತಾನೇ ಇದಾರೆ. ಈ ಹಿಂದೀವಾದಿ ಕನ್ನಡಿಗರೆಲ್ಲ ನಮ್ಮ ವ್ಯವಸ್ಥೆಯಲ್ಲಿರೋ ಪಕ್ಷಪಾತದ ಮಕ್ಕಳೇ! ಈ ಮಕ್ಕಳಿಗೆ ಹಿಂದಿಯೇ ತಾಯಾದಳು, ಹಿಂದಿಯೋರೆಲ್ಲಾ ಅಣ್ಣತಮ್ಮಂದಿರಾದರು. ಸುತ್ತಮುತ್ತಲ ತಮ್ಮದೇ ಜನಾಂಗಕ್ಕೆ ಸೇರಿದ ಕನ್ನಡಿಗರು ಕಚ್ಚಾಡೋ ದಾಯಾದಿಗಳಾದ್ರು! ಯಾವ ಕಚ್ಚಾಟ? ಕೇಂದ್ರಸರ್ಕಾರೀ ನೌಕರಿ ಗಿಟ್ಟಿಸಿಕೊಳ್ಳಕ್ಕೆ ಹಿಂದಿ ಕಲಿಯೋದ್ರಲ್ಲಿ ನಾಮುಂದು ತಾಮುಂದು ಅಂತ ಬಾವಿಗೆ ಬೀಳೋದ್ರಲ್ಲಿ!
ಬೀಜ ಹೆಮ್ಮರವಾಗಿದ್ದು ಆಶ್ಚರ್ಯವೇನು?ಹಿಂದಿಯೋರಿಗೆ ಎಲ್ಲಿಗೆ ಹೋದರೂ ತಮ್ಮ ಭಾಷೆ ನಡೀಬೇಕು ಅನ್ನೋ ವ್ಯವಸ್ಥೆ, ಕರ್ನಾಟಕಕ್ಕೆ ಬಂದರೆ ತೋರಣ ಕಟ್ಟಿ ಆರತಿ ಮಾಡಿ ಅವರ ಭಾಷೇಲೇ ಹಾಡು ಹೇಳಿ ಬರಮಾಡ್ಕೋಬೇಕು ಅನ್ನೋ ಕನ್ನಡಿಗರು - ಇವೆಲ್ಲಾ ಇದ್ದಾಗ ಹಿಂದಿ ಮಾತಾಡೋ ವಲಸಿಗ್ರು ಬಂದು ತುಂಬ್ಕೊಳೋದು ವಿಶೇಷವೇನು?
ಔರಿಗೇ ಇದು ಮನೆ ಅನ್ನಿಸ್ತಾ ಇರೋದು, ಕನ್ನಡಿಗರಿಗಲ್ಲ!ಇವತ್ತು ಐಟಿ-ಬಿಟಿ ಗಳ ಯುಗ ಬಂದು ಕಚೇರಿಗಳಲ್ಲಿ ಹಿಂದಿಯಲ್ಲೇ ಕೆಲಸ ನಡೀಬೇಕು ಅಂತಿಲ್ಲದೆ ಹೋದರೂ ಈ ವಲಸೆಯೇನು ನಿಂತಿಲ್ಲ, ಹಿಂದಿ ಹೇರಿಕೆ ನಿಂತಿಲ್ಲ. ಯಾಕೆ? ಇವತ್ತಿಗೂ ಹಿಂದಿಯೋರು ಇಲ್ಲೀಗ್ ಬಂದು "ಇನ್ನೂ ಇಲ್ಲೀ ಜನ ಯಾಕೆ ಹಿಂದಿ ಮಾತಾಡ್ತಿಲ್ಲ?" ಅಂತಾರಲ್ಲ, ಯಾಕೆ? ಇಲ್ಲೀಗೆ ಬರೋ ಎಷ್ಟೋಂದು ಹಿಂದಿಯೋರಿಗೆ ಇಲ್ಲಿ ಭಾಷೆ ಯಾವುದು ಅಂತಾನೇ ಗೊತ್ತಿರಲ್ಲವಲ್ಲ, ಯಾಕೆ?
ಬೀಜ ಇಲ್ಲದಿದ್ದರೂ ಹೆಮ್ಮರ ಉಳ್ಕೊಂಡಿದ್ಯಲ್ಲ, ಯಾಕೆ? ಯಾಕೇಂದ್ರೆ ಆ ಮರವೇ ನೀರು ಕುಡಿದು ಕುಡಿದು ಬೆಳ್ದು ಬೆಳ್ದು ದೊಡ್ಡದಾಗ್ತಿದೆ, ಅದಕ್ಕೆ!
ಇದಕ್ಕೆಲ್ಲ ಪರಿಹಾರಇದು ಹೀಗೇ ಮುಂದುವರ್ಕೊಂಡು ಹೋಗೋದು ಸರಿಯಿಲ್ಲ ಅನ್ನೋದು ಸ್ಪಷ್ಟ. ಕನ್ನಡಿಗನೇ ಕರ್ನಾಟಕದಲ್ಲಿ ಸಾರ್ವಭೌಮನಾಗಬೇಕು. ಕನ್ನಡವೇ ಇಲ್ಲಿ ಸಾರ್ವಭೌಮವಾಗಬೇಕು. ಹಿಂದಿ-ಹಿಂದಿಯೋರು ಇಲ್ಲಿ ನಮಗಿಂತ ಹೆಚ್ಚು ಸೌಲತ್ತುಗಳನ್ನು ಅನುಭವಿಸೋದು, ನಾವು ನಮ್ಮ ನಾಡಲ್ಲೇ ಎರಡನೇ ದರ್ಜೆ ಪ್ರಜೆಗಳಾಗಿರೋದು - ಇವೆಲ್ಲ ನಿಲ್ಲಬೇಕು.
ಜೊತೆಗೆ ಈಗಾಗಲೇ ಇಲ್ಲಿ ವಲಸೆ ಬಂದು ನೆಲೆಸಿರೋ ಹಿಂದಿಯೋರಿಗೆ ಕನ್ನಡ ಕಲಿಯದೆ ಬೇರೆ ದಾರಿ ಇಲ್ಲ ಅನ್ನೋ ವ್ಯವಸ್ಥೆ ಬರಬೇಕು. ಇವತ್ತು ಕರ್ನಾಟಕದಲ್ಲಿ ಎಲ್ಲೆಲ್ಲಿ ಹಿಂದಿ ಇದ್ಯೋ ಅಲ್ಲೆಲ್ಲ ಮೊದಲು ಕನ್ನಡ ಬರಬೇಕು. ನಿಧಾನವಾಗಿ ಇಂಗ್ಲೀಷೂ ಹೋಗಿ ಬರೀ ಕನ್ನಡವಾಗಬೇಕು. ತಾವಾಗೇ ತಮ್ಮ ಇಷ್ಟದಿಂದ್ಲೇ ಕನ್ನಡ ಕಲೀತೀನಿ ಅನ್ನೋ ಹಿಂದಿಯೋರೂ ಬಹಳ ಜನ ಇದಾರೆ. ಇವರಿಗೆ ಕನ್ನಡಿಗರು ಸರಿಯಾದ ಸಂಸ್ಥೆಗಳ್ನ ಹುಟ್ಟುಹಾಕಿ ಕನ್ನಡವನ್ನ ವೈಜ್ಞಾನಿಕವಾಗಿ, ಹೊಚ್ಚಹೊಸ ತಂತ್ರಜ್ಞಾನಗಳ ಉಪಯೋಗ ಪಡ್ಕೊಂಡು ಹೇಳ್ಕೊಡ್ಬೇಕು.
ಇದೇ ಪರಿಹಾರ. ಇದಕ್ಕೆ ಮೊದಲ ಹೆಜ್ಜೇನೇ ಹಿಂದಿ ಹೇರಿಕೆಯನ್ನ ಕನ್ನಡಿಗರು ವಿರೋಧಿಸೋದು. ಯಾವುದೇ ಸಂದರ್ಭದಲ್ಲೂ ಹಿಂದಿ ಹೇರಿಕೆ ಒಪ್ಕೊಳ್ದೆ ಒಂದು ರೀತಿಯಲ್ಲಿ ಅಸಹಕಾರ ಚಳುವಳಿ ಶುರುವಾಗಬೇಕು ಗುರು! ಇಲ್ಲಿ ಹಿಂದಿಯೋರು ಕನ್ನಡ ಕಲೀಬೇಕೇ ಹೊರತು ಕನ್ನಡಿಗರು ಹಿಂದೀನಲ್ಲ.
"ಅತಿಥಿದೇವೋ ಭವ" ಅನ್ನೋ ಮಾತು ನಿಜ. ಆದರೆ ಹಿಂದಿಯೋರು ಅತಿಥಿಗಳಲ್ವೇ ಅಲ್ಲ! ಯಾರು ಆಕಸ್ಮಿಕವಾಗಿ ನಮ್ಮ ಮನೇಗೆ ಬರ್ತಾನೋ ಔನು ಅತಿಥಿ. 60 ವರ್ಷದಿಂದ ಸ್ಕೆಚ್ ಹಾಕ್ಕೊಂಡು ರೈಲ್ಮೇಲೆ ರೈಲು ಹಾಕ್ಕೊಂಡು ವ್ಯವಸ್ಥಿತವಾಗಿ ಬರ್ತಿರೋನು ಅತಿಥಿಯೂ ಅಲ್ಲ, ದೇವರೂ ಅಲ್ಲ!