ಇತ್ತೀಚೆಗೆ ಮಲೇಷಿಯಾದಲ್ಲಿ ನಡೆದ 18ನೇ ಅಜ್ಲಾನ್ ಷಾ ಹಾಕಿ ಪಂದ್ಯಾವಳಿಯಲ್ಲಿ ಗೆದ್ದ ಭಾರತ ತಂಡದಲ್ಲಿ ಆಡಿದ ಹೊಸ ಆಟಗಾರ ಸುನಿಲ್ ಕುಮಾರ್ ಅವರ ಬಗ್ಗೆ ಇವತ್ತಿನ (14.04.2009) ಕನ್ನಡ ಪ್ರಭದ ಮುಖಪುಟದಲ್ಲಿ ಒಂದು ವರದಿ ಬಂದಿದೆ ಗುರು! 15ವರ್ಷಗಳ ನಂತರ ಈ ಪ್ರಶಸ್ತಿಯನ್ನು ಗೆದ್ದ ಭಾರತ ತಂಡದೋರು ಇದನ್ನು ಸುನಿಲ್ ಕುಮಾರ್ ಅವರ ತಂದೆಗೆ ಅರ್ಪಿಸಿದ್ದಾರಂತೆ. ಅಲ್ಲಿ ಆಟವಾಡಲು ಹೋದ ಸುನಿಲ್ ಅವರಿಗೆ ಮೂರೇದಿನದಲ್ಲಿ ತಲುಪಿದ ಸುದ್ದಿ ತನ್ನಪ್ಪ ತೀರಿಹೋದದ್ದು. ಎದೆಗುಂದದ ಸುನಿಲ್ ಈ ಕೆಟ್ಟಸುದ್ದಿ ಕೇಳಿದ ಮೇಲೂ ಹಿಡಿದ ಕೆಲಸ ಕೈಬಿಡದೆ ಆಟವಾಡಿದರಂತೆ. ಇವರ ಈ ಮನೋಧೈರ್ಯಾನ ಎಲ್ರೂ ಕೊಂಡಾಡ್ತಿದಾರೆ. ಸುನಿಲ್ ಕುಮಾರ್ ಅವ್ರು ಕನ್ನಡನಾಡಿನ ಹೆಮ್ಮೆಯ ಕೂಸು ಎಂದು ಕನ್ನಡಿಗರೂ ಎದೆಯುಬ್ಬಿಸುವಂತೆ ನಡೆದುಕೊಂಡಿದಾರೆ ಸುನಿಲ್. ಇವರಿಗೆ ನಮ್ಮ ಅಭಿನಂದನೆಗಳು. ತಂದೆಯ ಸಾವಿನ ನೋವಿನ ಗಾಯ ಬೇಗ ಮಾಯಲಿ ಎಂದು ಹಾರೈಕೆ.
ಇದು ಕನ್ನಡಿಗರ ನಿಜಗುಣ!
ಹೌದು, ಹಿಡಿದ ಗುರಿ ಸಾಧಿಸೋ, ಆ ದಾರೀಲಿ ಎದುರಾಗೋ ಸವಾಲುಗಳನ್ನು ಮೀರಿನಿಲ್ಲೋ ಚೈತನ್ಯ ಈ ನಾಡಿನ ಮಕ್ಕಳಾದ ನಮ್ಮ ರಕ್ತದಲ್ಲೇ ಹರಿದುಬಂದಿರುವಂತಿದೆ. ಅಂದು ತನ್ನ ದವಡೆ ಚದರಿ ಹೋದಾಗಲೂ ಅಂಜದೆ, ನೋವಿಗೆ ಸೋತು ಕೂರದೆ ಕ್ರಿಕೆಟ್ ಆಟದಲ್ಲಿ ಚೆಂಡೆಸೆದ ಅನಿಲ್ ಕುಂಬ್ಳೆಯಲ್ಲೂ ಇದೇ ಹಿಡಿದ ಗುರಿಯ ಬಿಡದ ಪರಿ ಕಂಡಿತ್ತು. 1996ರ ವಿಶ್ವಕಪ್ ಪಂದ್ಯಾವಳಿಯಲ್ಲಿ ತಾನೆಸೆದ ಚೆಂಡನ್ನು ಬೌಂಡರಿಗಟ್ಟಿ ಅಟ್ಟಹಾಸದಿಂದ ಅಪಹಾಸ್ಯ ಮಾಡಿದ ಪಾಕಿಸ್ತಾನದ ಅಮೀರ್ ಸೋಹೆಲ್ಲನನ್ನು ಮರು ಎಸೆತದಲ್ಲೇ ಔಟ್ ಮಾಡಿದ ಛಲಗಾರ ವೆಂಕಟೇಶ್ ಪ್ರಸಾದ್ ಅವ್ರಲ್ಲೂ ಇದೇ ಹಟ ಕಂಡಿತ್ತು.
ಇವರುಗಳಿಗೆಲ್ಲಾ ಮಾದರಿಯಾಗಿ 34 ವರ್ಷಗಳ ಹಿಂದೆಯೇ ಬೆಂಕಿ ಚೆಂಡುಗಳನ್ನು ಎದುರಿಸಿ ಏಕಾಂಗಿಯಾಗಿ ಆಡಿದ್ದು ಜಿ.ಆರ್. ವಿಶ್ವನಾಥ್ ಅವ್ರು. ಅಂದು ಚನ್ನೈನಲ್ಲಿ ಭಾರತ ತಂಡ ಬ್ಯಾಟ್ ಮಾಡ್ತಾ ವೆಸ್ಟ್ ಇಂಡೀಸಿನ ಬೌಲಿಂಗ್ ದಾಳಿಗೆ ಪತರಗುಟ್ಟಿ ಹೋಗಿದ್ದಾಗ, ಒಂದೆಡೆಯಲ್ಲಿ ಏಕಾಂಗಿಯಾಗಿ ನೆಲಕಚ್ಚಿ ಹೋರಾಡಿದ್ದು ಇವರೇ. ಭಾರತದ 190 ರನ್ನುಗಳ ಅರ್ಧಕ್ಕಿಂತ ಹೆಚ್ಚು, ಅಂದರೆ 97 ರನ್ನು ಗಳಿಸಿ, ಇತಿಹಾಸದ ಅತ್ಯುತ್ತಮ ಆಟವಾಡಿ ಕೆಚ್ಚು ತೋರಿದವ್ರು ವಿಶಿ. ಈ ಆಟ ಇಂದಿಗೂ ವಿಶ್ವದ ಅತ್ಯುತ್ತಮ ಇನ್ನಿಂಗ್ಸುಗಳ ಪಟ್ಟಿಯಲ್ಲಿ ಅಳಿಯದೇ ನಿಂತಿದೆ.
ಆಟದ ಮೈದಾನ ಮಾತ್ರವಲ್ಲದೇ, ಯುದ್ಧರಂಗವೂ ಸೇರಿದಂತೆ ಎಲ್ಲಾ ರಂಗಗಳಲ್ಲೂ ಎದುರಾಗೋ ಸವಾಲುಗಳನ್ನು ಗಂಡೆದೆಯಿಂದ ಎದುರಿಸೋ ಛಲ ನಮ್ಮ ಹಿರಿಯರಲ್ಲಿಯೂ ಇತ್ತೆಂಬುದಾಗಿ ನಮ್ಮ ಇತಿಹಾಸ ಸಾರುತ್ತಿದೆ. ಇಂದಿಗೂ ಆ ಗುಣಗಳು ನಮ್ಮ ಮೈಯ್ಯಲ್ಲಿವೆ. ಸ್ವಲ್ಪ ಆತ್ಮನಂಬಿಕೆ, ಮತ್ತಷ್ಟು ದುಡಿಮೆಗಳು ಈ ಗುಣಗಳನ್ನು ನಮ್ಮಲ್ಲಿ ಹೆಚ್ಚಿಸಲಿ ಅನ್ನೋದು ಏನ್ ಗುರು ಅಂಬೋಣ!
2 ಅನಿಸಿಕೆಗಳು:
ನಿಜ. ಕನ್ನಡಿಗರಲ್ಲಿ ಇಂತಹ ಕೆಚ್ಚು ಹೊಸದೇನಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಇದು ಅಪರೂಪವಾಗುತ್ತಿದೆ. ತಮಿಳು, ತೆಲುಗು ಮತ್ತೂ ಉತ್ತರ ಭಾರತೀಯರ ಮುಂದೆ ನರ ಸತ್ತವರಂತೆ ಆಡುತ್ತಿದ್ದೇವೆ. ಕನ್ನಡಿಗರು ಎಚ್ಚೆತ್ತುಕೊಳ್ಳಲು ಇದು ಸೂಕ್ತ ಸಮಯ. ಬನ್ನಿ, ನಾವು ಯಾರಿಗು ಕಡಿಮೆ ಇಲ್ಲ ಎಂದು ಜಗತ್ತಿಗೆ ತೋರಿಸೋಣ. ಇಂದಿನ ಅತೀ ಮುಖ್ಯ ಸಮಸ್ಯೆ ನಮ್ಮಲ್ಲಿರುವ ಒಗ್ಗಟ್ಟಿನ ಕೊರತೆ. ಯಾವ ವಿಷಯದಲ್ಲೇ ಆಗಲಿ, ಕನ್ನಡಿಗರು ಕನ್ನಡಿಗರಿಗೆ ಬೆಂಬಲಿಸುವದನ್ನು ಕಲಿತಾಗ ಮಾತ್ರ ನಮ್ಮ ಎಳಿಗೆ ಸಾದ್ಯ.
- ಬಾಲಚಂದ್ರ
hats off to him
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!