
ಮತ್ತೊಮ್ಮೆ ಬೆಳಗಾವಿಗೆ ಕನ್ನಡ ಮೇಯರ್!

ಮುಖ್ಯಮಂತ್ರಿ ಚಂದ್ರು ಅವ್ರೇ.. ಇದೆಂಥಾ ಮರುಳು ನಿಮಗೇ?

ಮರಳಿ ಬಂದಿಹ ಉಗಾದಿ, ಹೊಸ ಹರುಷ ತರಲಿ!
ಈ ಚಂದದ ಹಾಡನ್ನು ಬರ್ದಿರೋರು ಕನ್ನಡದ ಹೆಮ್ಮೆಯ ಚೇತನಗಳಲ್ಲೊಬ್ಬರಾದ, ಅಂಬಿಕಾತನಯದತ್ತ ಕಾವ್ಯನಾಮದ, ವರಕವಿ ಶ್ರೀ. ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು. ಪ್ರತಿವರ್ಷದ ಯುಗಾದಿಯಂದು ಇಡೀ ಕನ್ನಡನಾಡಿನ ಜನರು ಇವರನ್ನು ತಪ್ಪದೆ ನೆನೀತಾರೆ. ಇವರ ಹೆಸರು ತಿಳಿಯದೇ ಇರೋರು ಕೂಡಾ ಅವರ ಈ ಹಾಡನ್ನು ಬಲ್ಲವರೇ ಆಗಿರ್ತಾರೆ. ಕನ್ನಡನಾಡಿನ ಹೆಮ್ಮೆಯ ಈ ’ಯುಗದ ಕವಿ’ಗೆ ನಮ್ಮೆಲ್ಲರ ಮನದಲ್ಲಿ ಅಚ್ಚಳಿಯದ ಸ್ಥಾನ ಒದಗಿಸಿಕೊಟ್ಟಿರೋ ಈ ಹಾಡು, 1963ರಲ್ಲಿ ಬಿಡುಗಡೆಯಾದ ಕುಲವಧು ಚಿತ್ರದ್ದು, ಸಂಗೀತ ಕೊಟ್ಟೋರು ಶ್ರೀ. ಜಿ.ಕೆ. ವೆಂಕಟೇಶ್ ಅವ್ರು, ಶ್ರೀಮತಿ ಎಸ್.ಜಾನಕಿ ಅವರ ಕಂಠಸಿರಿ ಈ ಹಾಡಿಗೆ ಜೀವತುಂಬಿದೆ...
ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆಕನ್ನಡದ ಕವಿಗಳ ಇಂಥಾ ಸುಮಧುರ ಕವನಗಳನ್ನು ನಮ್ಮ ಚಿತ್ರರಂಗದೋರು ಹೆಚ್ಚುಹೆಚ್ಚು ಬಳಸುವಂತಾಗಲಿ. ಹೊಸ ವರುಷ ಎಲ್ಲರಲ್ಲೂ ಹೊಸ ಹರುಷಕೆ ಕಾರಣವಾಗಲಿ. ಏನ್ ಗುರು ಓದುಗರಿಗೆಲ್ಲಾ ಯುಗಾದಿ ಹಬ್ಬ ಒಳಿತುಮಾಡಲಿ.
ಹೊಸ ವರಷಕೆ ಹೊಸ ಹರುಷವ ಹೊಸತು ಹೊಸತು
ತರುತಿದೆ
ಗ್ರಾಹಕ ಹಕ್ಕು: ಆಚರಣೆ ಒಂದು, ಚಲಾವಣೆ ಮತ್ತೊಂದು
- ಸುರಕ್ಷೆಯ ಹಕ್ಕು
- ಮಾಹಿತಿಯ ಹಕ್ಕು
- ಆಯ್ಕೆ ಮಾಡುವ ಹಕ್ಕು
- ಅಳಲುಗಳನ್ನು ಹೇಳಿಕೊಳ್ಳುವ ಹಕ್ಕುಗಳ
ನೀವು ಕೊಳ್ಳುವ ಅಡುಗೆ ಅನಿಲದ ಸಿಲಿಂಡರ್ ಮೇಲೆ ಸುರಕ್ಷತಾ ಮಾಹಿತಿ ಕನ್ನಡದಲ್ಲಿ ಇದೆಯೇ? ಇರಲೇಬೇಕು ತಾನೆ? ಏಕಿಲ್ಲ? ಈ ಪ್ರಶ್ನೆ ನಿಮಗೆ ಹೊಳೆದಿದೆಯೇ? ಹೊಳೆದಿದ್ರೆ ಅದಕ್ಕೆ ಏನ್ ಮಾಡಿದೀರ? ಏಕೆ ಇನ್ನೂ ಸರಿ ಹೋಗಿಲ್ಲ?
ಮಾಹಿತಿ
ನೀವು ಮಾಡಿಸಿಕೊಳ್ಳುವ ಮುಖ್ಯ ಆರೋಗ್ಯ ತಪಾಸಣೆಗಳ ಬಗ್ಗೆ ಮಾಹಿತಿ ನಿಮಗೆ ಕನ್ನಡದಲ್ಲ ಸಿಗುತ್ತಿದೆಯೇ? ಏಕೆ ಸಿಗುತ್ತಿಲ್ಲ? ಕನ್ನಡ ಅದಕ್ಕೆ ಅರ್ಹವಲ್ಲವೋ, ಅಥವಾ ನಾವು ಆ ಮಾಹಿತಿಗೇ ಅರ್ಹರಲ್ಲವೋ?
ಆಯ್ಕೆ
ಅಳಲು/ದೂರು
ಒಟ್ಟಿನಲ್ಲಿ ಗ್ರಾಹಕನ ಹಕ್ಕುಗಳ ದಿನಾಚರಣೆ ಮಾಡುವಾಗ ಈ ನಮ್ಮ ಹಕ್ಕುಗಳ ಅನುಷ್ಠಾನ ಏಕೋ ಆಗ್ತಿಲ್ಲ ಅಂತ ಅನಿಸೋದು ಬೇಡ್ವ ಗುರು? ಆದ್ರೆ ಇದಕ್ಕೆ ಕಾರಣ ಏನು? ಕಾನೂನಾ? ನಾವಾ? ಗ್ರಾಹಕ ಹಕ್ಕು ದಿನಾಚರಣೆಯ ಹಿನ್ನೆಲೆಯಲ್ಲಿ ನಾವೆಲ್ಲಾ ಕನ್ನಡಿಗ ಗ್ರಾಹಕರಾಗಿ ನಮ್ಮ ಒಳಿತಿಗಾಗಿಯೇ ಈ ರೀತಿಯ ಯೋಚನೆ ಮಾಡೋದು ಒಳ್ಳೇದು ಅಂತ ಅನಿಸಲ್ವ ಗುರು?
ಇನ್ನು "ಆರ್ ಸಿ: ಉಡಾಯ್ಸಿ" ಅನ್ನೋ ಸರದಿ ಚಿತ್ರತಾರೆಗಳದ್ದು!

ಚಿನ್ನಸ್ವಾಮಿ ಮೈದಾನ ತಾರೆಗಳ ತೋಟವಾಗಲಿ!
ಕ್ರಿಕೆಟ್ ತಾರೆಗಳೂ ಅಂದ್ರೆ ನಮ್ಮ ಜನಕ್ಕೆಂಥದೋ ಅಭಿಮಾನ, ಇನ್ನು ಇವರ ಜೊತೆ ಚಿತ್ರತಾರೆಗಳೂ ಸೇರ್ಕೊಂಡ್ರೆ ಡಬ್ಬಲ್ ಮಜಾ. ಕನ್ನಡದ ಹಲವಾರು ತಾರೆಯರು ಬೆಂಗಳೂರಲ್ಲಿ ನಡೆಯೋ ಎಂಟು ಪಂದ್ಯಗಳಲ್ಲಿ ಏಳರಲ್ಲಿ ರಾಯಲ್ ಚಾಲೆಂಜರ್ಸ್ ಆಡಲಿದೆ, ಇನ್ನೊಂದು ಬೇರೆ ತಂಡಗಳದ್ದು. ಇರಲಿ, ನಮ್ಮ ಕನ್ನಡದ ತಾರೆಯರು ಬೆಂಗಳೂರು ತಂಡಕ್ಕೆ ಚಿಯರ್ ಮಾಡಲು ಇವುಗಳಲ್ಲಿ ಭಾಗವಹಿಸೋದು ಚೆನ್ನಾನೆ. ಈ ನೆಪದಿಂದ ರಾಯಲ್ ಚಾಲೆಂಜರ್ಸ್ ತಂಡಕ್ಕೆ ಮತ್ತಷ್ಟು ಬೆಂಬಲ ಸಿಕ್ಕೋದ್ರಲ್ಲಿ ಅನುಮಾನವಿಲ್ಲ.
ಇದು ಹೀಗಿರಬೇಕಿತ್ತಲ್ವಾ?
ಇದೆಲ್ಲಾ ಸರೀನೆ, ಆದ್ರೆ ರಮೇಶ್ ಅರವಿಂದ್, ಗಣೇಶ್, ಪುನೀತ್, ಶರ್ಮಿಳಾ ಮೊದಲಾದ ತಾರೆಯರೆಲ್ಲಾ ಈ ದಿಸೆಯಲ್ಲಿ ಐ.ಪಿ.ಎಲ್ ಆಡಳಿತ ಮಂಡಳಿನಾ ಸಂಪರ್ಕ ಮಾಡಿದಾರೆ ಅನ್ನೋ ಸುದ್ದಿ ಚೂರು ನಿರಾಸೆ ಉಂಟುಮಾಡಿರೋದೂ ನಿಜಾನೆ. ಇದರ ಬಗ್ಗೆ ನಿಜವಾಗ್ಲೂ ರಾಯಲ್ ಚಾಲೆಂಜರ್ಸ್ ತಂಡದ ವ್ಯವಸ್ಥಾಪಕರು ತಾವೇ ಮುಂದಾಗಿ ಕನ್ನಡದ ತಾರೆಯರನ್ನು ಆಹ್ವಾನಿಸಿ, ತಮ್ಮ ತಂಡ ಎಲ್ಲೆಲ್ಲಿ ಆಡುತ್ತೋ ಅಲ್ಲಿಗೆಲ್ಲಾ ಕರ್ಕೊಂಡು ಹೋಗಿ ಚಿಯರ್ಸ್ ಹೇಳಿಸಲು ಒಪ್ಪಂದ ಮಾಡ್ಕೊಂಡಿದ್ದಿದ್ರೆ ಸರಿಯಾದ ನಡೆಯಾಗ್ತಿತ್ತು! ಇದರಿಂದ ಇಬ್ಬರಿಗೂ ಲಾಭವಾಗ್ತಿತ್ತು ಅನ್ನೋದು ನಿಜಾ ಅಲ್ವಾ ಗುರು? ಆ ಮೂಲಕ ಬೆಂಗಳೂರು ತಂಡಕ್ಕೆ ಹೆಚ್ಚು ಹೆಚ್ಚು ಬೆಂಬಲ ಗಳಿಸಿಕೊಡೋದ್ರು ಜೊತೆಗೆ ತಂಡವಾಡೊ ಎಲ್ಲಾ ಪಂದ್ಯಗಳ ಪ್ರೇಕ್ಷಕರ/ ವೀಕ್ಷಕರ ಸಂಖ್ಯೆ ಹೆಚ್ಚಿಸಿಕೊಳ್ಳಬಹುದಿತ್ತು. ಇತ್ತೀಚಿನ ಬೆಳವಣಿಗೆ ನೋಡಿದರೆ ಈ ಪಂದ್ಯಗಳು ಹೊರದೇಶದಲ್ಲಿ ನಡ್ಯೋ ಸಾಧ್ಯತೆಗಳು ಎದ್ದು ಕಾಣ್ತಿವೆ. ಹಾಗಾಗೋದಾದ್ರೆ ನಮ್ಮ ಚಿತ್ರ ತಾರೆಯರನ್ನು ಅಲ್ಲಿಗೆ ಒಯ್ಯೋ ಮೂಲಕ ತಮ್ಮ ತಂಡ ಆಡೊ ಪಂದ್ಯಗಳ ವೀಕ್ಷಕರ ಸಂಖ್ಯೆಯನ್ನು ಕರ್ನಾಟಕದಲ್ಲಂತೂ ಹೆಚ್ಚಿಸ್ಕೋಬೌದು ಅನ್ನೋದು ಹದಿನಾರಾಣೆ ಸತ್ಯಾ ಗುರು!
ಬೆಂಗಳೂರಲ್ಲಿ ದೀವಟ್ರಾನಳ್ಳಿ ಯಾವ್ದು ಗೊತ್ತಾ?
ಸ್ವಾಮಿಭಕ್ತಿಗೆ ಒಲಿದ ಒಡೆಯರು!
ಹಿಂದೆ ಅಂದ್ರೆ ಮೈಸೂರನ್ನು ಮುಮ್ಮಡಿ ಕೃಷ್ಣರಾಜ ಒಡೆಯರ್ ಅವ್ರು ಆಳ್ತಿದ್ದ ಕಾಲದಲ್ಲಿ, ಮಹಾರಾಜರು ಆಗಾಗ ಬೆಂಗಳೂರಿಗೆ ಬಂದು ಹೋಗ್ತಿದ್ರಂತೆ. ಹೀಗೆ ಮಹಾಸ್ವಾಮಿಗಳು ಬರ್ತಾರೆ ಅಂದಾಗ ಬೆಂಗಳೂರಿನ ಹೊರವಲಯದ ಒಂದು ಪ್ರದೇಶದ ಮೂಲಕಾನೆ ಹಾದು ಬರಬೇಕಿತ್ತಂತೆ. ಹಾಗೆ ಅವ್ರು ಬರೋವಾಗ ಪ್ರತೀಸಾರ್ತಿನೂ ರಾಮ ಅನ್ನೋ ಒಬ್ಬ ಹಳ್ಳಿಗ ಗೌರವದಿಂದ ’ದೀವಟಿಗೆ’ ಸಲಾಮು ಮಾಡ್ತಿದ್ನಂತೆ. ಹೀಗೆ ಪ್ರತೀಸಾರಿ ವಿನಯದಿಂದ ಶ್ರದ್ಧೆಯಿಂದ ಮಹಾರಾಜರಿಗೆ ’ದೀವಟಿಗೆ ಸಲಾಮು’ ಸಲ್ಲಿಸುತ್ತಿದ್ದ ಅವನಿಗೆ ಅಲ್ಲೇ ಹತ್ತಿರದಲ್ಲಿ ಮನೆ ಕಟ್ಕೊಳಕ್ ಅವಕಾಶ ಮಾಡಿಕೊಟ್ರಂತೆ. ರಾಮ ಗುಡಿಸಲು ಕಟ್ಕೊಂಡ. ಅವನ ಗುಡುಸ್ಲು ಸುತ್ತಾ ಮನೆಗಳಾಗಿ ಆ ಬಡಾವಣೆ ’ದೀವಟಿಗೆ ರಾಮನಹಳ್ಳಿ’ ಆಯ್ತಂತೆ. ಮುಂದೆ ಅದು ದೀವಟ್ರಾಮನ ಹಳ್ಳಿ ಆಗಿ ಆಮೇಲಿಂದ ದೀವಟ್ರಾನ ಹಳ್ಳಿ ಆಯ್ತಂತೆ. ಇವತ್ತಿಗೂ ಆ ಬಡಾವಣೆಯಲ್ಲಿರೋ ಹಿರಿಯರ ಬಾಯಲ್ಲದು ’ದಿವಟ್ರಾನಹಳ್ಳೀ’ನೆ. ಯಾವುದಪ್ಪಾ ಈ ಏರಿಯಾ? ಯಾವುದೇ ಶಾಸನ, ತಾಮ್ರಪತ್ರ ಅಥವಾ ಇತರೆ ದಾಖಲೆಗಳಲ್ಲಿ ದೀವಟಿಗೆ ರಾಮನಿಗೆ ರಾಜರು ನಿವೇಶನ ನೀಡಿದ ದಾಖಲೆ ಇರದಿದ್ದರೂ ಆ ಪ್ರದೇಶ ಆ ಹೆಸರು, ಹೆಸರಿನ ದಂತಕತೆ ಇತಿಹಾಸವನ್ನು ಉಳಿಸಿಕೊಂಡು ಬಂತು. ಆದರೆ ಇವತ್ತಿನ ದಿನ ಆ ಜಾಗಾನಾ ದೀವಟ್ರಾನಳ್ಳಿ ಅಂತನ್ನಲ್ಲಾ... ಬೆಂಗಳೂರು ನಗರದ ಮೈಸೂರು ರಸ್ತೆಯಲ್ಲಿರೋ ಬಿ.ಎಚ್.ಇ.ಎಲ್ ಸಮೀಪದ ದೀಪಾಂಜಲಿ ನಗರವೇ ಈ ದೀವಟ್ರಾನಳ್ಳಿ.
( ಈ ಮಾಹಿತಿ ಡಾ. ಎಂ.ಚಿದಾನಂದಮೂರ್ತಿಗಳ "ಬೃಹತ್ ಕರ್ನಾಟಕ: ಭಾಷಿಕ, ಸಾಂಸ್ಕೃತಿಕ" ಎಂಬ ಹೊತ್ತಿಗೆಯಲ್ಲಿದೆ)
ಹೆಸರುಗಳ ಬದಲಾವಣೆ ಇತಿಹಾಸಕ್ಕೆ ಅಪಚಾರ?
ಪ್ರತಿ ಪ್ರದೇಶಕ್ಕೂ ಅದು ದಾಖಲಾಗಿರಲಿ ಇಲ್ಲದಿರಲಿ ಅದಕ್ಕೊಂದು ಇತಿಹಾಸವಿರುತ್ತದೆ, ಸೊಗಡಿರುತ್ತದೆ. ದೀವಟ್ರಾಮನಳ್ಳಿ ದೀಪಾಂಜಲಿನಗರವಾಗೋದೂ, ಸೂಳೆಕೆರೆ ಶಾಂತಿಸಾಗರವಾಗೋದೂ, ಮೇಟಗಳ್ಳಿ ಮಥುರಾನಗರವಾಗೋದೂ, ಬ್ಯಾಡರಹಳ್ಳಿ ಬೃಂದಾವನನಗರವಾಗೋದೂ, ಚಿಕ್ಕಬಳ್ಳಾಪುರ ವಿಶ್ವೇಶ್ವರಯ್ಯ ಜಿಲ್ಲೆ ಆಗೋದೂ, ಕೋತಿಬಂಡೆ ಮಾರುತಿ ಮಂದಿರವಾಗೋದೂ, ಆನೆಪಾಳ್ಯ ಗಜೇಂದ್ರನಗರವಾಗೋದೂ ನಮ್ಮ ಇತಿಹಾಸಕ್ಕೆ ನಾವೆಸಗೋ ಅಪಚಾರ ಅಲ್ವಾ ಗುರು?
ಬೆಳಗಾವಿ ರಾಜಕಾರಣ ಮತ್ತು ಭಾಜಪ
ಬಾವುಟದ ವಿವಾದ ಬರೀ ನೆಪ!
ಬೆಳಗಾವಿ ಪಾಲಿಕೆ ಮೇಲೆ ಯಾವ ಬಾವುಟ ಹಾರ್ತಿತ್ತು? ಯಾವುದು ಹಾರ್ತಿದೆ? ಯಾವ್ದು ಹಾರಬೇಕು? ಅನ್ನೋದನ್ನೆಲ್ಲಾ ಪಕ್ಕಕ್ಕಿಟ್ಟು ನಮ್ಮ ಸಂಸದರ ನಡವಳಿಕೆ ಬಗ್ಗೆ ಮಾತ್ರಾ ನೋಡೋಣ ಗುರು! ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾಗಿರೋ ಸುರೇಶ್ ಅಂಗಡಿ ಎಂಬ ಹುಟ್ಟಿನಿಂದ ಕನ್ನಡಿಗರಾದ ಸಂಸದರು ಈ ಸಂದರ್ಭದಲ್ಲಿ ನಡೆದುಕೊಂಡ ರೀತಿಯನ್ನು ನೋಡೋಣ. ಕುಮಾರಗಂಧರ್ವ ರಂಗಮಂದಿರದ ಸಮೀಪದಲ್ಲಿ ಹೊಸದಾಗಿ ಕಟ್ಟಿರೋ ಪಾಲಿಕೆ ಕಛೇರಿ ಮೇಲೆ ಎಂ.ಇ.ಎಸ್ಸಿನ ಕೇಸರಿ ಬಾವುಟವನ್ನು ಹಾರಿಸಬೇಕೆಂದು ಒತ್ತಾಯಿಸಿ ಕೆಲ ಎಂ.ಇ.ಎಸ್ ಬೆಂಬಲಿಗರು ರಸ್ತೆ ತಡೆ ನಡುಸ್ತಿದ್ದಾಗ ಅಲ್ಲಿಗೆ ಬಂದ ಸಂಸದ ಅಂಗಡಿಯವರು ಆ ಜನಗಳ ಬೆಂಬಲವಾಗಿ ನಿಂತಿದ್ದಷ್ಟೇ ಅಲ್ಲದೆ ಮರಾಠಿಯಲ್ಲಿ ಭಾಷಣವನ್ನೂ ಮಾಡಿದ್ದಾರೆ. ಇದೇ ಸಭೆಯಲ್ಲಿ ಕನ್ನಡ ವಿರೋಧಿ ಘೋಷಣೆಗಳು ಮೊಳಗಿದವು ಅನ್ನೋದು ಕೂಡಾ ಪತ್ರಿಕೆಗಳಲ್ಲಿ ವರದಿಯಾಗಿದೆ. ಎಂ.ಇ.ಎಸ್ಸಿನೋರು ಬಾವುಟ ಹಾರುಸ್ತೀವಿ ಅಂತ ಬಂದಾಗ ಈ ಮಹಾಶಯ ಹೀಗೆಲ್ಲಾ ನಡ್ಕೊಂಡಿದ್ದು ಸರೀನಾ? ಹೇಳಿ ಗುರು...
ಮತಕ್ಕಾಗಿ ಈ ದೊಂಬರಾಟವೇ!
ಈಗ ಲೋಕಸಭಾ ಚುನಾವಣೆ ಹತ್ತಿರ ಬಂತು. ಎಂ.ಇ.ಎಸ್ ಜೊತೆ ಭಾಜಪಾ ಇಲ್ಲಿ ಸದಾ ಸಹಯೋಗೀನೆ. ಸದಾಕಾಲ ವಿಧಾನ ಸಭೆ, ನಗರಪಾಲಿಕೆ, ಎ.ಪಿ.ಎಂ.ಸಿ ಯಾರ್ಡು ಇಂಥಹವುಗಳಲ್ಲೆಲ್ಲಾ ಎಂ.ಇ.ಎಸ್ ಗೆಲುವಿಗೆ ಇವರ ಬೆಂಬಲ... ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅವರ ಬೆಂಬಲ ಅನ್ನೋ ಗುಮಾನಿ ಇದೆ. ಕನ್ನಡ-ಕರ್ನಾಟಕ-ಕನ್ನಡಿಗರ ವಿಷಯದಲ್ಲಿ ಎಂ.ಇ.ಎಸ್ ಎಂಥದೇ ಧೋರಣೆ ಹೊಂದಿದ್ದರೂ ಇವರಿಬ್ಬರ ಈ ಮೈತ್ರಿಗೆ ಧಕ್ಕೆ ಬಂದಿಲ್ಲ ಅನ್ಸುತ್ತೆ. ಎಂ.ಇ.ಎಸ್ ನೋರು ಬೆಳಗಾವಿನ ಮಹಾರಾಷ್ಟ್ರಕ್ಕೆ ಸೇರುಸ್ಬೇಕು ಅಂದಿದ್ಕೆ ಇಡೀ ಕರ್ನಾಟಕವೇ ಅವರ ವಿರುದ್ಧ ಒಗ್ಗೂಡಿದಾಗಲೂ ಈ ಸಂಬಂಧಾನ ಉಳುಸ್ಕೊಂಡೇ ಬಂದಿರೋ ಮಹಾನುಭಾವರು ಇವರು ಅಂತಿದಾರೆ ಜನ. ಕನ್ನಡ ರಾಜ್ಯೋತ್ಸವಾನ ಕಪ್ಪುದಿನ ಅಂತ ಇವರು ಆಚರಿಸಿದ್ರೂ, ಮರಾಠಿ ಮಹಾಮೇಳಾವ ಅಂತ ಮಾಡಿ ಬೆಳಗಾವೀನ ಕಿತ್ಕೋತೀವಿ ಅಂದಾಗ್ಲೂ... ಎಂದಿಗೂ ಜಗ್ಗದ ಬಗ್ಗದ ಕುಗ್ಗದ ಸಂಬಂಧ ಇವರದ್ದು ಅನ್ನೋ ಹಾಗಿದೆ. ಇದನ್ನು ನೋಡ್ತಿದ್ರೆ ಬಹುಷಃ ಬೆಳಗಾವಿ ಪಾಲಿಕೆ ಚುನಾವಣೆ, ವಿಧಾನಸಭಾ ಚುನಾವಣೆಗಳಲ್ಲಿ ಎಂ.ಇ.ಎಸ್ ಮಣ್ಣು ಮುಕ್ಕಿದ್ದಕ್ಕೆ ದುಃಖಿಸಿದ ಏಕೈಕ ಕನ್ನಡಿಗ ಈ ನಮ್ಮ ಸಂಸದರು ಅನ್ಸುತ್ತೆ. ಈ ಕಣ್ಣೀರಿನ ಹಿಂದಿರೋದು ತಾವು ಎಂ.ಇ.ಎಸ್ ಬೆಂಬಲವಿಲ್ಲದೆ ಸೋತೇನೇ ಎನ್ನೋ ಆತಂಕ ಅಂತಾ ಅನ್ಸಲ್ವಾ ಗುರು! ಇವರ ಈ ಬುದ್ಧಿ ಬೆಳಗಾವಿ ಜನಕ್ಕೆ ಗೊತ್ತೇ ಇರುತ್ತೆ, ಅದಕ್ ತಕ್ಕ ಉತ್ತರಾನೂ ಚುನಾವಣೇಲಿ ಮತದಾರ ಕೊಡೋದು ಖಂಡಿತ.
ಏನಂತೀರಾ ಸದಾನಂದಗೌಡ್ರೇ?
ನೇರವಾಗಿ ನಾಡವಿರೋಧಿಗಳ ಜೊತೆಯಲ್ಲಿ ಕೈ ಜೋಡಿಸಿರೋ ತನ್ನ ಪಕ್ಷದ ಹಾಲಿ ಸಂಸದರಾದ ಶ್ರೀ ಸುರೇಶ್ ಅಂಗಡಿ ಮತ್ತು ಹಾಲಿ ಶಾಸಕ ಶ್ರೀ ಸಂಜಯ್ ಪಾಟೀಲ ಅವರ ವಿರುದ್ಧವಾಗಿ ಯಾವ ಕ್ರಮಾ ತೊಗೋತೀರಾ ಈಗ? ಎಂ.ಇ.ಎಸ್ ಬಗ್ಗೆ ತಮ್ಮ ಪಕ್ಷದ ನಿಲುವೇನು? ಈ ಪ್ರತಿಭಟನಾ ಸಭೇಲಿ ಕರ್ನಾಟಕದ ಮತ್ತು ಕನ್ನಡಿಗರ ವಿರುದ್ಧವಾಗಿ ಘೋಷಣೆ ಕೂಗ್ತಿದ್ರೂ ತಮ್ಮ ಸಂಸದರು ಚಕಾರ ಎತ್ತದ ಬಗ್ಗೆ ಏನಂತೀರಾ? ಕರ್ನಾಟಕದಿಂದ ಬೆಳಗಾವಿಯನ್ನು ಬೇರೆ ಮಾಡ್ತೀವಿ ಅನ್ನೋರ ಜೊತೆ ಸರಸವಾಡ್ತಿರೋ ನಿಮ್ಮ ಪಕ್ಷದ ಸಂಸದರ ಬಗ್ಗೆ ಏನು ಶಿಸ್ತುಕ್ರಮಕ್ಕೆ ಮುಂದಾಗ್ತೀರಾ? ನಿಮ್ಮ ಪಕ್ಷದ ಮುಂದಿನ ನಡೆಯ ಬಗ್ಗೆ ನಾಡಿನ ಕನ್ನಡಿಗರು ಕುತೂಹಲದಿಂದ ಕಾಯ್ತಿದಾರೆ ಗೌಡ್ರೇ... ನೀವೇನು ಅಂಗಡಿಯವರಿಗೆ ಟಿಕೆಟ್ ನಿರಾಕರುಸ್ತೀರೋ? ಅಥ್ವಾ ಸುಮ್ಮನಿದ್ದು ಎಂ.ಇ.ಎಸ್ಸು - ಬಿಜೆಪಿಗಳ ಸಂಬಂಧಾನ್ನ ಸಮರ್ಥಿಸಿಕೊಳ್ತೀರೋ?
ನಮ್ಮ ಸಂಸದರ ಸಂಖ್ಯೆ ಎಷ್ಟಿರಬೇಕಿತ್ತು?

ರಾಜ್ಯಗಳ ಸಂಸದರ ಸಂಖ್ಯೆಯ ಮಹತ್ವ!
ಕಾಲ ಯಾವ್ದೇ ಇರಲಿ, ದಿಲ್ಲೀಲಿ ಪ್ರಧಾನಮಂತ್ರಿ ಪಟ್ಟಕ್ ಹತ್ತೋರು ಉತ್ತರಪ್ರದೇಶದ ಸಂಸದರೇ ಆಗಿರೋದ್ನ ನೋಡಬಹುದು. ಬೇಕಾದ್ರೆ ನೀವೇ ನೋಡಿ… ಒಬ್ಬ ನರಸಿಂಹರಾವ್, ಮತ್ತೊಬ್ಬ ದ್ಯಾವೇಗೌಡ್ರನ್ ಬಿಟ್ರೆ ಹೆಚ್ಚಿನೋರು ಅಲ್ಲಿಯವ್ರೇ. ಯಾಕಂದ್ರೆ ಅತಿಹೆಚ್ಚು ಸಂಸದರನ್ನು ದಿಲ್ಲಿಗೆ ಆರಿಸಿ ಕಳಿಸೋದೇ ಉತ್ತರಪ್ರದೇಶ. ಇಲ್ಲಿಂದ 80 ಸಂಸದರು. ಮಹಾರಾಷ್ಟ್ರದಿಂದ 48 ಸಂಸದರು, ತಮಿಳುನಾಡಿಂದ 39 ಸಂಸದರು ಬರ್ತಾರೆ. ಸುಮ್ನೆ ನೋಡುದ್ರೆ ಅತಿಹೆಚ್ಚು ಸಂಸದರನ್ನು ಹೊಂದಿರೋ ಉತ್ತರಪ್ರದೇಶ, ಬಿಹಾರ, ಮಹಾರಾಷ್ಟ್ರ, ಪಶ್ಚಿಮಬಂಗಾಳ(42), ಆಂಧ್ರಪ್ರದೇಶ(42) ಮತ್ತು ತಮಿಳುನಾಡುಗಳೇ ಭಾರತದ ರಾಜಕಾರಣದಲ್ಲಿ ಪ್ರಭಾವಿ ರಾಜ್ಯಗಳೇನೋ ಅನ್ಸುತ್ತೆ. ಬೇಕೋ ಬೇಡ್ವೋ, ಸರಿಯೋ ತಪ್ಪೋ ಒಟ್ನಲ್ಲಿ ಒಂದು ರಾಜ್ಯದ ಒಟ್ಟು ಸಂಸದರ ಸಂಖ್ಯೆ ದಿಲ್ಲಿಯಲ್ಲಿ ಪ್ರಭಾವಶಾಲಿ. ಅದರಲ್ಲೂ ಆ ಸಂಖ್ಯೆ ಪ್ರಾದೇಶಿಕ ಪಕ್ಷದ್ದಾದ್ದರಂತೂ ಇತ್ತೀಚಿನ ದಿನಗಳಲ್ಲಿ ಮತ್ತಷ್ಟು ಪ್ರಭಾವಶಾಲಿ ಅನ್ನುವ ಹಾಗೆ ತೋರುತ್ತದೆ. ಹೆಚ್ಚು ಸಂಸದರನ್ನು ಹೊಂದೋದು ಕೇಂದ್ರದಿಂದ ನಮ್ಮ ಪಾಲನ್ನು ಹೆಚ್ಚು ಗಿಟ್ಟಿಸಿಕೊಳ್ಳಕ್ಕೆ ಪೂರಕ ಅನ್ನೋ ಪರಿಸ್ಥಿತಿ ಇರುವಂತೆ ಇವತ್ತು ತೋರ್ತಿದೆ. ಹಾಗಾದ್ರೆ "ನಮ್ಮ ಹಕ್ಕು ನಮಗೆ ಸಿಗಬೇಕಾದ್ರೆ ನಮ್ಮ ಸಂಸದರ ಸಂಖ್ಯೇನೂ ಅಷ್ಟೊಂದಾಗಬೇಕಾ?" ಅನ್ನೋ ಪ್ರಶ್ನೆ ಕೇಳ್ತಿದೀರಾ?
ಸಂಸದರ ಸಂಖ್ಯೆ ಮತ್ತು ಜನಗಳ ಸಂಖ್ಯೆಯ ಅನುಪಾತ!
ಇಂತಿಷ್ಟು ಜನ ಮತದಾರರನ್ನು ಪ್ರತಿನಿಧಿಸೋಕ್ಕೆ ಒಬ್ಬ ಶಾಸಕರು ಇರ್ತಾರೆ, ಇಂತಿಷ್ಟು ಜನರನ್ನು ಪ್ರತಿನಿಧಿಸೋಕೆ ಒಬ್ಬ ಸಂಸದರು ಇರ್ತಾರೆ ಅನ್ನೋದೂ ಸಾಮಾನ್ಯ ತಿಳುವಳಿಕೆ. ಆದ್ರೆ ಕೆಲವು ಪ್ರದೇಶಗಳಲ್ಲಿ, ಉದಾಹರಣೆಗೆ ಅರುಣಾಚಲಪ್ರದೇಶ, ಲಕ್ಷದ್ವೀಪದಂತಹ ಪ್ರದೇಶಗಳು ಹೊಂದಿರೋದೆ ಕಮ್ಮಿ ಜನಸಂಖ್ಯೆ. ಆಗ ಇಡೀ ಭಾರತಕ್ಕೆ ಅನ್ವಯವಾಗೋ ನಿಯಮ ಅಲ್ಲಿ ಅನುಸರಿಸಕ್ ಆಗಲಿಕ್ಕಿಲ್ಲ. ಆ ಕಾರಣದಿಂದಲೇ ಲಕ್ಷದ್ವೀಪದ ಜನಸಂಖ್ಯೆ 41,000ದಷ್ಟೇ ಇದ್ದರೂ ಅಲ್ಲಿಂದ ಒಬ್ಬ ಸಂಸದರು ಪ್ರತಿನಿಧಿಯಾಗಿ ಆರಿಸಿಬರ್ತಾರೆ. ಇದೇನೋ ಸರೀನೇ. ಆದ್ರೂ ಅಂಥಾ ರಾಜ್ಯಗಳನ್ನೂ, ಕೇಂದ್ರಾಡಳಿತ ಪ್ರದೇಶಗಳನ್ನೂ ಲೆಕ್ಕದಿಂದ ಹೊರಗಿಟ್ಟು ನೋಡುದ್ರೆ ಕಾಣೋ ಅಂಕಿಅಂಶ ಕುತೂಹಲಕಾರಿಯಾಗಿದೆ.

“ಇದೆಂಗೇ ಗುರು? ಇದು ಕೇಂದ್ರದ ತಾರತಮ್ಯ ಧೋರಣೆ, ಇದರಿಂದ ಕರ್ನಾಟಕಕ್ಕೆ ಭೋ ಅನ್ಯಾಯ ಆಗ್ತಿದೆ, ನಮ್ಮ 28 ಜನರ ದನಿ 39 ಜನರ ಮುಂದೆ ಅಡಗಿ ಹೋಗ್ತಿದೆ, ಎಲ್ಲಾ ಕಡೆಯೂ ಒಂದೇ ಅನುಪಾತದ ಮಾನದಂಡದ ಮೇಲೆ ಲೋಕಸಭಾಸ್ಥಾನಗಳ ಸಂಖ್ಯೆ ಹೆಚ್ಚಿಸಬೇಕು/ ಅಥವಾ ಕಮ್ಮಿ ಮಾಡಬೇಕು” ಅಂತ ನಮ್ಮನ್ ಕೇಳ್ಬೇಡಿ ಮತ್ತೆ. ನಾವು ಕೊಡ್ತಿರೋದು ಬರೀ ಅಂಕಿಅಂಶ, ಇದರ ವಿಶ್ಲೇಷಣೆ ನಿಮಗೇ ಬಿಟ್ಟಿದ್ದು ಗುರು!!
ಐಪಿಎಲ್ ಕ್ರಿಕೆಟ್ ಕಾಮೆಂಟರಿ : "ಹಳದಿಕೆಂಪು-ಕನ್ನಡದ ಕಂಪು"

ಕ್ರಿಕೆಟ್ : ಹಿಂದೀ ಹೇರಿಕೆಯ ಪ್ರಮುಖ ಸಾಧನ!
"ಭಾರತದೋರಿಗೆ ಕ್ರಿಕೆಟ್ಟು ಅನ್ನೋದು ಕ್ರೀಡೆ ಮಾತ್ರಾ ಆಗಿಲ್ಲಾ, ಅದು ಅವರ ರಾಷ್ಟ್ರೀಯತೆಯಾಗಿದೆ" ಅಂತ ಅದ್ಯಾರೋ ಪುಣ್ಯಾತ್ಮ ಅಂದಿದ್ರಂತೆ. ಹಾಗೆ ಕ್ರಿಕೆಟ್ ಪಂದ್ಯಗಳು ಕಳೆದ ಮೂವತ್ತು ನಲವತ್ತು ವರ್ಷಗಳಲ್ಲಿ ಬೆಳೆದು ಆವರಿಸಿಕೊಂಡ ಪರಿ ಅದ್ಭುತವಾಗಿದೆ ಗುರು! ಇದೇ ಹೊತ್ತಲ್ಲಿ ತಂತ್ರಜ್ಞಾನದಲ್ಲಾದ ಬೆಳವಣಿಗೆ ನಮ್ಮ ಮನೆಗಳ ಒಳಗೆ ಟಿವಿ ಬರಲು ಕಾರಣವಾಯ್ತು. ಇದರ ಜೊತೆಯಲ್ಲೇ ದೂರದರ್ಶನವೆಂಬುದು ಭಾರತ ಸರ್ಕಾರ ತನ್ನ ಪ್ರಜೆಗಳ ಮೇಲೆ ಹಿಂದಿಯನ್ನು ಹೇರುವ ಹೆದ್ದಾರಿಯಾಯ್ತು. ತಕ್ಕಳಪ್ಪಾ, ಹೇಗಿದ್ರೂ ಜನಕ್ಕೆ ಕ್ರಿಕೆಟ್ ನೋಡೋ ಹುಚ್ಚು ಹಿಡ್ದಿದೆ, ಇದೇ ಸಮಯಾ ಅಂತ ನಮ್ಮ ಸರ್ಕಾರಗಳು ಹಿಂದೀ ಕಾಮೆಂಟರಿಗೆ ಇನ್ನಿಲ್ಲದ ಪ್ರಾಮುಖ್ಯತೆ ಕೊಡಲು ಶುರು ಹಚ್ಕಂಡ್ವು.
ಪ್ರಪಂಚದ ಯಾವ್ದೇ ಮೂಲೇಲೆ ಕ್ರಿಕೆಟ್ ನಡುದ್ರೂ ನಡುರಾತ್ರಿ, ಮುಂಜಾನೆ ಅನ್ನೋ ಪರಿವೆ ಇಲ್ಲದೆ ಜನ ಟಿವಿ ಮುಂದೆ ಕೂಡ್ಲಿಕ್ಕೆ ಶುರು ಮಾಡ್ತಿದ್ದಂಗೇ ತಮಗೆ ಗೊತ್ತಿಲ್ದಂಗೇನೆ ಹಿಂದೀ ಕಲ್ಯಕ್ ಶುರು ಹಚ್ಕೊಂಡ್ರು. "ಅಣ್ಣಾ... ಏಕ್ ಸೌ ಉಂತೀಸ್ ಅಂದ್ರೆ ಎಷ್ಟಣ್ಣಾ?" "ಛೇ ವಿಕೆಟ್ ಖೋಕರ್, ನಿನ್ನಿಯಾನ್ಬೇ ರನ್ ಅಂದ್ರೆ ಎಷ್ಟು ಸಾರ್?" "ಓ ಇಕ್ಯಾವನ್ ಅಂದ್ರೆ ಐವತ್ತೊಂದಾ?" ಅನ್ನೋ ಡೈಲಾಗುಗಳು ಕನ್ನಡದ ಮನೆಮನೆಯಲ್ಲಿ ಕಾಮನ್ನಾಗೋಯ್ತು ಗುರು! ಹಾಗೇ, ಅಲ್ಲೀ ತಂಕಾ ನೀಲಕಂಠರಾವ್ ಥರದ ವೀಕ್ಷಕ ವಿವರಣೆಕಾರರಿಂದ ರೇಡಿಯೋಗಳಲ್ಲಿ ಕನ್ನಡದಲ್ಲಿ ಕೇಳಿಬರುತ್ತಿದ್ದ ಕಾಮೆಂಟರಿಗಳೂ ಕೊನೆಯಾಗಿಹೋದವು. ಇಷ್ಟೆಲ್ಲಾ ಬೆಳವಣಿಗೆ ಕಂಡ ಮೇಲೂ ನಮಗೆ ಕ್ರಿಕೆಟ್ ಕಾಮೆಂಟರಿ ಅನ್ನೋದು ಭಾರತ ಸರ್ಕಾರ ನಮಗೆಲ್ಲಾ ನುಂಗುಸಕ್ ಮುಂದಾಗಿರೋ ಹಿಂದಿ ಹೇರಿಕೆಯೆಂಬ ವಿಷಕ್ಕೆ ಮೆತ್ತಿದ ಸಿಹಿ ಲೇಪನ ಅನ್ನೋದು ಗೊತ್ತಾಗ್ಲಿಲ್ವಲ್ಲಾ?
ಕನ್ನಡದ ಕಾಮೆಂಟರಿ : ಒಕ್ಕೂಟ ವ್ಯವಸ್ಥೆಗೆ ಗೌರವ!
ನಿಜಾ ಗುರು, ನಮ್ಮ ಮನರಂಜನೆ ನಮ್ಮ ನುಡಿಯಲ್ಲಿರಬೇಕು ಅನ್ನೋದು ನಮ್ಮ ಮೂಲಭೂತ ಹಕ್ಕಾಗಿದೆ. ಇವತ್ತು ಐಪಿಎಲ್ ಸರಣಿಯಲ್ಲಿ ಕನ್ನಡದ ಕಾಮೆಂಟರಿ ಕೊಡಕ್ಕೆ ಅವರು ಮುಂದಾಗಿರೋದು ಒಕ್ಕೂಟದ ಘನತೆ ಕಾಪಾಡಕ್ಕೇ ಅಂತೇನೂ ಅಲ್ಲ. ಇದರಿಂದ ಕನ್ನಡದ ಮಾರುಕಟ್ಟೇನಾ ಗೆಲ್ಲಕ್ ಸಾಧ್ಯಾ ಆಗಬಹುದು ಅನ್ನೋದೇ ಅವರ ಈ ನಿಲುವಿಗೆ ಕಾರಣ. ಏನೇ ಆಗಲಿ, ಇದರಿಂದಾಗಿ ಕನ್ನಡಿಗರು ತಮ್ಮ ನುಡಿಗೆ ಇರೋ ಮಾರುಕಟ್ಟೆ ಶಕ್ತೀನಾ ಮತ್ತೊಮ್ಮೆ ಅರಿತುಕೋಬೇಕು. ಬರೀ ಕಾಮೆಂಟರಿ ಅಲ್ಲ, ಟಿ.ವಿಯ ಜಾಹೀರಾತುಗಳು ಕೂಡಾ ಕನ್ನಡದಲ್ಲಿರೋದು ಆಯಾ ಉತ್ಪನ್ನಗಳ ಮಾರಾಟ ನಮ್ಮ ನಾಡಲ್ಲಿ ಹೆಚ್ಚೋದಕ್ಕೆ ಸಹಾಯಕ ಅಂತ ತೋರಿಸಿಕೊಡಬೇಕು. ಆಗ ಹಿಂದಿ ಹೇರಿಕೆಯೂ ಕೊನೆಯಾಗುತ್ತೆ, ಒಕ್ಕೂಟ ವ್ಯವಸ್ಥೆಗೂ ಗೌರವ ಬರುತ್ತೆ! ಹೌದಲ್ವಾ ಗುರು?
"ಕಲಿಕೆ" ರಾಜ್ಯದ ಪಟ್ಟೀಗೆ ಬರಬೇಕು!
ಕರ್ನಾಟಕ ಸರ್ಕಾರದ ಹೊಣೆಗಾರಿಕೆ ಏನೂ ಇಲ್ವಾ?
ಕೇಂದ್ರೀಯ ಪಠ್ಯಕ್ರಮದ ಅನೇಕ ಶಾಲೆಗಳಲ್ಲಿ ಕಲಿಸಲು ಬಳಸೋ ಪಠ್ಯಪುಸ್ತಕಗಳ ಹೂರಣದ ಬಗ್ಗೆ ರಾಜ್ಯಸರ್ಕಾರಕ್ಕೆ ಯಾವ ರೀತಿಯ ಹಿಡಿತವೂ ಇಲ್ಲದಂತಿದೆ. ಕಲಿಕೆ ಪರಿಣಾಮಕಾರಿಯಾಗಿರೋಕೆ ಆಯಾ ಪ್ರದೇಶದ ಸಂಸ್ಕೃತಿ, ಆಚಾರ ವಿಚಾರಗಳನ್ನು ಬಳ್ಸಿ ಕಲ್ಸೋದು ಸರಿಯಾದ ವಿಧಾನವಾಗಿದೆ. ಅಂಥದ್ರಲ್ಲಿ ನಾವು ಇರೋ ಪರಿಸರದ ಬಗ್ಗೆ ಅರೆಬರೆ, ತಪ್ಪುತಪ್ಪು ಮಾಹಿತಿ ಇರೋ ಅಂಥಾ ಪುಸ್ತಕಗಳನ್ನು ಕಲಿಕೆಗೆ ಬಳ್ಸುದ್ರೆ ನಮ್ಮ ಮಕ್ಕಳ ಮನ್ಸು ಏನಾಗಬೇಡಾ ಗುರು? ನಮ್ಮ ನಾಡು, ನುಡಿ ಬಗ್ಗೆ ಕೀಳರಿಮೆಗೆ ಕಾರಣವಾಗೋವಂಥಾ ಪಾಠ ಕಲಿತ ಮಕ್ಕಳು ಈ ನಾಡಿನ ಸಂಪತ್ತು ಹೇಗಾದಾರು? ’ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು’ ಅನ್ನೋ ಮಾತಿಗೆ ಏನರ್ಥವಿರುತ್ತೆ? ಇಂಥಾ ಆಗುಹೋಗುಗಳ ಬಗ್ಗೆ ರಾಜ್ಯಸರ್ಕಾರಕ್ಕೆ ಹಿಡಿತ ಇರಬೇಕು ಅನ್ನೋದು ಸರಿಯಲ್ವಾ? ಹೀಗೆ ನಾಡಿನ ಮಕ್ಕಳಿಗೆ ಏನು ಕಲಿಸಲಾಗುತ್ತಿದೆ ಅನ್ನುವುದರ ಬಗ್ಗೆ ಕಾಳಜೀನೆ ಇಲ್ಲದೆ ನಮ್ಮ ಸರ್ಕಾರ ಕಣ್ಣುಮುಚ್ಚಿ ಸುಮ್ಮನೆ ಕೂರಕ್ಕಾಗುತ್ತಾ ಗುರು?
ಕರ್ನಾಟಕದಲ್ಲಿ ಕನ್ನಡ ಕಲ್ಸಿ ಅಂತಾ ಕೇಳ್ಕೊಂಡ ಶಿಕ್ಷಣ ಸಚಿವರು!
ಕೇಂದ್ರೀಯ ಪಠ್ಯಕ್ರಮದ ಶಾಲೆಗಳ ಮೇಲೆ, ಅವು ಕಲಿಸೋ ಪಠ್ಯದ ಮೇಲೆ ರಾಜ್ಯಸರ್ಕಾರಕ್ಕೆ ಯಾವ ರೀತಿ ಹಿಡಿತ ಇದೆ ಅಂತ ನೋಡುದ್ರೆ ನಿರಾಸೆಯಾಗುತ್ತೆ! ಇದಕ್ಕೆ ಸಾಕ್ಷಿಯಾಗುವಂತೆ ರಾಜ್ಯದ ಪ್ರಾಥಮಿಕ ಶಿಕ್ಷಣ ಸಚಿವರಾದ ಶ್ರೀ ವಿಶ್ವೇಶ್ವರ ಹೆಗ್ಡೆ ಕಾಗೇರಿಯೋರು ಸಿ.ಬಿ.ಎಸ್.ಇ, ಐ.ಸಿ.ಎಸ್.ಈಗಳಲ್ಲಿ ಕನ್ನಡಾನ ಕಲ್ಸಕ್ ಅವಕಾಶ ಮಾಡ್ಕೊಡಿ ಅಂತ ಕೇಳಿಕೊಂಡ ಸುದ್ದಿ ಸ್ವಲ್ಪ ದಿನದ ಹಿಂದೆ ಇದೇ ಪತ್ರಿಕೆಗಳಲ್ಲಿ ಬಂದಿತ್ತು. ಕರ್ನಾಟಕದ ಶಾಲೆಗಳಲ್ಲಿ ಏನು ಕಲಿಸಬೇಕು ಅಂತ ನಿರ್ಧರಿಸೋ ಹಕ್ಕು ಕರ್ನಾಟಕ ರಾಜ್ಯ ಸರ್ಕಾರಕ್ಕೇ ಇಲ್ಲಾ ಅಂದ್ರೆ ಹೇಗೆ? ಈ ಶಾಲೆಗಳಲ್ಲಿ ಕಲ್ಯೋ ಮಕ್ಕಳು ನಮ್ಮ ನಾಡಿನ ಮಕ್ಕಳು ಅನ್ನೋ ಒಂದು ಕಾಳಜಿ ಸಾಕಲ್ವಾ, ಕರ್ನಾಟಕ ರಾಜ್ಯ ಸರ್ಕಾರ ಈ ವಿಷ್ಯದಲ್ಲಿ ಒಂದು ಜವಾಬ್ದಾರಿಯುತ ನಿಲುವು ತೊಗಳ್ಳಕ್ಕೆ? ಕೇಂದ್ರಾನ ಒತ್ತಾಯಿಸಕ್ಕೆ? ಕಲಿಕೆ ಅನ್ನೋದು ರಾಜ್ಯಗಳ ಆಡಳಿತ ಪಟ್ಟಿಯಲ್ಲಿರಬೇಕು, ಇದನ್ನು ಮೊದಲು ಮಾಡಿ ಅಂತ ನಮ್ಮ ಸರ್ಕಾರದೋರು ಕೇಂದ್ರಾನ ಯಾಕೆ ಒತ್ತಾಯ ಮಾಡಬಾರದು ಗುರು? ಆಯಾ ರಾಜ್ಯಗಳಲ್ಲಿ ಇರೋ ಎಲ್ಲಾ ಶಾಲೆಗಳಲ್ಲಿ ಏನು ಕಲುಸ್ತಾರೆ ಅನ್ನೋದನ್ನು ತಿಳ್ಕೊಳೋ ಹಕ್ಕು, ಏನು ಕಲಿಸಬೇಕು ಅಂತಾ ಕಟ್ಟುಪಾಡು ಮಾಡೋ ಹಕ್ಕು ಆಯಾ ರಾಜ್ಯಸರ್ಕಾರಗಳ ಕೈಲೇ ಇರಬೇಕು ಅನ್ನೋದು ಸರಿಯಾದದ್ದಲ್ವಾ ಗುರು?
ಚಿತ್ರರಂಗದ ನಿರ್ಣಯಗಳು : ಜೊಳ್ಳು ಮತ್ತು ಕಾಳು

ಕಮಲಹಾಸನ್ ಮತ್ತು ಕಲೆಯ ತಿಳಿಗೊಳ!

ಕನ್ನಡ ಚಿತ್ರರಂಗ 75ವರ್ಷ ಪೂರೈಸ್ತು ಅಂತಾ ಮೊನ್ನೆ, ಅಂದ್ರೆ 2009ರ ಮಾರ್ಚಿ ಒಂದನೇ ತಾರೀಕಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮೂರು ದಿನದ ಒಂದು ಕಾರ್ಯಕ್ರಮಾನ ಹಮ್ಮಿಕೊಂಡಿದ್ರು. ಮೊದಲನೇ ದಿನಾ ತಮಿಳಿನಿಂದ ಕನ್ನಡಕ್ಕೆ ಬಂದಿದ್ದೋರೂ ಅಂತಾ ತಮಿಳು ಚಿತ್ರರಂಗದ ಹೆಸರಾಂತ ನಟರಾದ ಕಮಲಹಾಸನ್ ಅವ್ರುನ್ನ ಸನ್ಮಾನ ಮಾಡೊ ಸಲುವಾಗಿ ಕರೆದಿದ್ರು. ಅವ್ರು ಬಂದು ಗೌರವಾ ಸ್ವೀಕರಿಸಿ ಕನ್ನಡದಲ್ಲೇ ಭಾಷಣಾನೂ ಮಾಡಿದ್ರು. ಭಾಷಣದ ಕಡೆಗೆ ಅಡಿಗರ ಕಾವ್ಯವೊಂದನ್ನೂ ಓದಿದ್ರು. ಉದಾತ್ತತೆ, ಆದರ್ಶಗಳಿದ್ದ ಅವರ ಮಾತುಗಳು ತಾತ್ವಿಕವಾಗಿ, ರಾಜಕೀಯವಾಗಿ ಜನಮನ ಸೂರೆಯಾಗುವಂತೆಯೇ ಇದ್ವು, ಆದ್ರೆ ತಮ್ಮ ಅದ್ಭುತ ಉಪದೇಶಾಮೃತಾನ ಕನ್ನಡದೋರಿಗೆ, ಅದೂ ಈ ಸಮಯದಲ್ಲಿ ಕೊಡೋ ಅಗತ್ಯವೇನಿತ್ತು ಗುರು?
ಕಮಲಹಾಸನ್ ಆಡಿದ ರಾಜಕೀಯದ ಮಾತು!
ಆ ದಿನ ಕಮಲಹಾಸನ್ ಅವ್ರು ಆಡಿದ ಮಾತುಗಳನ್ನು ಒಂದ್ಸಲ ಮೆಲುಕು ಹಾಕಣ ಬನ್ನಿ!
“ನಾನೊಬ್ಬ ತಮಿಳಿಗ, ಇದು ಬದಲಿಸಲಾಗದ ಸತ್ಯ, ಆದರೆ ನಾನು ರಜನಿ, ತಾಯಿನಾಗೇಶ್, ಸಾವುಕಾರ ಜಾನಕಿ,
ಪ್ರಭುದೇವ, ಪ್ರಕಾಶ್ ರಾಜ್ ಮೊದಲಾದವರನ್ನೆಲ್ಲಾ ನಮ್ಮವರೆಂದು ಒಪ್ಪಿಕೊಂಡ ತಮಿಳಿಗ,
ಪುಟ್ಟಣ್ಣನವರನ್ನು ಗೌರವಿಸುವ ತಮಿಳಿಗ….”
ವೈಯುಕ್ತಿಕವಾಗಿ ಕಮಲ್ ಅಂಥ ದೊಡ್ಡತನದವರೇ ಇರಬಹುದು. ಇಷ್ಟನ್ನು ಆ ಸಭೆಯಲ್ಲಿ ಹೇಳಿ ಅಷ್ಟಕ್ಕೇ ನಿಲ್ಸಿದ್ರೆ ಎಲ್ಲಾ ತಮಿಳ್ರು ಹೀಗೆ ಇರಬೇಕು, ಎಲ್ಲಾ ಕನ್ನಡದೋರೂ ಹೀಗೆ ಇರಬೇಕು ಅನ್ನೋ ಸಂದೇಶ ತೊಗೊಂಡು ಖುಶಿ ಪಡ್ಬೋದಾಗಿತ್ತು… ಆದರೆ ಇಂಥಾ ಒಳ್ಳೇತನದ ಆದರ್ಶದ, ವ್ಯಕ್ತಿಗತವಾದ ಸ್ವಭಾವ ಹೇಳಿದ ಮರುಕ್ಷಣವೇ ನಾನಿಲ್ಲಿ ಬಂದಿರೋದೇ ಕನ್ನಡದವ್ರಿಗೆ ಬುದ್ಧಿ ಹೇಳಕ್ಕೆ ಅಂದು
“ರಾಜಕೀಯದ ಕೊಳದಲ್ಲಿ ಕಲ್ಲು ಹಾಕುದ್ರೆ ಪರ್ವಾಗಿಲ್ಲಾ, ನೀವೆಲ್ಲಾ ಕಲೆಯ ಕೊಳಕ್ಕೆ
ಕಲ್ಲುಹಾಕಬೇಡಿ, ಈ ಪುಷ್ಕರಣೀನಾ ರಕ್ತದ ಹೊಂಡ ಮಾಡಬೇಡಿ”
ಅಂದ್ರು. ಏನಿದರ ಅರ್ಥ? ನೀವು ಕಲ್ಲು ಹಾಕಬೇಡಿ ಅನ್ನೋ ಬದಲು ನಾವ್ಯಾರೂ ಕಲ್ಲು ಹಾಕಬಾರ್ದು ಅನ್ನಬೇಕಿತ್ತಲ್ವಾ? ಗುರು!
ತಿಳಿಗೊಳಕೆ ಕಲ್ಲನೆಸದವರು ಯಾರು?
"ನಿಜವಾಗ್ಲೂ ಯಾರು, ಕಲೆಗೂ ರಾಜಕೀಯಕ್ಕೂ ತಳುಕು ಹಾಕ್ತಿರೋರು? ಕನ್ನಡಿಗ್ರಾ? ತಮಿಳ್ರಾ? ಯಾರಿವನು ಸಿನಿಮಾ ಶೂಟಿಂಗ್ ಸಮಯದಲ್ಲಿ ಯಾಕೆ ತಮಿಳ್ರು ಡಾ. ರಾಜ್ ಮೇಲೆ ಆಕ್ರಮಣ ಮಾಡುದ್ರು? ಯಾಕೆ ಕಲಾವಿದರಾದ ಡಾ. ರಾಜ್ ಅವರನ್ನು ಹೊತ್ತೊಯ್ದು, ತಿರುವಳ್ಳುವರ್ ಪ್ರತಿಮೆ ಸ್ಥಾಪನೆಯೇ ಮೊದಲಾದ ರಾಜಕೀಯ ಬೇಡಿಕೆಗಳನ್ನಿಟ್ರು? ಯಾರು ದಕ್ಷಿಣ ಭಾರತ ಚಲನಚಿತ್ರ ಮಂಡಳಿಯಿಂದ ಏಕಪಕ್ಷೀಯವಾಗಿ ಕನ್ನಡಿಗ ಪ್ರತಿನಿಧಿಗಳನ್ನು ಅವರದಲ್ಲದ ತಪ್ಪಿಗಾಗಿ, ಅವರು ಕನ್ನಡಿಗರೆಂಬ ಒಂದೇ ಕಾರಣಕ್ಕಾಗಿ ಸಸ್ಪೆಂಡ್ ಮಾಡಿದ್ರು? ಯಾರು ಕನ್ನಡಿಗರ ವಿರುದ್ಧವಾಗಿ ಪ್ರತಿಸಾರಿ ಚೆನ್ನೈ ಬೀಚಿನಲ್ಲಿ ಸತ್ಯಾಗ್ರಹ, ಭಾಷಣ ಮಾಡಿರೋರು? ಯಾರು ತುಂಬಿದ ಸಭೆಯಲ್ಲಿ “ಇವ್ರುನ್ನ ಒದೀಬೇಕು” ಅಂತಂದೋರು? ಯಾರು ಈ ಸಭೆಯಲ್ಲಿ ಭಾಗವಹಿಸದ ಕಲಾವಿದರನ್ನು ಚಿತ್ರರಂಗದಿಂದ ಬಹಿಷ್ಕರಿಸ್ತೀವಿ ಅಂದೋರು? ಯಾರು? ಯಾರು?" ಅಂತ ನಿಮ್ಮ ಮನಸ್ಸಲ್ಲಿ ಪ್ರಶ್ನೆಗಳು ಏಳ್ತಿಲ್ವಾ ಗುರು?
ಕಮಲಹಾಸನ್ ಅವ್ರು ತಮ್ಮ ಭಾಷಣಾನ್ನ ಯಾರನ್ನುದ್ದೇಶಿಸಿ ಮಾತಾಡಬೇಕಿತ್ತು? ಕನ್ನಡದವ್ರನ್ನೋ? ತಮಿಳರ್ನೋ? ಇದೇ ಭಾಷಣವನ್ನು ತಮಿಳು ಚಿತ್ರರಂಗದ ಕಾರ್ಯಕ್ರಮದಲ್ಲಿ ಇವ್ರು ಆಡಿದರೇನು? ಚೆನ್ನೈ ಬೀಚಲ್ಲಿ ನಿಂತು ಕಾವೇರಿ ಹೋರಾಟ ಮಾಡುವಾಗ ಆಡಿದರೇನು? ಇವತ್ತು ’ಕಲೆ, ಕಲಾವಿದರು ಶುಭ್ರ ಪುಷ್ಕರಣಿ, ರಾಜಕೀಯ ರಕ್ತದಹೊಂಡ’ ಅನ್ನೋರು, ’ತಮಿಳುನಾಡಿನ ಚಿತ್ರರಂಗದ ಜನ ಯಾಕೆ ಚಿತ್ರರಂಗವನ್ನು ರಾಜಕೀಯದ ಏಣಿಯಾಗಿ ಬಳುಸ್ತಾರೆ? ನಿಜವಾಗ್ಲೂ ಕಲೆಯ ತಿಳಿಗೊಳವನ್ನು ಕಲಕಿದೋರು ಯಾರು?’ ಅಂತಾ ಯೋಚುಸ್ಬೇಕಾಗಿತು ಅನ್ನುಸ್ತಿಲ್ವಾ? ಗುರು...
ಇವರು ಬಂದಿದ್ದಾದ್ರೂ ಯಾಕಿರಬೌದು?
ಚಿತ್ರರಂಗ ಇವತ್ತಿನ ದಿವ್ಸಾ ಬರೀ ಕಲೆಯಾಗಿ ಉಳ್ದಿಲ್ಲ. ಅದು ದೊಡ್ಡ ಉದ್ದಿಮೆಯಾಗಿ ಬೆಳೆದಿದೆ. ಕರ್ನಾಟಕ್ದಲ್ಲಿ ಚಲನಚಿತ್ರಗಳಿಗೆ ಮಾರುಕಟ್ಟೆ ಅನ್ನೋದು ಇರೋ ಹಾಗೇನೇ, ಮಾರುಕಟ್ಟೆಯಲ್ಲಿ ಸ್ಪರ್ಧೆಯೂ ಇದೆ. ಕರ್ನಾಟಕದಲ್ಲಿ ತಮಿಳು ಚಿತ್ರಗಳಿಗೆ ಮಾರುಕಟ್ಟೆ ಗಟ್ಟಿಗಳ್ಸೋ ತಂತ್ರವಾಗೇ “ಕಲೆಗೆ ಭಾಷೆಯಿಲ್ಲ, ಕಲಾವಿದ್ರೆಲ್ಲಾ ಒಂದೇ” ಅಂತಂದ್ರಾ ಅನ್ಸಲ್ವಾ ಗುರು? ಇವ್ರ ಮಾತುಗಳನ್ನು ಕೇಳಿದ ಮೇಲೆ ಅನ್ಸೋದೇನಪ್ಪಾ ಅಂದ್ರೆ ಇವರು ಇಲ್ಲಿಗೆ ಬಂದ ಉದ್ದೇಶ ನಮ್ಮನ್ನು ಅಭಿನಂದಿಸಿ ಗೌರವ ಸ್ವೀಕರಿಸಿ ಹೋಗೋದಷ್ಟೇ ಆಗಿರಲಿಲ್ಲಾ… ಅದಕ್ಕೂ ಮೀರಿದ ತಮಿಳು ಚಿತ್ರಗಳಿಗೆ ಮಾರುಕಟ್ಟೆ ಕಟ್ಟಿಕೊಡೋ ತಂತ್ರಗಾರಿಕೆ ಅನ್ನೋ ಅನುಮಾನ ಆವತ್ತಿನ ದಿವ್ಸ ಕಮಲಹಾಸನ್ ಅವ್ರ ಮಾತುಗಳನ್ನು ಕೇಳಿದೋರಿಗೆ ಬಂದಿರಬೋದಲ್ವಾ? ಗುರುಗಳೇ!
ಕರ್ನಾಟಕ ಮುಕ್ತ ವಿ.ವಿ.ಯ ಕನ್ನಡ ಕಲ್ಸೋ ಒಳ್ಳೇ ಕೆಲ್ಸ!

ಇಲ್ಲಿ ಯಾರ ಉದ್ಯೋಗ ಗುರಿಯಾಗಬೇಕು?
ಕರ್ನಾಟಕ ಸರ್ಕಾರದ ಈ ಹೆಜ್ಜೆ ಸ್ವಾಗತಾರ್ಹ. ಕರ್ನಾಟಕದಲ್ಲಿರುವ ನಿರುದ್ಯೋಗದ ಪಿಡುಗು ಮತ್ತು ರಾಜ್ಯದ ಜನರೇ ಅದರ ಅತಿಮುಖ್ಯ ಸಂಪನ್ಮೂಲವೆಂದು ಸರ್ಕಾರದ ಗಮನಕ್ಕೆ ಬಂದಿರುವ ಸೂಚನೆ ಇದರಿಂದ ಹೊರಬಿದ್ದಿದೆ. ಆದರೆ ಈ ಲಕ್ಷಾಂತರ ಕೋಟಿ ಬಂಡವಾಳ ಬಂದು, ಅದರಿಂದ ಲಕ್ಷಾಂತರ ಉದ್ಯೋಗಗಳು ರಾಜ್ಯದೊಳಗೆ ಹುಟ್ಟಿದರೂ ಅದರಲ್ಲಿ ಹೆಚ್ಚಿನ ಪಾಲು ಕನ್ನಡೇತರರಿಗೇ ಸಿಕ್ಕರೆ ಇಂತಹ ಅದೆಷ್ಟು ಕೋಟಿ ಬಂಡವಾಳ ಮತ್ತು ಅದೆಷ್ಟೋ ಲಕ್ಷ ಉದ್ಯೋಗಗಳು ಹುಟ್ಟಿದರೂ ರಾಜ್ಯದ ಆರ್ಥಿಕ ಏಳ್ಗೆ ಮಾತ್ರ ಕನಸಾಗೇ ಉಳಿದು ಹೋಗುವುದು ಖಚಿತ ಗುರು!
ಈ ಸಮಸ್ಯೆ ನಿವಾರಿಸಲು ಈಗಾಗಲೇ ಒಡಿಸ್ಸಾ ಮತ್ತು ಮಹಾರಾಷ್ಟ್ರ ಸರ್ಕಾರಗಳು ಆ ರಾಜ್ಯಗಳಲ್ಲಿ ಹುಟ್ಟುವ ಎಲ್ಲಾ ಉದ್ಯೋಗಗಳ ಸಿಂಹಪಾಲು ಆ ರಾಜ್ಯದೋರಿಗೇ ಸಿಗಬೇಕೆಂಬ ಕಾನೂನನ್ನೇ ವಿಧಿಸಿವೆ. ಕರ್ನಾಟಕದಲ್ಲೂ ಈ ರೀತಿಯ ಉದ್ಯೋಗ ನೀತಿಗಳ ಅನುಷ್ಠಾನ ಆಗಬೇಕಿದೆ. ಈ ನಿಟ್ಟಿನಲ್ಲಿ ಸರೋಜಿನಿ ಮಹಿಷಿ ವರದಿಯ ಆದೇಶಗಳು ಕರ್ನಾಟದಲ್ಲಿ ಕೂಡಲೆ ಅನುಷ್ಠಾನ ಆಗಬೇಕಿವೆ. ಬೇಲಿಯೇ ಇಲ್ಲದ ಹೊಲದಂತೆ, ರಾಜ್ಯದೊಳಗೆ ಹುಟ್ಟುವ ಉದ್ಯೋಗಗಳು ಹೊರರಾಜ್ಯದವರ ಪಾಲಾಗದಂತೆ ರಾಜ್ಯ ಸರ್ಕಾರ ಕಾನೂನು ವಿಧಿಸಬೇಕು, ರಾಜ್ಯದ ಸಧೃಡ ಭವಿಷ್ಯ ನಿರೂಪಿಸುವಲ್ಲಿ ಮುಖ್ಯ ಪಾತ್ರ ವಹಿಸಬೇಕು.