ವಲಸಿಗನ ಧರ್ಮ ಮತ್ತು ಭಾರತದ ಏಕತೆ!

ಉತ್ತರ ಪ್ರದೇಶ ಮೂಲದ ಸಮಾಜವಾದಿ ಪಕ್ಷದ ಮಹಾರಾಷ್ಟ್ರ ವಿಧಾನಸಭೆಯ ಶಾಸಕ ಅಬು ಆಜ್ಮಿಯೋರು ಮಹಾರಾಷ್ಟ್ರ ವಿಧಾನಸಭೇಲಿ ಮರಾಠಿಯಲ್ಲಿ ಪ್ರಮಾಣ ವಚನ ಸ್ವೀಕರಿಸಲು ನಿರಾಕರಿಸಿದ್ದು, ಅದನ್ನು ಎಮ್.ಎನ್.ಎಸ್ ಪ್ರತಿಭಟಿಸಿದ್ದರಿಂದಾಗಿ ವಿಧಾನಸಭೆಯ ಅಂಗಳ ರಣರಂಗವಾದ ಸುದ್ದೀನಾ ನಾವೆಲ್ಲರೂ ಮಾಧ್ಯಮದಲ್ಲಿ ನೋಡುದ್ವಿ. ವಿಧಾನಸಭೆಯ ಸದನದ ಅಂಗಳದಲ್ಲಿ ಹೊಡೆದಾಟದಂತಹ ಅನಾಗರಿಕ ಘಟನೆಗಳು ನಡೆದದ್ದು ಸದನದ ಘನತೆಗೆ ತಕ್ಕುದಾಗಿರಲಿಲ್ಲ. ಇಂತಹ ಘಟನೆಗಳನ್ನು ನಾಗರಿಕ ಸಮಾಜ ಎಂದಿಗೂ ಒಪ್ಪಲ್ಲ ಮತ್ತು ಇವು ಖಂಡಿತವಾಗಿಯೂ ಮರುಕಳಿಸಬಾರದು. ಆದರೆ, ಹಿಂದಿ ಭಾರತದ ರಾಷ್ಟ್ರಭಾಷೆ ಅನ್ನೋ ಹಸೀ ಸುಳ್ಳುಮಾತುಗಳನ್ನು ಆಡುತ್ತಾ ವಲಸಿಗನ ಧರ್ಮವನ್ನು ಮರೆತು ನಡೆಯುವ ಜನರ ನಡವಳಿಕೆಯೇ ಇಂತಹದೊಂದು ಅಶಾಂತಿಗೆ ಕಾರಣವಾಗಿರೋದು ಅಂತನ್ನಿಸಲ್ವಾ ಗುರು?

ವಲಸಿಗನ ಧರ್ಮವೇನು?

ಹಾಗಿದ್ದರೆ, ವಲಸಿಗನ ಧರ್ಮವೇನು ಅಂತೀರಾ? ತಾನು ಹೊಟ್ಟೆಪಾಡಿಗೆ ಯಾವ ನಾಡಿಗೆ ಬರ್ತಾನೋ, ಆ ನಾಡಲ್ಲಿರೋ ಸಂಸ್ಕೃತಿ, ನುಡಿ, ವ್ಯವಸ್ಥೆಗಳಿಗೆ ಹೊಂದಿಕೊಂಡು ನಡೆಯೋದು. ಅಲ್ಲಿನ ನುಡಿ ಕಲಿತು, ಆ ನುಡಿಯಾಡುವ ಜನರೊಡನೆ ಬೆರೆತು ಬಾಳೋದೇ ವಲಸಿಗನ ಸರಿಯಾದ ಧರ್ಮ. ಅದು ಬಿಟ್ಟು "ನಾಡಿಗರ ನುಡೀನ ನಾನ್ಯಾಕೆ ಬಳಸ್ಲಿ? ನಂಗೆ ಬೇಕಾದ ಭಾಷೇಲಿ ಬೋರ್ಡ್ ಹಾಕ್ತೀನಿ. ವ್ಯಾಪಾರ ಮಾಡ್ತೀನಿ. ಪ್ರಮಾಣ ತಗೋತೀನಿ" ಅನ್ನೋ ಮೂಲಕ ಎಂದೆಂದಿಗೂ ತಾನು ವಲಸಿಗನಾಗೇ ಉಳಿಯುವೆ, ಎಂದಿಗೂ ಆ ನಾಡಿನ ಮುಖ್ಯವಾಹಿನಿಯಲ್ಲಿ ಬೆರೆಯಲಾರೆ ಅನ್ನೋ ನಿಲುವು ‘ಅನ್ನ ಕೊಟ್ಟ ಮನೆಯ ಗಳ ಎಣ್ಸೋ ಬುದ್ದಿ’ ಅಲ್ವಾ? ವಲಸಿಗನ ಧರ್ಮ ಮರೆತು ಈ ರೀತಿ ಅಶಾಂತಿಗೆ ಕಾರಣವಾಗೋದು ನಿಜವಾದ ಅರ್ಥದಲ್ಲಿ ದೇಶದ್ರೋಹ ಅನ್ಸಲ್ವಾ ಗುರು?

ಹಿಂದಿ ರಾಷ್ಟ್ರ ಭಾಷೆ ಅನ್ನೋ ಹಸಿ ಸುಳ್ಳು !

ಇವೆಲ್ಲವೂ ಒಂದು ತೆರನಾದರೆ... ‘ಹಿಂದಿಯಲ್ಲಿ ಪ್ರಮಾಣ ತೆಗೆದುಕೊಳ್ಳುವ ಮೂಲಕ ತಾನು ಭಾರತದ ರಾಷ್ಟ್ರಭಾಷೆಯಾದ ಹಿಂದಿಗೆ ಗೌರವ ಸಲ್ಲಿಸಿದ್ದೇನೆ’ ಎಂದು ಇವರು ಹೇಳುವುದು, ಅದನ್ನೇ ಹಲವು ಮಾಧ್ಯಮಗಳು ಹೌದು ಎಂಬಂತೆ ಪ್ರಸಾರ ಮಾಡುವುದನ್ನು ನೋಡಿದಾಗ "ಭಾರತದ ರಾಷ್ಟ್ರಭಾಷೆ ಹಿಂದಿ " ಎಂಬ ಅಪಾಯಕಾರಿ ಸಂದೇಶ ನೀಡುತ್ತಾ, ‘ಭಾರತ ಅಂದ್ರೆ ಹಿಂದೀ ಒಪ್ಕೋಬೇಕು’ ಅನ್ನೋ ಆಕ್ರಮಣಕಾರಿ ನಿಲುವು ಇವರಲ್ಲಿರುವುದು ಕಾಣಿಸುತ್ತೆ. ಮಾಧ್ಯಮಗಳು ಮಾಡುತ್ತಿರುವ ಇಂತಹ ಅಪಪ್ರಚಾರವೂ ಹಿಂದಿ ಹೇರಿಕೆಯ ಅಸ್ತ್ರವೇ ಆಗಿದೆ. ಸಂವಿಧಾನದಲ್ಲೆಲ್ಲೂ ಹಿಂದಿ ರಾಷ್ಟ್ರಭಾಷೆಯೆಂದು ಬರೆದಿರದಿದ್ದರೂ, ಇವರು ಇಂತಹ ನಿಲುವು ತಳೆಯುವುದರ ಹಿಂದೆ ಹಿಂದಿಯನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು ಅನ್ನೋ ಸಾಮ್ರಾಜ್ಯ ಶಾಹಿ ಧೋರಣೆ ಎದ್ದು ಕಾಣುತ್ತೆ. ಯಾವುದೇ ಒಂದು ನಾಡಿನಲ್ಲಿ, ಆ ನಾಡಿನ ಜನರ ಒಗ್ಗಟ್ಟು ಆ ನಾಡಿನ ಏಳಿಗೆಯ ದೃಷ್ಟಿಯಿಂದ ಬಹಳ ಮುಖ್ಯವಾಗಿದೆ. ಇದಕ್ಕೆ ಭಾರತವು ಹೊರತಲ್ಲ. ಹಾಗಾದರೆ ಭಾರತದಲ್ಲಿ ಇಂತಹ ತಾರತಮ್ಯ ಒಗ್ಗಟ್ಟು ಮೂಡುವುದೋ? ಇರುವ ಒಗ್ಗಟ್ಟನ್ನು ಮುರಿದು ಹಾಕುವುದೋ? ಎಂದರೆ ಎರಡನೆಯದೇ ವಾಸ್ತವವಾದ ಮಾತಾಗಿದೆ. ಯಾಕೆಂದರೆ ಭಾರತ ದೇಶವು ಬೇರೆ ಬೇರೆ ನುಡಿಗಳನ್ನಾಡುವ, ಬೇರೆ ಬೇರೆ ಸಂಸ್ಕೃತಿಗಳ, ಬೇರೆ ಬೇರೆ ಜನಾಂಗಗಳಿಂದ ಕೂಡಿದ ಒಪ್ಪುಕೂಟ. ಇಲ್ಲಿ ಯಾವುದೋ ಒಂದು ನುಡಿಯಿಂದ ದೇಶವನ್ನು ಒಂದಾಗಿರಿಸಬಲ್ಲೇವು ಅನ್ನೋದು ನಿಜಕ್ಕೂ ಮೂರ್ಖತನದ ಮಾತು. ಇಲ್ಲೇನಿದ್ದರೂ, ಸಮಾನತೆಯೆಂಬ ಸರಳ ತಂತ್ರವೇ ಒಗ್ಗಟ್ಟಿಗಿರೋ ಒಂದೇ ಒಂದು ಸಾಧನ ಎಂಬುದನ್ನು ಎಷ್ಟು ಬೇಗ ಅರಿತರೆ ಅಷ್ಟು ಭಾರತದೇಶಕ್ಕೆ ಒಳ್ಳೆಯದು ಗುರು!

7 ಅನಿಸಿಕೆಗಳು:

ಜಗದೀಶ್ ಮೆಟಗುಡ್ಡಮಠ ಅಂತಾರೆ...

ಬಾಳ್ ಖರೇ ಐತಿ ನೀ ಹೇಳಿದ್ದ ಗುರು..
ಎಮ್.ಎನ್.ಎಸ್ ವಿಧಾನಸಭೆನಾಗ್ ಹೊಡೆದಾಡಿದಾಗ್,, ಅದರ ಬಗ್ಗೆ ನಿನ್ನ ನಿಲುವು ಏನ್ ಇರತೈತಿ ಅನ್ನು ಕುತೂಹಲ ಇತ್ತು.. ನಾಗರಿಕ ಸಮಾಜದಾಗ್ ಇಂತ ಹಿಂಸೆಗೆ ಅವಕಾಶ ಇಲ್ಲ ಅನ್ನು ಮೂಲಕ ನಿನ್ನ ಬಗ್ಗ್ ಇದ್ದ ಗೌರವ ಇನ್ನು ಜಾಸ್ತಿ ಆಗು ಹಂಗ್ ಮಾಡಿ ನೀನು..
ಹಿಂದಿ ರಾಷ್ಟ್ರ ಭಾಷಿ ಅನ್ನು ಸುಳ್ಳು ಇನ್ನೇನು ಜಾಸ್ತಿ ದಿನಾ ನಡೆಯಂಗಿಲ್ಲ.. ಮರಾಠರು, ತೆಲುಗರು, ತಮಿಳರು, ಅಸ್ಸಾಂಮಿಗಳು, ಕನ್ನಡಿಗರು, ಬೆಂಗಾಳಿಗಳು ಹಿಂಗ್ ಎಲ್ಲ ಮಂದಿನೂ ಇದರ ಬಗ್ಗ್ ಧ್ವನಿ ಎತ್ತಾಕತ್ತಾರ್,, ಆದಷ್ಟು ಬೇಗ ಎಲ್ಲ ಭಾಷೆನೂ ಸಮಾನವಾಗಿ ಕಾಣು ದಿನಗಳು ಬರಲಿ ಗುರು

ಪುಟ್ಟ ಅಂತಾರೆ...

೨ ವಿಷಯಗಳನ್ನು ಹೇಳ್ಬೇಕನಿಸ್ತಿದೆ.

೧. ಕೆಲವೊಂದು ರಾಷ್ಟೀಯ ವಾರ್ತಾ ವಾಹಿನಿಗಳು ಈ ಸುದ್ದಿಯನ್ನು ಬಿತ್ತರಿಸುವಾಗ ರಾಜಾರೋಷವಾಗಿ 'ರಾಷ್ಟ್ರಭಾಷೆಲಿ ಪ್ರಮಾಣ ತೊಗೊಂಡಿದ್ದಕ್ಕೆ ಅಜ್ಮಿಗೆ ಗೂಸ' ಅಂತ ಹೇಳ್ತಿದ್ದುದು.

ಇಡೀ ದೇಶದ ಜನತೆ ಈ ಸುದ್ದಿನ ಗಮನಿಸುತ್ತಿರುವಾಗ ಸುದ್ದಿವಾಹಿನಿಗಳು ಈ ಘಟನೆಗೆ ತುಪ್ಪ ಸುರಿದು ಪದೇ ಪದೇ 'ಹಿಂದಿ ರಾಷ್ಟ್ರಭಾಷೆ' ಅಂತ ಬೂಸಿ ಬಿಡ್ತಿದ್ರು. ದಿನಪತ್ರಿಕೆಗಳಲ್ಲೂ ಕೂಡ 'ರಾಷ್ಟ್ರಭಾಷೆ ಹಿಂದಿ'ಅಂತಾನೆ ಬರ್ದಿದ್ದಾರೆ.

೨. ಅಜ್ಮಿ,'ರಾಷ್ಟ್ರಭಾಷೆಲಿ' ಪ್ರಮಾಣ ತೊಗೊಂಡಿದ್ದು ತಪ್ಪಲ್ಲ ಅಂತ ಸುದ್ದಿ ವಾಹಿನಿಗಳಿಗೆ ಹೇಳಿಕೆ ಕೊಟ್ಟಿದ್ದು.
ಅಜ್ಮಿ ಮೂಲ ಉತ್ತರಪ್ರದೇಶಾನೇ ಇರಬಹುದು ಅವ್ರು ಮಾಡಿರೋದು ಸಂವಿಧಾನದ ಪ್ರಕಾರ ಸರಿ ಇರಬಹುದು ಆದ್ರೆ ಮರಾಠಿ ಜನರ ಮತ ಗಳಿಸಿ ಗೆದ್ದು ಆ ಭಾಷೇಲಿ ಪ್ರಮಾಣವಚನ ತೊಗೊಳ್ದೆ ಇದ್ದಿದ್ದು ನಿಜವಾಗ್ಲು ತಪ್ಪು.ಆ ತಪ್ಪನ್ನು ಮುಚ್ಚಲು 'ರಾಷ್ಟ್ರಭಾಷೆಲಿ' ಪ್ರಮಾಣ ತೊಗೊಂಡೆ ಅಂತ ಹೇಳಿ 'ರಾಷ್ಟ್ರಭಾಷೆ ಹಿಂದಿ' ಅಂತ ಸಾಧಿಸಿದ್ದು ಇನ್ನೂ ದೊಡ್ಡ ತಪ್ಪು.

ಮೇಲೆ ಹೇಳಿದ ೨ ಅಂಶಗಳಲ್ಲೂ ಸಾಮಾನ್ಯದ ಒಂದು ಸಂಗತಿ ಅಂದ್ರೆ 'ಹಿಂದಿ ರಾಷ್ಟ್ರಭಾಷೆ' ಅನ್ನೋ ಸುಳ್ಳನ್ನ ಮುಖ್ಯವಾಹಿನಿಗಳಲ್ಲಿ ಹರಿಬಿಡುತ್ತಿರುವುದು. ಇತ್ತೇಚೆಗೆ ಈ ಅಭಾಸ ಅಪಾಯಕಾರಿ ಮಟ್ಟ ತಲುಪಿದೆ. ನಮ್ಮ ಸಂವಿಧಾನದಲ್ಲೇ 'ಹಿಂದಿ ರಾಷ್ಟ್ರಭಾಷೆ' ಅಂತ ಹೇಳಿಲ್ಲ. ಇನ್ನು ಈ ವಿಷ್ಯ ಗೊತ್ತಿಲ್ದೆ ಇರೋರು ಹೇಗೆ ಕೆಲಸ ಮಾಡ್ತಾರೋ ಏನು ಕೆಲಸ ಮಾಡ್ತಾರೋ ಏನೋ!! ಜನತೆನ ಹಾದಿ ತಪ್ಪಿಸುವಲ್ಲಿ ಇವರೆಲ್ಲ ನಿಸ್ಸಂದೇಹವಾಗಿ ಅಮೋಘವಾದ ಕೆಲಸ ಮಾಡುತ್ತಿದ್ದಾರೆ !!

ಕೊನೆ ಮಾತು :
ಎಮೆನೆಸ್ ಸದನದ ಒಳಗೆ ಗೂಂಡಾಗಳ ತರ ವರ್ತಿಸಿದ್ದು ಅಮಾನವೀಯ.ಬೀದೀಲಿ ಹೀಗೆ ಮಾಡಿದ್ರೆ ಯಾರೂ ಅಷ್ಟಾಗಿ ತಲೆ ಕೆಡಿಸ್ಕೊಳ್ತಿರ್ಲಿಲ್ವೇನೋ ಆದ್ರೆ ವಿಧಾನಸಭೆಲಿ ದಾಂಧಲೆ ಮಾಡಿದ್ದು ಖಂಡಿತ ಖಂಡನೀಯ. ಯಾವ ಮರಾಠಿ ಜನರು ಎಮೆನೆಸ್ನ ಶಾಸಕರನ್ನು ಗೆಲ್ಸಿದ್ರೋ ಅದೇ ಎಮೆನೆಸ್ ಶಾಸಕರು ಸದನದಲ್ಲಿ ಅವ್ರ ಮಾನನ ಚೆನ್ನಾಗಿ ಹರಾಜು ಹಾಕಿದ್ರು. ಇವ್ರಿಗೆ ಸದನದಲ್ಲಿ ಹೊಡೆದಾಡಲು ಮರಾಠಿಗಳು ಮತ ಹಾಕಿ ಗೆಲ್ಸಿದ್ರಾ ಅಂತ ಅನಿಸ್ತಿದೆ.ಸದನದ ನಿಯಮಗಳನ್ನು ಪಾಲಿಸೋದು ಹೇಗೆ ಅಂತ ಎಮೆನೆಸ್ಗೆ ತಿಳಿಸ್ಕೊಡಬೇಕಾಗಿದೆ.

satish uppin ಅಂತಾರೆ...

ಸಂವಿಧಾನದಲ್ಲಿ ದೇಶದ ಎಲ್ಲ ಅಧಿಕೃತ ಭಾಷೆಗಳಲ್ಲಿ ಪ್ರಮಾಣ ವಚನ ಸ್ವೀಕರಿಸುವ ಅವಕಾಶವಿದೆ, ಆದ್ದರಿಂದ ಅಬು ಆಜ್ಮಿ ಮಾಡಿದ್ದರಲ್ಲಿ ತಪ್ಪೇನಿಲ್ಲ ಅನ್ನೋ ನಿಲುವು ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಆದರೆ ನಿಜವಾದ ಪ್ರಶ್ನೆ ಇದಲ್ಲ. ಪ್ರಮಾಣ ವಚನದ ನಾಲ್ಕು ಸಾಲು ಮರಾಠಿಯಲ್ಲಿ ಹೇಳೋ ಮೂಲಕ ಹತ್ತು ಕೋಟಿ ಮರಾಠಿಗರ ಮನಸ್ಸು ಗೆಲ್ಲೋ ಅವಕಾಶ ಅವರಿಗಿತ್ತು, ಆದರೆ ಇವರಿಗೆ ಬೇಕಿರುವುದು ಶಾಂತಿ, ಸಹಬಾಳ್ವೆಯಲ್ಲವಲ್ಲ. ಮೂವತ್ತು ವರ್ಷದ ಹಿಂದೆ ಖಾಲಿ ಕೈಯಲ್ಲಿ ಉತ್ತರ ಪ್ರದೇಶದಿಂದ ವಲಸೆ ಬಂದ ಈ ಅಬು ಆಜ್ಮಿ ಇವತ್ತು ಕೋಟ್ಯಾಧಿಪತಿಯಾಗಿದ್ದು ಇದೇ ಮುಂಬೈನ ನೆಲದಲ್ಲಿ. ಮೂವತ್ತು ವರ್ಷದಲ್ಲಿ ಒಮ್ಮೆಯೂ ನಾಲ್ಕು ಪದ ಮರಾಠಿ ಕಲಿಯುವ ಪ್ರಯತ್ನ ಮಾಡದೇ, ಸಿಗೋ ಎಲ್ಲ ಅವಕಾಶದಲ್ಲೂ ಸ್ಥಳೀಯ ಮರಾಠಿಗರ ಸ್ವಾಭಿಮಾನ ಕೆಣಕುವಂತಹ, ಅಲ್ಲಿನ ಹಿಂದಿ ವಲಸಿಗರು ಮರಾಠಿ ಮುಖ್ಯವಾಹಿನಿಯಲ್ಲಿ ಬೆರೆಯದಂತೆ ಮಾಡುವ, ಆ ಮೂಲಕ ತನ್ನ ರಾಜಕೀಯದ ಬೆಳೆ ಬೇಯಿಸಿಕೊಳ್ಳುವ ಪ್ರಯತ್ನವನ್ನು ಅಬು ಆಜ್ಮಿ ತರದವರು ಮಾಡುತ್ತಲೇ ಬಂದಿದ್ದಾರೆ. ತಾ ವಲಸೆ ಬಂದ ಊರಲ್ಲಿ, ಅಲ್ಲಿನ ಸ್ಥಳೀಯರೊಡನೆ ಒಂದಾಗಿ ಬೆರೆತು ಬಾಳುವುದೇ ವಲಸಿಗನ ಧರ್ಮ. ಈ ಧರ್ಮವನ್ನು ಮರೆತು ಈ ರೀತಿ ಅಶಾಂತಿಗೆ ಕಾರಣವಾಗುತ್ತಿರುವ ಅಬು ಆಜ್ಮಿಯಂತವರು ನಿಜವಾದ ಅರ್ಥದಲ್ಲಿ ದೇಶ ದ್ರೋಹಿಗಳು ಗುರು

ಕ್ಲಾನ್ಗೊರೌಸ್ ಅಂತಾರೆ...

ಗುರು,
ನೀವ್ ಹೇಳೋದು ಸರಿ... ಆದರೆ ಇದೇ ಮಾಧ್ಯಮಗಳು ಅಬು ಅಜ್ಮಿ ಎಂ. ಏನ್. ಎಸ್ ಶಾಸಕಿರಿಗೆ ಚಪ್ಪಲಿ ತೋರ್ಸಿದ್ದು ಯಾರು ತೋರ್ಸ್ಲಿಲ್ಲ . ಇದು ಯಾವ ಸೀಮೆ ವಿಧಾನಸಭೆ ಸದನಕ್ಕೆ ತೋರಿದ ಗೌರವ ನೀವೇ ಹೇಳಿ ?, ನನ್ ಪ್ರಕಾರ ಎಂ. ಏನ್. ಎಸ್ ಶಾಸಕರು ಗೂಸ ಕೊಟ್ಟಿದ್ದೆ ಸರಿ. ದೇಶ ವಿದೇಶಗಳಲ್ಲಿ ಸದನ ಕಲಾಪ ದಲ್ಲಿ ಹೊಡೆದಾಡಿರೋ ಅನೇಕ ನಿದರ್ಶನಗಳಿವೆ, ಈ ಪ್ರಕರಣ ಹೊಸದೇನಲ್ಲ ಬಿಡಿ.

Phadke ಅಂತಾರೆ...

ನಮ್ ದೇಶದ ರಾಷ್ಟ್ರ ಭಾಷೆ ಹಿ೦ದಿ ಅಲ್ದಿದ್ರೆ ಯಾವುದೂ೦ತ ದಯವಿಟ್ಟು ತಿಳಿಸ್ತೀರಾ?

Anonymous ಅಂತಾರೆ...

Phadke Ji,

Why don't you search in wikipedia?

patekar

ನಾನು ಅಂತಾರೆ...

ಫಡಕೆ ಯವರೆ
ನಮ್ಮ ದೇಶಕ್ಕೆ ಯಾವ ಭಾಷೆಯೂ ರಾಷ್ಟ್ರ ಭಾಷೆಯಲ್ಲ... ದಯವಿಟ್ಟು ಒಮ್ಮೆ ಸಂವಿಧಾನವನ್ನ ನೋಡಿ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails