ಲವ್ವಬಲ್ ಸತ್ಯಾ!



"ಸತ್ಯಾ ಇನ್ ಲವ್" ಅನ್ನೂ ಸಿನಿಮಾ ಬಗ್ಗೆ ಯಾ ಮಗ ಕೇಳಿಲ್ಲ? ಅಲ್ಲಿ, ಇಲ್ಲಿ, ಎಲ್ಲಿ ನೋಡುದ್ರು ಅದರದಾ ಸುದ್ದಿ. ಕನ್ನಡ ಸಿನಿಮಾದ ಇತಿಹಾಸದಾಗ ಮೊದಲನೆ ಸಲಿ ಚಿತ್ರವೊಂದು ಕರ್ನಾಟಕವೊಂದ ಅಲ್ಲದಾ ಆಂಧ್ರ ಪ್ರದೇಶದ ಕರ್ನುಲೂ, ಹಿಂದುಪುರ, ಅನಂತಪುರ, ನಂಧ್ಯಾಲ್, ಹೈದರಾಬಾದ್, ತಮಿಳುನಾಡಿನ ಹೊಸೂರು, ಚೆನ್ನೈ, ಮಹಾರಾಷ್ಟ್ರದ ಮುಂಬೈ, ಪುಣೆ, ಅಕ್ಕಲಕೋಟೆ, ಜತ್ತ, ಲಾತುರ್ ಮತ್ತ ದಿಲ್ಲೀನಾಗು ಬಿಡುಗಡಿ ಆಗಿ ಚಲೋತ್ನಾಗ ಓಡಾಕ್ ಹತ್ತೈತಂತ್ರೀ. ಆಹಾ! ಎಂಥ ಛಲೋ ಸುದ್ದಿ ಬಂದೇತ್ರಿಪಾ. ಸಿನಿಮಾ ಛಂದ ಐತೋ ಇಲ್ಲೋ ಅದು ಬ್ಯಾರೀ ಮಾತು, ಹೊರನಾಡಿನಾಗೂ ಬಿಡುಗಡಿ ಕಂಡಿರೂದಕ್ಕ ಸತ್ಯಾ ಖರೇನಾ ಲವ್ವಬಲ್ ಅಗ್ಯಾನ್ರೀಪಾ...

ಹೊರ ನಾಡಿನಾಗ ಛಲೋ ವಿತರಣಾ ಜಾಲ:

ಕರ್ನಾಟಕದ ಹೊರಗ ಕನ್ನಡ ಮಾತಾಡೋ ಮಂದಿ ಬ್ಯಾರೆ ಬ್ಯಾರೆ ರಾಜ್ಯ , ದೇಶದಾಗ ಅದಾರ್ರೀ. ಅಲ್ಲೆಲ್ಲಾ ಕನ್ನಡ ಚಿತ್ರಗಳು ನಿಯಮಿತವಾಗಿ ಬರು ಹಂಗ ಆಗ್ಬೇಕ್ರಿ. ಹೊರ ರಾಜ್ಯ, ಹೊರ ದೇಶದಾಗ ನಮ್ಮ ಮಂದಿ ಎಲ್ಲೆಲ್ಲಿ ಅದಾರೋ ಅಲ್ಲೆಲ್ಲಾ ನಮ್ಮ ಚಿತ್ರಗಳನ್ನ ಪ್ರಚಾರ ಮಾಡಾಕ್ "ಕನ್ನಡ ಚಿತ್ರ ಸಂಜೆ", " ಕನ್ನಡ ಸಂಗೀತ ಸಂಜೆ " ತರಹದ ಕಾರ್ಯಕ್ರಮ ಮಾಡಿ ಬೇಡಿಕಿ ಹುಟ್ ಹಾಕ್ಬೇಕ್ರಿ. ಛಲೋ ಮಾರಾಟ ಜಾಲ ಸೃಷ್ಟಿ ಮಾಡ್ಬೇಕ್ರಿ.

ಅನೇಕ ಕಡಿ ಹೊರ ರಾಜ್ಯ, ಹೊರ ದೇಶದಾಗ್ ಇರು ಎಲ್ಲ ಕನ್ನಡ ಸಂಘಗಳು ಬಾಳ್ ತ್ರಾಸ್ ತಗೊಂಡು ನಮ್ಮ ಚಿತ್ರಗಳನ್ನ ಅಲ್ಲಿ ಪ್ರದರ್ಶನ ಮಾಡಾಕ್ ಪ್ರಯತ್ನ ಮಾಡ್ತಾವ್ ರೀ. ಇಂಥ ಉತ್ಸಾಹಿಗಳಿಗೆ ನಮ್ಮ ಚಿತ್ರರಂಗದ ನಿರ್ಮಾಪಕರು, ನಿರ್ದೇಶಕರು, ಒಟ್ಟಾರೆ ನಮ್ಮ ಚಿತ್ರರಂಗ ಎಲ್ಲ ರೀತಿಯ ಬೆಂಬಲ ಕೊಟ್ಟು ಬೆನ್ನು ತಟ್ಟಬೇಕ್ರಿ. ನಮ್ಮ ಸರ್ಕಾರಾನೂ ಅವರಿಗೆ ಸಾಧ್ಯವಾದ ಎಲ್ಲ ನೆರವು ಕೊಡಬೇಕ್ರಿ.

ಅಷ್ಟೆ ಮುಖ್ಯವಾಗಿ ಇವತ್ತಿನ ದಿನದಾಗ್, ಪ್ರಚಾರ ಇಲ್ದೆ ಯಾವ ವಸ್ತುನೂ ಬಿಕರಿ ಆಗುದಿಲ್ರಿ. ಹಿಂಗಾಗಿ ಚಿತ್ರ ಬಿಡುಗಡೆ ಆಗು ಮುಂಚೆ ಚಿತ್ರದ ಬಗ್ಗ ಮಂದಿ ನಡುವೆ ಕುತೂಹಲ ಮೂಡಿಸುವಂತ ಪ್ರಚಾರ ತಂತ್ರ ಬಳಸಬೇಕ್ರಿ. ಬರೇ ಟಿ.ವಿ, ಪೇಪರ್ ಅಷ್ಟಕ್ಕೇ ನಿಲ್ಲದೇ, ಇಂದಿನ ಯುವ ಜನರು ಜಾಸ್ತಿ ಬಳಸುವಂತ ಇಂಟರ್ನೆಟ್, ಎಸ್.ಎಂ.ಎಸ್, ಎಫ್.ಎಂ ರೇಡಿಯೋದಂತ ಸಮೂಹ ಮಾಧ್ಯಮವನ್ನು ಸರಿಯಾಗಿ ಬಳಸಕೊಂಡು ಪಿಚ್ಚರ್ ಬಗ್ಗ ಚಲೋ ಹವಾ ಮಾಡ್ಬೇಕ್ರಿ.

ಬರೀ ಕನ್ನಡ ಮಂದೀಗಲ್ಲಾ, ಬ್ಯಾರೀ ಮಂದಿನೂ ಗುರಿ ಮಾಡ್ಕೋಬೇಕು

ಹೊರ ರಾಜ್ಯ, ಹೊರ ದೇಶದಾಗ್ ಚಿತ್ರ ಬಿಡಬೇಕಾರ್, ಬರೇ ಅಲ್ಲಿನ ಕನ್ನಡ ಮಂದಿನ ಅಷ್ಟೆ ಗುರಿಯಾಗಿಸಿಕೊಳ್ದೆ, ಆಯಾ ರಾಜ್ಯದ ಮಂದಿನೂ ನಮ್ಮ ಚಿತ್ರ ನೋಡಾಕ್ ಅನುಕೂಲ ಆಗು ಹಂಗ, ಆಯಾ ರಾಜ್ಯದ ಭಾಷೆಯಲ್ಲಿ ಚಿತ್ರಕ್ಕೆ ಉಪ ಶೀರ್ಷಿಕೆ (sub-title) ಕೊಟ್ಟು ಬಿಡುಗಡೆ ಮಾಡ್ಬಬಹುದು. ಆ ಮೂಲಕಾನು ನಮ್ಮ ಮಾರುಕಟ್ಟೆನ ವಿಸ್ತರಿಸಿಕೊಬೌದ್ರಿ. ನಮ್ಮ ಪಿಚ್ಚರಿಗೆ ಅಲ್ಲೆಲ್ಲಾ ಎಲ್ಲ ಮಾರ್ಕೆಟ್ ಐತ ಬಿಡ್ರಿ ಅನಬ್ಯಾಡ್ರಿ

ಇಷ್ಟೆಲ್ಲಾ ಹೇಳಿದ ಮ್ಯಾಲೆ, ಒಂದು ಬೀಜ ಮಾತು ಹೇಳಲಿಲ್ಲ ಅಂದ್ರ ಹೆಂಗ? ಬ್ಯಾರೀ ಭಾಷೆ ಚಿತ್ರಗಳು ಕರ್ನಾಟಕದಾಗ ಹಂಗಾ ಹೇಳೋರ ಕೇಳೋರ ಇಲ್ಲದ ಲೆಕ್ಕದಲೇ ಬರ್ತಾವ, ಅಂತದ್ರಾಗ ನಮ್ಮ ಚಿತ್ರಗಳು ಹೊರಗಿನ ರಾಜ್ಯಕ್ಕೆ ಯಾವಾಗಲೋ ಹೋಗಬೇಕಿತ್ರಿ. ಇದೆಲ್ಲ ಒಂದ ತರಹ ಕೊಡು-ತಗೊಳ್ಳು ಲೆಕ್ಕ ಆಗಬೇಕ್ರಿ. ನಿಮ್ಮ ಭಾಷೆ ಚಿತ್ರ ಇಲ್ಲಿ ಬಿಡ್ತಿರಿ ಅಂದ್ರೆ ನಮ್ಮ ಭಾಷೆ ಚಿತ್ರಕ್ಕೂ ನಿಮ್ಮ ನೆಲದಾಗ್ ಅನುಮತಿ ಕೊಡಬೇಕು ಅನಬೇಕ್ರೀಪಾ.

ನಮ್ಮ ನಿರ್ಮಾಪಕರು "ಏಯ್! ಬಿಡೋ ಮಾರಾಯ, ನಮ್ಮ ಪಿಚ್ಚರ್ ಅಲ್ಲೆಲ್ಲಾ ಯಾ ಮಗಾ ನೋಡ್ತಾನ? " ಅನ್ನೂ ಮಾತು ಬಿಟ್ಟು ನಮ್ಮ ಚಿತ್ರಕ್ಕೆ ಇರು ಮಾರುಕಟ್ಟೆ ಸಾಧ್ಯತೆಗಳ ಬಗ್ಗ ಕಣ್ಣು ತೆರೀ ಬೇಕ್ರಿಪಾ. ಮುಂಗಾರು ಮಳೆ ಈಗಾಗಲೇ ನಮ್ಮ ಚಿತ್ರಗಳಿಗೆ ಇರು ಸಾಮರ್ಥ್ಯ ಏನ್ ಅಂತ ತೋರಸೇತಿ. ನಮ್ಮ ನಿರ್ಮಾಪಕರು ಛಲೋ ಕಥಿ, ಛಲೋ ಸಂಗೀತ, ಸಾಹಿತ್ಯ, ಛಲೋ ತಾಂತ್ರಿಕ ಸಾಮರ್ಥ್ಯ ತೋರಸೋಂಥ ಚಿತ್ರ ಮಾಡಿದ್ರ, ಅದಕ್ಕ ತಕ್ಕಂಥಾ ಪ್ರಚಾರ ಮಾಡುದ್ರಾ ನಮ್ಮನ್ನ್ ಹಿಡಿಯಾಕ್ ಯಾ ಮಗಂಗು ಆಗಂಗಿಲ್ಲಾ. ಏನ್ ಅಂತೀರ್ರೀ ಗುರುಗಳಾ?

ಕನ್ನಡ ನಾಡು! ಚಿನ್ನದ ಬೀಡು!

ಈ ತಿಂಗಳ 25ರಂದು ವಿಜಯ ಕರ್ನಾಟಕದಲ್ಲಿ ಕರ್ನಾಟಕದ ಇನ್ನೂ 9 ಬೆಳೆಗಳಿಗೆ ಭೌಗೋಳಿಕ ಮಾನ್ಯತೆ ದೊರಕಲಿದೆ ಅಂತ ವರದಿ ಆಗಿದೆ. ಇದು ಕನ್ನಡಿಗರಿಗೆಲ್ಲಾ ಹೆಮ್ಮೆ, ಮರ್ಯಾದೆ ಹಾಗೂ ಸಂತಸ ತರೋ ವಿಷಯ ಗುರು! ನಮ್ಮ ನಾಡಿನ ಬೆಳೆಗಳಲ್ಲಿ ಎಂತಹ ವೈಶಿಷ್ಟ್ಯತೆ ಅಡಗಿದೆ ಅನ್ನೋ ಮಾಹಿತಿ ಇಂತಹ ಮಾನ್ಯತೆಗಳಿಂದ ಜಗತ್ತಿಗೆಲ್ಲಾ ಪಸರುತ್ತಿರೋದು ಇನ್ನೂ ಹೆಚ್ಚು ಖುಷಿಗೆ ಕಾರಣ ಗುರು! ಈಗಾಗ್ಲೇ ನೋಂದಣಿಯಾಗಿರೋ ನಮ್ಮ ಬೆಳೆಗಳಲ್ಲಿ ಮೈಸೂರಿನ ವೀಳ್ಯದೆಲೆ, ಕೊಡಗಿನ ಕಿತ್ತಳೆ ಹೀಗೆ ಹಲವಿವೆ. ಕರ್ನಾಟಕದ ವಿಶಿಷ್ಟ ಬೆಳೆಗಳು ಅಂದ್ರೆ ಇಷ್ಟೇ ಅಲ್ಲ, ಈ ನಾಡಲ್ಲಿ ಇನ್ನು ಸಕ್ಕತ್ ವೈಶಿಷ್ಟ್ಯತೆ ಇದೆ ಅಂತ ತೋರ್ಸಕ್ಕೆ ಈ ಪಟ್ಟಿಗೆ ಇನ್ನೂ 9 ಬೆಳೆಗಳ್ನ ಸೇರ್ಸೋ ಕೆಲ್ಸ ನಡ್ದಿದೆ.

ಮಾನ್ಯತೆ ಪಡೆದ ಹತ್ತರಲ್ಲಿ ಆರು!

ಒಂದು ನೆಲದ ಮಣ್ಣಿನ ಮತ್ತು ಅಲ್ಲಿನ ಹವಾಮಾನದ ವೈಶಿಷ್ಟ್ಯತೆ ಆಧರಿಸಿ ಅಲ್ಲಿ ಬೆಳೆಯೋ ಕೆಲವು ಬೆಳೆಗಳ ರೂಪ, ಗುಣಮಟ್ಟ ಹಾಗೂ ಅವುಗಳ ಸೊಗಡು ಇನ್ನೆಲ್ಲಿ ಬೆಳೆದ್ರೂ ಸಿಗದು ಅಂತಾದಾಗ ಇಂತಹ ಬೆಳೆಗಳ ವೈಶಿಷ್ಟ್ಯತೆ ಕಾಪಾಡಿ ಅವುಗಳನ್ನು ಬೆಳ್ಯೋರಿಗೆ ಪ್ರೋತ್ಸಾಹ ನೀಡಿ ಆ ಬೆಳೆಗೆ ಹೆಚ್ಚು ಮಾರುಕಟ್ಟೆ ಸಿಗೋ ಹಾಗೆ ಈ ಭೌಗೋಳಿಕ ಮಾನ್ಯತೆ ಮಾಡತ್ತೆ ಗುರು! ಕರ್ನಾಟಕದ ಭೌಗೋಳಿಕ ವೈಶಿಷ್ಟ್ಯತೆ ಎಷ್ಟು ಅಂದರೆ ಈಗಾಗ್ಲೇ ನಮ್ಮ ದೇಶದಿಂದ ಹೋಗಿರುವ 10 ಇಂತಹ ಬೆಳೆಗಳಲ್ಲಿ 6 ನಮ್ಮ ರಾಜ್ಯದ್ದೇ. ಈ ಬೆಳೆಗಳು - ಮೈಸೂರಿನ ವೀಳ್ಯದೆಲೆ, ಕೊಡಗಿನ ಕಿತ್ತಳೆ, ನಂಜನಗೂಡು ರಸಬಾಳೆ, ಮೂರು ಬಗೆಯ ಮಲ್ಲಿಗೆ ಹೂಗಳು.

ಕನ್ನಡ ನಾಡು ಚಿನ್ನದ ಬೀಡು

ನಮ್ಮ ಕನ್ನಡ ನಾಡಿನ ಭೂಪ್ರದೇಶ ಬಹಳ ಸಮೃದ್ಧವಾದ್ದು ಗುರು! ಭಾರತದ ಒಟ್ಟು ನೆಲದ-ಮೇಲಿನ-ನೀರ ವಿಸ್ತೀರ್ಣದ ಶೇಕಡ 5ರಷ್ಟು ನೀರು ಇಲ್ಲೇ ಹರಿಯತ್ತೆ. ಈ ನಮ್ಮ ನಾಡಲ್ಲಿ 7 ನದಿಗಳ ನೀರು ನೀರಾವರಿ, ಪ್ರವಾಸೋದ್ಯಮ, ವಿದ್ಯುತ್, ಕುಡಿವ ನೀರು ಹೀಗೆ ಹಲವು ಯೋಜನೆಗಳಿಗೆ ಪೂರೈಕೆ ಮಾಡಿವೆ. ಪ್ರಕೃತಿಯ ಯಾವುದೇ ಏರು-ಪೇರು, ವಿಕೋಪ ಪ್ರಕೋಪಗಳಿಲ್ಲದ ಭೂಪ್ರದೇಶವಾಗಿದ್ದು ಇದು ಎಲ್ಲಾ ಬಗೆಯ ವಾಣಿಜ್ಯ, ವ್ಯಾಪಾರ ಮತ್ತು ವ್ಯವಸಾಯಗಳಿಗೆ ಪ್ರಿಯವಾದ ಭೂಮಿಯಾಗದೆ ಗುರು!

ಕರುನಾಡಲ್ಲಿ ಬೆಳ್ಯೋ ಶ್ರೀಗಂಧ ಇನ್ನೆಲ್ಲಿ ಬೆಳುದ್ರೂ ಆ ಕಂಪು ಬರೋಕ್ಕೆ ಸಾಧ್ಯವೇ ಇಲ್ಲ ಅಂತನ್ನೋದು ಈಗಾಗ್ಲೇ ಜಗತ್ತಿಗೆಲ್ಲಾ ತಿಳ್ದಿರೋ ಸತ್ಯವೇ ಹೌದು. ನಮ್ಮ ನಾಡಿನ ಎಡಭಾಗದಲ್ಲಿ ಹರಡ್ಕೊಂಡಿರುವ ಮಲೆನಾಡು ಪ್ರದೇಶದಲ್ಲಿ ಸಿಗುವ ಔಷದ ಮೂಲಿಕೆಗಳು ಎಣಿಕೆ ಮೀರಿದೆ, ಕೊಡಗಿನಲ್ಲಿ ಬೆಳೆವ ಕಿತ್ತಳೆ ಮತ್ತು ಕಾಫಿಯ ಸೊಬಗು, ಇಲ್ಲಿಯ ನೈಸರ್ಗಿಕ ಸೌಂದರ್ಯ ಎಲ್ಲವೂ ಅದ್ಭುತ! ಆದ್ರೆ ಮಳೆ-ಬೆಳೆಗಳಷ್ಟೇ ನಮ್ಮ ಹಿರಿಮೆಯಾಗಿರದೇ ನಮ್ಮ ಭೂಮಿ ಕೈಗಾರಿಕಾ ಕ್ಷೇತ್ರಕ್ಕೂ ಪೂರಕವಾಗುವಂತೆ ದೇಶದಲ್ಲೇ ಅತಿ ಹೆಚ್ಚು ಚಿನ್ನದ ಉತ್ಪಾದನೆ ಮಾಡುವ ರಾಜ್ಯವಾಗಿದೆ, ಅಲ್ಲದೆ ಇತರ ಮುಖ್ಯ ಖನಿಜಗಳಿಗೆ ನಮ್ಮ ರಾಜ್ಯ ಹೆಸರಾಗಿದೆ ಗುರು!

ಈ ಸಂಪತ್ತು ನಮ್ಮ ಸೊತ್ತು!

ಈ ಖಜಾನೆಯ ವಾರಸುದಾರ ಸಹಜವಾಗೇ ಈ ಮಣ್ಣಿನ ಮಕ್ಕಳು. ಇಲ್ಲಿ ಕಾಣುವ ಪ್ರತಿಯೊಂದು ವಸ್ತುವಿನಿಂದ್ಲೂ ಕನ್ನಡಿಗನಿಗೇ ಲಾಭ ಆಗ್ಬೇಕು ಗುರು. ಇಲ್ಲಿ ಲಾಭದ ಅವಕಾಶ ಹೊರಗಿನವರಿಗೆ ಕಂಡರೂ ಅವರ ಲಾಭದಲ್ಲೂ ಕನ್ನಡ-ಕನ್ನಡಿಗ-ಕರ್ನಾಟಕದ ಲಾಭವೇ ಮೊದಲಾಗಿರಬೇಕು ಗುರು. ನಮ್ಮ ನೆಲದಲ್ಲಿ ನಡೀತಿರೋ ಗಣಿಗಾರಿಕೆ ಕನ್ನಡನಾಡಿಗೆ ಸಂಪತ್ತು ಸುರಿಸಬೇಕು. ಅದು ನಮ್ಮ ಜನರ ಬಾಳನ್ನು ಹಸನಾಗಿಸಬೇಕು.

ಇಂತಹ ಸೊಬಗಿನ ಸಿರಿ ತುಂಬಿದ ನಾಡು ನಾಡು ನಮ್ಮ ಕನ್ನಡ ನಾಡು. ಈ ನಾಡಲ್ಲಿ ಹುಟ್ಟಿರೋ ನಾವು ಈ ನೆಲಕ್ಕೆ ಪ್ರತಿದಿನ ಕೈಜೋಡಿಸಿ ನಮಿಸಿದ್ರೂ ಸಾಲ್ದು ಗುರು! ನಮ್ಮ ನಾಡಿನ ಈ ಸಿರಿಯನ್ನು ಸರಿಯಾಗಿ ಅರ್ಥ ಮಾಡ್ಕೊಳೋಣ, ಅದನ್ನ ಕಾಪಾಡೋ ಜವಾಬ್ದಾರಿ ತೊಗೊಳೋಣ. ಈ ಮಣ್ಣಿಗೆ, ಇಡಿಯ ಕನ್ನಡ ಕುಲಕೋಟಿಗೆ ಜೀವನ ಕೊಡಬಲ್ಲ ಮತ್ತದನ್ನ ಬೇಕಾದಷ್ಟು ಹಸನು ಮಾಡಬಲ್ಲ ಶಕ್ತಿ ಇದೆ ಎಂದೂ ಅರಿಯೋಣ ಗುರು.

ಕನ್ನಡ ಪ್ರೇಮಕ್ಕೆ ನೂರಾರು ಮುಖ!

ಇತ್ತೀಚಿಗೆ ವಿಜಯ ಕರ್ನಾಟಕದಲ್ಲಿ ಒಂದು ಲೇಖನ "ಇದು ಎಂಥಾ ಕನ್ನಡ ಪ್ರೇಮವಯ್ಯಾ?" ಅನ್ನೋ ತಲೆಬರಹದಡಿ ಬಂದಿತ್ತು. ನಮ್ ಗುರು ಅದನ್ನು ನೋಡುದ್ ಮೇಲೆ ಅದರೊಳಗಿನ ಟೊಳ್ಳಿಗೆ ಉತ್ರ ಕೊಡ್ಬೇಕು ಅಂತಾ ಅವತ್ತಿಂದ ಹಟ ಹಿಡದವ್ನೆ. ಬನ್ನಿ ನೋಡ್ಮಾ ಅದೇನ್ ಉತ್ರ ಕೊಟ್ಟಾನು ಅಂತಾ...

ಲೇಖಕ: ರಾಷ್ಟ್ರೀಯತೆಯ ವಾದ, ಕನ್ನಡತನದ ವಾದಗಳು ಎರಡೂ ಸರಿ, ಎರಡೂ ತಪ್ಪು ಅನ್ನೋ ಗೊಂದಲ, ತಾಕಲಾಟ ಹುಟ್ಟುತ್ತೆ. ಭಾರತದ ಮೂಲೆ ಮೂಲೆಗಳಲ್ಲಿ ಅಶಾಂತಿ ಇದೆ, ನೆಮ್ಮದಿ ಮತ್ತು ಶಾಂತಿ ತುಂಬಿರೋ ಬಾಳನ್ನು ಕಟ್ಕೋಬೇಕು ಅಂತ ಜನ ಕರ್ನಾಟಕಕ್ಕೆ ವಲಸೆ ಬರ್ತಾರೆ. ಸಹನಶೀಲತೆ, ಸೌಜನ್ಯಕ್ಕೆ ಕರ್ನಾಟಕ ಇನ್ನೊಂದು ಹೆಸರು. ಕರ್ನಾಟಕದಲ್ಲಿ ಇತ್ತೀಚಿಗೆ ನಡೆದಿರೋ ಕನ್ನಡ ಪರ ಹೋರಾಟಗಳಿಂದ ಕರ್ನಾಟಕದ ಇಮೇಜಿಗೆ ಧಕ್ಕೆ ಒದಗಿದೆ.
ಏನ್ಗುರು: ರಾಷ್ಟ್ರೀಯತೆ ಮತ್ತು ಕನ್ನಡತನವನ್ನು ಬೇರೆ ಅಂದ್ಕೊಳ್ಳೋದು, ಒಂದಕ್ಕಿಂತ ಇನ್ನೊಂದು ಹೆಚ್ಚು ಅಥವಾ ಕಡಿಮೆ ಅಂತ ಯೋಚ್ಸೋದೆ ಸರಿಯಲ್ಲ ಗುರು. ಕನ್ನಡಿಗರಿಗೆ ಕನ್ನಡತನವೇ ಭಾರತೀಯತೆ, ತಮಿಳರಿಗೆ ತಮಿಳುತನವೇ. ಭಾರತದ ಉದ್ಧಾರ ಅಂದ್ರೆ ಕನ್ನಡಿಗರಿಗೆ ಕರ್ನಾಟಕದ ಉದ್ಧಾರವೇ ಆಗಿದೆ. ಒಂದು ಪ್ರದೇಶದಲ್ಲಿ ಇರುವ ವ್ಯಾಪಾರ, ಉದ್ದಿಮ , ಆಡಳಿತ ಎಲ್ಲವೂ ಇರುವುದೇ ಆ ಪ್ರದೇಶದ ಜನರ ಅನುಕೂಲಕ್ಕಾಗಿ/ ಏಳಿಗೆಗಾಗಿ ಅನ್ನೋದನ್ನು ಅರ್ಥ ಮಾಡ್ಕೊಂಡ್ರೆ ವಲಸೆ, ಅನಿಯಂತ್ರಿತ ವಲಸೆ ಎಲ್ಲ ಅರ್ಥವಾಗುತ್ತೆ. ವಲಸೆ ಬಿಟ್ಕೊಳ್ಳೋದು ವಲಸಿಗರ ಬಾಳು ಹಸನಾಗಲೀ ಅನ್ನೋ ಕಾರಣಕ್ಕಲ್ಲ, ನಮ್ಮ ಜನರ ಬಾಳು ಹಸನಾಗಲಿ ಅಂತ. ಅಂದರೆ ವಲಸಿಗನಿಂದ ನಮಗೆ ಅನುಕೂಲವಾಗೋದಾದ್ರೆ ವಲಸೆ ಆಗಲಿ, ಇಲ್ಲದಿದ್ದರೆ ವಲಸೆ ಬೇಡ. ಅದು ಬಿಟ್ಟು ನಮ್ಮೂರಲ್ಲಿ ನಮ್ಮ ಬದುಕಿಗೆ ಧಕ್ಕೆ ಆಗ್ತಿದ್ರೂ ಪರ್ವಾಗಿಲ್ಲ, ಒಳ್ಳೇ ಇಮೇಜ್ ಮಾತ್ರಾ ಹಾಳಾಗಬಾರ್ದು ಅನ್ನೋ ಮನಸ್ಥಿತಿ ಸರಿಯಲ್ಲ ಗುರು. ನಿಜಾ ಹೇಳ್ಬೇಕು ಅಂದ್ರೆ ಇವತ್ತಿನ ದಿನಗಳಲ್ಲಿ ಕನ್ನಡಪರ ಚಿಂತನೆಗಳು ಹೆಚ್ತಾ ಇರೋದು, ಕನ್ನಡಿಗರ ಮೇಲೆ ಎಸಗಲಾಗುತ್ತಿರುವ ದೌರ್ಜನ್ಯಗಳಿಗೆ ತಕ್ಕ ಉತ್ತರ ಸಿಕ್ತಿರೋದು ಕನ್ನಡಪರ ಹೋರಾಟಗಳಿಂದಲೇ ಅಲ್ವಾ? ಗುರು.

ಲೇಖಕ: ಭಾಷೆ ಅನ್ನೋದು ಬರಿಯ ಸಂವಹನದ ಮಾಧ್ಯಮ. ಭಾಷೆಗಳ ಕಾರಣದಿಂದ ಪ್ರತ್ಯೇಕತೆಯ ಕೂಗೆದ್ದಿದೆ.
ಏನ್ಗುರು : ಭಾಷೆ ಅನ್ನೋದು ಬರೀ ಸಂವಹನ ಮಾಧ್ಯಮ ಅಲ್ಲಾ ಅದು ಸಹಕಾರದ ಮಾಧ್ಯಮ. ಭಾಷೆ ಒಂದು ಜನಾಂಗದ ನಡುವಿನ ನಂಬಿಕೆ ಸಹಕಾರಗಳಿಗೆ ಮೂಲಕಾರಕ ಮಾತ್ರವಲ್ಲದೆ ಆ ಜನಾಂಗದ ಏಳಿಗೆಗೆ ಸಾಧನ. ಬದುಕಿಗೆ ಭಾಷೆಯ ಅಗತ್ಯವಿಲ್ಲ ಅನ್ನೋದು, ಬದುಕನ್ನೂ ಭಾಷೆಯನ್ನೂ ಪ್ರತ್ಯೇಕಿಸಿ ನೋಡೋದು ತಪ್ಪು ಅನ್ನೋಕೆ ಒಂದು ಅಂಕಿ ಅಂಶ ಸಾಕು. ಪ್ರಪಂಚದ ಮುಂದುವರಿದ ದೇಶಗಳೆಲ್ಲವೂ ತಮ್ಮ ಕಲಿಕೆ, ಉದ್ಯೋಗ, ಆಡಳಿತ, ವ್ಯವಸ್ಥೆಗಳನ್ನು ತಮ್ಮ ತಾಯಿನುಡಿಯ ಸುತ್ತಲೇ ಕಟ್ಟಿಕೊಂಡಿವೆ. ಜರ್ಮನ್, ಜಪಾನ್, ಇಟಲಿ, ಫ್ರಾನ್ಸ್, ಇಸ್ರೇಲ್... ಇವೆಲ್ಲಾ ತಮ್ಮ ಭಾಷೆಯ ಸುತ್ತಲೇ ಕಟ್ಟಿಕೊಂಡ ನಾಡುಗಳಾಗಿವೆ ಮತ್ತು ಮುಂದುವರೆದಿಲ್ಲದ ಹೆಚ್ಚಿನ ನಾಡುಗಳಲ್ಲಿ ತಾಯಿನುಡಿಯ ಬಳಕೆಯನ್ನು ಹಲವಾರು ಕ್ಷೇತ್ರಗಳಲ್ಲಿ ಕಡೆಗಣಿಸಲಾಗಿರುವುದನ್ನು ನೋಡಬಹುದಾಗಿದೆ. ಭಾಷೆಗಳ ಕಾರಣದಿಂದ ಪ್ರತ್ಯೇಕತೆಯ ಕೂಗೆದ್ದಿದೆ ಅನ್ನೋದಕ್ಕಿಂತ ಒಂದು ಭಾಷಾ ಜನಾಂಗದ ಏಳಿಗೆ ಪರಭಾಷೆಯ, ಪರಭಾಷಿಕರ ಕಾರಣದಿಂದ ಅಪಾಯಕ್ಕೆ ಸಿಲುಕಿ ಅವನತಿ ಹೊಂದುತ್ತಿದೆ ಅನ್ನೋ ಕಾರಣದಿಂದ ಇಂಥಾ ಕೂಗುಗಳು ಹುಟ್ಟುತ್ತಿದೆ ಅನ್ನೋದೆ ಹೆಚ್ಚು ಸರಿಯಾದದ್ದು. ಒಕ್ಕೂಟ ವ್ಯವಸ್ಥೆ ಸರಿಯಾಗಿದ್ದು ಪ್ರತಿ ಭಾಷಿಕ ಜನಾಂಗಕ್ಕೂ ಸಮಾನ ಗೌರವ, ಏಳಿಗೆಯ ಅವಕಾಶ ಇದ್ದರೆ... ಒಕ್ಕೂಟದಲ್ಲಿ ಇರುವುದರಿಂದ ನಮ್ಮ ಏಳಿಗೆಯಾಗುತ್ತದೆ ಎನ್ನುವುದು ಆಯಾ ಪ್ರದೇಶದ ಜನಗಳಿಗೆ ಮನವರಿಕೆಯಾದರೆ, ಯಾರಾದ್ರೂ ಯಾಕೆ ಪ್ರತ್ಯೇಕತೆಯ ಕೂಗೆಬ್ಬಿಸುತ್ತಾರೆ? ಅಲ್ಲವೇ.

ಲೇಖಕ: ಇಂಗ್ಲಿಷ್ ಎಂಬ ರಕ್ಕಸ ಎಲ್ಲ ಭಾಷೆಗಳನ್ನು ನುಂಗುತ್ತಿದೆ. ಕನ್ನಡಕ್ಕೆ ಇಂಗ್ಲಿಷ್ ಭಾಷೆಯಿಂದ ಹೆಚ್ಚಿನ ಅಪಾಯವಿದೆ.
ಏನ್ಗುರು : ಇಂದಿನ ದಿನ ಇಂಗ್ಲಿಷ್ ಭಾಷೆಯಿಂದ ಜ್ಞಾನ, ವಿಜ್ಞಾನ, ತಂತ್ರಜ್ಞಾನ ಇವುಗಳೆಲ್ಲಾ ಸಿಗುತ್ತಿದೆ ಅಂತ ಅದನ್ನು ಜನ ಒಪ್ಕೋತಾರೆ. ಆದರೆ ನಮ್ಮ ನಿಜವಾದ ಏಳಿಗೆ ಈ ಜ್ಞಾನ, ವಿಜ್ಞಾನ, ತಂತ್ರಜ್ಞಾನಗಳೆಲ್ಲಾ ಕನ್ನಡದಲ್ಲಿದ್ದಾಗ ಮಾತ್ರಾ ಅತ್ಯುತ್ತಮವಾಗೋದು ಅನ್ನೋದೂ ನಿಜ. ಹಾಗಾಗಿ ಇವತ್ತು ಇಂಗ್ಲಿಷೂ ಕೂಡಾ ತಾತ್ಕಾಲಿಕವಾದ ಪರಿಹಾರ ಮಾತ್ರವೇ ಆಗಿದೆ. ಹಾಗೆ ನೋಡಿದರೆ ಇಂದು ಕನ್ನಡಿಗರ ಬದುಕಿಗೆ ಕಲ್ಲು ಹಾಕುತ್ತಿರುವುದು ಇಂಗ್ಲಿಷ್ ಅಲ್ಲಾ, ಹಿಂದಿ ಭಾಷೆ.

ಲೇಖಕ: ಭಾಷೆ ಕಲ್ಲು ಹೊಡ್ಯೋದ್ರಿಂದ, ರಾಜ್ಯೋತ್ಸವ ಮಾಡಿದ್ರಿಂದ, ಮಸಿ ಬಳಿಯೋದ್ರಿಂದ ಉಳ್ಯಲ್ಲ...
ಏನ್ಗುರು : ಹೌದು, ಭಾಷೆ ಬರೀ ಇಷ್ಟರಿಂದಲೇ ಉಳ್ಯಲ್ಲ. ಆದರೆ ಭಾಷೆಯ ಉಳಿವಿಗೆ ಇರೋ ಅನೇಕ ವಿಧಾನಗಳಲ್ಲಿ ಇವುಗಳ ಪಾತ್ರವೂ ದೊಡ್ದದೇ. ಜನರಲ್ಲಿ ಜಾಗೃತಿ ಮೂಡ್ಸೋದ್ರಲ್ಲಿ, ಒಗ್ಗಟ್ಟು ಸಾಧ್ಸೋದ್ರಲ್ಲಿ ರಾಜ್ಯೋತ್ಸವಗಳೂ, ಕಲ್ಲು ತೂರಾಟಗಳೂ, ಮಸಿ ಬಳಿಯುವಿಕೆಗಳೂ ಕಾರಣವಾಗಿವೆ ಅನ್ನೋ ಮಾತನ್ನು ತೆಗೆದು ಹಾಕಕ್ಕೆ ಆಗಲ್ಲ ಗುರು. ಭಾಷೆ ಉಳೀಬೇಕು ಅಂದ್ರೆ ಬರೀ ಇವುಗಳಿಂದ ಮಾತ್ರಾ ಸಾಧ್ಯವಿಲ್ಲ ಅನ್ನೋದನ್ನು ಒಪ್ಪಬೇಕಾದ್ದೆ. ಭಾಷೇನ ಉಳಿಸಬೇಕು ಅಂದ್ರೆ ಭಾಷೆಯೆಂಬುದನ್ನು ಬದುಕು ಕೊಡೋ ಸಾಧನವಾಗಿಸಬೇಕು. ಕನ್ನಡದಿಂದ ಕನ್ನಡಿಗರ ಬದುಕಲ್ಲಿ ಏಳಿಗೆ ಸಾಧ್ಯವಾಗಬೇಕು. ಜಗತ್ತಿನ ಅತ್ಯುನ್ನತ ಜ್ಞಾನ ಕನ್ನಡಿಗರ ಕೈವಶವಾಗಬೇಕು. ಆಗ ಭಾಷೆ ಉಳಿದೀತು. ಕುವೆಂಪು ಅವರು ಹೇಳಿದ್ದು ಮರೀಬಾರ್ದಣ್ಣ... ಕಲ್ಲೋ ಸೊಲ್ಲೋ ಕನ್ನಡದ ಉಳಿವಿಗೆ ಎಲ್ಲವೂ ಬೇಕು ಅಂತ.

ಲೇಖಕ: ನಾಡು ನುಡಿಯನ್ನು ಮೀರಿದ್ದು ಮಾನವೀಯತೆಯ ಸಿದ್ಧಾಂತ. ಇದನ್ನೇ ಕುವೆಂಪು ಹೇಳಿದ್ದು.
ಏನ್ಗುರು : ಅನುಕೂಲಕ್ಕೆ ತಕ್ಕಷ್ಟನ್ನು ಮಾತ್ರಾ ವಾದಕ್ಕೆ ಬಳಸುವುದು ಸರಿಯಲ್ಲ ಗುರು. ಅದೇ ಕುವೆಂಪು ಅವರೇ "ಕನ್ನಡ ವಿರೋಧಿಗಳಿಗೆ ನಾನು ಯುದ್ಧ ಬುಲ್ಡೋಜರ್" "ಕನ್ನಡಕೆ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ" "ಕನ್ನಡವೇ ಸತ್ಯ, ಅನ್ಯವೆನಲದೇ ಮಿಥ್ಯಾ" ಎಂದೂ ಸಾರಿದ್ದಾರೆ. ಅವರ ಮಾತುಗಳಲ್ಲಿ ಯಾವ ದ್ವಂದ್ವವೂ ಇಲ್ಲ. ನಿನ್ನತನ ಮರೆತು ಜಗದ ಉದ್ಧಾರ ಸಾಧ್ಯವಿಲ್ಲ. ಮೊದಲು ಮನೆ ಗೆದ್ದು ಆಮೇಲೆ ಊರು ಗೆಲ್ಲು ಅನ್ನೋ ಮಾತಿನ ಹಾಗೆ ಇದು. ನಿನ್ನ ಪಾಲಿನ ದೇಶ, ಪ್ರಪಂಚ ನೀ ಬದುಕುತ್ತಿರುವ ನಾಡು, ಇದರ ಹಿತ ಕಡೆಗಣಿಸಿ ಇನ್ಯಾವ ಮಾನವ ಹಿತವನ್ನೂ ಸಾಧ್ಸಕ್ ಆಗಲ್ಲಾ ಅನ್ನೋದೇ ಸತ್ಯಾ ಗುರು.

ಲೇಖಕ: ಜಗತ್ತಿನ ಯಾವುದೋ ಮೂಲೆಯಲ್ಲಿ ಕುಳಿತ ಕನ್ನಡಿಗ ಅಂತರ್ಜಾಲದಲ್ಲಿ ಸುಮ್ಮನೆ ಕಮೆಂಟ್ ಬರೆದು ಸಾರ್ಥಕ್ಯದ ಭಾವನೆ ಹೊಂದುತ್ತಾನೆ. ವಾಸ್ತವವಾಗಿ ಅವನಿಗೆ ಕನ್ನಡ ನೆಲದ ಅಸಲಿ ಸಮಸ್ಯೆಗಳೇ ಅರ್ಥವಾಗಿರುವುದಿಲ್ಲ.
ಏನ್ಗುರು : ಜಗತ್ತಿನ ಯಾವುದೋ ಮೂಲೆಯಲ್ಲಿ ಕುಳಿತುಕೊಳ್ಳುವುದಕ್ಕೂ, ಕನ್ನಡ ನಾಡಿನ ಸಮಸ್ಯೆ ಅರ್ಥವಾಗುವುದಕ್ಕೂ ಎತ್ತಣಿಂದೆತ್ತ ಸಂಬಂಧವಯ್ಯಾ? ಕಾಮೆಂಟ್ ಬರ್ಯೋರಿಗೆ ಸಮಸ್ಯೆ ಅರಿವಿರಲ್ಲ ಅಂತ ಸಾರ್ವತ್ರಿಕ ಅಭಿಪ್ರಾಯ ಕೊಡೋದು ಸರೀನಾ ಗುರು. ಒಂದು ನಾಡು ಅಂದಮೇಲೆ ಅದರಲ್ಲಿ ಪ್ರತಿಯೊಬ್ಬನಿಗೂ ಅವನದೇ ಆದ ಪಾತ್ರ ಇರುತ್ತೆ. ಬರಹ ಬರ್ಯೋದ್ರು ಮೂಲಕ ಜಾಗೃತಿ ಮೂಡ್ಸೋ ಹಾಗೇನೆ ಕಮೆಂಟ್ ಬರೆಯೋದ್ರ ಮೂಲಕವೂ ಜಾಗೃತಿ ಮೂಡಿಸಬಹುದಲ್ಲಾ ಗುರು. ನಾಡಿನ ಏಳಿಗೆಗೆ ಹೋರಾಟ ಮಾಡೋರು, ಚಿಂತನೆ ಮಾಡೋರು, ಉದ್ದಿಮೆ ಮಾಡೋರು, ಕಾಯಕ ಮಾಡೋರು, ಬರವಣಿಗೆ ಬರೆಯೋರು... ಹೀಗೆ ಎಲ್ಲಾ ಥರದೋರ ಕಾಣಿಕೆನೂ ಮುಖ್ಯಾನೆ ಗುರು. ಇದರಲ್ಲಿ ಒಂದು ಮೇಲು ಇನ್ನೊಂದು ಕೀಳು ಅನ್ನೋದಾಗ್ಲಿ, ಹೋರಾಟ ಮಾಡೋರಿಗೆ ಸಾಹಿತ್ಯದ ಪರಿಣಿತಿ ಇರಬೇಕು, ನಾಡಿನ ಉದ್ದಿಮೆದಾರನಿಗೆ ಇತಿಹಾಸ ಗೊತ್ತಿರಬೇಕು, ಜಾಗೃತಿ ಮಾಡೋರ್ಗೆ ಇನ್ನೊಂದು ಗೊತ್ತಿರಬೇಕು... ಅಂತೆಲ್ಲಾ ಬಯಸೋದು ಬಾಲಿಷ ಆಗಿಬಿಡುತ್ತೆ. ಏನಂತೀಯಾ? ಗುರು.

"ಬ್ಯಾಡ" ಅನ್ನಕ್ಕಾಗದ ಬ್ಯಾಡಗಿ ಮೆಣಸಿನ್ಕಾಯಿ!

ಉತ್ತರ ಕರ್ನಾಟಕದಲ್ಲಿ ನಮ್ಮ ರೈತರು ಬೆಳೆಯೋ ಮಸಾಲೆಗಳ ಬೆಳೆ ದೇಶದೋರ ಬಾಯಲ್ಲೆಲ್ಲಾ ನೀರೂಡಿಸ್ತಿದೆ! ಇವ್ಗಳ ಮಧ್ಯೆ ಬ್ಯಾಡಗಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಬೆಳ್ಯೋ ಬ್ಯಾಡ್ಗಿ-ಮೆಣಸಿನಕಾಯಿಯ ಗುಣಮಟ್ಟ ಮತ್ತು ರಫ್ತಾಗ್ತಿರೋ ಪ್ರಮಾಣ ನೋಡಿ ಕೇಂದ್ರ ಸರ್ಕಾರ ಉತ್ತರ ಕರ್ನಾಟಕದಲ್ಲಿ 10 ಕೋಟಿಯ ಮಸಾಲೆಗಳ-ಪಾರ್ಕ್ (spices-park) ಶುರು ಮಾಡಲು ಯೋಜನೆ ಹಾಕಿದೆ . ಇದು ನಮ್ಮ ನಾಡಿನ ರೈತರಿಗೆ ಸಕ್ಕತ್ ಸಂತೋಷದ ಸುದ್ಧಿ ಮತ್ತು ಪ್ರತಿಯೊಬ್ಬ ಕನ್ನಡಿಗನ ಹೆಮ್ಮೆಯ ವಿಷಯ ಗುರು! ಇದರ ಪೂರ್ತಿ ಲಾಭ ನಮ್ಮ ರೈತರಿಗೇ ಸಿಗ್ಬೇಕು ಗುರು!

ಅಂಕಿ-ಅಂಶಗಳು
ಜಗತ್ತಿನ ಮೆಣಸಿನಕಾಯಿ ಬೆಳೆಯ ಶೇಕಡ 25ರಷ್ಟು ಬೆಳೆ ಭಾರತದಲ್ಲೇ ಬೆಳ್ಯತ್ತೆ, ಮತ್ತೆ ಇದ್ರಷ್ಟು ಇನ್ಯಾವ ದೇಶದಲ್ಲೂ ಬೆಳ್ಯೋಲ್ಲ. ಭಾರತದ ಒಟ್ಟು ಮೆಣಸಿನಕಾಯಿಯ ಕೊಯ್ಲಿನ ಶೇ.14ರಷ್ಟು ಭಾಗ ಕರ್ನಾಟಕದಲ್ಲೇ ಆಗ್ತಿದ್ದು ನಮ್ಮ ರಾಜ್ಯ ದೇಶದಲ್ಲೇ ಎರಡನೆಯ ಸ್ಥಾನದಲ್ಲಿದೆ. ಆದ್ರೆ ಬ್ಯಾಡಗಿ ಮೆಣಸಿಗೆ ಜಗತ್ತಿನಲ್ಲೇ ಅತಿ-ವಿಶಿಷ್ಟ ಬೇಡಿಕೆಯಿದ್ದು ಅದರ ಮಾರುಕಟ್ಟೆ ಅತಿ ಹೆಚ್ಚು ಲಾಭದಾಯಕ ಆಗಿದೆ. ಜೊತೆಗೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ವಿಶಿಷ್ಟ ಮೆಣಸುಗಳ ಪಟ್ಟಿಯಲ್ಲಿ ಬ್ಯಾಡಗಿ ದೊಡ್ಡ ಜಾಗ ಪಡೆದಿದೆ. ಯೂರೋಪಿನ ದೇಶಗಳಲ್ಲಿ ಖಾರ ತಿನ್ನುವುದು ಕಡಿಮೆಯಾದ್ರಿಂದ ಬ್ಯಾಡ್ಗಿ ಮೆಣಸಿನಕಾಯಿಗೆ ಬೇಡಿಕೆ ಹೆಚ್ಚಿದೆ. ಈ ಕಾರಣದಿಂದ ಬ್ಯಾಡ್ಗಿಗೆ ತುಂಬ ದೊಡ್ಡ ಮಾರುಕಟ್ಟೆ ಇದೆ. ಬ್ಯಾಡ್ಗಿಗೆ ಇದ್ರಲ್ಲಿರೋ ಲಾಭ ಅಪಾರ ಗುರು! ಜೊತೆಗೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಬ್ಯಾಡ್ಗಿ ಮೆಣಸಿಕಾಯಿ ವಿಶಿಷ್ಟ ಜಾಗ ಪಡೆದಿದೆ.

"ಪಾರ್ಕ್" ಸಂಸ್ಥೆಯಿಂದ ಅಪೇಕ್ಷೆ ಏನು?
ಈ ಮಸಾಲೆ-ಪಾರ್ಕ್ ಯೋಜನೆ ಕನ್ನಡ ನಾಡಿನ ಮೆಣ್ಸಿನ್ಕಾಯಿ ಬೆಳ್ಯೋ ರೈತರಿಗೇ ಲಾಭ ತರಬೇಕು. ಇಂತಹ ಕಾರ್ಯಕ್ರಮದಲ್ಲಿ ತಂತ್ರಜ್ಞಾನದ ದೃಷ್ಟಿಯಿಂದ ಕೆಲವು ಮುಖ್ಯ
ಯೋಜನೆಗಳಾದ:
  1. ಮೆಣ್ಸಿನ್ಕಾಯಿ ಬೀಜದ ಸಂಸ್ಕರಣೆ
  2. ಮೆಣ್ಸಿನ್ಕಾಯಿಯ ಸಂಸ್ಕರಣೆ ಮತ್ತು ಬೇಗನೆ ವಣಗಿಸುವಿಕೆ
  3. ಮೆಣ್ಸಿನ್ಕಾಯಿ ಬೆಳೆಗೆ ರೋಗ ನಿಯಂತ್ರಣಾ ವಿಧಾನಗಳು
  4. ಮೆಣ್ಸಿನ್ಕಾಯಿಯ ಗುಣಮಟ್ಟ ತಪಾಸಣೆ ಮತ್ತು ಹೆಚ್ಚಳ
  5. ಮೆಣ್ಸಿನ್ಕಾಯಿಯ ಹೆಚ್ಚು ಫಸ್ಲಿರೋ ಹೊಸ ತಳಿಗಳ ಕಂಡುಹಿಡಿಯುವಿಕೆ
  6. ಮೇಣ್ಸಿನ್ಕಾಯಿಯ ರಫ್ತು ಹೆಚ್ಚಳಕ್ಕೆ ಹೆಜ್ಜೆ
  7. ಮೆಣ್ಸಿನ್ಕಾಯಿಯ ಆಧುನಿಕ ಮಾರಾಟ-ಕವಚ ವಿನ್ಯಾಸ (packaging)
  8. ಮೆಣ್ಸಿನ್ಕಾಯಿಯ ಮಾರುಕಟ್ಟೆ ಹೆಚ್ಚಳಕ್ಕೆ ಬೇಕಾದ ಮಾರುಕಟ್ಟೆ ವಿಶ್ಲೇಶಣೆ
ಗಳನ್ನು ಕೈಗೆತ್ತಿಕೊಂಡು ಈ ಸಂಸ್ಥೆ ಕನ್ನಡದ ರೈತರಿಗೆ ತಮ್ಮ ಫಸಲು ಮತ್ತು ಗಳಿಕೆಗಳನ್ನು ಉತ್ತಮಗೊಳಿಸಲು ನೆರವಾಗ್ಬೇಕು ಗುರು! ಜೊತೆಗೆ ಈ ಮೆಣ್ಸಿನ್ಕಾಯಿ ಬ್ಯಾಡ್ಗಿ ಪ್ರದೇಶಗಳಿಗೇ ಪ್ರತ್ಯೇಕವಾದ ಬೆಳೆ ಆಗಿದ್ದು, ಇಂತಹ ತಳಿ ಇನ್ನೆಲ್ಲೂ ಬೇರೆಡೆ ಬೆಳ್ಯೋಕ್ಕೆ ಸಾಧ್ಯವಲ್ಲದ ಕಾರಣ ಇದಕ್ಕೆ (ಪ್ರಾದೇಶಿಕ-ಸೂಚಕ) GI ಪಟ್ಟ ಕೊಡ್ಸಕ್ಕೆ ಈ ಸಂಸ್ಥೆ ಮುಂದಾಗ್ಬೇಕು. ಇದಕ್ಕೆ ಕೂಡಲೆ ಬೇಕಾದ ಹಜ್ಜೆ ತೊಗೊಳ್ಬೇಕು.

ಬೆಳೆಗಾರ್ರು ಏನ್ ಮಾಡ್ಬೇಕು?
ಭಾರತದಲ್ಲಿ ಬೆಳ್ಯೋ ಹಲವಾರು ಬಗೆಯ ಮೆಣ್ಸಿನ್ಕಾಯಿಗಳ ನಡುವೆ ನಮ್ಮ ಬ್ಯಾಡ್ಗಿ ಮೆಣ್ಸಿನ್ಕಾಯ್ಗೆ ಇಷ್ಟು ಬೆಲೆ ದೊರಕಿ ಅದರ ಮಾರುಕಟ್ಟೆ ಹೆಚ್ಚಿಸಲು ಒಂದು ಸಂಸ್ಥೆಯು ನಿರ್ಮಾಣ ಆಗ್ತಿರುವಾಗ ಕನ್ನಡದ ರೈತರು ಇದರ ಲಾಭ ತೊಗೊಳಕ್ಕೆ ಮುಂದಾಗ್ಬೇಕು ಗುರು. ಪ್ರತಿಯೊಬ್ಬ ರೈತನೂ ತನ್ನ ಬೆಳೆಯ ವಿಚಾರ ಈ ಸಂಸ್ಥೆಯವರೊಡನೆ ಹಂಚಿಕೊಂಡು ಅವರಿಂದ ಹೇಗೆ ಲಾಭ ಪಡೀಬೋದು ಅಂತ ತಿಳ್ಕೊಳ್ಬೇಕು. ಅವರು ಮಾಡುವ ಸಂಶೋಧನೆಗಳಿಗೆ ಸ್ಪಂದಿಸಿ ತಮ್ಮ ಲಾಭವನ್ನ ತಾವೇ ರೂಪಿಸಿಕೊಳ್ಬೇಕು ಗುರು!

ಒಟ್ಟಿನಲ್ಲಿ ಇಂದು ಜಗತ್ತಿನೆಲ್ಲೆಡೆ ಈ ಮೆಣ್ಸಿನ್ಕಾಯಿಗೆ ತುಂಬಾ ಬೇಡಿಕೆ ಇದೆ. ಭಾರತದಲ್ಲಿ ಇನ್ನೂ ಕರ್ನಾಟಕ ರಾಜ್ಯ ಎರಡನೇ ಜಾಗದಲ್ಲಿರೋದ್ರಿಂದ ಈ ಯೋಜನೆಯಿಂದ ನಾವು ಮೊದಲನೆ ಜಾಗ ಗಳಿಸುವಂತಾಗ್ಬೇಕು. ಜಗತ್ತಿನಲ್ಲಿ ನಮ್ಮ ಮೆಣ್ಸಿನ್ಕಾಯಿಗೆ ಅತಿ ಹೆಚ್ಚಿನ ಬೇಡಿಕೆ ಹುಟ್ಟಿಸಿ ಜಗತ್ತಿಗೇ ಬ್ಯಾಡ್ಗಿಯ ಹುಚ್ಚೆಬ್ಬಿಸ್ಬೇಕು ಗುರು! ಏನಂತೀರ?

ಅಂದು ಹೀಗಿದ್ದ ಮಂದಿ ನಾವಾ ಗುರು?

ಕನ್ನಡ ನಾಡನ್ನು ಗಂಡುಮೆಟ್ಟಿನ ನಾಡು ಅಂತಾರಲ್ಲಾ ಮಂದಿ, ಎದಕ್ಕಂತ ಮಾಡೀರಿ? ನಮ್ ಬೆನ್ನು ನಾವೇ ತಟ್ಕೊಳಾಕ್ ಹತ್ತೀವಿ ಅಂದ್ಕೋಬ್ಯಾಡ್ರಿಪಾ. ನಮ್ ಇಮ್ಮಡಿ ಪುಲಿಕೇಶಿ ಕಾಲಕ್ಕಾ ಅಂದರಾ ಏಳನೇ ಶತಮಾನದಾಗ ಚೀನಾದಿಂದ ಒಬ್ಬ ಪ್ರವಾಸಿ ಬಂದಿದ್ದ, ಹ್ಯುಯೆನ್ ತ್ಸಾಂಗ್ ಅಂತ. ಅಂವ ಆಗಿನ್ ಕನ್ನಡ ಮಂದೀನ್ ಕುರಿತು ಏನ್ ಬರದಾನ ಗೊತ್ತೇನ್ರೀ?

ಹ್ಯುಯೆನ್ ತ್ಸಾಂಗ್ ಕಂಡ ಕನ್ನಡಿಗರು


ಇಲ್ಲಿನ ಜನರು ಪ್ರಾಮಾಣಿಕರು ಮತ್ತು ಸರಳ ಸ್ವಭಾವದವರು. ಅವರದು ಎತ್ತರದ ನಿಲುವು. ಅವರು ಪ್ರತಿಭಟಿಸುವ ಕಠಿಣ ಸ್ವಭಾವದವರು. ತಮಗೆ ಉಪಕಾರ ಮಾಡಿದವರಿಗೆ ಇವರು ತುಂಬ ಕೃತಜ್ಞರು. ಆದರೆ ವೈರಿಗಳಿಗೆ ನಿಷ್ಕರುಣರು. ಅಪಮಾನವಾದರೆ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಸೇಡು ತೀರಿಸಿಕೊಳ್ಳುವ ಕೆಚ್ಚು ಅವರದು. ಒಬ್ಬರಿಗೆ ಸಹಾಯ ಮಾಡಬೇಕೆಂದು ಅವರಿಗೆ ಹೇಳಿದ್ದಾದರೆ, ಆ ಸಹಾಯ ನೀಡುವ ಭರದಲ್ಲಿ ತಮ್ಮನ್ನೇ ತಾವು ಮರೆತು ಬಿಡುತ್ತಾರೆ.

ಅವರು ಸೇಡು ತೀರಿಸಿಕೊಳ್ಳ ಬಗೆದರೆ, ಮೊದಲು ತಮ್ಮ ವೈರಿಗೆ ಅವರು ಮುನ್ನೆಚ್ಚರಿಕೆ ನೀಡುವರು. ಆಮೇಲೆ ಇಬ್ಬರೂ ಶಸ್ತ್ರಸಜ್ಜಿತರಾಗಿ ಒಬ್ಬರನ್ನೊಬ್ಬರು ಭಲ್ಲೆಯಿಂದ ತಾಗುತ್ತಾರೆ. ಅವರಲ್ಲಿ ಒಬ್ಬನು ಓಡತೊದಗಿದರೆ ಇನ್ನೊಬ್ಬನು ಬೆನ್ನಟ್ಟುವನು. ಆದರೆ ಸೋಲೊಪ್ಪಿ ಬಿದ್ದವನನ್ನು ಅವರು ಕೊಲ್ಲುವುದಿಲ್ಲ.

ಒಬ್ಬ ದಳಪತಿಯು ಕಾಳಗದಲ್ಲಿ ಸೋತರೆ ಅವನನ್ನು ಶಿಕ್ಷೆಗೆ ಒಳಪಡಿಸುವುದಿಲ್ಲ. ಅದರೆ, ಅವನಿಗೆ ಹೆಂಗಸರ ಬಟ್ಟೆಗಳ ಉಡುಗೊರೆ ಕೊಡಲಾಗುವುದು, ತನ್ಮೂಲಕ ಆ ದಳಪತಿಯು ತಾನೆ ಅಸು ನೀಗಲು ಮುಂದಾಗುವನು.

ಈ ನಾಡಿನಲ್ಲಿ ನೂರಾರು ಮಂದಿ ಜಟ್ಟಿಗಳನ್ನು ಸಾಕಲು ಏರ್ಪಾಡುಂಟು. ಮಸೆದಾಟಕ್ಕೆ ತೊಡಗುವಾಗಲೆಲ್ಲಾ ಆ ಜಟ್ಟಿಗಳು ಕಳ್ಳು ಕುಡಿದು ಮದ ಬರಿಸಿಕೊಂಡು, ಕಯ್ಯಲ್ಲಿ ಭಲ್ಲೆ ಹಿಡಿದು ಹತ್ತು ಸಾವಿರ ಜನರ ನಡುವೆ ಬಂದು ತಾನು ಒಬ್ಬನೇ ಇದ್ದರೂ ಅವರಿಗೆ ಕಾದಾತಕ್ಕೆ ಕರೆ ಕೊಡುವನು. ಈ ಜಟ್ಟಿಗಳಲ್ಲಿ ಒಬ್ಬ ಯಾರನ್ನಾದರೂ ಎದುರಿಸಿ ಕೊಂದಿದ್ದೇ ಆದರೆ, ದೇಶದ ಶಾಸನಗಳು ಅವನಿಗೆ ಶಿಕ್ಷೆ ವಿಧಿಸುವುದಿಲ್ಲ.

ಅವರು ಹೊರಗೆ ಹೊರಟಾಗಲೆಲ್ಲಾ ಅವರ ಮುಂದೆ ಡೋಲು ಬಡಿಯುವರು. ಇಷ್ಟೇ ಅಲ್ಲಾ, ಅವರು ನೂರಾರು ಆನೆಗಳಿಗೆ ಮದ ಬರಿಸಿ ಕಾಳಗಕ್ಕೆ ಅವನ್ನು ಕರೆದೊಯ್ದು, ಮೊದಲು ತಾವೂ ಮದ್ಯ ಕುಡಿದು, ಗುಂಪುಗೂಡಿ ಮುನ್ನುಗ್ಗುತ್ತ, ಎಲ್ಲವನ್ನೂ ತೊತ್ತಳದುಳಿದುಬಿಡುತ್ತಾರೆ. ಇದರಿಂದಾಗಿ ಯಾವ ಹಗೆಯೂ ಅವರೆದುರು ನಿಲ್ಲಲಾರದವನಾಗುವನು. ಈ ರಾಜನು ಈ ಬಗೆಯ ಜಟ್ಟಿಗಳನ್ನು ಹೊಂದಿದವನಾಗಿರುವುದರಿಂದ ಅಜೇಯನಾಗಿದ್ದಾನೆ ಮತ್ತು ಇವನ ಜನಪರ ಆಡಳಿತ ನಾಲ್ಕುದಿಕ್ಕಿಗೂ ಪ್ರಸಿದ್ಧಿ ಪಡೆದಿದೆ.

ಮೈ ನಿಮಿರಿಸೋ ಕನ್ನಡಿಗರ ಇತಿಹಾಸ


ಇಂಥಾ ಭಾಳ ವಿಚಾರಗಳ ಬಗ್ಗೆ ಆವತ್ತಿನ ಮೈಸೂರು ರಾಜ್ಯ ಸರಕಾರದೋರು, 1970ರಾಗ ಸಾಹಿತ್ಯ ಸಂಸ್ಕೃತಿ ಅಭಿವೃದ್ಧಿ ಇಲಾಖೆ ಮುಖಾಂತರ ಹೊರತಂದ "ಕರ್ನಾಟಕದ ಪರಂಪರೆ" ಅನ್ನೋ ಹೊತ್ತಿಗಿ ಒಳಗ ದಾಖಲಿ ಮಾಡ್ಯಾರ್ರೀ. ಒಂದೊಂದು ಹಾಳಿ ತಿರುವಿ ಹಾಕ್ದಾಗ್ಲೂ ನಮ್ ಹಿರೇಕರು ಎಂಥ ಧೀರರು ಶೂರರೂ ಇದ್ರಂತ ಎದಿ ಉಬ್ತೈತಿ. ಆ ಮಂದಿ ಮಯ್ಯಾಗಿನ ರಕ್ತಾನೆ ನಮ್ ಮಯ್ಯಾಗ್ ಹರೀತಿರೋದು ಅಂತ ರೋಮಾಂಚನ ಆಕ್ಕೈತಿ.

ಇದೂ ಬೊಂಬೆಯಾಟವಯ್ಯಾ...

ತಮಿಳುನಾಡಿನ ಮುಖ್ಯಮಂತ್ರಿಗಳಾದ ಕರುಣಾನಿಧಿಯವರು ಹೊಗೇನಕಲ್ ಕುಡ್ಯೋ ನೀರಿನ ಯೋಜನೆ ಜಾರಿಗೆ ತರಲೇಬೇಕು ಅನ್ನೋ ಭರದಲ್ಲಿ ಒಂದು ಹೇಳಿಕೆ ನೀಡಿ ಭಾರತದಲ್ಲಿ ತಮ್ಮ ಕೆಲಸಾ ಸಾಧುಸ್ಕೋಬೇಕು ಅಂದ್ರೆ ಲಾಬಿ ಮಾಡ್ಬೇಕು ಅಂತನ್ನೋ ನಿಜಾನ ಬಯಲು ಮಾಡಿದಾರೆ ಗುರು. ಇದನ್ನು ಜನಾ ಬ್ಲಾಕ್ ಮೇಲ್ ತಂತ್ರಾ ಅಂತ್ಲೂ ಅಂತಾರೆ ಗುರು.

ಹೊರಗ್ ಬರ್ತೀನಿ ಅನ್ನೋ ಬೆದರುಗೊಂಬೆ...


ಈ ಹೊರಗೆ ಬರ್ತೀವಿ ಅನ್ನೋ ಅಸ್ತ್ರದಿಂದ ಇವ್ರು ಅದೇನೇನ್ ಕೆಲ್ಸ ಮಾಡುಸ್ಕೊಂಡಿದಾರೆ ಅಂತ ವಸಿ ನೋಡಮಾ ಬನ್ನಿ. ಹಿಂದೆ ಭಾಜಪಾ ಅಧಿಕಾರದಲ್ಲಿದ್ದಾಗ್ಲೂ ಅದರ ಜೊತೆ ಹೊಂದಾಣಿಕೆ ಮಾಡ್ಕೊಂಡು ಅಧಿಕಾರ ಅನುಭವಿಸಿದ್ದೋರು ಈ ಡಿ.ಎಂ.ಕೆ ಜನಾ ಅಂತ ನೆನುಪ್ ಮಾಡ್ಕೊಟ್ಟು ಮುಂದ್ಕ್ ಹೇಳ್ತೀವಿ ಕೇಳಿ.
ಮೊದಲು ತಮಗೆ ಬೇಕಾದ ಖಾತೆಗಳು ಸಿಗಲಿಲ್ಲ ಅಂತ ಅಧಿಕಾರ ವಹಿಸಿಕೊಳ್ದೆ ಬ್ಲಾಕ್ ಮೇಲ್ ಮಾಡುದ್ರು. ಅಧಿಕಾರಕ್ಕೆ ಬಂದ ಕೂಡಲೇ ತಮಿಳಿಗೆ ತನ್ನ ಪ್ರಣಾಳಿಕೆಯಲ್ಲಿ ಹೇಳಿದಂತೆ ಶಾಸ್ತ್ರೀಯ ಸ್ಥಾನಮಾನ ಪಟ್ಟ ಕೊಡ್ಸಿಕೊಟ್ರು. ಆಟೊಮೊಬೈಲ್ ತಂತ್ರಜ್ಞಾನದ ಸಂಶೋಧನಾ ಕೇಂದ್ರವನ್ನು ತಮಿಳುನಾಡಿಗೆ ತರಲಾಯಿತು. ರೈಲ್ವೇಯ ಹಿಂದಿ ಪರವಾಗಿ ಎಲ್ಲ ರೈಲಲ್ಲಿ ಹಿಂದಿ ಇಂಗ್ಲಿಷ್ ನಾಮಫಲಕ ಮಾತ್ರಾ ಇರ್ಬೇಕು ಅನ್ನೋ ನಿಯಮದಿಂದ ವಿನಾಯ್ತಿ ಪಡ್ಕೊಂಡ್ರು. ತಮಿಳುನಾಡಿಗೆ ನೆರೆ ಪರಿಹಾರವಾಗಿ ಹೆಚ್ಚುವರಿ ಹಣ ಬಿಡುಗಡೆ ಮಾಡ್ತೀವಿ ಅಂತ ಕೇಂದ್ರದೋರು ಅಂದಾಗ್ಲೂ ನಮ್ಗೆ ಹೇಳ್ದೆ ಹಾಗ್ ಮಾಡುದ್ರೆ ಅಷ್ಟೇ, ಬೆಂಬಲ ವಾಪಸ್ ತೊಗೋತೀವಿ ಅಂತ ಬೆದರ್ಸುದ್ರು. ತಮಿಳುನಾಡಿನ ನೈವೇಲಿ ಲಿಗ್ನೈಟ್ ನಿಯಮಿತ ಸಂಸ್ಥೆಯಿಂದ ಶೇಕಡಾ ಹತ್ತರಷ್ಟು ಬಂಡವಾಳ ಹಿಂತೆಗೆದು ಖಾಸಗೀಕರಣ ಮಾಡ್ತೀವಿ ಅಂದ್ರೆ ರಾಜಿನಾಮೆಯ ಬೆದರಿಕೆ ಹಾಕುದ್ರು. ಇದೆಲ್ಲಾ ನೋಡಿದ ಮೇಲೂ ಕಾವೇರಿ ನದಿ ನೀರಿನ ತೀರ್ಪು, ಕರ್ನಾಟಕದ ಎಲ್ಲ ಸಮರ್ಥ ವಾದಗಳ ನಂತರವೂ ತಮಿಳುನಾಡಿನ ಪರವಾಗಿದ್ದು ಹೀಗೇನಾ ಅಂತ ಜನಾ ಮಾತಾಡ್ಕೊತಾ ಇದಾರೆ ಗುರು. ಈಗ ಅದೇ ಇಡೀ ಕಾವೇರಿ ನದೀನ ರಾಷ್ಟ್ರೀಯ ಸಂಪತ್ತು ಅಂತೀವಿ ಅಂದ್ರೂ ನಮ್ಮೋರು ಬಾಯ್ಮುಚ್ಕೊಂಡು ಇರ್ತಾರೆ.

ಇರೋದು ಮೂರು % ಸೀಟು! ಎರಡು % ಓಟು!

ಒಟ್ನಲ್ಲಿ ಈಗ ಕೇಂದ್ರದಲ್ಲಿ ಅಧಿಕಾರದಲ್ಲಿರೋ ಕಾಂಗ್ರೆಸ್ ಮೈತ್ರಿ ಕೂಟಕ್ಕೆ ಬೆಂಬಲ ಕೊಟ್ಟು ತಮಗೆ ಬೇಕಾದ ಹಾಗೆ ಸರ್ಕಾರಾನ ಆಡುಸ್ಕೊಂದು ಬೇಕಾದ ಅನುಕೂಲ ಮಾಡ್ಕೋತಾ ಇದಾರೆ ಗುರು. ಇಡೀ ಸರ್ಕಾರಾನ ಸೂತ್ರದ ಗೊಂಬೆ ಥರಾ ಇಷ್ಟೆಲ್ಲಾ ಆಡ್ಸಕ್ಕೆ ಡಿ.ಎಂ.ಕೆ ಹತ್ರ ಇರೋ ಸಂಸದರ ಸಂಖ್ಯೆ ಎಷ್ಟು ಗೊತ್ತಾ? 552 ಸದಸ್ಯರ ಲೋಕಸಭೆಯಲ್ಲಿ ಡಿ.ಎಂ.ಕೆ ಹೊಂದಿರೋದು ಬರೀ ಹದಿನಾರು ಸೀಟುಗಳು. ಅಂದ್ರೆ ನೂರಕ್ಕೆ ಮೂರಕ್ಕಿಂತ ಕಡಿಮೆ. ಕಳೆದ ಚುನಾವಣೇಲಿ ಅದು ಗಳಿಸಿದ ಮತದ ಪ್ರಮಾಣ ನೂರಕ್ಕೆ ಎರಡಕ್ಕಿಂತ ಕಡಿಮೆ. ಕರ್ನಾಟಕದಿಂದ ಆಯ್ಕೆಯಾಗಿರೋ ಭಾಜಪಾ ಸದಸ್ಯರ ಸಂಖ್ಯೆನೇ ಹದಿನೇಳು. ಕಾಂಗ್ರೆಸ್ಸಿಗರ ಸಂಖ್ಯೆ ಎಂಟು. ಆದ್ರೆ ಡಿ.ಎಂ.ಕೆಯೋರ್ಗೆ ಯಾವಾಗ ಕಾಲ್ ಹಿಡುದ್ರೆ ಏನಾಗುತ್ತೆ, ಯಾವಾಗ ಕಾಲ್ ಎಳುದ್ರೆ ಏನಾಗುತ್ತೆ ಅಂತಲೂ ಗೊತ್ತಿದೆ.

ಈಗ ಹೊಗೇನಕಲ್ ಕುಡ್ಯೋ ನೀರಿನ ಯೋಜನೆಗೆ ತಡೆ ಹಾಕ್ಬಾರ್ದು, ಆದ್ರೆ ಕರ್ನಾಟಕದಲ್ಲಿ ಕಾವೇರಿ ಪಾತ್ರದ ಒಂದು ಕೆರೆ ಹೂಳನ್ನು ಎತ್ತಕ್ಕೆ ಬಿಡಬಾರ್ದು ಅನ್ನೋ ನಿಲುವನ್ನೂ ದಕ್ಕುಸ್ಕೊಂಡು ಬಿಡ್ತಾರೆ. ಕರ್ನಾಟಕದ ರಾಜಕೀಯ ಪಕ್ಷಗಳು ಇದನ್ನು ಅರ್ಥ ಮಾಡ್ಕೊಳೋದು ಯಾವಾಗ? ಕನ್ನಡಿಗರು ಇದನ್ನು ಅರ್ಥ ಮಾಡ್ಕೊಳ್ಳೋದು ಯಾವಾಗ? ಅನ್ನೋದೆ ಒಂದು ದೊಡ್ ಪ್ರಶ್ನೆ ಆಗ್ಬಿಟ್ಟಿದೆ ಗುರು.

ಮುಂದಿನ ಸೋನಿಯಾಬಾದಿನಲ್ಲಿ ಇಂದು ರಾಜೀವ್ ವಿಮಾನ ನಿಲ್ದಾಣ!

ಹೈದರಾಬಾದಿನ ಹೊಸ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾಜೀವ್ ಗಾಂಧಿಯವರ ಹೆಸರನ್ನು ಇಟ್ಟಿದಾರೆ, ಗುರು (IBNLIVE ನಲ್ಲಿ ಚಿತ್ರ ನೋಡಿ). ಇದಕ್ಕೆ ತೆಲುಗರ ಆರಾಧ್ಯದೈವವಾದ ನಂ.ತಾ.ರಾಮರಾಯರ (ಎನ್ಟಿಆರ್) ಹೆಸರು ಇಡಬೇಕು ಅಂತಾ ತೆಲುಗುದೇಶಂ ಪಕ್ಷ ಪ್ರತಿಭಟನೆಯನ್ನೂ ಮಾಡಿದೆ. ಒಂದು ಕಾಲದಲ್ಲಿ ಕೇಂದ್ರದಲ್ಲಿ ಕುಳಿತು ಆಡಳಿತ ಮಾಡಿದ ರಾಜೀವ್ ಗಾಂಧಿಯವರ ಹೆಸರನ್ನು ಈ ನಿಲ್ದಾಣಕ್ಕೆ ಇಟ್ಟಿರುವುದು ಖಂಡಿತ ಸರಿಯಲ್ಲ ಗುರು!
ಯಾವ ಹೆಸರಿಡೋದು ಸರಿ?
ಒಂದು ಪ್ರದೇಶದ ವಿಶೇಷತೆಯನ್ನು ಸೂಚಿಸೋ ಹೆಸರನ್ನು ಆ ಪ್ರದೇಶದ ವಿಮಾನ ನಿಲ್ದಾಣಕ್ಕೆ, ಆಟದ ಮೈದಾನಕ್ಕೆ, ಅಣೆಕಟ್ಟೆಗೆ, ಊರಿಗೆ, ಕೇರಿಗೆ ಇಡಬೇಕು ಅನ್ನೋದು ಸರಿಯಾಗಿದೆ. ಇದಕ್ಕೆ ಮುಖ್ಯ ಕಾರಣ ಒಂದು ಪ್ರದೇಶದ ಜನರ ಬಳೆಕೇಲಿ ಇರೋ, ಅವರ ಭಾಷೇಲಿರೋ, ಅವರಿಗೆ ಸಂಬಂಧಪಟ್ಟ ಹೆಸರನ್ನೇ ಇಡೋದ್ರ ಮೂಲಕ ಆ ಜನಗಳಿಗೆ ಅಭಿಮಾನ ಮೂಡಿಸುವುದರ ಜೊತೆಗೆ ಹೊರಗಿನ ಜನರಿಗೆ ಆ ಪ್ರದೇಶದ ಹಿರಿಮೆಯ ಪರಿಚಯ ಮಾಡಿಕೊಟ್ಟ ಹಾಗೂ ಆಗುತ್ತೆ. ನಮ್ಮ ಊರಿನ ಬಗ್ಗೆ, ನಮ್ಮವರ ಬಗ್ಗೆ, ನಮ್ಮತನದ ಬಗ್ಗೆ ಹೇಳಿಕೊಳ್ಳಕ್ಕೆ ನಮಗೆ ಹೆಮ್ಮೆ ಆಗಲ್ವಾ? ಗುರು. ಇಂಥಾ ಒಂದು ಅವಕಾಶದಿಂದ ನಮ್ಮನ್ನು ದೂರ ಮಾಡೋದು ಸರೀನಾ ಗುರು? ಇನ್ನು ಇದಕ್ಕೆಲ್ಲಾ ಇಲ್ಲಿನವರ ಹೆಸರು ಬೇಡಾ ದಿಲ್ಲಿಯೋರ ಹೆಸ್ರನ್ನೇ ಇಡ್ತೀವಿ ಅನ್ನೋದಾದ್ರೆ ಈ ಪ್ರದೇಶದಿಂದ ಬಂದು ದಿಲ್ಲಿ ಮಟ್ಟಕ್ಕೆ ಬೆಳೆದೋರ ಹೆಸರಿಡೋದು ಸೂಕ್ತ ಅಲ್ವಾ? ಅದೂ ಅಲ್ದೆ ಎಲ್ಲದಕ್ಕೂ ರಾಷ್ಟ್ರನಾಯಕರ ಹೆಸರನ್ನೇ ಇಡ್ತೀವಿ ಅನ್ನೋದಾದ್ರೆ ನಮ್ಮ ನಾಡಿನ ಹಿರಿಮೆ, ಸಂಸ್ಕೃತಿ, ಹಿರಿಯರ ಹೆಸರನ್ನು ಬೇರೆ ಯಾವ ನಾಡಲ್ಲಾದ್ರೂ ಇಡಕ್ ಸಾಧ್ಯಾನಾ? ಅಂದ್ರೆ ಕೆಂಪೇಗೌಡರ ಹೆಸರನ್ನು ದಿಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಡ್ತಾರ? ಅಷ್ಟಕ್ಕೂ ಈಗ ಹೈದರಾಬಾದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಂಧ್ರದವರಾದ ಎನ್.ಟಿ.ರಾಮರಾಯರ ಹೆಸರನ್ನೋ, ರಾಷ್ಟ್ರನಾಯಕರಾಗಿದ್ದ ಪಿ.ವಿ.ನರಸಿಂಹರಾಯರ ಹೆಸರನ್ನೋ, ಆಂಧ್ರಪ್ರದೇಶ ಹುಟ್ಟಲು ಕಾರಣರಾದ ಪೊಟ್ಟಿ ಶ್ರೀರಾಮಲು ಅವರ ಹೆಸರನ್ನು ಇಡಬಹುದಿತ್ತು? ದುರಾದೃಷ್ಟ ಹೀಗೆ ಮುಂದುವರಿದರೆ ನಿನ್ನೆಯ ಭಾಗ್ಯನಗರಿ ಇಂದು ಹೈದರಾಬಾದ್ ಆದಂತೆ ನಾಳೆ ಸೋನಿಯಾಬಾದ್ ಆದ್ರೂ ಅಚ್ಚರಿಯಲ್ಲ.
ಭಾರತದ ಪ್ರತಿಯೊಂದು ಪ್ರದೇಶಕ್ಕೂ ತನ್ನದೇ ಆದ ವೈಶಿಷ್ಟ್ಯತೆ ಇರೋದನ್ನ ಮರೀಬಾರ್ದು ಗುರು. ಇಡೀ ಭಾರತದ ತುಂಬ ದಿಲ್ಲಿ ದೊರೆಗಳ ಹೆಸರನ್ನೇ ಇಟ್ಕೊಂಡು ಹೋಗ್ತೀವಿ, ಆ ಮೂಲಕ ಏಕತೆಯನ್ನು ಸಾಧಿಸ್ತೀವಿ ಅಂದುಕೊಳ್ಳೋದು ಮೂರ್ಖತನದ ಪರಮಾವಧಿ.
ಕರ್ನಾಟಕದಲ್ಲೂ ಇದೆ ಈ ರೋಗ!
ಆಂಧ್ರಕ್ಕೇ ಸೀಮಿತವಲ್ಲದ ಈ ರೋಗ ನಮ್ಮೂರುಗಳಲ್ಲೂ ನಮ್ಮ ಮಹಾನ್ ರಾಷ್ಟ್ರೀಯಪಕ್ಷಗಳ ಕಾರಣದಿಂದಾಗಿ ಸಕತ್ತಾಗೆ ಬೇರೂರಿದೆ ಗುರು. ಕರ್ನಾಟಕದಲ್ಲಿ ಆಲಮಟ್ಟಿ ಜಲಾಶಯದ ಹೆಸರನ್ನು ಲಾಲ್ ಬಹಾದ್ದೂರ್ ಶಾಸ್ತ್ರಿ ಅಣೆಕಟ್ಟೆ ಅಂತ ಇಟ್ಟಿದ್ದಾರೆ. ಬೆಂಗಳೂರಿನ ಬಡಾವಣೆಗಳಿಗೆ ಇಂದಿರಾನಗರ, ರಾಜಾಜಿನಗರ, ರವೀಂದ್ರನಾಥ ಟ್ಯಾಗೂರ್ ನಗರ, ಜಯಪ್ರಕಾಶ ನಗರ, ಜಗಜೀವನರಾಂ ನಗರ, ಬಾಪೂಜಿ ನಗರ, ಗಾಂಧಿ ನಗರ, ಶಾಸ್ತ್ರಿ ನಗರ, ಸುಭಾಶ್ ನಗರ... ಇತ್ಯಾದಿ ಹೆಸರಿಟ್ಟಿರೋದು ಕಾಣುತ್ತೆ. ಜವಹರಲಾಲ್ ನೆಹರು ತಾರಾಲಯ, ಇಂದಿರಾ ಗಾಂಧಿ ಸಂಗೀತ-ಕಾರಂಜಿ, ಸಂಜಯ್ ಗಾಂಧಿ ಆಸ್ಪತ್ರೆ, ರಾಜೀವ್ ಗಾಂಧಿ ಕ್ರೀಡಾಂಗಣ, ಪಂಡಿತ್ ದೀನ ದಯಾಳ್ ರಸ್ತೆ... ಹೀಗೇ ಮುಂದುವರೆದು ಇವತ್ತು ರಸ್ತೆಗಳ, ಬಡಾವಣೆಗಳ ಹೆಸರುಗಳು, ನಾಳೆ ಶಾಲೆ ಕಾಲೇಜುಗಳ ಹೆಸರು, ಊರುಗಳ ಹೆಸರು, ಆಮೇಲೆ ಇಡೀ ನಾಡಿನ ಹೆಸರನ್ನೇ ಬದಲಾಯಿಸಿ ಅಂತಲೂ ಅನ್ನಬೌದು ಗುರು!
ಕೊನೆ ಹನಿ : ಹಾಗಾದ್ರೆ ಕನ್ನಡಿಗರಲ್ಲದವರ ಹೆಸರನ್ನೇ ಇಡಬಾರ್ದಾ ಅನ್ನಬೇಡಿ. ಇರಲಿ... ಇಡೋಣ... ಎಲ್ಲೋ ಊಟದ ಮಧ್ಯೇ ಇರೋ ಉಪ್ಪಿನ ಕಾಯಿ ಥರಾ. ಆದ್ರೆ ನಮ್ಮತನಾನೆ ಮರೆಸಿ ಊಟವಿಡೀ ಉಪ್ಪಿನಕಾಯಿ ಮಾಡೋ ಮಟ್ಟಿಗಲ್ಲ...

ಇನ್ಮುಂದಾ ಕಂಬಿನೂ ಹಿಂದೀಲ್ ಎಣಿಸಬೇಕ್ರೀಪಾ!

ಮೊನ್ನಿ ದಿನಾ ಬೆಂಗಳೂರಾಗಿರೋ ಪರಪ್ಪನ ಅಗ್ರಹಾರದ ದೊಡ್ದ ಸೆರಮನಿಯಾಗಿಂದ ಒಂದು ಮಸ್ತ್ ಸುದ್ದಿ ಹೊರಗ್ ಬಂದದಾ... ಉತ್ತರ ಭಾರತದ ಒಂದೈವತ್ ಮಂದಿ ಖೈದಿಗಳು ಕರ್ನಾಟಕದ ಹೈ ಕೋರ್ಟಿನಾಗೊಂದು ಮನವಿ ಸಲ್ಲಿಸ್ಯಾರ.
ನಮಗಾ ಇಲ್ಲಿ ಊಟ ಹಿಡ್ಸೋಣಿಲ್ಲ, ನಮಗ ಇಲ್ಲಿ ಬಚ್ಚಲು ಹಿಡ್ಸೋಣಿಲ್ಲ, ಇಲ್ಲಿ ಮಂದಿ ಭಾಷಾ ನಮಗ ತಿಳಿಯೋಣಿಲ್ಲ, ಅವರ ಕೂಡಾ ನಮಗ ಇರಕ ಅಗೋಣಿಲ್ಲ ... ನಮಗಾ ಅನುಕೂಲ ಮಾಡಿಕೊಡ್ರಲಾ ಅಂತ ನ್ಯಾಯಾಲಯದ ಮೊರಿ ಹೊಕ್ಕಾರಾ!

ಈಗೇನು ಮಾಡಬೇಕಪಾ?

ಈಗರಾ ಏನ್ ಮಾಡಬೇಕೈತಿ ಗೊತ್ತನು?

ಪರಪ್ಪನ ಅಗ್ರಹಾರದಾಗ ಬೇರೆ ಬೇರೆ ಭಾಷಾ ಮಾತಾಡೂ ಭಾಳಾ ಮಂದಿ ಬರ್ತಿರ್ತಾರ. ಅವ್ರೆಲ್ಲ ಮೊದಲು ಹಿಂದಿ ಭಾಷ್ಯಾಗ್ ಮಾತಾಡೋದ್ ಕಲೀಬೇಕಾಗದ. ಅದಕ್ಕ ಕೈದಿಗಳು ಜೈಲು ಶಿಕ್ಷಾ ಅನುಭವ್ಸೋ ಮೊದ್ಲು ಹಿಂದಿ ಪಾಠ ಕಲೀಲೆ ಬೇಕಾ. ಬೇಕಾದ್ರ ಅದ್ನು ನೀವು ಶಿಕ್ಷಾದ ಒಂದು ಭಾಗ ಅಂದ್ಕೊಳ್ರಲಾ ಅನ್ನೂ ಆದೇಶ ಹೊರಡಸ್ ಬೇಕಾಗದ...

ನಮ್ ಕನ್ನಡ ಮಂದಿ ಮುದ್ದಿ, ರೊಟ್ಟಿ ಜೈಲಿನ ಹೊರಗ ಹ್ಯಾಗೂ ರಗಡ್ ತಿಂದಿರ್ತಾರಾ. ಅದಕ್ಕಾ ಅವುರಗ ಉತ್ತರ ಭಾರತೀಯ ಅಡಿಗಿ ಉಣ್ಣೂ ಶಿಕ್ಷೆ ಕೊಡಬೇಕ್ರಿಪಾ. ಬಾಯಾಗ್ ಬೆರಳಿಟ್ರ ಕಚ್ಚೂದಿಲ್ಲ ಅನ್ನೂ ಕನ್ನಡ ಮಂದಿ ಸಾಸಿವಿ ಎಣ್ಣೀ ಒಳಗ ಮಾಡಿದ್ ಪರೋಟ ತಿನ್ನೋದಿಲ್ಲಾ ಅಂತಾರೇನು? ಇಡೀ ಜೈಲದಾಗ ಭಾವೈಕ್ಯತಿ ಉಳೀಬೇಕ ಅಂದ್ರ ಒಳಗಿರೂ ಎಲ್ಲಾ ವೈವಿಧ್ಯತೆ ಅಳಿಸೋದ ಛಲೋ ಐತಿ. ಜೈಲಾಗ ಹಿಂದಿ ಮಾತಾಡೋ ಮಂದೀಗಾ ತುಸಾ ಶಿಕ್ಷಾದಾಗ ರಿಯಾಯ್ತಿ ಕೊಡಬೇಕು ಅಂತಲೂ ಶಿಫಾರಸ್ಸು ಮಾಡಬೇಕ್ರಿಪಾ.
ದಿನಾ ಹಿಂದಿ ಪತ್ರಿಕಾ ಓದೂದ ಕಡ್ಡಾಯ ಮಾಡಬೇಕ್ರಿಪಾ. ಒಟ್ನಾಗ ಜೈಲು ಶಿಕ್ಷಿ ಮುಗ್ಸಿ ಹೊರಗ್ ಬರೋ ಹೊತ್ತಿಗ ಕನ್ನಡದವ ಚಲೋ ಹಿಂದಿ ಪಂಡಿತ ಆಗಬೇಕ್ರಿಪಾ. ಯಾಕಂದ್ರಾ ಆಗ ಅಂವ ಇಡೀ ಭಾರತದ ಯಾವ ಜೈಲಾಗ್ ಬೇಕಾರ ಬಾಳಬಲ್ಲ ನೋಡ್ರಿ.
ಅಂದಹಾಂಗ ಸೆರಮನಿಯಾಗಿನ ಕಂಬೀನ ಒಂದು ಎರಡೂ ಎಣಿಸೋದು ಬಿಟ್ಟು ಏಕ್, ದೋ ಅನ್ನೂದು ಕೇಳಾಕ್ ಹತ್ತೈತೋ ಇಲ್ಲೋ ಗುರುಗಳಾ!

ಅನಿಯಂತ್ರಿತ ವಲಸೆ ಒಕ್ಕೂಟಕ್ಕೇ ಮಾರಕ

ಭಾರತೀಯ ಕಾಂಗ್ರೆಸ್ಸಿನ ಸೋನಿಯಾ ಮ್ಯಾಡಮ್ಮೋರು ಇತ್ತೀಚಿಗೆ ’ಪ್ರಾದೇಶಿಕವಾದ ಚಿಂತನೆ ಸಂಕುಚಿತ ಮನೋಭಾವವಾಗಿದೆ ಮತ್ತು ಅದು ದೇಶದ ಒಗ್ಗಟ್ಟಿಗೆ ಮಾರಕ. ಈ ದೇಶದಲ್ಲಿ ಯಾರು ಎಲ್ಲಿಗೆ ಬೇಕಾದರೂ ಹೋಗಿ ಬದುಕಬಹುದು. ವಲಸೆಯಿಂದ ಭಾರತದ ಒಗ್ಗಟ್ಟು ಹೆಚ್ಚುತ್ತದೆ’ ಎಂದಿದ್ದಾರೆ. ನಿಜವಾಗ್ಲೂ ಅನಿಯಂತ್ರಿತ ವಲಸೆಯಿಂದ ಭಾರತದ ಒಗ್ಗಟ್ಟು ಉಳ್ಯುತಾ ಅಥ್ವಾ ಮುರಿಯುತ್ತಾ ಅಂತ ಮೇಡಮ್ನೋರಿಗೆ ನಮ್ಮೂರ ಕಾಂಗ್ರೆಸ್ನೋರು ತಿಳಿಹೇಳ್ಬೇಕಾಗಿದೆ.

ಭಾಷಾವಾರು ಪ್ರಾಂತ್ಯ ರಚನೆ ಮತ್ತು ಪ್ರಾದೇಶಿಕತೆ

1929ರಲ್ಲಿ ನಡೆದ ಲಾಹೋರಿನ ಕಾಂಗ್ರೆಸ್ ಅಧಿವೇಶನದಲ್ಲೇ ಭಾರತವನ್ನು ಒಂದು ಪರಿಣಾಮಕಾರಿ ಒಕ್ಕೂಟವನ್ನಾಗಿಸಬೇಕಾದರೆ ಎಲ್ಲ ಭಾಷೆ, ಭಾಷಿಕ ಜನಾಂಗ ಮತ್ತು ಭಾಷಾ ಪ್ರದೇಶಗಳಿಗೆ ಸಮಾನವಾದ ಸ್ಥಾನಮಾನ ನೀಡುವ ಬಗ್ಗೆ ಪ್ರಸ್ತಾಪಿಸಲಾಯಿತು. ಹಾಗಾಗೇ ಎಲ್ಲಕ್ಕೂ ಸಮಾನ ಸ್ಥಾನ ನೀಡುವ ಭರವಸೆ ನೀಡಿಯೇ ಭಾರತ ಒಕ್ಕೂಟವನ್ನು ರಚಿಸಲಾಯಿತು. ಅಂದರೆ ಒಂದು ಪ್ರದೇಶದ ಆಡಳಿತ, ವ್ಯವಹಾರ, ವ್ಯವಸ್ಥೆಗಳೆಲ್ಲಾ ಅಲ್ಲಿನ ಜನರ ಭಾಷೆಯಲ್ಲಿಯೇ ನಡೆಯುವುದು ಸರಿಯಾದದ್ದು ಎನ್ನುವ ನಿಲುವು ತಳೆಯಲಾಯಿತು. ಆ ಕಾರಣಕ್ಕಾಗಿಯೇ ಸ್ವತಂತ್ರ ಬಂದು ಭಾರತವು ಒಕ್ಕೂಟ ರಾಷ್ಟ್ರವಾದ ನಂತರ ಭಾಷಾವಾರು ರಾಜ್ಯಗಳನ್ನು ರಚಿಸಲಾಯಿತು. ಪ್ರತಿ ಪ್ರದೇಶದ ಅನನ್ಯತೆಯನ್ನು ಉಳಿಸಿ ಬೆಳೆಸಿ ವೈವಿಧ್ಯತೆಯಲ್ಲಿ ಏಕತೆ ಎಂದೂ ಹೇಳಿಕೊಳ್ಳಲಾಯಿತು.

ವಲಸೆ ಮತ್ತು ಅನನ್ಯತೆ

ಒಂದು ಪ್ರದೇಶಕ್ಕೆ ವಲಸೆ ಬರುವ ಪರಭಾಷಿಕ ತನ್ನ ಜೊತೆ ತನ್ನ ಭಾಷೆ, ಸಂಸ್ಕೃತಿ, ಆಚರಣೆಗಳೆಲ್ಲವನ್ನೂ ಹೊತ್ತು ತರುತ್ತಾನೆ. ಅವುಗಳನ್ನು ತನ್ನ ಮನೆಯ ಒಳಗೆ ಮಾತ್ರಾ ಇಟ್ಟುಕೊಳ್ಳದೆ ತನ್ನ ಸುತ್ತಲಿನ, ತಾನು ವಲಸೆ ಬಂದ ನಾಡಿನ ಸಮಾಜಕ್ಕೂ ಅಂಟಿಸಲು ಹೋದರೆ ಮಾತ್ರಾ ಸಮಸ್ಯೆ ಉಂಟಾದೀತು. ಮುಂಬೈ ಮಹಾನಗರ ಪಾಲಿಕೆ ಆಳ್ವಿಕೆಯ ಆಡಳಿತ ಅಲ್ಲಿಗೆ ವಲಸೆ ಬಂದವರ ಭಾಷೆಯಲ್ಲಿ ಇರಬೇಕು ಎಂದು ಒತ್ತಾಯ ಮಾಡುವ ಸ್ಥಿತಿ ಆಗ ಬರೋದು. ವಲಸಿಗ ಯಾವ ಊರನ್ನೂ ಉದ್ಧಾರ ಮಾಡಲು ವಲಸೆ ಬರೋದಿಲ್ಲ. ಬದಲಾಗಿ ಬೆಳೀತಿರೋ ಊರಲ್ಲಿ ತಾನು ಉದ್ಧಾರ ಆಗೋಕ್ಕಿರೋ ಅವಕಾಶ ಹುಡ್ಕೊಂಡು ತನ್ನ ಬೇಳೆ ಬೇಯುಸ್ಕೊಳಕ್ಕೆ ಬರ್ತಾನೆ. ಹಾಗೆ ಬಂದೋನು ಆ ಪ್ರದೇಶ ಹೊಂದಿರುವ ಭಾಷೆ, ಸಂಸ್ಕೃತಿ, ಆಚರಣೆಗಳ ಅನನ್ಯತೆಗಳಿಗೆ ಮಾರಕವಾಗಿ ನಡೆದುಕೊಳ್ಳುವುದು ತಪ್ಪಲ್ವೇನು?

ವಲಸೆ ಮತ್ತು ಉದ್ಯೋಗ

ಈಗಾಗಲೇ ನಮ್ಮಲ್ಲಿ ಒಂದು ಕೆಲಸಕ್ಕೆ ಬೇಕಾದ ಪರಿಣಿತಿ ಇರೋನು ಇದ್ದಾಗ ಅದೇ ಕೆಲಸಕ್ಕೆ ಒಬ್ಬ ವಲಸೆ ಬರುವುದು ಎಂದರೆ ಆ ಮಣ್ಣಿನ ಮಕ್ಕಳಲ್ಲಿ ಒಬ್ಬನ ಉದ್ಯೋಗ ಅವಕಾಶಕ್ಕೆ ಕಲ್ಲು ಬಿದ್ದಹಾಗಾಗುತ್ತದೆ. ವಲಸೆ ಬಂದ ವ್ಯಕ್ತಿಗಳು ಒಂದು ಸಂಸ್ಥೆಯಲ್ಲಿ ಉನ್ನತ ಸ್ಥಾನ ಪಡೆದರೆ ತಮ್ಮ ನಾಡಿನಿಂದ ಮತ್ತಷ್ಟು ಜನರು ವಲಸೆ ಬರಲು ಪ್ರೇರಣೆ ನೀಡುವ ಮೂಲಕ ಸ್ಥಳೀಯರ ಮತ್ತಷ್ಟು ಉದ್ಯೋಗಾವಕಾಶಗಳನ್ನು ಮಣ್ಣುಪಾಲು ಮಾಡಲು ಕಾರಣರಾಗುತ್ತಾರೆ. ಬೆಂಗಳೂರಿನಲ್ಲಿ ಇಂಥಾ ಸಂಸ್ಥೆ ಆರಂಭವಾಗುತ್ತದೆ, ಇದಕ್ಕೆ ಇಷ್ಟು ಜಮೀನು ವಶ ಮಾಡ್ಕೋತೀವಿ ಅಂತನ್ನೋರು ಆ ಉದ್ಯೋಗಗಳು ಯಾರಿಗೆ ಸಿಗ್ತಿವೆ ಅನ್ನೋದನ್ನು ಕೂಡಾ ಹೇಳ್ಬೇಕಾಗುತ್ತೆ. ನಮ್ಮ ಮನೆ ಮಕ್ಕಳ ಬದುಕನ್ನು ಬೀದಿಪಾಲು ಮಾಡಿ ಯಾರೋ ಕಂಡು ಕೇಳರಿಯದವನಿಗೆ ಕೆಲಸದ ಅವಕಾಶ ಮಾಡಿಕೊಡೋದು ಸರೀನಾ? ನಿಜಕ್ಕೂ ಅನಿಯಂತ್ರಿತ ವಲಸೆಗೆ ಕಡಿವಾಣ ಬೇಕು.

ಪ್ರಾದೇಶಿಕ ಚಿಂತನೆ ಮತ್ತು ಒಗ್ಗಟ್ಟು

ನಾನಾ ಭಾಷಾ ಸಮುದಾಯಗಳು ಒಂದು ಒಕ್ಕೂಟದಲ್ಲಿ ಇರುವಾಗ ಆ ಒಕ್ಕೂಟ ವ್ಯವಸ್ಥೆ ಹೇಗಿರಬೇಕು ಅನ್ನೋದ್ನ ಅರ್ಥ ಮಾಡ್ಕೋಬೇಕಿದೆ. ಒಕ್ಕೂಟದ ಅಂಗವಾದ ಎಲ್ಲ ಪ್ರದೇಶಗಳೂ ಭಾರತದ ಜೊತೆ ಕೊಟ್ಟು ತೆಗೆದುಕೊಳ್ಳೋ ಪರಸ್ಪರ ಲಾಭದ ಸಿದ್ಧಾಂತವೇ ಒಕ್ಕೂಟದ ತಳಹದಿ ಆಗಬೇಕಿದೆ. ಪ್ರತಿ ಪ್ರದೇಶದ ಜನಸಮುದಾಯದ ಏಳಿಗೆಯ ಸ್ವಾತಂತ್ರ ಆ ಪ್ರದೇಶಗಳಿಗೆ ಇರಬೇಕಾಗಿದೆ. ಆಯಾ ಪ್ರದೇಶಗಳ ಜನತೆಯ ಏಳಿಗೆಯ ಜೊತೆಗೆ ತಮ್ಮ ಭಾಷೆ, ಸಂಸ್ಕೃತಿ, ಆಚರಣೆಗಳನ್ನು ಉನ್ನತಿಗೇರಿಸುವ ಹಕ್ಕು ನೀಡಬೇಕಾಗಿದೆ. ಕನ್ನಡಿಗರು ಕರ್ನಾಟಕವನ್ನು, ತಮಿಳರು ತಮಿಳುನಾಡನ್ನೂ, ಪಂಜಾಬಿಗಳು ಪಂಜಾಬನ್ನೂ ಉದ್ಧಾರ ಮಾಡಬೇಕಾಗಿದೆ. ಆ ಮೂಲಕವೇ ಭಾರತ ಬಲಿಷ್ಠವಾಗಬೇಕಾಗಿದೆ.
ಪ್ರಾದೇಶಿಕ ಚಿಂತನೆಯೆಂದರೇ ಪರಭಾಷೆಗಳ ಬಗ್ಗೆ ಅಸಹನೆ, ದ್ವೇಷ ಅಂದುಕೊಳ್ಳುವುದು ಮತ್ತು ಆ ಕಾರಣದಿಂದ ಒಕ್ಕೂಟ ವ್ಯವಸ್ಥೆ ಕುಸಿಯುವುದು ಎನ್ನುವುದು ತಪ್ಪು ಕಲ್ಪನೆಯಾಗಿದೆ. ನಿಜವಾದ ಒಗ್ಗಟ್ಟಿಗೆ ಕಾರಣವಾಗುವುದು ಪ್ರತಿ ಪ್ರದೇಶದ ಅನನ್ಯತೆಯನ್ನು ಕಾಯ್ದುಕೊಳ್ಳುವ ಭರವಸೆ, ಪ್ರತಿ ಪ್ರದೇಶದ ಜನರಿಗೂ ಉದ್ಯೋಗ ಅವಕಾಶದ, ಏಳಿಗೆಯ ಅವಕಾಶ ಒದಗಿಸಿಕೊಡುವುದರಲ್ಲಿದೆಯೇ ಹೊರತು ಒಂದು ಸಮೃದ್ಧ ಪ್ರದೇಶದ ಸ್ವತ್ತನ್ನು ಏಳಿಗೆ ಹೊಂದಿರದ ಪ್ರದೇಶದ ಜನರಿಗೆ ಹಂಚುವುದರಲ್ಲಿ ಅಲ್ಲ. ಬಿಹಾರದಂತಹ ಪ್ರದೇಶಗಳ ಗುಳೆ ಹೋಗುವ ಜನರ ಏಳಿಗೆಗೆ ದಾರಿ, ಅವರನ್ನು ಬೇರೆ ಬೇರೆ ಪ್ರದೇಶಗಳಿಗೆ ವಲಸೆ ಹೋಗಲು ಪ್ರೇರೇಪಿಸುವುದರಲ್ಲಿ ಇಲ್ಲ. ಬದಲಾಗಿ ಅವರ ನೆಲದಲ್ಲೇ ಉದ್ದಿಮೆಗಳ ಉದ್ಯೋಗಗಳ ಅವಕಾಶ ಒದಗಿಸಿಕೊಡುವುದರಲ್ಲಿದೆ. ಏನಂತೀ ಗುರು?

ಚಿನ್ನಕ್ಕೂ ಹಿಡೀತಲ್ಲಪ್ಪೋ ತುಕ್ಕು!


ಕರ್ನಾಟಕದ ಸಂಸ್ಕೃತಿ ಮೆರುಸ್ತೀವಿ ಅಂದ್ಕೊಂಡು ನಮ್ಮೂರಿಗೆ ಕಾಲಿಟ್ಟಿರೋ ಸುವರ್ಣ ಎಂಬ ಅಪ್ಪಟ 24 ಕ್ಯಾರೆಟ್(?) ಚಿನ್ನಕ್ಕೂ ಹಿಂದಿ ಹೇರಿಕೆ ಮಾಡೋ ತುಕ್ಕು ಹಿಡ್ಯಕ್ ಶುರು ಆಗಿದೆಯಲ್ಲಾ ಗುರು, ಏನ್ಮಾಡಣಾ?
ಏಷಿಯಾ ನೆಟ್ ಎಂಬ ಮಲಯಾಳಿ ಮಾಲಿಕತ್ವದ ಈ ಖಾಸಗಿ ವಾಹಿನಿಯಲ್ಲಿ ಹಾಡುಗಾರಿಕೆ ಸ್ಪರ್ಧೆಯೊಂದನ್ನು ನಡುಸ್ತಾ ಇದಾರೆ. "ಕಾನ್ಫಿಡೆಂಟ್ ಸ್ಟಾರ್ ಸಿಂಗರ್" ಅನ್ನೋ ಕಾರ್ಯಕ್ರಮ ಅದು. ಅದರಲ್ಲಿ ಈಗ ಹೊಸದಾಗಿ ಸ್ಪರ್ಧಿಗಳಿಂದ ಹಿಂದಿ ಸಿನಿಮಾ ಹಾಡುಗಳನ್ನು ಹಾಡಿಸಲು ಮುಂದಾಗಿದಾರೆ. ಗಮನಿಸಿ, ಕನ್ನಡದಲ್ಲಿ ಇರೋ ಯಾವ ವಾಹಿನಿಯೂ ಇಂತಹ ಒಂದು ಕ್ರಮಕ್ಕೆ ಇದುವರೆಗೂ ಮುಂದಾಗಿರಲಿಲ್ಲ. ಈ ಟಿವಿಯಲ್ಲಿ ಬರ್ತಿರೋ ಎದೆ ತುಂಬಿ ಹಾಡಿದೆನು ಕಾರ್ಯಕ್ರಮದಲ್ಲಿ ಗಾಯಕ ಬಾಲಸುಬ್ರಮಣ್ಯಂರವರು ಮಧ್ಯೆ ಮಧ್ಯೆ ಆಗಾಗ ಪರಭಾಷಾ ಹಾಡುಗಳನ್ನು/ಆಲಾಪಗಳನ್ನ ಹಾಡ್ತಿದ್ರು. ಅದೇ ಮೊಸರನ್ನ ತಿನ್ನೋವಾಗ ಬಾಯಿಗೆ ಸಿಗೋ ಕಲ್ಲಾಗಿದ್ದರೆ ಈಗ ಸುವರ್ಣದವರು ಕೈಗೊಂಡಿರೋ ನಿಲುವು ಕನ್ನಡಿಗರ ತಲೆ ಮೇಲೇ ಎತ್ತಿ ಹಾಕಕ್ಕೆ ಹೊರಟಿರೋ ಹಿಂದಿ ಹೇರಿಕೆಯೆನ್ನುವ ಚಪ್ಪಡಿ ಕಲ್ಲಾಗಿದೆ.
ಯಾಕೆ ಬೇಡ ಈ ಕ್ರಮ? ಈ ಕಾರ್ಯಕ್ರಮ?

ಸುವರ್ಣದವರು ಈ ಬೆಳವಣಿಗೇನ ಹೇಗೆ ಸಮರ್ಥಿಸಿಕೊಳ್ತಿದಾರೆ ಅಂದರೆ ಕನ್ನಡವರು ಎಗರಿ ಬಿದ್ದು ಅವರ ಕಾಲಿಗೆ ಉದ್ದಂಡ ನಮಸ್ಕಾರ ಹಾಕ್ಬಿಡಬೇಕು. ನಮ್ಮ ಕನ್ನಡದ ಗಾಯಕ ಗಾಯಕಿಯರಿಗೆ ಹಿಂದಿ ಹಾಡುಗಳನ್ನು ಹೇಳುವ ಮೂಲಕ ಹೆಚ್ಚಿನ ಅವಕಾಶಗಳು ಸಿಗುತ್ವಂತೆ. ಅಲ್ಲಾರೀ, ಸೋನು ನಿಗಮ್ಮು, ಕುನಾಲ್ ಗಾಂಜಾವಾಲ, ಶ್ರೇಯಾ ಹತ್ರ ಕನ್ನಡದಲ್ಲಿ ಹಾಡ್ಸಕ್ಕೆ ಮೊದಲು ಅವ್ರೆಲ್ಲಾ ಕನ್ನಡದಲ್ಲಿ ಹಾಡೋದ್ನ ಕಲೀಲಿ ಅಂತಾ ಯಾರಾನಾ ಕೇಳಿದ್ರಾ? ಅಥವಾ ಸ್ಪರ್ಧೆಗಳಲ್ಲಿ ಅವ್ರುಗಳು ಕನ್ನಡದಲ್ಲಿ ಹಾಡಿದ್ರಾ?
ಕನ್ನಡದ ಸ್ಪರ್ಧಿಗಳ ಹತ್ರ ಹಿಂದಿ ಹಾಡುಗಳ್ನಾ ಹಾಡ್ಸೋ ಈ ಕ್ರಮ ಯಾಕೆ ಮನೆ ಹಾಳುತನದ್ದಾಗಿದೆ ಅಂದ್ರೆ ಇವರುಗಳು ಹಿಂದಿ ಹಾಡುಗಳ್ನ ಕಲೀದೆ ಇದ್ರೆ ಆ ಸ್ಪರ್ಧೆಯಿಂದ ದೂರ ಉಳೀಬೇಕಾಗುತ್ತೆ. ಇವತ್ತು ಹಿಂದೀಲೂ ಹಾಡಿ ಅನ್ನೋರು ನಾಳೆ ಹಿಂದೀಲೇ ಹಾಡಿ ಅನ್ತಾರೆ.
ಈ ಕಾರ್ಯಕ್ರಮದಲ್ಲಿ ಹಿಂದಿ ಚಿತ್ರಗೀತೆ ಹಾಡುವಾಗ ಆಯಾ ಹಾಡುಗಳ ಪರಿಚಯ ಮಾಡಿಕೋಡೋ ನೆಪದಲ್ಲಿ ಇವತ್ತು ಹಿಂದಿ ಸಿನಿಮಾಗಳ ಬಗ್ಗೆ ಮಾತಾಡ್ತಾರೆ, ನಾಳೆ ಹಿಂದಿ ಉಚ್ಚರಣೆ ಬಗ್ಗೆ, ಹಿಂದಿ ಸಿನಿಮಾ ರಂಗದ ಬಗ್ಗೆ ಮಾತಾಡ್ತಾರೆ, ನಾಡಿದ್ದು ಹಿಂದೀಲೇ ಮಾತಾಡ್ತಾರೆ. ಇವತ್ತು ಒಂದು ಹಾಡಿನ ಸ್ಪರ್ಧೆ ಹಿಂದೀಲಿ ಮಾಡೋರು, ನಾಳೆ ಹಿಂದೀಲೆ ವಾಹಿನಿಯ ಅರ್ಧ ಕಾರ್ಯಕ್ರಮಗಳನ್ನು ಮಾಡಕ್ ಮುಂದಾಗ್ತಾರೆ. ಇದೆಲ್ಲಕ್ಕಿಂತ ದೊಡ್ಡ ಅಪಾಯ ಅಂದ್ರೆ ಈ ಸುವರ್ಣ ಟಿವಿ ನೋಡ್ಕೊಂಡು ಉಳಿದ ಚಾನೆಲ್ಲುಗಳೂ ಇದೇ ಚಾಳಿ ಅನುಸರಸಕ್ಕೆ ಶುರು ಹಚ್ಕೊಂಡ್ರೆ ಇವುಗಳಲ್ಲಿ ಕನ್ನಡ ಅಧೋಗತಿ ಆಗೋದ್ರಲ್ಲಿ ಅನುಮಾನಾನೆ ಇರಲ್ಲ. ಮನರಂಜನೆ ಮೂಲಕ ಹಿಂದಿ ಹೇರೋದು ಅಂದ್ರೆ ಇದೇ ಅಲ್ವಾ ಗುರುಗಳೇ?

ಇದು ನಮಗೆ ಬೇಡ ಅಂತ ಇವತ್ತೇ ದನಿ ಎತ್ತೋಣ ಬನ್ನಿ.
ಸುವರ್ಣ ವಾಹಿನಿಯ ಮುಖ್ಯಸ್ಥರುಗಳಿಗೆ ಒಂದು ಮಿಂಚೆ ಕಳಿಸಿ, ನಮ್ಮ ಆತಂಕವನ್ನು ವಿವರಿಸೋಣ. ಕನ್ನಡ ವಿರೋಧಿಯಾದ ಈ ನಿಮ್ಮ ಧೋರಣೆಗೆ ನಮ್ಮ ವಿರೋಧವಿದೆ, ನಿಮ್ಮ ಈ ಕ್ರಮ ಕನ್ನಡಿಗರ ಮೇಲೆ ಹಿಂದಿ ಹೇರಿಕೆ ಮಾಡುವ ಹೇಯಕೃತ್ಯ, ಇದನ್ನು ನಾವು ವಿರೋಧಿಸ್ತೀವಿ ಅಂತ ಸಾರಿ ಹೇಳೋಣ. ಚಿನ್ನ ಆಗೋ ಅವಕಾಶ ಕೈಬಿಟ್ಟು ತುಕ್ಕನ್ನು ಹಿಡ್ಸಿಕೊಳ್ಳೋಕೆ ಮುಂದಾಗಿರೋ ಸುವರ್ಣದವರಿಗೆ ನಮ್ಮ ಅನಿಸಿಕೆಗಳನ್ನು ಇಂದೇ ಮುಟ್ಟಿಸೋಣ. ಏನಂತೀ ಗುರು?

ಕನ್ನಡಿಗರ ತೆಕ್ಕೆಗೆ ಬೆಳಗಾವಿ ಪಾಲಿಕೆ

ಚೆನ್ನಮ್ಮನ, ರಾಯಣ್ಣನ, ಮಲ್ಲವ್ವನ ಬೆಳಗಾವಿಯು ಮಹಾರಾಷ್ಟ್ರ ಏಕೀಕರಣ ಸಮಿತಿಯ ಕಪಿಮುಷ್ಟಿಯಿಂದ ಬಿಡುಗಡೆ ಕಂಡಿದೆ. ಇದೀಗ ಅಲ್ಲಿನ ಮೇಯರ್ ಮತ್ತು ಉಪಮೇಯರ್ ಪಟ್ಟಗಳು, ಇತ್ತೀಚಿಗೆಂದೂ ತೋರಿರದ ಒಗ್ಗಟ್ಟು ತೋರಿದ್ದಕ್ಕೆ ಮತ್ತೆ ಕನ್ನಡಿಗರ ತೆಕ್ಕೆಗೆ ಒಲಿದು ಬಂದಿದೆ.

ಹದಿನೇಳು ವರುಷ ವನವಾಸದಿಂದ...

1984ರಲ್ಲಿ ಬೆಳಗಾವಿ ನಗರ ಪಾಲಿಕೆ ಅಸ್ತಿತ್ವಕ್ಕೆ ಬಂತು. ಆಗಿಂದ್ಲೂ ಇಲ್ಲಿನ ಮೇಯರುಗಳು ಎಂ.ಇ.ಎಸ್ ಪಕ್ಷದವರೇ. ಒಂದು ಸರ್ತಿ ಮಾತ್ರ 1991ರಲ್ಲಿ ಹಿರಿಯರಾದ ಸಿದ್ಧನ ಗೌಡ ಪಾಟೀಲರು ಆರಿಸಿ ಬಂದಿದ್ದರು. ಆಗ ರಾಜ್ಯದಲ್ಲಿ ಬಂಗಾರಪ್ಪನವರ ಸರ್ಕಾರವಿತ್ತು. ಹದಿನೇಳು ವರ್ಷಾ ಅಯ್ತು, ಮತ್ತೆ ಕನ್ನಡಿಗರೊಬ್ಬರು ಅಲ್ಲಿ ಮೇಯರ್ ಆಗಲು. ಇದೀಗ ಮತ್ತೆ ಕನ್ನಡತಿಯಾದ ಪ್ರಶಾಂತ ಬುಡವಿ ಅವರು ಆರಿಸಿ ಬಂದಿದಾರೆ. ಉಪಮೇಯರ್ ಆಗಿ ಕನ್ನಡಿಗರಾದ ಯೂನುಸ್ ಮೋಮಿನ್ ಅವರು ಆಯ್ಕೆಯಾಗಿ ಬಂದಿದ್ದಾರೆ.

ಬೆಳಗಾವೀಲಿ ಕನ್ನಡಿಗರ ಸಂಖ್ಯೆ ಹೆಚ್ಚಿತೇನು?

ಇಷ್ಟು ದಿನ ಇಲ್ಲದ್ದು ಈಗ ಕನ್ನಡದೋರು ಗೆದ್ದು ಬರಬೇಕು, ಎಲ್ರಿಗಿಂತ ಹೆಚ್ಚು ಮತ ಗಳಿಸಬೇಕು ಅಂದ್ರೆ, ಬೆಳಗಾವಿಯಲ್ಲಿ ಇದ್ದಕ್ಕಿದ್ದ ಹಾಗೆ ಕನ್ನಡಿಗರ ಜನಸಂಖ್ಯೆ ಹೆಚ್ಚಿ ಬಿಡ್ತೇನು? ಅದು ಸಾಧ್ಯವೇ ಇಲ್ಲ ಅಂತೀರಾ? ಹಿಂದಿನ ಚುನಾವಣೆಗಳಲ್ಲಿ ಇದ್ದ ಕನ್ನಡಿಗರ ಪ್ರಮಾಣವೇನು ಮಾಯಾಜಾಲದಂತೆ ಬದಲಾಗಲಿಲ್ಲ. ಆದರೆ ಕನ್ನಡಿಗ ಬದಲಾದ. ಬಹುದಿನಗಳಿಂದ ಮೈ ಮರೆವೆಯಿಂದ ಕೂಡಿದ್ದ ಕೊಳೆಯಾ ಕೊಚ್ಚಿ ಎದ್ದು ನಿಂತ. ನಿಜವಾಗ್ಲೂ ಆಗಿದ್ದು ಕನ್ನಡಿಗರಲ್ಲಿ ಕನ್ನಡತನದ ಜಾಗೃತಿ. ಇದನ್ನು ಮಾಡಿದೋರು?

ಗೆಲುವಿನ ಕಾರಣ: ಹೋರಾಟ, ಜಾಗೃತಿ, ಸಂಘಟನೆ ಮತ್ತು ಒಗ್ಗಟ್ಟು

ಈ ಜಾಗೃತಿಯನ್ನು ಮಾಡಿದ್ದು ಕನ್ನಡಪರ ಸಂಘಟನೆಗಳು ಅಂತ ಅನೇಕ ಮಾಧ್ಯಮಗಳು ಬರೆದಿವೆ. ಆದರೆ ಇದನ್ನು ಮಾಡಿದ್ದು ಕರ್ನಾಟಕ ರಕ್ಷಣಾ ವೇದಿಕೆಯೆಂಬ ಗಂಡುಗಲಿ ನಾಡಭಕ್ತರ ಪಡೆ ಎಂದು ಬರೆಯಲು ಅದ್ಯಾಕೋ ಇವು ಹಿಂದೆ ಮುಂದೆ ನೋಡಿದ್ವು. ಬೆಳಗಾವಿಯ ಕನ್ನಡಿಗ ಎಲ್ಲ ಮುಗೀತು ಅಂತ ಕೈಚೆಲ್ಲಿ ಕುಳಿತಿದ್ದು, ಅಂದು 2005ರಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಲು ನಿರ್ಣಯ ಮಂಡಿಸಿದಾಗ. ಇದರ ವಿರುದ್ಧ ಕರ್ನಾಟಕದ ಯಾವ ರಾಜಕೀಯ ಪಕ್ಷವೂ, ನಾಯಕ ಶಿಖಾಮಣಿಗಳೂ, ಕನ್ನಡ ಪರ ಸಂಘಟನೆಗಳೂ ದನಿ ಎತ್ತದೆ ಇದ್ದಾಗ ತನ್ನದೇ ಆದ ರೀತಿಯಲ್ಲಿ ಪ್ರತಿಭಟಿಸಿದ್ದು ಕರ್ನಾಟಕ ರಕ್ಷಣಾ ವೇದಿಕೆ.

ಬೆಂಗಳೂರಿಗೆ ಬಂದಿದ್ದ ಅಂದಿನ ಮೇಯರ್ ವಿಜಯ್ ಮೋರೆಯ ಮೂತಿಗೆ ಮಸಿ ಬಳಿದ ಘಟನೆ ಬೆಳಗಾವಿಯ ಕನ್ನಡಿಗರಿಗೆ ಹೊಸ ಶಕ್ತಿಯ ಸಂಚಯನವಾಗಲು ನೆಪವಾಯಿತು. ಆ ದಿನಗಳಲ್ಲಿ "ತಾಕತ್ತಿದ್ದರೆ ಬೆಳಗಾವಿಗೆ ಕಾಲಿಡಲಿ" ಎನ್ನುವ ನೇರ ಸವಾಲನ್ನು ದಿಟ್ಟವಾಗಿ ಎದುರಿಸಿ, ಬೆಳಗಾವಿಯಲ್ಲಿ ತೊಡೆ ತಟ್ಟಿ ನಿಂತು ಕನ್ನಡಿಗರನ್ನು ಸಂಘಟಿಸಿದ್ದು ರಕ್ಷಣಾ ವೇದಿಕೆಯ ನಾರಾಯಣ ಗೌಡ್ರು.

ಬೆಳಗಾವಿಯಲ್ಲಿ ಇತ್ತೀಚಿಗೆಂದೂ ಆಗಿಲ್ಲದ ವೇಗದಲ್ಲಿ ಕನ್ನಡಿಗರನ್ನು ಒಗ್ಗೂಡಿಸುವ ಕೆಲಸಗಳು ಆರಂಭವಾದವು. ಕನ್ನಡವೇ ಸತ್ಯ ಕಾರ್ಯಕ್ರಮ ನಡೆಸಿ 25000ಕ್ಕೂ ಹೆಚ್ಚು ಕನ್ನಡಿಗರನ್ನು ಒಗ್ಗೂಡಿಸಿ ಹಳದಿ ಕೆಂಪು ಬಾವುಟಗಳನ್ನು ಬೆಳಗಾವಿಯಲ್ಲಿ ಪಟಪಟಿಸುವಂತೆ ಮಾಡಲಾಯಿತು. ಎ.ಪಿ.ಎಂ.ಸಿ ಚುನಾವಣೆ ಇರಲಿ, ಸಂಸದರ ಕನ್ನಡ ವಿರೋಧಿ ನಿಲುವಿರಲಿ ಅವುಗಳ ವಿರುದ್ಧ ದನಿ ಎತ್ತಿ ಹೋರಾಡಿದ್ದು, ವಿಧಾನ ಸಭಾ ಅಧಿವೇಶನಕ್ಕಾಗಿ ವಿಧಾನ ಸೌಧವನ್ನು ನಿರ್ಮಿಸಲು ಒತ್ತಾಯಿಸಿ ಅಮರಣಾಂತ ಉಪವಾಸ ನಡೆಸಿದ್ದು, ನಿಪ್ಪಾಣಿ, ಖಾನಾಪುರಗಳಂತಹ ಕೊನೆ ಊರಿನಲ್ಲೂ ಕನ್ನಡಿಗರನ್ನು ಸಂಘಟಿಸಿದ್ದು, ಕನ್ನಡಿಗರ ಈ ಒಗ್ಗಟ್ಟು ಮರಾಠಿಗರ ವಿರುದ್ಧವಲ್ಲಾ, ನಾಡು ಒಡೆಯುವ ದನಿ ಎತ್ತುವವರ ವಿರುದ್ಧ ಎಂದು ಬೆಳಗಾವಿಯ ಜನ ಸಾಮಾನ್ಯರಲ್ಲಿ ಮನವರಿಕೆ ಮಾಡಿಕೊಟ್ಟು ಬೆಳಗಾವಿ ಕನ್ನಡಿಗರದ್ದು ಎಂಬ ಭರವಸೆಯನ್ನು ಬೆಳಗಾವಿಯ ಕನ್ನಡಿಗರಲ್ಲಿ ಮೂಡಿಸಿದ್ದು... ಕರ್ನಾಟಕ ರಕ್ಷಣಾ ವೇದಿಕೆಯೇ. ಈ ದಿನ ಬೆಳಗಾವಿ ನಗರ ಪಾಲಿಕೆಯ ಮೇಲೆ ಕನ್ನಡದ ಹಳದಿ, ಕೆಂಪು ಬಾವುಟ ಹಾರಲು ಸಾಧ್ಯವಾಗಿರುವುದು ಕರ್ನಾಟಕ ರಕ್ಷಣಾ ವೇದಿಕೆ ಮಾಡಿದ ಜಾಗೃತಿ, ಸಂಘಟನೆಗಳೇ ಕಾರಣದಿಂದಲೇ.

ರಾಯಣ್ಣನ ತವರಲ್ಲಿ ಹೊತ್ತಿದ ಈ ಕಿಡಿ ನಾಡಲೆಲ್ಲ ಹಬ್ಬಲಿ

ಸಂಗೊಳ್ಳಿ ರಾಯಣ್ಣನ ತವರಲ್ಲಿ ಹೊತ್ತಿಕೊಂಡಿರುವ ಈ ಸ್ವಾಭಿಮಾನದ ಕಿಡಿ ಕನ್ನಡನಾಡಿನ ಮನೆ ಮನೆಗಳಲ್ಲಿ, ಮನ ಮನಗಳಲ್ಲಿ ಹೊತ್ತಿಕೊಳ್ಳುವ ದಿನ ದೂರವಿಲ್ಲ. ಕನ್ನಡತನ ಬಡಿದೆಬ್ಬಿಸುವ ನಿಟ್ಟಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಯಶಸ್ವಿಯಾಗಲಿ ಎಂಬುದು ನಮ್ಮ ಹಾರೈಕೆ. ನಿಮ್ಮದೂ ಒಂದು ಹಾರೈಕೆ ಇರಲಿ ಗುರು...

ಇವತ್ತು ಹಿಂದೀಲೂ, ನಾಳೆ ಹಿಂದೀಲಿ ಮಾತ್ರಾ!

ಕರ್ನಾಟಕ ರಾಜ್ಯದ ಮುಂಗಡ ಪತ್ರವನ್ನು ಹಿಂದಿ ಭಾಷೇಲೂ ತರಕ್ಕೆ ಸರ್ಕಾರ ಈ ಬಾರಿ ಮುಂದಾಗಿರೋ ಸುದ್ದಿ ವರದಿಯಾಗಿದೆ. ರಾಜ್ಯದಲ್ಲಿ ಚುನಾಯಿತ ಸರ್ಕಾರ ಇಲ್ಲದೆ ರಾಜ್ಯಪಾಲರ ಆಳ್ವಿಕೆ ಇದೆ ಅನ್ನೋದನ್ನು ನೆಪ ಮಾಡ್ಕೊಂಡು ಈ ಬಾರಿಯ ಮುಂಗಡ ಪತ್ರವನ್ನು ಕನ್ನಡ, ಇಂಗ್ಲಿಷ್ ಜೊತೆಯಲ್ಲಿ ಹಿಂದಿಯಲ್ಲೂ ತರ್ತಿದಾರೆ. ಕನ್ನಡದಲ್ಲಿ ಇದ್ದಮೇಲೆ ಇನ್ಯಾವ ಭಾಷೇಲ್ಲಿ ತಂದ್ರೂ ನಮಗೇನು ಅಂತ ಮೇಲ್ನೋಟಕ್ಕೆ ಅನ್ನುಸ್ಬೋದು. ಆದ್ರೆ ಈ ಒಂದು ನಡೆಯ ಮೂಲಕ ಕೇಂದ್ರ ಸರ್ಕಾರ ಯಾವ ಸಂದೇಶ ಕೊಡ್ತಿದೆ ಅಂತ ಚೂರು ಅರ್ಥ ಮಾಡ್ಕೊಳ್ಳೋಣ.

ಇವತ್ತು ಹಿಂದಿಯಲ್ಲೂ ಇರುವುದು ನಾಳೆ ಬರೀ ಹಿಂದಿಯಲ್ಲಿ ಬಂದೀತು!

ಈ ಮುಂಗಡ ಪತ್ರ ಅನ್ನೋದು ಆಡಳಿತದ ಒಂದು ಭಾಗ ಮಾತ್ರ. ರಾಜ್ಯಪಾಲರ ಆಳ್ವಿಕೆ ಇದೆ ಅನ್ನೋ ಕಾರಣಕ್ಕೇ ಇದನ್ನು ಹಿಂದಿ ಭಾಷೆಯಲ್ಲಿ ತರೋ ಪ್ರಯತ್ನ ಅನಗತ್ಯವಾದ ಆರ್ಥಿಕ ಹೊರೆ ಮಾತ್ರವಲ್ಲದೆ, ಭಾರತದಲ್ಲಿ ಹಿಂದಿಯಲ್ಲಿಲ್ಲದ ದಾಖಲೆಗಳು ಅಪೂರ್ಣವೆನ್ನುವ ಸಂದೇಶ ಕೊಡುತ್ತಿರುವುದು ಸರಿಯಲ್ಲ. ಭಾರತಕ್ಕೆ ಅಧಿಕೃತ ಸಂಪರ್ಕ ಭಾಷೆಯಾಗಿ ಹಿಂದಿ ಯಾಕೆ? ಹಾಗೆ ಇನ್ನೊಂದು ಭಾಷೇಲಿ ತರೋದೆ ಆಗಿದ್ದಲ್ಲಿ ಎಲ್ಲ ಭಾರತೀಯ ಭಾಷೆಗಳಲ್ಲಿ ತರಬೇಕಿತ್ತಲ್ಲವಾ? ಕನ್ನಡಕ್ಕಿಂತ ಹಿಂದಿಗೆ ಹೆಚ್ಚಿನ ಸ್ಥಾನ ಕಲ್ಪಿಸುತ್ತಿರುವ ಇದು ಹೇರಿಕೆಯಲ್ಲದೇ ಮತ್ತೇನು? ಅಷ್ಟಕ್ಕೂ ಇದನ್ನು ಯಾರ ಅನುಕೂಲಕ್ಕೆ ಮಾಡ್ತಿದಾರೆ? ಇವತ್ತು ಮುಂಗಡ ಪತ್ರ ಅನ್ನೋರು ಆರು ತಿಂಗಳು ಮುಗ್ಯೋದ್ರಲ್ಲಿ ಇನ್ನೇನೇನನ್ನು ಹಿಂದಿಯಲ್ಲಿ ತರಬೇಕು ಅಂತಾರೋ?

’ಮಾಧ್ಯಮಗಳು’ ಕಣ್ಣು ತೆರೆಯಲಿ

ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಯನ್ನೊಮ್ಮೆ ಓದಿ. ಹೇಳಿಕೆ ನೀಡಿರುವ ಅಧಿಕಾರಿ ರಾಷ್ಟ್ರೀಯ ಭಾಷೆ ಎಂದು ಹೇಳಿದ್ದರೆ, ಪತ್ರಿಕಾ ವರದಿ ರಾಷ್ಟ್ರಭಾಷೆ ಎಂದು ಬರೆಯುತ್ತದೆ. ರಾಷ್ಟ್ರ ಭಾಷೆ ಎನ್ನುವುದಕ್ಕೂ ರಾಷ್ಟ್ರೀಯ ಭಾಷೆ ಎನ್ನುವುದಕ್ಕೂ ಅದೇನು ವ್ಯತ್ಯಾಸವೋ ತಿಳಿಯದು. ಭಾರತೀಯ ಸಂವಿಧಾನದ ಯಾವ ಪುಟದಲ್ಲೂ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಕರೆದಿಲ್ಲ. ಆದರೆ ನಮ್ಮ ನಾಡಿನ ಜವಾಬ್ದಾರಿಯುತ ಪತ್ರಿಕೆಗಳು ಬಹಳಷ್ಟು ಸಾರಿ ಹಿಂದಿ ರಾಷ್ಟ್ರಭಾಷೆ ಆಂತ ಬರೆಯುತ್ತಲೇ ಬಂದಿವೆ. ಆ ಮೂಲಕ ಸಲ್ಲದ ಸುಳ್ಳನ್ನು ಪ್ರಚಾರ ಮಾಡುತ್ತಲೇ ಬಂದಿವೆ. ಏನ್ ಗುರುವಿನ ಹತ್ತಾರು ಲೇಖನಗಳು ಈ ಬಗ್ಗೆ ಬೆಳಕು ಚೆಲ್ಲುತ್ತಲೇ ಬಂದಿವೆ.

ಹಿಂದಿಗೆ ರಾಷ್ಟ್ರಭಾಷೆಯ ಸ್ಥಾನಮಾನ ಕೊಡುವ ಹಿಂದಿನ ಪ್ರಯತ್ನಗಳೆಲ್ಲಾ ವಿಫಲವಾಗಿದ್ದರೂ ಹಿಂಬಾಗಿಲ ಮೂಲಕ ಕೇಂದ್ರ ಸರ್ಕಾರ ಹಿಂದಿಗೆ ಅಧಿಕೃತ ಭಾಷೆ ಎಂಬ ಪಟ್ಟ ನೀಡಿದೆ. ನಿಜವಾದ ಒಕ್ಕೂಟದಲ್ಲಿ ಇದೇ ತಪ್ಪು ಹೆಜ್ಜೆಯಾಗಿದೆ. ನಿಜವಾಗಿಯೂ ಎಲ್ಲ ಭಾಷೆಗಳಿಗೂ ಸಮಾನ ಸ್ಥಾನಮಾನ ಇರಬೇಕಾಗಿದೆ.

ಹಿಂದಿ ರಾಷ್ಟ್ರಭಾಷೆಯಾದರೆ ಭಾರತದ ಒಗ್ಗಟ್ಟು ಮುರೀದೀತು ಅಷ್ಟೆ!

ಯಾವ ಒಗ್ಗಟ್ಟಿನ ಉದ್ದೇಶದಿಂದ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಕರೆಯಲು ಹೊರಟಿರುವರೋ ಆ ಉದ್ದೇಶಕ್ಕೇ ಇಂತಹ ಕ್ರಮಗಳು ಭಂಗ ತಂದೀತು. ಹಿಂದಿಯನ್ನು ಅಷ್ಟರ ಮೇಲೂ ರಾಷ್ಟ್ರಭಾಷೆ ಮಾಡಿದರೂ ಅದನ್ನು ಕನ್ನಡಿಗರು ಒಪ್ಪುವುದು ಆತ್ಮಹತ್ಯಾತ್ಮಕ. ಯಾಕಂದರೆ ನೂರು ಮೀಟರ್ ಓಟದ ಸ್ಪರ್ಧೆಯಲ್ಲಿ ಇದು ಹಿಂದಿಯವನನ್ನು ಎಂಬತ್ತು ಮೀಟರ್ ಮುಂದೆ ನಿಲ್ಲಿಸುತ್ತದೆ. ಕನ್ನಡದ ಮಕ್ಕಳು ತಮ್ಮದಲ್ಲದ ಭಾಷೆಯನ್ನು ಕಲಿಯಬೇಕು ಎನ್ನುವ ಶೂಲಕ್ಕೆ ಬಲಿಯಾಗಬೇಕಾಗುತ್ತದೆ. ಒಂದು ಪ್ರದೇಶದ ಜನತೆ ತಮ್ಮದಲ್ಲದ ನುಡಿಯನ್ನು ಕಲಿಯದೆ ಇದ್ದರೆ ತಮ್ಮ ನಾಡಿನಲ್ಲೇ ಕೆಲಸ ದೊರೆಯದೇ ಹೋಗುವ ಸ್ಥಿತಿ ಹುಟ್ಟುತ್ತದೆ. ಅನಿಯಂತ್ರಿತ ವಲಸೆ ಕನ್ನಡಿಗರ ಅನ್ನದ ತಟ್ಟೆಗೆ ಮಣ್ಣು ಹಾಕುತ್ತದೆ. ಇಂತಹ ಪರಿಸ್ಥಿತಿಗೆ ಕಾರಣವಾಗುವ 'ದೇಶಕ್ಕೊಂದೇ ಭಾಷೆ’ಯೆನ್ನುವ ಪರಿಕಲ್ಪನೆ ಅಪಾಯಕಾರಿಯಾಗಿದೆ. ತಮ್ಮ ಸೈದ್ಧಾಂತಿಕ ಸ್ವಾರ್ಥಕ್ಕಾಗಿ ಸತ್ಯವನ್ನು ಮುಚ್ಚಿಟ್ಟು ಸುಳ್ಳು ಪ್ರಚಾರ ಮಾಡುವ ಕೆಲಮಾಧ್ಯಮಗಳ ಕ್ರಮ ಕನ್ನಡಿಗರ ಬದುಕನ್ನು ಮುಳುಗಿಸುವ ಪ್ರಯತ್ನವಾಗುತ್ತದೆ.

ಮಾಧ್ಯಮಗಳು ಮಾಡುತ್ತಿರುವ ಇಂತಹ ಅಪಪ್ರಚಾರವೂ ಹಿಂದಿ ಹೇರಿಕೆಯ ಅಸ್ತ್ರವೇ ಆಗಿದೆ. ಇಗೋ ನೋಡಿ, ಮೊನ್ನೆ ಬೆಂಗಳೂರಿನಲ್ಲಿ ನಡೆದ ಮೂರನೇ ಹಿಂದಿ ಭಾಷಾ ಸಮಾವೇಶದಲ್ಲಿ ಹಿಂದಿಯನ್ನು ಎಲ್ಲ ಭಾರತೀಯರಿಗೂ ಕಡ್ಡಾಯ ಮಾಡಿ ಅನ್ನೋ ಅನಿಸಿಕೆ ವ್ಯಕ್ತವಾಗಿದೆ. ಕನ್ನಡಿಗರ ಸಂಸ್ಕೃತಿ, ಭಾಷೆ, ಉದ್ಯೋಗಗಳನ್ನು ಬಲಿಕೊಡಬೇಕು ಎನ್ನುವ ಸಿದ್ಧಾಂತವು ರಾಷ್ಟ್ರೀಯತೆಗೆ ಮಾರಕ ಮತ್ತು ರಾಷ್ಟ್ರೀಯತೆಯ ತಪ್ಪು ವ್ಯಾಖ್ಯಾನವಾಗುತ್ತದೆ. ಏನಂತೀರಾ? ಗುರು
Related Posts with Thumbnails