ನೆರೆಯವರೇ ಹೊರೆಯಾಗಿಸುವ ವ್ಯವಸ್ಥೆ!

ನೀರು ಬಿಡ್ತೀವಿ ಅಂತ ಹೇಳಿಯೋ ಹೇಳದೆಯೋ ಪುಸುಕ್ ಅಂತ ಲಕ್ಷಾಂತರ ಕ್ಯೂಸೆಕ್ನಷ್ಟು ನೀರು ಕರ್ನಾಟಕದೆಡೆ ಹರಿದುಬಿಟ್ರೆ ಇದು ಒಕ್ಕೂಟದ ವ್ಯವಸ್ಥೇಲಿರೋ ಎರಡು ರಾಜ್ಯಗಳ ನಡುವೆ ನಡೆದಿರೋ ಘಟನೆಯೋ ಅಥ್ವಾ ಯುದ್ಧದಲ್ಲಿರೋ ಎರ್ಡು ದೇಶಗಳ ನಡುವೆ ನಡೆದಿರೋ ಘಟನೆಯೋ ತಿಳ್ಯಲ್ಲ! ಅಲ್ಲ, ರಾಜ್ಯಗಳ ಒಕ್ಕೂಟದ ಬುನಾದಿಯ ಮೇಲೇ ನಿಂತಿರುವ ಈ ಭಾರತದ ವ್ಯವಸ್ಥೇಲಿ ಹೀಗೇ ಮುಂದುವರಿದರೆ ಹೇಗೆ ಗುರು? ತಮ್ಮ ರಾಜ್ಯದಲ್ಲಿ ಹುಟ್ಟಿ ಹರಿಯೋ ನೀರು ಹೆಚ್ಚಿತು ಅಂದ್ರೆ ಪಕ್ಕದ ರಾಜ್ಯದ ಮೇಲೆ ಚೆಲ್ಲಿಬಿಡೋದೇ ಸರಿ, ಈ ಬಗ್ಗೆ ಮುನ್ಸೂಚನೆ ನೀಡುವ ಅವಶ್ಯಕತೆಯೇ ಇಲ್ಲ ಅನ್ನೋ ಈ ನೆರೆ ರಾಜ್ಯದ ಮುಖ್ಯಮಂತ್ರಿಗಳ ಮಾತು ಕೇಳಿದರೆ ಇದ್ಯಾಕೋ ಒಂದಿಷ್ಟೂ ಸರಿ ಇಲ್ಲ ಅನ್ಸತ್ತೆ ಗುರು!


ಒಕ್ಕೂಟದಲ್ಲಿ ವಿಕೋಪ ನಿರ್ವಹಣೆ ಹೇಗೆ?

ಭಾರತದಲ್ಲಿ ನೂರಾರು ನದಿಗಳಿದ್ದು, ಸುಮಾರು ಎಲ್ಲಾ ನದಿಗಳೂ ಒಂದು ರಾಜ್ಯದಲ್ಲಿ ಹುಟ್ಟಿ ಮತ್ತೊಂದಿಷ್ಟು ರಾಜ್ಯಗಳ ಮೂಲಕ ಹರಿದು, ಕೊನೆಗೆ ಸಮುದ್ರ ಸೇರುವುದು ಸಾಮಾನ್ಯ ಜ್ಞಾನವೇ ಅನ್ಬೋದು. ಹೀಗಿರುವಾಗ, ಒಂದು ರಾಜ್ಯದಲ್ಲಿ ಮಳೆ ಹೆಚ್ಚಾಗಿ ಅಲ್ಲಿನ ನದಿಯಲ್ಲಿ ನೀರು ಹೆಚ್ಚಾಗ್ತಾ ಹೋದ್ರೆ ಅಣೆಕಟ್ಟಿನಿಂದ ಹೆಚ್ಚುವರಿ ನೀರನ್ನು ಹೊರಬಿಡೋದು ಸಹಜವೇ. ಆದರೆ ಈ ಅಣೆಕಟ್ಟಿನಿಂದ ಹೊರಟ ನೀರು ನೆರೆ ರಾಜ್ಯದೊಳಗೆ ಹೋಗಿ ಜನಜೀವನ ನಾಶ ಮಾಡಿದ್ರೂ ಪರ್ವಾಗಿಲ್ಲ ಅನ್ನೋ ನಿಲುವು ಇಂತಹ ರಾಜ್ಯಗಳ ಒಕ್ಕೂಟಕ್ಕೆ ಸರಿಹೊಂದಲ್ಲ ಗುರು! ನೀರು ಬಿಡುವುದರ ಬಗ್ಗೆ ಸೂಚನೆ ಕೊಟ್ಟಿದ್ದೇ ಆದ್ರೂ ಬಿಡಲಾಗುವ ನೀರಿನ ಗಾತ್ರ, ಗತಿ, ದಿನದಲ್ಲಿ ಯಾವ್ಯಾವ ಸಮಯದಲ್ಲಿ, ಮತ್ತು ಎಷ್ಟು ಹೊತ್ತು ಇಂತೆಲ್ಲಾ ಮಾಹಿತಿಯನ್ನೇ ಕೊಡದೇ ಸುಮ್ನೆ ಹಂಗೇ ನೀರು ಬಿಟ್ಬುಟ್ಟು ನೀವು ಎಲ್ಲಾದ್ರು ಹಾಳಾಗೋಗಿ ಅಂತ ಹೇಳೋದಕ್ಕೆ ಕರ್ನಾಟಕಕ್ಕೇನು ಒಕ್ಕೂಟದಲ್ಲಿ ಎಣಿಕೆಯೇ ಇಲ್ವಾ? ಇಂತಹ ಸಂದರ್ಭದಲ್ಲಿ ಕೇಂದ್ರ ಏನೂ ಹೇಳದೇ ಕುಳ್ತಿರೋದು ಎಷ್ಟು ಅನ್ಯಾಯ ಗುರು? ನೀರು ಬಿಡೋದ್ರಿಂದ ಯಾವುದೇ ಒಂದು ರಾಜ್ಯಕ್ಕೆ ಹಾನಿಯಾಗದಂತೆ ನೋಡ್ಕೊಬೇಕಲ್ವ? ಅದೇ ನಮ್ಮ ಅಲಮಟ್ಟಿಯ ಎತ್ತರ ಒಂದಿಷ್ಟು ಏರಿಸಲು ಹೋದಾಗ ಮಹಾರಾಷ್ಟ್ರದ ಪರವಾಗಿ ನಿಂತ ಕೇಂದ್ರ ಸರ್ಕಾರ ಈಗ ನಮ್ಮ ಬೆಳಗಾವಿಯಲ್ಲಿ ಪ್ರವಾಹವೇ ಬಂದ್ರೂ ಸುಮ್ನೆ ಕೂತಿರೋದು ಖಂಡನೀಯ ಗುರು!

ಸೌಹಾರ್ದತೆಯೇ ಈ ಒಕ್ಕೂಟಕ್ಕೆ ಬುನಾದಿ


ನದಿ ನೀರಿನ ಬಳಕೆ/ಹಂಚಿಕೆಯೇ ಇರಲಿ, ವಿದ್ಯುತ್ತಿನ ಹಂಚಿಕೆಯೇ ಇರಲಿ, ಪರಿಹಾರ ಹಣ ಹಂಚಿಕೆಯೇ ಇರಲಿ, ಅಥವಾ ಇನ್ಯಾವುದೇ ಅಂತರ-ರಾಜ್ಯ ಸಂಬಂದಿತ ವ್ಯವಸ್ಥೆಯ ಬಗ್ಗೆ ಕಣ್ಣ ಹಾಯಿಸಿ ನೋಡಿದ್ರೆ ರಾಜ್ಯಗಳ ಒಕ್ಕೂಟವಾದ ಭಾರತದಲ್ಲಿ ಅದ್ಯಾಕೋ ಒಂದಿಷ್ಟೂ ಅರ್ಥವಿಲ್ಲ ಅಂತ್ಲೇ ಕಾಣಲು ಶುರುವಾಗಿದೆ. ಮೇಲೆ ಹೇಳಿದಂತ ಯಾವುದೇ ವಿಷಯದಲ್ಲಿ ಎರಡು ಅಥವಾ ಹೆಚ್ಚು ರಾಜ್ಯಗಳ ನಡುವೆ ಸಂಬಂಧಗಳನ್ನು ಚೆನ್ನಾಗಿ ಇಡೋದ್ರಲ್ಲೇ ಆಗ್ಲಿ, ಎರ್ಡೂ ರಾಜ್ಯಗಳ ಏಳ್ಗೆಗೆ ಪೂರಕವಾದ ನಿರ್ಧಾರ ತೊಗೊಳೋದ್ರಲ್ಲಾಗ್ಲಿ, ಅಥ್ವಾ ಇದಕ್ಕೆ ಬೇಕಾದ ನಿಯಮಾವಳಿ ರೂಪಿಸೋದ್ರಲ್ಲಾಗ್ಲಿ ಕೇಂದ್ರ ಇದುವರೆಗೂ ನಿದ್ದೆ ಹೊಡೀತಿರೋದು ಪ್ರತಿ ಉದಾಹರಣೆಯಲ್ಲೂ ಕಾಣ್ತಿದೆ ಗುರು! ಹೀಗೆ ಮಾಡಿದ್ರೆ ಒಕ್ಕೂಟ ಅನ್ನೋದು ನಿಂತೀತಾ? ರಾಜ್ಯಗಳ ನಡುವಿನ ಸೌಹಾರ್ದತೆ ಉಳಿದೀತಾ? ಕೇಂದ್ರ ಸರ್ಕಾರ ಈ ಅಂತರ-ರಾಜ್ಯ ಸೌಹಾರ್ದತೆ ಬೆಳ್ಸೋದ್ರ ಮೇಲೆ ನಿಗ ಹರಿಸ್ಬೇಕಾಗಿದೆ. ಅದು ನದಿ ನೀರುಗಳ ಹಂಚಿಕೆಯಲ್ಲೇ ಇರ್ಲಿ, ಪ್ರಕೃತಿ ವಿಕೋಪದ ಸಮಯದ ಯೋಜನೆಯೇ ಇರ್ಲಿ, ಇನ್ಯಾವುದೇ ಅಂತರ-ರಾಜ್ಯ ವಿಷಯವೇ ಇರ್ಲಿ ಇದಕ್ಕೆ ಒಂದು ಗಟ್ಟಿಯಾದ ನಿಯಮಾವಳಿ ರೂಪಿಸೋದು ಕೇಂದ್ರ ಸರ್ಕಾರದ ಆದ್ಯತೆಯಾಗಬೇಕಿದೆ ಗುರು.

3 ಅನಿಸಿಕೆಗಳು:

Anonymous ಅಂತಾರೆ...

ಪ್ರತಿ ವರ್ಷ ಮಳೆ ಹೆಚ್ಚಾದಾಗಲೆಲ್ಲ ಉತ್ತರ ಕರ್ನಾಟಕದಲ್ಲಿ ಪ್ರವಾಹ ಅಗುತ್ತಲೆ ಬಂದಿದೆ. ಅಲ್ಲಿಯ ಜನ ಬೆಂಗಳೂರಿನ ಐ.ಟಿ ಜನರಲ್ಲ ಎಂದ ಮಾತ್ರಕ್ಕೆ ಅವರನ್ನು ಹೀಗೆ ಕಡೆಗಣಿಸುವುದೇ? ಇದೆ ರೀತಿ ಪ್ರತಿ ವರ್ಷ್ ಬೆಂಗಳೂರಿನಲ್ಲಿ ಆಗಿದ್ದರೆ ಅದೂ ಪಕ್ಕದ ರಾಜ್ಯದಿಂದ ಸುಮ್ಮನಿರುತ್ತಿದ್ದರೆ? ಅಮಾಯಕ ರೈತ ಜನರನ್ನು ನೋಡಿದರೆ ಪಾಪ ಎನಿಸುತ್ತದೆ.
ಈ ನಧಿ ನೀರು ಹಂಚಿಕೆ ಇದರ ಬಗ್ಗೆ ನಮ್ಮ ದೇಶದ ನಿಲುವು ಸರಿ ಇಲ್ಲ. ಇದಕ್ಕೆಲ್ಲ ಒಂದು ಒಳ್ಳೆಯ ವ್ಯವಸ್ಥೆ ಆಗಲೇ ಬೇಕು. ನಮ್ಮ ಪಾಡಿಗೆ ನಾವು ಪರಿಸ್ಥಿಥಿಗೆ ಅನುಗುಣವಾಗಿ ನಿರ್ಧಾರ ತಗೋತೀವಿ ಅನ್ನೊಕ್ಕೆ ನಾವೇನು ಮಂಗಗಳಲ್ಲ.

Karnataka Best ಅಂತಾರೆ...

nimma blognu istapattu oduttini

Anonymous ಅಂತಾರೆ...

I want to congratulate the Karnataka Govt. who kept mum even though Maharashtra say that there is no need to give information about their outflow of water to Karnataka.

Lets have 2 capitals one in Bengaluru and another in Belagavi. North Karnataka & its talent pool will then come to limelight and the real development works will start happening then. till now I see only politicians, tamilians, northies and few intellectual techies making money. Others are playing just the supporting role in Bengaluru.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails