
(ಫೋಟೋ : ಎನ್.ಡಿ.ಟಿ.ವಿ ಕೃಪೆ)
ಮೊನ್ನೆ ಮೊನ್ನೆ ಭಾರತೀಯ ಕ್ರಿಕೆಟ್‌ನ ರನ್ ಮಾಂತ್ರಿಕ ಸಚಿನ್ ರಮೇಶ್ ತೆಂಡೂಲ್ಕರ್ ಆಡಿದ ಮಾತುಗಳ ಬಗ್ಗೆ ಮತ್ತು ಅದಕ್ಕೆ ಶಿವಸೇನೆಯ ದೊಡ್ಡೆಜಮಾನ್ರಾದ ಬಾಳಾ ಸಾಹೆಬ್ ಠಾಕ್ರೆಯವರು ನೀಡಿದ
ಪ್ರತಿ ಹೇಳಿಕೆಯ ಬಗ್ಗೆ ಭಾರತದ ಎಲ್ಲಾ ಮಾಧ್ಯಮದೋರೂ ಪ್ರತಿಕ್ರಿಯೆ ನೀಡಿದ್ದಾರೆ. ಒಟ್ನಲ್ಲಿ ಈ ಘಟನಾವಳಿಗಳು ಜನರಲ್ಲಿ ರಾಜ್ಯ ದೊಡ್ಡದೋ - ದೇಶ ದೊಡ್ಡದೋ, ಭಾಷೆ ದೊಡ್ಡದೋ - ರಾಷ್ಟ್ರೀಯತೆ ದೊಡ್ದದೋ ಅನ್ನೋ ಚರ್ಚೆಗೆ ಕಾರಣವಾಗಿದೆ. ನಿಸ್ಸಂದಿಗ್ಧವಾಗಿ ಎಲ್ಲಾ ಮಾಧ್ಯಮಗಳೂ ಭಾಷೆ ಮತ್ತು ಪ್ರಾದೇಶಿಕ ವಾದಾನಾ ದೇಶದ್ರೋಹದ್ದು ಅನ್ನೋ ಹಾಗೆ ಚಿತ್ರುಸ್ತಾ ಇದಾರೆ. ಪ್ರಾದೇಶಿಕ ಚಿಂತನೆ ರಾಷ್ಟ್ರದ ಒಗ್ಗಟ್ಟಿಗೆ ಹಾನಿಕಾರಕ ಅಂತಾ ಶಂಖಾ ಹೊಡ್ಕೊತಾ ಇದಾರೆ. ನಾವೇನೂ ಕಮ್ಮಿ ಇಲ್ಲ ಅನ್ನುವ ಹಾಗೆ ಕನ್ನಡನಾಡಿನ ಮಾಧ್ಯಮಗಳೂ ಇದರ ಬಗ್ಗೆ ಪುಂಖಾನುಪುಂಖವಾಗಿ
ಬರೀತಿದಾರೆ. ಸಮಸ್ತ ಕನ್ನಡಿಗರ ಹೆಮ್ಮೆಯಾದ ವಿಜಯ ಕರ್ನಾಟಕದಲ್ಲಿ ಬರಹಗಾರ ಡಿ. ಅಶೋಕ್‌ರಾಮ್ ಅನ್ನೋರು ಸಚಿನ್ ಮುಂಬೈನ ಯಜಮಾನಿಕೆ ಬಗ್ಗೆ ಆಡಿದ ಮಾತನ್ನೇ ಮರೆಮಾಡಿ ’ನಾನು ಮೊದಲು ಭಾರತೀಯ ಅಂದಿದ್ದಕ್ಕೇ ಹೀಗೆ ಬಾಳಾಠಾಕ್ರೆ ಎಗರಾಡಿದಾರೆ, ಭಾಷೆಗಿಂತ ದೇಶ ದೊಡ್ದು... ಬ್ಲಾ ಬ್ಲಾ ಬ್ಲಾ’ ಅಂತೆಲ್ಲ
ಬರೆದಿದ್ದಾರೆ. ಇದೇನಪ್ಪಾ ಹಿಂಗಾ... ಅಂತಾ ಏನ್‍ಗುರು ಈ ವಿಷಯದಲ್ಲಿ ಇಣುಕೌನೆ ನೋಡ್ಮಾ ಬಾ ಗುರು!
ಸಚಿನ್ ಮಾತಿನಲ್ಲಿರೋದೇನು?ಸಚಿನ್ ಹೇಳಿರೋದ್ರ ಸಾರಾಂಶ “ನಾನೊಬ್ಬ ಮಹಾರಾಷ್ಟ್ರೀಯ ಅಂತಾ ಹೆಮ್ಮೆ ಇದೆ. ಆದರೆ ಅದಕ್ಕೆ ಮೊದಲು ನಾನು ಭಾರತೀಯ. ಮುಂಬೈ ಎಲ್ಲಾ ಭಾರತೀಯರಿಗೆ ಸೇರಿದ್ದು” ಅನ್ನೋದಾಗಿದೆ. ಅತ್ಯಂತ ದೇಶಭಕ್ತಿಯ ಮಾತುಗಳಿವು ಅನ್ನಿಸೋ ಹಾಗಿರೋ ಈ ಮಾತಲ್ಲಿ ಎಲ್ಲಾ ಸರಿಯೇ ಇದೆ ಅನ್ಸುತ್ತೆ. ಆದರೆ ಇದರಲ್ಲಿ ಬಾಳಾಠಾಕ್ರೆಯವರನ್ನು ಕೆರಳಿಸಿದ್ದು ‘ಮುಂಬೈ ಎಲ್ಲಾ ಭಾರತೀಯರಿಗೆ ಸೇರಿದ್ದು, ನಾನು ಮೊದಲು ಭಾರತೀಯ’ ಅನ್ನೋ ಮಾತುಗಳು. ಮಾಮೂಲಿ ದಿನದಲ್ಲಾಗಿದ್ರೆ ಈ ಮಾತಿಗೆ ಅಷ್ಟು ಮಹತ್ವವೇ ಇರುತ್ತಿರಲಿಲ್ಲವೇನೋ? ಯಾಕಂದ್ರೆ ಠಾಕ್ರೆ ಕೂಡಾ ಭಾರತ ಮಾತೆ, ಭಾರತ ಜನತೆ, ಭಾರತೀಯತೆ, ಜೈ ಹಿಂದ್ ಅಂತಾನೇ ಇಷ್ಟು ವರ್ಷ ಮಾತಾಡಿದ್ದಿದೆ. ಆದ್ರೆ ಈಗ ಪರಿಸ್ಥಿತಿ ಹೆಂಗೆ ಭಿನ್ನಾ ಅಂತೀರಾ? ಇತ್ತೀಚಿಗಷ್ಟೇ ಅಲ್ಲಿನ ವಲಸಿಗರು ತಾವು ಭಾರತೀಯರು, ಎಲ್ಲಿಗೆ ಬೇಕಾದ್ರೂ ಹೋಗಿ ಬಾಳುವ ಹಕ್ಕಿದೆ, ನಮ್ಮ ನಡೆ ನುಡಿ ಆಚರಣೆ ಸಂಸ್ಕೃತಿಗಳನ್ನು ನಮಗೆ ಬೇಕಾದಂತೆ ಆಚರಿಸೋ/ ತೋರಿಸಿಕೊಳ್ಳೋ ಹಕ್ಕಿದೆ ಅಂತಾ ಸಂವಿಧಾನದ ಕಡೆಗೆ ಬೊಟ್ಟು ತೋರುಸ್ತಿದಾರೆ. ವಿಷ್ಯಾ ಇಷ್ಟೇ ಅಲ್ವೇ... ಮುಂಬೈ ನಗರ ಪಾಲಿಕೆಯ ಆಳ್ವಿಕೆ ಹಿಂದೀಲಿ ಆಗಬೇಕು ಇವರ‍್ಯಾಕೆ ಕೇಳುದ್ರು? ಇವ್ರು ೩೦ ವರ್ಷದಿಂದ ಮಹಾರಾಷ್ಟ್ರದಲ್ಲೇ ಬದುಕ್ತಾ ಇದ್ರೂ ಮರಾಠಿ ಕಲಿಯಲ್ಲ ಅಂತಾ ಯಾಕಂದ್ರು? ಹಿಂದೀನಾ ರಾಷ್ಟ್ರಭಾಷೆ ಅಂತ ಯಾಕಂದ್ರು? ಈಗ ಮುಂಬೈನ ಮಿನಿ
ಉತ್ತರ ಪ್ರದೇಶ ಅಂತಾ ಹ್ಯಾಗಂದ್ರು? ಹಾಗೇ ಮರಾಠಿ ಮುಖ್ಯವಾಹಿನೀಲಿ ಬೆರೆಯದೇ ಹೋದ್ರೆ, ಅದು ಮುಂಬೈ ಮತ್ತು ಮಹಾರಾಷ್ಟ್ರಗಳ ಮರಾಠಿ ಜನರ ಬದುಕಿನ ಮೇಲೆ ಏನು ಪರಿಣಾಮ ಬೀರುತ್ತೆ ಅನ್ನೋದೆಲ್ಲಾ ಇವರಿಗೆ ಗೊತ್ತಿಲ್ಲವೇನು?
ಸಚಿನ್ ಬೆಂಬಲಿಸಿ ಮಾತಾಡ್ದೋರು...ಭಾರತ, ಮಹಾರಾಷ್ಟ್ರಾ, ಮುಂಬೈ ನಡುವೆ ಏನ್ ಸಂಬಂಧಾ ಇದೆ? ಮರಾಠಿಗೆ ಮುಂಬೈನಲ್ಲಿ ಏನ್ ಮಹತ್ವ ಇದೆ? ಅನ್ನೋದನ್ನೆಲ್ಲಾ ಯೋಚುಸ್ದೆ ಭಾರತ ಅನ್ನೋದ್ರು ಮುಂದೆ ಎಲ್ಲಾ ಗೌಣ ಅನ್ನೋ ಪ್ರಚಾರಕ್ಕೆ ಮರುಳಾಗಿರೋ ಸಾಮಾನ್ಯರು ಸಚಿನ್‍ನ ಬೆಂಬಲಿಸಿ ಮಾತಾಡ್ತಾರೆ. ಅಷ್ಟ್ಯಾಕೆ? ಯಾರಿಗೆ ಇದರಿಂದಾಗಿ ಲಾಭ ಇದೆಯೋ ಅವರೆಲ್ಲಾ ಇದನ್ನು ಬೆಂಬಲಿಸಿರೋರಲ್ಲಿ ಸೇರಿದ್ದಾರೆ. ಸಚಿನ್‌ಗಾದ್ರೂ ಬೇಕಿರೋದು ಅಖಿಲ ಭಾರತ ಮಟ್ಟದ ಬೆಂಬಲ ತಾನೇ? ಲಾಲೂ, ನಿತಿನ್, ಮುಲಾಯಂಸಿಂಗ್, ಅಮರ್‌ಸಿಂಗ್, ಮಾಯಾವತಿಯಂತಹ ಜನರಿರೋ ಪ್ರದೇಶದವರಿಗೆ ಸಚಿನ್‍ನ ಈ ಹೇಳಿಕೆಯಿಂದ ಲಾಭಾ ತಾನೇ? ಬೆಂಗಳೂರಿನಲ್ಲಿರಲಿ, ಮುಂಬೈಯಲ್ಲಿರಲಿ ಹೊರಗಿಂದ ಬಂದು ನೆಲೆಸಿರೋ ವಲಸಿಗರೆಲ್ಲಾ ಇದು ಲಾಭದಾಯಕವಾದ ಹೇಳಿಕೇನೆ. ಹಾಗಾಗಿ ಈ ಮಾತನ್ನು ಪಾಪಾ... ಹಿಂದೆ ಮುಂದೆ ನೋಡದೇ ಈ ಜನಾ ಮತ್ತವರ ಹಿಡಿತದ ಮಾಧ್ಯಮಗಳೋರೂ ಮೇಲೆ ಬಿದ್ದು ಬೆಂಬಲಿಸುತ್ತಾರೆ. ಇನ್ನು ರಾಷ್ಟ್ರೀಯ ಪಕ್ಷಗಳೋರು ಸಮರ್ಥಿಸೋದ್ರಲ್ಲಿ ಅನುಮಾನಾನೇ ಬೇಡ. ರಾಷ್ಟ್ರ ಅಂದ್ರೇನು ಅನ್ನೋದ್ರ್ ಬಗ್ಗೆ ಸರಿಯಾದ ಪರಿಕಲ್ಪನೇನೆ ಇಲ್ಲದ, ವೈವಿಧ್ಯತೆಯನ್ನು ಶಾಪವೆಂದೂ ಗೌಣವೆಂದೂ, ರಾಷ್ಟ್ರದ ಒಗ್ಗಟ್ಟಿಗೆ ವೈವಿಧ್ಯತೆಯನ್ನೇ ಅಳಿಸಿ ಹಾಕಬೇಕು ಅನ್ನೋ ಮನಸ್ಥಿತಿಯ ಜನರಿಂದ ಇನ್ನೇನು ತಾನೇ ನಿರೀಕ್ಷಿಸಬಹುದು? ಭಾಷಾವಾರು ಪ್ರದೇಶಗಳನ್ನು ಯಾಕೆ ರಚಿಸಲಾಯಿತು? ಕರ್ನಾಟಕ ಏಕೀಕರಣದ ಇತಿಹಾಸ ಏನು? ಭಾಷೆ ಅಂದರೇನು? ಸಮಾಜದಲ್ಲಿ ಅದರ ಪಾತ್ರವೇನು? ಎಂಬುದನ್ನೆಲ್ಲಾ ಅರಿಯದವರು ಬೆಂಬಲಿಸೋದು ಸಹಜ. ಭಾಷಾವಾರು ಪ್ರಾಂತ್ಯಗಳನ್ನು ಆಡಳಿತದ ಅನುಕೂಲಕ್ಕಾಗಿ ಮಾತ್ರ ರಚಿಸಲಾಯಿತು ಎಂದು
ಬೂಸಿ ಬಿಡುವವರು... ಸಚಿನ್ ಹೇಳಿಕೇನ ಬೆಂಬಲಿಸೋದು ಸಹಜ.
ಸಚಿನ್ ಮಾತಿನಲ್ಲಿರೋ ಟೊಳ್ಳುತನ ಏನು?ಈಗ ಸಚಿನ್ ಹೇಳಿರೋ ಹಾಗೇ ‘ನಾನು ಮೊದಲು ಭಾರತೀಯ’ ಅನ್ನೋದ್ರ ಅರ್ಥ ಏನು? ಭಾರತದ ಹಿತಕ್ಕಾಗಿ ನಾನು ನನ್ನ ರಾಜ್ಯದ ಹಿತವನ್ನು, ನನ್ನ ಭಾಷೆಯ ಹಿತವನ್ನು ಬಿಟ್ಟುಕೊಡ್ತೀನಿ ಅಂತಾನಾ? ಯುದ್ಧದಂತಹ ಕೆಲವು ಸನ್ನಿವೇಶಗಳಲ್ಲಿ ತಾತ್ಕಾಲಿಕವಾಗಿ ಈ ರೀತಿ ಬಿಟ್ಟುಕೊಡುವುದನ್ನು ಒಪ್ಪಬಹುದು. ಸಾಮಾನ್ಯ ಸಂದರ್ಭದಲ್ಲಿ ಈ ಮಾತಿನ ಅರ್ಥವೇನು? ನನ್ನ ದೇಶದಲ್ಲಿ ಭಾಷೆ, ಪ್ರಾದೇಶಿಕತೆಯ ಆಧಾರದ ಮೇಲೆ ಒಗ್ಗಟ್ಟು ಮುರಿಯುವ ಕೆಲಸ ಮಾಡುವುದಿಲ್ಲ ಅಂತಾನಾ? ಹೌದೂ ಅನ್ನೋದಾದ್ರೆ ಸರಿ. ಇವತ್ತಿನ ದಿವಸ ಒಗ್ಗಟ್ಟು ಮುರಿಯೋ ಮಾತು ಯಾವುದು? ಎಲ್ಲಾ ಪ್ರದೇಶಗಳಿಗಿರುವ ಭಾಷಾ, ಸಾಂಸ್ಕೃತಿಕ ಅನನ್ಯತೆಗಳನ್ನು ಕಾಯ್ದುಕೊಳ್ಳಬೇಕೆನ್ನುವುದು ಒಗ್ಗಟ್ಟು ಮುರಿಯುವ ಕ್ರಮವೋ? ಇಡೀ ದೇಶದಲ್ಲಿ ಯಾವುದೋ ಒಂದು ಪ್ರದೇಶದ ಭಾಷೆಯನ್ನು ಆಡಳಿತದಲ್ಲಿ ಜಾರಿಗೊಳಿಸಬೇಕೆನ್ನುವುದು ಒಗ್ಗಟ್ಟು ಮುರಿಯುವ ಕ್ರಮವೋ? ಊರ ದೇವತೆ ಅಣ್ಣಮ್ಮ ದೊಡ್ಡವಳೋ? ಕನ್ನಡತಾಯಿ ರಾಜರಾಜೇಶ್ವರಿ ದೊಡ್ಡವಳೋ? ಭಾರತಮಾತೆ ದೊಡ್ಡವಳೋ? ಎಂಬ ಪ್ರಶ್ನೆಗೆ ಏನುತ್ತರ? ಭಾರತ ಮಾತೆ ದೊಡ್ಡೋಳು, ಕನ್ನಡಮ್ಮ ಅವಳ ಮಗಳು, ಅಣ್ಣಮ್ಮ ಮೊಮ್ಮಗಳು ಅನ್ನೋದು ಸರೀನಾ ಗುರು? ನಿಜವಾಗಿಯೂ ತಾಯಿ ಅಣ್ಣಮ್ಮನೆಂದರೂ, ರಾಜೇಶ್ವರಿಯೆಂದರೂ, ಭಾರತ ಮಾತೆಯೆಂದರೂ ಒಬ್ಬಳೇ ಅಲ್ಲವೇ? ಭಾಳ ದಿನದ ಮೇಲೆ ತಾಯ್ನಾಡಿಗೆ ಹಿಂತಿರುಗಿದ ದೇಶಪ್ರೇಮಿ ಇಲ್ಲಿ ಬೆಂಗಳೂರಿನ ಮಣ್ಣನ್ನು ಎತ್ತಿ ಕಣ್ಣಿಗೊತ್ತಿಕೊಂಡ್ರೆ ಅದು ಬೆಂಗಳೂರಿನ ಮಣ್ಣು ಮಾತ್ರವೇನು? ಅದು ಭಾರತದ ಮಣ್ಣಲ್ಲವೇನು? ಮುಂಬೈ ಅಂದರೆ ಭಾರತವಲ್ಲವೇನು? ನಾನು ಮಹಾರಾಷ್ಟ್ರೀಯ ಅಂದರೆ ಭಾರತೀಯ ಅಂದ ಹಾಗಲ್ಲವೇ? ಸಚಿನ್ ನಾನು ಮೊದಲು ಭಾರತೀಯ ಆಮೇಲೆ ಮಹಾರಾಷ್ಟ್ರೀಯ ಅನ್ನೋ ಮಾತಂದದ್ದು ತಪ್ಪಲ್ವಾ? ನಾನು ಮಹಾರಾಷ್ಟ್ರೀಯನೂ ಹೌದು, ಭಾರತೀಯನೂ ಹೌದು ಅನ್ನಬೇಕಾದ್ದು ಸರಿಯಲ್ವಾ? ನಾನು ಮೊದಲು ಭಾರತೀಯ ಆಮೇಲೆ ಮಹಾರಾಷ್ಟ್ರೀಯ ಅನ್ನೋದು ಕೃತಕ ಅನ್ಸಲ್ವಾ ಗುರು? ಸಚಿನ್‍ಗೆ ಭಾರತೀಯತೆ ಮತ್ತು ಮಹಾರಾಷ್ಟ್ರೀಯತೆ ಬಂದಿರೋದು ಒಟ್ಟೊಟ್ಗೆ ಅಲ್ವಾ? ಒಂದುಕ್ ಇನ್ನೊಂದು ವಿರುದ್ಧ ಅನ್ನೋ ಮನಸ್ಥಿತಿ ಸರೀನಾ? ನಿಜವಾಗಿ ನಾಡೊಡೆಯುತ್ತಿರುವವರು ಯಾರೆಂದರೆ ಅಣ್ಣಮ್ಮ, ರಾಜೇಶ್ವರಿ, ಭಾರತಾಂಬೆ ಅನ್ನೋ ಈ ಮೂವರಲ್ಲೂ ಒಬ್ಬಳನ್ನೇ ಕಾಣದೆ ಮೂವರಲ್ಲೂ ಪರಸ್ಪರ ಪೈಪೋಟಿಯ ಮೂರು ಬೇರೆ ಬೇರೆ ದೈವಗಳನ್ನು ಕಾಣುತ್ತಿರುವ ಹುಸಿ ರಾಷ್ಟ್ರೀಯವಾದಿಗಳು ಅನ್ನುಸ್ತಿಲ್ವಾ ಗುರು?
ಮುಂಬೈ ಎಲ್ಲಾ ಭಾರತೀಯರಿಗೆ ಸೇರಿದ್ದು!ಮುಂಬೈ ಎಲ್ಲಾ ಭಾರತೀಯರಿಗೂ ಸೇರಿದ್ದು ಅನ್ನುವುದರ ಅರ್ಥವೇನು ? ಮುಂಬೈಗೆ ಯಾವ ಭಾರತೀಯ ಬೇಕಾದರೂ ಬರಬಹುದು, ಇರಬಹುದು, ದುಡಿಯಬಹುದು ಅನ್ನುವುದು ಮಾತ್ರವೇ ಆದರೆ ಇದು ಒಪ್ಪುವ ಮಾತೇ. ಆದರೆ ತಡೆಯಿಲ್ಲದ ವಲಸೆ, ಎಲ್ಲಾ ಕೆಲಸದಲ್ಲೂ ತಮ್ಮವರನ್ನು ತಂದು ತುಂಬುವ ಉಮ್ಮೇದಿ, ಮರಾಠಿ ಭಾಷಿಕರೆಂದರೆ ಟೀ, ಕಾಫಿ, ಡಬ್ಬಾವಾಲಾ, ರಿಕ್ಷಾವಾಲಗಳು ಎನ್ನುವಂತೆ ಮುಂಬೈನಲ್ಲಿ ಸನ್ನಿವೇಶ ಹುಟ್ಟಿಕೊಂಡಿರುವಾಗ, ರೈಲ್ವೇ ಬ್ಯಾಂಕು ಮೊದಲಾದ ಎಲ್ಲಾ ಕೆಲಸಕ್ಕೂ ನೇಮಕಾತಿ ಪರೀಕ್ಷೆಗಳು ಹಿಂದಿಯಲ್ಲಿ ನಡೆಯುತ್ತಿರುವಾಗ, ಅಂಥಾ ಪರೀಕ್ಷೆಗಳಿಗೆ ಬಿಟ್ಟಿ ರೈಲುಗಳಲ್ಲಿ ಬಿಹಾರ, ಉತ್ತರ ಪ್ರದೇಶಗಳಿಂದ ಜನರನ್ನು ಕರೆತರುತ್ತಿರುವಾಗ, ಆಡಳಿತ ಭಾಷೆಯನ್ನು ಹಿಂದಿಗೆ ಬದಲಾಯಿಸಿ ಎನ್ನುವಾಗ... ಮುಂಬೈ ಎಲ್ಲಾ ಭಾರತೀಯರಿಗೆ ಸೇರಿದ್ದು ಎನ್ನುವ ಮಾತಿಗೆ ಬೇರೆಯೇ ಅರ್ಥ ಹುಟ್ಕೊಳುತ್ತೆ. ಮುಂಬೈ ಮರಾಠಿಗರಿಗೆ ಸೇರಿದ್ದಲ್ಲಾ ಎನ್ನುವ ಹೇಳಿಕೆಗೂ ಮುಂಬೈ ಇಡೀ ಭಾರತೀಯರಿಗೆಲ್ಲಾ ಸೇರಿದ್ದು ಅನ್ನುವುದಕ್ಕೂ ಅಂಥಾ ವ್ಯತ್ಯಾಸ ಏನಿದೆ ಗುರು? ಹಿಂದೆ ಈ ಮಾತೂ ಆಗಿಹೋಗಿದೆ. ಮುಂಬೈ ಬರೀ ಮರಾಠಿಗರು ಕಟ್ಟಿದ್ದಲ್ಲಾ, ಎಲ್ಲಾ ಭಾರತೀಯರು ಇದನ್ನು ಕಟ್ಟಿದ್ದಾರೆ ಎಂದಿದ್ದರು. ಏನ್ ಗುರುಗಳೇ... ಯಾರಾದರೂ ಮುಂಬೈ ನಗರವನ್ನು ಕಟ್ಟಲೆಂದು, ಬೆಳೆಸಲೆಂದು ಮುಂಬೈಗೆ ವಲಸೆ ಹೋಗಿರ್ತಾರಾ? ಅಥ್ವಾ ಹೊಟ್ಟೆಪಾಡಿಗಾಗಿ ಮುಂಬೈ ಮಹಾನಗರಿಯ ಹೊಸಿಲು ತುಳಿದಿರ್ತಾರಾ? ಏನೋ ಉಪಕಾರ ಮಾಡಕ್ಕೆ ಮುಂಬೈಗೆ ವಲಸೆ ಬಂದು, ಊರು ಉದ್ಧಾರ ಮಾಡಿದ ಹಾಗಿರೋ ದೊಡ್ಡಸ್ತಿಕೆಯ ಬೂಟಾಟಿಕೆಯ ಮಾತುಗಳನ್ನು ಆಡೋದು ಬಿಟ್ಟು... ತಿಳಿಯಬೇಕಾದ್ದು ಒಂದೇ. ಭಾರತದ ಮೂಲೆಮೂಲೆಯಿಂದ ಹಣ, ಬದುಕು, ಹೆಸರು, ಉನ್ನತಿಯನ್ನು ಅರಸಿ ಮುಂಬೈ ಮಹಾನಗರಿಗೆ ಕಾಲಿಡುವ ವಲಸಿಗರು ತಮ್ಮತನವನ್ನು, ನಡೆನುಡಿಯನ್ನು, ಸಂಸ್ಕೃತಿಗಳನ್ನು ತಮ್ಮ ತಮ್ಮ ಮನೆಗಳಿಗೆ ಸೀಮಿತಗೊಳಿಸಿಕೊಂಡು ಮುಂಬೈನ ಮರಾಠಿ ಮುಖ್ಯವಾಹಿನಿಯಲ್ಲಿ ಬೆರೆಯಬೇಕು. ಹಿಂದಿ ರಾಷ್ಟ್ರಭಾಷೆ, ಭಾರತದ ಯಾವ ಮೂಲೆಯಲ್ಲಾದರೂ ಇದು ನಡೀಬೇಕು ಅನ್ನುವ ಸುಳ್ಳಿನ ಪಿತ್ಥವನ್ನು ನೆತ್ತಿಯಿಂದಿಳಿಸಿಕೊಂಡು ನೆಟ್ಟಗೆ ಮರಾಠಿ ಮುಖ್ಯವಾಹಿನಿಯಲ್ಲಿ ಬೆರೆತು ಬದುಕುವುದಾದರೆ... ಹೌದು... ಮುಂಬೈ ಎಲ್ಲಾ ಭಾರತೀಯರದ್ದೇ. ಯಾಕಂದ್ರೆ ಈ ಮಾತು ನಾಳೆ ಬೆಂಗಳೂರಿಗೂ ಅನ್ವಯವಾಗೋದೇ! ಏನಂತೀ ಗುರು?