ಆಹಾ! ಭಾರತ ದೇಶದಲ್ಲಿ ಅಪರೂಪಕ್ಕೊಂದು ಸಕ್ಕತ್ ಒಳ್ಳೇ ನಡೆ ಒಪ್ಪುಕೂಟಕ್ಕೆ ಒಪ್ಪೋ ಅಂಥಾ ದಿಕ್ಕಲ್ಲಿ ರೈಲ್ವೇ ಇಲಾಖೆಯಿಂದ ನಡೆದಿದೆ ಗುರು! ನಿನ್ನೆ ರೈಲು ಮಂತ್ರಿ ಶ್ರೀಮತಿ ಮಮತಾ ಬ್ಯಾನರ್ಜಿಯವರು ಇನ್ಮುಂದೆ ರೈಲು ಪರೀಕ್ಷೆಗಳನ್ನು ಸ್ಥಳೀಯ ಭಾಷೆಯಲ್ಲೂ ಬರೆಯ ಬಹುದು ಅಂದ್ರು. ಜೊತೆಗೆ ಒಂದೇ ಹೊತ್ತಿನಲ್ಲಿ ಇಡೀ ದೇಶದ ತುಂಬಾ ರೈಲು ನೇಮಕಾತಿ ನಡೆಯುತ್ತೆ ಅಂತಾನೂ ಅಂದ್ರು. ಇದೆಲ್ಲಾ ಆಗಿದ್ದು ಕನ್ನಡಿಗರ ಒಗ್ಗಟ್ಟಿನ ಹೋರಾಟದಿಂದಾನೇ ಅನ್ನೋದು ಸ್ಪಟಿಕದಷ್ಟು ಸ್ಪಷ್ಟ. ಎರಡು ವರ್ಷದ ಹೋರಾಟದ ಕಾರಣದಿಂದ ಬರೀ ಕರ್ನಾಟಕಕ್ ಮಾತ್ರಾ ಅಲ್ಲಾ... ಇಡೀ ಭಾರತಕ್ಕೆ ಉಪಕಾರ ಆಗೋ ಅಂಥಾ ಒಂದು ನಿಲುವಿಗೆ ಕೇಂದ್ರಸರ್ಕಾರ ಬಂದಿದೆ ಅಂದ್ರೆ ತಪ್ಪಾಗಲ್ಲ.
ರೈಲು ನೇಮಕಾತಿ ಅನ್ಯಾಯ ಬೆಳಕಿಗೆ ತಂದಿದ್ದು...
ರೈಲು ನೇಮಕಾತಿಯ ಅನ್ಯಾಯ ಮೊದಲಿಗೆ ಬಯಲಿಗೆ ಬಂದಿದ್ದು ಏನ್ಗುರುವಿನಲ್ಲೇ... ಆಗಸ್ಟ್ ೨೦೦೭ರಲ್ಲಿ ಇವರು ಜಾಹೀರಾತು ಕೊಟ್ಟಾಗಲೇ ಏನ್ಗುರುವಿನಲ್ಲಿ ಇದರ ಬಗ್ಗೆ ಬರೆದಿದ್ದೆವು. ನಂತರದ ದಿನಗಳಲ್ಲಿ ಈ ಅನ್ಯಾಯದ ವಿರುದ್ಧವಾಗಿ ದನಿಯೆತ್ತಿ ಹೋರಾಟದ ಕಣಕ್ಕೆ ಧುಮುಕಿದ್ದು ಕರ್ನಾಟಕ ರಕ್ಷಣಾ ವೇದಿಕೆಯೋರು. ನೇಮಕಾತಿ ಪರೀಕ್ಷೆಗೆ ಉತ್ತರದಿಂದ ಪುಗಸಟ್ಟೆ ರೈಲಲ್ಲಿ ಜನರನ್ನು ತುಂಬ್ಕೊಂಡು ಬಂದಾಗ ಈ ಹೋರಾಟ ಉಗ್ರ ಸ್ವರೂಪ ಪಡೀತು. ನೈಋತ್ಯ ರೈಲ್ವೇ ಕಛೇರಿಗೆ ಮುತ್ತಿಗೆ ಹಾಕಿದಾಗ ರೈಲು ಇಲಾಖೆ ಎಚ್ಚೆತ್ತುಕೊಂಡು ಇಡೀ ನೇಮಕಾತಿ ಪ್ರಕ್ರಿಯೇನಾ ಮುಂದೂಡ್ತು. ಇಂಥದೇ ಹೋರಾಟ ನಮ್ಮಿಂದಲೇ ಪ್ರೇರಣೆ ನಡೆದ ಹಾಗೆ ಮಹಾರಾಷ್ಟ್ರದಲ್ಲೂ... ಭಾರತದ ಬೇರೆಬೇರೆ ಕಡೆಗಳಲ್ಲೂ ನಡೀತು. ಆಮೇಲಾದ ರಾಜಕೀಯ ಬದಲಾವಣೆಗಳಲ್ಲಿ ಹೊಸ ಸರ್ಕಾರ, ಹೊಸ ಮಂತ್ರಿಗಳು ಬಂದ್ರು. ತೃಣಮೂಲ ಕಾಂಗ್ರೆಸ್ಸಿನ ಮಮತಾ ಬ್ಯಾನರ್ಜಿಯವರು ಈಗ ಕನ್ನಡಿಗರ ಹೋರಾಟಕ್ಕೆ ಗೌರವ ನೀಡಿ ಒಂದೊಳ್ಳೆ ನಿರ್ಧಾರ ಘೋಷಿಸಿದ್ದಾರೆ. ಇದರಂತೆ ಇನ್ಮುಂದೆ ರೈಲ್ವೇ ಪರೀಕ್ಷೆಗಳನ್ನು ಕನ್ನಡದಲ್ಲಿಯೇ ಬರೀಬಹುದು. ಎಲ್ಲಾ ಕಡೆ ಒಟ್ಗೆ ಪರೀಕ್ಷೆ ನಡ್ಸೋದ್ರಿಂದ ಬೇರೆ ರಾಜ್ಯದಿಂದ ಇಲ್ಲಿಗೆ ಬರೋರ ಸಂಖ್ಯೆ ಕಮ್ಮಿ ಆಗೋ ಸಾಧ್ಯತೆ ಇದೆ. ಅಲ್ಲದೆ ಸ್ಥಳೀಯರಿಗೆ ಆದ್ಯತೆ ನೀಡೋಕೂ ರೈಲ್ವೇ ಮುಂದಾಗಿರೋದು ಸರಿಯಾದ ಒಪ್ಪುಕೂಟದೆಡೆಗಿನ ಹೆಜ್ಜೆಯಾಗಿದೆ.
ಬರೀ ರೈಲಲ್ಲ! ಎಲ್ಲ ನೇಮಕಾತಿಗಳೂ ಹೀಗಾಗಬೇಕು
ಇದು ಬರೀ ರೈಲು ಇಲಾಖೆಯಲ್ಲಾದ ಬದಲಾವಣೆಯಲ್ಲ. ಇದರಿಂದ ಕೇಂದ್ರಸರ್ಕಾರದ ಕೆಲಸಗಳಲ್ಲಿ ಇನ್ಮುಂದೆ ಸ್ಥಳೀಯರಿಗೆ ಆದ್ಯತೆ ಕೊಡಬೇಕು, ಆಯಾ ಪ್ರದೇಶಗಳ ಭಾಷೆಗಳಲ್ಲೇ ಪರೀಕ್ಷೆ ಬರೆಯೋ ಜನರ ಹಕ್ಕುನ್ನ ಮಾನ್ಯ ಮಾಡಬೇಕು. ಬ್ಯಾಂಕಿರಲಿ, ಸೈನ್ಯವಿರಲಿ ಎಲ್ಲಾ ಕಡೆಯ ಪರೀಕ್ಷೆಗಳು ಆಯಾ ರಾಜ್ಯಗಳ ಭಾಷೆಯಲ್ಲಿ ನಡೀಬೇಕು. ನಮ್ಮೂರಿನ ಕೆಲಸಗಳು ನಮ್ಮ ಮಣ್ಣಿನ ಮಕ್ಕಳಿಗೇ ಸಿಗಬೇಕು ಅಂತನ್ನೋ ಕೂಗಿಗೆ ಬಲ ಬಂದಂಗಾಗಿದೆ ಅಲ್ವಾ ಗುರು!
ಕೊನೆಹನಿ : ಬೆಂಗಾಲಿ ತಾಯ್ನುಡಿಯ ಮಮತಾ ಬ್ಯಾನರ್ಜಿ ಪ್ರಾದೇಶಿಕ ಪಕ್ಷಕ್ಕೆ ಸೇರಿದವರಾದ್ದರಿಂದಲೇ ಇಂಥಾ ಒಂದು ಒಪ್ಪುಕೂಟದ ಒಳಿತಿನ ತೀರ್ಮಾನ ಸಾಧ್ಯವಾಗಿದ್ದು ಅಂತನ್ನೋ ಮಾತನ್ನು ತಳ್ಳಿಹಾಕಕ್ ಆಗುತ್ತಾ ಗುರು?
3 ಅನಿಸಿಕೆಗಳು:
ಒಳ್ಳೇ ಸುದ್ದಿ!
houdu,, I remember that it was enguru which wrote for the first time that railway exams should be held in kannada. That was the first time, I ever heard something like that. I was wondering how come people never ever raised such a thing in the past 60 years of independence? Anyways,, congrats to all those who worked for this to happen.
Kannadigara horata munduvareyali ...
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!