ಹೊರದೇಶದೋರ ಕಣ್ಣಲ್ಲಿ ಕನ್ನಡಿಗ!

ಹಂಪಿ ವಿಶ್ವವಿದ್ಯಾಲಯದೋರು ೨೦೦೫ರಲ್ಲಿ ಡಾ. ವಿವೇಕ್ ರೈ ಅವರ ಸಂಪಾದಕತ್ವದಲ್ಲಿ “ಪ್ರವಾಸಿ ಕಂಡ ವಿಜಯನಗರ” ಅನ್ನೋ ಹೆಸರಿನ ಪುಸ್ತಕ ಹೊರತಂದಿದಾರೆ. ಕನ್ನಡದೋರೆಲ್ಲಾ ಒಮ್ಮೆ ಆ ಪುಸ್ತಕ ಓದಲೇ ಬೇಕು ಗುರು! ಅದರಲ್ಲಿ ಬಲು ಸೊಗಸಾಗಿ ನಮ್ಮ ನಾಡಿನ ಬಗ್ಗೆ ಮೈ ಝುಂ ಅನ್ಸೋ ಹಾಗೆ ಬರೆದಿದಾರೆ. ಕರ್ನಾಟಕ ಸಾಮ್ರಾಜ್ಯವನ್ನು ಭೇಟಿ ಮಾಡಿದ ಪರದೇಶಿಯರಲ್ಲಿ ಪ್ರಮುಖರೆಂದರೆ. ಇಬ್-ನೆ-ಬತೂತ, ನಿಕೊಲೋ-ದೆ-ಕೊಂತಿ, ದುಆರ್ತೆ ಬಾರ್ಬೋಸಾ, ಡೊಮಿಂಗೋ ಪ್ಯಾಸ್ ಮೊದಲಾದವರು. ಪರ್ಷಿಯಾ ದೇಶದವನಾದ ಅಬ್ದುಲ್ ರಜಾಕ್‌ನ ಮಾತುಗಳಲ್ಲಿ ಕೆಲವನ್ನು ನೋಡಿ :

ಬಿಜನಗರದಂತಹ ನಗರವನ್ನು ಕಣ್ಣು ಕಂಡಿಲ್ಲ, ಕಿವಿ ಕೇಳಿಲ್ಲ. ಈ ನಗರವನ್ನು ಹೇಗೆ ನಿರ್ಮಿಸಿದ್ದಾರೆಂದರೆ ಏಳು ದುರ್ಗಗಳೂ ಏಳು ಕೋಟೆಗಳೂ ಒಂದನ್ನೊಂದು ಆವರಿಸಿಕೊಂಡಿವೆ. ಒಂದನೆಯ ದುರ್ಗದ ಸುತ್ತ ಮನುಷ್ಯನ ಎತ್ತರದ ಕಲ್ಲು ಕಂಭಗಳನ್ನು ಭೂಮಿಯಲ್ಲಿ ಅರ್ಧ ಹೂತು ಇನ್ನರ್ಧ ಮೇಲೆ ಕಾಣುವಂತೆ ನೆಟ್ಟಿರುವರು. ಇವುಗಳನ್ನು ಒಂದರ ಪಕ್ಕ ಒಂದರಂತೆ ಹೇಗೆ ಹೂತಿದ್ದಾರೆಂದರೆ, ರಾವುತನಾಗಲೀ ಪದಾತಿಯಾಗಲೀ ಧೈರ್ಯವಾಗಿ ಅಥವಾ ಸುಲಭವಾಗಿ ದುರ್ಗದ ಕಡೆ ಹೋಗುವಂತಿಲ್ಲ. ಈ ಕೋಟೆ ಚಕ್ರಾಕಾರವಾಗಿದೆ. ಇದನ್ನು ಬೆಟ್ಟದ ತುದಿಯ ಮೇಲೆ ಕಲ್ಲು ಮತ್ತು ಗಾರೆಗಳಿಂದ ಕಟ್ಟಿದ್ದಾರೆ. ಇದರ ಹೆಬ್ಬಾಗಿಲುಗಳು ಬಲು ಬಲವಾಗಿವೆ. ಈ ಹೆಬ್ಬಾಗಿಲುಗಳನ್ನು ಒಂದೇ ಸಮನೆ ಕಾಯುತ್ತಿರುತ್ತಾರೆ. ಯಾರನ್ನೂ ಪೂರ್ಣಪರೀಕ್ಷೆ ಮಾಡದೆ ಒಳಗೆ ಬಿಡುವುದಿಲ್ಲ...

ಅರಮನೆಯ ಆನೆಗಳಿಗೆ ಕಿಚಡಿಯನ್ನು ತಿನ್ನಿಸುತ್ತಾರೆ. ಇ‌ದನ್ನು ತಾಮ್ರದ ಹಂಡೆಗಳಲ್ಲಿ ಬೇಯಿಸಿ ಆನೆಗಳ ಮುಂದೆಯೇ ಹೊರಗೆ ತೆಗೆದು, ಹರಡಿ ಅದರ ಮೇಲೆ ಉಪ್ಪನ್ನೂ ಸಕ್ಕರೆಯನ್ನೂ ಎರಚಿ ಚೆನ್ನಾಗಿ ಕಲಸುತ್ತಾರೆ. ಹೀಗೆ ಕಲಸಿದ ಮೇಲೆ ಅದನ್ನು ಎರಡು ಮಣದಷ್ಟು ತೂಕದ ಉಂಡೆಗಳನ್ನಾಗಿ ಮಾಡುತ್ತಾರೆ. ಈ ಉಂಡೆಗಳನ್ನು ತುಪ್ಪದಲ್ಲಿ ಅದ್ದಿ ಆನೆಯ ಬಾಯೊಳಗೆ ಇಡುತ್ತಾರೆ...

ಹೀಗೆ ವಿಜಯನಗರದ ಪ್ರತಿ ವಿವರವೂ ಇಲ್ಲಿ ದಾಖಲಾಗಿದೆ. ಅಂದಿನ ಸಾಮಾಜಿಕ ಜೀವನ, ಸಾಹಸ, ವೈಭವ, ಇತಿಹಾಸ, ಕ್ರೌರ್ಯ, ಮೌಢ್ಯ ಎಲ್ಲವನ್ನೂ ಓದ್ತಾ ಇದ್ರೆ ಮೈಮೇಲೆ ಮುಳ್ಳೇಳುತ್ತೆ ಗುರು! ಈ ಪುಸ್ತಕಾನ ಮುಂದಿನ ಸಲ ಹಂಪೆಗೆ ಹೋದಾಗ ಖಂಡಿತಾ ಕೊಳ್ಳಿ. ಇದು ನಿಮ್ಮ ಹತ್ತಿರದ ಪುಸ್ತಕದ ಅಂಗಡಿಯಲ್ಲಿಯೂ ಸಿಗಬಹುದು. “ಪ್ರವಾಸಿ ಕಂಡ ವಿಜಯನಗರ” ಹೊತ್ತಿಗೆ ಮನೆಗೊಂದು ಶೋಭೆ.

8 ಅನಿಸಿಕೆಗಳು:

PrashanthKannadaBlog ಅಂತಾರೆ...

ಪುಸ್ತಕದ ವಿವರಣೆ ಕುತೂಹಲ ಕೆರಳಿಸಿತು. ಖಂಡಿತಾ ಹುಡಿಕಿ ತಂದು ಓದಬೇಕು.

Anonymous ಅಂತಾರೆ...

ಏನ್ಗುರು...

ನನಗೆ ಈ ಚರಿತ್ರೆ ಬಗ್ಗೆ ಮೊದಲಿಂದಲೂ ಒಂದು ಬಗೆಯ ಬೇರೆಯದೇ ಅನಿಸಿಕೆ ಇದೆ. ಅದು ಹಲವರಿಗೆ ಒಗ್ಗದೇ ಹೋದರೆ ಅದಕ್ಕೆ ಈಗಲೇ ಮನ್ನಿಪು-ಕೇಳಿಕೊಂಡು-ಬಿಡುತ್ತೇನೆ.

ಯಾವಾಗಲೂ ಚರಿತ್ರೆ, ಅದರಲ್ಲೂ ನಮ್ಮ ಇಂಡಿಯದ ಚರಿತ್ರೆ, ಬರೀ ಅರಸತನದ, ಅರಸರ, ಅವರ ಮೋಜಿನ ಬದುಕಿನ ಸುತ್ತಲೇ ಇರುತ್ತೆ ಹಾಗೂ ಅದನ್ನೇ ಮರೆಸುತ್ತದೆ. ಅದು ಎಂದೂ ಆ ಹೊತ್ತಿನ ಸಾಮಾನ್ಯ ಮಂದಿಯ ಬದುಕು, ಅವರ ಕೋಟಲೆಗಳನ್ನು, ಅವರಲ್ಲಿದ್ದ ದಂಗೆ, ಹೋರಾಟದ, ದಬ್ಬಾಳಿಕೆ ನೋವನ್ನು ಕಡೆಯೆಣಿಸಿ ಬಿಡುತ್ತೆ. ಎಷ್ಟು ರಾಜರು ದಿಟದಲ್ಲಿ ಬರಗಾಲದಲ್ಲಿದ್ದ ಪ್ರಜೆಗಳಿಂದ ತೆರಿಗೆ ಕೇಳಿಲ್ಲ. ಬರದ ನಾಡಿನಲ್ಲಿ ಅರಮನೆಗಳನ್ನು ಕಟ್ಟಿಸಿಕೊಂಡಿಲ್ಲ!

ನಾವು ನಮ್ಮ ಹಿಂದಿನರಸರು ಕಟ್ಟಿದ ಕೋಟೆಗಳು, ಅರಮನೆಗಳು, ಆನೆಲಾಯಗಳು, ಕುದುರೆಲಾಯಗಳು, ಆ ಅರಸತನದ ಆನೆ, ಕುದುರೆಗಳಿಗೆ ಮೇಯಿಸ ಮೇವಿನ ಬಗ್ಗೆ ಹೆಮ್ಮೆ ಪಟ್ಟಿಕೊಂಡು ಬೀಗುತ್ತೇವೆ. ಅದೇ ಆ ಅರಸನು ನಾಡಿನಲ್ಲಿ ಮಂದಿಯಲ್ಲಿ ಎಷ್ಟು ಪ್ರಬುದ್ಧಚಿಂತನೆಗಳನ್ನು ಬೆಳೆಸಿದನು, ಅವರಿಗೆಷ್ಟು ವೈಯಕ್ತಿಕ ಸ್ವಾತಂತ್ರ‍್ಯ, ಅಭಿವಕ್ತಿ ಸ್ವಾತಂತ್ರ‍್ಯ, ವಿಚಾರ ಸ್ವಾತಂತ್ರ‍್ಯ, ಒಡೆತನದ ಸ್ವಾತಂತ್ರ‍್ಯಗಳನ್ನು ಕೊಟ್ಟಿದ್ದ ಎಂಬುದರ ಬಗ್ಗೆ ವಿಚಾರಿಸುವುದೇ ಇಲ್ಲ. ಸಾಮಾನ್ಯವಾಗಿ ನಮ್ಮ ಚರಿತ್ರೆಯ ತುಂಬಾ ಪ್ರಜೆಗಳೆಲ್ಲ ಅರಸ ದೇವರ ಸಮಾನ ಹಾಗೂ ತಾವೆಲ್ಲ ಅವನ ಊಳಿಗಕ್ಕಾಗಿರುವ ದಾಸರೆಂದೇ ಚಿತ್ರತವಾಗಿದೆ.

ಇನ್ನೂ ವಿಜಯನಗರದ ಅವಸಾನದ ಹೊತ್ತಿಗೆ ಆ ಅರಸರು ಕನ್ನಡವನ್ನು ಎಷ್ಟು ಕಡೆಗಣಿಸಿ ಮೂಲೆಗಂಪಾಗಿಸಿದ್ದರು ಹಾಗೂ ತಾಳಿಕೋಟೆಯ ಬವರವು ಕನ್ನಡರು ಮತ್ತು ತೆಲುಗರ ನಡುವೆಯ ಕಿತ್ತಾಟವೆಂಬು ಬಣ್ಣಿಸುವ ಹೊತ್ತಗೆಯೂ ಇದೆ. ಹಾಗೇ ಮಯ್ಸೂರ ಅರಸು ಕೂಡ ಹೇಗೆ ಕನ್ನಡವನ್ನು ಕಡೆಗಣಿಸಿ, ತೆಲುಗು, ತಮಿಳು ಹಾಗೂ ಸಂಸ್ಕೃತಕ್ಕೆ ಒತ್ತಿತ್ತರು ಎಂಬುದನ್ನೂ ಅಲ್ಲಿ ಬಣ್ಣಿಸಿದ್ದಾರೆ.

ಅಂತಹ ಹೊತ್ತಗೆಯೊಂದು "ಕನ್ನಡರಸರ ಅಕನ್ನಡ ಪ್ರಜ್ಞೆ . ಲೇ|ಎಂ.ಎಂ.ಕಲಬುರ‍್ಗಿ". ಅದನ್ನೂ ಕೂಡ ನಾವೆಲ್ಲ ಓದಬೇಕೆಂದು ನನ್ನ ಅನಿಸಿಕೆ.

ಗಮನಿಸಿರಿ: ಕೃಷ್ಣದೇವರಾಯನ ಅಷ್ಟದಿಗ್ಗಜರಲ್ಲಿ ಅಷ್ಟೂ ಕವಿಗಳು ತೆಲುಗರು ಹಾಗೂ ಆ ಕಾಲದಲ್ಲಿ ಕನ್ನಡ ಸಾಹಿತ್ಯ ಅವನ ಹಿಂದನರಸರಾದ ಪ್ರೌಢದೇವರಾಯ ಮುಂತಾದವರ ಕಾಲಕ್ಕೆ ಹೋಲಿಸಿದರೆ ಬಲು ಕಡಮೆ. ಹಾಗೂ ಕೃಷ್ಣದೇವರಾಯನು ರಚಿಸಿದ ಕೃತಿಗಳು ಸಂಸ್ಕೃತ ಮತ್ತು ತೆಲುಗಿನಲ್ಲಿವೆ.

ಇನ್ನು ಸಾಮಾನ್ಯ ಮಂದಿಗೆ ಹೆಚ್ಚುಕಾಲ ಇರತಕ್ಕ, ಹಾಗು ಅವರ ಬದುಕುಗಳನ್ನು ಬದಲಿಸತಕ್ಕ ವೈಚಾರಿಕತೆಗಳನ್ನು ನನ್ನ ಜ್ಞಾನಪರಿಮಿತಿಯಲ್ಲಿ ಯಾವ ಅರಸನೂ ಮಾಡಿಲ್ಲ. ಅವರ ಪ್ರೋತ್ಸಾಹವೇನಿದ್ದರೂ ಆಸ್ಥಾನ ಪಾಂಡಿತ್ಯಕ್ಕೆ ಹಾಗೂ ಸಂಸ್ಕೃತಭರಿತ ಕಾವ್ಯಕೃಷಿಗೇ ಇತ್ತು.

ಈ ಅರಸರನ್ನು ಬಿಟ್ಟರೆ, ಸಾಮಾನ್ಯ ಮಂದಿಗೆ ಹೆಚ್ಚುಕಾಲ ಇರತಕ್ಕ, ಹಾಗು ಅವರ ಬದುಕುಗಳನ್ನು ಬದಲಿಸತಕ್ಕ ವೈಚಾರಿಕತೆಗಳನ್ನು (ನನ್ನ ಜ್ಞಾನಪರಿಮಿತಿಯಲ್ಲಿ) ನೀಡಿದ ಮಂದಿ ಬಸವಣ್ಣ, ಸರ್ವಜ್ಞ, ಅಲ್ಲಮ ಮುಂತಾದ ಶರಣರು ಹಾಗೂ ಹೊಸಗನ್ನಡದ ಶಿವರಾಮಕಾರಂತ, ಪೂಜಂತೇ ಮುಂತಾದವರು. ಅವರ ಬಗ್ಗೆ ನನಗೆ ವಿಜಯನಗರಕ್ಕಿಂತ ಹೆಚ್ಚಿನ ಹೆಮ್ಮೆಯ ಅನುಭವದ ಮನಸ್ಸಿದೆ.

ನನ್ನಿ

Anonymous ಅಂತಾರೆ...

ಪ್ರೀತಿಯ ಮಾಯ್ಸ ಅವ್ರೇ,
ನಿಮ್ಮ ಅನಿಸಿಕೆಗಳ ಬಗ್ಗೆ ಗೌರವ ಇಟ್ಟುಕೊಂಡೇ ನನಗೆ ಅನ್ನಿಸಿತ್ತಿರುವುದನ್ನು ತಿಳಿಸಲು ಬಯಸುತ್ತೇನೆ. ಚರಿತ್ರೆಯನ್ನು ನೋಡಿದರೆ ಅದು ಯಾವ ದೇಶದ ಇತಿಹಾಸವಾದರೂ ರಾಜನ ಕಥೆಯೇ ಇರೋದು ಅನ್ನಿಸೋದು ಸಹಜ. ಆದರೆ ಸಾಮಾನ್ಯರ ಜೀವನದ ಬಗ್ಗೆ ವಿವರಗಳು ಇಲ್ಲದ ಇತಿಹಾಸ ಯಾವುದೂ ಇಲ್ಲ. ವಿಜಯನಗರದಲ್ಲಿ ಜನಸಾಮಾನ್ಯರು ಹೇಗೆ ಬದುಕಿದ್ರು, ಹ್ಯುಯೆನ್‍ತ್ಸಾಂಗ್ ಬಂದಾಗ ಪುಲಿಕೇಶಿ ಕಾಲದಲ್ಲಿ ಹೇಗಿತ್ತು ಸಮಾಜ ಅನ್ನೋದರ ಬಗ್ಗೆ ವಿವರವಾಗೇ ಬರೆದಿರುವನು. ಆದ್ರೆ ಹೆಸರು ಹೇಳಿ ರಾಜನ ಬಗ್ಗೆ ಬರೆದಂತೆ ಸಾಮಾನ್ಯರ ಬಗ್ಗೆ ಬರೆದಿಲ್ಲ, ಬರೆಯಲಾಗದೂ ಕೂಡಾ. ರಾಜ್ಯ, ಆಳ್ವಿಕೆ, ಅಧಿಕಾರದ ಸುತ್ತಲೇ ಜಗತ್ತಿನ ಎಲ್ಲಾ ಪಾಪಗಳು, ಅಪಾಯಗಳೂ ತುಂಬಿರೋದನ್ನು ಕೂಡಾ ಸಹಜ ಅಂತ ನೋಡಿದರೆ, ಇತಿಹಾಸದಲ್ಲಿ ಕಂಡ ಕ್ರೌರ್ಯ, ಅಸಹ್ಯಗಳು ಇಂದಿನಂತೆಯೇ ಅಂದಿಗೂ ಇತ್ತೆಂಬುದು ಅರಿವಾಗುತ್ತದೆ. ಹಾಗಾಗಿ ಆ ಹೊಲಸಿನ ಹೊಣೆ ಇತಿಹಾಸದಲ್ಲ, ಅಧಿಕಾರ ಮತ್ತು ರಾಜಕಾರಣಕ್ಕೆ ಸಂಬಂಧಿರುವುದು ಅನಿಸುವುದಿಲ್ಲವೇ?
ಇನ್ನು ಆಳರಸರು ಕನ್ನಡ ಕಡೆಗಣೆಸಿದ ಬಗ್ಗೆ. ಮೈಸೂರಿನ ರಾಜರ ಕಾಲದಲ್ಲಿ ಕನ್ನಡ ಕಡಗಣನೆಯಾಗಿತ್ತು ಅನ್ನುವುದ್ಉ ಚಱ್ಚೆಗೆ ಒಳಗಾಗಬೇಕಾದ ವಿಷಯ. ಜನಸಾಮಾನ್ಯರ, ಆಶ್ಡಳಿತದ ನುಡಿ ಕನ್ನಡವೇ ಆಗಿತ್ತು, ಆ ಕಾರಣದಿಂದಲೇ ಇಂದೂ ಮೈಸೂರಿನ ಕನ್ನಡಕ್ಕೆ ಸ್ಟಾಂಡರ್ಡ್ ಕನ್ನಡದ ಸ್ಥಾನಮಾನವಿರುವುದೂ ಎಂದ್ಉ ಹಲವರ ಅನಿಸಿಕೆ.
ಅಷ್ಟದಿಗ್ಗಜರೆಲ್ಲಾ ತೆಲುಗರು, ಕೃಷ್ಣದೇವರಾಯ ಬರೆಸ್ದಿರುವುದು ತೆಲುಗಲ್ಲಿ ಅನ್ನುವ ಮಾಹಿತಿ ಸರಿ. ಆದರೆ ಡಾ.ಕಲ್ಬುರ್ಗಿಯವರ ವಿಶ್ಲೇಷಣೆ ಪರಿಪೂರ್ಣವಲ್ಲ ಅನಿಸುತ್ತದೆ. ಇದರ ಜೊತೆಯಲ್ಲೇ ವೈಚಾರಿಕತೆಗೆ ಉತ್ತೇಜನ ರಾಜರಿಂದ ಇರಲಿಲ್ಲ ಅನ್ನುವ ನಿಮ್ಮ ಅನಿಸಿಕೆಗೂ ಉತ್ತರ ಏನೆಂದರೆ... ಅಷ್ಟದಿಗ್ಗಜರಿಗಿಂತ ಮೇಲಿನ ಸ್ಥಾನದಲ್ಲಿ ವ್ಯಾಸರಾಯರನ್ನು, ಪುರಂದರ, ಕನಕರನ್ನು ಇಟ್ಟಿರಲಿಲ್ಲವೇ? ಇವೆರೆಲ್ಲಾ ಕನ್ನಡಿಗರೇ ತಾನೆ? ದಾಸರ ಬರಹಗಳಲ್ಲಿ ವೈಚಾರಿಕತೆ, ಕನ್ನಡದ ಸೊಗಡುಗಳು ಇರಲಿಲ್ಲವೇ? ಇವರು ಬದುಕಿಗೆ ದಾರಿ ತೋರಿದ ಮಹನೀಯರಲ್ಲವೇ? ಇತಿಹಾಸದ ಒಂದು ಉಪಯೋಗವೆಂದರೆ, ಅದರಿಂದ ಇಂದು/ ಮುಂದು ಮಾಡಬೇಕಾಗಿಹುದನ್ನೂ, ಮಾಡಬಾರದನ್ನೂ ಕಲಿಯುವುದಲ್ಲವೇ?

ಸುಂದರ

Anonymous ಅಂತಾರೆ...

ಸುಂದರರೇ,

ನಿಮ್ಮ ಅನಿಸಿಕೆಗಳಲ್ಲಿ ಹಲವು ಒಪ್ಪತಕ್ಕ ಸಂಗತಿಗಳಿವೆ. ಆದರೆ ವ್ಯಾಸರಾಯ, ಪುರಂದರ ಹಾಗು ಕನಕರು ಕೃಷ್ಣದೇವರಾಯ ಬೆಂಬಲಿಸಿದ ವೈಷ್ಣವಮತದವರು. ಹಾಗೂ ಮತದ ಕಾರಣದಿಂದೇ ಅವರಿಗೆ ಪ್ರೋತ್ಸಾಹವಿತ್ತು.

ಇನ್ನು ದಾಸ ಸಾಹಿತ್ಯದಲ್ಲಿ ವಚನಗಳಲ್ಲಿರುವ ಹಾಗೆ ಸಮಾನತೆ, ಸಂಪ್ರದಾಯದ ಟೀಕೆ ಕಾಣಸದೇ, ಅದು ತಾರತಮ್ಯದ ಸಿದ್ಧಾಂತವನ್ನೇ ಸಾರುತ್ತದೆ ಎಂಬ ಅನಿಸಿಕೆ.

ದಾಸ ಸಾಹಿತ್ಯ ವ್ಯಾಸರಾಯರ ಮಠದ ಆಶ್ರಯದಲ್ಲೇ ಬೆಳೆದಿದೆ ಆದರೆ ವಚನ ಹಾಗಲ್ಲ ಅದೊಂದು ಸ್ವತಂತ್ರ ಹಾಗು ಬಂಡಾಯದ ಕವಲು. ಅದಕ್ಕೆ ಉತ್ತೇಜನ ಕೃಷ್ಣದೇವರಾಯನ ಕಾಲದಲ್ಲಿ ಅರಸುತನದಿಂದ ಇರಲಿಲ್ಲ.

ಇದರ ಬಗ್ಗೆ ಒಂದು ಅನಿಸಿಕೆ ಇದೆ. ಕೃಷ್ಣದೇವರಾಯನು ವಿಜಯನಗರದಲ್ಲಿದ್ದು ಬಹುಸಂಖ್ಯಾತರ ಲಿಂಗಾಯತಮತವನ್ನು ಕಡೆಗಣಿಸಿ, ವೈಷ್ಣವಮತಕ್ಕೆ ಉತ್ತೇಜನವಿತ್ತಿದಕ್ಕೆ ಪ್ರಜೆಗಳಲ್ಲಿ ಸಿಟ್ಟಿತ್ತು ಹಾಗೂ ಹಂಪೆಯಲ್ಲಿ ಈ ಕಾರಣದಿಂದಲೇ ದಂಗೆಗಳು ನಡೆದು, ವೈಷ್ಣವ ದೇವಾಲಯಗಳು ಹಾಳಾದವು. ಇದಕ್ಕೆ ಪುರಾವೆಯಾಗಿ ಇಂದಿಗೂ ಹಂಪೆಯಲ್ಲಿ ಶಿವಲಿಂಗಗಳೂ, ವೀರಭದ್ರನ ಗುಡಿಗಳು, ವೈಷ್ಣವಗುಡಿಗಳಷ್ಟು ಹಾಳಾಗದೇ ಉಳಿದುಕೊಂಡಿರುವುದು ಎಂದು ಕೆಲವರು ಹೇಳುತ್ತಾರೆ.

ಅದೇನೇ ಇರಲಿ. ನಮ್ಮ ಕನ್ನಡ ಚರಿತ್ರೆಯಲ್ಲಿ ಜೈನ ಅರಸರನ್ನು ಕಡೆಗಣಿಸುವುದು ಹೆಚ್ಚು.

ಇರಲಿ. ವಿಜಯನಗರದ ಬಗ್ಗೆ ಒಳ್ಳೆಯ ಹೊತ್ತಗೆ ಬಗ್ಗೆ ತಿಳಿಸಿಕೊಟ್ಟಿದಕ್ಕೆ ನನ್ನಿ.

ಇಂತಿ
ಮಾಯ್ಸ

Anonymous ಅಂತಾರೆ...

ಪ್ರಿಯ ಮಾಯ್ಸಾ ಅವ್ರೇ,

ವ್ಯಾಸರಾಯ, ಪುರಂದರ, ಕನಕರು ವೈಷ್ನವ ಸಂಪ್ರದಾಯದವರು ಅನ್ನುವುದಕ್ಕೂ, ದೊರೆಗಳ ಪ್ರೋತ್ಸಾಹಕ್ಕೂ ಜೋಡಣೆ ಅಸಹಜವೇನಲ್ಲ. ಆದರೆ ವಿಜಯನಗರ ಸ್ಥಾಪಕರೇ ಶೈವ ಗುರುಗಳಾದ ಮಾಧವತೀರ್ಥರು ಮತ್ತು ವಿದ್ಯಾರಣ್ಯರು. ಬಸವಣ್ಣನವರ ಸಾಮಾಜಿಕ ಕ್ರಾಂತಿಗೆ ಬಿಜ್ಜಳನ ಬೆಂಬಲವೇ ಕಾರಣವಲ್ಲವೇ. ರಾಜ ಆಶ್ರಯ ನೀಡಿ ಪೊರೆಯುವ ಕಾರಣದಿಂದ ಇಂಥಾ ಸಾಹಿತ್ಯಗಳು, ಸಿದ್ಧಾಂತಗಳು ಪೋಷಣೆ ಪಡೆಯುತ್ತವೆ.ಅದರಂತೆ ಆಯಾ ಕಾಲಕ್ಕೆ ಪಂಪನಂಥ ಜೈನರೂ, ಶೈವರೂ, ವೈಷ್ಣವರೂ ಉತ್ತೇಜನ ಪಡೆದಿರುವರು.
ನಿಮ್ಮ ಬಹಳ ಕಮೆಂಟುಗಳನ್ನು ಓದಿ ನಿಮ್ಮ ಬಗ್ಗೆ ಗೌರವ ಹೊಂದಿರುವ ನಾನು ಮತ್ತು ನನ್ನಂತಹ ಅನೇಕರಲ್ಲಿ ನಿರಾಸೆ ಮೂಡಿಸುವಂತೆ ಜಾತಿವಾದದ ಸಣ್ಣತನ ನಿಮ್ಮ ಮಾತಲ್ಲಿ ಕಾಣುತ್ತಿದೆ. ಯಾವ ದೊರೆಯನ್ನೂ, ಸಾಧಕನನ್ನೂ, ಇತಿಹಾಸ ಪುರುಷನನ್ನೂ ಅವನ ಜಾತಿಯ ಕಾರಣದಿಂದ ಸ್ಮರಿಸುವುದಿಲ್ಲ. ಕನಕರನ್ನು ಕುರುಬನೆಂದು, ಪುರಂದರರನ್ನು ಶೆಟ್ಟರೆಂದು, ಸಂಗೊಳ್ಳಿ ರಾಯಣ್ನನನ್ನು ಕುರುಬರೆಂದು, ಬಸವಣ್ಣನನ್ನು ಬ್ರಾಹ್ಮಣ/ ಲಿಂಗಾಯತ ಎಂದು ಮಾತ್ರಾ ಗುರುತಿಸುವುದು ನಾಡೊಡೆಯುವ ಕೆಟ್ಟತನ. ನಿಮಗದು ಶೋಭೆಯಲ್ಲ. ಬಿಟ್ಟುಬಿಡಿ. ಶೈವ/ ವೈಷ್ಣವ ಹೋರಾಟದಿಂದ ಹಂಪಿ ಹಾಳಾಯ್ತು ಅನ್ನೋ ವಾದ ಇಲ್ಲಿ ಅಪ್ರಸ್ತುತ. ಆದರೂ ಒಂದೇ ಒಂದು ಮಾತು. ಭೈರಪ್ಪನವರ ಆವರಣ ಒಮ್ಮೆ ಓದಿ.
(ನಾನು ಭೈರಪ್ಪನವರ ಅಭಿಮಾನಿ ಅಲ್ಲ!) ಅದರಲ್ಲಿ ಆಧಾರ ಸಮೇತ ಈ ಬಗ್ಗೆ ಬರೆದಿರುವರು. ಜೈನ ಅರಸರನ್ನು ಕಡೆಗಣಿಸಿರುವರು ಅನ್ನುವುದು ಸರಿಯಲ್ಲ. ಯಾಕಂದರೆ ಜಾತಿಯ ಮೇಲೆ ಸ್ಮರಿಸುವ ರೀತಿ ಜಾರಿಯಲ್ಲಿಲ್ಲ. ಓಬವ್ವನ ಜಾತಿ ಗೊತ್ತಾ? ಇಲ್ಲಿಯವರೆಗೆ ಸರ್ವಜ್ಞನ ಜಾತಿ ಗೊತ್ತಿರಲಿಲ್ಲ. ಈಗ ತಿರುವಳ್ಳುವರ್ ಗಲಾಟೆ ಸಂದರ್ಭದಲ್ಲಿ ತಿಳೀತು ಅವರು ಕುಂಬಾರರೆಂದು. ಹೊಯ್ಸಳರು ಜೈನ ಮತ ಅನುಯಾಯಿಗಳು (ಬಿಟ್ಟಿದೇವನ ತನಕ) ಆಗಿರಲಿಲ್ಲವೆ? ಇತಿಹಾಸ ಜೈನ ದೊರೆಗಳನ್ನು ಕಡೆಗಣಿಸಿ ಹಾಗೆ ಬಿಟ್ಟಿರಲು ಅವರ ಸಾಧನೆ ಗಣನೀಯವಾಗಿಲ್ಲದಿರುವುದು ಕಾರಣವಾದೀತು ಅಷ್ಟೆ.
ಪ್ರತಿಯೊಂದನ್ನೂ ನೀವು ಕೆಂಗಣ್ಣಿನಿಂದ ಕಾಣುತ್ತಿರುವ ಅನುಮಾನ ನನಗೆ. ಅನಿಸಿಕೆ ತಪ್ಪಿದ್ರೆ ಮನ್ನಿಸಿ.

ಇರಲಿ, ವಿಜಯನಗರದ ಬಗ್ಗೆ ಒಳ್ಳೆಯ ಹೊತ್ತಿಗೆಯ ಬಗ್ಗೆ ತಿಳಿಸಿಕೊಟ್ಟಿರುವುದಕ್ಕೆ ಏನ್‍ಗುರುವಿಗೆ ನನ್ನ ಅಭಿನಂದನೆಗಳು.

ಸುಂದರ

Anonymous ಅಂತಾರೆ...

"ಆದರೆ ವಿಜಯನಗರ ಸ್ಥಾಪಕರೇ ಶೈವ ಗುರುಗಳಾದ ಮಾಧವತೀರ್ಥರು ಮತ್ತು ವಿದ್ಯಾರಣ್ಯರು. ಬಸವಣ್ಣನವರ ಸಾಮಾಜಿಕ ಕ್ರಾಂತಿಗೆ ಬಿಜ್ಜಳನ ಬೆಂಬಲವೇ ಕಾರಣವಲ್ಲವೇ."

ಇಲ್ಲಿ ಕೆಲವು ತಿದ್ದುಪಡಿಗಳು ಬೇಕಿವೆ.

೧) ವಿಜಯನಗರದ ಸ್ಥಾಪಕರಿಗೆ ಗುರು ವಿದ್ಯಾರಣ್ಯರೊಬ್ಬರೇ! ಅವರು ಇನ್ನೊಂದು ಹೆಸರು ಮಾಧವಾಚಾರ್ಯ ಇಲ್ಲವೇ ಮಾಧವ ವಿದ್ಯಾರಣ್ಯ. ಇವರು ಶೈವರಲ್ಲ. ಕೆಲವರು ಇವರ ಮಾಧವ ಹೆಸರನ್ನು ಮಾಧವತೀರ್ಥರೆಂದು ತಿಳಿದರೂ, ಅದು ವಿದ್ಯಾರಣ್ಯರ ಇನ್ನೊಂದು ಹೆಸರು. ಆದುದರಿಂದ ವಿಜಯನಗರದ ಸ್ಥಾಪಕರ ಗುರುಗಳು ವಿದ್ಯಾರಣ್ಯರೊಬ್ಬರೇ. ಮತ್ತೂ ಅವರು ಶೈವ ಪಂತದವರಲ್ಲ.

೨) ಬಸವಣ್ಣನವರ ಕ್ರಾಂತಿಗೆ ಬಿಜ್ಜಳನ ಬೆಂಬಲವಿರಲಿಲ್ಲ. ಶರಣ ಕ್ರಾಂತಿಯಲ್ಲಿ ಬಿಜ್ಜಳನು ಸಾವನ್ನೊಪ್ಪುತ್ತಾನೆ ತನ್ನ ವಿರೋಧದಿಂದ.

ಇನ್ನೂ ವೈಷ್ಣವ ಎಂಬುದು ಜಾತಿಯಲ್ಲ. ಆ ಮತಕ್ಕೆ ಕೃಷ್ಣದೇವರಾಯ ಹೆಚ್ಚಿನ ಒತ್ತುಕೊಟ್ಟಿದ್ದನೆಂದು ಹೇಳಿದ್ದೇನೆ. ಹಾಗಿರುವಾಗ ಜಾತಿವಾದವೆಲ್ಲಿ?

ಇನ್ನು ಭೈರಪ್ಪನವರ ಆವರಣ ಒಂದು ಕಾದಂಬರಿ, ಕಾದಂಬರಿ ಎಂದು ಕರೆದ ಮೇಲೆ ಅದರು ಕಾಲ್ಪನಿಕ ಕಾವ್ಯ ತಾನೆ? ಅದನ್ನು ಐತಿಹಾಸಿಕ ಪುರಾವೆ ಎಂದು ಹೇಗೆ ತೆಗೆದುಕೊಳ್ಳುವುದು? ಹೀಗೆ ನೋಡಿದರೆ ಚೋಮದುಡಿಯಲ್ಲಿರುವ ಜೋಮನೂ ಒಬ್ಬ ಐತಿಹಾಸಿಕ ವ್ಯಕ್ತಿ, ಬರೀ ಕಾಲ್ಪನಿಕನಲ್ಲ.

ವಿಜಯನಗರದ ಅಳಿವಿಗೆ ಲಿಂಗಾಯತ ಮತ್ತು ವೈಷ್ಣವರ ನಡುವೆಯ ಕಿತ್ತಾಟವೂ ಕಾರಣ ಎಂಬುದು ನನ್ನ ಪ್ರತಿಪಾದನೆಯಲ್ಲ. ಅದು ಕೆಲವು ಇತಿಹಾಸ ತಜ್ಞರ ಅಭಿಮತ.

ನಾಡೊಡೆಯುವ ಕೆಟ್ಟತನವು ನೀವು ಪ್ರಸ್ತಾಪಿಸಿದ ಹೊತ್ತಗೆಯೊಂದರಲ್ಲೂ ಇದೆ ಎಂದು ಕರ್ನಾಟಕದ ಹಲವು ಚಿಂತಕರ ಅನಿಸಿಕೆ. ಅದಕ್ಕೆ ಬೇಕಾದಷ್ಟು ಪತ್ರಿಕಾಪ್ರಕಟಣೆ, ಗೋಷ್ಠಿಗಳೂ ನಡೆದಿವೆ.

"ಪ್ರತಿಯೊಂದನ್ನೂ ನೀವು ಕೆಂಗಣ್ಣಿನಿಂದ ಕಾಣುತ್ತಿರುವ ಅನುಮಾನ ನನಗೆ. ಅನಿಸಿಕೆ ತಪ್ಪಿದ್ರೆ ಮನ್ನಿಸಿ"
ಇದಕ್ಕೆ ನಾನು ಸಮಾಧಾನ ಹೇಳುವ ಬಾಧ್ಯತೆಗೆ ಒಳಪಡುವುದಿಲ್ಲ. ನಿಮಗೆ ಅಭಿಮತದ ಹಾಗೂ ವೈಚಾರಿಕ ಸ್ವಾತಂತ್ರ‍್ಯವಿದೆ. ಇನ್ನು ನಾನು ವೈಯಕ್ತಿಕ ಗುಣಾವಗುಣಗಳ ಗೋಜಿಗೆ ಹೋಗೆನು. ಅದು ಅಪ್ರಸ್ತುತ ಹಾಗೂ ಮೂಲ ವಿಷಯಕ್ಕೆ ಇಂಬಾಗದ ತಿವಿತ.

ನನ್ನ ಅನಿಸಿಕೆ ಮೂಲವಾಗಿ ಏನ್ಗುರುವಿನ ಬರಹ ಹಾಗೂ ನಾವು ಹೊಂದಿರುವ ಚಾರಿತ್ರಿಕ ಹೆಮ್ಮೆಯ ಬಗ್ಗೆ ದೃಷ್ಟಿಕೋನದ ಬಗ್ಗೆಯಾಗಿದೆ.

ವಿಜಯನಗರದ ಅವಸಾನದ ಹೊತ್ತಿಗೆ ವಿಜಯನಗರ ಅರಸು ತೀರಾ ಅಕನ್ನಡ ಪ್ರಜ್ಞೆ ಹೊಂದಿದವರು ಆಗಿದ್ದರು ಹಾಗೂ ಅದರ ಅವಸಾನಕ್ಕೆ ಕನ್ನಡದ ಅವಗಣನೆಯೊಂದು ದೊಡ್ಡ ಕಾರಣ ಎಂದು ನಾನು ಹಿಂದೆ ಹೇಳಿದ ಹೊತ್ತಗೆಯೊಂದು ಚರ್ಚಿಸುವುದು. ಆಸಕ್ತಿಯಿದ್ದರೆ ಓದಬಹುದು.

Anonymous ಅಂತಾರೆ...

ಪ್ರೀತಿಯ ಮಾಯ್ಸಾ,

ನಿಮ್ಮ ಅನಿಸಿಕೆಗೆ ನನ್ನಿ. ಶೈವರು ಎನ್ನುವಾಗ ಶೈವ ಸಂಪ್ರದಾಯದ ಅನುಯಾಯಿಗಳು ಅನ್ನುವುದು ನನ್ನ ಅನಿಸಿಕೆ ಆಗಿರದೆ ವಿರೂಪಾಕ್ಷ/ ವೀರಭದ್ರ/ ಬಡವಿಲಿಂಗ/ ಉದ್ದನ ವೀರಭದ್ರ ಗುಡಿಗಳು ಹಂಪಿಯಲ್ಲಿರುವುದು, ವಿರೂಪಾಕ್ಷ ಅವರ ಕುಲದೈವ ಆಗಿರುವುದೂ ಮಾತ್ರವಾಗಿತ್ತು. ವಿದ್ಯಾರಣ್ಯರೂ ಮಾಧವತೀರ್ಥರೂ ಇತ್ಯಾದಿಗಳು ಒಬ್ಬರೋ ಇಬ್ಬರೋ ಅನ್ನುವುದರ ಬಗ್ಗೆ ಅನೇಕ ಅನಿಸಿಕೆಗಳಿದ್ದಾಗ್ಯೂ ಅದೇನಾದರೂ ನನ್ನ ತಕರಾರೇನಿಲ್ಲ. ಬಸವಣ್ಣನವರ ಕ್ರಾಂತಿಗೆ ಬಿಜ್ಜಳ ಪ್ರೋತ್ಸಾಹ ನೀಡಿಲ್ಲ ಅನ್ನುವುದು ಕೂಡಾ ಹೀಗೆಯೇ. ಬಸವಣ್ಣನವರು ವರ್ಣಸಂಕರಕ್ಕೆ ಮುಂದಾದ ಘಟನೆಯ ಬಸವಣ್ನನವರ ಕಥೆಯ ಕ್ಲೈಮ್ಯಾಕ್ಸ್. ಆದರೆ ಅಲ್ಲಿಯವರೆಗೆ ಬಸವಣ್ನನನ್ನು ಪೊರೆದವರು, ಆಸ್ಥಾನದಲ್ಲಿ ಪ್ರಧಾನಮಂತ್ರಿಯಾಗಿರಿಕೊಂಡಿದ್ದವರು, ಅನುಭವ ಮಂಟಪ ಕಟ್ಟಲು ನೆರವಾದವರೂ ಬಿಜ್ಜಳ ದೊರೆಗಳೇ ಎಂದು ಅವರಿವರು ಹೇಳುವುದನ್ನೂ ಕೇಳಿದ್ದೇನೆ. ಆವರಣ ಕಾದಂಬರಿಏ ಆಗಿದ್ದರೂ ಅದರಲ್ಲಿ ಇತಿಹಾಸ ತಜ್ಞರ ಅನೇಕ ಗ್ರಂಥಗಳ ಉಲ್ಲೇಖವಿದೆಯೆಂದು ಅದನ್ನು ನೋಡಿ ಎಂದೆ. ಹಾಗೆ ನೋಡಿದರೆ ಇತಿಹಾಸಗಳೂ ಕೂಡಾ ಬರೆಸುವವರ/ ಬರೆಯುವವರ ವೈಯುಕ್ತಿಕ ಅನಿಸಿಕೆಯಷ್ಟೆ ಅಲ್ಲವೇ. ಬಿಡಿ, ಅವೆಲ್ಲಾ ಏನ್‍ಗುರುವಿನ ಈ ಬರಹದ ವ್ಯಾಪ್ತಿಗೆ ಬಾರದ ವಿಷಯಗಳು.

ಏನ್‍ಗುರು ಈ ಹೊತ್ತಿಗೆಯಲ್ಲಿ ರೊಚಕವಾದ ಸಂಗತಿಗಳಿವೆ ಎನ್ನುತ್ತ "ಅಂದಿನ ಸಮಾಜದ ಸಾಅಹಸಾ, ವೈಭವ, ಮೌಹ್ಯ, ಕ್ರೌರ್ಯಗಳ ಬಗ್ಗೆ ಓದುತ್ತಿದ್ದರೆ ಮೈ ಝುಮ್ ಎನಿಸುತ್ತದೆ" ಎಂದಿದೆಯೇ ಹೊರತು ಈ ಕ್ರೌರ್ಯ, ಮೌಢ್ಯ ಹೆಮ್ಮೆಯ ವಿಷಯ" ಎಂದಿಲ್ಲ ಎನ್ನುವುದು ಸ್ಪಷ್ಟವಾಗಿ ಕಾಣುತ್ತಿದೆ ಅಲ್ಲವೇ? ಇನ್ನು ಅಂದು ಇಂದು ಎಂದೆಂದಿಗೂ ಇತಿಹಾಸದ ಪುಟಗಳಲ್ಲಿರುವುದೇ ಇಂತಹ ರಕ್ತರಂಜಿತ ಕಥೆಗಳೇ. ಇತಿಹಾಸದ ಬಗ್ಗೆ ಹೆಮ್ಮೆ ಹೊಂದಲು ಇದು ತೊಡಕಾಗಬೇಕೆ? ಎಂಬುದು ನನಗಿರುವ ಗೊಂದಲ.

ಯಾವುದೇ ಇತಿಹಾಸದ ಸಹಜ ಅಂಗವಾಗಿರುವ ಕಹಿಗಳನ್ನೇ ನೆಪವಾಗಿಸಿಕೊಂಡು ಅದರಿಂದ ಸಿಗಬಹುದಾದ ಪ್ರೇರಣೆಯನ್ನು ಪಡೆಯದೆ ಇರುವುದು ಜಾಣತನ ಎಂದು ನನಗನ್ನಿಸುವುದಿಲ್ಲ. ಹಾಗಾಗಿ, ಹೆಮ್ಮೆ ಪಡಬಹುದಾದುದಕ್ಕೆ ಹೆಮ್ಮೆ ಪಟ್ಟು ಅದರಿಂದ ಪ್ರೇರಣೆ/ ಸ್ಪೂರ್ತಿ ಪಡೆಯುತ್ತಲೇ... ಆದ ತಪ್ಪುಗಳಿಂದ ಪಾಟ ಕಲಿತು ಅವುಗಳು ಮತ್ತೆ ಆಗದಂತೆ ಎಚ್ಚರವಹಿಸುವುದೇ ನಾವು ಅಂತಹ ದಾಖಲಿತ ಇತಿಹಾಸಗಳಿಂದ ಪಡೆದುಕೊಳ್ಲಬೇಕಾದ ಲಾಭ. ದಯಮಾಡಿ ನನ್ನ ಮಾತಿನಲ್ಲಿ ತಪ್ಪಿದ್ದರೆ ಹೊಟ್ಟೆಗೆ ಹಾಕಿಕೊಳ್ಳಿ.

ನನ್ನಿ

ಸುಂದರ

guruve ಅಂತಾರೆ...

ಮಾಯ್ಸಾ ರವರೆ,
"ಇನ್ನು ದಾಸ ಸಾಹಿತ್ಯದಲ್ಲಿ ವಚನಗಳಲ್ಲಿರುವ ಹಾಗೆ ಸಮಾನತೆ, ಸಂಪ್ರದಾಯದ ಟೀಕೆ ಕಾಣಸದೇ, ಅದು ತಾರತಮ್ಯದ ಸಿದ್ಧಾಂತವನ್ನೇ ಸಾರುತ್ತದೆ ಎಂಬ ಅನಿಸಿಕೆ."
ಈ ನಿಮ್ಮ ಅನಿಸಿಕೆಗೆ ಯಾವುದಾದರೂ ಆಧಾರಗಳಿವೆಯೇ?

ಕನಕದಾಸರ ಈ ಪದವನ್ನು ನೀವು ಕೇಳಿಲ್ಲವೆ? "ಕುಲ ಕುಲವೆಂದು ಹೊಡೆದಾಡದಿರಿ" .. ಇನ್ನು ಕನಕದಾಸರ ಬಗ್ಗೆ ಮೆಚ್ಚು ಪುರಂದರದಾಸರು ಬರೆದ ಕೀರ್ತನೆಯೊಂದುಂಟು .. ಇದನ್ನು ಓದಿ..
http://hamsanada.blogspot.com/2008/11/blog-post_14.html
ಇದು ಸಮಾನತೆಯಲ್ಲವೇ? ತಪ್ಪು ಸಂಪ್ರದಾಯದ ಟೀಕೆಯಲ್ಲವೇ?
ಇನ್ನು ಸುಖಾಸುಮ್ಮನೆ ಯಾವ ಕೇಡೂ ಮಾಡದ ಸಂಪ್ರದಾಯವನ್ನು ಟೀಕಿಸುವುದರಲ್ಲಿ ನನಗೆ ಯಾವ ಒಳಿತೂ ಕಾಣಿಸುವುದಿಲ್ಲ...

ಇನ್ನೂ ಪ್ರಮುಖವಾಗಿ ವಚನಗಾರರಾಗಲೀ, ದಾಸರಾಗಲೀ ಜನರ ಒಳಿತಿಗೆ ಸಾಹಿತ್ಯ ರಚನೆ ಮಾಡಿದರೇ ಹೊರತು ಮತ್ತೊಂದು ವರ್ಗ/ಗುಂಪನ್ನು ಟೀಕೆ ಮಾಡುವ ಉದ್ದೇಶದಿಂದಲ್ಲ...
ದಾಸ ಸಾಹಿತ್ಯವನ್ನು ಇನ್ನೂ ಹೆಚ್ಚು ಅಧ್ಯಯನ ಮಾಡೀ ತಮ್ಮ ಅನಿಸಿಕೆಯನ್ನು ಬದಲಾಯಿಸಿಕೊಳ್ಳುವಿರೇನೋ ಎಂಬ ನಂಬಿಕೆಯೊಂದಿಗೆ..

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails