ಭಾರತೀಯ ಸ್ಟೇಟ್ ಬ್ಯಾಂಕ್ನ ಬೆಂಗಳೂರು ವೃತ್ತದಲ್ಲಿ ಅಂದ್ರೆ ಕರ್ನಾಟಕದ ವ್ಯಾಪ್ತೀಲಿ ಖಾಲಿಯಿದ್ದ 800 ಗುಮಾಸ್ತರ ಹುದ್ದೆಗಳನ್ನು ತುಂಬಕ್ಕೆ ಬ್ಯಾಂಕು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆದಿದ್ದಾರೆ. ಈ ಮೂಲಕ ಕರ್ನಾಟಕದ 800 ನಿರೋದ್ಯೋಗಿಗಳ ಮನೇ ಒಲೆ ಉರಿಯಲು ಸಹಾಯ ಆಗುತ್ತೆ ಅಂತ ನಾವಂದುಕೊಂಡ್ರೆ ದಡ್ರಾಗ್ತೀವಿ ಗುರು!
ನೂರು ಮೀಟರ್ ಓಟದ ಸ್ಪರ್ಧೇಲಿ...
ಈ ನೇಮಕಾತಿ ಮಾಡ್ಕೊಳ್ಳೋವಾಗ ಅಭ್ಯರ್ಥಿಗಳು ಹಲವಾರು ಅರ್ಹತೆಗಳನ್ನು ಹೊಂದಿರಬೇಕು ಅಂತಾ ಬ್ಯಾಂಕ್ ನೇಮಕಾತಿ ಮಾಡೋರು ನಿಗದಿ ಮಾಡಿದಾರೆ. ಇದರಲ್ಲಿ ಸ್ಥಳೀಯ ಭಾಷೆ ಗೊತ್ತಿರೋದು "ಅಡಿಷನಲ್ ಕ್ವಾಲಿಟಿ" ಅಂದ್ರೆ ಹೆಚ್ಚುವರಿ ಅರ್ಹತೆಯಂತೆ. ಇಂಗ್ಲೀಷಿನ ಅರಿವು ಕಡ್ಡಾಯವಂತೆ. ಹಾಗಂತಾ ಅವರ ಜಾಹೀರಾತಲ್ಲಿ ಹಾಕಿದಾರೆ.
"ತಪ್ಪೇನ್ರಿ? ಇವತ್ತಿನ ದಿವಸ ಬ್ಯಾಂಕುಗಳೆಲ್ಲಾ ಕೆಲಸಾ ಮಾಡೋದು ಇಂಗ್ಲಿಷ್ನಲ್ಲಲ್ವಾ?" ಅಂತಾ ಕೇಳ್ತೀರೇನೋ... ಹಂಗಾದ್ರೆ ಹಿಂದಿ ಭಾಷೆಯೋರಿಗೆ ಯಾಕೆ ವಿಶೇಷ ಸವಲತ್ತು ಕೊಡ್ತಿದಾರೆ ಇವರು? ಅಂತ ಹುಬ್ಬೇರಿಸೋ ಹಾಗೆ ಮುಂದಿನ ಸಾಲುಗಳಲ್ಲಿ ಬರ್ದಿದಾರೆ.
ಈ ಬ್ಯಾಂಕು ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಇಂಗ್ಲಿಷ್ ಮತ್ತು ಹಿಂದೀಲಿ ಇರುತ್ತೆ. ಉತ್ತರ ಬರೆಯೋರು ಹಿಂದೀಲಿ ಬೇಕಾದ್ರೂ ಬರೀಬೌದು! ಅಕಸ್ಮಾತ್ ಪಾಸಾಗಿ ಸಂದರ್ಶನಕ್ ಹೋದ್ರೆ ಅಲ್ಲೂ ಹಿಂದೀನಾ ಅಯ್ಕೆ ಮಾಡ್ಕೊಬೌದು!!
ಈ ಸಾಲುಗಳ ಅವಶ್ಯಕತೆ ಏನು? ಅಂತಾ ಸ್ವಲ್ಪ ನೋಡು ಗುರು! ಕರ್ನಾಟಕದ ಶಾಖೆಗಳಲ್ಲಿ ಕೆಲಸಕ್ಕೆ ಸೇರೋನಿಗೆ ಕನ್ನಡ ಕಡ್ಡಾಯವಾಗಿ ಬರಬೇಕೆಂಬ ನಿಯಮ ಇಲ್ಲ. ಬ್ಯಾಂಕು ಪರೀಕ್ಷೆ ತೊಗೊಳ್ಳೋ ಕನ್ನಡಿಗನಿಗೆ ತನ್ನದಲ್ಲದ ಇಂಗ್ಲಿಷ್ ಅರಿವು ಕಡ್ಡಾಯ. ಆದ್ರೆ ಹಿಂದೀ ತಾಯ್ನುಡಿಯವನಿಗೆ? ಜಾಹೀರಾತಲ್ಲಿ ಇಂಗ್ಲಿಷ್ ವ್ಯವಹಾರ ಜ್ಞಾನ ಕಡ್ಡಾಯ ಅಂತಾ ಇದ್ರೂ ಬರೀ ಇಂಗ್ಲಿಷಿನ ಒಂದು ಪ್ರಶ್ನೆಪತ್ರಿಕೇಲಿ ಪಾಸ್ ಆದ್ರೆ ಸಾಕು, ಉಳಿದದ್ದೆಲ್ಲಾ ಹಿಂದೀಲಿ ಬರ್ದು ಪಾಸಾಗಬಹುದು ಅಂತಲ್ವಾ? ಬ್ಯಾಂಕಿನ ವ್ಯವಹಾರಕ್ಕೆ ಬೇಕಾಗೋ ಇಂಗ್ಲಿಷ್ ಬರದಿದ್ರೂ, ತಾನು ವ್ಯವಹರಿಸಬೇಕಾಗಿರೋ ಜನರ ಭಾಷೆಯ ಗಾಳಿಗಂಧವೇ ಇಲ್ದಿದ್ರೂ ಕೆಲಸ ಸಿಗಕ್ಕೆ ಯಾವ ಸಮಸ್ಯೇನೂ ಇಲ್ಲ. ಇದು ನೂರು ಮೀಟರ್ ಓಟದ ಸ್ಪರ್ಧೇಲಿ ಹಿಂದಿಯವನನ್ನು ಎಂಬತ್ತು ಮೀಟರ್ ಮುಂದೆ ನಿಲ್ಸಿ 1,2,3 ಸ್ಟಾರ್ಟ್... ಅನ್ನೋ ಮೋಸದಾಟದ ಹಾಗಲ್ವಾ? ತನ್ನೊಡಲೊಳಗಿರುವ ಎಲ್ಲಾ ನುಡಿಗಳನ್ನೂ ಜನರನ್ನೂ ಸಮಾನವಾಗಿ ನೋಡದೆ ತಾರತಮ್ಯ ಮಾಡ್ತಿರೋ ಈ ವ್ಯವಸ್ಥೆ ಸರೀನಾ ಗುರು?
ತನ್ನ ಭಾಷಾನೀತೀನ ಭಾರತ ಸರ್ಕಾರ ಬದಲಾಯಿಸಿಕೊಂಡು ....ಕರ್ನಾಟಕದಲ್ಲಿ (ತಮಿಳುನಾಡಲ್ಲಿ) ಈ ಬ್ಯಾಂಕು ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಇಂಗ್ಲಿಷ್ ಮತ್ತು ಕನ್ನಡದಲ್ಲಿ (ತಮಿಳಿನಲ್ಲಿ) ಇರುತ್ತೆ. ಉತ್ತರ ಬರೆಯೋರು ಕನ್ನಡದಲ್ಲಿ(ತಮಿಳಿನಲ್ಲಿ) ಬೇಕಾದ್ರೂ ಬರೀಬೌದು! ಅಕಸ್ಮಾತ್ ಪಾಸಾಗಿ ಸಂದರ್ಶನಕ್ ಹೋದ್ರೆ ಅಲ್ಲೂ ಕನ್ನಡಾನ (ತಮಿಳನ್ನು) ಅಯ್ಕೆ ಮಾಡ್ಕೊಬೌದು!! ಅನ್ನೋ ರೀತಿಯಲ್ಲಿ ಆಯಾ ಪ್ರದೇಶಗಳ ನುಡಿಯಲ್ಲಿ ಪರೀಕ್ಷೆಗಳೂ, ಸಂದರ್ಶನಗಳೂ ನಡೆಯೋ ವ್ಯವಸ್ಥೆ ಭಾರತದಲ್ಲಿ ಹುಟ್ಕೊಳ್ಳೋ ತನಕಾ ಈ ದೇಶದಲ್ಲಿ ಸಮಾನತೆ ಅನ್ನೋದು ಬರೀ ಬೊಗಳೇ ಅನ್ನುಸ್ತಿಲ್ವಾ ಗುರು?
"ಬ್ಯಾಂಕು ಕೆಲಸ ವರ್ಗಾವಣೆ ಆಗೋ ಕೆಲಸಾ, ಇಡೀ ಭಾರತದಲ್ಲಿ ಎಲ್ಲಿಗೆ ಬೇಕಾದ್ರೂ ಪೋಸ್ಟಿಂಗ್ ಆಗ್ಬಹುದು" ಅಂತನ್ನೋ ವಾದಕ್ಕೆ ಮರುಳಾಗಿ ಬಿಡಬೇಡಿ... ಎಲ್ಲಿಗೇ ವರ್ಗಾ ಮಾಡುದ್ರೂ ಆಯಾ ಪ್ರದೇಶದ ನುಡೀಲಿ ವ್ಯವಹರಿಸೋ ತರಬೇತಿ ಕೊಟ್ಟು ಕಳಿಸಕ್ಕೂ ಆಗುತ್ತೆ ಮತ್ತು ಅದೇ ಸರಿಯಾದದ್ದು ಗುರು!
2 ಅನಿಸಿಕೆಗಳು:
ಸರಿಯಾದ ಮಾತು ಗುರು.
ಉತ್ತರ ಪ್ರದೇಶದಲ್ಲಿ ಕೆಲಸ ಗಿಟ್ಟಿಸಿಕೊಳ್ಳುವ ಯಾವುದೇ ಮನುಷ್ಯನಿಗೆ ಹಿಂದಿ ಗೊತ್ತಿರಬೇಕಾದ ಅವಶ್ಯಕತೆ ಎಷ್ಟಿದೆಯೋ, ಕರ್ನಾಟಕದಲ್ಲಿ ಕೆಲಸ ಗಿಟ್ಟಿಸಿಕೊಳ್ಳುವ ಪ್ರತಿಯೊಬ್ಬ ಮನುಷ್ಯನಿಗೂ ಕನ್ನಡ ತಿಳಿದಿರಬೇಕಾದ ಅಷ್ಟೇ ಅವಶ್ಯಕತೆ ಇರಬೇಕು.
ಅಂತಹ ವ್ಯವಸ್ಥೆಯೇ ಸರಿಯಾದ ಒಪ್ಪುಕೂಟ.
ರಾಷ್ಟ್ರಭಾಷೆ ಹಿ೦ದಿ ಎ೦ಬ ’ಹಸಿ ಸುಳ್ಳನ್ನು’ ಮು೦ದಿಟ್ಟುಕೊ೦ಡು, ಭಾರತ ಒಕ್ಕೂಟದ ಇತರ ಎಲ್ಲಾ ಭಾಷಿಕರಿಗೆ ಅನ್ಯಾಯ. ಸಹಿಸಲಸಾದ್ಯ.
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!