ಭದ್ರಾವತಿ ಉಕ್ಕು ಕಾರ್ಖಾನೆ
ಸರ್ ಎಂ.ವಿಯವರು ಕಟ್ಟಿದ ಒಂದು ಮಹತ್ವದ ಕಾರ್ಖಾನೆ ಅಂದಿನ ಮೈಸೂರು ಕಬ್ಬಿಣ ಕಾರ್ಖಾನೆ. ಮುಂದಿನ ದಿನಗಳಲ್ಲಿ ಇದನ್ನು ಭಾರತ ಸರ್ಕಾರಕ್ಕೆ ವಹಿಸಿಕೊಡಲಾಯಿತು. ಮುಂದೆ ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಾಗಿ ಬೆಳೆದ ಈ ಸಂಸ್ಥೆಗೆ ಇದೀಗ ಅದರ ಸ್ಥಾಪಕರಾದ ಸರ್ ಎಂ.ವಿಯವರ ಹೆಸರನ್ನು ಇಡಲಾಗಿದೆ. ಪಾಪ! ಇವರು ವಿಶ್ವೇಶ್ವರಯ್ಯ ಅಂತಾ ಇಂಗ್ಲಿಷ್ ಭಾಷೇಲಿ ಬರೆದಿರೋ ಕಾಗುಣಿತವನ್ನೇ ಆಧಾರ ಮಾಡ್ಕೊಂಡು ಅದೇ ಹೆಸರನ್ನು visvesvaraya iron and steel limited ಅಂತ ಹೆಸರಿಟ್ಟಿದ್ದಾರೆ. ಸರಿ, ಸರ್.ಎಂ.ವಿಯೋರು ಕೂಡಾ ಹಾಗೇ ಬರೀತಿದ್ರು ಅಂತಲೇ ಇಟ್ಕೊಳ್ಳೋಣ. ಅದೇ ಹೆಸರನ್ನು ಕನ್ನಡದಲ್ಲಿ ಬರೀಬೇಕಾದ್ರೆ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಅಂತ ಬರೆದಿದ್ದಾರಲ್ಲಾ ಗುರು! ಹೀಗೆ ಕನ್ನಡದಲ್ಲಿ ಯಾಕ್ರಪ್ಪಾ ತಪ್ಪು ತಪ್ಪಾಗಿ ಬರ್ದಿದೀರಾ ಅಂತ ಅಲ್ಲಿ ಕೆಲಸ ಮಾಡೋ ಸಾವಿರಾರು ಕನ್ನಡಿಗ್ರಲ್ಲಿ ಒಬ್ರೂ ಕೇಳಿಲ್ಲ ಅಂದುಕೊಳ್ಳಕ್ ಸಾಧ್ಯಾನೆ ಇಲ್ಲಾ ಗುರು. ಅವ್ರು ಕೇಳುದ್ರೂ ಇದನ್ನು ಬದಲಾಯ್ಸಕ್ಕೂ ದಿಲ್ಲಿ ಧಣಿಗಳ ಅಪ್ಪಣೆ ಬೇಕು ಅಂತ ಅಲ್ಲಿರೋ ಯಾವುದೋ ಕನ್ನಡದವನಲ್ಲದ ಅಧಿಕಾರಿ ನಮ್ಮವರ ಬಾಯಿ ಮುಚ್ಚಿಸಿರ್ತಾರೆ ಅನ್ನೋ ಸಾಧ್ಯತೇನೆ ಹೆಚ್ಚು ಗುರು! ತಮಾಷೆ ಅಂದ್ರೆ ಮೇಲಿನ ಚಿತ್ರದಲ್ಲಿ ಸ್ವಲ್ಪ ಗಮನಿಸಿ ನೋಡಿ, ಇಂಗ್ಲಿಷ್ ಭಾಷೇಲೂ ಸರ್ ಎಂ.ವಿ ಹೆಸರನ್ನು ತಪ್ಪುತಪ್ಪಾಗಿ ಬರ್ದಿರೋದು ಕಾಣುತ್ತೆ! ಕನ್ನಡದಲ್ಲಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಅಂತ ಇರೋದನ್ನು ದೇವನಾಗರಿ ಲಿಪೀಲಿ ಐರನ್ ಅಂಡ್ ಸ್ಟೀಲ್ ಪ್ಲಾಂಟ್ ಅಂತಾ ಬರ್ದಿರೋದ್ರು ಉದ್ದೇಶಾ ಏನು? ಕನ್ನಡದೋರಿಗೆ ಹಿಂದೀ ಲಿಪಿ ಕಲ್ಸದಾ?
ಹೆಸರಷ್ಟೇ ಅಲ್ಲ! ಆಡಳಿತವೂ ಹೀಗೇ ಇರೋದು
ಇದು ಈಗ ಭಾರತ ಸರ್ಕಾರದ ಒಂದು ಉದ್ದಿಮೆಯಾಗಿದೆ. ಅಂದ್ರೆ ಇದರಲ್ಲಿ ಕೆಲಸಗಾರರು ಕನ್ನಡಿಗರೇ ಆಗಿದ್ರೂ ಇದರ ಉನ್ನತ ಅಧಿಕಾರಿಗಳು ಹೊರಗಿನವರೇ. ಹಾಗಾಗಿ ಇಲ್ಲಿ ಬಳಸೋ ಪ್ರತಿ ಹಾಳೆ ಮೇಲೂ ಇಂಗ್ಲಿಷು ಮತ್ತು ಹಿಂದೀಲಿ ಮುದ್ರಣ ಮಾಡಿದ್ದಾರೆ. ಈ ಸಂಸ್ಥೆಯ ಕಡತದ ಒಳಕವಚಗಳನ್ನು ನೋಡಿ.
ಒಂದರಲ್ಲಿ standard draft ಅಂತನ್ನೋದ್ರ ಪಟ್ಟಿ ಇದ್ರೆ ಮತ್ತೊಂದ್ರಲ್ಲಿ commonly used phrases ಅನ್ನೋ ಪಟ್ಟಿ ಇದೆ. ಎರಡ್ರಲ್ಲೂ ಹಿಂದೀ ಕಲಿಸೋ ಪ್ರಯತ್ನವೇ ಕಾಣೋದು! ತ್ರಿಭಾಷಾ ಸೂತ್ರಾ, ಅದೂ ಇದೂ ಮಣ್ಣು ಮಸಿ ಎಲ್ಲಾ ಕೇಂದ್ರ ಸರ್ಕಾರಕ್ಕೆ ಅನ್ವಯ ಆಗೋದಿಲ್ವಾ ಗುರು? ಈ ಸಂಸ್ಥೆಯ ಅಧಿಕಾರಿಗಳು ಸಾಮಾನ್ಯವಾಗಿ ಬಳ್ಸೋ ವಾಕ್ಯಗಳು ಅಂತ ಹಿಂದಿ/ ಇಂಗ್ಲಿಷ್ ಮಾತ್ರಾ ಹಾಕೋದ್ರ ಅರ್ಥ, ಹಿಂದಿಬ ರ್ದೆ ಇರೋರು ಅಧಿಕಾರಿಯಾಗಕ್ಕೆ ನಾಲಾಯಕ್ ಅಂತಾ ಅಲ್ವಾ? ಈ ಸಂಸ್ಥೆಯಲ್ಲಿ ಉನ್ನತ ಹುದ್ದೆಗೆ ಏರಬೇಕೂ ಅಂದ್ರೆ ಹಿಂದಿ ಕಲಿತಿರಲೇ ಬೇಕೆಂಬ ರೀತೀಲಿ ನಡ್ಕೊಳ್ತಾ ಇರೋದು ಸರೀನಾ? ಈ ಪಾಟಿ ಹಿಂದೀಲಿ ಕಡತಗಳಿದ್ರೆ ಈ ಸಂಸ್ಥೆಯ ಅಟೆಂಡರ್ ಹುದ್ದೆಗೂ ಹಿಂದಿ ಕಲಿತಿರಬೇಕೆನ್ನೋ ನಿಯಮ ಹುಟ್ಕೊಳಲ್ವಾ ಗುರು? ಈ ಸಂಸ್ಥೇನಾ ಕಟ್ಟಿದೋರು ಕನ್ನಡಿಗರು. ಇಲ್ಲಿ ಉಕ್ಕಾಗಿ ಬದಲಾಗೋ ಅದಿರು ಕನ್ನಡನಾಡಿನದು, ಹಾಗೆ ಬದಲಾಯಿಸೋರೂ ಕನ್ನಡಿಗರು(?). ಇಲ್ಲಿ ಆಡಳಿತ ಮಾತ್ರಾ ಇಂಗ್ಲಿಷ್ ಮತ್ತು ಹಿಂದೀಲಿ. ಇದನ್ ಕಂಡಾಗ ಒಂದು ದಾಸವಾಣಿ ನೆನಪಾಗುತ್ತೆ!
ಅಕ್ಕಾ ನಿನ್ನ ಮಾತ ಕೇಳಿ
ಚಿಕ್ಕದೊಂದು ಗಿಣಿಯ ಸಾಕಿ
ರೆಕ್ಕೆ ಬಂದ ರಾಮ ರಾಮನ
ಬೆಕ್ಕು ಕೊಂಡುಹೋಯಿತಲ್ಲೇ
ಅಂಗೈಯಾಗೆ ಆಡುವ ಗಿಣಿ
ಮುಂಗೈ ಮೇಲೆ ಓಡುವಾ ಗಿಣಿ
ಕಂಗಳೀಗೆ ಕಾಣದಂತೆ
ಮಂಗಾಮಾಯವಾಯಿತಲ್ಲೇ
ಗಿಳಿಯು ಪಂಜರದೊಳಿಲ್ಲ!
ನಮ್ಮಾ ಗಿಳಿಯು ಪಂಜರದೊಳಿಲ್ಲಾ!! (ವಿ ಐ ಎಸ್ ಎಲ್ ಕನ್ನಡನಾಡಲ್ಲಿಲ್ಲಾ!! ಅಂತಾ ಹಾಡ್ಕೊಳ್ಳಿ)
ಕೊನೆಹನಿ : ಹೊರನಾಡಿನಿಂದ ಇಲ್ಲಿಗೆ ವಲಸೆ ಬರೋ ಪರಭಾಷಿಕರಿಗೆ ಕನ್ನಡ ಕಲಿಸಕ್ಕೆ ’ನಿಮಗೆ ದಿನನಿತ್ಯಾ ಇಲ್ಲಿನ ಕೆಲಸಗಾರರ ಜೊತೆ, ಈ ಊರಿನ ಜನರ ಜೊತೆ ವ್ಯವಹರಿಸಲು ಕನ್ನಡ ಬರಬೇಕು, ಅದಕ್ಕೆ ಕನ್ನಡದಲ್ಲಿ ಸಾಮಾನ್ಯವಾಗಿ ಬಳ್ಸೋ ಪದಗಳ ಪಟ್ಟೀನಾ ಕೊಡ್ತಿದೀವಿ ತೊಗೊಳ್ಳಿ’ ಅಂತಾ ಆಡಳಿತ ಮಂಡಳಿಯೋರು ಯಾಕೆ ಕೊಟ್ಟಿಲ್ಲಾ? ಅಂತಾ ಕೇಳೋರು ಯಾರು ಗುರು?
3 ಅನಿಸಿಕೆಗಳು:
karma kanda :|
ಕರ್ನಾಟಕದ ಎಂಜಿನೀರಿಂಗ್ ಯುನಿವೆರ್ಸಿಟಿ ಹೆಸರು "ವಿಶ್ವೇಶ್ವರಾಯ ಟೆಕ್ನಾಲಜಿಕಲ್ ಯುನಿವೆರ್ಸಿಟಿ" ಅಂತಾನೆ ಇದೆ.
೧೯೯೮ ರಿಂದ ೨೦೦೩ ರವರೆಗೆ "ವಿಶ್ವೇಶ್ವರಯ್ಯ ಟೆಕ್ನಾಲಜಿಕಲ್ ಯುನಿವೆರ್ಸಿಟಿ" ಅಂತಾನೆ ಹೆಸರು ಇದ್ದಿದ್ದು.
ನಂತರ ಬದಲಾಯಿಸಲ್ಪಟ್ಟಿತು - ಸರಿಯಾದ ಕಾರಣ ಗೊತ್ತಿಲ್ಲ.
೨೦೦೩ - ೨೦೦೪ ಸಮಯದಲ್ಲಿ ಎಂಜಿನೀರಿಂಗ್ ಓದುತ್ತಿದ್ದ ಪ್ರತಿಯೊಬ್ಬರಿಗೂ ಎಲ್ಲೆಡೆ ಈ ಬದಲಾವಣೆ ಕಟ್ಟುನಿಟ್ಟಾಗಿ ಪಾಲಿಸಬೇಕಾಗಿ ಸೂಚನೆ ಬಂದಿತ್ತು.
"ವಿಶ್ವೇಶ್ವರಾಯ" ನ "ವಿಶ್ವೇಶ್ವರಾಯ" ಅಂತಲೇ ಅನ್ನಬೇಕೆ ಹೊರತು "ವಿಶ್ವೇಶ್ವರಯ್ಯ" ಅಂತ ಅಲ್ಲ.
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!