

ಈ ಬ್ಲಾಗಿನ ಸಂಪಾದಕರು: ಶ್ರೀ ಆನಂದ್. ಇವರಿಗೆ ಮಿಂಚಿಸಲು ಇಲ್ಲಿ ಕ್ಲಿಕ್ಕಿಸಿ.
ಇವತ್ತಿನ ಪರಿಸ್ಥಿತಿ ನೋಡಿ. ಭಾರೀ ಇತಿಹಾಸ ಇರೋ ರಾಷ್ಟ್ರೀಯ ಪಕ್ಷಗಳು ತಮ್ಮವು ಅನ್ನೋ ಕಾಂಗ್ರೆಸ್ಸು, ಬಿಜೆಪಿ ಒಂದು ಕಡೆ... ಅನುಕೂಲಕ್ ತಕ್ಕ ಹಾಗೆ ಒಂದ್ಸರ್ತಿ ರಾಷ್ಟ್ರೀಯ ಅಂತ್ಲೂ ಮತ್ತೊಮ್ಮೆ ಪ್ರಾದೇಶಿಕ ಅಂತ್ಲೂ ಅಂತಿರೋ ಜಾತ್ಯಾತೀತ ಜನತಾ ದಳದೋರು ಇನ್ನೊಂದು ಕಡೆ, ರಾಷ್ಟ್ರೀಯ ಪಕ್ಷಗಳು ಅನ್ನೋ ಭ್ರಮೇಲಿ ಉತ್ತರಪ್ರದೇಶದ್ದೋ ಮತ್ತೊಂದು ಪ್ರದೇಶದ್ದೋ ಪ್ರಾದೇಶಿಕ ಪಕ್ಷಗಳ ಬಾಲಂಗೋಚಿಗಳಾಗಿರೋ ಇನ್ನೊಂದೆರಡು ಪಕ್ಷಗಳು ಮೂರನೇ ಕಡೆ... ಇದೆಲ್ಲಾ ಒಂದು ತೂಕವಾದ್ರೆ ಒಂದೆರಡು ಸೀಟುಗಳ ವಾಟಾಳ್ ಪಕ್ಷವೋ, ಬೇರು ಮಟ್ಟದ ಸಂಘಟನೆಯ ಕೊರತೆ ಇರೋ ಚಂಪಾ ಅವರ ಪಕ್ಷವೋ... ಹಿಂದೆಲ್ಲಾ ಸಿದ್ಧತೆ ಸರಿಯಿಲ್ಲದೆ, ತಳಹದಿ ಭದ್ರವಿಲ್ಲದೆ ನೆಲಕಚ್ಚಿದ ಇನ್ನಿತರ ಕನ್ನಡದ ಹೆಸರಿನ ಪಕ್ಷಗಳೋ... ಒಟ್ನಲ್ಲಿ ಕರ್ನಾಟಕದ ಜನತೆ ಮುಂದೆ, ಪ್ರಾದೇಶಿಕ ಪಕ್ಷ ಅನ್ನೋದು ಬಲಹೀನವಾದ ಬಡಬಡಿಕೆ ಥರ ಕಂಡಿದ್ದು, ಪರಿಣಾಮಕಾರಿ ರಾಜಕೀಯ ಶಕ್ತಿಯೊಂದು ಇರಕ್ಕೆ ಸಾಧ್ಯಾ ಅನ್ನೋ ಭರವಸೆಯ ಸಣ್ಣ ಬೆಳಕಿನ ಗೆರೆಯೂ ಕಾಣದೆ ಇರೋ ಕಗ್ಗತ್ತಲ ಸ್ಥಿತಿ ಇದೆ. ಇಂಥಾ ಸನ್ನಿವೇಶದಲ್ಲಿ ಈ ಮೂವತ್ತೈದರ ಆಸುಪಾಸಿನ ಅಂಕಿ ಅಂಶ ಕನ್ನಡಿಗರದ್ದೇ ಪ್ರಾದೇಶಿಕ ಪಕ್ಷ ಬೇಕು ಅನ್ನೋರ್ಗೆ ಭಾರಿ ಉತ್ಸಾಹದಾಯಕವಾಗಿದೆ ಗುರು!
ಕಾಲ ಕೂಡಿ ಬಂದಿದೆ!
ನಾಡು ನುಡಿಯ ಬಗ್ಗೆ ಸ್ಪಷ್ಟವಾದ ನೀತಿ ನಿಲುವು ಹೊಂದಿದ್ದು ಗಟ್ಟಿ ಸಿದ್ಧಾಂತದ ಬೆನ್ನೆಲುಬು ಇರೋಂಥಾ, ಕನ್ನಡ ನಾಡಿನ ಹಳ್ಳಿ ಹಳ್ಳಿಗಳಿಗೂ ಹಬ್ಬಿಕೊಂಡಿದ್ದು ನಾಡು ನುಡಿಯ ರಕ್ಷಣೆಗೆ ರಾಜಿರಹಿತವಾಗಿ ದುಡಿಯೋಂಥಾ ಒಂದು ಕನ್ನಡಿಗರ ಪಕ್ಷ ಹುಟ್ಟಕ್ಕೆ ಇದು ಸಕಾಲ! ಇಂಥಾ ಪಕ್ಷ ಒಂದು ಇದೆ, ಇವರಿಗೆ ಸ್ಪಷ್ಟವಾದ ನೀತಿ ನಿಲುವು ಇದೆ, ನಾಡು ಕಟ್ಟೋ ಕ್ಷಮತೆ ಇದೆ ಅನ್ನೋದು ಕನ್ನಡಿಗರಿಗೆ ಮನವರಿಕೆ ಆಗಿಬಿಟ್ರೆ ಈ ಮೂವತ್ತೈದು ಎಂಬತ್ತೈದು ಆಗೋದ್ರಲ್ಲಿ ಯಾವ ಅನುಮಾನವೂ ಇಲ್ಲಾ! ಕನ್ನಡಿಗರಲ್ಲಿ ಕನ್ನಡತನ ಜಾಗೃತಗೊಂಡರೆ ಇಂಥಾ ಒಂದು ರಾಜಕೀಯ ಪಕ್ಷ ಇಂದಲ್ಲಾ ನಾಳೆ ಹುಟ್ಟಿಕೊಳ್ಳೋದು ಖಂಡಿತಾ ಗುರು! ಚಾಲುಕ್ಯ, ಹೊಯ್ಸಳ, ವಿಜಯನಗರ ಸಾಮ್ರಾಜ್ಯಗಳಿಗೇ ಹುಟ್ಟು ಕೊಟ್ಟಿರೋ ಕನ್ನಡಮ್ಮ ಇಂಥಾ ಒಂದು ಸ್ವಾಭಿಮಾನದ ಸಾಮ್ರಾಜ್ಯದ ಮರುಹುಟ್ಟಿಗೆ ಕಾರಣಳಾಗದೆ ಇರೋ ಅಷ್ಟು ಬಂಜೆ ಅಲ್ಲ ಗುರು!