ಸಂಸ್ಕೃತ ವಿವಿ : ಬೇಕೆಂದವರಿಗೊಂದು ಪ್ರತ್ಯುತ್ತರ

ಕರ್ನಾಟಕ ರಾಜ್ಯ ಸರ್ಕಾರವು ಸಂಸ್ಕೃತ ವೇದ ವಿಶ್ವವಿದ್ಯಾಲಯವೊಂದನ್ನು ಶುರುಮಾಡಲು ಮುಂದಾಗಿದೆ. ಇದು ಬೇಕೇ ಬೇಡವೇ ಎಂಬ ಬಗ್ಗೆ ವಿಜಯಕರ್ನಾಟಕ ದಿನಪತ್ರಿಕೆಯು ಒಂದು ಸಂವಾದವನ್ನು ನಡೆಸಿತು. ಮೈಸೂರಿನ ರೀಜನಲ್ ಕಾಲೇಜ್ ಆಫ್ ಎಜುಕೇಷನ್ ನಲ್ಲಿ ಇಂಗ್ಲೀಷ್ ಪ್ರೊಫೆಸರ್ ಆಗಿರುವ ಪ್ರೊ. ಎನ್.ಎಸ್ ರಘುನಾಥ್ ಅವರು ಈ ಬಗ್ಗೆ ಮಂಡಿಸಿದ್ದ ಅಪ್ರಕಟಿತ ಬರಹವೊಂದನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ. ಶ್ರೀಯುತರು NCERTನಲ್ಲಿ ಮೂವತ್ತು ವರ್ಷ ಸೇವೆ ಸಲ್ಲಿಸಿರುವ ಹಿರಿಯ ಕಲಿಕೆಯರಿಗರು. ಈ ಬರಹವನ್ನು ವಿಜಯಕರ್ನಾಟಕಕ್ಕೆ ಕಳಿಸಿದ್ದರೂ ಪ್ರಕಟ ಮಾಡುವ ದೊಡ್ಡಮನಸ್ಸನ್ನು ಆ ಪತ್ರಿಕೆಯು ಮಾಡಿಲ್ಲವೆಂಬುದನ್ನು ತಿಳಿಸಲು ಕೂಡ ಶ್ರೀಯುತರು ಇಷ್ಟಪಡುತ್ತಾರೆ. ಈ ಬರಹದಲ್ಲಿರುವ ಅಭಿಪ್ರಾಯಗಳು ಪ್ರೊ. ರಘುನಾಥ್ ಅವರದು. ಅವರನ್ನು ಸಂಪರ್ಕ ಮಾಡಬೇಕಾದರೆ ಅವರಿಗೆ ಮಿಂಚೆ ಬರೆಯಿರಿ. -- ಸಂಪಾದಕ, ಏನ್ ಗುರು

"ಕನ್ನಡ ಭಾಷೆಯ ಅಭಿವೃದ್ಧಿಗೆ ಸಂಸ್ಕೃತ ವಿವಿ ಪೂರಕವಾಗಲಿ" (ಡಾ ಎಸ್ ಎಲ್ ಭೈರಪ್ಪ, ವಿಕ 10.08.2009) ಭೈರಪ್ಪನವರ ಲೇಖನವು ತನ್ನ ತಲೆಬರಹ ಹೇಳುವಂತೆ ಕನ್ನಡ ಭಾಷೆಯ ಬೆಳವಣಿಗೆಗೆ ಏನಾದರೂ ಆಗುವುದಾದರೆ ಅದು ಆಗಬಾರದು ಎಂದು ಯಾರೂ ಹೇಳುವುದಿಲ್ಲ, ಹೇಳಲು ಸಾಧ್ಯವಿಲ್ಲ. ಆದರೆ ಅದು ಸಂಸ್ಕೃತದ ಮೂಲಕ ಹೇಗೆ ಆಗುತ್ತದೆ ಎಂದು ಭೈರಪ್ಪನವರು ತಮ್ಮ ಲೇಖನದಲ್ಲಿ ಎಲ್ಲೂ ಹೇಳುವುದಿಲ್ಲ. ಅದನ್ನು ಸಮರ್ಥಿಸಿಕೊಳ್ಳಲು ಅವರ ಬರವಣಿಗೆಗೆ ಸಾಧ್ಯವಾಗಿಲ್ಲ. ಸಂಸ್ಕೃತ ವೇದ ವಿಶ್ವ ವಿದ್ಯಾಲಯ ಏಕೆ ಆರಂಭಿಸಬೇಕು ಎನ್ನುವುದಕ್ಕೆ ಅವರ ಲೇಖನದಲ್ಲಿ ಎಲ್ಲೂ ತಾರ್ಕಿಕ ಅಥವಾ ವೈಜ್ಞಾನಿಕ ಸಮರ್ಥನೆ ಇಲ್ಲ. ಹಾಗೆ ನೋಡಿದರೆ ವಿವಿಯನ್ನು ಸ್ಥಾಪಿಸಲು ಅವರ ಲೇಖನದಲ್ಲಿ ಒಂದು ವಾದವೇ ಇಲ್ಲ. ಆದರೂ ಅವರು ಹೇಳುತ್ತಿರುವ ಕೆಲವು ಅಂಶಗಳನ್ನು ಇಲ್ಲಿ ಚರ್ಚೆ ಮಾಡುತ್ತೇನೆ. ಸಂಸ್ಕೃತ ವಿವಿ ಸ್ಥಾಪನೆಯ ಬಗ್ಗೆ
“ಎಷ್ಟೋ ಕನ್ನಡದ ತೂಕವುಳ್ಳ ವಿದ್ವಾಂಸರು ಮತ್ತು ಸಾಹಿತಿಗಳು ಮೌನವಾಗಿದ್ದಾರೆ.”
ಆದುದರಿಂದ “ಮೌನಂ ಸಮ್ಮತಿ ಲಕ್ಷಣಂ” ಎಂದಿದ್ದಾರೆ. ಇದು ಗಂಭೀರವಾದ ಹೇಳಿಕೆ. ಯಾರೀ ತೂಕದವರು? ಹಾಗಾದರೆ ತೂಕವಿಲ್ಲದವರು ಯಾರು? ಹೆಸರು ಹೇಳಲು ಭೈರಪ್ಪನವರು ಏಕೆ ಹಿಂಜರಿದಿದ್ದಾರೆ? ಭೈರಪ್ಪನವರೂ ಸಹ ಭ್ರಷ್ಟತೆಯ ಬಗ್ಗೆ ಮೌನವಾಗಿದ್ದಾರೆ. ಗಣಿಗಳು ಲೂಟಿಯಾಗುತ್ತಿರುವ ಬಗ್ಗೆ ಮೌನವಾಗಿಯೆ ಇದ್ದಾರೆ. ಇದರ ಅರ್ಥ “ಮೌನಂ ಸಮ್ಮತಿ ಲಕ್ಷಣಂ” ಎಂದು ಗ್ರಹಿಸಬಹುದೆ? ಇಂಥ ತುಕ್ಕು ಹಿಡಿದ ಕ್ಲೀಶೆ ತುಂಬಿದ ಭಾಷೆಯಲ್ಲಿ ಬರೆದಿರುವ ಬಾಲಿಶ ಹೇಳಿಕೆಗಳು ಲೇಖನದಲ್ಲಿ ಬೇಕಾದಷ್ಟು ಇವೆ. ಇವರ ಮತ್ತೊಂದು ಹೇಳಿಕೆ: “ಸಂಸ್ಕೃತ ವ್ಯಾಕರಣದ ಹಿನ್ನೆಲೆ ಇಲ್ಲದೆ ಭಾರತದ ಭಾಷಾ ಶಾಸ್ತ್ರದ ಅಧ್ಯಯನ ಸಾಧ್ಯವೆ?” ಇದಕ್ಕೆ ಇವರು ಕೊಡುವ ಉದಾಹರಣೆ “ಕನ್ನಡದಲ್ಲಿ ಎಂಎ ಮಾಡಿದವರನ್ನು ಕನ್ನಡದ ಹೊಸ ಪತ್ರಕರ್ತರನ್ನು ನಾನು ಪರೀಕ್ಷಿಸಿದ್ದೇನೆ.” ಇವರಿಗೆ ಕನಿಷ್ಟ ಸರಿಯೋ, ಕನಿಷ್ಠ, ಪುಷ್ಟಿಯೋ, ಪುಷ್ಠಿಯೋ, ಸೀತೆ ರೋಧಿಸಿದಳು, ರೋದಿಸಿದಳು” ಇತ್ಯಾದಿಗಳು ಗೊತ್ತಿಲ್ಲ ಎನ್ನುವುದನ್ನು ಹೇಳುತ್ತಾರೆ. ಇದನ್ನು ನಿಜವಲ್ಲ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಸಂಸ್ಕೃತಕ್ಕೂ ಈ ಸಮಸ್ಯೆಗೂ ಸಂಬಂಧ ಕಲ್ಪಿಸುವುದು ತರ್ಕಬದ್ದವಲ್ಲ. ಸಂಸ್ಕೃತ ಎಂಎ ಮಾಡಿರುವ ಪದವೀಧರರು ಆ ಭಾಷೆಯಲ್ಲಿ ಮಾತನಾಡುವಾಗ ಅಥವಾ ಬರೆಯುವಾಗ ಮಾಡಬಹುದಾದ ತಪ್ಪುಗಳನ್ನು ಇವರು ಇದೇ ರೀತಿ ಗಮನಿಸಲಿಲ್ಲವೇಕೆ? ಹಾಗೆ ಅವರು ಮಾಡುವ ತಪ್ಪುಗಳನ್ನು ಸರಿಪಡಿಸಲು ಯಾವ ಭಾಷೆ ಕಲಿಯಬೇಕು? ಇಂತಹ ಸಮಸ್ಯೆಗಳನ್ನು ಸುಧಾರಿಸಲು ಎಂಎ ವಿದ್ಯಾರ್ಥಿಗಳಿಗೆ ಕಲಿಸುತ್ತಿರುವ ಪ್ರಾಧ್ಯಾಪಕರುಗಳು ಅನುಸರಿಸುತ್ತಿರುವ ಮೆತೆಡಾಲಜಿ, ಅವರೇ ಬೋಧನೆಯಲ್ಲಿ ಬಳಸುತ್ತಿರುವ ಭಾಷೆಯ ಬಗ್ಗೆ, ಅಂತಹವರನ್ನು ಪರಿಕ್ಷೆಯಲ್ಲಿ ಉತ್ತೀರ್ಣಗೊಳಿಸುತ್ತಿರುವ ಕಾರಣಗಳ ಬಗ್ಗೆ ವಿವಿಗಳು ಗಮನಿಸಬೇಕು. ಭೈರಪ್ಪನವರು ಹೇಳಿರುವ ವಿಷಯವನ್ನು ತಿದ್ದಬೇಕಾದರೆ ಎಂಎ ಪಠ್ಯಕ್ರಮವನ್ನು ಗಂಭೀರ ಚರ್ಚೆಗೆ ಒಳಪಡಿಸಬೇಕಾಗುತ್ತದೆ. ಅವಶ್ಯವೆನಿಸಿದರೆ ಪರೀಕ್ಷಾ ಕ್ರಮವನ್ನೂ ಸೇರಿಸಿ ಎಲ್ಲದರಲ್ಲೂ ಆಮೂಲಾಗ್ರ ಬದಲಾವಣೆ ತರಬೇಕಾಗುತ್ತದೆ. ಆದರೆ ಇದೆಲ್ಲ ಸಂಸ್ಕೃತ ಭಾಷೆ ಕಲಿತರೆ ಸರಿಹೋಗಿಬಿಡುತ್ತದೆ ಎನ್ನುವಷ್ಟು ಸರಳ ಮಾಡುವುದು ಅಂಧ ತತ್ವವಾದವಾಗುತ್ತದೆ. ಮತ್ತು ಒಂದು ಭಾಷೆಯ ಕಲಿಕೆಯನ್ನು ಅದರ ವ್ಯಾಕರಣವನ್ನು ಮತ್ತೊಂದು ಭಾಷೆಯ ಕಲಿಕೆಯಿಂದ ಸರಿಪಡಿಸಬೇಕು/ ಸರಿಪಡಿಸಬಹುದು ಎನ್ನುವ ವಾದ ಭಾಷಾವಿಜ್ಞಾನದ ಸಿದ್ಧಾಂತಗಳಲ್ಲಿ ಓದಿದ ನೆನೆಪು ನನಗಿಲ್ಲ.

ಭೈರಪ್ಪನವರು ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳ ಉದಾಹರಣೆ ತೆಗೆದುಕೊಂಡಿದ್ದಾರೆ. ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳನ್ನು ಐರೋಪ್ಯ ರಾಷ್ಟ್ರಗಳಲ್ಲಿ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ ಎಂದಿದ್ದಾರೆ. ಕಲಿಯಲಿ. ಭಾರತೀಯರು, ಯೂರೋಪಿಯನ್ನರು ಎಲ್ಲರು ಸಂಸ್ಕೃತವನ್ನೂ ಕಲಿಯಲಿ. ಯಾರೂ ಬೇಡವೆಂದಿಲ್ಲ. ಇಲ್ಲಿ ಸಂಸ್ಕೃತ ಕಲಿಯುವಿಕೆ ಮತ್ತು ವಿವಿಸ್ಥಾಪನೆಗಳ ಸ್ಥಾಪನೆಯ ನಡುವೆ ಗೊಂದಲ ಸೃಷ್ಟಿಸುವುದು ಬೇಡ. ಸಂಸ್ಕೃತ ಎಲ್ಲರೂ ಕಲಿಯಲಿ. ನಾನು ಅದನ್ನು ಬೆಂಬಲಿಸುತ್ತೇನೆ. ಆದರೆ ವಿವಿಯ ಸ್ಥಾಪನೆ ಬೇರೆ ಮಾತು. ಯೂರೋಪಿನಲ್ಲಿ ಎಲ್ಲೂ ಲ್ಯಾಟಿನ್ ವಿಶ್ವವಿದ್ಯಾಲಯ ಇದ್ದಂತೆ ಕಾಣುವುದಿಲ್ಲ. ಗ್ರೀಕ್ ಒಂದು ದೇಶದ ಜೀವಂತ ಭಾಷೆ. ಇಲ್ಲಿ ಮತ್ತೊಂದು ವಿಷಯವನ್ನು ಗಮನಿಸಬೇಕು. ಯೂರೋಪಿನಲ್ಲಿ ರೋಮನ್ ಸಾಮ್ರಾಜ್ಯ ಕುಸಿದು ಬಿದ್ದಾಗ, ಲ್ಯಾಟಿನ್ ಭಾಷೆ ಸ್ಯ್ಪಾನಿಷ್, ಇಟ್ಯಾಲಿಯನ್, ಫ್ರೆಂಚ್, ರುಮೇನಿಯನ್ ಮತ್ತು ಪೋರ್ಚುಗೀಸ್ ಭಾಷೆಗಳಾಗಿ ವಿಭಜನೆಯಾಯಿತು. ಅಂದರೆ ಅಸ್ತಿತ್ವದಲ್ಲಿದ್ದ ಈ ಭಾಷೆಗಳು ಪ್ರಮುಖ ಭಾಷೆಗಳಾಗಿ ಬೆಳೆದವು. ಈ ಭಾಷೆಗಳ ಜೊತೆ ಇಂಗ್ಲಿಷ್, ಜರ್ಮನ್ ಇತ್ಯಾದಿ ಭಾಷೆಗಳು ಸೇರಿದಂತೆ ಲ್ಯಾಟಿನ್ ವರ್ಣಮಾಲೆಯನ್ನು ಅಳವಡಿಸಿಕೊಂಡವು. ಕಾಲಕ್ರಮೇಣ ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳ ವ್ಯಾಕರಣವನ್ನೂ ಈ ಭಾಷೆಗಳು ತಮ್ಮ ಭಾಷೆಗಳ ವ್ಯಾಕರಣ ಬರೆಯಲು ಅಳವಡಿಸಿಕೊಂಡುಬಿಟ್ಟವು. ಆಗ ಭಾಷಾವಿಜ್ಞಾನ ಎನ್ನುವುದು ಮೊಳಕೆಯ ರೂಪದಲ್ಲೂ ಇರಲಿಲ್ಲ. ಆದರೆ 20ನೇ ಶತಮಾನದ ಮಧ್ಯ ಭಾಗದಲ್ಲಿ ಭಾಷಾವಿಜ್ಞಾನ ಚೆನ್ನಾಗಿಯೆ ಬೆಳೆಯಿತು. ಅಲ್ಲಿಂದ ನೋಮ್ ಚಾಮ್ಸ್‌ಕಿಯವರ ಬರಹಗಳಿಂದಾಗಿ ಭಾಷಾವಿಜ್ಞಾನದಲ್ಲಿ ಆಮೂಲಾಗ್ರ ಬದಲಾವಣೆ ಆಯಿತು. ಆಯಾ ಭಾಷೆಗಳಿಗೆ ಆಯಾ ಭಾಷೆಗಳನ್ನೇ ಆಧರಿಸಿ ವ್ಯಾಕರಣ ಬರೆಯುವ ಆವಶ್ಯಕತೆಯನ್ನು ವಿದ್ವಾಂಸರು ಕಂಡುಕೊಂಡರು. ಹದಿನೆಂಟನೇ ಶತಮಾನದಲ್ಲಿಯೆ ಪತ್ತೆಯಾಗಿದ್ದರೂ ಮತ್ತೊಂದು ಶತಮಾನದ ನಂತರ ಪಾಣಿನಿಯ ವ್ಯಾಕರಣ ಇವರಿಗೆ ಪ್ರಮುಖ ಮಾದರಿಯಾಯಿತು. ಈತನಷ್ಟು ಪರಿಪೂರ್ಣ ವೈಯ್ಯಾಕರಣಿ ವಿಶ್ವದಲ್ಲಿ ಮತ್ತೊಬ್ಬನಿಲ್ಲ ಎನ್ನುವುದು ಭಾರತಕ್ಕೆ ಹೆಮ್ಮೆಯ ವಿಷಯ. ಪಾಣಿನಿಯ ವ್ಯಾಕರಣ ಯಾವುದೇ ಸಿದ್ದಾಂತದ ಮೇಲೆ ರಚಿತವಾಗಿಲ್ಲ. ಅದು ಭಾಷೆ ಹೇಗೆ ವರ್ತಿಸುತ್ತದೆ ಎನ್ನುವುದರ ಸೂಕ್ಷ್ಮಾವಲೋಕನದ ಮೇಲೆ ರಚಿತವಾಗಿದೆ ಎನ್ನುವ ಅಂಶ ವಿಶ್ವ ಭಾಷಾವಿಜ್ಞಾನಿಗಳಿಗೆ ಕಣ್ಣು ತೆರೆಸುವ ಹೊಸ ಸಂಶೋಧನೆಗೆಯ ಸಾಧನವಾಯಿತು. ಇದನ್ನೇ ಅವರು ಅನುಸರಿಸಿದರು. ಫ್ಯ್ರಾಂಕ್ ಪಾಮರ್, ರಾಂಡಾಲ್ಫ್ ಕ್ವರ್ಕ್, ಡೇವಿಡ್ ಕ್ರಿಸ್ಟಲ್ ಇತ್ಯಾದಿಯವರು ಇದನ್ನು ಇಂಗ್ಲಿಷ್ ಭಾಷೆಯ ರಚನೆ ಮತ್ತು ಅದು ಬಳಕೆಯಾಗುತ್ತಿರುವ ಮತ್ತು ವರ್ತಿಸುವ ರೀತಿಗಳನ್ನು ವಿವರವಾಗಿ ಪರೀಕ್ಷಿಸುವುದರ ಮೂಲಕ ಹೊಸ ವ್ಯಾಕರಣವನ್ನು ರಚಿಸಿ ತೋರಿಸಿದರು. ವಿವರಣಾತ್ಮಕ (Descriptive) ವ್ಯಾಕರಣ ಅಸ್ತಿತ್ವಕ್ಕೆ ಬಂದಿತು. ವ್ಯಾಕರಣ ರಚಿಸಲು ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳು ಹೇಗೆ ವರ್ತಿಸುತ್ತವೆ ಎನ್ನುವುದು ಇವರಿಗೆ ಅಪ್ರಸ್ತುತವಾಯಿತು. ಇದರಿಂದಾಗಿ ಇಂಗ್ಲಿಷ್ ಭಾಷೆಯ ‘ಬೈಬಲ್’ ಎಂದೇ ಹೆಸರುವಾಸಿಯಾಗಿದ್ದ ಸಲಹಾತ್ಮಕ (ಪ್ರಿಸ್ಕ್ರಿಪ್ಟಿವ್) (prescriptive) ವೈಯ್ಯಾಕರಣಿಗಳಾದ ರೆನ್ ಅಂಡ್ ಮಾರ್ಟಿನ್ ನಿವೃತ್ತರಾಗಿ ಕಸದ ಬುಟ್ಟಿ ಸೇರಿದರು. ಹಾಗೆಯೇ ಕನ್ನಡ ಮತ್ತು ಸಂಸ್ಕೃತ ವ್ಯಾಕರಣಗಳನ್ನು ಬೇರೆ ಬೇರೆಯಾಗಿಯೇ ನೋಡಬೇಕು. ಒಂದು ವಿಧದಲ್ಲಿ ಪಾಣಿನಿಯೂ ಇದಕ್ಕೆ ಪರೋಕ್ಷವಾಗಿ ಕಾರಣಕರ್ತ ಎಂದರೆ ಉತ್ಪ್ರೇಕ್ಷೆಯಾಗಲಾರದು.

ಸಂಸ್ಕೃತ ಆಧಾರಿತ ಕನ್ನಡ ವ್ಯಾಕರಣಗಳನ್ನು ಈಗ ಯಾರು ಅನುಸರಿಸುತ್ತಿದ್ದಾರೆ? ತೀನಂಶ್ರೀ ಅವರ ‘ಕನ್ನಡ ವ್ಯಾಕರಣ’ ಈಗ ಯಾರು ಬಳಸುತ್ತಿದ್ದಾರೆ? ಡಿ ಎನ್ ಶಂಕರ ಭಟ್ ಅವರ ‘ಕನ್ನಡಕ್ಕೆ ಬೇಕು ಕನ್ನಡದ್ದೆ ವ್ಯಾಕರಣ’ ಬಂದಾಗ ಭೈರಪ್ಪನವರು ಏಕೆ ಇದನ್ನು ತಿರಸ್ಕರಿಸಬೇಕು ಎಂದು ಹೇಳಲಿಲ್ಲ? ನಮಗೆ ಗೊತ್ತಿರುವಂತೆ ಭಟ್ ಅವರು ಗಮನಿಸಬಹುದಾದಂಥ ಉತ್ತಮ ಭಾಷಾವಿಜ್ಞಾನಿಗಳು. ಆದುದರಿಂದ ಅವರು ಈ ರೀತಿ ವ್ಯಾಕರಣ ಬರೆಯಲು ಕಾರಣವೇನು ಎನ್ನುವುದನ್ನು ನೋಡಬೇಕು. ಸರಿ ಎನಿಸದಿದ್ದರೆ ಅವರು ಚರ್ಚಿಸುತ್ತಿರುವ ಭಾಷಾವಿಜ್ಞಾನದ ನೆಲೆಯಿಂದಲೇ ಅದನ್ನು ಏಕೆ ಸ್ವೀಕರಿಸಲು ಸಾಧ್ಯವಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಅದರ ಬದಲು ಭೈರಪ್ಪನವರು:
“ನಿಮ್ಮ ಸಂಸ್ಕೃತ ವ್ಯಾಕರಣ ನಿಯಮಗಳನ್ನು ನಾವು ಯಾಕೆ ಅನುಸರಿಸಬೇಕು? ನಮಗೆ ಇಷ್ಟ ಬಂದಂತೆ ನಾವು ಬಳಸುತ್ತೇವೆ; ಎಂಬ ಉಡಾಫೆಯನ್ನು ಎಷ್ಟೋ ಜನ ವೀರ ಕನ್ನಡ ಭಕ್ತರು ಹೊಡೆಯುತ್ತಾರೆ.”
ಎನ್ನುತ್ತಾರೆ. ಯಾಕೆ ಅನುಸರಿಸಬೇಕು ಎನ್ನುವುದನ್ನು ಮಾತ್ರ ಅವರ ಲೇಖನದಲ್ಲಿ ಎಲ್ಲಿಯೂ ಹೇಳಿಲ್ಲ. ಈ ವಾಕ್ಯದ ಭಾಷೆ ಮತ್ತು ಧ್ವನಿಗಳು, ಭೈರಪ್ಪನವರಂಥ ವಿದ್ವಾಂಸರ ಘನತೆಗೆ ತಕ್ಕುದಾದುದು ಎನಿಸುವುದಿಲ್ಲ. ಇದು ಪೂರ್ವಾಗ್ರಹ ಪೀಡಿತ ಸಿನಿಕತನದ ತೀರ್ಮಾನ ಎನಿಸುತ್ತದೆ. ಕಾದಂಬರಿಕಾರರು ಭಾಷಾವಿಜ್ಞಾನದ ಬಗ್ಗೆ ಬರೆಯುವಾಗ ಅದೊಂದು ವಿಶಾಲವಾಗಿ ಬೆಳೆದಿರುವ ವಿಷಯ ಎನ್ನುವುದನ್ನು ಗಮನದಲ್ಲಿಟ್ಟುಕೊಂಡರೆ ಒಳ್ಳೆಯದು. ಶಂಕರ ಭಟ್ ಅವರು ತಮ್ಮ ‘ಕನ್ನಡಕ್ಕೆ ಬೇಕು ಕನ್ನಡದ್ದೆ ವ್ಯಾಕರಣ’ ಕೃತಿಗೆ ಪೀಠಿಕೆ ಬರೆಯುತ್ತ:
ಸಂಸ್ಕೃತ ಮತ್ತು ಕನ್ನಡ ವ್ಯಾಕರಣಗಳ ನಡುವೆ ಎಂತಹ ವ್ಯತ್ಯಾಸಗಳೆಲ್ಲ ಇವೆ ಮತ್ತು ಈ ವ್ಯತ್ಯಾಸಗಳನ್ನು ಸರಿಯಾಗಿ ಗಮನಿಸದು ದರಿಂದಾಗಿ ಕನ್ನಡ ವಯ್ಯಾಕರಣಿಗಳು ಕನ್ನಡದ ವ್ಯಾಕರಣ ನಿಯಮಗಳನ್ನು ಸ್ಪಷ್ಟವಾಗಿ ತಿಳಿಸಿ ಹೇಳುವಲ್ಲಿ ಅಸಮರ್ಥರಾಗಿದ್ದಾರೆ ಎಂಬುದನ್ನು ನಿದರ್ಶನಗಳ ಮೂಲಕ ತೋರಿಸಿಕೊಡುವುದೇ ಈ ಪುಸ್ತಕದ ಮುಖ್ಯ ಉದ್ದೇಶ.” (ಪು 23)
ಎಂದು ಬರೆಯುತ್ತಾರೆ. (ಇದಕ್ಕೆ ಕರ್ನಾಟಕ ಸಾಹಿತ್ಯ ಅಕೆಡೆಮಿ ಬಹುಮಾನ ಬಂದಾಗ ನಾನೂ ಆ ಸಮಿತಿಯ ಸದಸ್ಯನಾಗಿ ಅದನ್ನು ಅನುಮೋದಿಸಿ ನಾನೆ ವಾದ ಮಂಡಿಸಿದ್ದೆ.) ಇವರು ಕೊಟ್ಟಿರುವ ನಿದರ್ಶನಗಳನ್ನು ಭೈರಪ್ಪನವರು ಈಗ, ಅಲ್ಲಗಳೆದು ತೋರಿಸಬೇಕಾಗುತ್ತದೆ. ಆದರೆ ಅವರ ಸುದೀರ್ಘ ಲೇಖನದಲ್ಲಿ ಸಿದ್ಧಾಂತ ಅಥವಾ/ ಮತ್ತು ತರ್ಕಗಳಿಗೆ ಸ್ಥಾನವಿಲ್ಲ. ಬರೆದಿರುವ ಕೇವಲ ಹೇಳಿಕೆಗಳು ಇವೆ. ಆದುದರಿಂದ ಕನ್ನಡದಲ್ಲಿ ಸಂಸ್ಕೃತ ಭಾಷೆಯನ್ನಾಧರಿಸಿ ಬರೆದ ವ್ಯಾಕರಣ ಹಳಸಿಹೋಗಿರುವುದರಲ್ಲಿ ಆಶ್ಚರ್ಯವಿಲ್ಲ. ಇದನ್ನು ಭೈರಪ್ಪನವರು ತಮ್ಮ ಲೇಖನವನ್ನು ಅಚ್ಚಿಗೆ ಕಳುಹಿಸುವುದಕ್ಕೆ ಮುಂಚೆ ಗಮನಿಸಬೇಕಿತ್ತು. ಯಾವುದೋ ಎರಡು ಭಾಷೆಗಳನ್ನು ಏಕರೀತಿಯಲ್ಲಿ ನೋಡುವುದು ಮತ್ತು ಶಾಸ್ತ್ರೀಯ ಭಾಷೆ ಎಂದು ಸಂಸ್ಕೃತವನ್ನು ಆರಾಧಿಸುವುದು ಸನಾತನ ಪದ್ಧತಿ. ಆದರೆ ಭೈರಪ್ಪನವರ ಲೇಖನದಲ್ಲಿ ಅದೇ ಪ್ರಮುಖ ಅಂಶ. ವಿವಿಯ ಪರ ಬರೆಯುತ್ತಿರುವವರಲ್ಲಿ ಅನೇಕರು ಸಂಸ್ಕೃತದ ಸನಾತನ ಚರಿತ್ರೆಯನ್ನು ವೈಭವೀಕರಿಸುವದೇ ವಿವಿಯನ್ನು ಸ್ಥಾಪಿಸಲು ಪ್ರಮುಖ ಕಾರಣವಾಗಿಟ್ಟುಕೊಂಡು ಬರೆದಿದ್ದಾರೆ. ಒಂದು ಭಾಷೆಯ ಪ್ರಭಾವವನ್ನು ಮತ್ತೊಂದು ಭಾಷೆಯ ಮೇಲೆ ಗುರುತಿಸಬಹುದು. ಸಂಸ್ಕೃತ ಭಾಷೆಯ ಪ್ರಭಾವ ಭಾರತೀಯ ಭಾಷೆಗಳ ಮೇಲೆ ಇದೆ ಎನ್ನುವುದನ್ನು ನಿರಾಕರಿಸಲು ಸಾಧ್ಯವಿಲ್ಲ. ಆದರೆ ಶತಮಾನಗಳ ಬಳಕೆಯಿಂದ ಈ ಭಾಷೆಗಳು ತಮ್ಮದೇ ಆದ ಅಸ್ತಿತ್ವವನ್ನು ಪಡೆದುಕೊಂಡಿವೆ. ಅಂದರೆ ಎಲ್ಲ ಭಾಷೆಗಳನ್ನೂ ಅಯಾ ಭಾಷೆಗಳ ರಚನೆ, ಶಬ್ದವಿನ್ಯಾಸ, ಪದವಿನ್ಯಾಸ, ಪದಗಳ ಜೋಡಣೆ, ಅರ್ಥ ಮತ್ತು ಅವುಗಳು ಬಳಕೆಯಾಗುವ ರೀತಿ, ಇತ್ಯಾದಿಗಳನ್ನು ಗಮನಿಸಿಯೆ ವ್ಯಾಕರಣ ರಚಿಸಬೇಕಾಗುತ್ತದೆ; ರಚಿಸಲಾಗಿದೆ. ಉದಾಹರಣೆಗೆ ಈಗ ಇಂಗ್ಲಿಷಿನಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಫ್ಯ್ರಾಂಕ್ ಪಾಮರ್, ರಾಂಡಾಲ್ಫ್ ಕ್ವರ್ಕ್ ವ್ಯಾಕರಣಗಳನ್ನು ನೋಡಬಹುದು. ಈ ವಿಚಾರದಲ್ಲಿ ಅವರು ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳಿಂದ ದೂರ ಸರಿದಿದ್ದಾರೆ. ಇದರ ಜೊತೆಗೆ ಸಂಸ್ಕೃತದಿಂದ ದಿನದಿಂದ ದಿನಕೆ ದೂರ ಹೋಗುತ್ತಿರುವ ತಮಿಳು ಭಾಷೆಯ ಬಗ್ಗೆ ಭೈರಪ್ಪನವರು ಚಕಾರವೆತ್ತದಿರುವುದು ಗಮನಾರ್ಹ.
“ಸಂಸ್ಕ್ರೃತವೆಂದರೆ ವೇದ, ವೇದವೆಂದರೆ ನಾವು ವಿರೋಧಿಸಲು ಮಾತ್ರ ಅರ್ಹವಾದದ್ದು, ಎಂಬ ಮನಃಸ್ಥಿತಿಯನ್ನು ಒಂದು ಗುಂಪು ಬಂಡಾಯದ ಕಾಲದಿಂದ ಕನ್ನಡದಲ್ಲಿ ಗದ್ದಲ ಮಾಡುತ್ತಾ ಸೆಮಿನಾರುಗಳಲ್ಲಿ ಭಾಷಣಗಳಲ್ಲಿ ಅನಂತರ ಕ್ರಮೇಣವಾಗಿ ಶಾಲಾ ಕಾಲೇಜುಗಳ ಪ್ರವಚನಗಳಲ್ಲೂ ಸೇರಿಕೊಂಡು ವಿಷಬೀಜವನ್ನು ಬಿತ್ತುತ್ತಾ ಬೆಳೆದಿದೆ.”
ನಮ್ಮ ನಾಗರಿಕತೆಯಲ್ಲಿ “ವಿಷಬೀಜವನ್ನು ಬಿತ್ತುತ್ತಾ” ಸಮುದಾಯಗಳ ಬದುಕನ್ನೆ ಕತ್ತು ಹಿಸುಕಿ ಕೊಂದವರಾರು ಎನ್ನುವುದನ್ನು ಚರಿತ್ರೆಯ ಕಡೆ ಮುಖ ಮಾಡಿ ನೋಡಿದರೆ ಕೆಲವು ಕ್ರೂರವಾದ ಮತ್ತು ಅಮಾನುಷ ಎನಿಸುವ ಸತ್ಯಗಳನ್ನು ಎದುರಿಸಬೇಕಾಗಬಹುದು. ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳು ಚರಿತ್ರೆಯಲ್ಲಿ ಎಂದೂ ದೇವ ಭಾಷೆಗಳೆಂದು ಹಣೆಪಟ್ಟಿ ಕಟ್ಟಿಸಿಕೊಂಡವಲ್ಲ; ಅವುಗಳ ಕಲಿಕೆ ಗುರುಕುಲಾಶ್ರಮಗಳ ಪ್ರವೇಶಕ್ಕೆ ಅರ್ಹರಾದ ಸಮುದಾಯಕ್ಕೆ ಸೇರಿದ ಜನಗಳಿಗೆ ಮಾತ್ರ ಮೀಸಲಾಗಿರಲಿಲ್ಲ. ಬೇರೆಯವರು ಅವನ್ನು ಕಲಿತರೆ ಭಾಷೆಯೇ ಅಪವಿತ್ರವಾಗಿಬಿಡುತ್ತದೆ ಎನ್ನುವ ಅವಿದ್ಯಾವಂತ ಮೂಢನಂಬಿಕೆಯನ್ನು ರೋಮ್ ಮತ್ತು ಗ್ರೀಸ್ ದೇಶದವರು ಎಂದೂ ಎಲ್ಲಿಯೂ ಬಿತ್ತಲಿಲ್ಲ. ಹಿಂದುಳಿದ, ಆಗ ‘ಅಸ್ಪೃಶ್ಯ’ರೆಂದು ಕರೆಯಲ್ಪಟ್ಟ ದಲಿತರು ಆ ಭಾಷೆಗಳಲ್ಲಿರುವ ಸಾಹಿತ್ಯವನ್ನು ಓದುವುದನ್ನು ಕೇಳಿದರೂ ಶಿಕ್ಷಿಸಬೇಕು, ಅವರ ಕಿವಿಯಲ್ಲಿ ಕಾದ ಸೀಸವನ್ನು ಹುಯ್ಯಬೇಕು ಎಂದು ಬರೆದು ಯಾರೂ ಸ್ಮೃತಿಗಳನ್ನು ಸೃಷ್ಟಿಸಲಿಲ್ಲ. ಸಂಸ್ಕೃತವನ್ನು ಈ ರೀತಿಯ ಹಿಂಸೆಗೆ ಒಳಪಡಿಸಿ, ಅದನ್ನು ಒಂದು ಸಮುದಾಯದ ಗೃಹ ಬಂಧನದಲ್ಲಿಟ್ಟು, ಉಸಿರು ಕಟ್ಟಿಸಿ ಸಾಂಸ್ಕೃತಿಕವಾಗಿ ಜೀವ ಹಿಂಡಿ ವಿಷಹಾಕಿದವರು ಇವರಲ್ಲವೆ? ಅತ್ಯಂತ ಸಮೃದ್ಧವಾಗಿ ಬೆಳೆದಿದ್ದ ಆ ಭಾಷೆಗೆ “ಮೃತ ಭಾಷೆ” ಎನ್ನುವ ಹಣೆಪಟ್ಟಿ ಬರಲು ಕಾರಣರು ಇವರೆ ಅಲ್ಲವೆ!? ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳಂತೆ ದೇಶದ ಎಲ್ಲ ಪ್ರಜೆಗಳಿಗೂ ಇದನ್ನು ಕಲಿಸಿದ್ದರೆ ಬಹುಶಃ ಸಂಸ್ಕೃತ ಈ ದಿನ ಭಾರತದ ದೇಶ ಭಾಷೆಯಾಗಿರಬಹುದಿತ್ತು ಎಂದರೆ ತಪ್ಪಾಗಲಾರದು. ಇದನ್ನು ತಪ್ಪಿಸಿ ಅದಕ್ಕೆ ಪಾವಿತ್ರತೆಯ ವಿಷ ಹಾಕಿ ಕೊಂದವರಾರು? ಈಗ ಅದಕ್ಕೆ ಒಂದು ವಿವಿಯನ್ನು ಸ್ಥಾಪಿಸಲು ಹೊರಟರೆ ಅದಕ್ಕೆ ಜನಬೆಂಬಲ ನಿರೀಕ್ಷೆ ಮಾಡಲು ಹೇಗೆ ಸಾಧ್ಯ? ಹೀಗೆ ಸಾವಿರಾರು ವರ್ಷಗಳ ಕಾಲ ವಿದ್ಯೆಯಿಂದ ವಂಚಿತರಾಗಿ ಅವಮರ್ಯಾದೆಯಲ್ಲಿ ಬೆಂದು ಈಗ ಕೇವಲ ಕೆಲವು ದಶಕಗಳಿಂದ ವಿದ್ಯಾಭ್ಯಾಸ ಪಡೆಯುತ್ತಿರುವ ಸಮುದಾಯಗಳಿಗೆ ಸಂಸ್ಕೃತ ವೇದ ವಿಶ್ವ ವಿದ್ಯಾಲಯ ಎಂದಾಗ ಅನುಮಾನ ಹುಟ್ಟುವುದು ಸಹಜವೆ.

ಈಗ ನಮ್ಮ ವಿವಿಗಳಲ್ಲಿ ಸಂಸ್ಕೃತದ ವಿಭಾಗಗಳಿವೆ. ಅದಕ್ಕೆ ಎಷ್ಟುಜನ ನೊಂದಾಯಿಸಿಕೊಳ್ಳುತ್ತಾರೆ ಎನ್ನುವುದನ್ನು ಗಮನಿಸಿ. ಇದಕ್ಕೆ ಭೈರಪ್ಪನವರು ಹೇಳುವುದು:
“ಹೈಸ್ಕೂಲಿನಲ್ಲಿ ಸಂಸ್ಕೃತವನ್ನು ಬತ್ತಿಸಿ, ಕಾಲೇಜಿನಲ್ಲಿ ಬೆಳೆಯಗೊಡದೆ, ವಿಶ್ವವಿದ್ಯಾಲಯಗಳ ವಿಭಾಗಕ್ಕೆ ವಿದ್ಯಾರ್ಥಿಗಳೇ ಬರದಂತೆ ಮಾಡಿ ಇರುವುದಕ್ಕೇ ವಿದ್ಯಾರ್ಥಿಗಳಿಲ್ಲವೆಂಬ ಕೂಗುಹಾಕುವ ಹುನ್ನಾರಕ್ಕೆ ಏನನ್ನಬೇಕು?”
ಕೊಲೆ, ಭ್ರಷ್ಟಾಚಾರದಲ್ಲಿ ಸಿಕ್ಕಿಕೊಂಡ ರಾಜಕಾರಣಿಗಳು “ಇದು ವಿರೋಧ ಪಕ್ಷದವರ ರಾಜಕೀಯ ಹುನ್ನಾರ” ಎಂದು ಬೊಬ್ಬೆ ಹಾಕುತ್ತಾರೆ. ಈ ರೀತಿ ವಾಕ್ಯಗಳಿಗೆ ಏನನ್ನಬೇಕು? ರಾಜಕಾರಣಿಗಳಿಗಿಂತ ಭೈರಪ್ಪನವರ ಭಾಷೆ ಭಿನ್ನವೇನಲ್ಲ. ಮೈಸೂರು ವಿವಿಯ ಸಂಸ್ಕೃತ ವಿಭಾಗದಲ್ಲಿ ಹಿಂದಿನ 5 ವರ್ಷಗಳ ನೊಂದಣಿಯನ್ನು ನೋಡಿದರೆ ಯಾವ ವರ್ಷವೂ 5ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿಲ್ಲ. ಕೆಲವರ್ಷ 2-3 ವಿದ್ಯಾರ್ಥಿಗಳು ಸೇರಿರುವುದುಂಟು. ಬೇರೆ ವಿವಿಗಳಲ್ಲೂ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ. ಸಂಸ್ಕೃತವನ್ನು ಓದಬೇಡಿ ಎಂದು ವಿದ್ಯಾರ್ಥಿಗಳನ್ನು ತಡೆದಿರುವವರಾರು ಎಂಬುದನ್ನು ಭೈರಪ್ಪನವರು ತಿಳಿಸಬೇಕು. ಆಧಾರವಿಲ್ಲದೆ ಆಪಾದನೆ ಹೊರಿಸುವುದು ವಿದ್ವಾಂಸರಿಗೆ ತಕ್ಕುದಲ್ಲ. ಇರುವ ಒಂದು ವಿಭಾಗಕ್ಕೆ 5 ಜನಕ್ಕಿಂತ ಹೆಚ್ಚು ಬರದಿದ್ದಾಗ ಒಂದು ವಿಶ್ವವಿದ್ಯಾಲಯವನ್ನೆ ಆರಂಭಿಸುವುದು ಎಷ್ಟು ಸೂಕ್ತ? ಇಂಗ್ಲಿಷ್ ದಬ್ಬಾಳಿಕೆಯಿಂದ ಕನ್ನಡ ಈಗ ಮೂಲೆಗುಂಪಾಗುತ್ತಿದೆ. ಆದರೆ ಅದನ್ನು ಇಂಗ್ಲಿಷ್ ಬಲ್ಲವರು ಕನ್ನಡ ಕಲಿಯಬೇಡಿ ಎಂದು ತಡೆಯುವ ಹುನ್ನಾರ ಮಾಡುತ್ತಿದ್ದಾರೆ ಎನ್ನಲಾಗುವುದಿಲ್ಲ. ಜಾಗತಿಕ ಮಟ್ಟದಲ್ಲಿ ಬದಲಾಗುತ್ತಿರುವ ಆರ್ಥಿಕ ಬದಲಾವಣೆಗಳು, ಸಂವಹನ, ತಂತ್ರಜ್ಞಾನದಲ್ಲಿ ಆಗುತ್ತಿರುವ ತೀವ್ರ ಬದಲಾವಣೆಗಳು ವಿವಿಧ ದೇಶಗಳಲ್ಲಿ ಎಲ್ಲ ಸ್ಥಳೀಯ ಭಾಷೆಗಳನ್ನೂ ತಿನ್ನುತ್ತಿವೆ. ಕನ್ನಡ, ತಮಿಳು, ತೆಲುಗು, ಮಲೆಯಾಳಂ ಇತ್ಯಾದಿ ಭಾಷೆಗಳಿಗೆ ಇದನ್ನು ಎದುರಿಸುವ ಆಂತರಿಕ ಶಕ್ತಿ ಇದೆಯೆ? ಈ ಜೀವಂತ ಭಾಷೆಗಳನ್ನು ಆಡುತ್ತಿರುವ ಕೋಟಿಗಟ್ಟಲೆ ಜನರಿಗೆ ಆ ಶಕ್ತಿ ಇದೆಯೆ? ಎನ್ನುವುದನ್ನು ನಾವು ಪರಿಗಣಿಸಬೇಕು. ಜನರೇ ಅದನ್ನು ತೀರ್ಮಾನ ಮಾಡಬೇಕು. ಸಂಸ್ಕೃತ ಇವನ್ನು ರಕ್ಷಿಸುವುದಿಲ್ಲ.

ಕರ್ನಾಟಕದಲ್ಲಿ ಸಂಸ್ಕೃತ ವೇದ ವಿಶ್ವ ವಿದ್ಯಾಲಯ ತೆರೆಯಬೇಕೆ ಬೇಡವೆ ಎನ್ನುವುದರ ಬಗ್ಗೆ ಕರ್ನಾಟಕದಾದ್ಯಂತ ಈಗ ವಾದವಿವಾದಗಳು ಎದ್ದಿವೆ. ಸರ್ಕಾರವಂತೂ ಈಗಾಗಲೇ ಒಬ್ಬ ಆಡಳಿತಾಧಿಕಾರಿಯನ್ನು ನೇಮಿಸಿ ವಿವಿಯನ್ನು ಆರಂಭಿಸಲು ಪೂರ್ವಭಾವಿ ಸಿದ್ಧತೆಗಳನ್ನು ಆರಂಭಿಸಿದೆ. ಇದರ ಹಿಂದಿನ ಕಾರಣವಾದಿ ಚಿಂತನೆ ಏನು ಎನ್ನುವುದು ಕರ್ನಾಟಕದ ಜನತೆಗೆ, ಚಿಂತಕರಿಗೆ ಸ್ಪಷ್ಟವಾಗಿಲ್ಲ. ಇದರ ಪರವಾಗಿ ವಾದಮಾಡುವ ಚಿಂತಕರು ಸಂಸ್ಕೃತ ಭಾಷೆಯ ಪುರಾತನತೆಯನ್ನು ಮುಂದಿಟ್ಟುಕೊಂಡು ಅದನ್ನು ವೈಭವೀಕರಿಸಿ ಭಾವುಕತನದಿಂದ ವಾದವನ್ನು ಮುಂದಿಟ್ಟಿದ್ದಾರೆ. ಕೆಲವನ್ನು ಇಲ್ಲಿ ಕೊಟ್ಟಿದ್ದೇನೆ:
" ‘ಇನ್ನು ಮುಂದೆ ಸಂಸ್ಕೃತದ ಎಲ್ಲ ಸತ್ವವನ್ನೂ ಕನ್ನಡಕ್ಕೆ ಕಂಡುಕೊಳ್ಳಬೇಕು. ಆದ್ದರಿಂದ ಸಂಸ್ಕೃತದ ಸಾರವನ್ನೆಲ್ಲ ಕನ್ನಡದ ಮೂಲಕ ಪ್ರಚಾರ ಮಾಡಬೇಕು. ಸಾಹಿತ್ಯ ಭಾಗ, ಶಾಸ್ತ್ರಭಾಗ - ಈ ಎರಡೂ ಕ್ಷೇತ್ರಗಳ ಉನ್ನತ ಗ್ರಂಥಗಳೆಲ್ಲವನ್ನೂ ಕನ್ನಡಕ್ಕೆ ತಂದು ಅವುಗಳ ಉಪಯೋಗವನ್ನು ಪಡೆಯಬೇಕು. ಕನ್ನಡ ಮಾತಿನಲ್ಲಿ ಸಂಸ್ಕೃತ ಹಿರಿಮೆಯನ್ನು ಸಾಧಿಸಬೇಕು.’ ಈ ಅಭಿಪ್ರಾಯವು ನಿಜವಾಗಿ ಅನುವಾದ ಕಾರ್ಯ ಸಾಹಿತ್ಯ ಭಾಗದಲ್ಲಿ ಸ್ವಲ್ಪ ನಡೆಯಬೇಕು. ಆದರೆ ಶಾಸ್ತ್ರ ಭಾಗದಲ್ಲಿ ಏನೇನೂ ಆಗಲಿಲ್ಲ."
ಎನ್ನುವುದು ಪ್ರೊ ಜಿ ವೆಂಕಟಸುಬ್ಬಯ್ಯನವರ ಅಭಿಪ್ರಾಯ. (ವಿಕ, 17.08.2009) ಆದರೆ ಈ ಶಾಸ್ತ್ರಭಾಗದಲ್ಲಿ ಸಮಕಾಲೀನ ಕನ್ನಡ ಜನತೆಗೆ ಆಧುನಿಕ ಪ್ರಜಾಪ್ರಭುತ್ವದ ಮೌಲ್ಯಗಳು, ಭಾರತದ ಸಂವಿಧಾನದ ಮೌಲ್ಯಗಳು ಹೇಗೆ ಗಟ್ಟಿಯಾಗಲು ಸಾಧ್ಯ ಎನ್ನುವುದನ್ನು ಹೇಳುವುದಿಲ್ಲ. ನಾವಿರುವುದು ವೇದಗಳು ಮತ್ತು ಸ್ಮೃತಿಗಳು ಬರೆದ ಊಳಿಗಮಾನ್ಯ ಪದ್ಧತಿಯ ಕಾಲವಲ್ಲ. ಆಗ ಶೋಷಣೆಯೆ ನಮ್ಮ ಸಂಸ್ಕೃತಿಯಾಗಿತ್ತು.
“ಜ್ಞಾನಾರ್ಜನೆ ಪ್ರಸ್ತುತ ಕಾಲದ ಲಾಭ ದೃಷ್ಟಿಯಿಂದ ಮಾತ್ರವೇ ಮಾಡುವಂಥದಲ್ಲ. ಸಂಸ್ಕೃತದಂಥ ವಿಶ್ವಮರ್ಯಾದಿತ ಪ್ರಾಚೀನ ಭಾಷೆ ಮತ್ತು ಅದರ ಮೂಲಕ ಸೃಷ್ಟಿಯಾದ ಜ್ಞಾನ ಈ ದೇಶದ ಅಮೂಲ್ಯ ಆಸ್ತಿ.”
ಎನ್ನುವ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟರು (ವಿಕ, 25.08.2009) ಈ ಸ್ಮೃತಿಗಳು ಸೃಷ್ಟಿಸಿದ ಕ್ರೂರ ಅಮಾನವೀಯ ಭಯಾನಕ “ಶಾಸ್ತ್ರಭಾಗ”ದ ವ್ಯವಸ್ಥೆಯನ್ನು ನಮ್ಮ “ಆಸ್ತಿ” ಎಂದು 21ನೇ ಶತಮಾನದಲ್ಲಿ ಹೇಳುವುದಾದರೆ, ವಿಶ್ವವಿದ್ಯಾಲಯವನ್ನು ಇವರು ಏತಕ್ಕಾಗಿ ಬಯಸುತ್ತಾರೆ ಎನ್ನುವುದು ಸ್ಪಷ್ಟವಾಗುತ್ತದೆ. ಇದನ್ನು ಮುಂದೆ ಮತ್ತೆ ಚರ್ಚಿಸುತ್ತೇನೆ.

ಈ “ಅಮೂಲ್ಯ ಆಸ್ತಿ”ಯನ್ನು ಓದಿದವರಿಗೆ ಭಾರತದ 90% ಜನಜೀವನದ ಚಿತ್ರ ಸಿಗುವುದೇ ಇಲ್ಲ. ಬೆಸ್ತರು, ಗಾಣಿಗರು, ಕುಂಚಿಟಿಗರು, ಕುರುಬರು, ಬುಡುಬುಡುಕೆಯವರು, ಹೊಲೆಯ, ಮಾದಿಗ, ಚಂಡಾಲ ಎನಿಸಿಕೊಂಡ ದಲಿತರು ಇತ್ಯಾದಿ ಜನರ ಬದುಕಿನ ದುರಂತದ ಚಿತ್ರ ಯಾವ ಸಂಸ್ಕೃತ ಕೃತಿಯಲ್ಲಿ ರೂಪಿತವಾಗಿದೆ ಎನ್ನುವುದನ್ನು ಭಟ್ಟರು ತೋರಿಸ ಬಲ್ಲರೆ? ಆದರೂ ಅದು ಅವರಿಗೆ “ಅಮೂಲ್ಯ ಆಸ್ತಿ”! ಇದು ಪ್ರತಿಗಾಮಿ ಧೋರಣೆ. ಕೇಂದ್ರದಲ್ಲಿ ಬಿಜೆಪಿ ನಾಯಕತ್ವದಲ್ಲಿ ಆಡಳಿತದಲ್ಲಿದ್ದ ಎನ್‌ಡಿಎ ಸರ್ಕಾರ ಸಹ ಎನ್‌ಸಿಇಆರ್‌ಟಿಯ ಮೂಲಕ ಸಂಸ್ಕೃತ ಕಲಿಕೆಯನ್ನು ಎಲ್ಲ ಶಾಲೆಗಳಲ್ಲಿ ಕಡ್ಡಾಯ ಮಾಡಬೇಕೆಂದು ಯೋಚನೆ ಮಾಡಿತ್ತು. ಈ ವೇದ ಉಪನಿಷತ್ತುಗಳಲ್ಲಿರುವ ಅಥವಾ ಮಹಾಕಾವ್ಯಗಳಲ್ಲಿರುವ ಹಲವಾರು ಸತ್ಯಗಳನ್ನು ಇವರ ಚರಿತ್ರೆ ಪುಸ್ತಕಗಳಲ್ಲಿ ತಿರುಚಿ ಬರೆಯಲಾಯಿತು ಎನ್ನುವುದನ್ನು ಮರೆಯಲು ಸಾಧ್ಯವೇ? ಸಂಸ್ಕೃತ ವೇದ ವಿಶ್ವ ವಿದ್ಯಾಲಯದಲ್ಲಿ ಹೀಗಾಗುವುದಿಲ್ಲ ಎನ್ನುವುದಕ್ಕೆ ಯಾವ ಭರವಸೆ ಇದೆ?

ಹೀಗಿದ್ದರೂ ಡಾ ಬಿ ವಿ ಕುಮಾರ ಸ್ವಾಮಿಯವರ (ವಿಕ, 22.08.2009) ಅನಿಸಿಕೆ :
“ಈ ಭಾಷೆಯಲಿ ರಚಿತವಾಗಿರುವ ಸಾಹಿತ್ಯಗಳು ಭಾರತದ ಇತಿಹಾಸದಲ್ಲಿ ಮಾನವ ಬೌದ್ದಿಕ ಸುವರ್ಣಯುಗವನ್ನು ಸೃಷ್ಟಿಸಿದವು ಎನ್ನುವುದು ಜಗತ್ತೇ ತಿಳಿದಿರುವ ವಿಷಯ. ಈ ಸಂಸ್ಕೃತ ‘ರಸಸಾರ’ದಿಂದ ವಂಚಿತರಾಗಿರುವ ಜನರ ಇಂದಿನ ಸಮಾಜ ಸೃಷ್ಟಿಯೇ ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ಚಿಂತಕರ-ಶಿಕ್ಷಣ ತಜ್ಞರ ಗುರಿಯಾಗಿತ್ತು.”
ನಿಜವಿರಬಹುದು. ಆದರೆ ಈ ‘ರಸಸಾರ’ವನ್ನು ಭಾರತದ ಶೇಕಡ ಎಷ್ಟು ಜನ ವಿದ್ಯಾರ್ಥಿಗಳಿಗೆ ಇವರು ಉಣಬಡಿಸಿದರು ಎನ್ನುವುದು ಮುಖ್ಯವಲ್ಲವೆ? ತಮ್ಮ ಜನಗಳನ್ನು ತಾವೇ ಪ್ರಾಣಿಗಳಂತೆ ನಡೆಸಿಕೊಂಡ ಇವರು ಬ್ರಿಟಿಷರನ್ನು ದೋಷಿಗಳನ್ನಾಗಿ ಮಾಡುವ ಅವಶ್ಯಕತೆ ಏನು? ಇವರ ಇನ್ನೊಂದು ವಾಕ್ಯ...
“ಮೌರ್ಯ ಸಾಮ್ರಾಜ್ಯದಲ್ಲಿ ನಳಂದ, ವಿಶ್ವವಿದ್ಯಾಲಯ ಸ್ಥಾಪಿಸಿ ಜಗತ್ತನ್ನೇ ಆಕರ್ಶೀಸಿತಂತೆ..”
ಅದೂ ನಿಜವೆ. ಆದರೆ ಈ ವಿಶ್ವವಿದ್ಯಾಲಯಕ್ಕೆ ಪ್ರವೇಶ ಕೋರಿ ಬರುತ್ತಿದ್ದ 10 ಜನರಲ್ಲಿ 8 ಜನ ವಿದ್ಯಾರ್ಥಿಗಳನ್ನು ದ್ವಾರ ಪಂಡಿತರುಗಳು ಪ್ರವೇಶವೇ ಕೊಡದಂತೆ ಅಲ್ಲಿಂದಲೇ ಹಿಂದಕ್ಕೆ ಕಳುಹಿಸುತ್ತಿದ್ದರಂತೆ! ಹೀಗೆ ಹಿಂದಕ್ಕೆ ಹೋಗುತ್ತಿದ್ದ ವಿದ್ಯಾರ್ಥಿಗಳು ಯಾರು? ಈ ಬಗ್ಗೆ ಸಂಶೋಧನೆ ನಡೆದಿದೆಯೆ? 3೦೦೦-4೦೦೦ ವರ್ಷಗಳಿಂದ ಭಾರತದ ಎಲ್ಲ ಮಕ್ಕಳಿಗೂ ಈ ‘ರಸಸಾರ’ ಸಿಕ್ಕಿದ್ದರೆ, ಈ ದಿನ 2೦ ಮಿಲಿಯನ್ ಮಕ್ಕಳು ಬೀದಿಯಲ್ಲಿರುತ್ತಿರಲಿಲ್ಲ; ಅಂಬೇಡ್ಕರ್ ಅವರು ಮೀಸಲು ಕೇಳುತ್ತಿರಲಿಲ್ಲ; ಮಂಡಲ್ ಉದಯವಾಗುತ್ತಿರಲಿಲ್ಲ. ಈ ಜನ ಸಂಸ್ಕೃತ ವಿವಿಗೆ ಹೇಗೆ ಬೆಂಬಲಕೊಡುತ್ತಾರೆ? ಯಾವ ಕಾರಣಕ್ಕಾಗಿ ಕೊಡಬೇಕು? ಇದುವರೆಗೂ ಇಲ್ಲದ ಸಂಸ್ಕೃತ ವೇದ ವಿಶ್ವ ವಿದ್ಯಾಲಯದ ಪ್ರಸ್ತಾವನೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಾಗಲೇ ಏಕೆ ಆಗುತ್ತದೆ? ಲಕ್ಷ್ಮೀನಾರಾಯಣ ಭಟ್ಟರು, ಸತ್ಯನಾರಾಯಣ ಭಟ್ಟರು, ಕೊಕ್ಕಡ ವೆಂಕಟರಮಣ ಭಟ್, ಎಲ್ ಶೇಷಗಿರಿ ರಾವ್ ಅವರು, ಎಂ ಚಿದಾನಂದ ಮೂರ್ತಿಯವರು, ಭೈರಪ್ಪನವರು ಏಕೆ ಈ ಸಮಯದಲ್ಲೇ ಸಂಸ್ಕೃತ ವಿವಿಗೆ ಬೆಂಬಲ ಕೊಟ್ಟು ದ್ವನಿ ಎತ್ತಿದ್ದಾರೆ ಎನ್ನುವುದು ಅತ್ಯಂತ ಗಮನಾರ್ಹ.

ಭಾರತದಲ್ಲಿ ಈಗ 12 ಸಂಸ್ಕೃತ ವಿವಿಗಳಿವೆ. ಅವುಗಳಲ್ಲಿ ನಡೆಯುತ್ತಿರುವ ಸಂಶೋಧನೆ ಕಾರ್ಯಕ್ರಮಗಳನ್ನು ಬಲಪಡಿಸಲಿ. ನಮ್ಮ ವಿವಿಗಳಲ್ಲಿರುವ ಸಂಸ್ಕೃತದ ವಿಭಾಗಗಳಿಗೆ ಮತ್ತು ಮೈಸೂರಿನ ‘ಸಂಸ್ಕೃತ ಪಾಠಶಾಲೆ’, ಶೃಂಗೇರಿ ‘ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ’, ಉಡುಪಿ ‘ಪೂರ್ಣಪ್ರಜ್ಞ ವಿದ್ಯಾಪೀಠ’, ಬೆಂಗಳೂರಿನ ‘ಸಂಸ್ಕೃತ ಕಾಲೇಜು’, ಮೇಲುಕೋಟೆ ಇತ್ಯಾದಿ ಸಂಸ್ಥೆಗಳಿಗೆ ಹೆಚ್ಚು ವಿದ್ಯಾರ್ಥಿಗಳು ಬರುವಂತೆ ಆಧುನೀಕರಣಗೊಳಿಸಿ. ಅದರ ಪ್ರಾಚಾರ್ಯರು, ಪ್ರಾಧ್ಯಾಪಕರುಗಳಿಗೆ ಯುಜಿಸಿ ವೇತನಗಳನ್ನು ಕೊಡಿ. ಹೊಸ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಲು ಪ್ರೋತ್ಸಾಹವಾಗುವಂತೆ ಆರ್ಥಿಕ ನೆರವನ್ನು ಘೋಷಿಸಿ. ಆದರೆ ಸಂಸ್ಕೃತ ವಿಶ್ವವಿದ್ಯಾಲಯದ ಆವಶ್ಯಕತೆ ಈಗ ಇಲ್ಲ.

ಭೈರಪ್ಪನವರು ವಾದವಿವಾದಗಳನ್ನು ಕೊನೆಗಳಿಸುತ್ತ ‘ವಿವೇಕಯುಕ್ತ ಕೆಲಸವನ್ನು ಆರಂಭಿಸುವುದೇ ಒಳ್ಳೆಯದು’ (ವಿಕ, 06.09.2009) ಎನ್ನುವ ಲೇಖನದಲ್ಲಿ ಹಲವಾರು ವಿದ್ಯಾಂಸರು ಎತ್ತಿರುವ ಯಾವುದೇ ವಿರೋಧವನ್ನು ಎದುರಿಸದೆ ಸಿನಿಕತನದಲ್ಲಿ ಮತ್ತೆ ತಮ್ಮ ತೀರ್ಮಾನಗಳನ್ನು ಕೊಟ್ಟಿದ್ದಾರೆ. ಅಷ್ಟೇಅಲ್ಲ ಲೇಖನದಲ್ಲಿ ತಪ್ಪು ಮಾಹಿತಿಯನ್ನು ಕೊಟ್ಟಿದ್ದಾರೆ. “ಬೇಡವೇ ಬೇಡವೆಂದೂ ಮೂವರು ವಾದಿಸಿದ್ದಾರೆ.” ಇವರ ಪ್ರಕಾರ ಇದು “ಅವರಲ್ಲಿ ನೂರಕ್ಕೆ ತೊಂಬತ್ತೈದು ಭಾಗ ಸಂಸ್ಕೃತ ವಿಶ್ವವಿದ್ಯಾಲಯವು ಬೇಕೆಬೇಕೆಂಬ ಅಭಿಪ್ರಾಯವುಳ್ಳವರಾಗಿದ್ದಾರೆ.” ವಿಜಯ ಕರ್ನಾಟಕದಲ್ಲಿ ಬಂದ ಲೇಖನಗಳಲ್ಲಿ 7 ಜನ ಬೇಡವೆಂದಿದ್ದಾರೆ, 15 ಜನ ಬೇಕೆಂದಿದ್ದಾರೆ (73%.) ಇದು “ಮೂವರು” ಹೇಗಾಯಿತು? ಮತ್ತು ಇದು “ನೂರಕ್ಕೆ ತೊಂಬತ್ತೈದು ಭಾಗ” ಹೇಗಾಯಿತು? ಮಾರ್ಕ್ಸ್‌ವಾದಿಗಳನ್ನು ಮತ್ತು ಪ್ರಗತಿಪರರನ್ನು ಮನಸೋಇಚ್ಚೆ ಪೂರ್ವಾಗ್ರಹ ಪೀಡನೆಯಿಂದ ತೆಗಳುವುದು ಬಿಟ್ಟರೆ ಈ ಲೇಖನದಲ್ಲೂ ಯಾವುದೇ ಹುರುಳಿಲ್ಲ. ತರ್ಕಕ್ಕೂ ತಮಗೂ ಇರುವ ದೂರವನ್ನು ಹಾಗೆ ಉಳಿಸಿಕೊಂಡಿದ್ದಾರೆ. ವೈದಿಕ ಧರ್ಮವನ್ನು ಒರಟು ಒರಟಾಗಿ ವೈಭವೀಕರಿಸುತ್ತಿರುವ ಇವರಿಗೆ ಸಂಸ್ಕೃತ ವಿಶ್ವವಿದ್ಯಾಲಯವು ಬೇಕು ಎನ್ನುವುದಕ್ಕೆ ಸಮರ್ಪಕವಾದ ವಾದವೊಂದನ್ನು ಮಂಡಿಸಲು ಸಾಧ್ಯವಾಗಿಲ್ಲ ಎನ್ನುವುದು ಆಶ್ಚರ್ಯವೇನಲ್ಲ. ಬೈರಪ್ಪನವರನ್ನು ಈ ಚರ್ಚೆಯಲ್ಲಿ ಪ್ರೈಮ್ ಮೂವರ್ ಆಗಿ ಬಳಸಿಕೊಳ್ಳಲಾಗಿದೆ ಆದರೆ ಇದಕ್ಕೆ ಇಲ್ಲಿ ಪ್ರೈಮ್ ಅಪೋಸರ್ ಇಲ್ಲ. ಇದರ ಪರಿಣಾಮ ಚರ್ಚೆಯ ಕೊನೆಯಲ್ಲಿ ತೀರ್ಮಾನ ಕೊಡುವ ಅಧಿಕಾರ ಭೈರಪ್ಪನವರದಾಗುತ್ತದೆ.

18 ಅನಿಸಿಕೆಗಳು:

Anonymous ಅಂತಾರೆ...

ಬರಹ ಸೊಗಸಾಗಿದೆ.

ನನ್ನಿ

Raghu ಅಂತಾರೆ...

enguru facebook nalli yakilla?

Unknown ಅಂತಾರೆ...

mahanIyarau baredirodu maatra oppikoLLabeku anno tarka idda hage ide :) athavaa bhyrappanavaranna tegaLakke baLasikonDa lekhana idda haage ide. idu hege samvadakke kaLisida lekhana agalu saadhya? ivaru upasamharavannU Tikisi barediddare.

ಸಾಗರದಾಚೆಯ ಇಂಚರ ಅಂತಾರೆ...

Baraha tumba chennagide, tarka sogasaagide,

ಪ್ರಸಾದ್ ಅಂತಾರೆ...

"ಮತ್ತು ಒಂದು ಭಾಷೆಯ ಕಲಿಕೆಯನ್ನು ಅದರ ವ್ಯಾಕರಣವನ್ನು ಮತ್ತೊಂದು ಭಾಷೆಯ ಕಲಿಕೆಯಿಂದ ಸರಿಪಡಿಸಬೇಕು/ ಸರಿಪಡಿಸಬಹುದು ಎನ್ನುವ ವಾದ ಭಾಷಾವಿಜ್ಞಾನದ ಸಿದ್ಧಾಂತಗಳಲ್ಲಿ ಓದಿದ ನೆನೆಪು ನನಗಿಲ್ಲ"
ರಘುನಾಥ್ ಅವರು ಹೇಳಿರೋದು ಸರಿಯಾಗಿದೆ.ಆ ಇಡೀ ಲೇಖನದಲ್ಲಿ ಸಂಸ್ಕೃತ ವಿ ವಿ ಇಂದ ನಮ್ಮ ಭಾಷೆ ಬೆಳವಣಿಗೆ ಹೇಗೆ ಸಾಧ್ಯ ಅಂತ ಭೈರಪ್ಪನವರು ಸರಿಯಾಗಿ ಎಲ್ಲೂ ಹೇಳಿಲ್ಲ.ಅವರ ಬಗ್ಗೆ ಎಲ್ಲರಿಗು ಆಪಾರ ಗೌರವ ಇದೆ.ಕನ್ನಡ ಸಾಹಿತ್ಯ ಕಂಡ ಶ್ರೇಷ್ಠ ಸಾಹಿತಿಯಲ್ಲಿ ಅವರು ಒಬ್ಬರು.ಆದರೆ ಇತ್ತೀಚೆಗೆ ಅವರಿಗೇನಾಗಿದೆಯೋ ಕಾಣೆ.ಅವರು ಬರೆಯೋದೆಲ್ಲ ಹಿಂದುತ್ವದ/ಬ್ರಾಹ್ಮಣತ್ವದ ಕಣ್ಣಿನಿಂದ ಅಂತ ಓದಿದ ಕೆಲವೇ ಸಾಲುಗಳಲ್ಲೇ ಗೊತ್ತಾಗುತ್ತದೆ.ರಘುನಾಥ್ ಅವರು ವೈಜ್ನಾನಿಕ ತಳಹದಿಯಲ್ಲಿ ತರ್ಕಬದ್ಧವಾಗಿ ತಮ್ಮ ವಿಚಾರ ಮಂಡಿಸಿ ಭೈರಪ್ಪನವರ ವಾದವನ್ನು,ಹೇಳಿಕೆಗಳನ್ನು ಸಮರ್ಥವಾಗಿ ಸುಳ್ಳಾಗಿಸಿದ್ದಾರೆ.ಆದ್ರೆ ಭೈರಪ್ಪನವರು,ಶಂಕರಭಟ್ ಅಂತ ಭಾಷಾವಿಜ್ನಾನಿಗಳನ್ನೂ ಒಳಗೊಂಡು ವಿವಿಯನ್ನು ಸಮಂಜಸ ಕಾರಣ ನೀಡಿ ವಿರೋಧಿಸಿದ ಜನರನ್ನು ಮೂದಲಿಸಿ ತಮ್ಮ ವಿಚಾರ ಸಮರ್ಥಿಸಿಕೊಂಡಿದ್ದಾರೆಯೇ ಹೊರತು ಎಲ್ಲರೂ ಒಪ್ಪಬಹುದಾದಂತ ತರ್ಕ ನೀಡಿಲ್ಲ.ಅವರ ಪ್ರಕಾರ ಕನ್ನಡ ಭಾಷೆ ಅಂದ್ರೆ ವ್ಯಾಕರಣ,ಪದಗಳ ಸರಿಯಾದ ಉಚ್ಛಾರ ಅಷ್ಟೆ,ಕನ್ನಡ ಅಷ್ಟಕ್ಕೆ ಮಾತ್ರ ಸೀಮಿತ.
ಇನ್ನು ವಿಜಯಕರ್ನಾಟಕದ(ವಿಕ)ಬಗ್ಗೆ ಹೇಳ್ಬೇಕಂದ್ರೆ ಅದು ಕರ್ನಾಟಕದ ಅರ್ಎಸ್ಎಸ್ ಪತ್ರಿಕೆ ಆಗಿದೆ.ಆರೆಸೆಸ್-ಭಾಜಪದ ತಾಳಕ್ಕೆ ತಕ್ಕಂತೆ ಕುಣಿಯುವ ಗುಂಪಾಗಿದೆ ವಿಕ.ಇಂತದ್ರಲ್ಲಿ ಹಿಂದುತ್ವ ಪ್ರತಿಪಾದಕರಾದ ಭೈರಪ್ಪನವರ/ಚಿ ಮೂ ಅವರ ಬರಹಗಳಿಗೆ ಸಮರ್ಪಕವಾಗಿ ವಿರುದ್ಧ ಉತ್ತರ ಬಂದರೆ ಹೇಗೆ ಪ್ರಕಟಿಸುತ್ತಾರೆ.ರಘುನಾಥ ಅವರ ಈ ಬರಹ ವಿಕದಲ್ಲಿ ಬಂದಿಲ್ಲ ಅಂದ್ರೆ ಅಚ್ಚರಿ ಇಲ್ಲ.

VSgoogler ಅಂತಾರೆ...

ನಾನೊಬ್ಬ ಹೊರನಾಡ ಕನ್ನಡಿಗ. ತುಳು ನಾಡಿನಲ್ಲಿ ಹುಟ್ಟಿ ಬೆಳೆದು, ಮೈಸೂರಿನಲ್ಲೋದಿ ವಿದೇಶದಲ್ಲಿ ಕೆಲಸ ಮಾಡುತ್ತಾ ಇದ್ದೇನೆ. (ಬಾಲ್ಯದಲ್ಲಿ ಬರುತ್ತ್ತಿದ್ದ ತುಳು ಬಾಷೆ ಮರೆತು ಹೋಗಿದೆ, ಲೆಲ್ಲೇ ಮದಮೆಕು ಬಲ್ಲೇ (ಅಥ್ತವಾ ಅದಕ್ಕೆ ಹತ್ತಿರದ ಪದಗಳ) ಹಾಡು ಇನ್ನೂ ಒಳಕಿವಿಯಲ್ಲಿ ಕೇಳುತ್ತ್ದೆದೆ). ಹತ್ತಾರು ವರುಷಗಳಿಂದ ನಮ್ಮ ಯೋಗಾಗಮ ಗ್ರಂಥಗಳನ್ನು ತಿರುವಿ ಸ್ವಲ್ಪ ತಲೆಹರಟೆಯನ್ನು ಹೊಡೆಯಲು ಕಲಿತಿದ್ದೇನೆ. ಹರಟೆಯಲ್ಲಿ ತಪ್ಪಿದ್ದರೆ ಮನ್ನಿಸಬೇಕು.

ಹೆಡತಲೆ ಗ್ರಾಮದ ಶ್ರೀ ರಂಗ ಮಹಾಗುರುಗಳು, ಅಷ್ಟಾಂಗಯೋಗ ವಿಜ್ಞಾನ ಮಂದಿರದ ’ಅಮರವಾಣಿಯ ಸಂಸ್ಕೃತ-ಸಂಸ್ಕೃತಿ (೧೧ನೇ)ಸಂಪುಟಗದಲ್ಲಿ ೧೯೫೬ ರಲ್ಲಿ ಸಂಸ್ಕೃತ ಭಾಷೆಯ ವ್ಯಾಸಂಗವನ್ನು ಅಭಿವೃದ್ಧಿಪಡಿಸಲು ತಯಾರಿಸಿದ ಕೇಂದ್ರ ಸರ್ಕಾರದ ’ಸಂಸ್ಕೃತಾಯೋಗ” ಪ್ರಶ್ನಾವಳಿಗೆ ಉತ್ತರ ಬರೆದಿದ್ದಾರೆ. ಈ ಗ್ರಂಥದ ಸಣ್ಣದೊಂದು,ಎಲ್ಲೂ ಕಾಣದ, ವಿಷಯವನ್ನು ತಮ್ಮ ಗಮನಕ್ಕೆ ತರಬೇಕೆನಿಸುತಿದೆ. ಭಾಷೆಗಳಲ್ಲಿರುವ ಲಿಂಗ ವ್ಯವಸ್ಥೆಯ ವೈವಿಧ್ಯವನ್ನು(ಪುಟ್ ೧೭) ವಿವಿರಿಸುತ್ತಾ, ಸಂಸ್ಕೃತದಲ್ಲಿ ಲಿಂಗ ನಿರ್ಣಯಕ್ಕೆ ಅಧಾರವೇನು ಎಂದು ಪ್ರಶ್ನೆ ಕೇಳಿ ಅದಕ್ಕೆ ಉತ್ತರವಾಗಿ-(ಯೋಗ ಶಾಸ್ತ್ರದ) ಇಡಾ ನಾಡಿಯ ಪ್ರಾಧಾನ್ಯ ಹೊಂದಿ ಹೊರಡುವ ಶಬ್ದವು ಸ್ತ್ರೀಲಿಂಗ ವಾಗಿದೆ, ಪಿಂಗಳ ನಾಡಿಯ ಪ್ರಾಧಾನ್ಯ ಹೊಂದಿ ಹೊರಡುವ ಶಬ್ದವು ಪುಲ್ಲಿಂಗವಾಗಿದೆ, ಇವೆರಡನ್ನೂ ಸಮಪ್ರಮಾಣದಲ್ಲವಲಂಬಿಸುವ ಶಬ್ದವು ನಪುಂಸಕ ಲಿಂಗವಾಗಿದೆ ಎಂದು ಯೊಗ ಶಾಸ್ತ್ರ ಮತ್ತು ಯೋಗ ಜ್ಞಾನದ ಅಧಾರದ ಮೇಲೆ ತಿಳಿಸುತ್ತಾರೆ. ಈ ಲಿಂಗ ವೈವಿಧ್ಯದ ಘನ ಪಾಠವನ್ನು ಪ್ರಾಯೋಗಿಕವಾಗಿ (ಅಂದರೆ emperically)ಸಿದ್ದಪಡಿಸುವ ಯತ್ನದಲ್ಲಿದ್ದೇನೆ. ಇದನ್ನು ದಯವಿಟ್ಟು grammatical gender theory ಗಳಿಗೆ ಹೋಲಿಸಿ.

ಭಾರತೀಯ ವ್ಯಾಕರಣ (ದೀನ,ದಲಿತ,ಕವಿ ಇತ್ಯಾದಿ ಲೋಕದ ಸ್ತ್ರೀ, ಪುರುಷರೆಲ್ಲರ)ದೇಹದಲ್ಲಿ ಹರಡಿರುವ ಅಕ್ಷರ ಸಮೂಹದಲ್ಲಿ, ನಾದಕ್ಕೆ ಕಾರಣವಾದ ಅನಲ ಅನಿಲದಲ್ಲಿ ವ್ಯಕ್ತವಾಗಿದೆ. ಶ್ರೀ ರಂಗಮಹಾಗುರುಗಳು ಮತ್ತು ಇತರ ಜ್ಞಾನಿಗಳು ತಿಳಿಸುವಂತೆ ಇಂತಹ ಅನೇಕ ಅಪೂರ್ವ ಸಂಗತಿಗಳು ಸಂಸ್ಕ್ರತ ಭಾಷೆ ಯಲ್ಲಡಗಿದೆ. ಈ ಸಂಸ್ಖತಿಯನ್ನು ಹಾಳುಮಾಡಿಕೊಳ್ಳದೆ ಇಟ್ಟು ಕೊಳ್ಳುವದಕ್ಕೆ ಸಂಸ್ಕ್ರತ ಹಾಗೂ ಸಂಸ್ಕೃತಿ ಬೇಕಾಗ ಬಹುದೇ ಎಂಬುದನ್ನು ವಿಚಾರ ಮಾಡೋಣ.

ವಿಶ್ವ ನಾಥ ಶರ್ಮ
viswa.sharma@gmail.com

Dr. B R Manjunath ಅಂತಾರೆ...

kannaDada vyakaraNa, samskritada vayakaraNa valla nija. aadare ee vaadakko, samskritada visvavidyalayada staapanegoo yenu nantu? heege annuvavaru, nale karnatakadalli, urdu -tuLu-Konkani vivavidyalayagaloo beDa yennabahudu. Idu, hindi vaadigaLa vaadadashte huruLilladaagide. karnatakadalli kannada vallada nuDigaLalli visvavidyalayagaLu kooDadu, yennuvudu, daDDatana. Karnataka sarkara eega Maharashtra sarkaradoDane, maharashtradalli Kannada visvwavidyalaya stapanege maatukathe naDesuttide. adu beko illa, kooDado yennuvudannu, samskrita visvavidyalaya bedda yennuvavary dayavittu heLi.
dr. B.R. Manjunath, Mumbai dr.brmanjunath@gmail.com
October 3, 2009

Anonymous ಅಂತಾರೆ...

Avram Noam Chomsky ಅವರೊಬ್ಬ ಅಮೆರಿಕದ ದೊಡ್ಡ ಸೊಲ್ಲರಿಮೆಯರಿಗ (linguist). Modern linguisticsಅಲ್ಲಿ ಇವರು ಹೆಸರುವಾಸಿ.

The Chomskyan approach towards syntax, often termed generative grammar, studies grammar as a body of knowledge possessed by language users.

ಅಂದರೇನು? ಈಗಾಗಲೇ ಒಂದು ನುಡಿಯನ್ನಾಡುವ ಮಂದಿಯಲ್ಲಿ ಆ ನುಡಿಯ ಬಗ್ಗೆ ಬೇಕಾದಶ್ಟ, ತಕ್ಕಶ್ಟು ಅರಿಮೆ, ತಿಳಿವು ಇದೆ. ಇರುವ ಈ ಅರಿಮೆಯನ್ನು ಓದುವುದು, ಆರಯ್ದು ಬರೆಯುವುದು ಸೊಲ್ಲರಿಮೆಯ ಗುರಿ.

ಅಂದರೆ ಸೊಲ್ಲರಿಮೆ/ವ್ಯಾಕರಣ ಒಂದು ನುಡಿ ಹೀಗೀಗೆ ಇರಬೇಕು ಎಂದು ಹೇಳಬಾರದು, ಅದು ಅದರ ಕೆಲಸವಲ್ಲ. ಅದು ಒಂದು ನುಡಿ ಹೀಗೀಗೆ ಇದೆ, ಅದನ್ನಾಡುವ ಮಂದಿ ಹೀಗೀಗೆ ಅದನ್ನು ಆಡುತ್ತಾರೆ, ಬಳಸುತ್ತಾರೆ, ಅದರಲ್ಲಿ ಮಾತುಕತೆ ನಡೆಸುತ್ತಾರೆ ಎಂದು ತೋರಿಸುವುದು, ತೋರಿಸಬೇಕು.

ಈ ವ್ಯೂ ಅಲ್ಲಿ ನೋಡಿದಾಗ, ಉಲಿತಪ್ಪು/ಉಚ್ಚಾರದೋಶ, ಶುದ್ಧಭಾಷೆ, ಶಿಷ್ಟಭಾಷೆ ಮುಂತಾದವೆಲ್ಲ ಸೊಲ್ಲರಿಮೆ/ವ್ಯಾಕರಣವೇ ಅಲ್ಲ. ಅವೆಲ್ಲ ಹೇರಿಕೆ/impositionಗಳು.

ಇನ್ನು ಕನ್ನಡಕ್ಕೆ ನಂಟಿರದ, ಕನ್ನಡದ ನುಡಿಕೂಟಕ್ಕೆ/language familyಗೆ ಸೇರದ ಸಂಸ್ಕೃತದ ಸೊಲ್ಲರಿಮೆ ಕನ್ನಡಕ್ಕೆ ಮಾದರಿಯೂ ಅಲ್ಲ ಒಗ್ಗುವುದೂ ಇಲ್ಲ ಮತ್ತು ಅದರಂತೆ ಬರೆದ ವ್ಯಾಕರಣ/ಸೊಲ್ಲರಿಮೆಯಂತೆ ಮಂದಿ ಕನ್ನಡವನ್ನು ಮಾತಾಡುತ್ತಲೂ ಇಲ್ಲ. ಮಾತಿನಿಂದ ನುಡಿ ಬಂದಿರುವುದೇ ಹೊರತು, ಬರವಣಿಗೆಯಿಂದಲ್ಲ.

ಮಾದರಿಯಾಗಿ: ಕನ್ನಡದಲ್ಲಿ "ಅವನು ಹೇಳಿದನು" ಎಂಬ ಸಾಲಿಗೆ ಸಂಸ್ಕೃತದಲ್ಲಿ "ಸಃ ಅವದತ್", "ಸಾ ಅವದತ್", "ತತ್ ಅವದತ್" ಎಂಬ ಮೂರೂ ಸಾಲುಗಳು ಸಮವಾಗಬಹುದು. ಹಾಗೇ ಕನ್ನಡದ ಹೇಳಿದನು/ಹೇಳಿದಳು/ಹೇಳಿತು/ಹೇಳಿದರು ಎಂಬ ನಾಲ್ಕೂ ಪದಗಳಿಗೂ ಸಂಸ್ಕೃತದ "ಅವದತ್" ಎಂಬ ಪದ ಸಮವಾಗಬಹುದು.
ಕನ್ನಡದಲ್ಲಿ ’ಹೇಳಿದನು’ ಎಂಬ ಒಂದೇ ಪದ, ಹೇಳುಗ ಮನುಶ್ಯ/ಮನುಶ್ಯನಲ್ಲ, ಜೆಂಡರ‍್, ನಂಬರ‍್, ಟೆನ್ಸ್ ಮತ್ತು Action ಎಂಬ ಒಟ್ಟು ಐದು ಸಂಗತಿಗಳನ್ನು ತಿಳಿಸಿದರೆ, "ಅವದತ್" ಎಂಬ ಸಂಸ್ಕೃತ ಪದ, ಬರೀ ಟೆನ್ಸ್, Action ಮತ್ತು ನಂಬರನ್ನು ತಿಳಿಸುವುದು. ಆದುದರಿಂದ ಎಸಗುಪದ/ಕ್ರಿಯಾಪದ/verbಗಳ ವಿಷಯದಲ್ಲಿ ಕನ್ನಡದ verb-system, ಸಂಸ್ಕೃತ, ಇಂಗ್ಲೀಶು ಮುಂತಾದ Indo-Aryan ನುಡಿಗಳಿಗಿಂತ ಹೆಚ್ಚು efficient ಮತ್ತು ಬೇರೆ ಆಗಿದೆ. ಕನ್ನಡದಂತಹ ದ್ರವಿಡಿಯನ್ ನುಡಿಗಳಲ್ಲಿ ಹೆಸರುಪದ/nounಗಳಿಗಿಂತ ಎಸಗುಪದ/verbಗಳಿಗೆ ಒತ್ತು ಹೆಚ್ಚು.

ಈ ಉದಾಹರಣೆಯಂತೆ ಹುಡುಕ್ತಾ ಹೋದರೆ ಕನ್ನಡಕ್ಕೂ ಸಂಸ್ಕೃತಕ್ಕೂ ಸೊಲ್ಲಿರಿಮೆಯಲ್ಲಿ ಹೊಂದಿಕೆಯೇ ಇಲ್ಲ ಎಂಬುದರ ಅರಿವು ಬರುತ್ತದೆ.

ಇನ್ನು ನಮ್ಮ ಈಗಿನ ಕನ್ನಡ ಸೊಲ್ಲರಿಮೆ( ಸರಕಾರ + ಕಸಾಪ ಗಳ ), ಹೆಚ್ಚು ಮಂದಿ ಬಳಸುವ ’ಅಯ್ತೆ, ಅವೆ, ಕೂಟೆ, ಹಂಗಾರೆ, ಮಾಡಿವ್ನಿ, ಮಾಡ್ಯಾನ, ಹಂಗಾಸೆ, ಮನಸಾರೆ, ಕಣ್ಣೂ ಕಣ್ಣೂ, ಬಂದುಬಿಟ್ಟು, ಒಂದೆರಡು, ಹೇಳೀ ಕೇಳೀ, ಏನನ್ನು’..... ಮುಂತಾದ ಸಾವಿರಾರು ಕನ್ನಡದಲ್ಲಿ ಬಳಕೆಯಲ್ಲಿರುವ ಕನ್ನಡದ್ದೇ ಆದ ರೂಪಗಳನ್ನು, formationಗಳನ್ನು explain ಮಾಡುವುದೇ ಇಲ್ಲ.

ಇರುವ ಕನ್ನಡ ಸೊಲ್ಲರಿಮೆಗಳ ಹೊತ್ತಗೆಯಲ್ಲಿ ಶಂಕರಬಟ್ಟರ ಹೊತ್ತಗೆಗಳು ಇಂತಹ ಹಿಂದೆಂದೂ ಬಿಡಿಸಿ ಹೇಳದ ಹಾಗೂ ಬಳಕೆಯಲ್ಲಿರುವ ಹಲವಾರು ರೂಪಗಳನ್ನು ಚೊಕ್ಕವಾಗಿ ತಿಳಿಸುವುದಲ್ಲದೇ, ಕನ್ನಡನುಡಿಯ ಒಳಮೆಯ ಬಗ್ಗೆ ಹೊಸಬಗೆಯಲ್ಲಿ ನಮಗೆ ಅರಿಮೆ ನೀಡುತ್ತದೆ. ಕನ್ನಡದ ಸೊಲ್ಲರಿಮೆ ಬಗ್ಗೆ ಇಂಟರೆಸ್ಟಿರುವವರು ಇವರ ಹೊತ್ತಗೆಗಳನ್ನು ಓದಲೇ ಬೇಕು. ಅವರ ಹೊತ್ತಗೆಗಳಲ್ಲಿ ಸಂಸ್ಕೃತವ್ಯಾಕರಣ ಯಾಕೆ ಬೇಡ ಎಂಬುದರ ಬಗ್ಗೆ ಬೇಕಾದಶ್ಟು ತಕ್ಕವಾದ, ನೀಟಾದ, ಮಾತುಗಳಿವೆ.

ನನ್ನಿ

Anonymous ಅಂತಾರೆ...

ಕರ್ನಾಟಕ ಸರಕಾರ ಮಹಾರಾಷ್ಟ್ರದಲ್ಲಿ ಕನ್ನಡ ವಿಶ್ವವಿದ್ಯಾನಿಲಯದ ಬಗ್ಗೆ ಮಾತುಕತೆ ನಡೆಸಿದೆ ಎಂಬ ಸುದ್ದಿ ನನಗಿಲ್ಲೆಲ್ಲೂ ಇಂಟರ‍್ನೆಟ್ಟಲ್ಲಿ ಸಿಗುತ್ತಿಲ್ಲ. ಈ ಸುದ್ದಿಯ ಮೂಲವನ್ನು ಅರುಹಬಹುದೇ!

ಕನ್ನಡ ವಿಭಾಗಗಳು ಮಹಾರಾಷ್ಟ್ರ, ತಮಿಳುನಾಡು, ಆಂಧ್ರ, ಕೇರಳಗಳಲ್ಲಿ ಬ್ರಿಟೀಶರ ಕಾಲದಿಂದಲೂ ಇದೆ. ಅದಕ್ಕೆ ಕಾರಣ ಆ ಜಾಗದಲ್ಲಿ ಹೆಚ್ಚಾಗಿ ತಾಯ್ನುಡಿಯಾಗಿ ಕನ್ನಡಹೊಂದಿದವರಿದ್ದಾರೆ. ಕರ್ನಾಟಕದಲ್ಲೂ ತಮಿಳು, ತೆಲುಗು, ಮರಾಟಿ ಶಾಲೆಗಳಿಲ್ಲವೇ!

ಕರ್ನಾಟಕದಲ್ಲಿ ಎಶ್ಟು ಮಂದಿಯ ತಾಯ್ನುಡಿ ಸಂಸ್ಕೃತ? ಸಿಕ್ಕಾಪಟ್ಟೆ ಕಡಮೆ.

ಇನ್ನು ತುಳು ಮುಂತಾದ ಕರ್ನಾಟಕದ್ದೇ ಆಗಿರುವ ನುಡಿಗಳ ವಿಶ್ವವಿದ್ಯಾನಿಲಯ ಬೇಕು. ಅದು ಸಂಸ್ಕೃತ ವಿಶ್ವವಿದ್ಯಾನಿಲಯಕ್ಕಿಂತ ಸಿಕ್ಕಾಪಟ್ಟೆ ಮುಖ್ಯ.

ಆದರೆ ಕೊಂಕಣಿ ಕರ್ನಾಟಕದ ನುಡಿಯಲ್ಲ, ಅವರೇ ಒಪ್ಪಿಕೊಳ್ಳುವ ಹಾಗೆ ಅವರು ಪೋರ್ಚುಗೀಸರ ದಾಳಿಯಿಂದ ವಲಸೆ ಬಂದವರು ಹಾಗೂ ಈಗಿನ ಇಂಡಿಯದಲ್ಲಿ ಅವರದೇ ಆದ ಕೊಂಕಣಿ-ಗೋವಾ ರಾಜ್ಯವಿದೆ. ಕೊಂಕಣಿ ವಿಶ್ವವಿದ್ಯಾನಿಲಯ ಕರ್ನಾಟಕಕ್ಕೆ ಬೇಕಾಗಿಲ್ಲ.

ಕೊಂಕಣಿಗರಿಗಿಂತ ಉರ್ದು ಮತ್ತು ತೆಲುಗರು ಹೆಚ್ಚಿದ್ದಾರೆ. ಅವರಿಗಾಗಿ ಕರ್ನಾಟಕ ಉರ್ದು ಹಾಗು ತೆಲುಗು ಶಿಕ್ಷಣದ ವ್ಯವಸ್ಥೆಯನ್ನು ಕರ್ನಾಟಕದಲ್ಲಿ ಮಾಡಿದೆ.

ಬಿಳಿಗೆರೆ ರಾಮಚಂದ್ರರ ಮಾತನ್ನು ಇನ್ನೊಂದು ವ್ಯೂ ಅಲ್ಲಿ ನೋಡಿದರೆ ಸಂಸ್ಕೃತ ವಿಶ್ವವಿದ್ಯಾನಿಲಯ ಎಶ್ಟು unimportant, ಅದಕ್ಕಿಂತ ಇಂಪಾರ‍್ಟೆಂಟಾಗಿ, ನಮ್ಮ ಕರ್ನಾಟಕದಲ್ಲೇ ಹೆಚ್ಚಾಗಿ ಬದುಕುತ್ತಿರುವ ಬೇರೇ ನುಡಿಗರಾದ ತುಳು, ಕೊಂಕಣಿ, ತೆಲುಗು, ಉರ್ದು, ಮರಾಟಿ, ತಮಿಳು ಮುಂತಾದ ಮಂದಿಗೆ ಬಾಳಿಕೆಗೆ ಬರುವ ’ಅಲ್ಪಸಂಖ್ಯಾತ ಭಾಷೆಗಳ ವಿಶ್ವವಿದ್ಯಾನಿಲಯ’ದ ಅವಶ್ಯಕತೆ ಸಂಸ್ಕೃತವಿಶ್ವವಿದ್ಯಾನಿಲಯಕ್ಕಿಂತ ಕೋಟಿಪಟ್ಟು ಜಾಸ್ತಿ ಇದೆ. ಅಂತಹ ಅಲ್ಪಸಂಖ್ಯಾತಭಾಷೆಗಳ ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತವನ್ನೂ ಹೇಳಿಕೊಡಬಹುದಲ್ಲ!

Anonymous ಅಂತಾರೆ...

ಪ್ರಿಯ ಮಂಜುನಾಥ್,

ಈ ಲೇಖಕರ ಅಭಿಪ್ರಾಯವೂ ಅದೇ ಆಗಿದೆ. ಆದ್ರೆ ಭೈರಪ್ಪನವರೇ ಅನಗತ್ಯವಾಗಿ ಕನ್ನಡದ ವ್ಯಾಕರಣದ ಅಧ್ಯಯನಕ್ಕೆ ಸಂಸ್ಕೃತ ವ್ಯಾಕರಣ ಬೇಕು, ಆದ್ದರಿಂದ ವಿಶ್ವವಿದ್ಯಾಲಯ ಬೇಕು ಅನ್ನೋ ಥರ ಬರೆದಿರೋದು.ನನ್ನ ಅಭಿಪ್ರಾಯದಲ್ಲಿ ಮಹಾರಾಷ್ಟ್ರದಲ್ಲಿ ಕನ್ನಡದ ವಿಶ್ವವಿದ್ಯಾಲಯದ ಅಗತ್ಯವೂ ಇಲ್ಲ, ಕರ್ನಾಟಕದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯದ ಅಗತ್ಯವೂ ಇಲ್ಲ. ಹಾಗೇ ಕರ್ನಾಟಕದಲ್ಲಿ ಉರ್ದು ವಿಶ್ವವಿದ್ಯಾಲಯವೂ ಬೇಕಾಗಿಲ್ಲ. ಆದರೆ ಕನ್ನಡನಾಡಿನದೇ ನುಡಿಯಾದ ತುಳು, ಕೊಡವಗಳಿಗೆ ವಿಶ್ವವಿದ್ಯಾಲಯ ಖಂಡಿತಾ ಬೇಕು.

ನಮಸ್ಕಾರ

ಸುಂದರ

Anonymous ಅಂತಾರೆ...

ವಿಶ್ವ ನಾಥ ಶರ್ಮರೇ,

"ಇಡಾ ನಾಡಿಯ ಪ್ರಾಧಾನ್ಯ ಹೊಂದಿ ಹೊರಡುವ ಶಬ್ದವು ಸ್ತ್ರೀಲಿಂಗ ವಾಗಿದೆ, ಪಿಂಗಳ ನಾಡಿಯ ಪ್ರಾಧಾನ್ಯ ಹೊಂದಿ ಹೊರಡುವ ಶಬ್ದವು ಪುಲ್ಲಿಂಗವಾಗಿದೆ, ಇವೆರಡನ್ನೂ ಸಮಪ್ರಮಾಣದಲ್ಲವಲಂಬಿಸುವ ಶಬ್ದವು ನಪುಂಸಕ ಲಿಂಗವಾಗಿದೆ"

ಉದಾಹರಣೆಗಳೊಂದಿಗೆ ವಿಚರಿಸುವಿರಾ?

’ಮಿತ್ರ’ ಎಂಬ ಶಬ್ಧ ಪುಲ್ಲಿಂಗವೂ ಹೌದು ( ಮಿತ್ರಃ = ನೇಸರ, ಸೂರ್ಯ ) ಹಾಗೂ ಮಿತ್ರಂ ( = ಗೆಳೆಯ/ತಿ ) ನಪುಂಸಕಲಿಂಗವೂ ಹೌದು. ಹಾಗಿದ್ದಲ್ಲಿ ಇಲ್ಲಿ ಪಿಂಗಳ ನಾಡಿ ಪ್ರಾಧಾನ್ಯವೆಲ್ಲಿದೆ? ಇಲ್ಲವೆ ಹೇಗೆ ಸಮಪ್ರಮಾಣದಲ್ಲಿ....

ಹೀಗೇ, ಸಿಂಹ/ಸಿಂಹಾ, ಶಿವ/ಶಿವಾ, ನೀಲಃ/ನೀಲಾ/ನೀಲಂ ಎಲ್ಲೆಲ್ಲ ನಾಡಿ ಪ್ರಾಧಾನ್ಯವನ್ನು ಹೇಗೆ ಪತ್ತೆ ಹಚ್ಚುವುದು?

ಹಾಗೂ ಸಂಸ್ಕೃತದ ಲಿಂಗವ್ಯವಸ್ಥೆಗೂ, ಅದರಿಂದ ಬಂದಿದೆ ಎಂದು ಹೇಳಲಾಗಿರುವ ಹಿಂದಿ, ಮರಾಟಿ ಮುಂತಾದ ಭಾಷೆಗಳ ಲಿಂಗವ್ಯವಸ್ಥೆಗೂ ಯಾಕೆ ವ್ಯತ್ಯಾಸಗಳಿವೆ?

ಹಾಗೂ ಶಾಸ್ತ್ರೀಯ ಸಂಸ್ಕೃತದಲ್ಲಿ ’ಬಾಯಿ’ ಎಂಬುದಕ್ಕೆ ಪದವೇಕಿಲ್ಲ?

ಮತ್ತೂ ಉಪಸರ್ಗಗಳ ವರ್ತನೆಗಳಿಗೇಕೆ ತರ್ಕಬದ್ಧ, ನಿರ‍್ಧರಣೀಯ ಸೂತ್ರಗಳಿಲ್ಲ?

ಹಾಗೂ ಋಷಿ ಮತ್ತು ರುಶಿ, ವೈನು/ವಯ್ನು, ಔನು/ಅವ್ನು ಇವುಗಳಿಗೆ ಯಾಕೆ ಉಚ್ಚಾರಣೆಯಲ್ಲಿ ವ್ಯತ್ಯಾಸಗಳಿಲ್ಲ?

ಅದಲ್ಲದೇ ನ್(ರಾಜನ್..), ಸ್(ಮನಸ್), ತ್(ಪರಿಷತ್) ಕಾರಾಂತ ಶಬ್ದಗಳು, ಹೇಗೆ ನ್, ಸ್, ತ್.. ಕಾರಾಂತಗಳೆಂದು ನಿರ್ಧರಿತವಾದವು..

ಸತ್ಯಮೇವ ಜಯತೇ ಅಂದರೆ "ಸತ್ಯವನ್ನೇ ಗೆದ್ದುಕೊಳ್ಳುತ್ತದೆ" ಹಾಗೂ "ಸತ್ಯವೇ ಗೆದ್ದುಕೊಳ್ಳುತ್ತದೆ" ಎಂಬ ಎರಡೂ ಅರ್ಥವೂ ಬರುವುದಲ್ಲ. ಅದು ಯಾಕೆ?

ಹಾಗೇ ಫಲಂ ಪತತಿ = ಹಣ್ಣು ಬಿತ್ತು/ಹಣ್ಣನ್ನು ಬಿತ್ತು, ಫಲಂ ಖಾದತಿ = ಹಣ್ಣು ತಿಂದಿತು/ಹಣ್ಣನ್ನು ತಿಂದಿತು ಎಂಬ ಗೊಂದಲಗಯ್ಯುವ ಅರ್ಥಗಳನ್ನು ಸಂಸ್ಕೃತವ್ಯಾಕರಣಾನುಸಾರವೇ ತೆಗೆಯಬಹುದಲ್ಲ. ಇದು ಯಾಕೆ? ಕನ್ನಡದಲ್ಲಿ ಯಾಕೆ ಇಂತಹ ಗೊಂದಲಗಳಿಲ್ಲ?

ಹಾಗೇ ಸಿಂಹ, ಹಂಸ, ಕಂಸ, ಸಂಹಿತ, ಸಂವಾದ.. ಗಳನ್ನು ಸಿಮ್ಹ, ಹಮ್ಸ, ಕಮ್ಸ, ಸಮ್ಹಿತ, ಸಮ್ವಾದ ಎಂದು ಸಂಸ್ಕೃತದಲ್ಲಿ ಬರೆದೂ, ಉಚ್ಚಾರ ಮಾಡಿದರೂ ಯಾಕೆ ತಪ್ಪು?

"ಭಾರತೀಯ ವ್ಯಾಕರಣ (ದೀನ,ದಲಿತ,ಕವಿ ಇತ್ಯಾದಿ ಲೋಕದ ಸ್ತ್ರೀ, ಪುರುಷರೆಲ್ಲರ)ದೇಹದಲ್ಲಿ ಹರಡಿರುವ ಅಕ್ಷರ ಸಮೂಹದಲ್ಲಿ, ನಾದಕ್ಕೆ ಕಾರಣವಾದ ಅನಲ ಅನಿಲದಲ್ಲಿ ವ್ಯಕ್ತವಾಗಿದೆ."

ಇನ್ನು ಭಾರತೀಯ ಭಾಷೆಗಳಾದ ಕನ್ನಡ, ತಮಿಳಾದಿಗಳಲ್ಲಿ ಮಹಾಪ್ರಾಣ, ಋ, ೠ, ಲೃ, ಲೄ, ಷ, ವಿಸರ್ಗಗಳಿರುವ ಪದಗಳೇ ಇಲ್ಲವಲ್ಲ. ಹಾಗೇ ಸಂಸ್ಕೃತದಲ್ಲಿ ಒ, ಎ, ಳ, ೞ, ಱ ಕಾರಗಳು ಯಾಕಿಲ್ಲ? ಅರುಹುವಿರ?

ನನ್ನಿ!

VSgoogler ಅಂತಾರೆ...

maaysa avare,
ದಯವಿಟ್ಟು ನಾನು ಬರೆದದ್ದನ್ನು ಮತ್ತೊಮ್ಮೆ ಪರಿಶೀಲಿಸಿ. ನಿಮ್ಮ ಪ್ರಶ್ನೆಗಳು ಚೆನ್ನಾಗಿದೆ ಆದರೆ ಅದು ನನ್ನ ಬರೆಹದ ದ್ಯೇಯವಲ್ಲ. ನಾನು ಬರೆದ ವಿಚಾರಗಳ ಗ್ರಂಥ ಸಂಸ್ಕೃತದಲ್ಲಿದೆ. ಅದನ್ನು ತಿಳಿದುಕೊಳ್ಳಲು ಆ ಭಾಷೆ ಮತ್ತು ಆ ಸಂಸ್ಕ್ರತಿಯ ಅಗತ್ಯವಿದೆ, ಹಾಗೂ, ಈ ಲಿಂಗ ವೈವಿಧ್ಯ ವಿಚಾರ ನನಗೆ ಎಲ್ಲೂ ಕಂಡಿಲ್ಲ ಎಂಬುದು ನನ್ನ ಬರಹದ ತಾತ್ಪರ್ಯ. ಈ ವಿಚಾರ ಹಾಗೆ ಕಾಣದೆ, ಕನ್ನಡದಲ್ಲೇನಿದೆ, ತಮಿಳಿನಲ್ಲೇನಿದೆ ಯಾವ ಅಕ್ಷರವಿದೆ ಇಲ್ಲ ಎನ್ನುವ ವಿಷಯವಾಗಿ ತೋರಿಬಂದಿದದ್ದರೆ ತಮ್ಮಲ್ಲಿ ಕ್ಷಮೆಯಾಚಿಸುತ್ತೇನೆ. (I am aware that my Kannada (my mother tongue) may not be adequate to convey my thoughts effetively. I am putting in a lot of effort to correct that inadequecy. Please let me know if the usage of ’ಭಾರತೀಯ ವ್ಯಾಕರಣ’ bothers you. This usage refers to ವ್ಯಾಕರಣ from ಮಾಹೇಶ್ವರ ಸೂತ್ರ). ನನ್ನ ಪ್ರಯೋಗಿಕ ಯತ್ನ ಸಫಲ ವಾದಾಗ ನಿಮ್ಮ ಕೆಲವು ಪ್ರಶ್ನೆಗಳಿಗೆ ಉತ್ತರ ಕೋಡುತ್ತೇನೆ (ಪ್ರಾಯೋಗಿಕವಾಗಿ ತೋರಿಸಿಕೋಡುತ್ತೇನೆ). ಹಾಗೂ,ತಮಿಳು, ಹಿಂದಿ,ಕನ್ನಡ ಹಾಗು ಸಂಸ್ಕೃತ ಭಾಷೆಗಳ ಸಂಬಂಧವನ್ನು ವಿಮರ್ಶೆ ಮಾಡ ಬಹುದು.

(Please Note: I am not expert in Sanskrit or Veda or Hinduism or anything else for that matter. My writing will, hopefully, show the need for expertise in languages which describes our Dharma)

ನಿಮ್ಮ "ಸತ್ಯಮೇವ ಜಯತೆ" ಉದಾಹರಣೆ ಸಂಸ್ಕೃತ ಮತ್ತು ಸಂಸ್ಕೃತಿಯ ಅಗತ್ಯ ಎತ್ತಿ ತೋರಿಸುತ್ತದೆ. ನಾನು ಸಹ ಬಹಳಕಾಲ ಇದರ ಬಗ್ಗೆ ಯೋಚನೆ ಮಾಡಿದ್ದೆ. ನನ್ನ(Out of context)ಪ್ರತಿಪದಾರ್ಥವೂ ನಿಜ, ಸೋಲು, ಗೆಲೆವು ಇತ್ಯಾದಿಗಳಗಿತ್ತು. ಆದರೆ ಜ್ಞಾನಿಗಳ ವಿಚಾರಧಾರೆಯಲ್ಲಿ (in the context of the quotation - which is Upanishad)ಸೋಲು ಗೆಲುವು ಅದರ ಅರ್ಥವಲ್ಲ. ಸತ್ಯವನ್ನು ’ಸತ್ ತೀ ಯಂ’ ಎಂದು ಮೂರು ಅಕ್ಷರಗಳಾಗಿ ವಿಂಗಡಮಾಡುತ್ತಾರೆ.

ತಾನಿ ಹ ವಾ ಎತಾನಿ ತ್ರೀಣ್ಯಕ್ಷರಾಣಿ ಸತ್-ತೀ-ಯಮ್ ಇತಿ ||
ತದ್ಯತ್ ಸತ್ ತದಮೃತಮ್
ಅಥ ಯತ್ ತೀ ತನ್ಮರ್ತ್ಯಮ್
ಅಥ ಯತ್ ಯಮ್ ತೇನೋಭೇ ಯಚ್ಛತಿ
ಯಧನೇನೋಭೇ ಯಚ್ಚತಿ
ತಸ್ಮಾಧ್ಯ ಮಹರಹರ್ವಾ ಏವಮ್ ವಿತ್ ಸ್ವರ್ಗಮ್ ಲೋಕಮೇತಿ ||
{ಛಂದೊಗ್ಯ ಉಪನಿಷದ್ ೮.೨.೫ }

ಇದರ ಅರ್ಥ ಬೇರೆಯಾಗಿದೆ- ಸಂಸ್ಕೃತ ಪಂಡಿತರನ್ನು ಕೇಳಿ ತಿಳಿಯಬಹುದು. ನಮ್ಮ ಸಂಸ್ಕೃತಿಯನ್ನು ತಿಳಿಯಲು ನನ್ನ ಹೊರನಾಡ ಅಧ್ಯಯನದಲ್ಲಿ ಈ ರೀತಿಯ ವಿಪರಿತಾರ್ಥಗಳು ಬಹಳವಾಗಿ ಕಂಡು ಬಂದುದರಿಂದ ನನ್ನ ಒಕ್ಕಣೆಯನ್ನು ಮುಂದಿಟ್ಟಿದ್ದೇನೆ.

ವಿಶ್ವ
viswa.sharma@gmail.com

Anonymous ಅಂತಾರೆ...

ವಿಶ್ವ ಶರ್ಮರೇ,

ಮೊದಲನೆಯದಾಗಿ ನೀವು ನನ್ನ ಪ್ರಶ್ನೆಗಳಗಿಗೆ ಯೋಗ್ಯೋತ್ತರಗಳನ್ನು ಒದಗಿಸುವ ಗೋಚಿಗೇ ಹೋಗಿಲ್ಲ. ಬಹುಶಃ ನಿಮ್ಮ ಕೈಯಲ್ಲದಾಗಿಲ್ಲ. ಹಾಗೂ ನಿಮಗಾ ಸಾಮರ್ಥ್ಯವಿಲ್ಲವೆಂದು ನೀವೇ ಅರುಹಿಕೊಂಡಿದ್ದೀರಿ.

ಏನ್ಗುರುವಿನಲ್ಲಿ ಬರಹಗಳನ್ನು ಬರಹಗಳನ್ನು ಬರೆಯುವವರಿಗೆ ತಕ್ಕಮಟ್ಟಿನ ಸಂಸ್ಕೃತ ಜ್ಞಾನವೂ ಇದೆ.

"I am aware that my Kannada (my mother tongue) may not be adequate to convey my thoughts effetively"
ಮೊದಲು ಕನ್ನಡದಲ್ಲಿ effective ಆಗಿ ಬರೆಯುವದನ್ನು ಕಲಿಸುವ ಮೊಗಸು ಮಾಡಿರಿ. ಏಕೆಂದರೆ ಅದು ನಿಮ್ಮ ತಾಯ್ನುಡಿ. ತಾಯ್ನುಡಿಯ ತರುವಾಯ ಬೇಕಾದ ನುಡಿಯನ್ನು ಕಲಿಯಬೇಕಾದುದು ಎಲ್ಲ ತಾಯ್ನುಡಿಪ್ರೇಮಿಯ ಆದ್ಯತೆ ಹಾಗು ಕರ‍್ತವ್ಯ.

ಉತ್ತರಿಸಲಾಗದೇ ಇರುವುದಕ್ಕೆ ಶ್ಲೋಕಗಳನ್ನು ಉಲ್ಲೇಖಿಸುವುದರಿಂದ ಏನು ಪ್ರಯೋಜನ? ಅದೂ ನೀವು ಆ ಕ್ಷೇತ್ರದಲ್ಲಿ ತಕ್ಕಮಟ್ಟಿನ ಬಲ್ಮೆ ಇಲ್ಲವೆಂದು ಹೇಳಿಕೊಂಡು....

ನಿಮ್ಮ ಅಧ್ಯಯನದ ಕುರಿತು ಇಲ್ಲಿ ಯಾರು ಮಾತಾಡುತ್ತಿಲ್ಲ. ನಿಮ್ಮ ಅಧ್ಯಯನ ಇಲ್ಲಿಯ ವಿಷಯವೂ ಅಲ್ಲ ಹಾಗೂ ಅದರ ಪ್ರಸ್ತಾಪ ಅಸಂಗತವಿಲ್ಲಿ.

ನಿಮ್ಮ ಮಾತುಗಳನ್ನೆಲ್ಲ ಗಮನಿಸಿದರೆ, ಅದರಲ್ಲಿ ಒಂದು ಸಾಲು ಸಂಸ್ಕೃತದಿಂದ ಕನ್ನಡಭಾಷೆಗೇನು ಪ್ರಯೋಜನವೆಂಬ ಒಂದೂ ಸಾಲಿಲ್ಲ. ಹಾಗಾಗಿ ಅದು ಈ ಬರಹಕ್ಕೆ ಸಂಬಂಧಿಸದಂತೆ ತೋರುತ್ತಿಲ್ಲ. ಸುಮ್ಮನೆ digressing ಆಗಿದೆ.

ಹೇಗೆ ಪ್ರಪಂಚದ ಪ್ರತಿಯೊಂದು ಭಾಷೆಯಲ್ಲಿ ಜ್ಞಾನವಿದೆಯೋ ಹಾಗೇ ಸಂಸ್ಕೃತದಲ್ಲೂ ಇದೆ. ಆದುದರಿಂದ ಸಂಸ್ಕೃತ ಈ ಬಗೆಯಲ್ಲಿ ವಿಶೇಷವೂ ಅಲ್ಲ, ವಿಶಿಷ್ಟಾದ್ಯತೆಗಳಿಸ ಯೋಗ್ಯವೂ ಅಲ್ಲ.

ಅಂದ ಹಾಗೆ ಛಂದೊಗ್ಯ ಎಂಬುದು ತಪ್ಪು, ಛಂದೋಗ್ಯ ಎಂಬುದು ಸರಿ.. ಸಂಸ್ಕೃತದಲ್ಲಿ ಈ ಬಗೆಯ ತಪ್ಪುಗಳು ಸಾಧುವಲ್ಲ. ಹಾಗೆ ಎತಾನಿ, ಯಚ್ಚತಿ, ಮುಂತಾದವು ನೀವು ಬರೆದ ಶ್ಲೋಕದಲ್ಲಿ ಮೇಲ್ಮೇಲೇ ಕಾಣುವ ತಪ್ಪುಗಳು. ವೇದವಾಕ್ಯವನ್ನು ಹೀಗೆ ದೋಷಭರಿತವಾಗಿ ಬರೆದುದು ಸೂಕ್ತವೇ? ನೀವೇ ಯೋಚಿಸಿಕೊಳ್ಳಿರಿ. ಇಷ್ಟೊಂದು ತಪ್ಪುಗಳು!

ನಿಮ್ಮ ಮಾತುಗಳು, ಸುಮ್ಮನೇ ಈ ಬರಹದ ಮಾತುಕತೆಯ ಹಾದಿ ತಪ್ಪಿಸಿದವು. ನಿಮ್ಮಿಂದ ನನ್ನ ಸಂಸ್ಕೃತದ ಬಗ್ಗೆ ಇರುವ ಗೊಂದಲಗಳ ನಿವಾರಣಾಯತ್ನ ವಿಫಲವಾಯಿತು.

ಬರಹದ ಬಗ್ಗೆಯ ಮಾತುಕತೆಯ ಹಾದಿಯನ್ನು ತಪ್ಪಿಸಿದಕ್ಕೆ ವಿಶ್ವಶರ್ಮರಿಗೆ ನನ್ನ ಪ್ರಶ್ನೆಗಳೂ ಕಾರಣವಾಗಿರಬಹುದು. ದಯವಿಟ್ಟು ಎಲ್ಲರೂ ಮನ್ನಿಸಿರಿ.

ಇನ್ನೂ ಈ ಬರಹದಲ್ಲಿ ರಂಗನಾಥರು ಸಮರ್ಥವಾಗಿ ತಮ್ಮ ವಾದವನ್ನು, ಅರಿಮೆಯನ್ನು ಮುಂದಿಟ್ಟಿದ್ದಾರೆ. ಹಾಗೂ ಏನ್ಗರುವಿನಲ್ಲಿ ಬಂದ ಬರಹಗಳು ಸಂಸ್ಕೃತ ವಿವಿ ಯಾಕೆ ಬೇಡ ಎಂಬುದನ್ನು ತರ್ಕ ಹಾಗೂ ವಿವೇಕಬದ್ಧವಾಗಿ ವಿವರಿಸಿದೆ.

ನನ್ನಿ!

VSgoogler ಅಂತಾರೆ...

maaysa avare,
ನಾನು ಸಹ ನಿಮ್ಮ ಬ್ಲಾಗ್ ವಿಷಯಗಳನ್ನು ನೋಡಿ ಇದೇ waist of time ಎಂಬ ನಿರ್ಧಾರಕ್ಕೆ ಬಂದಿದ್ದೆ. ಈ ಶ್ಲೋಕವನ್ನೂ 'ಕನ್ನಡದ ಪಂಡಿತರು' ತೋರಿಸಿದ ಹಾಗೆ ಬರೆದಿದ್ದೇನೆ. ನಿಮಗೆ ಮಿತಿಮೀರಿದ ಕೋಪಬಂದತೆ ಕಾಣುತ್ತದೆ. ಅದೇ ಉದ್ದೇಶ (ತಪ್ಪುಗಳ ಮೇಲೂ ಇಲ್ಲಿ ಪ್ರಸ್ತಾಪವಿದೆ).

ವೇದ ವಾಕ್ಯವನ್ನು ಅರ್ಥ ಮಾಡಿಕೊಳ್ಳದೆ ಕೇಳಿದ ಸತ್ಯದ ಪ್ರಶ್ನೆ ಸರಿಯೆ? ಇಲ್ಲಿ ಪಾಣಿನಿಯ ವ್ಯಾಕರಣಕ್ಕೆ ಸಿದ್ಧಾಂತದ ಅಧಾರವಿಲ್ಲ,ಇತ್ಯಾದಿ ಪ್ರಸ್ತಾಪಗಳು ಇವೆ. ಇದು ಸರಿಯೆ? ’ದೇವ ಭಾಷೆ’ ಪ್ರಸ್ತಾಪವಿದೆ. ದೇವಭಾಷೆ ಎಂದು ಏಕನ್ನುತ್ತಾರೆ? ಅದಕ್ಕೇನೂ ಇಲ್ಲಿ ಅಧಾರವಿಲ್ಲ. ಅದು ಸರಿಯೇ? ಕಾದ ಸೀಸದ ಕಿವಿಗೆ ಹಾಕುವ ಬಗ್ಗೆ ಪ್ರಸ್ತಾಪವಿದೆ ಅದು ನಿಜವೇ? ಶಂಕರರ ಬಗ್ಗೆ ಆ ಅಪವಾದ ಕೇಳಿದ್ದೇನೆ. ಅಡರೆ ಮನೀಷ ಸ್ತೊತ್ರವನ್ನೂ ನೋಡಿದ್ದೇನೆ. ಈ ಪ್ರಸ್ತಾಪಗಳನ್ನು ನೋಡಿದವರಿಗೆ ಬ್ರಾಂತಿಯಾಗಬಹುದು. ಈ ರೀತಿ ತಫ್ಫುಗಳನ್ನು ಸರಿಪಡಿಸಿಕೊಳ್ಳಲು ಬರೆಯುವರಿಗೂ, ಓದುಗರಿಗೂ ಸಂಸ್ಕೃತ ಮತ್ತು ಸಂಸ್ಕೃತಿ ಬಗ್ಗೆ ಜ್ಞಾನವಿರಬೇಕು. ನಾನು ಕಲಿಯುತ್ತಿರುವ ಕನ್ನಡ ಪುಸ್ತಕದಲ್ಲಿ(ಕನ್ನಡ ಕೈಪಿಡಿ-೧ ಮತ್ತು -೨ ಗಳಲ್ಲಿ) ಸಾಹಿತ್ಯದ ಬಗ್ಗೆ ವಿಚಾರಗಳಿವೆ. ಸ್ತಾಯೀಭಾವ, ನವರಸ, ಸಂಚಾರಿಭಾವ, ಇತ್ಯಾದಿಗಳ ವಿಚಾರವನ್ನು ಸಂಸ್ಕೃತ ದಿಂದ ತೆಗದು ಕೊಂಡಂತೆ ಕಾಣುತ್ತೆ. ಕನ್ನಡದಲ್ಲಿ ಬರುವ ಕಾದಂಬರೀ ಪದವೂ ಸಂಸ್ಕೃತ ದಿಂದ ಬಂದಿದೆ. ಚಂಪು ಕಾವ್ಯ ಕನ್ನಡದಿಂದ ಸಂಸ್ಕೃತಕ್ಕೆ ಕೊಡುಗೆಯಾಗಿದೆ. ಈ ವಿಚಾರಗಳನ್ನು ನೋಡಿ, ಕನ್ನಡ ಅಕ್ಷರ ಮಾಲೆ ಯನ್ನು ನೋಡಿ, ನಾನು ಮಾಹೇಶ್ವರ ಸೂತ್ರದಿಂದ ಸಂಸ್ಕೃತ ಹಾಗು ಕನ್ನಡ ಅಕ್ಷರ ಮಾಲೆ ಬಂದಿರಬಹುದೇ ಎಂಬುದನ್ನು ತನಿಖೆ ಮಾಡುತಿದ್ದೇನೆ. ಇದಕ್ಕೇ ಆಧಾರ ಯಾಮಳದಲ್ಲಿ ಸಿಗುತ್ತದೆ. ಮತ್ತು ಹೆಚ್ಚಿನ ಆಧಾರಕ್ಕೆ ವಿಷಯಗಳನ್ನು ಹುಡುಕುತ್ತಿದ್ದೇನೆ. ಹಾಗೆಯೆ ಹುಡುಕುತ್ತ ನಿಮ್ಮ ಬ್ಲಾಗ್ಗೆ ಬಂದು ಎಲ್ಲೂಕಾಣದ ಸಣ್ಣದೊಂದು ಲಿಂಗ ವೈವಿದ್ಯದ ವಿಷಯ ಬರೆದೆ. ಇದ್ದಕ್ಕೆ ನಿಮ್ಮ ಪ್ರಶ್ನೆ ಬಂದ ನಂತರ ತಾತ್ಪರ್ಯ ಬರೆದೆ, ನನ್ನ ಪಾಂಡಿತ್ಯ ಪ್ರದರ್ಶನಕ್ಕಲ್ಲ.

ಸಂಸ್ಕೃತ ಭಾಷೆಯ ಲಿಂಗ ವೈವಿಧ್ಯ ವನ್ನು ಪ್ರಾಯೋಗಿಕವಾಗಿ ತೋರಿಸಬಹುದೆಂದರೆ, ಅದು ಸಣ್ಣ ಮಾತೇನು ಅಲ್ಲ.

ನಾನು ಸುಮಾರು ನಲವತ್ತು ವರ್ಷಗಳ ಕಾಲ computer research and development ಬಗ್ಗೆ ಕೆಲಸ ಮಾಡಿ, logic ಬಗ್ಗೆ ಸ್ವಲ್ಪ ಅರ್ಥ ಮಾಡಿಕೊಂಡಿದ್ದೇನೆ. ಈ ವಿಚಾರಗಳು ಹೇಗೆ ಸಂಸ್ಕೃತ ಅಧ್ಯಯನಕ್ಕೆ ಸಂಬಂಧಿಸಿಲ್ಲ ಎಂಬುದು ಗೊತ್ತಾಗಲಿಲ್ಲ.

ಕನ್ನಡ ಕಂದ ಪದ್ಯ, ಶಟ್ಪದಿ, ಇತ್ಯಾದಿಗಳನ್ನು ಕಲಿಯುತ್ತಿದ್ದೇನೆ. ವಿಮರ್ಶೆಮಾಡುವರು ತಮಗೆ ಗೊತ್ತಿದರೆ ತಿಳಿಸಿ. ಕಲಿಯುವುದಕ್ಕೆ ಅನುಕೂಲವಾಗುತ್ತದೆ.

ಇಲ್ಲಿಗೆ ಇದನ್ನು ನನ್ನ ಕಡೆಯಿಂದ ಕೊನೆ ಮಾಡುತ್ತೇನೆ. ಬೇಕಾದವರು ವಾದ ಮಾಡುವುದಕ್ಕೆ ನನ್ನ E mail ಕೊಟ್ಟಿರುತ್ತೇನೆ.
ವಿಶ್ವ,
viswa.sharma@gmail.com

Anonymous ಅಂತಾರೆ...

ವಿಶ್ವ


ಈ ನನ್ನ ಕಮೆಂಟು ಇಲ್ಲಿಯ ಮಾಡರೇಟರ‍್ ಪ್ರಕಟಿಸದೇನೇ ಹೋಗಬೋದು...

ಆದರೆ ಇದು ಹೇಳಲೇ ಬೇಕಿದೆ.. ನನ್ನ ಬ್ಲಾಗಗಳಲ್ಲಿರುವ ವಿಷಯಕ್ಕೂ ಇಲ್ಲಿರುವ ವಿಷಯಕ್ಕೂ ಯಾವುದೇ ಸಂಬಂಧವಿಲ್ಲ. ಅದಕ್ಕೂ ನಿಮಗೂ ಸಂಬಂಧವಿಲ್ಲ.

ಅಂದ ಹಾಗೆ.. ನಲವತ್ತು ವರ್ಷ ಅದೇ ಗೆಣಸು ಕೊರೆದಿದ್ದೀರಲ್ಲ ಮೊದಲು, "Waist of time" ಅಂದರೇನು ಎಂದು ತಿಳಿಸಿರಿ..

ನೀವು ಬರೆಯುವ ಕಾಗಕ್ಕ ಗುಬ್ಬಕ್ಕ ಕತೆಗಳನ್ನು, ಹುರುಳಿಲ್ಲದ ವಾದಗಳನ್ನು ಪ್ರಶ್ನೆಸಿದರೆ ತವುಡುಕೊಟ್ಟುವ ಕೆಲಸ ಮಾಡುವಿರಿ.. ಈಗ ನನ್ನ ವೈಯಕ್ತಿಕವಿಷಯಗಳಿಗೆ ಕೈ ಹಾಕುತ್ತಿದ್ದೀರಿ.. :D

ನಿಮ್ಮ ಮಾತುಗಳಲ್ಲಿ ಪಾಂಡಿತ್ಯವೂ, ವಿಷಯವೂ ಇಲ್ಲ ತರ್ಕವಾಗೂ ಇಲ್ಲ. ಬರೀ ಏನೋ ತೊದಲಿಕೆ. ಅದಕ್ಕೆ ಸಭ್ಯತೆ ಮುಸುಕು ಹಾಗೂ ನನ್ನ ವೈಯಕ್ತಿಕ ಟೀಕೆ ಮಾಡಿ ಗಮನ-ಬದಲಿಸುವ ಕುಬುದ್ಧಿ.

"ಇಲ್ಲಿಗೆ ಇದನ್ನು ನನ್ನ ಕಡೆಯಿಂದ ಕೊನೆ ಮಾಡುತ್ತೇನೆ. ಬೇಕಾದವರು ವಾದ ಮಾಡುವುದಕ್ಕೆ ನನ್ನ E mail ಕೊಟ್ಟಿರುತ್ತೇನೆ.
ವಿಶ್ವ,"

ಸದ್ಯ.. ಇಲ್ಲಿ ಪೊಳ್ಳು ತುಂಬುವುದು ನಿಲ್ಲಿತು. ನಿಮ್ಮ ಜತೆ ವಾದ ಮಾಡಲು ನೀನು ಯೋಗ್ಯರೆನಿಸಿಲ್ಲ. ಮೊದಲು ಕನ್ನಡದಲ್ಲಿ ಸರಿಯಾಗಿ ಸಮಪರ್ಕವಾಗಿ ವ್ಯವಹರಿಸುವುದನ್ನು ಕಲಿತು, ಸಂಸ್ಕೃತ ಶ್ಲೋಕಗಳನ್ನು, ಇಂಗ್ಲೀಶ್-ಪದಗಳನ್ನು, ತಪ್ಪಿಲ್ಲದೇ ಬರೆಯುವುದನ್ನು ಹಾಗೂ ಲಾಜಿಕ್ಕಿಂದ ಮಾತಾಡುವುದನ್ನೂ ಕಲಿತು ಅದನ್ನು ಏಲ್ಲಾದರು ಪ್ರದರ್ಶಿಸಿದಾಗ ನೋಡೋಣ.

ಯೋಚಿಸಬೇಡಿ.. ನಿಮಗೆ ಈ-ಮೇಲ್ ಮಾಡಿ time waist :D ಮಾಡಿಕೊಳ್ಳಲ್ಲ. ಹಾಗೇ ನೀವು logicಅನ್ನು ಎಷ್ಟು ಚನ್ನಾಗಿ ಅರ್ಥ ಮಾಡಿಕೊಂಡಿದ್ದೀರಿ ಎಂದು ನಿಮ್ಮ ಮಾತುಗಳು ತೋರಿಸಿವೆ. :D

ಬಹುಶಃ ಈ ಜನ ತನ್ನ ದಿಟವಾದ ಹೆಸರನ್ನೂ ಹೇಳಿಕೊಂಡಿಲ್ಲ! ಹೆಸರು ನೋಡಿದರೆ ಅನುಮಾನ.

ವಿಶ್ವ ಶರ್ಮರು ತಮ್ಮ ಹುಟ್ಟಿನಿಂದ ಸರ್ವಜ್ಞ ಎಂದು ಭಾವಿಸಿಕೊಂಡಿರಬಹುದು.. ಎಷ್ಟಾದರೂ ’ಶರ್ಮ’ರಲ್ಲವೇ! ಜನ್ಮತಃ ಬಂದ ಸಂಪ್ರದಾಯ!

VSgoogler ಅಂತಾರೆ...

ಯೇನ್ ಗುರು,
ನನ್ನ ಅನ್ನಿಸಿಕೆಗಳು ಸಭೆಯಮುಂದೆ ನಡೆಯಬೇಕಾದ ಚರ್ಚೆಯಲ್ಲ ವೆಂದು ನನ್ನ ಅಭಿಪ್ರಾಯವಾದುದ್ದರಿಂದ, ನಾನು Maaysa ಅವರಿಗೆ E-Mail ಕಳಿಸಿ ತಿಳಿಸಿದ್ದೇನೆ.
ಈ ರಂಗಕ್ಕೆ ಈ ವಿಚಾರ ಬರೆದಿದ್ದೇನೆ: “waist of time” ಅನ್ನುವುದು phonetically (ದ್ವನಿಯ ನಿರೂಪಣೆ ಪ್ರಕಾರ?) ಸರಿಯಿದ್ದರೂ, ಬರೆಯುವಾಗ ತಪ್ಪಾಗುತ್ತದೆ. ಹಾಗೂ, ಸ್ಪಷ್ಟವಾಗಿ ಒದುಗರಿಗೆ ಅರ್ಥವಾಗುವ ಹಾಗೆ ಬರೆಯದಿದ್ದರೆ, ತಪ್ಪು ಕಲ್ಪನೆಗಳಿಗೆ ಎಡೆಯಾಗಿತ್ತದೆ. ಎಲ್ಲರಿಗೂ ಗೊತ್ತಿರುವ ವ್ಯಾಕರಣ, ಸನ್ನಿವೇಶಗಳ ವಿಸ್ತಾರ ಮತ್ತು ಸ್ಪಷ್ಟತೆ (ಹಾಗೂ ಅವುಗಳ ನಿಯತಿಯು) ಅಗತ್ಯವನ್ನು ಉದಾಹರಣೆ ರೂಪದಲ್ಲಿ ತೋರಿಸಿಕೊಡುವ ಯತ್ನ ಮಾಡಿದ್ದೇನೆ.
ಸಂಸ್ಕೃತ ಬೇಕು ಎಂದರೆ ಕನ್ನಡ ಬೇಡ ಅಂತ ನಾನು ಹೇಳುತ್ತಿಲ್ಲ. ಹೊರದೇಶದಲ್ಲೂ ನಮ್ಮ ನಾಡಾ ನುಡಿ ನಡೆಯನ್ನು ನಮಗೆ ತಿಳಿದಂತೇ ಕಾಪಾಡಿಕೊಂಡು ಬಂದಿದ್ದೇವೆ. ಆದಷ್ಟು ಇತರಿಗೂ (ನಮ್ಮ ದೇಶದ ಇತರ ಪ್ರಾಂತ್ಯಗಳ ಜನ, ಹಾಗೂ ವಿದೇಶಿಯರಿಗೂ) ತಿಳಿಸುತ್ತೇವೆ.
ಬನವಾಸಿ ಬಳೆಗದ ಒಂದು ಗುರಿಯಂತೆ ಪರರ ಅಪಾನ ವಾಯು ಅಸ್ತ್ರಗಳಿಗೆ ಹೇಡಿಗಾಳಾಗಿ ಹಿಂಜರಿಯದೆ - “ಯಾರೊದ್ದರೂ, ಹಾಯ್ದು ತೊರ್ವುದು ಸಹ ನಮ್ರತೆಯಂದು” ಇಲ್ಲಿರುವ ನಮ್ಮೂರಿನ ಜನಕ್ಕೂ ಕಲಿಸಿಕೋಡುತ್ತಿದ್ದೇವೆ.
ವಿಶ್ವ.
ಏನ್ಗುರುಗಳಿಗೆ ಈ ಸಣ್ಣದೋಂದು (ಸಾಗರದಾಚೆಯ ಕಲಾವಿದರ ಅನ್ವೇಷಣೆ ಇಲ್ಲಿ ನಡೆಯತ್ತಿದೆ. ಬಂಧು ಮಿತ್ರರನ್ನು ಆ ಸ್ಪರ್ಧೆಗೆ ಕರೆವ ) ಕವನದೊಂದಿಗೆ ನಿಮಗೆ ಧನ್ಯವಾದ (ವಿ.ಸೂ ಪಾಂಡಿತ್ಯ ಪ್ರದರ್ಷನಕಲ್ಲ. ತಪ್ಪಿದ್ದರೆ ತಿದ್ದಿಕೊಡಿ – ಇದು ನಮ್ಮ ನಾಡಿನ ಕವನ ಹಿರೆಮೆಯನ್ನು ರಚಿಸಿ ಕಲಿಯುವ ಯತ್ನ)
ಅಮೇರಿಕನ್ನಡ ಬಳಗ
(ಕಂದ ಪದ್ಯ)
ಸಿರಿಗನ್ನಡ ನಾದ ಕುಲಕೆ
ಹಿರಿಮಗಳಾಗಲಿ ಅಮೇರಿಕನ್ನಡ ಕೂಟಾ |
ಹೊರನಾಡ ನಡೆನುಡಿಯೊಡನೆ
ಮೊರೆವ ತವರಿನ ಕಲೆ ತಾಯ್ನುಡಿಯನು ಮೆರಸಲೀ ||
ಕಲೆಯನರೆಸುವ ರಸಿಕರಾ
ಆಗಮ ಸಾರಲಿ ಅಮೇರಿಕಲೆಯ ಪ್ರತಿಭೇ |
ಸಾಗರದಾಚೆಯ ಬಳಗದ
ಸೊಗಸಿನುಡುಗರೆಗಳು ಸಿರಿನುಡಿಯ ಶೋಭಿಸಲೀ ||
ಸಪ್ತ ಸ್ವರ ವಿದ್ಯೆಗಳಲಿ
ಸುಪ್ತ ಅಮೇರಿಕುಶಲತೆ ಚಿಲುಮೆಗಳವುಕ್ಕೀ |
ತಪ್ತ ರಸಿಕರ ತೃಷೆಯ
ತೃಪ್ತಿಯನೀವ ರಸದೌತಣದಲಿ ತಣಿಸಲೀ ||

viswa.sharma@gmail.com

Freespirit ಅಂತಾರೆ...

ella ok. saMskRuta vi. vi. tegeyONa. saMskRuta adhyayana mADONa. Adare saMskRutavannu dEvanAgariyalli yAke bareyabEku. saMskRutada heccina graMthagaLu shRutiyiMdallave oMdu pILigeyiMda innoMdu pILigege haraDiddu? namma talemArinalli kannaDa akSharamAleyalli saMskRuta vi.vi.ya ella kelasa kAryagaLu siddhiyAgali. idakke yArige AkShEpaNe? yAke?

Anonymous ಅಂತಾರೆ...

@Freespirit

ಕನ್ನಡ ಲಿಪಿ ಮೊದಲಿಗೆ ಸೃಷ್ಠಿಯಾಗಿದ್ದೇ ಸಂಸ್ಕೃತವನ್ನು ಬರೆಯುವುದಕ್ಕೆ. ಕರ‍್ನಾಟಕದಲ್ಲಿ ಸಿಕ್ಕ ಹಲ ಸಂಸ್ಕೃತ ಶಾಸನಗಳು ಕನ್ನಡಲಿಪಿಯಲ್ಲೇ ಇರೋದು.

ಇನ್ನು ಸಂಸ್ಕೃತದ ಅಧ್ಯಯನ ಮಾಡಬೇಡಿ ಅಂತ ಯಾರು ಹೇಳಿದ್ದೀಗ? ಮೈಸೂರಲ್ಲಿರೋ ಸಂಸ್ಕೃತವಿಭಾಗದಲ್ಲಿ ಓದಕ್ಕೆ ಜನ ಇಲ್ಲದೇ ನೊಣ ಹೊಡೀತಾ ಇದೆ. ನಮ್ಮೂರಲ್ಲೇ ಸಂಸ್ಕೃತ ಓದಕ್ಕೆ ಜನ ಇಲ್ಲದೇ ಇರೋ ಸ್ಕೂಲ್ಗಳಲ್ಲಿ ಸಂಸ್ಕೃತದ ಮೇಶ್ಟ್ರುಗಳು ಹಿಂದಿ ಹೇಳಿಕೊಡ್ತಾ ಇದ್ದಾರೆ.

ಸಂಸ್ಕೃತ ಓದಿ ಆಮೇಲೆ ಏನ್ ಮಾಡ್ತಾರಂತೆ? ಕನ್ನಡನಾಡಾದ ಕರ್ನಾಟಕದಲ್ಲಿ ಕನ್ನಡ ಮೀಡಿಯಮ್ಮಲ್ಲಿ ಓದಿದ್ರೇ ಕೆಲಸ ಸಿಗಲ್ಲ. ಇನ್ನು ಸಂಸ್ಕೃತವನ್ನ ಎಲ್ಲಿ ಬಳಸೋಣ?

ಒಂದು ವೇಳೆ ಒಂದು ವರ್ಷಕ್ಕೆ ೧ ಲಕ್ಷ ಸಂಸ್ಕೃತ ಪದವೀಧರರು ತೇರ‍್ಗಡೆಯಾದರೆ ಅವರಿಗೇನು ಕೆಲಸ ಕೊಡಣ? ಸಂಸ್ಕೃತ ಪದವೀಧರರಿಗೆ ಯಾವ ಖಾಸಗಿ ಸಂಸ್ಥೆಯಲ್ಲಿ ಕೆಲಸ ಸಿಗತ್ತೆ?

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails