ರಾಷ್ಟ್ರೀಯ ಪಕ್ಷಗಳಿಗೆ ನಾಡಪರ ನಿಲ್ಲಲಾಗದ ಸಮಸ್ಯೆ!

ಕನ್ನಡನಾಡು ಹುಟ್ಟಿದಾಗಿಂದ ಎದ್ರುಸ್ತಾ ಇರೋ ನೂರಾರು ಸಮಸ್ಯೆಗಳಿಗೆ ಪರಿಹಾರ ಕೊಡಕ್ಕೆ ಇಲ್ಲೀತಂಕ ಯಾವ ರಾಜಕೀಯ ಪಕ್ಷಗಳಿಗೂ ಅಗಿಲ್ಲ ಅನ್ನೋದು ಸತ್ಯ ಗುರು. ಇದ್ಯಾಕೆ ದೇಶದಲ್ಲಿರೋ ಎಲ್ಲಾ ಸಮಸ್ಯೆಗಳೂ ಕನ್ನಡನಾಡಿಗೇ ವಕ್ಕರಿಸಿಕೊಳ್ಳುತ್ತೆ? ನದಿ, ಗಡಿ, ಉದ್ದಿಮೆ, ವಲಸೆ ಎಲ್ಲಾ ಸಮಸ್ಯೆಗಳೂ ನಮ್ಮನ್ನೇ ಯಾಕೆ ಕಾಡ್ತವೇ? ನಮ್ಮ ನೆರೆಯ ಆಂಧ್ರ, ತಮಿಳುನಾಡು, ಕೇರಳ, ಗೋವಾ, ಮಹಾರಾಷ್ಟ್ರಗಳು ನಮ್ಮ ಪಾಲಿಗೆ ಯಾಕೆ ಪಂಚಭೂತಗಳಾಗಿವೆ? ಕನ್ನಡನಾಡು ಜಗಳಗಂಟ ನಾಡೇ? ಕನ್ನಡಿಗರು ಕಿರಿ ಕಿರಿ ಜನವೇ? ಇದಕ್ಕೆಲ್ಲಾ ಯಾರು ಕಾರಣ? ಅನ್ನೋ ಪ್ರಶ್ನೆಗಳು ಭೂತಾಕಾರ ತಾಳಿ ಕಾಡುತ್ವೆ ಗುರು.

ಗಡಿ ಮತ್ತು ಕನ್ನಡಿಗರ ಅಸ್ತಿತ್ವ

ಏಕೀಕರಣವಾದಾಗ ಬಳ್ಳಾರಿಯ ಮೂರು ತಾಲೂಕುಗಳು, ಹೊಸೂರು, ಕಾಸರಗೋಡು, ಅಕ್ಕಲಕೋಟ, ಸೋಲಾಪುರ ಮೊದಲಾದ ಕನ್ನಡ ಮಾತಾಡೋ ಪ್ರದೇಶಗಳು ಕೈ ಬಿಟ್ಟು ಹೋದವು.ಆಮೇಲೆ ಶುರುವಾದ ಗಡಿ ತಕರಾರುಗಳು ಇವತ್ತಿನ ತನಕಾ ಹಂಗೇ ಎಳ್ಕೊಂಡು ಬರ್ತಾನೆ ಇವೆ. ಈ ದಿನ, ಅಂದು ಯಾವ್ಯಾವ ಪ್ರದೇಶಗಳನ್ನು ನಾವು ನಮ್ಮದು ಅಂದಿದ್ದು ನೆರೆ ರಾಜ್ಯಗಳ ಪಾಲಾದವೋ ಅಲ್ಲೆಲ್ಲಾ ಕನ್ನಡವೂ ಮಾಯವಾಗ್ತಾ ಬಂತು. ಸೊಲ್ಲಪುರ, ಅಕ್ಕಲಕೋಟೆ, ಆಂಧ್ರದಲ್ಲಿರೋ ರಾಯಪುರ, ಆಲೂರು, ಅದೋನಿ ತಾಲೂಕುಗಳು, ಕಾಸರಗೋಡು... ಹೀಗೆ ಎಲ್ಲೆಡೆಯೂ ಎದ್ದಿದ್ದ ’ನಾವು ಕರ್ನಾಟಕದಲ್ಲಿ ಸೇರ್ಕೋತೀವಿ’ ಅನ್ನೋ ಒತ್ತಾಸೆಯ ಕೂಗನ್ನು ಸದ್ದಿಲ್ಲದಂತೆ ವ್ಯವಸ್ಥಿತವಾಗಿ ಇಲ್ಲವಾಗಿಸಲಾಯಿತು. ನೆರೆ ರಾಜ್ಯಗಳು ಇಂತಹ ಪ್ರದೇಶಗಳಿಗೆ ಒಳನಾಡಿನಿಂದ ವಲಸೆ ಮಾಡ್ಸಿ ಅಲ್ಲೆಲ್ಲಾ ಕನ್ನಡಿಗರನ್ನು ಅಲ್ಪಸಂಖ್ಯಾತರನ್ನಾಗಿಸಿದವು. ಇಪ್ಪತ್ತು ಮೂವತ್ತು ವರ್ಷಗಳಲ್ಲಿ ಅಲ್ಲಿನ ಕನ್ನಡದ ಮಕ್ಕಳನ್ನು ತಮ್ಮ ತಾಯ್ನುಡಿಯಿಂದ ದೂರಮಾಡಲಾಯಿತು. ಇದಕ್ಕೆ ತಮಿಳುನಾಡಿನ ಹೊಸೂರು ಜ್ವಲಂತ ಉದಾಹರಣೆಯಾಗಿ ನಿಂತಿದೆ. ಅದೇ ನಮ್ಮ ನಾಡಿನ ಗಡಿ ಭಾಗಗಳನ್ನು ನಾವು ಗಮನಕ್ಕೇ ತೆಗೆದು ಕೊಳ್ಳಲಿಲ್ಲ. ಅಂದು ಒಳನಾಡಾಗಿದ್ದ, ಇಂದು ಗಡಿಯಾಗಿರುವ ಬಳ್ಳಾರಿ, ಬೀದರ್ ಮೊದಲಾದ ಪ್ರದೇಶಗಳಲ್ಲಿ ಇಂದು ಪರಭಾಷಿಕರ ಪ್ರಾಬಲ್ಯ ಹೆಚ್ಚಿರೋದು ಮತ್ತು ಕನ್ನಡದ ಅವಗಣನೆ ಆಗ್ತಿರೋದು ಕಣ್ಣಿಗೆ ರಾಚುತ್ತವೆ. ಯಾಕೆ ನಮ್ಮೂರಲ್ಲಿ ಪರಭಾಷಿಕರು ಬಲ ಪಡ್ಕೊಂಡ್ರು? ಯಾಕೆ ಹೊರನಾಡಿನಲ್ಲಿ ಕನ್ನಡದೋರು ಮೂಲೆಗುಂಪಾದರು? ನಮ್ಮ ನಾಡಿನ ರಾಜಕಾರಣದಲ್ಲಿ ಪರಭಾಷೆಯೋರು ಉನ್ನತ ಹುದ್ದೆಗೆ ಏರೋಕೂ ಹೇಗೆ ಸಾಧ್ಯವಾಯ್ತು?

ಉದ್ದಿಮೆಗಳಲ್ಲಿ ಕನ್ನಡಿಗ

ಬೆಳವಣಿಗೆಯ ಹೆಸರಲ್ಲಿ ಕರ್ನಾಟಕದೊಳಗೆ ಹುಟ್ಟಿಕೊಂಡ ಐ.ಟಿ.ಐ- ಬಿ.ಇ.ಎಂ.ಎಲ್- ಬಿ.ಎಚ್.ಇ.ಎಲ್- ಎಚ್.ಏ.ಎಲ್ ಮೊದಲಾದ ಕೇಂದ್ರ ಸರ್ಕಾರಿ ಸಾಮ್ಯದ ಸಾರ್ವಜನಿಕ ಉದ್ದಿಮೆಗಳು ಆರಂಭವಾದಾಗಿನಿಂದಲೂ ಇಲ್ಲಿ ಕನ್ನಡಿಗರಿಗೆ ಆದ್ಯತೆಯೇ ಇಲ್ಲದ್ದನ್ನು ನಾವು ನೋಡಿಯೇ ಇದ್ದೀವಿ. ಯಾಕೆ ಹೀಗೆ? ಇಂತಹ ಉದ್ದಿಮೆಗಳಲ್ಲಿ ನೇಮಕಾತಿ ಆಗೋ ಹಿರಿಯ ಅಧಿಕಾರಿಗಳು ಬರೋದೆ ಕೇಂದ್ರದಿಂದ ನೇಮಕ ಆಗಿ. ಅಲ್ಯಾರು ಹೇಗೆ ನೇಮಕ ಆಗ್ತಾರೆ ಅಂತಲೂ, ಹೇಗೆ ರಾಜಕೀಯ ಪಕ್ಷಗಳ ಕೈವಾಡಗಳು ಇಂತಹ ನೇಮಕಾತಿಗಳಲ್ಲಿ ಇರ್ತವೇ ಅಂತಲೂ ಎಲ್ರೂಗು ಗೊತ್ತಿರೋದೆ. ಒಂದ್ಸಾರ್ತಿ ಮೇಲಧಿಕಾರಿಯಾಗಿ ಪರಭಾಷಿಕ ನುಸುಳಿದ ಮೇಲೆ ಮುಗೀತಲ್ಲಾ... ದೊಡ್ಡ ಅಧಿಕಾರಿಯಿಂದ ಕಸ ಗುಡಿಸೋರ ತನಕ ಆ ಅಧಿಕಾರಿ ತನ್ನ ಭಾಷಿಕರನ್ನೇ ತುಂಬುಸ್ಕೊಂಡಿದ್ದನ್ನು ನಾವೆಲ್ಲಾ ಇವತ್ತು ನೋಡ್ತಿದೀವಿ. ದಕ್ಷಿಣ ಭಾರತದ ರೇಲ್ವೇ ಇಲಾಖೆ ಮದ್ರಾಸಲ್ಲಿ ಶುರುವಾಗಿದ್ದರ ಪರಿಣಾಮವಾಗಿ ಬೆಂಗಳೂರು, ಹುಬ್ಬಳ್ಳಿಯಂತಹ ಊರುಗಳಲ್ಲಿ ದೊಡ್ದ ದೊಡ್ಡ ತಮಿಳು ಕಾಲನಿಗಳೇ ಹುಟ್ಟಿಕೊಂಡವು.

ಅವರನ್ನ ಅವರೇ ಆಳಿಕೊಳ್ಳೊ ಸ್ವಾತಂತ್ರ

ನಮ್ಮ ನೆರೆಯ ಯಾವ ರಾಜ್ಯಾನೆ ನೋಡಿ ಅಲ್ಲಿರೋ ರಾಷ್ಟ್ರೀಯ ಪಕ್ಷಗಳೂ ಆ ಪ್ರದೇಶದ ಹಿತ ಕಾಯೋದನ್ನು ಮೊದಲ ಆದ್ಯತೆ ಮಾಡ್ಕೊಂಡ್ವು. ಕೆಲವೇ ಕಾಲದಲ್ಲಿ ಕಳಗಗಳು, ದೇಶಂಗಳೂ, ಸೇನೆಗಳೂ ಹುಟ್ಟಿಕೊಂಡು ಆಯಾ ಮಣ್ಣಿನ ಪರವಾಗಿ ದನಿ ಎತ್ತಕ್ಕೆ ಶುರುಮಾಡುದ್ವು. ಆದ್ರೆ ಕರ್ನಾಟಕದಲ್ಲಿ? ಇಲ್ಲಿರೋ ರಾಷ್ಟ್ರೀಯ ಪಕ್ಷಗಳೋರು ’ಪ್ರಾದೇಶಿಕ ಪಕ್ಷಗಳು ದೇಶದ ಏಕತೆಗೆ ಮಾರಕ’ ಅನ್ನೋ ರಾಷ್ಟ್ರೀಯ ಪಕ್ಷಗಳ ವಾದಾನ ನಿಧಾನ ವಿಷದಂತೆ ಜನಗಳ ತಲೇಲಿ ತುಂಬಿ ’ದೇಶ ಬೇರೆ, ರಾಜ್ಯ ಬೇರೆ, ದೇಶ ರಾಜ್ಯಕ್ಕಿಂತ ದೊಡ್ಡದು, ಈ ದೇಶದೋರೆಲ್ಲಾ ಒಂದೇ ತಾಯಿ ಮಕ್ಳು’ ಅಂತಾ ಹೇಳ್ಕೊಂಡೇ ತಮ್ಮ ಬೇಳೆ ಬೆಯ್ಸಿಕೊಂಡ್ರು. ಆಮೇಲೆ ನೋಡಿ ಶುರುವಾಯ್ತು, ಚುನಾವಣೆ ಬಂದಾಗ ನಮ್ಮದು ರಾಷ್ಟ್ರೀಯವಾದಿ ಪಕ್ಷ ಅಂತೊಬ್ರು, ನಮ್ಮ ಪಕ್ಷಕ್ಕೆ ನೂರಿಪ್ಪತ್ತು ವರ್ಷದ ಇತಿಹಾಸ ಇದೆ, ಸ್ವಾತಂತ್ರ ಹೋರಾಟದ ಅನುಭವ ಇದೆ ಅಂತಿನ್ನೊಬ್ರು... ಹೇಳ್ಕೊಂಡ್ ಹೇಳ್ಕೊಂಡೇ ಅಧಿಕಾರ ಅನುಭವಿಸಕ್ಕೆ ಮುಂದಾದ್ರು. ಆದರೆ ಇಷ್ಟು ವರ್ಷ ಇವ್ರ್ ಯಾರೂ "ಈ ಭಾಗಗಳು ಕನ್ನಡನಾಡಿಗೆ ಸೇರಬೇಕು" " ಈ ಗಡಿಭಾಗದ ಸಮಸ್ಯೆ ಇಲ್ಲದಂತಾಗಲು ನಮ್ಮ ಗಡಿಭಾಗದ ಊರುಗಳಲ್ಲಿ ಕನ್ನಡಿಗರ ಸಂಖ್ಯೆ ಹೀಗೆ ಹೆಚ್ಚುಸ್ಬೇಕು" "ಹೊರನಾಡ ಕನ್ನಡಿಗರು ನಮ್ಮೊಂದಿಗೆ ಇಂದಲ್ಲಾ ನಾಳೆ ಸೇರಲೇ ಬೇಕು ಎಂಬ ಕೂಗಿಗೆ ನಮ್ಮ ಬೆಂಬಲ ಇದೆ" "ನಮ್ಮ ನಾಡಿನ ಉದ್ದಿಮೆಗಳಲ್ಲಿ ಅಧಿಕಾರಿಗಳು ಕನ್ನಡಿಗರೇ ಆಗಿರಬೇಕು" ಅಂತ ದನಿ ಎತ್ಲಿಲ್ಲ. ಹಾಗೆ ದನಿ ಎತ್ತಕ್ಕೆ ಇವುಗಳಿಗೆ ಸಾಧ್ಯವೂ ಇಲ್ಲ.

ರಾಷ್ಟ್ರೀಯ ಪಕ್ಷಗಳ ಅಸಹಾಯಕತೆ

ಯಾಕಂದ್ರೆ ಇಲ್ಲಿ ಯಡ್ಯೂರಪ್ಪನೋರು ಕೆಮ್ಮಬೇಕು ಅಂದ್ರೆ ಅಲ್ಲಿ ಅಡ್ವಾಣಿಯೋರು ’ತಮಿಳುನಾಡಲ್ಲಿ ಪಕ್ಷ ಯಾರ ಜೊತೆ ಹೊಂದಾಣಿಕೆ ಮಾಡ್ಕೊತಿದೆ, ಯಾರು ಈ ಸಾರಿ ಸರ್ಕಾರ ರಚಿಸಕ್ಕೆ ನಮಗೆ ಬೆಂಬಲ ಕೊಡಬಹುದು’ ಅಂತೆಲ್ಲಾ ಲೆಕ್ಕ ಹಾಕಿ ಅಪ್ಪಣೆ ಕೊಡಬೇಕು. ಇಲ್ಲಿ ಕೃಷ್ಣ ಅವ್ರು ಕರುಣಾನಿಧಿ ಬಗ್ಗೆ ಖಾರವಾಗಿ ಗುಡುಗುದ್ರೂ ದಿಲ್ಲೀ ಸರ್ಕಾರಾನ ಕರುಣಾನಿಧಿ ಒಂದ್ಸರ್ತಿ ಬೆದರ್ಸುದ್ರೆ ’ಇಲ್ಲ ಇಲ್ಲ ನಾ ಹೇಳಿದ್ದು ಹಾಗಲ್ಲ ಹೀಗೆ' ಅಂತ ತಮ್ ಮಾತುನ್ನ ಬದಲಿಸಬೇಕು. ಆಡೋದು ಮಾತ್ರಾ ನಮಗೆ ರಾಷ್ಟ್ರೀಯ ಹಿತಾಸಕ್ತಿ ಮುಖ್ಯಾ ಅಂತ ನಿಜವಾಗ್ಲೂ ಕಾಪಾಡಕ್ ಮುಂದಾಗೋದು ತಮ್ಮ ಪಕ್ಷಗಳ ’ಕೇಂದ್ರದಲ್ಲಿ ಅಧಿಕಾರ ಹಿಡೀಬೇಕು’ ಅನ್ನೋ ಹಿತಾಸಕ್ತಿನಾ. ಇಂಥಾ ಸನ್ನಿವೇಶದಲ್ಲಿ ದಿಲ್ಲಿಯಲ್ಲಿ ಸಲ್ಲಲಾಗದೇ ಇಲ್ಲಿ ನಮ್ಮದು ಪ್ರಾದೇಶಿಕ ಪಕ್ಷ ಅನ್ನೋ ಮಾತಾಡ್ತಿರೋ ಪಕ್ಷಾನೂ ದಿಲ್ಲಿಯೋ ಇಲ್ಲಿಯೋ ಅಂತ ಪರದಾಡ್ತಾ ತಮ್ಮ ನಿಲುವನ್ನು ಗೊಂದಲವಾಗಿಸಿಕೊಂಡಿರೋದೂ ಕಾಣ್ತಿದೆ.
ಕನ್ನಡ ನಾಡಿನ ಜನತೆ ತಮ್ಮ ಏಳಿಗೆಯು ಎಂದೆಂದಿಗೂ ಈ ರಾಷ್ಟ್ರೀಯ ಪಕ್ಷಗಳಿಂದ ಆಗಲ್ಲ ಅನ್ನೋದ್ನ ಮನವರಿಕೆ ಮಾಡ್ಕೊಳ್ಳೋದೆ ನಮ್ಮ ನಾಡ ಮುಂದಿರೋ ಸವಾಲುಗಳನ್ನು ಗೆಲ್ಲೋ ಮೊದಲ ಹೆಜ್ಜೆ. ಏನಂತೀರಾ ಗುರು?

3 ಅನಿಸಿಕೆಗಳು:

Anonymous ಅಂತಾರೆ...

kannaDa naaDina bagge pratiyondu vishayavannu tiLidukondu, yochisi tarka maaDi nivu bareyuttiro ella lekhanagaLu chennagive... nimma banavaasi baLagakke nanna ondu prashne... kannaDa maNNina hita kayva ondu praadeshika paksha niveke kattabaradu??? sadyada paristitiyalli KarunaaDalli kannaDakkagi ondu hosa kranti aaga bekaagide...

Anonymous ಅಂತಾರೆ...

idella nODidre anisOdu omde...nam jana, bhaashe haagu naaDina paravaagi baDidaaDuva hOraaDuva haagu kelsa maaDuva syddhaamtikavaagi gaTTiyaada praadeshika paksha karnaaTakakke atyagatya...

-putta

Anonymous ಅಂತಾರೆ...

bari BHEL BEL HAL maatra heliddira...hogi nodi ISRO HQ, ISTRAC alli illi estu janna kannadadavridare anta...keluvu kade telugu official language :)swami...
IISc...temple of science...hogi nodi bengaligalu, telug navru tumbi tuluktidare...
ee thara central govt offices/institutions bekadastu idave blore nalli.
ISRO nanna application reject madidru..sikapatte high percentage ittidru kooda...ade telugu matado kadime percentage avnige kelsa siktu...amele jana bandhu keltare nanna..istondu buddivantha idya neenyaake horgade odide IIT nallo IISc nallo yaake odlilla antha...blore nalle kelsa maadu antha...ivru kodo soubhagyakke naanyaake odbeku kelsa madbeku heli ssaaa...
alli melyaaro heldange kraanti beku sssaa...karunadanna nodkolo, adukkoskara seve maado, bari karnataka hita rakshane na manadallitkolo pradeshika paksha beke beku...kannada karnataka sevege sada sidda naanu...
-/dg

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails