ಚುನಾವಣೆ ಶುರುವಾಗೈತೆ. ಈಗಾಗ್ಲೆ ಮೊದಲ್ನೆ ಹಂತದ ಮತದಾನ ಮುಗಿದೈತೆ. ಇದ್ರಲ್ಲಿ ಎಷ್ಟೋ ನಾಯಕ್ರುಗಳ ಹಣೆಬರಾ ನಿಕ್ಕಿ ಆಗೈತೆ. ಈ ಚುನಾವಣೆ ಕಾಲದಾಗೆ ಭಾರೀ ಪ್ರಚಾರಗಳೂ ನಡುದ್ವು. ನಮ್ಮ ಪಾರ್ಟಿಗೇ ಓಟ್ ಹಾಕಿ ಅಂತಾ ಪ್ರತಿಯೊಬ್ರೂ ಒಂದೊಂದೂ ಕ್ಷೇತ್ರದಲ್ಲೂ ಹೋಗಿ ಪ್ರಚಾರ ಮಾಡುದ್ರು. ಜನರ ಮನಸ್ಸನ್ನು ಗೆಲ್ಲಬೇಕು ಅಂತಾ ತಮ್ಮ ತಮ್ಮ ಪಕ್ಷಗಳ ದೊಡ್ದ ದೊಡ್ಡ ನಾಯಕ್ರುಗಳನ್ನೂ ಕರ್ಕೊಂಡು ಬಂದು ಭಾಷಣ ಮಾಡಿಸುದ್ರು. ನಿಜವಾಗ್ಲೂ ಹಾಗೆ ಹೊರಗಿಂದ ನಾಯಕ್ರುಗಳನ್ನು ಕರ್ಕೊಂಡು ಬರೋ ಅಗತ್ಯ ಇದೆಯಾ? ಹಾಗೆ ಬಂದೋರಾದ್ರೂ ಏನು ಕಿಸುದ್ರು? ಅಂತಾ ಒಸಿ ನೋಡ್ಮಾ ಬನ್ನಿ...
ಯಾರು ಯಾರು ಬಂದಿದ್ರು? ಬರ್ತಾರೆ?
ಕಾಂಗ್ರೆಸ್ ಪಕ್ಷದೋರು ಸೋನಿಯಾ ಗಾಂಧಿ, ಮನಮೋಹನ್ ಸಿಂಗ್, ಅಂಬಿಕಾ ಸೋನಿ, ಪುರಂದರೇಶ್ವರಿ, ಕಪಿಲ್ ಸಿಬಾಲ್, ರಾಹುಲ್ ಗಾಂಧಿ, ಗುಲಾಂ ನಬೀ ಆಜಾದ್, ಡಾ.ರಾಜಶೇಖರ ರೆಡ್ಡಿ, ವಿಲಾಸ್ ರಾವ್ ದೇಶಮುಖ್ ಇವ್ರುನ್ನೆಲ್ಲಾ ಕರ್ಕೊಂಬಂದು ಕರ್ನಾಟಕದಲ್ಲಿ ಪ್ರಚಾರ ಕೈಗೊಂಡ್ರು. ಬಿಜೆಪಿಯೋರು ಅಡ್ವಾಣಿ, ನರೇಂದ್ರ ಮೋದಿ, ವೆಂಕಯ್ಯ ನಾಯ್ಡು, ರಾಜನಾಥ್ ಸಿಂಗ್, ಹೇಮಮಾಲಿನಿ, ಅರುಣ್ ಜೇಟ್ಲಿ, ಸ್ಮೃತಿ ಇರಾನಿ, ವಿನೋದ್ ಖನ್ನಾ, ಸುಷ್ಮಾ ಸ್ವರಾಜ್ ಇವ್ರುಗಳನ್ ಕರ್ಕೊಂಡ್ ಬಂದ್ರು. ಕಮ್ಯುನಿಸ್ಟರ ಪರವಾಗಿ ಬೃಂದಾ ಕ್ಯಾರಟ್ ಬಂದದ್ದೂ ಆಯ್ತು. ಬಹುಜನ ಸಮಾಜ ಪಕ್ಷದ ಕುಮಾರಿ ಮಾಯಾವತಿ ಬಂದ್ರು. ಇನ್ನೂ ಬಂಗಾರಪ್ಪೋರು ಮುಲಾಯಮ್ ಸಿಂಗ್ ಯಾದವ್, ಅಮರ್ ಸಿಂಗ್, ಜಯಾಬಚ್ಚನ್ನು, ಜಯಪ್ರದಾ... ಅವ್ರುನ್ನು ಕರ್ಕೊಂಡು ಬರೋದಿದೆ.
ನಮ್ಮ ಏಳಿಗೆ ಬಗ್ಗೆ ಏನಂದ್ರು?
"ಕರ್ನಾಟಕಾನ ಹೇಗೆ ಉದ್ಧಾರ ಮಾಡ್ತೀವಿ, ಇಲ್ಲಿರೋರ ಸಮಸ್ಯೆಗಳನ್ನು ಹೇಗೆ ಬಗೆಹರುಸ್ತೀವಿ" ಅನ್ನೋದು ಚುನಾವಣೆ ವಿಷಯ ಆಗಬೇಕಿತ್ತು. "ಕರ್ನಾಟಕದ ರಸ್ತೆ, ರೈಲು, ವಿಮಾನ ಸಂಪರ್ಕದ ಬಗ್ಗೆ, ನಮ್ಮಲ್ಲಿಗೆ ಬಂಡವಾಳಾ ತರೋ ಬಗ್ಗೆ, ನಮ್ಮ ಜನಕ್ಕೆ ಉದ್ಯೋಗ ಅವಕಾಶ ಕೊಡ್ಸೋ ಬಗ್ಗೆ, ಬಡತನದ ರೇಖೆಗಿಂತ ಕೆಳಗಿರೋ ಜನಗಳ್ನ ಬಡತನ ರೇಖೆಗಿಂತ ಮೇಲೆತ್ತೋ ಬಗ್ಗೆ, ಹ್ಯಾಗೆ ನಮ್ಮ ನಾಡಲ್ಲಿ ವ್ಯವಸಾಯಕ್ಕೆ ಅನುಕೂಲ ಮಾಡಿಕೊಡೋ ನೀರಾವರಿ ಯೋಜನೆಗಳನ್ನು ಜಾರಿ ಮಾಡ್ತೀವಿ, ಹ್ಯಾಗೆ ಪರಿಣಿತ ಕಸುಬುದಾರರಿಗೆ ಮಾರುಕಟ್ಟೆ ಹುಟ್ಟಿಸಿ ಕೊಡ್ತೀವಿ, ಹ್ಯಾಗೆ ಏಳಿಗೆಗೆ ಅನುಕೂಲ ಆಗೋ ಹಾಗೆ ವ್ಯವಸ್ಥೆ ಮಾಡಿಕೊಡ್ತೀವಿ" ಅಂತೇನಾದ್ರೂ ಅಂದ್ರಾ ಅಂದ್ರೆ ...ಊಹೂ ಒಬ್ರಾದ್ರೂ ಈ ಬಗ್ಗೆ ಗಟ್ಯಾಗಿ ಮಾತಾಡ್ಲಿಲ್ಲ. ಬಿಟ್ಟಿ ಕರೆಂಟು, ಸಾಲಮನ್ನಾ, ಮನೆಗಳು, ಬಡ್ಡಿ ಇರದ ಸಾಲ, ಬಣ್ಣದ ಟಿವಿ ಅಂತ ಬಣ್ಣಬಣ್ಣವಾಗಿ ಅಂದ್ರು ಅಷ್ಟೆ.
ಎಷ್ಟು ಪರಿಣಾಮಕಾರಿ ಇವ್ರ ಮಾತು?
ಕರ್ನಾಟಕದ ಸಮಸ್ಯೆಗಳ ಬಗ್ಗೆ ಬೇರೆಲ್ಲೋ ಹೊರಗಿಂದ ಬರೋರಿಗೆ ಹ್ಯಾಗೆ ಅರಿವಿರಲು ಸಾಧ್ಯ? ಹೀಗೆ ರಾಷ್ಟ್ರೀಯ ನಾಯಕ್ರು(?)ಗಳ್ನ ಮುಂದು ಮಾಡ್ಕೊಂಡು ಬರೋದ್ರ ಅರ್ಥ ಅವ್ರು ನಮ್ಮ ಹೈಕಮಾಂಡು, ಇಲ್ಲಿ ಆಡಳಿತಾನೂ ಅವ್ರು ಹೇಳಿದಂಗೇ ನಡ್ಯೋದು ಅನ್ನೋ ಸಂದೇಶ ಕೊಡುತ್ತಲ್ವಾ ಗುರು? ಇರಲಿ, ಬೆಂಗಳೂರಿನ ನೇಕಾರರ ಸಮಸ್ಯೆ, ಚನ್ನಪಟ್ಟಣದ ರೇಶ್ಮೆ ಬೆಳೆಗಾರರ ಸಮಸ್ಯೆ, ವರ್ಷಕ್ಕೊಂದು ಸಾರ್ತಿ ಮನೆ ಒಳಗೆ ನುಗ್ಗಿ ದನಕರುಗಳ್ನ ಎಳ್ಕೊಂಡು ಹೋಗೋ ಬೆಳೆದ್ ಬೆಳೆನಾ ನುಂಗಿಹಾಕೋ ಕೃಷ್ಣಾ ಪ್ರವಾಹದ ಬಗ್ಗೆ....ಏನು ಗೊತ್ತಿರೋಕೆ ಸಾಧ್ಯ? ನಾಡು ಕೇಂದ್ರದಿಂದ, ನೆರೆ ರಾಜ್ಯಗಳಿಂದ ಎದುರುಸ್ತಾ ಇರೋ ಆತಂಕಗಳು, ತಾರತಮ್ಯಗಳ ಬಗ್ಗೆ ಏನು ನಿಲುವನ್ನು ಇವರು ತೋರಿಸಕ್ಕೆ ಸಾಧ್ಯ?
ಇದರ ಜೊತೆಗೆ ಇವರ ಭಾಷಣಗಳನ್ನು ನಮಗೆ ಅರ್ಥವಾಗದ ಭಾಷೇಲಿ ಮಾಡ್ಸುದ್ರೆ, ಅದುನ್ನ ನಮ್ಮ ಭಾಷೆಗೆ ತರ್ಜುಮೆ ಮಾಡದೆ ಹೋದ್ರೆ ಹೇಗೆ ಇವರ ನಿಲುವುಗಳು ಜನರಿಗೆ ಅರ್ಥವಾಗುತ್ತೆ? ಇನ್ನು ಜನ್ರನ್ ಸೆಳೆಯಕ್ಕೆ ಅಂತಾ ಸಿನಿಮಾದೋರ್ನಾ, ದೂರದರ್ಶನದೋರ್ನ ಕರ್ಕೊಂಡು ಬರ್ತಾರಲ್ಲಾ... ಎಷ್ಟು ಜನರಿಗೆ ಈ ಸ್ಮೃತಿ ಇರಾನಿ, ವಿನೋದ್ ಖನ್ನಾ, ಜಯಪ್ರದಾಗಳು ಗೊತ್ತಿದಾರೆ? ಗೊತ್ತಿದ್ರೂ ಇವರೆಲ್ಲಾ ನಮ್ಮ ಜನ್ರುನ್ ಎಷ್ಟು ಪರಿಣಾಮಕಾರಿಯಾಗಿ ಸೆಳೆಯಕ್ಕೆ ಆಗುತ್ತೆ? ಇದೇನು ಈ ಪಕ್ಷಗಳ ನಾಯಕರಿಗೆ ಅರ್ಥ ಆಗಿಲ್ವಾ? ಈ ನಾಯಕರುಗಳನ್ನು ಕರ್ಕೊಂಡು ಬಂದು ಬೀದಿ ಬೀದಿಲಿ ಮೆರವಣಿಗೆ ಮಾಡ್ಸೋದೂ, ನಮಗೆ ಅರ್ಥವಾಗದ, ನಮ್ಮ ಜನರದ್ದಲ್ಲದ ಭಾಷೇಲಿ ಭಾಷಣ ಮಾಡ್ಸೋದೂ ಪರಿಣಾಮಕಾರಿ ಚುನಾವಣಾ ತಂತ್ರ ಅಂತ ನಂಬಿ ನಡ್ಯೋರಿಗೆ ಏನು ಹೇಳೋದು ಗುರು?
0 ಅನಿಸಿಕೆಗಳು:
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!