ರಾಷ್ಟ್ರೀಯ ಏಕತೆಗೆ ದಾರಿ ಯಾವುದಯ್ಯಾ?

ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕೆ ಸಹಮತದ ಬೆಂಬಲವನ್ನು ನಮ್ಮ ಬಿ.ಜೆ.ಪಿ ಸರ್ಕಾರ ಅನೇಕ ಗಣ್ಯರ ಹೇಳಿಕೆಗಳ ಮೂಲಕ ಗಳಿಸಿಕೊಳ್ತಾಯಿದೆ. ಈ ಗಣ್ಯರ ಪಟ್ಟಿಗೆ ಹೊಸ ಸೇರ್ಪಡೆ ನಮ್ಮ ನಾಡಿನ ಗೌರವಾನ್ವಿತ ನಿವೃತ್ತ ನ್ಯಾಯಾಧೀಶ, ಮಾಜಿ ರಾಜ್ಯಪಾಲ, ರಾಜ್ಯಸಭಾ ಸದಸ್ಯ ನ್ಯಾ.ಮಾ. ರಾಮಾಜೊಯಿಸ್. ಇವರ ಹೇಳಿಕೆ ಪ್ರತಿಮೆ ಸ್ಥಾಪನೆಗೆ ಬೆಂಬಲವಾಗಿರುವವರ, ರಾಜ್ಯಸರ್ಕಾರದ, ಸರ್ಕಾರ ನಡೆಸುತ್ತಿರುವ ಬಿಜೆಪಿಯ, ಮತ್ತದರ ಚಿಂತನಾ ಮನೆಯ ಸಿದ್ಧಾಂತದ ಸಾರವಾಗಿರುವುದು ಸ್ಪಷ್ಟವಾಗಿ ಕಾಣ್ತಿದೆ. ಪ್ರತಿಮೆ ಅನಾವರಣ ಮಾಡಿದ ಯಡ್ಯೂರಪ್ಪನವರ ಭಾಷಣವೂ ಇದನ್ನೇ ಧ್ವನಿಸುತ್ತಾ ಇದೆ.

ನಿಜ ರಾಷ್ಟ್ರೀಯತೆಯೋ? ಹುಸಿ ರಾಷ್ಟ್ರೀಯತೆಯೋ?

ರಾಷ್ಟ್ರೀಯತೆಯ ಪರಿಕಲ್ಪನೆಯ ಬಗ್ಗೆ ಸಿನಿಕ/ ಅಸಹಜ/ ಕಾಲ್ಪನಿಕ ಅಭಿಪ್ರಾಯಗಳಿಂದ ತುಂಬಿರುವ ಸಿದ್ಧಾಂತ ಪ್ರತಿಪಾದಿಸುತ್ತಿರುವ ಇವರುಗಳು ಹೇಳಿರೋ ಮಾತುಗಳ್ನೇ ನೋಡಿ. ಇದರ ಸಾರ ಏನಪ್ಪಾ ಅಂದ್ರೆ "ಇದೀಗ ಕನ್ನಡಪರರು ತಿರುವಳ್ಳುವರ್ ಪ್ರತಿಮೆ ವಿಷಯದಲ್ಲಿ ವಿರೋಧ ತೋರುವುದು ಕನ್ನಡದ ಅಭಿಮಾನದ ಹೆಸರಲ್ಲಿ ರಾಷ್ಟ್ರೀಯತೆಗೆ, ರಾಷ್ಟ್ರೀಯ ಏಕತೆಗೆ, ರಾಷ್ಟ್ರೀಯ ಭ್ರಾತ್ವತ್ವಕ್ಕೆ ಮಾರಕವಾಗಿರುವ ನಡವಳಿಕೆಗಳು." "ನಾವು ಮೊದಲು ಭಾರತೀಯರು. ಆಮೇಲೆ ಕನ್ನಡಿಗರು, ತಮಿಳರು, ತೆಲುಗರು..." ಇತ್ಯಾದಿ. ಭಾರತವೆನ್ನುವ ಈ ಮನೆಯಲ್ಲಿ ವಾಸಮಾಡುವ ಸೋದರರಾದ ತಮಿಳರು, ಕನ್ನಡಿಗರ ನಡುವೆ ಎಂತಹ ಒಡಕೂ ಇಲ್ಲ, ಇದ್ದರೂ ನಾವೆಲ್ಲಾ ಸೋದರರಾದ್ದರಿಂದ ಕನ್ನಡಿಗರು ಅವುಗಳ ಬಗ್ಗೆ ಅಪಸ್ವರ ಎತ್ತಬಾರದು. ಯಾರ ಕೋಣೆಗೆ ಯಾರಾದರೂ ಹೋಗಿ ವಾಸ ಮಾಡಬಹುದು. ಒಬ್ಬನ ತಟ್ಟೆಗೆ ಇನ್ನೊಬ್ಬ ಕೈಹಾಕುತ್ತಿದ್ದರೂ ಸಹಿಸಿಕೊಳ್ಳಬೇಕು.
ಇದರಂತೆ ನಮ್ಮೂರಿನ ರೈಲ್ವೇ ಕೆಲಸಗಳು ಕನ್ನಡಿಗರಿಗೆ ಸಿಗದಿದ್ದರೂ ಸರಿಯೇ, ಬಿಹಾರಿಗಳಿಗೆ ಸಿಕ್ಕರೂ ಸರಿಯೇ. ಯಾಕಂದರೆ ಅವರೂ ಭಾರತೀಯರು. ರೈಲ್ವೇ ಡಿ ದರ್ಜೆ ಕೆಲಸಗಳಿಗೆ ಹಿಂದಿಯಲ್ಲಿ ಅರ್ಜಿ ಬರೆಯಬೇಕಾದ್ದು ಕಡ್ಡಾಯವಾದರೂ, ಹಿಂದಿಯವನಿಗಿಂತ ಚೆನ್ನಾಗಿ ಹಿಂದಿ ಬರಲಾರದ ಕಾರಣದಿಂದಾಗಿ ಆ ಕೆಲಸಗಳು ನಮ್ಮ ಜನರ ಕೈತಪ್ಪಿದರೂ ಸರಿಯೇ. ಏಕಂದರೆ ಉತ್ತರದ ಹಿಂದಿಯವನೂ ಭಾರತೀಯನಲ್ಲವೆ. ಬೆಳಗಾವಿ ಕರ್ನಾಟಕದಲ್ಲಿದ್ದರೂ ಮಹಾರಾಷ್ಟ್ರದಲ್ಲಿದ್ದರೂ ಒಂದೇ. ಯಾಕಂದರೆ ಅದೂ ಭಾರತವೇ. ಕಾವೇರಿ ನೀರು ಕನ್ನಡದವರಿಗಿಲ್ಲದೆ ತಮಿಳುನಾಡಿಗೆ ಬಿಟ್ಟರೂ ಸರಿಯೇ. ಅದೂ ಭಾರತವೇ. ಆದ್ರೆ ತಮಾಷೆ ನೋಡಿ. ಇಂತಹ ಬೋಧನೆ ರಾಷ್ಟ್ರೀಯತೆಯ ಸಿದ್ಧಾಂತ ಪ್ರತಿಪಾದಕರಿಗೆ ನೆಲೆ ಕೊಟ್ಟ ಕನ್ನಡದವರ ಮೇಲೆ ಹೇರಲಾಗುತ್ತದೆಯೇ ಹೊರತು ಇವರನ್ನು ತಿರಸ್ಕರಿಸುತ್ತಾ ಬಂದಿರುವ ತಮಿಳರ ಮೇಲಲ್ಲ. ಇಡೀ ಭಾರತವನ್ನು ಭಾಷಾವಾರು ಪ್ರಾಂತ್ಯವಾಗಿಸಿರುವುದು ದೊಡ್ಡತಪ್ಪು ಎಂಬುದು ಇವರ ಅನಿಸಿಕೆ. ಪರಸ್ಪರರ ನಡುವಿನ ಭಿನ್ನತೆಗಳನ್ನೂ, ಭಿನ್ನಾಭಿಪ್ರಾಯಗಳನ್ನು ಬಚ್ಚಿಟ್ಟುಕೊಳ್ಳುತ್ತಾ ಸಾಂಸ್ಕೃತಿಕ ವಿನಿಮಯದ ಕ್ರಮಗಳನ್ನು ಮಾಡುವುದು ಭಾರತದ ಏಕತೆಯನ್ನು ಹೆಚ್ಚಿಸುತ್ತದೆ ಎನ್ನುತ್ತಿದ್ದಾರೆ ಇವರು.
ಸಮ ಗೌರವದ ಒಕ್ಕೂಟವೇ ರಾಷ್ಟ್ರೀಯ ಸೌಹಾರ್ದಕ್ಕೆ ದಾರಿ!
ಕರ್ನಾಟಕದಲ್ಲಿ ಕನ್ನಡಿಗರ ಸಾರ್ವಭೌಮತ್ವ, ತಮಿಳುನಾಡಲ್ಲಿ ತಮಿಳಿನ ಸಾರ್ವಭೌಮತ್ವ, ಭಾರತದ ಪ್ರತಿ ರಾಜ್ಯಕ್ಕೂ ಸಮಾನ ಗೌರವ, ಎಲ್ಲಾ ವಿವಾದಗಳ ಪರಿಹಾರಕ್ಕೂ ಸೂತ್ರಬದ್ಧವಾದ ನೀತಿಗಳು, ವಿವಾದಗಳನ್ನು ಬಗೆಹರಿಸಲು ಪಕ್ಷಪಾತವಿಲ್ಲದ-ಸಂಸದರ ಸಂಖ್ಯೆಯ ಆಧಾರದ ಮೇಲೆ ವಾಲಲಾರದ ನ್ಯಾಯತಕ್ಕಡಿ ವ್ಯವಸ್ಥೆ, ಒಬ್ಬರ ಬಗ್ಗೆ ಒಬ್ಬರಿಗೆ ಗೌರವ ಹೆಚ್ಚಿಸುವ ಹಾಗೂ ಒಬ್ಬರ ಮೇಲೊಬ್ಬರು ಅತಿಕ್ರಮಣ ನಡೆಸದ ಸಾಮಾಜಿಕ ವ್ಯವಸ್ಥೆಗಳು ಭಾರತವನ್ನು ಬಲಿಷ್ಠಗೊಳಿಸಲು, ಭಾರತದ ಏಕತೆಯನ್ನು ಕಾಪಾಡಲು ಇರುವ ಏಕೈಕ ಸಾಧನವೆನ್ನುವುದನ್ನು ಇವರ ಸಿದ್ಧಾಂತ ಮರೆತು ಬಿಟ್ಟಿದೆ ಗುರು! ಹುಸಿ ರಾಷ್ಟ್ರೀಯತೆಯ ಪ್ರತಿಪಾದಕರು ಇದನ್ನು ಅರಿತು ತಿದ್ದಿ ನಡೆಯೋದು ಒಳ್ಳೇದಲ್ವಾ ಗುರು? ಒಟ್ನಲ್ಲಿ ಎಲ್ಲ ಭಾರತೀಯರ ಹಿತ, ಸ್ವಾಭಿಮಾನ, ತಮ್ಮತನಗಳನ್ನು ಉಳಿಸಿಕೊಳ್ಳಲು, ಸಮಾನತೆಯ ಸಮಗೌರವದ ಒಕ್ಕೂಟ ವ್ಯವಸ್ಥೆಯನ್ನು ಪ್ರತಿಪಾದಿಸುವ ಸಿದ್ಧಾಂತಕ್ಕೆ ಮಣೆ ಹಾಕಲು ನಾಡಿನ ಜನತೆ ಮುಂದಾಗಬೇಕಿದೆ ಗುರು!

4 ಅನಿಸಿಕೆಗಳು:

ರಾಮ್ ನಾರಾಯಣ್ ಅಂತಾರೆ...

ಗುರು,
ನಿನ್ನೆ ಟಿ,ವಿಯಲ್ಲಿ ಕಾರ್ಯಕ್ರಮ ನೋಡ್ತಾ ಇದ್ದೆ. ನಮ್ಮ ಪ್ರಧಾನಮಂತ್ರಿ ರಾಜೀವ್ ಗಾಂಧಿಯವರ ಹತ್ಯೆಗೈದ LTTE ಪ್ರಭಾಕರನ್ ಅವರ ಪೋಟೊ ಹಿದಿದುಕೊಂಡು, ಅವರಿಗೆ ಜೈ ಕಾರ ಹಾಕುತ್ತಿದ್ದ ಸಾಕಷ್ಟು ತಮಿಳರನ್ನು ನೋಡಿದೆ. ಇದಕ್ಕಿಂತ ನಾಚಿಕೆಗೇಡಿನ ವಿಷಯ ಇದೆಯಾ? ಸಾರ್ವಭೌಮ ದೇಶದ ಹಿರಿಯ ನಾಯಕನನ್ನು ಬಲಿ ತೆಗೆದುಕೊಂಡ ಉಗ್ರಗಾಮಿ ಸಂಘಟನೆಯೊಂದರ ನಾಯಕನ ಫೋಟೊ ಹಿಡಿದುಕೊಂಡು ಬರೋ ವಿದ್ರೋಹಿ ಮನಸ್ಸಿನ ತಮಿಳರನ್ನು ಎರಡು ಕೈಯಿಂದ ನಮ್ಮ ಸರ್ಕಾರ ಅಪ್ಪಿಕೊಳ್ಳುತ್ತೆ, ಆದ್ರೆ ಕನ್ನಡಿಗರಿಗೆ ಸಮಾನ ಗೌರವಕ್ಕೆ ಆಗ್ರಹಿಸೋ ಕರವೇ ಕಾರ್ಯಕರ್ತರನ್ನು ದೇಶದ್ರೋಹಿಗಳು, ಭಯೋತ್ಪಾದಕರು ಅನ್ನೋ ರೀತಿಯಲ್ಲಿ ನಡೆಸಿಕೊಳ್ಳುತ್ತೆ.

ನೀನು ಹೇಳಿದ್ದು ಸರಿ ಗುರು, ಹುಸಿ ರಾಷ್ಟ್ರೀಯತೆಯ ಅನ್ವಯ ದೇಶದಲ್ಲಿ ಒಗ್ಗಟ್ಟು ಬರಲು ಕನ್ನಡಿಗ ತನ್ನ ಮನೆ, ಮಾರು, ನೆಲ, ಜಲ, ಹೆಂಡ್ತಿ, ಮಕ್ಕಳು ಹೀಗೆ ಎಲ್ಲರನ್ನೂ ಪರಭಾರೆ ಮಾಡಿ, ಕಾವೇರಿಗೋ, ಕೃಷ್ಣಾಗೋ ಹಾರಿ ಲೋಕ ತ್ಯಾಗ ಮಾಡಿ ದೊಡ್ಡ ಮನಸ್ಸಿನವನು ಅನ್ನಿಸಿಕೊಳ್ಳೋದು ನಿಜಕ್ಕೂ ಉತ್ತಮ.

Akshaya ಅಂತಾರೆ...

nijvaaglu gurugale. kongru ille alla ella kade hinge. i was in france couple of months ago and there is a settlement of srilankans in paris and you dont see french sign boards or anything in french. its all restaurants, appearals, and others with tamil boards. they dont get along anywhere.
ellaru compromise agidare. Ist influence itkondu yediyurappa ge innu kaveri issue, hogenakal issue na solve madsakke agilla.

chikkodi chinnaswamy ಅಂತಾರೆ...

daari yavudayya vaikunTakke? idu torstidaare ashte.

kannada songs ಅಂತಾರೆ...

vichitra buddi (?) jeevigalu :(

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails