ಕನ್ನಡ ಆಡಳಿತ ಭಾಷೆ ಅನ್ನೋದು ನೆನಪಿರಲಿ!

ರಾಷ್ಟ್ರೀಯವಾದಿ ಪಕ್ಷ ಬಿಜೆಪಿಯಿಂದ ಶಾಸಕರಾಗಿ ನೇಮಕವಾಗಿರೋ, ಆ ಪಕ್ಷದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರೂ ಆಗಿರೋ ಗೌರವಾನ್ವಿತ ಮಹಾ ಮಹಿಮರಾದ ಶ್ರೀಯುತ ಡೆರಿಕ್ ಫುಲಿನ್ ಫಾ ಎಂಬ ಆಂಗ್ಲೋ ಇಂಡಿಯನ್ ಕೋಟಾದ ಸತ್ ಪ್ರಜೆಯನ್ನು ಕರ್ನಾಟಕ ರಕ್ಷಣಾ ವೇದಿಕೆಯೋರು ಮೊನ್ನೆ ಮುತ್ತಿಗೆ ಹಾಕಿದ ಸುದ್ದಿ ಬಂದಿದೆ. ಸದನದಲ್ಲಿ ಕನ್ನಡದಲ್ಲಿ ಮಾತಾಡಲ್ಲ ಅಂದಿದ್ದಕ್ಕೆ ಈ ಪೂಜೆ ಆಗಿದೆಯಂತೆ. ಏನೇ ಅಂದರೂ ಇಂಥಾ ಒಂದು ಬೆಳವಣಿಗೆಗೆ ಭಾರತೀಯ ಜನತಾ ಪಕ್ಷವೇ ಕಾರಣ ಅನ್ನೋದನ್ನು ಮರೆಯೋ ಹಾಗಿಲ್ಲ ಗುರು!

ಅಲ್ಪಸಂಖ್ಯಾತರ ಮೆರೆಸಾಟದಲ್ಲಿ ಇವ್ರೂ ಮುಂದು!

ಮಾತೆತ್ತುದ್ರೆ ಕಾಂಗ್ರೆಸ್ಸೋರು, ದಳದೋರು ಅಲ್ಪಸಂಖ್ಯಾತರ ತುಷ್ಟೀಕರಣ ಮಾಡ್ತಿದಾರೆ ಅಂತಾ ಸದಾ ಶಂಖ ಹೊಡ್ಕೊಳೊ ಭಾಜಪದವರು ಈಗ ಮಾಡಿದ್ದೇನು? ತನ್ನದೇ ಪಕ್ಷದ ಶಾಸಕ ಕನ್ನಡದಲ್ಲಿ ಮಾತಾಡ್ಲಿಲ್ಲ ಅಂದ್ರೆ ಇವರು ಯಾಕೆ ಸುಮ್ಮಿನಿದಾರೆ? ಫಾ ಅವ್ರು ಬರೀ ಕನ್ನಡದಲ್ಲಿ ಮಾತಾಡಿಲ್ಲ ಅಲ್ಲ, ನನಗೆ ಕನ್ನಡ ಬರುತ್ತೆ, ಆದ್ರೂ ಮಾತಾಡಲ್ಲ ಅನ್ನೋ ಉದ್ಧಟತನದ ಮಾತಾಡಿದ್ರೂ ಸರ್ವ ಶ್ರೀ ಯಡ್ಯೂರಪ್ಪನವರು, ಅನಂತಕುಮಾರ್ ಅವ್ರೂ, ಜಗದೀಶ್ ಶೆಟ್ಟರ್ ಅವ್ರೂ, ಸದಾನಂದ ಗೌಡರೂ ಯಾಕೆ ಸುಮ್ಮನಿದ್ದರು? ಹೀಗೆ ಮೌನವಾಗಿರೋದೂ ಕೂಡಾ ಫಾ ಅವ್ರು ಮಾಡಿದ್ದನ್ನು ಅನುಮೋದನೆ ಮಾಡಿದ ಹಂಗಲ್ವಾ? ಇದುಕ್ಕಿಂತ ತುಷ್ಟೀಕರಣ ಬೇರೆ ಬೇಕಾ ಗುರು? ಇದು ಧಾರ್ಮಿಕ ಅಲ್ಪಸಂಖ್ಯಾತ ಮತ್ತು ಭಾಷಾ ಅಲ್ಪಸಂಖ್ಯಾತ ಅನ್ನೋ ಡಬ್ಬಲ್ ಮೆರೆಸಾಟ ಅಲ್ವಾ? ಇವ್ರು ಕಾಂಗ್ರೆಸ್ಸೋರ ಬಗ್ಗೆ ಆಕ್ಷೇಪಣೆ ಮಾಡೋದ್ರಲ್ಲಿ ಏನಾದ್ರೂ ನಿಜಾಯ್ತಿ ಇದ್ಯಾ ಗುರು! ಅಥ್ವಾ ಅದು ಬರೀ ಓಟು ಗಿಟ್ಸೋ ತಂತ್ರಾನಾ?

ರಾಷ್ಟ್ರೀಯತೆ ಅಂದ್ರೆ ಕನ್ನಡ ಕಡೆಗಣ್ಸೋದಾ?

ತಾನು ಹುಟ್ಟಿ ಬೆಳೆದ, ವಾಸ ಇರೋ, ತನಗೆ ಬದುಕು-ಸ್ಥಾನಮಾನ ಕೊಟ್ಟಿರೋ ನೆಲದ ಭಾಷೆ, ಸಂಸ್ಕೃತಿ, ಜನರ ಬಗ್ಗೆ ಗೌರವ ಇಲ್ದೇ ಇರೋದನ್ನು ಸಹಿಸೋದು ಯಾವ ಸೀಮೆ ದೇಶಭಕ್ತಿ? ಯಾವ ಸೀಮೆ ರಾಷ್ಟ್ರೀಯತೆ ಗುರು? ಫಾ ಅವ್ರು ಅಲ್ಪಸಂಖ್ಯಾತರು ಅನ್ನೋ ಕಾರಣಕ್ಕೇ ಅವ್ರುನ್ನ ಖಂಡಿಸೋಕೆ ಆಗ್ತಿಲ್ವಾ ಇವ್ರು ಕೈಲಿ? ಕರ್ನಾಟಕದ ವಿಧಾನ ಸಭೇಲೆ ಈ ವ್ಯಕ್ತಿ ರಾಜಾರೋಷವಾಗಿ ನಂಗೆ ಕನ್ನಡ ಬರುತ್ತೆ, ಆದ್ರೂ ಮಾತಾಡಲ್ಲ ಅನ್ನೋದು ಉದ್ಧಟತನದ ಪರಮಾವಧಿ ಅಲ್ವಾ ಗುರು? ಇಂಥಾ ವ್ಯಕ್ತೀನ ತತ್ ಕ್ಷಣದಿಂದ ಬಿಜೆಪಿ ವಾಪಸ್ ಕರುಸ್ಕೋಬೇಕಿತ್ತು. ರಾಜಿನಾಮೆ ಕೊಡುಸ್ಬೇಕಿತ್ತು. ಕಡೇ ಪಕ್ಷ ಇವ್ರಿಂದ ಕ್ಷಮೆ ಕೇಳುಸ್ಬೇಕಿತ್ತು. ಅದ್ಯಾವ್ದೂ ಇಲ್ದೆ ಸಖತ್ ಜಾಣ ಮೌನ ವಹಿಸಿರೋದ್ರ ಅರ್ಥ ಏನು? ಇವ್ರ ಕಣ್ಣಲ್ಲಿ ರಾಷ್ಟ್ರೀಯತೆ ಅಂದ್ರೆ ಕನ್ನಡಾನ ಕಡೆಗಣ್ಸೋದೇನಾ ಗುರು?

ಎಂ.ಇ.ಎಸ್ ಜೊತೆ ಸರಸವಾಡ್ದೋರು!

ಹಿಂದೆಲ್ಲಾ ಬೆಳಗಾವೀಲಿ, ಕನ್ನಡ ನಾಡನ್ನು ಒಡೆಯೋದನ್ನೆ ಗುರಿ ಮಾಡ್ಕೊಂಡಿರೋ ಮಹಾರಾಷ್ಟ್ರ ಏಕೀಕರಣ ಸಮಿತಿ ಜೊತೆ ಕರ್ನಾಟಕ ರಾಜ್ಯ ಭಾರತೀಯ ಜನತಾ ಪಕ್ಷದೋರು ಹೊಂದಾಣಿಕೆ ಮಾಡ್ಕೋತಾ ಇದ್ದುದ್ದು, ಕಡೆಗೆ ಎಂಇಎಸ್ ಮೋರೆಗೆ ಮಸಿ ಮೆತ್ತಿದ ಪ್ರಕರಣ ಆದ ಮೇಲೆ ಅವ್ರು ಜೊತೆ ನೇರವಾಗಿ ಗುರುತಿಸಿಕೊಳ್ಳೋದನ್ನು ನಿಲ್ಲಿಸಿದ್ದನ್ನೂ ಜನ ಮರೆತಿಲ್ಲ. ರಾಜ್ಯಸಭೆಗೆ ವೆಂಕಯ್ಯ ನಾಯ್ಡು ಅವ್ರುನ್ನ ಆರಿಸಿ ಕಳಿಸಿದೋರೂ, ನ್ಯಾಷನಲ್ ಕಾಲೇಜು ಮೈದಾನದಲ್ಲಿ ವೆಂಕಯ್ಯನಾಯ್ಡು ತೆಲುಗಲ್ಲಿ ಭಾಷಣ ಮಾಡ್ತಿದ್ದಾಗ ಚಪ್ಪಾಳೆ ತಟ್ತಿದ್ದೋರೂ ಇದೇ ಭಾಜಪಾದೋರೆ... ಇರ್ಲಿ, ಈಗ ನಿಜವಾಗ್ಲೂ ಭಾಜಪದೋರು ’ತಾವು ಪ್ರತಿಪಾದಿಸೋ ರಾಷ್ಟ್ರೀಯತೆಯಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕ ಅನ್ನೋದಕ್ಕೆ ಏನಾದ್ರೂ ಸ್ಥಾನ ಇದ್ಯೇ? ಅಥ್ವಾ ಅದು ಗೌಣವಾದ ವಿಷಯಾನಾ?’ ಅಂತ ಜನಕ್ಕೆ ಸ್ಪಷ್ಟ ಪಡಿಸಿ ತಮ್ಮ ನಡವಳಿಕೆ ಮೂಲಕ ವಿವರಣೆ ಕೊಡಬೇಕಾಗಿದೆ ಗುರು!

9 ಅನಿಸಿಕೆಗಳು:

Anonymous ಅಂತಾರೆ...

ಡೆರಿಕ್ ಫುಲ್ ಇನ್ ಫಾ ಸಾಹೇಬ್ರು ಇದು ಎರಡನೇ ಬಾರಿ ವಿಧಾನಸಭೆಗೆ ಆಂಗ್ಲೊ ಇಂಡಿಯನ್ ಕೋಟಾದಾಗ್ ಆಯ್ಕೆ ಆಗಿ ಬಂದಾರ್ ರೀ. ಕನ್ನಡ ಸ್ಪಷ್ಟವಾಗಿ ಮಾತಾಡಾಕ್ ಬರು ಇವರು ವಿಧಾನಸಭೆಯಾಗ್ ಕನ್ನಡದಲ್ಲಿ ಮಾತಾಡಿದ್ರೆ ಎಲ್ಲಿ ತಮ್ಮ ಮರ್ಯಾದಿ ಹೋಗತೆತಿ, ಎಲ್ಲಿ ಮಂದಿ ಕಾಮೆಡಿ ಮಾಡಿ ನಗ್ತಾರ್ ಅನ್ನು ಹಂಗ ನಡಕೊಂಡಿದ್ದು ಮಾತ್ರ ದೊಡ್ಡ ತಪ್ಪು ರೀ. ಅಲ್ಲ ರೀ,, ಇವರೇನು ಕರ್ನಾಟಕದಾಗ್ ಇರು ಆಂಗ್ಲೊ ಇಂಡಿಯನ್ ಸದಸ್ಯರ ಪ್ರತಿನಿಧಿನೋ, ಏನ್ ಲಂಡನ್ ನಾಗ್ ಇರು ಬ್ರಿಟಿಷ ಮಂದಿದೋ ಅಂತ ಕನ್ನಡಿಗರಿಗೆ ಕನಫ್ಯುಸ್ ಆಗೇತ್ರಿ. ಕರ್ನಾಟಕದಾಗ್ ಇದ್ದು, ಕನ್ನಡಿಗರೆ ಆಗಿರೋ ಆಂಗ್ಲೊ ಇಂಡಿಯನ್ ಸದಸ್ಯರ ಪ್ರತಿನಿಧಿಯಾಗಿ ವಿಧಾನಸಭೆ ಗೆ ನಾಮಕರಣಗೊಂಡಿರೋ ಸಾಹೇಬ್ರು, ಈ ನಾಡಿನ ಸಾರ್ವಭೌಮ ಭಾಷೆ ಬಗ್ಗೆ ಇಂತ ಕೆಟ್ಟ ನಿಲುವು ಇಟ್ಕೊಂಡಿರುದು ನೋಡಿದಾಗ್ ತಲಿನಾಗ್ ಕೊರಿಯು ಪ್ರಶ್ನೆ ಒಂದಾ ಐತ ರೀ,, ನಾಡು, ನಾಡಿನ ನುಡಿಯ ಬಗ್ಗ ನಯಾ ಪೈಸೆ ಕಾಳಜಿ ಇಲ್ಲದಿರು ಇಂತವರನ್ನೆಲ್ಲಾ ವಿಧಾನ ಸೌಧದ ಮೆಟ್ಟಲಾ ಹತ್ತಾಕ್ ಬಿಟ್ಟಿದ್ದಾರ್ ಯಾಕೆ ಅಂತ? ಕನ್ನಡ, ಕರ್ನಾಟಕದ ವಿಷಯದಾಗ್ ಯಾವ ಕಾರಣಕ್ಕೂ ರಾಜಿ ಮಾಡಕೊಳ್ಳಂಗಿಲ್ಲ ಅಂತ ಅಧಿಕಾರಕ್ಕೆ ಬಂದ ಬಿ.ಜೆ.ಪಿಯವರಿಗೆ ಈ ಪುಣ್ಯಾತ್ಮನ ಬಿಟ್ಟು ಬ್ಯಾರೆ ಯಾರು ಸಿಗಲಿಲ್ಲೇನ್ ಅಂತ ನಮ್ಮ ಮಂದಿ ಕೇಳಲಿಕ್ಕತ್ತಾರ್ ರೀ.

Anonymous ಅಂತಾರೆ...

ಕನ್ನಡಕ್ಕೆ ಮಣಿದ ಖಮರುಲ್ !
ಅಷ್ಟೆ ಅಲ್ರೀ,, ಅಧಿವೇಶನದಾಗ್ "ನನಗ ಕನ್ನಡ ಬರುದಿಲ್ಲ, ನಾ ಇಂಗ್ಲಿಷ್ ನಾಗ್ ಮಾತಾಡುದ್ " ಅಂತ ಊರಾಗಿಲ್ಲದ ಸೊಕ್ಕು ತೋರಸಿದ್ದ ಇನ್ನೊಬ್ಬ ಸದಸ್ಯ ಖಮರುಲ್ ಇಸ್ಲಾಂಗೆ ಆ ಪಕ್ಷ ಈ ಪಕ್ಷ ಅನ್ನದೇ, ಎಲ್ಲಾ ಸದಸ್ಯರು ಒಂದಾಗಿ ಉಗದು, ಮಂಗಳಾರತಿ ಮಾಡಿ ಕನ್ನಡದಲ್ಲೇ ಮಾತಾಡು ಹಂಗ ಮಾಡ್ಯಾರ್ ಅಂತ ವಿ.ಕ ದ ವರದಿ ಬಂದೆತ್ರಿ. "ಕೀಳು ಪ್ರಚಾರಕ್ಕಾಗಿ , ನನಗ ಕನ್ನಡದಲ್ಲಿ ಮಾತಾಡಾಕ್ ಒತ್ತಾಯ ಮಾಡಾಕತ್ತಿರಿ" ಅಂತ ಖಮರುಲ್ ಸಾಹೇಬ್ರು ಆರೋಪ ಮಾಡಿದಾಗ್ ಅವರು ಇವರು ಅನ್ನದೇ ಎಲ್ಲಾರು ಮುರಕೊಂಡು ಬಿದ್ದು ಗಪ್-ಚುಪ್ ಕನ್ನಡ ಮಾತಾಡು ಹಂಗ ಮಾಡಿದ ಎಲ್ಲ ಸದಸ್ಯರು ಅಭಿನಂದನೆಗೆ ಅರ್ಹರು ರೀ. " ನಾವೆಲ್ಲರೂ ಕರ್ನಾಟಕದಲ್ಲಿ ಇದ್ದೇವೆ. ಎಲ್ಲರೂ ಕನ್ನಡ ಬಲ್ಲವರಾಗಿದ್ದೇವೆ. ಬಹುಸಂಖ್ಯಾತರ ಭಾವನೆಗೆ ನೋವುಂಟು ಮಾಡಬೇಡಿ" ಎಂದು ಖಮರುಲ್ ಸಾಹೇಬ್ರಿಗೆ ಬುದ್ಧಿ ಹೇಳಿದ ಸ್ಪೀಕರ್ ಜಗದೀಶ ಶೆಟ್ಟರ್ ಅವರ ಮಾತು ಅಗದಿ ಖರೇ ನೋಡ್ರಿ.
ಕರ್ನಾಟಕದಾಗ್ ಇರು ಯಾವುದೇ ಧರ್ಮ, ಯಾವುದೇ ಜಾತಿ ಮಂದಿ ಆದ್ರೂ ಅವರೆಲ್ಲ ಕನ್ನಡಿಗರು, ಕನ್ನಡವೊಂದೆ ನಮ್ಮನ್ನೆಲ್ಲ ಒಂದ್ ಮಾಡು ಶಕ್ತಿ ಅನ್ನುದ ಈ ಬುದ್ಧಿಗೇಡಿಗಳಿಗೆ ಸ್ವಲ್ಪ ತಿಳಿ ಹೇಳಬೇಕಾಗೆತ್ರಿ.

ಒಗ್ಗಟ್ಟನಾಗ್ ಎಲ್ಲಾ ಐತ್ರಿ:
ಆ ಪಕ್ಷ, ಈ ಪಕ್ಷ ಅನ್ನದೇ ಈ ವಿಷಯದಾಗ್ ಕನ್ನಡದ ಪರವಾಗಿ ಧ್ವನಿ ಎತ್ತಿದ ಹಂಗೆ ಕರ್ನಾಟಕ, ಕನ್ನಡ ಹಾಗೂ ಕನ್ನಡಿಗನ ಅಳಿವು, ಉಳಿವು, ಉದ್ಧಾರಕ್ಕೆ ಸಂಬಂಧ ಪಟ್ಟ ಎಲ್ಲ ವಿಷಯದಾಗೂ ಒಟ್ಟಾಗಿ ಧ್ವನಿ ಎತ್ತಿ, ಕೆಲಸ ಮಾಡಿದ್ರೆ ಇಂತಿನ ಸೊಕ್ಕಿನ ನಡವಳಿಕೆ ಕಮ್ಮಿನೂ ಆಗತೇತಿ, ನಮ್ಮ ನಾಡಿನ ಸಮಸ್ಯೆಗಳು ಸ್ವಲ್ಪ ಜಲ್ದಿನೂ ಬಗಿಹರಿತಾವ್ ಅನಬೌದು

Kishore ಅಂತಾರೆ...

ದೆಹಲಿ ನಲ್ಲಿ ಹೋಗಿ ಇಲ್ಲಿಯೋರು ಯಾರಾನ, ನಂಗೆ ಹಿಂದಿ ಏನೋ ಬರುತ್ತೆ ಆದ್ರೆ ಅದ್ಯಾಕೋ ಬಾಯೇ ಹೊರ್ಡಕ್ಕಿಲ್ಲ ಅಂದ್ರೆ ಸುಮ್ನೆ ಬಿಡ್ತಾರ ಸ್ವಾಮಿ... ರಾಷ್ಟ್ರ ಭಾಷೆ, ರಾಷ್ಟ್ರ ಭಾಷೆ ಅಂತ ಬಾಯಿ ಬಾಯಿ ಬೋಡ್ಕೊತಾರೆ.
ಬ್ರಿಟಿಷರ ನಂತರದ ಕರ್ನಾಟಕದಲ್ಲೂ ಕನ್ನಡಕ್ಕೆ ಸಾರ್ವಭೌಮತ್ವ. ಇದನ್ನು ಕರ್ನಾಟಕದ ಯಾವುದೇ ಸರ್ಕಾರ ಎಂದೆಂದಿಗೂ ಮರೆಯದಿರಲಿ. ಕನ್ನಡಕ್ಕೆ ಏನು ಸ್ಥಾನ ಕೊಡ್ತಾರೆ ಅನ್ನೋ ಪ್ರಶ್ನೆ ಗಿಂತ ಇವರಿಗೆಲ್ಲ ರಾಷ್ಟ್ರೀಯತೆ ಅಂದ್ರೆ ಇವರ ಅರ್ಥದಲ್ಲಿ ಏನು ಅಂತ ಕೇಳಿ ತಿಳಿಬೇಕು. ಸದನದ ಕಾರ್ಯ ಕಲಾಪಗಳೆಲ್ಲ ಕನ್ನಡ ದಲ್ಲೇ ಆಗಬೇಕು ಅನ್ನೋದನ್ನು ಸರ್ಕಾರ ಗಮನದಲ್ಲಿ ಇಟ್ಕೊಬೇಕು.

Anonymous ಅಂತಾರೆ...

ಸಂವಿಧಾನದ ಪ್ರಕಾರ ಇಂಗ್ಲೀಷಲ್ಲಿ ಮಾತಾಡೋಕೆ ಅವಕಾಶ, ಹಕ್ಕು ಇದೆ. ಆದ್ರೆ ಈ ಪುಣ್ಯಾತ್ಮ ಕನ್ನಡ ಬಂದ್ರೂ ಕೂಡ ನಾನು ಇಂಗ್ಲೀಷಲ್ಲೇ ಮಾತಾಡೋದು ಅಂದ್ನಂತೆ. ಜಗದೀಶ ಶೆಟ್ಟರ್ರು ಈ ನಾಡಿನ ಭಾಷೆ ಕನ್ನಡ, ಇಲ್ಲಿನ ಜನರ ಭಾವನೆಗಳಿಗೆ ಬೆಲೆಕೊಟ್ಟು ಕನ್ನಡದಲ್ಲಿ ಮಾತಾಡಿ ಅಂತ ಅಂದ್ರಂತೆ. ಆದ್ರೂ ಜಗ್ಗದ ಆಸಾಮಿ ನಾನು ಹಾಗಿದ್ರೆ ಮಾತಾಡೋದೆ ಇಲ್ಲ ಅಂತ ಕುಂತುಬಿಟ್ನಂತೆ. ಇವನನ್ನು ಒದ್ದು ಹೊರಗೆ ಹಾಕಿದ್ರೆ ಸರಿಯಾಗತ್ತೆ.

Migratory bird story from Mongolia ಅಂತಾರೆ...

vattinayag, kannada neldag hutti, kannada nellada beladu, kanndaammana maryadi thegu intha dushta vektige ewnantha karili guru? kannada ve tai thande, kannadave bandu balaga, kannadave namma hettamma antha hoiknodu hodru namma kavigalu. Kannada andra sulid bale hanninahga andru. Kannada martra, marthanga namma thayi anth intha alpa sankath adikari galige tilibeko thamma

Anonymous ಅಂತಾರೆ...

ಅಲ್ಲಾ, ಈ ತರ ಜನರು ನಾಡಿನ ತುಂಬಾ ಇದ್ದಾರಲ್ಲಾ. ಬೆಂಗಳೂರಲ್ಲಿ ಎಷ್ಟೋ ಜನ ಕನ್ನಡಿಗರೇ ಕನ್ನಡ ಬಂದ್ರೂ ಮಾತಾಡಲ್ಲ, ಇಂಗ್ಲೀಷಲ್ಲೆ ಮಾತಾಡೋದು. ಅದರಲ್ಲು ಕನ್ನಡದ ಹುಡ್ಗೀರಿಗಂತೂ ಇಂಗ್ಲೀಷಲ್ಲಿ ಮಾತಾಡೋದೇ ದೊಡ್ಡ ಲೆವೆಲ್ಲು ! ಇನ್ನು ಎರಡು ತಲೆಮಾರಿನ ನಂತರ ವಿಧಾನ ಸಭೆಯಲ್ಲಿ ಇಂಗ್ಲೀಷಲ್ಲೇ ಪ್ರಶ್ನೋತ್ತರ ನೆಡೆಯುತ್ತೇನೋ! ಯಾಕಂದ್ರೆ ಆವಾಗ ಎಲ್ಲಾ ಇಂಗ್ಲೀಷ್ ಮೀಡಿಯಂನಲ್ಲಿ ಓದಿಕೊಂಡು ಬಂದವರೇ ಇರ್ತಾರೆ. ಅವ್ಕೆ ೪-೫ ವಾಕ್ಯವೂ ಕನ್ನಡ ಓದೋಕೆ, ಬರೆಯೋಕೆ , ಮಾತಾಡೋಕೆ ಬರ್ತಿರೋಲ್ಲ. ಹಾಗಾಗಿ ವಿರೋಧವೂ ಇರೋಲ್ಲ.ಏನಂತೀಯಾ ಗುರು?

Anonymous ಅಂತಾರೆ...

EE ibn navarige tumba kobbu antha kaaNatte.. karave ee manushyana bagge maaDida vishyana hege bardidaare antha swalpa ellaruu ibn website nalli nodi. nenne ya India news kondiyalli sigutte.. alla, ee ibn, ndtv ivella news heLakke irodo illa journalistsgaLa opinion bariyokke iro blog gaLo.. ivrella kannadaabhimaana idre deshadrohigaLu anno rithi bardidaare.. AA reporter hesru Abhir antha, avanige saryaagi baryappa, news na news thara bari ninna blog maDko beDa antha heLbeku.. naanu ee reethi comment barde.. aadre yaako ibn navaru adanna publishhe maaDtha illa.. en aaytho gottilla :(

Anonymous ಅಂತಾರೆ...

IBN LIVE janagalige modale buddi illa, illa aa chota journalist sagarada putranigo vedike yene madidru virudda baribeku antha jog mele shapatha madida haage ide.

ivaru kelodhu yaranna, aa huccha MS Satyu na illa aa Gangaraju intha janaranna.

ivara prakara Kuselan virodisiddu tappu, Rajanai baididdhu sari, kannada matadolla antha helike kandisiddu tappu, alla guru ivarennu ENGLISH AGENTgalaa. kannada vishya bandre saaku
ENGLISH SAVIOURS OF INDIA antha army madkondu muggi biltaralla, ivru omme Lord.Makale sahebara bagge odali.

Unknown ಅಂತಾರೆ...

ರಾಷ್ಟ್ರೀಯತೆ ನಮ್ಮ ಕನ್ನಡ ಸಂಸ್ಕೃತಿಗೆ ಮಾರಕವಾಗಿದೆ. ಬಿಜೆಪಿಯವರ ರಾಷ್ಟ್ರೀಯತೆ ಕರ್ನಾಟಕವನ್ನು ಉತರ ಭಾರತೀಯರ ಕಾಲೊನೀ ಮಾಡುವುದರಲ್ಲಿ ಸಂದೇಹವಿಲ್ಲ. ನಾನು ಈಗ ವಿದ್ಯಾಭ್ಯಾಸಕ್ಕಾಗಿ ನಾರ್ತ್ ಇಂಡಿಯಾದಲ್ಲಿ ಇದ್ದೀನಿ. ಇಲ್ಲಿ ನನ್ನ ಕ್ಲಾಸ್‌ಮೇಟ್ಸ್ ಜೊತೆ ಮಾತಾಡುವಾಗ ಕೇಳಿ ಬಂದ ವಿಷಯ ಅಂದ್ರೆ 'ಕರ್ನಾಟಕ್ ಮೆಇನ್ ಹಮಾರಿ ಸರ್ಕಾರ್ ಬನ್ ಗಯಿ' ನಮಗೆ ನಮ್ಮದೇ ಆದ ಪ್ರಾದೇಶಿಕ ಪಕ್ಷದ ಅವಶ್ಯಕತೆ ಹಿಂದೆಂದಿಗಿಂತಲೂ ಈಗ ಇದೆ. ತಮಿಳುನಾಡಿನ ಮಾದರಿಯನ್ನು ನಾವು ಅನುಸರಿಸಬೇಕು. ಕರ್ಣಾಟ ರಕ್ಷಣ ವೇದಿಕೆ ಪ್ರಾದೇಶಿಕ ಪಕ್ಷವಾಗಿ ಬೆಳೆಯಬೇಕು.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails