ನಾಡಿನ ಕನ್ನಡಿಗಳನ್ನು ಹಂಚೋಣ ಬನ್ನಿ!

ಕೇಂದ್ರ ಸರ್ಕಾರಕ್ಕೆ ಅಂಚೆ ಚೀಟಿ ಸಲಹಾ ಸಮಿತಿಯು ಇತ್ತೀಚೆಗೆ ೨೦೦೮ರ ಸಾಲಿನ ಅಂಚೆ-ಚೀಟಿಗಳ ಪಟ್ಟಿ ಸೂಚಿಸಿದೆ. ಇದ್ರಲ್ಲಿ ಕನ್ನಡಿಗರು ಖುಷಿ ಪಡುವಂತ ಇಸ್ಯ ಇದೆ ಗುರು! ಈ ಬಾರಿ ಹೊರ ಬರ್ತಿರೋ ಅಂಚೆ-ಚೀಟಿಗಳಿಗೆ ಕನ್ನಡದ ಮೇರುನಟ ರಾಜ್ ಅವರನ್ನು ಮತ್ತು ಬೆಂಗಳೂರಲ್ಲಿರೋ ಭಾರತೀಯ ವಿಜ್ಞಾನ ಮಂದಿರಾನ ಆಯ್ಕೆ ಮಾಡಿದಾರೆ. ಆದರೆ ಭಾರತದ ಒಕ್ಕೂಟದಲ್ಲಿ ಕರ್ನಾಟಕಕ್ಕೆ ಈ ರೀತಿ ಎಷ್ಟು ಬಾರಿ ಅಂಚೆ-ಚೀಟಿಗಳ ಒಪ್ಪಿಗೆ ಸಿಕ್ಕಿದೆ? ಎಷ್ಟು ಅಂಚೆ-ಚೀಟಿಗಳು ಕರ್ನಾಟಕವನ್ನು ಪ್ರತಿನಿಧಿಸಿವೆ? ೬೦ ವರ್ಷಗಳಲ್ಲಿ ಹೊರಬಂದಿರೋ ೨೦೦೦ಕ್ಕಿಂತ್ಲೂ ಹೆಚ್ಚು ಅಂಚೆ-ಚೀಟಿಗಳಲ್ಲಿ ಕರ್ನಾಟಕನ ಪ್ರತಿನಿಧಿಸೋ ಚೀಟಿಗಳು ಕೇವಲ ೨೭!


ಅರ್ಹತೆ ಇದ್ರೂ ಹೋರಾಡ್ಬೇಕು. ಹೋರಾಡಿದ್ರೂ ಗೆರೆ ಇರ್ಬೇಕು!

ಭಾರತದ ಅಂಚೆ-ಚೀಟಿ ಇತಿಹಾಸದ ಮೇಲೊಂದು ಕಣ್ಣು ಹಾಯಿಸಿ ನೋಡಿದ್ರೆ, ಅದ್ರಲ್ಲೂ ಗಣ್ಯರ ಜ್ಞಾಪಕಾರ್ಥವಾಗಿ ಹೊರಡಿಸಿರೋ ಅಂಚೆ-ಚೀಟಿಗಳ ಲೆಕ್ಕ ನೋಡಿದ್ರೆ, ನಮ್ಮ ನಾಡಿನಲ್ಲಿ ಅಂಚೆ-ಚೀಟಿಗೆ ಲಾಯಕ್ಕಾದ ಉದಾಹರಣೆಯೇ ವಿರಳ ಅನ್ನೋ ಸಂದೇಶ ಕಾಣತ್ತೆ! ಬೇರೆ ರಾಜ್ಯಗಳೊಡನೆ ಹೋಲಿಸಿದ್ರೆ ನಮ್ಗೆ ಸಿಕ್ಕಿರೋದು ಬೆಣ್ಣೆ ಹೆಸ್ರಲ್ಲಿ ಸುಣ್ಣವೇ ಗುರು! ಅಲ್ಲಿ ಇಲ್ಲಿ, ಅದೂ ಕನ್ನಡ ಪರ ಸಂಘಟ್ನೆಗಳ ಒತ್ತಾಯಕ್ಕೆ ಒಂದೋ ಎರ್ಡೋ ಅಂಚೆ-ಚೀಟಿ ಹೊರಬಂದಿವೆ. ಅಂಚೆ-ಚೀಟಿಯ ವಸ್ತು ಆಯ್ಕೆ ನಿಯಮಗಳ ಪ್ರಕಾರ ಅರ್ಹರಾದ ಗಣ್ಯರೇ ಇರ್ಲಿ, ಅಥ್ವಾ ಒಳ್ಳೆಯ ಜಾಗ ಮತ್ತು ನೈಸರ್ಗಿಕ ಸಂಪತ್ತಾಗ್ಲಿ ಕರ್ನಾಟಕದಲ್ಲೇನು ಕಡಿಮೆ? ಇಷ್ಟೆಲ್ಲಾ ಇದ್ರೂ ಪ್ರತಿ-ವರ್ಷ ಅಂಚೆ-ಚೀಟಿ ಹೊರಡಿಸೋ ಮುನ್ನ ಕನ್ನಡಿಗರು ನಮ್ಮ ನಾಡಿನ ಚೀಟಿ ಬರ್ಲಿ... ಬರ್ಲಿ... ಅಂತ ಒತ್ತಾಯ ಮಾಡ್ಬೇಕಾಗಿದೆ. ಇದು ಕನ್ನಡ ನಾಡಿನ ಚುನಾಯಿತ ಪ್ರತಿನಿಧಿಗಳಲ್ಲಿ ಮತ್ತು ರಾಜ್ಯದ ಅಂಚೆ ಇಲಾಖೆಯ ಪ್ರಮುಖರಲ್ಲಿ ಕರ್ನಾಟಕದ ಹಿತಾಸಕ್ತಿಯ ಕೊರತೇನ ತೋರ್ಸೋದಲ್ದೆ ಅಂಚೆ-ಚೀಟಿ ವ್ಯವಸ್ಥೆಯ ನ್ಯೂನತೆಯನ್ನೂ ಬಿಂಬಿಸ್ತಾ ಇದೆ.

ಚೀಟಿ ಬರ್ಬೇಕು, ಆದ್ರೆ ಹೇಗಿರ್ಬೇಕು?

ರಾಜ್ ಮುಖ ಇರೋ ಅಂಚೆ-ಚೀಟಿ ಬರ್ತಿರೋದ್ರಿಂದ ನಮಗೆ ಖುಷಿಯಂತೂ ಆಗೋದೇ. ಆದ್ರೆ ಕರ್ನಾಟಕಕ್ಕೆ ಹೆಮ್ಮೆ ತರುವ ಈ ಅಂಚೆ-ಚೀಟಿ ಕೇವಲ ಜ್ಞಾಪಕಾರ್ಥಕದ ನಮೂನೆ ಚೀಟಿಯಾಗದೇ, ನಿಜವಾಗ್ಲೂ ಬಳಕೆಗೆ ಬರುವಂತ ಚೀಟಿ ಆಗ್ಬೇಕು. ಅಂಚೆ ಇಲಾಖೆಯ ನಿಯಮದ ಪ್ರಕಾರ ಜ್ಞಾಪಕಾರ್ಥಕ್ಕೆ ಅಂತ ಹೊರಬರೋ ಚೀಟಿಗಳು ದಿನ-ನಿತ್ಯದ ಉಪಯೋಗಕ್ಕೆ ಬರೋಲ್ವಂತೆ. ಅವು ಕೇವಲ ಸಂಗ್ರಹಕ್ಕೆ ಅಂತ್ಲೇ ಮುದ್ರಿತವಾಗತ್ವಂತೆ! ನಾಡಿನ ಗಣ್ಯರ ಮತ್ತು ನಾಡಿನ ಸಿರಿ-ಸಂಪತ್ತುಗಳ ಬಗ್ಗೆ ಜನರಿಗೆ ತಿಳ್ಸೋಕ್ಕೆ ಒಳ್ಳೇ ಮಾಧ್ಯಮ ಈ ಅಂಚೆ-ಚೀಟಿ ಆಗಿರೋವಾಗ ಚೀಟೀನ ಪುಸ್ತಕದೊಳ್ಗೇ ಇರಿಸೋ ಈ ನಿಯಮ ಯಾರಿಗ್ ಬೇಕು ಗುರು? ನಿಜ್ವಾಗ್ಲೂ ಡಾ. ರಾಜ್ ಅವರ ಹೆಸ್ರಲ್ಲಿ ಬರೋ ಅಂಚೆ-ಚೀಟಿ ಒಂದು ರುಪಾಯಿಂದ ಹಿಡಿದು ಅತಿ ಹೆಚ್ಚಿನ ಮೌಲ್ಯದ ಚೀಟಿವರೆಗೂ ಹೊರಬರ್ಬೇಕು, ದೇಶದೆಲ್ಲೆಡೆ ಸಿಗೋ ಹಾಗೂ ಆಗ್ಬೇಕು. ಹೀಗೆ ಮಾಡೋದ್ರಿಂದ ಬೇರೆ ರಾಜ್ಯದೋರೂ ಕರ್ನಾಟಕದ ಗಣ್ಯರ ಬಗ್ಗೆ ತಿಳ್ಕೊಳೋದು ಸಾಧ್ಯವಾದೀತು. ಆಗ್ಲೇ ಅಂಚೆ ಚೀಟಿಯ ನಿಜವಾದ ಲಾಭ - ನಾಡಿನ ಕನ್ನಡಿಯಾಗಲು ಸಾಧ್ಯ. ಅಲ್ದೇ ಹೋದ್ರೆ ಸುಮ್ನೆ ಟಸ್ಸೆ ಒತ್ತಿ ಕಳ್ಸಿದ್ರೆ ಅಂಚೆ ಏನು ಹೋಗಲ್ಲ ಅಂತದಾ ಗುರು? ಏನಂತ್ಯಾ?

1 ಅನಿಸಿಕೆ:

Kishore ಅಂತಾರೆ...

ನಾಮ ಫಲಕಗಳು ಕನ್ನಡದಲ್ಲಿ ಏಕೆ ಇರಬೇಕು? ಅಂಚೆ ಚೀಟಿಗಳಲ್ಲಿ ಕರ್ನಾಟಕವನ್ನು ಏಕೆ ಬಿಂಬಿಸಬೇಕು? symbolism ಅಂದ್ರೆ ಇದೇನೇ. "೨೦೦೦ಕ್ಕಿಂತ್ಲೂ ಹೆಚ್ಚು ಅಂಚೆ-ಚೀಟಿಗಳಲ್ಲಿ ಕರ್ನಾಟಕನ ಪ್ರತಿನಿಧಿಸೋ ಚೀಟಿಗಳು ಕೇವಲ ೨೭!" ಜನರ ಮನಸ್ಸಿನಲ್ಲಿ ಮಾನಸಿಕ ಒಪ್ಪಿಗೆ (psychological bonding) ಗೆ ಎಷ್ಟು ಕೊರತೆಯಾಗ ಬೇಡ? ಜನ ಸಾಮಾನ್ಯರಲ್ಲಿ ಕರ್ನಾಟಕವನ್ನು ಪ್ರಥಿನಿದಿಸುವಂಥದ್ದು ಏನೂ ಇಲ್ಲ ಎಂಬ ಭಾವನೆ ಮಾರಕವಾದದ್ದು. ಇದನ್ನು ತೊಡೆದು ಹಾಕುವಲ್ಲಿ ಇದೊಂದು ಒಳ್ಳೆಯ ಹೆಜ್ಜೆ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails