ಆಲೂರು ವೆಂಕಟರಾಯರು ಮತ್ತು ರಾಷ್ಟ್ರೀಯತೆಯ ವ್ಯಾಖ್ಯಾನ!

ಇಂದು ಆಲೂರು ವೆಂಕಟರಾಯರ ನಲವತ್ತಾರನೆಯ ಪುಣ್ಯದಿನ. ಬನವಾಸಿ ಬಳಗ ಕರ್ನಾಟಕ ಕುಲಪುರೋಹಿತರಿಗೆ ನಮನಗಳನ್ನು ಸಲ್ಲಿಸುತ್ತದೆ.

ಕರ್ನಾಟಕ ಕುಲಪುರೋಹಿತರಾದ ಆಲೂರು ವೆಂಕಟರಾಯರು ಉಜ್ವಲ ದೇಶಭಕ್ತರು. ತಮ್ಮ ಬದುಕನ್ನೇ ದೇಶಸೇವೆಗೆ ಮುಡುಪಿಟ್ಟು ಲೋಕಮಾನ್ಯ ಬಾಲಗಂಗಾಧರ ತಿಲಕರ ಸಹವರ್ತಿಯಾಗಿಯೂ ದುಡಿದವರು. ಕರ್ನಾಟಕದಲ್ಲಿ ಭಾರತವಿದೆ ಎನ್ನುವ ವಿಶಿಷ್ಟ ತತ್ವದ ಮೂಲಕ ನಾಡಿಗೆ ಕರ್ನಾಟಕತ್ವದ ಬೀಜಮಂತ್ರ ಕೊಟ್ಟವರು. ಭಾರತೀಯತೆ ಮತ್ತು ಕರ್ನಾಟಕತ್ವಗಳ ನಡುವಿನ ಸಂಬಂಧಗಳನ್ನು ಸ್ಪಷ್ಟವಾಗಿ ಎಳೆ‍ಎಳೆಯಾಗಿ ಬಿಡಿಸಿಡುವ ರಾಯರು ರಾಷ್ಟ್ರೀಯತೆಯ ಬಗ್ಗೆ ಬರೆದಿರುವ ಕೆಲ ಮಾತುಗಳನ್ನು ಭಾರತದ ಸ್ವಾತಂತ್ರ ದಿನಾಚರಣೆಯ ಸಂದರ್ಭದಲ್ಲಿ ನೆನಪಿಸಿಕೊಳ್ಳುವುದು ಸೂಕ್ತವಾಗಿದೆ.


ಭಾರತೀಯ ಸಂಸ್ಕೃತಿಯೆಂಬ ಬಂಗಾರ!
ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ತಮಿಳು, ಬಂಗಾಲ ಮುಂತಾದ ಪ್ರಾಂತಗಳು ಭಿನ್ನ ಭಿನ್ನ ಜೀವಿಗಳೆಂದು ತಿಳಿಯಲು ಅಡ್ಡಿಯಿಲ್ಲ. ಏಕೆಂದರೆ ಆ ಪ್ರಾಂತಗಳು ತಮ್ಮ ತಮ್ಮ ಭಾಷೆಯ ದ್ವಾರದಿಂದ ತಮ್ಮ ತಮ್ಮ ವಿಶಿಷ್ಟ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸಿಕೊಂಡಿರುತ್ತವೆ. ತಮ್ಮ ತಮ್ಮ ಸಂಸ್ಕೃತಿಗಳನ್ನು ವಿಶಿಷ್ಟ ಎರಕದಲ್ಲಿ ಹೊಯ್ದುಕೊಂಡಿರುತ್ತವೆ. ಭಾರತೀಯ ಸಂಸ್ಕೃತಿಯೆಂಬ ಬಂಗಾರವನ್ನು ತೆಗೆದುಕೊಂಡು ಅದರಿಂದ, ತಮತಮಗೆ ಇಷ್ಟವಾದ ಆಭರಣಗಳನ್ನು ಮಾಡಿಕೊಂಡಿರುತ್ತವೆ. ಪರಮಾತ್ಮನು ಭಿನ್ನ ಭಿನ್ನ ಜೀವಿಗಳಲ್ಲಿ ಅಂತರ್ಯಾಮಿ ರೂಪದಿಂದ ಇದ್ದಂತೆ, ಭಾರತಮಾತೆಯು ಈ ಭಿನ್ನ ಭಿನ್ನ ಪ್ರಾಂತಗಳಲ್ಲಿ ಅಂತರ್ಯಾಮಿಯಾಗಿದ್ದಾಳೆ.

ಕರ್ನಾಟಕದಿಂದ ಭಾರತ!
ಪೃಥ್ವಿ ದೇವತೆಗೆ ತನ್ನ ಶಕ್ತಿಯ ಅವಿರ್ಭಾವವಾಗುವುದಕ್ಕೆ ಭಾರತ ಮಾತೆಯ ಅವಶ್ಯಕತೆಯಿದ್ದಂತೆ, ಭಾರತಮಾತೆಗೆ ಕರ್ನಾಟಕ ಮಾತೆಯ ಅವಶ್ಯಕತೆಯಿರುತ್ತದೆ. ಸಾರಾಂಶ, ಜಗತ್ತಿನ ಉದ್ಧಾರವಾಗುವುದಕ್ಕೆ ಭರತಖಂಡವು ಜೀವದಿಂದುಳಿಯುವುದು ಎಷ್ಟು ಅವಶ್ಯವಿರುತ್ತದೆಯೋ ಅಷ್ಟೇ ಭರತ ಖಂಡದ ಉದ್ಧಾರಕ್ಕೆ ಕರ್ನಾಟಕವು ಜೀವದಿಂದುಳಿಯುವುದು ಅವಶ್ಯವಿರುತ್ತದೆ. ಭರತ ಖಂಡವಿಲ್ಲದೆ ಕರ್ನಾಟಕ ಮುಂತಾದ ಪ್ರಾಂತಗಳು ಇಲ್ಲವೆಂಬುದು ಎಷ್ಟು ನಿಜವೋ ಅಷ್ಟೇ, ಕರ್ನಾಟಕ ಮುಂತಾದ ಪ್ರಾಂತಗಳಿಲ್ಲದೆ ಭರತಖಂಡವಿಲ್ಲವೆಂಬುದೂ ನಿಜವು. ಭಾರತೀಯನಲ್ಲದವನು ಹೇಗೆ ನಿಜವಾದ ಕರ್ನಾಟಕೀಯನಾಗಲಾರನೋ ಹಾಗೆಯೇ ಕರ್ನಾಟಕೀಯನಲ್ಲದವನು ನಿಜವಾದ ಭಾರತೀಯನಾಗಲಾರನು. ಕರ್ನಾಟಕವು ಕನ್ನಡಿಗರ ದೇಹವು ಮತ್ತು ಜೀವವು. ಪ್ರತಿಯೊಬ್ಬ ಜೀವನೂ ಹೇಗೆ ತನ್ನ ಜೀವದ ಮುಖಾಂತರವಾಗಿಯೇ ಪರಮಾತ್ಮನನ್ನು ಸಾಕ್ಷೀಕರಿಸಿಕೊಳ್ಳತಕ್ಕದ್ದೋ ಹಾಗೆ, ಕರ್ನಾಟಕಸ್ಥರು ಕರ್ನಾಟಕದ ಮುಖಾಂತರವಾಗಿಯೇ ಭಾರತಮಾತೆಯ ಸಾಕ್ಷಾತ್ಕಾರವನ್ನು ಮಾಡಿಕೊಳ್ಳತಕ್ಕದ್ದು. ಅವರಿಗೆ ಅನ್ಯಮಾರ್ಗವಿಲ್ಲ. ಅನ್ಯಮಾರ್ಗದಿಂದ ಅವಳನ್ನು ಕಾಣಲೆತ್ನಿಸುವುದು ಆತ್ಮವಂಚನೆಯು. ಅದು ಪರರ ಮುಖಾಂತರವಾಗಿ ಪರಮಾತ್ಮನನ್ನು ಕಾಣಲಿಚ್ಛಿಸುವಂತೆ ನಿರರ್ಥಕವು. ಭಾರತದ ಸೇವೆಯನ್ನು ಮಾಡುವುದಕ್ಕೆ ಹದಿನಾರಾಣೆ ಕರ್ನಾಟಕತ್ವವನ್ನು ಹೊಂದಿರುವುದರಿಂದ ಮಾತ್ರಾ ಸಾಧ್ಯ. ಅರೆಕೊರೆ ಕರ್ನಾಟಕಸ್ಥರು ಹಾಗೆ ಮಾಡಲಾರರೆಂಬುದು ಸ್ಪಷ್ಟ!!

ಕರ್ನಾಟಕಾಂತರ್ಗತ ಭಾರತಮಾತೆಯನ್ನು ಕಾಣಿರಿ!
ನಾಳೆ, ಜಗತ್ತೆಲ್ಲವೂ ಒಂದೇ ಧರ್ಮದಿಂದ, ಒಂದೇ ರಾಜ್ಯಪದ್ದತಿಯಿಂದ, ಒಂದೇ ಭಾಷೆಯಿಂದ, ಒಂದೇ ಸಂಸ್ಕೃತಿಯಿಂದ, ಒಂದೇ ತೆರನಾದ ಆಚಾರ ವಿಚಾರಗಳಿಂದ, ಒಂದೇ ತರಹದ ಉಡುಪು ತೊಡಪುಗಳಿಂದ ಬದ್ಧವಾದರೆ ಅದು ಎಷ್ಟು ಸುಂದರವಾಗಿ ಕಂಡೀತು? ನಿಜಕ್ಕೂ ಇದು ಅತ್ಯಂತ ಸ್ಪೃಹಣೀಯವಾದ ಕಲ್ಪನೆಯು. ಈ ಕಲ್ಪನೆಯಲ್ಲಿ ಅದ್ಭುತವಾದ ಶಕ್ತಿಯಿದೆ. ಆದರೆ, ದುರ್ದೈವದಿಂದ, ಅದು ತಪ್ಪು ಕಲ್ಪನೆಯು, ಅಸಾಧ್ಯವಾದ ಕಲ್ಪನೆಯು, ಅದು ಮೃಗಜಲವು.
ಹಾಗಾದರೆ ಜಗತ್ತನ್ನು ಒಡೆದು ತುಂಡು ತುಂಡಾಗಿ ಮಾಡಿಬಿಡಬೇಕೋ? ಅವುಗಳನ್ನು ಒಟ್ಟುಗೂಡಿಸುವ ಪ್ರಯತ್ನವನ್ನೇ ಮಾಡಬಾರದೋ? ಜಗತ್ತು ಯಾವಾಗಲೂ ಭಿನ್ನ ಭಿನ್ನ ಪ್ರಾಣಿಗಳ ಬಡಿದಾಟದ ಕ್ಷೇತ್ರವಾಗಿಯೇ ಉಳಿಯಬೇಕೋ ಎಂದು ಕೇಳಿದರೆ ಇಲ್ಲ, ಅದೂ ದೊಡ್ಡತಪ್ಪು. ಒಂದುಗೂಡಿಸುವ ತತ್ವವು ಯಾವಾಗಲೂ ಸ್ತುತ್ಯವೇ. ಒಂದುಗೂಡಿಸುವಾಗ ಜೀವಿಗಳನ್ನು ಕೊಂದು ಒಂದುಗೂಡಿಸಲೆತ್ನಿಸಬಾರದೆಂಬುದೇ ನಮ್ಮ ಅಂಬೋಣದ ಅರ್ಥ. ಜೀವಂತ ಸಂಸ್ಕೃತಿಗಳನ್ನು ಏಕಸೂತ್ರದಿಂದ ಬದ್ಧಮಾಡುವುದು ಪುಣ್ಯವು. ಕರ್ನಾಟಕತ್ವದ ಈ ಸೂತ್ರವನ್ನು ಅನುಸರಿಸಿ, ರಾಷ್ಟ್ರೀಯತ್ವದ ನಿಜವಾದ ಕಲ್ಪನೆಯನ್ನು ಜನತೆಯಲ್ಲಿ ಬೇರೂರಿ ಇಡೀ ಹಿಂದೂಸ್ಥಾನದಲ್ಲಿ ಸನಾತನ ರಾಷ್ಟ್ರೀಯತ್ವವನ್ನು ಪ್ರತಿಷ್ಠಾಪಿಸುವರೆಂದು ಆಶಿಸುತ್ತೇವೆ. ಈ ಮಾತಿನ ಅರಿವಾದರೆ ಅಪರೋಕ್ಷ, ಮರೆವಾದರೆ ವಿನಾಶ.
ಕೊನೆಗೆ, ಈ ವಿವಿಧ ಸಂಸ್ಕೃತಿಗಳ ನವರತ್ನದ ಹಾರವನ್ನು ಧರಿಸಿದ - ಅಲ್ಲ, ಮಂಗಳ ಸೂತ್ರವನ್ನು ಕೊರಳಲ್ಲಿ ಕಟ್ಟಿಕೊಂಡ ಕರ್ನಾಟಕಾಂತರ್ಗತ ಭಾರತ ಮಾತೆಗೆ ನಮಸ್ಕರಿಸಿ ಈ ಲೇಖನವನ್ನು ಮುಗಿಸುತ್ತೇವೆ.
(ಜಯಕರ್ನಾಟಕ, 1964, ಮಾರ್ಚ್)

1 ಅನಿಸಿಕೆ:

ಪೋಟೋಪ್ರೇಮಿ ಅಂತಾರೆ...

ಕೆಮೆರದಿಂದ ತೆಗೆದ ಇವರ ಪೋಟೊ ಇಲ್ವ?

ಇಲ್ಲಿ ಹಾಕಿರುವ ಪೋಟೋ ಚಂದಾಮಾಮದ ಒಂದು ಚಿತ್ತಿರದಂತಿದೆ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails